About Us Advertise with us Be a Reporter E-Paper

ವಿವಾಹ್

ಅದು ಪ್ರೀತಿಯೋ ಸ್ನೇಹವೋ ಎಂಬ ಗೊಂದಲ ನನಗೆ ಇಂದಿಗೂ ಇದೆ

- ವೆಂಕಟೇಶ ಚಾಗಿ

ಹೌದು.. ನನಗೆ ಇಂದಿಗೂ ಈ ಪ್ರಶ್ನೆ ಕಾಡುತ್ತಿದೆ. ಆ ದಿನಗಳಂದು ನಿನಗಾಗಿ ನಾನೇಕೆ ಅಷ್ಟು ಒಳ್ಳೆಯವನಾದೆ ಎಂದು. ಎಲ್ಲರಂತೆ ನಾನೂ ಇದ್ದಿದ್ದರೆ ಇಂದು ನನಗೆ ಈ ಪ್ರಶ್ನೆ ಕಾಡುತ್ತಿರಲಿಲ್ಲ ಎನಿಸುತ್ತಿದೆ. ಅಂದು ನಿನ್ನ ಪರಿಚಯವಾದಾಗಿನಿಂದ ನಿನ್ನ ಒಂದು ಮಾತಿಗೆ ನನ್ನ ಕಟ್ಟ ಹವ್ಯಾಸಗಳನ್ನೆಲ್ಲಾ ಬಿಟ್ಟುಬಿಟ್ಟಿದ್ದೆ. ನಾನು ಒಳ್ಳೆಯವನಂತೆ ಕಾಣಲು ಅದೆಷ್ಟು ನಾಟಕಗಳನ್ನಾಡಿದೆ ಗೊತ್ತಾ..? ಬರುಬರುತ್ತಾ ಆ ಒಳ್ಳೆಯತನ ನನಗೆ ರೂಢಿಗತವಾಯಿತು. ಸಣ್ಣ ಸಣ್ಣ ಸಹಾಯ ಮಾಡಿದ ಸಂದರ್ಭಗಳನ್ನು ಹಂಚಿಕೊಂಡಾಗ ನೀನು ಪ್ರಶಂಶಿಸುತ್ತಿದ್ದ ಪರಿ ಕಂಡು ಒಳ್ಳೆಯನಾಗುವುದಕ್ಕೆ ಪ್ರೇರಣೆಯಾಯಿತು. ನಿನಗೆ ಅದೆಷ್ಟು ಸಹಾಯ ಮಾಡಿದೆನೋ ಲೆಕ್ಕವಿಲ್ಲ.

ಅದೇನೋ ಗೊತ್ತಿಲ್ಲ. ನೀನೆಂದರೆ ಅದೆಂತಹ ಗೌರವ ವೆಂದರೆ ನಿನ್ನ ಮಾತೇ ವೇದವಾಕ್ಯ ಎನಿಸಿತ್ತು. ನಿನ್ನ ಪ್ರತಿ ಕೆಲಸಗಳನ್ನು ಗೌರವಿಸುತ್ತಿದ್ದೆ. ಓದು ಬಿಟ್ಟಿದ್ದ ನಾನು ಅಂದು ನೀ ಹೇಳಿದ ಒಂದು ಮಾತಿಗೆ ಡಿಗ್ರಿ ಮುಗಿಸಿದ್ದೆ. ಅದು ನನಗೆ ಕಷ್ಟವಾದ ವಿಷಯದಲ್ಲಿ. ಆ ದಿನ ರಾತ್ರಿ ಅದಾರಿಗೋ ಅಪಘಾತವಾಗಿದೆ ಎಂದು ನನಗೆ ನೀನು ಕರೆ ನನ್ನ ಅನಾರೋಗ್ಯವನ್ನು ಲೆಕ್ಕಿಸದೇ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರ ಯೋಗಕ್ಷೇಮ ನೋಡಿಕೊಂಡಿದ್ದೆ. ನೀನು ನನ್ನ ಮೇಲೆ ಇಟ್ಟ ನಂಬಿಕೆಯನ್ನು ನಾನು ಉಳಿಸಿಕೊಳ್ಳಲು ಹವಣಿಸುತ್ತಿದ್ದೆ. ನಿನ್ನ ಹುಟ್ಟುಹಬ್ಬದ ದಿನ ಮೊದಲ ವಿಷ್ ನನ್ನದೇ ಆಗಬೇಕು ಎನ್ನುವ ಛಲದಿಂದ ರಾತ್ರಿ ಹನ್ನೆರಡಕ್ಕೆ ತಪ್ಪದೇ ಕರೆ ಮಾಡಿ ವಿಷ್ ಮಾಡುತ್ತಿದ್ದೆ. ಅದೆಂತಹ ಸ್ನೇಹ ನಾ ಅರಿಯೆ. ಅದೇನು ಪ್ರೀತಿನೋ ಸ್ನೇಹಾನೋ ಎಂಬುದು ನನಗೆ ಈಗಲು ಗೊಂದಲವಾಗಿದೆ. ಆ ಸೆಳೆತ ಆ ಗೌರವ ಆ ಇಂದಿಗೂ ನನಗೆ ಆಶ್ಚರ್ಯವನ್ನುಂಟುಮಾಡಿವೆ. ಬೇರೆಯವರ ಮಾತುಗಳಿಗೆ ನಾನೆಂದು ತಲೆಕೆಡಿಸಿಕೊಂಡಿರಲಿಲ್ಲ.

