About Us Advertise with us Be a Reporter E-Paper

ಅಂಕಣಗಳು

ಬಹುಶ್ರುತರ ಸಾಲಿನಲ್ಲಿ ಶೋಭಿಸುವ ಸುಮತೀಂದ್ರ

ಶ್ರದ್ಧಾಂಜಲಿ: ವಿ.ಎನ್. ವೆಂಕಟಲಕ್ಷ್ಮಿ

ಕನ್ನಡ ಸಾಹಿತ್ಯದ ನವ್ಯಚಳವಳಿ ಉಚ್ಛ್ರಾಯದಲ್ಲಿದ್ದ  1960ರ ದಶಕದಲ್ಲಿ ಪ್ರಮುಖ ಉಪಸ್ಥಿತಿ ಅನುಭವಿಸಿದವರಲ್ಲಿ ನಾಡಿಗರೂ ಒಬ್ಬರು. ಚಳವಳಿಯ ಪ್ರವರ್ತಕ ಎಂ.  ಅಡಿಗರ ಸಹವರ್ತಿ, ಇಂಗ್ಲಿಷ್ ಪ್ರಾಧ್ಯಾಪಕ, ವಿದೇಶಗಳಲ್ಲಿ ಅಧ್ಯಯನ ಮಾಡಿ, ಅಧ್ಯಾಪನ ಮಾಡಿ ಬಂವರು, ಪುಸ್ತಕ ಪ್ರಕಾಶನ ಕುರಿತು ಸಹ ಅಷ್ಟಿಷ್ಟು ಹೊಸ ಚಿಂತನೆ ಹೊಂದಿದ್ದವರು, ಎಲ್ಲಕ್ಕಿಂತ ಮುಖ್ಯವಾಗಿ ಕತೆ, ಕವಿತೆ, ಕಾದಂಬರಿ, ಅನುವಾದ, ವಿಮರ್ಶೆ ಆದಿಯಾಗಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ಮಾಡಬಲ್ಲವರಾಗಿದ್ದವರು ಹಾಗೆ ಮಹತ್ವದ ಸ್ಥಾನದಲ್ಲಿ ಇದ್ದುದು ಸಹಜವೇ ಆಗಿತ್ತು. ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯೇ ಅಲ್ಲದೆ ಮರಾಠಿ, ಕೊಂಕಣಿ, ಬಂಗಾಳಿ ಭಾಷೆ ಗೊತ್ತಿತ್ತು…ಈ ಎಲ್ಲ ಗುಣಗಳಿಂದ  ಬಹುಶ್ರುತ ವ್ಯಕ್ತಿತ್ವವಾಗಿ ಆ ವಲಯದಲ್ಲಿ ಬಿಂಬಿತವಾಗಿತ್ತು. ಇದಕ್ಕೆ ಹೊಯ್‌ಕೈಯಾಗಿದ್ದವು, ಅವರ ಗಮನ ಬೇಡುವ ವ್ಯಕ್ತಿತ್ವ, ದೊಡ್ಡ ನಗು, ಕಡಲಾಚೆ ಹೋಗಿಬಂದವರ ವೇಷಭೂಷಣ, ನಡೆವಳಿಕೆಯ ಠಾಕು-ಠೀಕು. ಒಂದಷ್ಟು ಕಿಲಾಡಿತನ, ಕೃತಿಚೌರ್ಯ ಪತ್ತೇದಾರಿಕೆ ಮತ್ತು ಜಗಳಗಂಟತನ ಎಂದರೂ ತಪ್ಪಿಲ್ಲ.

ಚಿಕ್ಕಮಗಳೂರಿನ ಕಳಸದಲ್ಲಿ ರಾಘವೇಂದ್ರ ಮತ್ತು ಸುಬ್ಬಮ್ಮ ದಂಪತಿಗೆ ಜನಿಸಿದ (ಜನ್ಮ ದಿನಾಂಕ 4 ಮೇ, 1935) ಸುಮತೀಂದ್ರ ನಾಡಿಗರು ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆದರೆ ಆಗ  ಮೇಷ್ಟ್ರುಗಳಿಂದಲೇ ತುಂಬಿಹೋಗಿದ್ದ ರಾಜಧಾನಿಯ ಕನ್ನಡ ಸಾಹಿತ್ಯ ವಲಯದಲ್ಲಿ ಬೇಗ ಒಂದು ಜಾಗ ಮಾಡಿಕೊಂಡರು. ವರಕವಿ ದ.ರಾ. ಬೇಂದ್ರೆಯವರ ಮೋಡಿಗೆ ಒಳಗಾಗಿದ್ದ ತರುಣ ನಾಡಿಗ್, ಮುಂದೆ ವರಕವಿಯ ಸಮಗ್ರ ಕಾವ್ಯ ವಿಮರ್ಶೆ ಬರೆದು ಆ ಸಾಹಸ ಮಾಡಿದ  ಮೊದಲಿಗರೆನಿಸಿಕೊಂಡರು. ಅಗಾಧ ಪ್ರತಿಭೆಯ ಗಾರುಡಿಗನನ್ನು ಕನ್ನಡದ ಸಾಮಾನ್ಯ ಓದುಗರು ಅರ್ಥೈಸಿಕೊಳ್ಳುವಂತೆ ಮಾಡಿದ್ದರಲ್ಲಿ ನಾಡಿಗರ ಕಾಣಿಕೆಯೂ ಮಹತ್ವದ್ದಾಗಿದೆ. ಅದು ಮುಂದೆ ಕನ್ನಡದ ಪ್ರಮುಖ ವಿಮರ್ಶಕರಾಗಿ ಬೆಳೆಯಲಿದ್ದ ಅವರ ವಿಮರ್ಶನ ಪ್ರತಿಭೆಗೆ ಸಾಣೆ ಹಿಡಿಯಿತು

‘ಕಮೂ, ಕಾಫ್ಕಾ, ಸಾರ್ತ್, ಅಸ್ತಿತ್ವವಾದ, ಅನಾಥ ಪ್ರಜ್ಞೆ…’ಎಂದು ಪಶ್ಚಿಮದ ನವ್ಯ ಚಳವಳಿಯ ಕಾವನ್ನು ಕನ್ನಡದ ಬರಹಗಾರರು ಪ್ರತಿಫಲಿಸುತ್ತಿದ್ದ ವೇಳೆ ನಾಡಿಗರಿಂದ ನವ್ಯಪ್ರಜ್ಞೆಯ ಸಣ್ಣ ಕತೆ, ಬಿಡಿ ಕವಿತೆ, ತೀಕ್ಷ್ಣ ವಿಮರ್ಶೆ ಸೃಷ್ಟಿಯಾದವು. 50-60ರ ದಶಕದಲ್ಲಿ ಕಾವ್ಯ ರಚನೆಗೆ ತೊಡಗಿದವರೆಲ್ಲಾ ನವ್ಯಮಾರ್ಗವನ್ನೇ ಆರಿಸಿಕೊಳ್ಳುವಷ್ಟು ‘ಚಾರ್ಜ್‌ಡ್’ ಆಗಿತ್ತು ಸನ್ನಿವೇಶ. ಅವರ ಸಹಕವಿಗಳಾಗಿ ಲಂಕೇಶ್, ಎಚ್.ಎಂ. ಚನ್ನಯ್ಯ, ನಿಸಾರ್ ಅಹಮದ್, ಚಂಪಾ, ಕಂಬಾರ, ತಿರುಮಲೇಶ್ ಮುಂತಾದ ಅತಿರಥರೇ ಇದ್ದು ಬೆಳಸು ಸಮೃದ್ಧವಾಗಿ ಬಂತು.  ಒಂದು ಅಥವಾ ಎರಡು ಉತ್ತಮ ಸಂಕಲನಗಳನ್ನು ತಂದಕೂಡಲೇ ನವ್ಯಕವಿಗಳಲ್ಲಿ ಹೆಚ್ಚಿನವರು ಬರೆಯುವುದನ್ನೇ ಬಿಟ್ಟರು ಆಥವಾ ಭಿನ್ನ ಮಾರ್ಗ/ಮಾಧ್ಯಮವನ್ನು ಆರಿಸಿಕೊಂಡರು. 70-80ರ ದಶಕಗಳಲ್ಲಿ ಬಂಡಾಯ-ದಲಿತ ಕಾವ್ಯ ಪಂಥಗಳು ಮುಂಚೂಣಿಗೆ ಬಂದವು.

