About Us Advertise with us Be a Reporter E-Paper

ವಿರಾಮ

ಕಲ್ಲು ಕರಗುವ ಸಮಯ

ಆ ಬೆಳಿಗ್ಗೆ ಏಳುತ್ತಿದ್ದ ಹಾಗೆ ಸಣ್ಣಗೆ ಹೊಟ್ಟೆ ನೋವು ಪ್ರಾರಂಭವಾಯಿತು. ಏನೋ ಹಿಂದಿನ ದಿನ ಸಾಯಂಕಾಲ ದಾರಿಯಲ್ಲಿ ತಿಂದಿದ್ದ ಮೆಣಸಿನಕಾಯಿ ಬಜ್ಜಿ ಜೀರ್ಣ ಆಗಿರಲಿಕ್ಕಿಲ್ಲ, ಇವಳಿಗೆ ಹೇಳಿದರೆ ಹಾಳುಮೂಳು ತಿನ್ನಬೇಡಿ ಅಂತ ಎಷ್ಟು ಸಲ ಹೇಳಿದರೂ ನೀವು ಕೇಳುವುದಿಲ್ಲ ಎಂದು ಬೈಸಿಕೊಳ್ಳುವುದು ಬೇಡ ಅಂತ ಸುಮ್ಮನಾದೆ. ಆದರೆ ಏಳು ಗಂಟೆಯ ಹೊತ್ತಿಗೆ ಮತ್ತೆ ನೋವು ಜೋರಾಯಿತು. ಇದೊಳ್ಳೇ ಪಜೀತಿಯಾಯ್ತಲ್ಲ ಅಂತ ನಮ್ಮ ಖಾಯಂ ಡಾಕ್ಟರ್ ನಡೆಸುವ ಕ್ಲಿನಿಕ್‌ಗೆ  ಓಡಿದೆ. ಅವರದ್ದು  ಹೊತ್ತಿನ ಮದ್ದು, ಇಪ್ಪತ್ತು ರೂಪಾಯಿ. ಹೆಚ್ಚಿಗೆ ಇಲ್ಲ, ಕಡಿಮೆ ಇಲ್ಲ. ಅಂತೂ ಅವರು ಕೊಟ್ಟ ಮಾತ್ರೆ ತಗೆದುಕೊಂಡ ಕೂಡಲೆ ಸ್ವಲ್ಪ ರಿಲೀಫ್ ಅಯ್ತು. ಆಫೀಸಿಗೆ ಹೋದೆ.

ಮಧ್ಯಾಹ್ನದ ತನಕ ಸರಿಯಾಗಿಯೇ ಇದ್ದೆ. ಊಟ ಮಾಡುತ್ತಿದ್ದಂತೆ ಮತ್ತೆ ಹೊಟ್ಟೆ ನೋವು ಶುರು. ತಡೆಯಲಾರದಷ್ಟು, ನಿಲ್ಲಲೂ ಆಗುವುದಿಲ್ಲ, ಕುಳಿತುಕೊಳ್ಳಲೂ ಆಗುವುದಿಲ್ಲ. ಹೊಟ್ಟೆಯ ಎಡಬದಿ ಅಳ್ಳೆಗೆ ಚೂರಿ ಹಾಕಿ ತಿವಿದ ಹಾಗೆ. ಮೂರು ಮೂರು ಸಲ ಕಕ್ಕಸು ಮನೆಗೆ ಹೋಗಿ ಬಂದೆ. ಬೇಡವಾದದ್ದು  ಹೊರಗೆ ಬರಲಿ ಅಂತ. ಉಹುಂ… ನೋವಿಗೆ ಕಣ್ಣು ಕತ್ತಲೆ ಬರುವ ಹಾಗಾಯಿತು. ಇನ್ನು ತಡೆಯಲು ಸಾಧ್ಯವೇ ಇಲ್ಲ ಅಂತಾದ ಕೂಡಲೇ ಇವಳಿಗೆ ಒಂದು ಪೋನ್ ಮಾಡಿ, ‘ದೊಡ್ಡ ಡಾಕ್ಟರ್ ಹತ್ತಿರ ಹೋಗುವ’ ಅಂದೆ. ಹೇಗೆ ಆ ಅಸಾಧ್ಯ ನೋವು ಕಟ್ಟಿಕೊಂಡು ಬಂದೆನೋ ಗೊತ್ತಿಲ್ಲ! ಅಂತೂ ದೊಡ್ಡ ಡಾಕ್ಟರ ಹತ್ತಿರ ಹೋದರೆ ಅವರು  ‘ಡೌಟೇ ಇಲ್ಲ. ಕಿಡ್ನಿಯಲ್ಲಿ ಕಲ್ಲು ಇದೆ, ನೀವು ಎಡ್ಮಿಟ್ ಆಗಬೇಕು. ಬೇಕಾದರೆ ಒಂದು ಸ್ಕ್ಯಾನ್ ಮಾಡಿಸಿ  ಮಾಡಿಕೊಳ್ಳುವ’ ಅಂದರು.

