About Us Advertise with us Be a Reporter E-Paper

ಯಾತ್ರಾ

ಸಕ್ಕರೆಯ ನಾಡಿನಲಿ ಆತ್ಮಲಿಂಗೇಶ್ವರನ ದರ್ಶನ

* ಸಂತೋಷ್ ರಾವ್ ಪೆರ್ಮುಡ

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲೊಂದು ವಿಶಿಷ್ಟವಾದ ಆತ್ಮಲಿಂಗೇಶ್ವರ ದೇವಸ್ಥಾನವಿದ್ದು ಇತ್ತೀಚಿಗೆ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ಬೆಟ್ಟದ ಮೇಲಿರುವ ಈ ಆತ್ಮಲಿಂಗೇಶ್ವರ ದೇವಸ್ಥಾನವು ಮದ್ದೂರಿನ ಕೆ.ಎಮ್.ದೊಡ್ಡಿಯ ಭಾರತಿನಗರದಲ್ಲಿದೆ. ಸುಮಾರು 35-40 ಎಕರೆ ವ್ಯಾಪ್ತಿಯಲ್ಲಿರುವ ಈ ದೇವಸ್ಥಾನದ ಸುತ್ತಮುತ್ತ ಹಸಿರಿನಿಂದ ಕಂಗೊಳಿಸುವ ಉದ್ಯಾನವನ, ವರ್ಷವಿಡೀ ನೀರಿನಿಂದ ತುಂಬಿರುವ ಕೊಳದೊಳಗೆ ಪೆಡಲ್ ಬೋಟಿಂಗ್ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು, ವಿವಿಧ ಪರಿಕರಗಳಿರುವ ಮೈದಾನ, ಜತೆಗೆ ಶುಭ ಸಮಾರಂಭಗಳಿಗೆ ಅನುಕೂಲವಾಗುವಂತಹ ಕಲ್ಯಾಣ ಮಂಟಪವಿದೆ.

ಈ ದೇವಸ್ಥಾನವನ್ನು ಎತ್ತರದ ಬೆಟ್ಟ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ದೇವಸ್ಥಾನವನ್ನು ತಲುಪಬೇಕಾದರೆ ಮೆಟ್ಟಿಲುಗಳನ್ನು ಏರುತ್ತಾ ಸಾಗಬೇಕು. ಮೆಟ್ಟಿಲುಗಳು ವಿನೂತನ ಮಾದರಿಯಲ್ಲಿದೆ. ದೇವಾಲಯದ ಆವರಣವನ್ನು ಪ್ರವೇಶಿಸುತ್ತಿದ್ದಂತೆ, ಪ್ರಾಚೀನ ಹೊಯ್ಸಳರ ಕಾಲದ ಶೈಲಿಯ ವಾಸ್ತುಶಿಲ್ಪ ಶೈಲಿಯನ್ನು ಹೋಲುವಂತೆ ನಿರ್ಮಿಸಲಾಗಿರುವ ದೊಡ್ಡದಾದ ಪ್ರವೇಶ ಗೋಪುರ ಹಾಗೂ ಇದರಲ್ಲಿ ಕೆತ್ತಲಾಗಿರುವ ಚಿತ್ತಾಕರ್ಷಕವಾದ ಕೆತ್ತನೆಯ ಕೆಲಸಗಳು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಬೆಟ್ಟದ ಮೆಟ್ಟಿಲೇರುತ್ತಾ ಸಾಗುತ್ತಿದ್ದಂತೆ ಬಲಭಾಗದಲ್ಲಿ ಬೃಹತ್ ನಂದಿಯ ವಿಗ್ರಹ ಹಾಗೂ ಎಡ ಭಾಗದಲ್ಲಿ ಬೆಟ್ಟ ಹೊತ್ತ ಆಂಜನೇಯನ ವಿಗ್ರಹದ ದರ್ಶನವಾಗುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವವರು ಬೆಳಗ್ಗೆ ಬಿಸಿಲೇರುವ ಪೂರ್ವದಲ್ಲಿ ಅಥವಾ ಸಂಜೆಯ ನಂತರ ತೆರಳುವುದು ಸೂಕ್ತ. ಏಕೆಂದರೆ ಬಿರುಬಿಸಿಲಿನ ಅವಧಿಯಲ್ಲಿ ಇಲ್ಲಿನ ನೆಲಕ್ಕೆ ಹಾಸಿದ ಕಲ್ಲಿನ ಚಪ್ಪಡಿಗಳು ಬಿಸಿಯಾಗಿ ಸರಾಗವಾಗಿ ನಡೆದಾಡಲು ಕಷ್ಟ ಪಡ ಬೇಕಾಗಬಹುದು. ದೇವಸ್ಥಾನದ ಪ್ರಾಂಗಣವನ್ನು ತಲುಪುತ್ತಿದ್ದಂತೆ ದೇವಾಲಯದ ಸುತ್ತಮುತ್ತ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡಮರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

*ನಿಸರ್ಗಧಾಮ ಉದ್ಯಾನವನ
ಈ ದೇವಾಲಯದ ಎದುರು ಭಾಗದಲ್ಲಿ ವಿಶಾಲವಾದ ಉದ್ಯಾನವನವಿದ್ದು, ವಿವಿಧ ರೀತಿಯ ಪ್ರಾಣಿಗಳು ಹಾಗೂ ಪಕ್ಷಿಗಳ ಸಿಮೆಂಟಿನಲ್ಲಿ ತಯಾರಿಸಿದ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ಉದ್ಯಾನವನವು ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದ್ದು, ವೈವಿಧ್ಯಮಯ ಕಾರಂಜಿಗಳನ್ನು ಅಳವಡಿಸಿರುವುದರ ಜತೆಗೆ, ವಿಶ್ರಾಂತಿಗಾಗಿ ಸಣ್ಣ ಸಣ್ಣ ಕುಟೀರಗಳನ್ನು ಮತ್ತು ಸಿಮೆಂಟಿನ ಬೆಂಚುಗಳನ್ನು ನಿರ್ಮಿಸಿದ್ದು ಮಕ್ಕಳಿಗೆ ಆಟದ ಮನೆಯನ್ನೂ ಸಹ ನಿರ್ಮಿಸಿದ್ದಾರೆ. ಈ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರಿಗೆ ರೂ.5/- ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಉದ್ಯಾನವನಕ್ಕೆ ಪ್ರವೇಶಿಸುವ ದ್ವಾರದಲ್ಲಿ ಚಿಂಪಾಂಜಿಯ ಮೂರ್ತಿಯೊಂದು ಪ್ರವಾಸಿಗರನ್ನು ವಿಭಿನ್ನವಾಗಿ ಸ್ವಾಗತಿಸುತ್ತದೆ. ಪ್ರವಾಸಿಗರಿಗೆ ಇಲ್ಲಿ ಪೆಡಲ್ ಬೋಟಿಂಗ್ ನಡೆಸಲು ಅನುಕೂಲವಾಗುವಂತೆ ದೊಡ್ಡದಾದ ಕೆರೆಯೊಂದು ನಿರ್ಮಿಸಿದ್ದು, ಬೋಟಿಂಗ್ ಮಾಡುತ್ತಾ ಪ್ರಕೃತಿಯ ಸವಿಯನ್ನು ಸವಿಯಬಹುದಾಗಿದೆ. ಈ ಉದ್ಯಾನವನದ ವಿವಿಧ ರೀತಿಯ ಹೋಟೆಲ್ ಹಾಗೂ ರೆಸ್ಟೋರೆಂಟುಗಳ ಲಭ್ಯತೆಯಿದ್ದು ಪ್ರವಾಸಿಗರು ತಮಗಿಷ್ಟವಾದ ಆಹಾರವನ್ನು ಕೊಂಡುಕೊಂಡು ತಿನ್ನಬಹುದಾಗಿದೆ. ವಾಹನಗಳನ್ನು ಪಾರ್ಕಿಂಗ್ ಮಾಡಲು ವಿಶಾಲವಾದ ಸ್ಥಳವಿದೆ.

