About Us Advertise with us Be a Reporter E-Paper

ಅಂಕಣಗಳು

ವರ್ಗಾವಣೆ ದಂಧೆ ನಿಲ್ಲಲಿ

ಸರಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತದೆ ಎನ್ನುವ ಆರೋಪಗಳು ಇಂದು ನಿನ್ನೆವಲ್ಲ. ಈ ರಾಜಕಾರಣ ಬಂದ ದಿನದಿಂದಲೂ ಕಾರ್ಯಾಂಗದ ಮೇಲೆ ಒತ್ತಡ, ಪ್ರಭಾವಗಳು ಬೀರುತ್ತಲೇ ಬಂದಿವೆ. ಹೊಸ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ತನಗೆ ನಿಷ್ಠರಾದ  ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಮಾಡುವುದು ಸಂಪ್ರದಾಯವೆಂಬಂತಾಗಿದೆ. ಇದರ ಜತೆಗೆ ಶಾಸಕರು ತಮಗೆ ಬೇಕಾದ ಅಧಿಕಾರಿಗಳು, ಸಿಬ್ಬಂದಿಯನ್ನು ತಮ್ಮ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಏಕೆಂದರೆ, ಇವರ ಮಾತಿಗೆ ಗೋಣು ಹಾಕುವ ಅಧಿಕಾರಿಗಳು ಬೇಕಿರುತ್ತದೆ. ವರ್ಗಾವಣೆ ಕಾಲ ಬಂತೆಂದರೆ ರಾಜಕಾರಣಿಗಳು ಮತ್ತು ಅವರ ಪಟಾಲಂಗೆ ಸುಗ್ಗಿಯ ಕಾಲ. ಈ ಅವಧಿಯಲ್ಲಿ ಸಚಿವರು ಮತ್ತು ಮುಖ್ಯಮಂತ್ರಿಗಳ ಮನೆ ಕಚೇರಿಗಳಿಗೆ ನೂರಾರು ಮಂದಿ ಕಾರ್ಯಕರ್ತರು, ಸರಕಾರಿ ನೌಕರರು ಎಡತಾಕುತ್ತಿರುತ್ತಾರೆ. ಪ್ರಸ್ತುತ ಸಮ್ಮಿಶ್ರ ಸರಕಾರದ  ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರ ಕಣ್ಣು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಮೇಲಿದೆ. ಏಕೆಂದರೆ, ಸರಕಾರದಲ್ಲಿ ಅವರು ಹೇಳಿದ ಮಾತು ನಡೆಯುತ್ತದೆ ಎಂಬ ಪ್ರತೀತಿ ಇದೆ. ಬಹುತೇಕ ಹಿರಿಯ ಅಧಿಕಾರಿಗಳ ವರ್ಗಾವಣೆ ಇವರ ಅಣತಿ ಮೇಲೆಯೇ ನಡೆಯುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಆರೋಪಗಳನ್ನು ಮಾಡುತ್ತಿರುವವರ ಬಾಯಿ ಮುಚ್ಚಿಸಲು ಸ್ವತಃ ರೇವಣ್ಣ ಅವರೇ ತಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ನೌಕರರನ್ನು ವರ್ಗಾವಣೆ ಮಾಡುವಂತೆ ಯಾವ ಯಾವ ಶಾಸಕರು, ಮಂತ್ರಿಗಳು,  ಶಿಫಾರಸು ಮಾಡಿದ್ದಾರೆ ಎಂಬ ದೊಡ್ಡ ಪುಸ್ತಕವನ್ನೇ ಮಾಡಲು ಹೊರಟಿದ್ದಾರೆ. ಹೀಗೆ ಸುಮಾರು 500 ಕ್ಕೂ ಹೆಚ್ಚು ಶಿಫಾರಸು ಪತ್ರಗಳು ತಮಗೆ ಬಂದಿವೆ ಎಂದೂ ರೇವಣ್ಣ ಹೇಳಿಕೊಂಡಿದ್ದಾರೆ. ಅಂದರೆ, ಕೇವಲ ಒಂದು ಇಲಾಖೆಗೆ ಸಂಬಂಧಿಸಿದಂತೆ 500 ಕ್ಕೂ ಹೆಚ್ಚು ಶಿಫಾರಸು ಬಂದಿದ್ದರೆ, ಉಳಿದೆಲ್ಲಾ ಇಲಾಖೆಗಳಿಗೆ ಹೋಗಿರುವ ಶಿಫಾರಸುಗಳು ಎಷ್ಟೆಂಬುದನ್ನು ನೋಡಲು ಹೋದರೆ ಅದು ಅಗಣಿತವಾಗಬಹುದೇನೋ. ಹೀಗಾಗಿ ಈ ವರ್ಗಾವಣೆ ದಂಧೆ ನಿಜಕ್ಕೂ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಅಧಿಕಾರಕ್ಕೆ  ಹೊಸತರಲ್ಲಿ ಕಾರ್ಯಾಂಗದಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ಎಲ್ಲ ಪಕ್ಷಗಳು ಹೇಳಿಕೊಳ್ಳುತ್ತವೆ. ಆದರೆ, ವರ್ಗಾವಣೆ ವಿಚಾರದಲ್ಲಿ ಆಗುತ್ತಿರುವ ಹಸ್ತಕ್ಷೇಪವನ್ನು ಗಮನಿಸಿದರೆ ರಾಜಕೀಯದ ಪ್ರಭಾವ ಮತ್ತು ಒತ್ತಡ ಕಾರ್ಯಾಂಗದ ಮೇಲೆ ಎಷ್ಟರ ಮಟ್ಟಿಗೆ ಬೀರುತ್ತಿದೆ ಎಂಬುದನ್ನು ಆಲೋಚಿಸುವುದೂ ಕಷ್ಟವೆನಿಸುತ್ತದೆ. ರಾಜಕಾರಣಿಗಳು ಜನರ ಕೆಲಸಗಳತ್ತ ಗಮನಹರಿಸಿ ಅಧಿಕಾರಿಗಳು ತಮ್ಮ ಕೆಲಸ ಮಾಡಲು ಬಿಟ್ಟರೆ ರಾಜ್ಯ ಸುಭೀಕ್ಷವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ರಾಜಕಾರಣಿಗಳು ಸ್ವಯಂ ಕಡಿವಾಣ ಹಾಕಿಕೊಳ್ಳುವುದು ಸೂಕ್ತ.

Tags

Related Articles

Leave a Reply

Your email address will not be published. Required fields are marked *

Language
Close