ಇದೇನಪ್ಪ ಗರ್ಭ ಧರಿಸದೇ ಸ್ಕ್ಯಾನ್ ಮಾಡಿಸಿಕೊಳ್ಳುವ ಚಾನ್‌ಸ್ ನನಗೂ ಬಂತಲ್ಲಾ? ಅನ್ನಿಸಿ ಸ್ಕ್ಯಾನ್ ಮಾಡಿಸಿದರೆ, ಹೌದಲ್ಲಾ ! ಒಳಗಡೆ ಕಲ್ಲು ಉಂಟು. ಇವಳ ಅಣ್ಣನಿಗೆ ಸುದ್ಧಿ ಮುಟ್ಟಿಸಿ ಆ ಸಂಜೆಯೇ ಅಸ್ಪತ್ರೆಗೆ ಅಡ್ಮಿಟ್ ಅಗಿದ್ದಾಯಿತು. ಅಲ್ಲಿ ಒಮ್ಮೆ ನನ್ನ ತೂಕ ನೋಡಿದ್ದೇ, ಆ ನರ್ಸ್ ಒಂದು ಇಂಜೆಕ್ಷನ್ ಚುಚ್ಚಿ ಡ್ರಿಪ್‌ಸ್ ಹಾಕಿ ಬೆಡ್ ಮೇಲೆ ಮಲಗಿಸಿಬಿಟ್ಟರು. ಅಯ್ಯಬ್ಬ ಅಂತ ಸ್ವಲ್ಪ ನೆಮ್ಮದಿ ಆಯಿತು. ಅಷ್ಟರ ಒಳಗೆ,  ತಿಳಿದು ನನ್ನ ಕೆಲವು ಸ್ನೇಹಿತರು ಓಡೋಡಿ ಬಂದು ನನಗೆ ಧೈರ್ಯ ತುಂಬಲು ನಿಂತರು.

ಈ ಕಲ್ಲು ತುಂಬಾ ಕಾಮನ್ ಮಾರಾಯಾ!