ಆದರೆ ಅಂದು ನಿನಗೆ ನಾನು ಸ್ವಲ್ಪ ಕೆಟ್ಟವನಾದೆ ಎಂದು ಅನಿಸುತ್ತದೆ ನನಗೆ. ಆ ದಿನ ನೀನು ನಿನ್ನ ಮದುವೆ ಕಾರ್ಡ್ ನನಗೆ ನೀಡಿದಾಗ ನನಗೆ ಆಶ್ಚರ್ಯಕರವಾಗಿತ್ತು . ಮಾತೇ ಬಾರದ ಸಂದರ್ಭದಲ್ಲಿ ಸಿಲುಕಿಕೊಂಡಿದ್ದೆನು. ಮನದ ನೋವನ್ನೆಲ್ಲಾ ಮರೆಮಾಚಿ , ತಮಾಷೆಗಳ ಮಳೆಗರೆದಿದ್ದೆನು. ಅಂದು ನಿನಗೆ ನೋವೆನಿಸಿರಬೇಕು ನನ್ನ ತಮಾಷೆಯಿಂದ. ಚಿಕ್ಕ ಚಿಕ್ಕ ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ನಾನು ನೀನೇಕೆ ಮದುವೆಯ ವಿಷಯವನ್ನು ಮರೆಮಾಚಿದೆಯೋ ಅದು ನನಗೆ ಗೊತ್ತಿಲ್ಲ. ಪ್ರೀತಿ ಪ್ರೇಮದ ನಾಟಕವನ್ನಂತೂ ನಾವಾಡಿದ್ದಿಲ್ಲ. ಇರಲಿ ಬಿಡು ಎಲ್ಲದಕ್ಕೂ ಒಂದು ಇತಿಮಿತಿ ಇರಬೇಕಲ್ಲವೆ. ಆದರೂ ನಿನಗೆ ನಾನೆಂದೂ ಕೆಟ್ಟವನಾಗಲು ಬಯಸಲಿಲ್ಲ.

ಅದ್ದೂರಿ ಮದುವೆಯೂ ಆಯಿತು. ಆದರೆ ದಿನಗಳು ಉರುಳಿದಂತೆ ಆ ಸ್ನೇಹ ಆ ಬಂಧ ಉಳಿಯಲಿಲ್ಲ. ಮೊಬೈಲ್ ಕಳೆದಂತೆ , ಮೊಬೈಲ್ ಸಂಖ್ಯೆ ಬದಲಾಯಿಸಿದಂತೆ ಹೀಗೆ ಹಲವರು ಕಾರಣಗಳನ್ನು ಹೇಳುತ್ತಾ ನನ್ನಿಂದ ದೂರವಾದೆ. ನಾನೂ ಕೂಡಾ ನಿನ್ನ ಪರಿಸ್ಥಿತಿ ಅರಿತು ಇಂದು ನಾವೀಗ ಅಪರಿಚಿತರು, ಕಾಲ ಬದಲಾಗಿದೆ, ನೀನು ಬದಲಾಗಿರುವೆ. ಆದರೆ ಆ ನನ್ನ ಒಳ್ಳೆಯತನ ಇಂದಿಗೂ ಬದಲಾಗಿಲ್ಲ. ಆ ದಿನ ನೀನು ನನ್ನಿಂದ ಭಾಷೆ ತೆಗೆದುಕೊಂಡ ಕ್ಷಣದಿಂದ ನಾನೆಂದು ಒಳ್ಳೆಯತನ ಬಿಟ್ಟಿಲ್ಲ. ಸಮಾಜದಲ್ಲಿ ಎಲ್ಲರೂ ನನ್ನನ್ನು ಗೌರವಿಸುವಂತಾಗಿದೆ. ಒಂದೇ ಕೊರಗು, ಚಿಕ್ಕ ಚಿಕ್ಕ ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ನಾನು ನೀನಿಲ್ಲದೇ ಶೂನ್ಯನಾಗಿರುವೆ. ಆ ಪ್ರೇರಣೆ ಸಿಗದೇ ಕುಗ್ಗಿರುವೆ. ಈಗೀಗ ನನಗೆ ಅನಿಸುತ್ತಿದೆ. ನಾನೇಕೆ ಅಷ್ಟು ಒಳ್ಳೆಯವನಾದೆ . .? ಇದಕ್ಕೆ ಉತ್ತರ ನೀನೇ ಹೇಳಬೇಕು. ಅದು ಎಂದಿಗೂ ಸಾಧ್ಯವಿಲ್ಲ. ಅದೇನೇ ಇರಲಿ ನೀನು ಚೆನ್ನಾಗಿದ್ದರೆ ನನಗೆ ಅಷ್ಟೇ ಸಾಕು.

Tags

Related Articles

Leave a Reply

Your email address will not be published. Required fields are marked *

Language
Close