About Us Advertise with us Be a Reporter E-Paper

ಅಂಕಣಗಳು

ಒಂದು ರಾಜ್ಯದ ಆಡಳಿತ ರಚನೆ ವ್ಯಕ್ತಿಯ ಅಂಗಾಂಗ ರಚನೆಯಿದ್ದಂತೆ!

ಪಿ.ರಾಜೀವ್, ಲೇಖಕರು, ಶಾಸಕರು (ಕುಡಚಿ ಕ್ಷೇತ್ರ)

ಒಂದು ರಾಜ್ಯದ ಆಡಳಿತ ರಚನೆ ಹಾಗೂ ಒಬ್ಬ ವ್ಯಕ್ತಿಯ ಅಂಗಾಂಗ ರಚನೆಗೆ ಅಂತಹ ವ್ಯತ್ಯಾಸಗಳೇನೂ ಕಂಡುಬರುವುದಿಲ್ಲ! ಒಬ್ಬ ವ್ಯಕ್ತಿಯ ಎಲ್ಲ ಅವಯವಗಳು ಆರೋಗ್ಯವಾಗಿದ್ದರೆ ವ್ಯಕ್ತಿಯನ್ನು ಸದೃಢವೆನ್ನಬಹುದು. ಅದೇ ರೀತಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿಯಲ್ಲಿ ಒಂದು ರಾಜ್ಯವು ಪ್ರಗತಿಪರ ಕಲ್ಯಾಣ ರಾಜ್ಯವೆನಿಸಿಕೊಳ್ಳಬೇಕಾದರೆ ಆಡಳಿತದ ಅಂಗಗಳಲ್ಲಿ ಪಾರದರ್ಶಕತೆ, ಸಮಾಜಮುಖಿ ಚಿಂತನೆ, ಅಭಿವೃದ್ಧಿಯ ಆಶಯಗಳು ವ್ಯಕ್ತವಾಗುತ್ತಿರಬೇಕು. ಆಗ ಮಾತ್ರ ಪಟ್ಟಭದ್ರರ ಅಟ್ಟಹಾಸ ಮಿತಿಗೊಳ್ಳುತ್ತದೆ. ಅದಕ್ಕಾಗಿಯೇ ಸರಕಾರವನ್ನು ನಿರಂತರ, ಚಲನಶೀಲ ಮತ್ತು ಜನಪರ ಆಲೋಚನೆಗಳೊಂದಿಗೆ ಮೇಳೈಸುವ ಪ್ರಯತ್ನ ಜರಗುತ್ತಲೆ ಇರುತ್ತವೆ. ಒಬ್ಬ ಗುಮಾಸ್ತನಿಂದ ಹಿಡಿದು ಐ.ಎ.ಎಸ್ ದರ್ಜೆಯ ಹಿರಿಯ ಅಧಿಕಾರಿಗಳವರೆಗೂ ಕನಿಷ್ಟ ಸೇವಾವಧಿಯನ್ನು ಖಾತ್ರಿಗೊಳಿಸಲಾಗಿದೆ. ಆದರೆ ಚುನಾಯಿತ ಮತ್ತು ಜನಪ್ರತಿನಿಧಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಯನ್ನೆದುರಿಸುವ ರಾಜಕೀಯ ಪದ್ಧತಿಯನ್ನು ಇಟ್ಟುಕೊಳ್ಳಲಾಗಿದೆ. ಇದರೊಳಗಡಗಿರುವ ಮೂಲತತ್ವವೆಂದರೆ, ಜನಾಭಿಪ್ರಾಯದೊಂದಿಗೆ ರೂಪುಗೊಳ್ಳುವ ಸರಕಾರ ಹಾಗೂ ಜನಪ್ರತಿನಿಧಿಗಳು ಜನರ ನೋವು, ಸಂಕಷ್ಟ ಮತ್ತು ಆಶೋತ್ತರಗಳಿಗೆ ಪರಿಹಾರ ಕಂಡು ಹಿಡಿಯುವುದಕ್ಕಾಗಿಯೇ ಪ್ರತಿಬಾರಿಯೂ ಚುನಾವಣೆಯನ್ನೆದುರಿಸಿ ಜನಮತದೊಂದಿಗೆ ಸರಕಾರವನ್ನು ರಚಿಸಬೇಕೆಂಬುದಾಗಿದೆ. ಈ ದೃಷ್ಟಿಯಿಂದ ಅವಲೋಕಿಸಿದಾಗ, ಚುನಾವಣಾ ಪ್ರಕ್ರಿಯೆ ಬಹಳಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಕೆಸರೆರಚಾಟ ಮತ್ತು ಆರೋಪ-ಪ್ರತ್ಯಾಾರೋಪಗಳೊಂದಿಗೆ ಸಮಾಪ್ತಿಯಾಗುತ್ತಿರುವ ಇತ್ತೀಚಿನ ಚುನಾವಣಾ ಪ್ರಕ್ರಿಯೆಗಳನ್ನು ಗಮನಿಸಿದಾಗ ಜನಪರ ಚಿಂತನೆ ಮತ್ತು ಸಾಮುದಾಯಿಕ ಸಮಸ್ಯೆಗಳು ಚುನಾವಣೆಯ ಪ್ರಮುಖ ಅಂಶಗಳಾಗಿ ಪರಿಗಣಿತವಾಗುತ್ತಿಲ್ಲ. ಪ್ರತಿಬಾರಿ ಚುನಾವಣೆಯ ಮುಖ್ಯವಿಷಯಗಳೆಂದರೆ ಜಾತಿ ಲೆಕ್ಕಾಚಾರಗಳು, ಅಬ್ಬರದ ಪ್ರಚಾರಗಳು, ಹಣ-ಹೆಂಡ-ತುಂಡುಗಳಾಗಿವೆ. ಇವುಗಳ ನಡುವೆ ತೇಲಿ ಹೋಗುವ ಕಷ್ಟಕಾರ್ಪಣ್ಯಗಳು ಹಾಗೂ ದುಃಖ ದುಮ್ಮಾನಗಳು ಚುನಾವಣೆಯ ಮಹತ್ವವನ್ನರಿಯಲು ಇನ್ನಷ್ಟು ದಶಕಗಳನ್ನು ದಾಟಲೆಬೇಕಾದ ಅನಿವಾರ್ಯತೆಯನ್ನು ತಂದೊಡ್ಡಿದೆ.

ಸರಕಾರವನ್ನು ಮಾನವ ದೇಹದ ಅಂಗರಚನೆಗೆ ಹೋಲಿಸಲಾಗಿದೆ! ಸರಕಾರದೊಳಗಿನ ಇಲಾಖೆಗಳು, ಪ್ರಾಧಿಕಾರಗಳು, ಆಡಳಿತ ಪದ್ಧತಿ ಮತ್ತು ಅಧಿಕಾರಿಗಳು ಸರಕಾರದ ವಿವಿಧ ಅಂಗಗಳಾಗಿ ತಮ್ಮ ತಮ್ಮ ಕಾರ್ಯವ್ಯಾಾಪ್ತಿ ಮತ್ತು ಧೇಯೋದ್ದೇಶಗಳಿಗೆ ನ್ಯಾಯವನ್ನೊದಗಿಸಲು ಪ್ರಯತ್ನಿಸಿದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರಕಾರದ ಅಂಗರಚನೆಗಳ ಮೂಲ ಉದ್ದೇಶ ಪ್ರಗತಿಯನ್ನು ಸಾಧಿಸುವುದು ಮತ್ತು ಜನಪರ ಆಡಳಿತವನ್ನು ನೀಡುವುದು. ಆದರೆ ಇತ್ತೀಚಿನ ದಿನಗಳಲ್ಲಿ ಇದು ವ್ಯಕ್ತವಾಗದಿರುವುದು ದುರಂತವೇ ಸರಿ. ವಯೋನಿವೃತ್ತಿವರೆಗಿನ ಸೇವಾವಧಿಯು ಖಾತ್ರಿಗೊಂಡ ಅಧಿಕಾರಿಗಳು ತಾವು ನಡೆದಿದ್ದೆ ದಾರಿ ಎಂಬಂತೆ ವರ್ತಿಸುತ್ತಿದ್ದಾಾರೆ. ಸರಕಾರದೊಳಗಿನ ಇಲಾಖೆಗಳಿಗೂ ಒಂದಕ್ಕೊಂದು ಸೌಹಾರ್ದ ಸಂಪರ್ಕ ಕಳಚಿಹೋಗಿದೆ. ಅಧಿಕಾರಿಗಳು ತಮ್ಮಷ್ಟಕ್ಕೆ ತಾವೇ ಸ್ವಯಂಘೋಷಿತ ಸಾರ್ವಭೌಮರಂತೆ ವರ್ತಿಸಲಾರಂಭಿಸಿರುವುದೇ ಇಂದಿನ ದುರಂತಗಳಿಗೆ ಕಾರಣಗಳಾಗಿವೆ. ಆಧುನಿಕ ಸರಕಾರದ ಆಡಳಿತ ಪದ್ಧತಿಗಳು ವಿಕೇಂದ್ರಿಕರಣಗೊಂಡು ಜನಸಾಮಾನ್ಯನ ಆಡಳಿತವನ್ನು ಮನೆಬಾಗಿಲಿಗೆ ಕೊಂಡೊಯ್ಯುವುದರ ಬದಲಾಗಿ ಅಧಿಕಾರದ ಕೀಲಿಕೈ ತಮ್ಮ ಬಳಿಯಲ್ಲಿಯೇ ಶಾಶ್ವತವಾಗಿರುವಂತೆ ನೋಡಿಕೊಳ್ಳುವ ಹುನ್ನಾರ ಸದ್ದಿಲ್ಲದೆ ಜರಗುತ್ತಲಿರುತ್ತದೆ. ಇಂತಹ ಗೊಂದಲ ಹಾಗೂ ದುಷ್ಪ್ರೇರಣೆಗಳಿಗೆ ಆಸ್ಪದ ನೀಡದೆ ಜನಹಿತಕ್ಕಾಗಿ ಜವಾಬ್ದಾರಿಯನ್ನು ಮೆರೆಯಬೇಕಾದ ಜನರಿಂದ ಆಯ್ಕೆಯಾದ ಸರಕಾರದ ಮಂತ್ರಿ ಮಂಡಲ ಹಾಗೂ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಗುಳೆಯದ್ದಂತಾಗಿದೆ!

ಮೊನ್ನೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಗೆ ಮತ್ತಷ್ಟು ತಿದ್ದುಪಡಿಯನ್ನು ತರಲಾಗಿದೆ. ಆದರೆ ತಿದ್ದುಪಡಿಯ ಒಳನೋಟವನ್ನು ಕಣ್ತೆರೆದು ಗಮನಿಸಿದಾಗ, ಪಾರದರ್ಶಕತೆಗಿಂತಲೂ ಹೆಚ್ಚಾಗಿ ಸ್ವಾರ್ಥ ಮತ್ತು ಅಹಂಕಾರದ ಕಪ್ಪು ಪರದೆಯ ನಿರಿಗೆಗಳು ಎದ್ದು ಕಾಣುತ್ತವೆ. ರಾಜ್ಯಸರಕಾರವು ಆಯ-ವ್ಯಯದಲ್ಲಿ ಗೊತ್ತುಪಡಿಸಲಾದ ಮೊತ್ತವನ್ನು ಅಭಿವೃದ್ಧಿಕಾರ್ಯಗಳಿಗಾಗಿ ನಿಗದಿತ ಸಮಯದೊಳಗೆ ವೆಚ್ಚಮಾಡಲು ಇಲಾಖೆಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ಇಲಾಖೆಗಳ ಪರಾಮರ್ಶೆಗಳನ್ನು ಕೈಗೊಂಡಾಗ, ಕೋಟ್ಯಂತರ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಿದ್ದರೂ ಸಹ ಯೋಜನೆಗಳನ್ನು ಕೈಗೊಳ್ಳದೆ, ಹಣವನ್ನು ವ್ಯಯಿಸದೆ ಇಲಾಖೆಯ ಖಜಾನೆಯಲ್ಲಿ ವ್ಯರ್ಥವಾಗಿರಿಸಿ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣಗಳನ್ನು ಕೇಳಿದಾಗ ಇಲಾಖೆಯ ಅಧಿಕಾರಿಗಳು ನೀಡುವ ಉತ್ತರ ಅಷ್ಟೊಂದು ಸಮಂಜಸವಾಗಿರುವುದಿಲ್ಲ. ಕೇವಲ ಇಲಾಖಾ ನಿಯಮಾವಳಿಗಳನ್ನು ಅನುಸರಿಸುವುದಕ್ಕಾಗಿಯೋ ಅಥವಾ ನಿಗದಿತ ಸಮಯದಲ್ಲಿ ಸಭೆಗಳನ್ನು ಜರುಗಿಸಲು ಅಧಿಕಾರಿಗಳಿಂದ ಸಾಧ್ಯವಾಗಿರುವುದಿಲ್ಲವೆಂಬ ಕಾರಣಕ್ಕಾಗಿಯೋ ಯೋಜನೆಗಳು ಕಾರ್ಯಾರಂಭವಾಗಿರುವುದಿಲ್ಲ! ಇದಕ್ಕೆ ಕಾರಣಗಳನ್ನು ಹುಡುಕಿದಾಗ ತಾಲೂಕು ಅಥವಾ ಉಪವಿಭಾಗಮಟ್ಟದ ಅಧಿಕಾರಿಗಳೇ ನಿರ್ವಹಿಸಬಹುದಾದ ಕೆಲಸಗಳನ್ನು ಪ್ರಾದೇಶಿಕ ಕಚೇರಿ, ಬೆಂಗಳೂರಿನ ನಿಗಮ-ಮಂಡಳಿಗಳು ಅಥವಾ ವಿಕಾಸಸೌಧದ ಸಚಿವಾಲಯಕ್ಕೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ತಾಲೂಕು ಮಟ್ಟದ ಅಧಿಕಾರಿ ನೀಡಬಹುದಾದ ಒಪ್ಪಿಗೆ ಪತ್ರವನ್ನು ಪಡೆಯುವುದಕ್ಕಾಗಿ, ಕಡತವನ್ನು ಬೆಂಗಳೂರಿನ ಸಚಿವಾಲಯಕ್ಕೆ ಹೊತ್ತೊಯ್ಯಬೇಕಾಗಿದೆ. ಹೀಗೆ ರಾಜ್ಯದ ಮೂಲೆಮೂಲೆಗಳಿಂದ ಬಂದುಬೀಳುವ ಕಡತಗಳು ಧೂಳು ಹಿಡಿಯಲಾರಂಭಿಸುತ್ತವೆ. ಅದರಲ್ಲಿಯೂ ಸಚಿವಾಲಯದಲ್ಲಿ ಕುಳಿತು ಸಹಿಯನ್ನಷ್ಟೆ ಮಾಡಬೇಕಾದ ಅಧಿಕಾರಿ ಭ್ರಷ್ಟನಾಗಿಬಿಟ್ಟರೆ ಅಂಥವರನ್ನು ಕೈಬಿಸಿಯೊಂದಿಗೆ ಸಂತೃಪ್ತಗೊಳಿಸದೆ ಕಡತಗಳು ಅನುಮೋದನೆಗೊಳ್ಳುವುದಿಲ್ಲ. ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಯತ್ನಿಸುವ ಯಾವುದೇ ಜನಪ್ರತಿನಿಧಿ ಅಥವಾ ಜನಸಾಮಾನ್ಯರು ನಿವೇದಿಸಿಕೊಂಡರೂ ಸಹ ಕ್ಷುಲ್ಲಕ ಆಕ್ಷೇಪಣೆಗಳನ್ನು ಕಡತಗಳಲ್ಲಿ ನಮೂದಿಸುವುದರೊಂದಿಗೆ ಹಿಂದಿರುಗಿಸಿದ ಅದೇಷ್ಟೋ ಉದಾಹರಣೆಗಳಿವೆ. ಆದರೆ ಅಂತಹುದೆ ಸ್ವರೂಪದ ಕಡತಗಳು ಅಧಿಕಾರಿಯ ಕಿಸೆಯನ್ನು ಬೆಚ್ಚಗೆ ಮಾಡುವುದರೊಂದಿಗೆ ಅನುಮೋದನೆಗೊಳ್ಳುತ್ತವೆ. ಜನಪ್ರತಿನಿಧಿ ಅಥವಾ ಕಾನೂನಿನ್ವಯ ಕೆಲಸಗಳನ್ನು ಪ್ರಯತ್ನಿಸಲಾರಂಭಿಸಿದಾಗ, ಈಡೇರಿಸಿಕೊಳ್ಳಲು ಟೇಬಲ್ಲಿನಿಂದ ಟೇಬಲ್ಲುಗಳಿಗೆ ಕೆಲಸಕ್ಕೆ ಬಾರದ ಷರಾಗಳೊಂದಿಗೆ ಕಡತವು ಅಲೆದಾಡುತ್ತಲೇ ಇರುತ್ತದೆ. ಇಂಥಹ ನಿಯಮಗಳನ್ನು ರೂಪಿಸಿಕೊಟ್ಟ ಸರಕಾರವು ಭ್ರಷ್ಟಾಚಾರರಹಿತ ಆಡಳಿತಕ್ಕಾಗಿ ಅದೆಷ್ಟು ಗಂಟಲು ಹರಿದುಕೊಂಡರೂ ಉಪಯೋಗವಿಲ್ಲ. ಬದಲಾವಣೆಯಾಗಬೇಕಾಗಿರುವುದು ಆಡಳಿತ ಪದ್ಧತಿಯಲ್ಲಿ. ಆದರೆ ಇತ್ತೀಚಿನ ಸರಕಾರಗಳು ಕೈಗೊಳ್ಳುತ್ತಿರುವ ನಿರ್ಣಗಳನ್ನು ಅವಲೋಕಿಸಿದರೆ ಇವುಗಳಿಂದ ಅಂತಹ ಬದಲಾವಣೆಯನ್ನು ನಿರೀಕ್ಷಿಸಬಹುದೆ? ಎಂಬುದು ಯಕ್ಷಪ್ರಶ್ನೆಯಾಗಿದೆ.

ಮೊನ್ನೆ ವಿಧಾನಮಂಡಲದಿಂದ ಅನುಮೋದನೆಗೊಂಡ ಪಾರದರ್ಶಕ ಕಾಯಿದೆ ತಿದ್ದುಪಡಿ ವಿಧೇಯಕವು ಮತ್ತಷ್ಟು ವಿಳಂಬ ಹಾಗೂ ಭ್ರಷ್ಟಾಚಾರಕ್ಕೆ ಹೇಗೆ ಕಾರಣವಾಗುತ್ತದೆಯೆಂಬುದನ್ನು ಗಮನಿಸಬಹುದಾಗಿದೆ. ಇನ್ನು ಮುಂದೆ ಎರಡು ಜಿಲ್ಲೆಗಳಿಗೆ ಹೊಂದಿಕೊಂಡ ಕಾಮಗಾರಿಯು ಒಂದುಕೋಟಿಯನ್ನು ಮೀರಿದ್ದರೆ ಸರಕಾರದ ಉಪಕಾರ್ಯದರ್ಶಿ ಹುದ್ದೆೆಯ ಅಧಿಕಾರಿಯಿಂದ ಅನುಮೋದನೆಯಾಗತಕ್ಕದ್ದು! ಎಂಬ ತಿದ್ದುಪಡಿಯನ್ನು ಸೇರಿಸಲಾಗಿದೆ. ಸಚಿವಾಲಯದಲ್ಲಿ ಉಪಕಾರ್ಯದರ್ಶಿ ಹುದ್ದೆಯನ್ನು ಕೆ.ಎ.