‘ಕಿಡ್ನಿಯಲ್ಲಿ ಕಲ್ಲು ಆಗುವುದು ಈಗ ಎಲ್ಲಾ ಕಡೆ ಕೋಮನ್ ಮಾರಾಯಾ. ನಮ್ಮ ಮನೆ ಹತ್ತಿರದ ಒಬ್ಬರಿಗೆ ನಾಲ್ಕೈದು ಇಂಚು ಉದ್ದದ್ದು, ಆರೇಳು ಕಲ್ಲು ಒಟ್ಟಿಗೇ ಇತ್ತಂತೆ. ಆಪರೇಶನ್ ಮಾಡಿಸಿಯೆ ತೆಗೆದದ್ದು. ಮತ್ತೆ ಪ್ರತೀ ವರ್ಷವೂ ಬೆಳೆಯುತ್ತಂತೆ. ತೆಗೆಸುತ್ತಾರಂತೆ’ ಅಂದರು ಒಬ್ಬರು. ಮತ್ತೊಬ್ಬರು, ‘ಆಪರೇಶನ್ನೇ ಬೇಡ. ಟ್ಯೂಬ್ ಹಾಕಿ  ತೆಗೆಯುತ್ತಾರಂತೆ. ಏನೂ ತೊಂದರೆ ಇಲ್ಲ ’ಅಂದರು. ಒಬ್ಬರು, ಅದಕ್ಕೆ ಈ ಬಾರ್ಲಿ ಚೆನ್ನಾಗಿ ಕುದಿಸಿ ಆಗಾಗ ಕುಡಿಯಬೇಕು ಅಂದರೆ, ಪಕ್ಕದ ಬೆಡ್ಡಲ್ಲಿ ಮಲಗಿದ ಪೇಶಂಟ್ ಒಬ್ಬರು, ‘ಚಿಕ್ಕು ಬೀಜದ ಹೊರಗಿನ ಸಿಪ್ಪೆ ತೆಗೆದು, ತೇಯ್ದು ಆ ಜಾಗಕ್ಕೆ ಹಚ್ಚಿದರೆ ಕಲ್ಲು ಕರಗಿ ಗುಣ ಆಗುತ್ತದೆ’ ಅಂದರು. ಅಷ್ಟರಲ್ಲಿ ವಿಷಯ ತಿಳಿದ ಬಂಧುವೊಬ್ಬರು ಪೋನ್‌ನಲ್ಲಿಯೇ, ‘ಬೇರೆಯೇನೂ ಬೇಡ. ಬಾಳೆ ಮರದ ಒಳಗಿನ ದಿಂಡನ್ನು ಸಣ್ಣಗೇ ಪೀಸ್ ಮಾಡಿ, ಮಿಕ್ಸಿಗೆ ಹಾಕಿ  ಮಾಡಿ ಆಗಾಗ ಕುಡಿಸು. ಕಲ್ಲು ತನ್ನಷ್ಟಕ್ಕೆ ಕರಗಿ ಹೋಗುತ್ತೆ’ ಎಂದು

ಇವಳಿಗೆ ಆದೇಶ ಕೊಟ್ಟರು. ಇನ್ನೊಬ್ಬರು ಅದಕ್ಕೆ ಒಂದೇ ಮದ್ದು. ದಿವಸಕ್ಕೆ ನಾಲ್ಕೈದು ಲೀಟರ್ ನೀರು ಕುಡಿಯುವುದು ಅಷ್ಟೆ ಅಂದರು. ಮತ್ತೊಬ್ಬರು ಕರಗುಂಜಿ ಹಣ್ಣನ್ನು ಬೀಜ ಸಮೇತ ಅರೆದು ಜ್ಯೂಸ್ ಮಾಡಿ ಕೊಡಿ. ಅರ್ಧ ಗಂಟೆಯ ಒಳಗೆ ಕಲ್ಲು ಹೊರಗೆ ಬಾರದೇ ಇದ್ದರೆ ಮತ್ತೆ ಕೇಳಿ ಎಂದು ಸವಾಲೂ ಹಾಕಿದರು. ಮತ್ತೊಬ್ಬರು ಅದಕ್ಕೆ ಅತ್ತಿ ಕುಡಿಯ ಕಷಾಯದಷ್ಟು ಒಳ್ಳೆಯ  ಬೇರೆ ಇಲ್ಲ ಮಾರಾಯ್ರೆ ಎಂದು ತೀರ್ಮಾನ ಕೊಡಿಸಿದರೆ, ಇನ್ನು ಮೇಲೆ ಟೊಮೇಟೊ, ಕ್ಯಾಬೇಜು, ಕೋಸು ಎಲ್ಲಾ ತಿನ್ನಲೇಬಾರದು ಅಂತ ಮತ್ತೊಬ್ಬರು ಆರ್ಡರೂ ಪಾಸು ಮಾಡಿದ್ದೂ ಆಯಿತು. ಅಂತೂ ಇಷ್ಟೆಲ್ಲಾ ಆಗುವಾಗ ನನ್ನ

ಹೊಟ್ಟೆ ನೋವು ಸ್ವಲ್ಪ ಕಡಿಮೆಯಾಗಿತ್ತು. ಡಾಕ್ಟರ್ ಬರುವುದರೊಳಗೆ ಒಂದು ಸಣ್ಣ ಔಷಧ ಅಂಗಡಿ ಇಡುವಷ್ಟು ಮದ್ದು-ಪಥ್ಯಗಳ ವಿವರ ಸಂಗ್ರಹವಾಗಿತ್ತು.