ಈ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುವವರಿಗೆ, ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಅಥವಾ ಸಂಜೆ 4ರಿಂದ ರಾತ್ರಿ 8 ಗಂಟೆಯ ಅವಧಿ ಸೂಕ್ತ. ಯಾಕೆಂದರೆ ಉಳಿದ ವೇಳೆ ದೇವರ ಗರ್ಭಗುಡಿಯು ಮುಚ್ಚಿರುತ್ತದೆ. ಈ ದೇವಸ್ಥಾನದ ಒಳಗೆ ಭಕ್ತಾದಿಗಳು ನೇರವಾಗಿ ಪ್ರವೇಶವನ್ನು ಮಾಡುವಂತಿಲ್ಲ. ಸುತ್ತಲೂ ವಿಶಾಲವಾದ ಪೌಳಿಯನ್ನು ಎಡದಿಂದ ಬಲಕ್ಕೆ ಸುತ್ತು ಒಂದು ಪ್ರದಕ್ಷಿಣೆಯನ್ನು ಹಾಕಿದ ನಂತರವೇ ದೇವರ ಗರ್ಭಗುಡಿಯೆಡೆಗೆ ತಲುಪಬೇಕಿದ್ದು, ಇದು ಇಲ್ಲಿನ ನಿಯಮ. ಈ ದೇವಸ್ಥಾನದ ಬಲಭಾಗದಲ್ಲಿ ಒಂದು ಪುಟ್ಟದಾದ ಗುಡಿಯಿದ್ದು ಇಲ್ಲಿನ ಸಣ್ಣ ಗುಡಿಯೊಳಗಡೆ ನವಗ್ರಹಗಳನ್ನು ಸ್ಥಾಪಿಸಲಾಗಿದ್ದು, ಭೂಮಿ ಮತ್ತು ಮಾನವನ ಜೀವನವನ್ನು ಈ ಒಂಬತ್ತು ಗ್ರಹಗಳು ನಿಯಂತ್ರಿಸುತ್ತವೆ ಎನ್ನುವುದು ಪ್ರಾಚೀನ ಕಾಲದಿಂದ ಬಂದ ನಂಬಿಕೆ. ದೇವಾಲಯದ ಎಡಭಾಗದಲ್ಲಿ ಗಣಪತಿ ಮತ್ತು ಪಾರ್ವತಿಯ ಮೂರ್ತಿಗಳನ್ನು ಸ್ಥಾಪಿಸಲಾಗಿದ್ದು, ದೇವಾಲಯದ ಮುಂಭಾಗದಲ್ಲಿ ವಿಶಾಲವಾದ ಹುಲ್ಲು ಹಾಸಿನಿಂದ ಮುಚ್ಚಲಾಗಿದೆ. ಇಲ್ಲಿನ ಹುಲ್ಲುಹಾಸಿನ ಮಧ್ಯದಲ್ಲಿ ಅಲ್ಲಲ್ಲಿ ವಿವಿಧ ರೀತಿಯ ಹೂವಿನ ಗಿಡಗಳನ್ನು ನೆಟ್ಟು ಇಲ್ಲಿ ಬೆಳೆಯುವ ಹೂಗಳನ್ನೇ ಆತ್ಮಲಿಂಗೇಶ್ವರ ಪೂಜೆಗೆ ಸಮರ್ಪಿಸಲಾಗುತ್ತದೆ.

