ವಿಶ್ವವಾಣಿ

ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ಸುಬ್ರಮಣಿಯನ್ ಸ್ವಾಮಿ ಹೇಳಿಕೆ ದಾಖಲು

ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಹಗರಣದ ಕುರಿತು ದೆಹಲಿಯ ನ್ಯಾಯಾಲಯವೊಂದರಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಇಂದು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್‌ ಪತ್ರಿಕೆ ಹೆಸರಲ್ಲಿ ಭಾರೀ ಪ್ರಮಾಣದ ಆರ್ಥಿಕ ಅವ್ಯವಹಾರ ಎಸಗಲಾಗಿದೆ ಎಂದು ಆಪಾದಿಸಿರುವ ಸುಬ್ರಮಣಿಯನ್‌ ಸ್ವಾಮಿ ಇದೇ ವಿಚಾರವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗು ಸೀನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

ಸ್ವಾಮಿ ಹೇಳಿಕೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೊಪೊಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ದಾಖಲಿಸಿಕೊಂಡಿದ್ದು, ಮುಂದಿನ ಆಲಿಕೆಯನ್ನು ಆಗಸ್ಟ್‌ 25ಕ್ಕೆ ನಿಗದಿಪಡಿಸಿದ್ದು, ಮಿಕ್ಕ ಹೇಳಿಕೆಯನ್ನು ಆಗ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕೇವಲ 50 ಲಕ್ಷ ರು ಪಾವತಿ ಮಾಡಿ ಯಂಗ್‌ ಇಂಡಿಯನ್‌ ಪ್ರೈ.ಲಿ ಮೂಲಕ, ಕಾಂಗ್ರೆಸ್‌ಗೆ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ ಪಾವತಿ ಮಾಡಬೇಕಿದ್ದ 90.25 ಕೋಟಿ ರುಗಳನ್ನು ಗಾಂಧಿಗಳು ಹಾಗು ಇತರರು ಶಿಫಾನ್ ಮಾಡಿದ್ದಾರೆ ಎಂದು ಆಪಾದಿಸಿ ಬಿಜೆಪಿ ನಾಯಕ ಖಾಸಗಿ ದೂರು ದಾಖಲಿಸಿದ್ದಾರೆ.

ಗಾಂಧಿಗಳು ಮಾತ್ರವಲ್ಲದೇ, ಕಾಂಗ್ರೆಸ್‌ ಖಜಾಂಚಿ ಮೊತಿಲಾಲ್‌ ವೋಹ್ರಾ, ಪಕ್ಷದ ಕಾರ್ಯದರ್ಶಿ ಆಸ್ಕರ್‌ ಫರ್ನಾಂಡಿಸ್‌, ಸುಮನ್‌ ದುಬೆ, ಸ್ಯಾಮ್‌ ಪಿತ್ರೋಡಾ ಹಾಗು ಯಂಗ್‌ ಇಂಡಿಯನ್‌ ಸಂಸ್ಥೆ ಮೇಲೆ ಸ್ವಾಮಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಆಪಾದಿತರಿಗೆ ಜೂನ್‌ 26, 2014ರಲ್ಲಿ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿತ್ತು. ಇದೇ ವಿಚಾರವಾಗಿ ಮೇಲ್ಕಂಡ ಆಪಾದಿತರಿಗೆ, ಡಿಸೆಂಬರ್‌ 19, 2015ರಲ್ಲಿ ನ್ಯಾಯಾಲಯ ಜಾಮೀನು ನೀಡಿತ್ತು.

ಬಾರತೀಯ ದಂಡ ಸಂಹಿತೆಯಡಿ ಕ್ರಮಿನಲ್‌ ಸಂಚು, ಮೋಸ, ವಂಚನೆ ಹಾಗು ಅನುಪಾತ ಅಕ್ರಮ ಆಸ್ತಿಗಳಿಕೆ ವಿಚಾರವಾಗಿ ಮೇಲ್ಕಂಡವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.