ಡಾಕ್ಟರ್ ಬಂದವರೇ ‘ಸ್ಕ್ಯಾನ್ ಮಾಡಿ ನೋಡಿದೆವಲ್ಲಾ, ತುಂಬಾ ಸಣ್ಣ ಸ್ಟೋನ್ ಅಷ್ಟೆ, ಗಾಬರಿ ಬೇಡ. ಡ್ರಿಪ್‌ಸ್  ಹೋಗುತ್ತಾ ಅಂತ ಎರಡು ದಿನ ನೋಡುವ. ಸರೀ ನೀರು ಕುಡಿಯಿರಿ. ಅದರಲ್ಲಿ ಹೋಗದಿದ್ದರೆ ಇದ್ದೇ ಇದೆಯಲ್ಲಾ ಆಪರೇಶನ್’ ಎಂದು ಗಾಬರಿ ಹುಟ್ಟಿಸಿ, ಒಂದು ಕ್ಷಣವೂ ನಿಲ್ಲದೇ ಹೊರಟು ಹೋಗಿಬಿಟ್ಟರು.

‘ಪಕ್ಕದ ಮನೆಯವರು 2-3 ಬಾಳೇ ಮರ ಕಡಿದು ದಿಂಡನ್ನು ಮನೆಯ ಎದುರು ತಂದು ಹಾಕಿದ್ದಾರೆ’  ಎಂದು ನನ್ನ ಮಗ ಪೋನ್ ಮಾಡಿ ಸುದ್ಧಿ ಮುಟ್ಟಿಸಿದ. ಅಷ್ಟೊಂದು ಬಾಳೆ ದಿಂಡನ್ನು ರಸ ಮಾಡಿದರೆ, ಎಷ್ಟು ಗ್ಲಾಸು ಆದೀತು, ಅದೆಲ್ಲವನ್ನೂ ನಾನು  ಹೌದಾ ಎಂದು ಗೊಂದಲದಲ್ಲಿ ಬಿದ್ದೆ. ಅಂತೂ ಮೂರು ದಿನಗಳ ಅವಿರತ ಹೊಟ್ಟೆ ನೋವಿನ ನಂತರ ಅರ್ಧ ಸೆಂಟಿ ಮೀಟರಿನ ಕಲ್ಲೊಂದು ಮೌನವಾಗಿ ಹೊರಗೆ ಬಂತು. ನೋಡುವುದಿಕ್ಕೆ ಇಷ್ಟೇ ಪುಟ್ಟದು, ಆದರೆ, ಅದರ ಚೂಪು ಚೂಪು ಮೂಲೆಗಳು ಸೂಜಿಯಂತೆ ಹೊಟ್ಟೆಯನ್ನೆಲ್ಲಾ ಚುಚ್ಚಿ ಚುಚ್ಚಿ ನೋವಿನ ಲೋಕದಲ್ಲೇ ನನ್ನನ್ನು ಮುಳುಗಿಸಿಬಿಟ್ಟಿತ್ತು! ಅಬ್ಬಾ ಆ ಕಲ್ಲಿನ ಶಕ್ತಿಯೇ!

ಮೂರು ದಿನಗಳ ನೊವುಂಡ ನಂತರ ಒಂದು ಹೆರಿಗೆ ಆದಂತೆ ಆಯಿತು. ಆದರೆ ಆ ಮೂರು  ನಾನು ಅನುಭವಿಸಿದ ನೋವು ಮಾತ್ರಾ ಅಷ್ಟಿಷ್ಟಲ್ಲ.

Tags

Related Articles

Leave a Reply

Your email address will not be published. Required fields are marked *

Language
Close