ಎಸ್ ಹಂತದ ಅಧಿಕಾರಿಗಳು ನಿರ್ವಹಿಸುತ್ತಾರೆ. ಸಸಾಲಟ್ಟಿ ಏತ ನೀರಾವರಿಯಂತಹ ಯೋಜನೆಗಳು ಸಣ್ಣ ಪ್ರಮಾಣದ್ದಾಗಿದ್ದರೂ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿರುತ್ತವೆ. ಮಲೆನಾಡು ಅಭಿವೃದ್ಧಿ ಕಾಮಗಾರಿಗಳು ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಂಥ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಆಲಮಟ್ಟಿಯಂತಹ ಬೃಹತ್ ಯೋಜನೆಗಳು ನಾಲ್ಕಾರು ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿರುತ್ತದೆ. ಸರಕಾರ ಪ್ರತಿವರ್ಷವೂ ಇಂತಹ ಬೃಹತ್ ಯೋಜನೆಗಳಿಗೆ ಹತ್ತಿಪ್ಪತ್ತು ಸಾವಿರಕೋಟಿಗಳಷ್ಟು ಅನುದಾನವನ್ನು ಮೀಸಲಿರಿಸಿರುತ್ತದೆ. ಇಂತಹ ಯೋಜನೆಗಳನ್ನು ಕೈಗೊಳ್ಳಲು ತಾಂತ್ರಿಕ ನೈಪುಣ್ಯತೆ ಹಾಗೂ ಕಾರ್ಯಾನುಭವ ಮುಖ್ಯವೆನಿಸುತ್ತದೆ. ಆದರೆ ಬೆಂಗಳೂರಿನ ವಿಕಾಸಸೌಧದಲ್ಲಿ ಕಾರ್ಯನಿರ್ವಹಿಸುವ ಉಪಕಾರ್ಯದರ್ಶಿಯಿಂದ ಹಿರಿಯ ಐ.ಎ.ಎಸ್ ಶ್ರೇಣಿಯ ಅಧಿಕಾರಿಗಳಗೆ ಯಾವ ತಾಂತ್ರಿಕ ನೈಪುಣ್ಯತೆಗಳಿರಲು ಸಾಧ್ಯ? ಅಧೀಕ್ಷಕ ಇಂಜಿನೀಯರ್ ಹಾಗೂ ಮುಖ್ಯ ಇಂಜಿನೀಯರ್ ಹುದ್ದೆಗೆ ತಾಂತ್ರಿಕ ಅಧಿಕಾರಿಗಳು ಇನ್ನುಮುಂದೆ ತಮ್ಮ ವ್ಯಾಪ್ತಿಯ ಕಾಮಗಾರಿಗಳ ಟೆಂಡರ್ ಅನುಮೋದನೆಗಾಗಿ ಸಚಿವಾಲಯಕ್ಕೆ ಅಲೆದಾಡಬೇಕಾಗಿದೆ. ಭೌಗೋಳಿಕ ವಿನ್ಯಾಸ ಹಾಗೂ ಸಾಮಾಜಿಕ ಬೇಡಿಕೆಗಳನ್ನೊಳಗೊಂಡ ಕಾಮಗಾರಿಗಳ ಟೆಂಡರ್ ಅನುಮೋದನೆ ಪಾರದರ್ಶಕ ಹೆಸರಿನಲ್ಲಿ ಗುತ್ತಿಗೆದಾರರಿಂದ ಹಣಪಡೆಯುವ ವಸೂಲಿ ಕೃತ್ಯಕ್ಕೆ ವಿಧಾನಮಂಡಲದ ಅನುಮೋದನೆ ಪುಷ್ಟಿಯನ್ನೊದಗಿಸಿದೆ ಎಂದು ಹೇಳದೆ ಅನ್ಯಮಾರ್ಗವಿಲ್ಲ. ಹೀಗೆ ಭ್ರಷ್ಟಾಚಾರವೆನ್ನುವುದು ವಿಧಾನಮಂಡಲದ ಕಾರ್ಯಕಲಾಪಗಳ ಒಪ್ಪಿಗೆಗಳೊಂದಿಗೆ ಅಧಿಕೃತಗೊಳ್ಳುತ್ತಿರುವಂತೆ ಭಾಸವಾಗುತ್ತದೆ. ವಿಷಯಗಳ ಬಗ್ಗೆ ವಿಷಯಾಧಾರಿತ ಗಂಭೀರ ಚರ್ಚೆಗಳ ಅವಶ್ಯಕತೆ ಇದೆ. ವಿಧಾನಮಂಡಲದಿಂದ ಅನುಮೋದನೆಗೊಳ್ಳುವ ವಿಧೇಯಕಗಳು ಕಾನೂನುಗಳಾಗಿ ರೂಪುಗೊಳ್ಳುತ್ತವೆ. ಕಾನೂನುಗಳು ಕ್ಲಿಷ್ಟಗೊಳ್ಳುವುದು ಸುಲಭಸಾದ್ಯ. ಯೋಜನೆಗಳನ್ನು ಗೊಂದಲಗಳಲ್ಲಿ ರೂಪಿಸಿ ಪರ್ಯಾವಸಾನಗೊಳಿಸಿದಾಗ. ಹಲವಾರು ಆಡಳಿತ ಪದ್ಧತಿಗಳನ್ನು ದುರುದ್ದೇಶಪೂರ್ವಕವಾಗಿಯೇ ಕ್ಲಿಷ್ಟಗೊಳಿಸಲಾಗುತ್ತದೆ. ಕಾರ್ಯದರ್ಶಿ, ಅಧಿಕಾರಿವರ್ಗ ಮುಂತಾದವರು ಸರಕಾರದ ಯೋಜನೆಗಳನ್ನು ಜಾರಿಗೊಳಿಸುವ ಯಂತ್ರದಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ಆದರೆ ಶಾಸಕಾಂಗವು ತಾನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಮರೆತಾಗ ಶಾಸಕಾಂಗದ ಜವಾಬ್ದಾರಿಯನ್ನೂ ಸಹ ಅಧಿಕಾರಿಗಳೇ ನಿರ್ವಹಿಸಬೇಕಾದ ಅನಿವಾರ್ಯತೆಯುಂಟಾದಾಗ ಇಂತಹ ಗೊಂದಲಗಳು ಏರ್ಪಡುತ್ತವೆ. ರಾಜ್ಯದ ಪ್ರಸ್ತುತ ಸಮಸ್ಯೆಯ ಪರಿಹಾರಕ್ಕಾಗಿ ಸಂಬಂಧಿಸಿದ ಸಚಿವರು ತರುವ ತಿದ್ದುಪಡಿ ವಿಧೇಯಕವು ಮೊಟ್ಟಮೊದಲು ಆಯಾ ಸಚಿವರಿಗೆ ಸಂಪೂರ್ಣವಾಗಿ ಮನವರಿಕೆಯಾಗಬೇಕು. ಆನಂತರದಲ್ಲಿ ಪ್ರಸ್ತುತ ತಿದ್ದುಪಡಿಯಿಂದಾಗಿ ಆಡಳಿತ ಮತ್ತಷ್ಟು ಜನರ ಬಳಿಗೆ ಧಾವಿಸಿದಂತಗಾಗುತ್ತದೆಯೆಂಬ ಸ್ಪಷ್ಟತೆ ವಿಧಾನಮಂಡಲದಲ್ಲಿ ವಿಸ್ತ್ರುತವಾಗಿ ವ್ಯಕ್ತಗೊಳ್ಳಬೇಕು. ಇಂಥಹ ಜವಾಬ್ದಾರಿಗಳಿಂದ ಮಂತ್ರಿಮಂಡಲ ಹಾಗೂ ಶಾಸಕಾಂಗ ವಿಮುಕ್ತವಾದಾಗ ಅಧಿಕಾರಿವರ್ಗ ತಮ್ಮನುಕೂಲಕ್ಕೆ ತಕ್ಕಂತೆ ಶಾಸನವನ್ನು ಬರೆದುಕೊಳ್ಳುವ ಸಂಪ್ರದಾಯ ಎಂದಿಗೂ ಕೊನೆಗಾಣುವುದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close