 ಬರಬರುತ್ತಾ ಮಹತ್ವಾಕಾಂಕ್ಷೆಯ ‘ಮೇಜರ್ ಕಾವ್ಯ’ದ ಕಡೆ ಸುಮತೀಂದ್ರರು ಹೊರಳಿದ್ದರ ಹಿಂದೆ ಮೇಲಿನ ಕಾರಣವೂ ಇದೆ. 1987ರಲ್ಲಿ ಅವರು ಬರೆದ ಆತ್ಮವೃತ್ತಾಂತಾತ್ಮಕ ‘ದಾಂಪತ್ಯ ಗೀತ’ಕ್ಕೆ ಬೇಂದ್ರೆಯವರ ಚಿರಂತನ ಕೃತಿ ‘ಸಖೀಗೀತ’ವೇ ಮೂಲ ಮಾದರಿ. ವ್ಯಾಪಕ ಓದು, ವಿಮರ್ಶೆ, ಅನುವಾದಗಳನ್ನು ಅದು  ಈ ಮಧ್ಯೆ ಸದಾ ಒಂದಿಲ್ಲೊಂದು ಬರೆಯತ್ತಾ, ವಿಭಿನ್ನ ಪ್ರಕಾರಗಳನ್ನು ಆರಿಸಿಕೊಳ್ಳುತ್ತಾ ನಾಡಿಗ್ ಪ್ರಯೋಗಶೀಲತೆಗೆ ಇನ್ನೊಂದು ಹೆಸರು ಎಂಬಂತಾದರು. ಮಕ್ಕಳ ಸಾಹಿತ್ಯ, ಅನುವಾದ, ಕನ್ನಡದ ಮುಖ್ಯ ಕೃತಿಗಳ ಇಂಗ್ಲಿಷ್ ತರ್ಜುಮೆ ಅವರಿಂದ ಆಗಿದೆ. ಇತ್ತೀಚೆಗೆ ಪ್ರಮುಖ ವಾರಪತ್ರಿಕೆಯೊಂದು ಮೊದಲ ಬಾರಿಗೆ ಕಾದಂಬರಿ ಸ್ಪರ್ಧೆ ಏರ್ಪಡಿಸಿದಾಗ ಅದಕ್ಕೂ ಮುನ್ನುಗ್ಗಿ ಬಹುಮಾನ ಗೆದ್ದ ಛಾತಿ ಅವರದು. ಶಾಂತಿನಿಕೇತನದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದು, ಕೊಂಕಣಿ, ಮರಾಠಿ ಸಾಹಿತಿಗಳ ನೇರ ಸಂಪರ್ಕದಲ್ಲಿದ್ದುದು ಅವರ ಬಹುಶ್ರುತತೆಯನ್ನು ಮುಪ್ಪುರಿಗೊಳಿಸಿದವು. ಮರಾಠಿ  ವಿಂದಾ ಕರಂದೀಕರ ಅವರಿಗೆ ಜ್ಞಾನಪೀಠದ ಗೌರವ ದೊರಕಿದಾಗ ಕನ್ನಡಿಗರಿಗೆ ಅವರ ಕಾವ್ಯದ ನೇರ ಸ್ವಾದ ತಲುಪಿಸಿದ್ದು, ಸದಾ ಕ್ರಿಯಾಶೀಲರಾಗಿರುತ್ತಿದ್ದ ಸುಮತೀಂದ್ರರ ಮೂಲಕವೇ. ಅನೇಕ ಸಂಗ್ರಹ ಯೋಗ್ಯ ಸಂದರ್ಶನಗಳನ್ನು ಅವರು ನಾಡಿನ ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಿಸಿ ಕರಂದೀಕರರೊಂದಿಗೆ ‘ಒನ್ ಟು ಒನ್’ ಸಂಪರ್ಕ ಏರ್ಪಡಿಸಿದ್ದು ಕನ್ನಡಿಗರನ್ನು ಮುದಗೊಳಿಸಿತ್ತು.