*ಏಕಕಾಲಕ್ಕೆ ಪ್ರಕೃತಿ-ಭಗವಂತನ ದರ್ಶನದ ಅನುಭವ
ಈ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ಭಕ್ತಾದಿಗಳು ಕುಳಿತುಕೊಂಡರೆ ಏಕಕಾಲದಲ್ಲಿ ಭಗವಂತನ ಹಾಗೂ ಸುಂದರ ಪ್ರಕೃತಿಯ ದರ್ಶನ ಪಡೆಯುವಂತಹ ವಿಭಿನ್ನವಾದ ಅನುಭವವನ್ನು ಈ ಆತ್ಮಲಿಂಗೇಶ್ವರ ದೇವಸ್ಥಾನ ಒದಗಿಸುತ್ತದೆ. ದೇವಾಲಯದ ಗೋಪುರದ ಸುತ್ತಲೂ ಪುರಾಣದ ವಿವಿಧ ಕಥೆಗಳನ್ನು ಶಿಲ್ಪ ಕಲೆಯಲ್ಲಿ ಆತ್ಮಲಿಂಗೇಶ್ವರ ದೇವಸ್ಥಾನದ ಮೂಲ ವಿಗ್ರಹ ಆತ್ಮಲಿಂಗವನ್ನು ಈಶ್ವರನೆಂದು ಭಕ್ತಾದಿಗಳು ಪೂಜಿಸುತ್ತಾರೆ. ಆತ್ಮಲಿಂಗೇಶ್ವರನ ಮುಂಭಾಗದಲ್ಲಿರುವ ನಂದಿಯ ವಿಗ್ರಹದ ಕಿವಿಯಲ್ಲಿ ಭಕ್ತಾದಿಗಳು ತಮ್ಮ ಆಸೆಗಳನ್ನು ಅಥವಾ ಇಷ್ಟಾರ್ಥಗಳನ್ನು ಹೇಳಿಕೊಂಡರೆ ಆ ಇಷ್ಟಾರ್ಥಗಳು ಬೇಗನೆ ಸಿದ್ಧಿಸುತ್ತದೆ ಎನ್ನುವುದು ಇಲ್ಲಿನ ಭಕ್ತಾದಿಗಳ ನಂಬಿಕೆ. ತಮ್ಮ ಇಷ್ಟಾರ್ಥ ಸಿದ್ಧಿಸಿದ ನಂತರದಲ್ಲಿ ತಮ್ಮ ಹರಕೆ ತೀರಿಸಲು ಮತ್ತೆ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಶಿವರಾತ್ರಿಯ ಸಂದರ್ಭದಲ್ಲಿ ಐದು ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಭಕ್ತಾದಿಗಳ ದಂಡೇ ಆಗಮಿಸುತ್ತದೆ.

*ಪ್ರಾಕೃತಿಕ ಆರೋಗ್ಯಧಾಮ
ಈ ದೇವಸ್ಥಾನವು ಶೈವರು ಮತ್ತು ವೈಷ್ಣವರ ಸಮನ್ವಯತೆಯ ಕ್ಷೇತ್ರವಾಗಿದ್ದು, ಈ ದೇವಸ್ಥಾನದ ನಿರ್ಮಾತೃ ಶ್ರೀಯುತ ಮಾದೇಗೌಡರು ಧಾರ್ಮಿಕ ಸಮನ್ವಯತೆಯ ಕಾರಣಕ್ಕಾಗಿ ನಿರ್ಮಿಸಿರುವುದು ಇಲ್ಲಿನ ವಿಶೇಷತೆಯಾಗಿದೆ. ಈ ದೇವಸ್ಥಾನ ಮತ್ತು ಉದ್ಯಾನವನದ ನಿರ್ವಹಣೆಯ ಹೊಣೆಯನ್ನು ಭಾರತಿ ಟ್ರಸ್‌ಟ್ ಹೊತ್ತುಕೊಂಡಿದೆ. ಶ್ರೀ ಆತ್ಮಲಿಂಗೇಶ್ವರ ನಿಸರ್ಗಧಾಮದಲ್ಲಿ ಪ್ರಕೃತಿ ಚಿಕಿತ್ಸೆಯನ್ನು ಪಡೆಯಲಿಚ್ಚಿಸುವವರಿಗೆ, ಪ್ರಾಕೃತಿಕ ಆರೋಗ್ಯಧಾಮವನ್ನು ಸ್ಥಾಪಿಸಿ ಚಿಕಿತ್ಸೆ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಹೋಟೆಲ್ ವ್ಯವಸ್ಥೆಯೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಈ ಪ್ರದೇಶದ ಅಭಿವೃದ್ಧಿಗಾಗಿ ಒಂದಷ್ಟು ಅನುದಾನವನ್ನೂ ನೀಡಿದೆ.

ಹೋಗುವುದು ಹೇಗೆ?
ಆತ್ಮಲಿಂಗೇಶ್ವರ ದೇವಸ್ಥಾನವು, ಬೆಂಗಳೂರಿನಿಂದ ಸುಮಾರು 85 ಕಿ.ಮೀ ಹಾಗೂ ಮಂಡ್ಯ ಮೈಸೂರು ರಸ್ತೆಯಿಂದ ಸುಮಾರು 15 ಕಿ.ಮೀ. ದೂರದ ಮದ್ದೂರಿನ ಕೆ.ಎಮ್.ದೊಡ್ಡಿಯಂದ, ಸುಮಾರು 3-4 ಕಿ.ಮೀ ದೂರದಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close