ನ್ಯಾಷನಲ್ ಬುಕ್ ಟ್ರಸ್‌ಟ್ಗೆ ಅಧ್ಯಕ್ಷರಾಗಿದ್ದು, ಬಾಪ್ಕೊ ಪ್ರಕಾಶನ ಸಂಸ್ಥೆಗೆ ಸಂಪಾದಕರಾಗಿದ್ದು, ಸ್ವತಃ ಬೆಂಗಳೂರಿನ ‘ಗಾಂಧಿಬಜಾರ್’ನಲ್ಲಿ ಒಂದು ಪುಸ್ತಕದಂಗಡಿ ಇಟ್ಟುಕೊಂಡಿದ್ದು, ಅದು ಘಟಾನುಘಟಿ  ಗದ್ದಲದ ಚರ್ಚೆಯ ಕೇಂದ್ರವಾಗಿದ್ದು…ನಾಡಿಗರನ್ನು ಕುರಿತ ಈ ಎಲ್ಲ ಘಟನೆಗಳು ಹಿನ್ನೋಟದಲ್ಲಿ ಎಂದಿಗಿಂತ ಆಕರ್ಷಕವಾಗಿ ಕಾಣುತ್ತವೆ. ಮುಂದೆ ಅವರು ಪತ್ರಿಕೆಗಳಿಗೆ ಲೇಖನ, ಅಂಕಣ ಬರೆಯುತ್ತಾ, ಕಿರಿಯರೊಡನೆ ಒಡನಾಡುತ್ತಾ, ಚರ್ಚಾ ವೇದಿಕೆಗಳಿಗೆ ಕಿಡಿ ಉತ್ತರ ಕಳುಹಿಸುತ್ತಾ, ಸಮಕಾಲೀನರೊಂದಿಗೆ ನಾನಾ ವಿಷಯಗಳನ್ನು ಕುರಿತು ವಾಗ್ವಾದ ಬೆಳೆಸುತ್ತಾ ಉಳಿದದ್ದು ನಾಡಿಗರ ದಣಿವರಿಯದ ಉತ್ಸಾಹ, ಉಮೇದು, ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಚಾಣಾಕ್ಷತನ ಮತ್ತು ಮನಸ್ಸಿನ ಆಧುನಿಕತೆಗೆ ಸಾಕ್ಷಿ.

ಇದೆಲ್ಲ ಬೋರಾಯಿತು ಎನ್ನುವ ವೇಳೆಗೆ ಸುಮತೀಂದ್ರರು,  ‘ಹುತ್ತಗಟ್ಟದೆ ಚಿತ್ತ ಕೆತ್ತಿತೇನು ಮತ್ತೆ’ ಎಂಬಂತಹ ಧ್ಯಾನಸ್ಥ ಸ್ಥಿತಿಗೆ ಮರಳಿದ್ದು 10-15 ವರ್ಷಗಳ ಹಿಂದೆ ಕವನಗುಚ್ಛ ಅಥವಾ ಖಂಡಕಾವ್ಯ ಎಂದು ಕರೆಯಬಹುದಾದ ‘ಪಂಚ ಭೂತಗಳು’ ರಚನೆಗೆ ತೊಡಗಿದಾಗ. ವೈಚಾರಿಕ ಕಾವ್ಯ ಎಂದು ವರ್ಗೀಕರಿಸಬಹುದಾದ ಈ ಮಹತ್ವಾಕಾಂಕ್ಷೆಯ ಕೃತಿಯ ಹಿಂದೆ ‘ವೈದಿಕ ದರ್ಶನ’ ಅಥವಾ ‘ವೈದಿಕ ಚಿಂತನೆ’ ಇದೆ ಎಂದು ವಿಮರ್ಶಕರು ಗುರುತಿಸುತ್ತಾರೆ. (ನಾಡಿಗರ ಬಹುಶ್ರುತತೆಗೆ ಇನ್ನೊಂದು ಗರಿ!) ತಾರುಣ್ಯದಲ್ಲಿ ಪಾಶ್ಚಾತ್ಯ ದಾರ್ಶನಿಕರಿಗೆ ಮಾರುಹೋಗಿದ್ದ ಕವಿ ಒಂದು ವೃತ್ತ ಪೂರೈಸಲೋ  ಮರಳಿ ಭಾರತೀಯ ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ ನಡೆಸಿದರು. ಋಗ್ವೇದ, ಬೃಹದಾರಣ್ಯಕ ಉಪನಿಷತ್ತುಗಳಲ್ಲಿ ಬರುವ ಸೃಷ್ಟಿ ಪುರಾಣಗಳ ಆಧುನಿಕ ರೂಪಾಂತರಗಳನ್ನು ನಾಡಿಗರು ‘ಪಂಚಭೂತ’ದಲ್ಲಿ ನೀಡಿದ್ದಾರೆ. ಮುಪ್ಪು, ಸಾವು, ದೇಹ ಮತ್ತು ಆತ್ಮಗಳ ಸಂಬಂಧ ಇವುಗಳ ಕುರಿತು ಗಂಭೀರ ಚಿಂತನೆಯೂ ಇಲ್ಲಿದೆ.

ಪಾಶ್ಚಾತ್ಯ ಮತ್ತು ಪೌವಾರ್ತ್ಯ ಆದರ್ಶಗಳನ್ನು ಸಂಶ್ಲೇಷಿಸುವ ಪ್ರಯತ್ನವಾಗಿಯೂ ಕಾಣುವ ಈ ಕೃತಿಯ ತಾತ್ವಿಕತೆಯೆಂದರೆ, ತುಂಬುಜೀವನ ನಡೆಸುವುದರಲ್ಲಿಯೇ ಬದುಕಿನ ಸಾರ್ಥಕತೆಯಿದೆ ಎಂಬುದು. ಅಂದರೆ, ಆತ್ಮೋನ್ನತಿಗಾಗಿ ದೇಹವನ್ನು ದಂಡಿಸದೆ, ದೈಹಿಕ  ಪೂರೈಸಿಕೊಳ್ಳುವುದರಲ್ಲಿಯೇ ತಲ್ಲೀನರಾಗಿ ಆತ್ಮವನ್ನು ಅಲಕ್ಷಿಸದೆ ಇವರೆಡರದ ಸಮನ್ವಯ ಸಾಧಿಸಬೇಕು ಎಂಬ ದರ್ಶನ. ಆದರೆ ಅದು ಬರಿಯ ಒಣ ಸಿದ್ಧಾಂತವಾಗದೆ ಮೌಲಿಕ ರೂಪಕ-ಸಂಕೇತಗಳಲ್ಲಿ, ವೈವಿಧ್ಯಪೂರ್ಣ ಲಯವಿನ್ಯಾಸಗಳಲ್ಲಿ ಕಾವ್ಯವಾಗಿಯೂ ಅರಳಿರುವ ಕಾರಣ ಯಾವುದೇ ವೈಚಾರಿಕತೆಯ ಹಂಗಿಲ್ಲದೆಯೂ ಅದನ್ನು ಆಸ್ವಾದಿಸಬಹುದಾಗಿದೆ. ಪಂಚಭೂತಗಳು ಕೃತಿಯ ‘ಅರಣ್ಯಕ’ ಎಂಬ ಆರನೆಯ ಭಾಗದಲ್ಲಿ ವೃದ್ಧಾಪ್ಯ, ಸಾವು ಕುರಿತು ಕವಿ ಚಿಂತಿಸಿರುವುದು ಪೂರ್ವಭಾವಿಯಾಗಿತ್ತೇ ಎಂದು ಅವರು ಅಗಲಿದ ಈ ವೇಳೆ ಅನ್ನಿಸಿ ವಿಷಾದ ಮೂಡಿದರೂ ಎಂಬತ್ಮೂರು ವರ್ಷಗಳ ತುಂಬು  ನಡೆಸಿದ ಕನ್ನಡದ ಒಂದು ಚೈತನ್ಯಶಾಲಿ ಕವಿಜೀವ, ಅಗಲಿಕೆ ಅನಿವಾರ್ಯ ಎಂಬ ಜೀವನ ತತ್ವಕ್ಕೆ ಓದುಗರನ್ನು ಸಿದ್ಧಪಡಿಸಿದ್ದರೇನೋ ಎಂದು ಸಹ ಅನ್ನಿಸದಿರದು. ಅವರದೇ ಸಾಲುಗಳಲ್ಲಿ ಹೇಳುವುದಾದರೆ ಸುಮತೀಂದ್ರ ನಾಡಿಗರು ‘ಸೂರ್ಯ ತೂಗುತ್ತಿರುವ/ ಮಣ್ಣ ತೊಟ್ಟಿಲಲ್ಲಿ /ತಾರೆ ಜೋಗುಳ ಕೇಳಿ/ನಿದ್ದೆ ಹೋಗಲು’ ತೆರಳಿದ್ದಾರೆ.

ಅವರ ಈ ಸ್ಥಿತಪ್ರಜ್ಞತೆ ದುಃಖ ಭರಿಸಲು ನಮ್ಮ ನೆರವಿಗೆ ಬರಲಿ.

Tags

Related Articles

Leave a Reply

Your email address will not be published. Required fields are marked *

Language
Close