About Us Advertise with us Be a Reporter E-Paper

ಅಂಕಣಗಳು

ಸ್ವಾಮಿ ವಿವೇಕಾನಂದ ಮತ್ತು ವಿಶ್ವ ಸರ್ವಧರ್ಮ ಸಮ್ಮೇಳನ

- ಟಿ.ದೇವಿದಾಸ್

ಯಾವ ವಿಶ್ವಸರ್ವಧರ್ಮ ಸಮ್ಮೇಳನ ಭಾರತದ ಯುವಶಕ್ತಿಯ ಸಿಡಿಲ ಸಂನ್ಯಾಸಿ ಸ್ವಾಮಿ ವಿವೇಕಾನಂದರನ್ನು ವಿಶ್ವಮಾನ್ಯರನ್ನಾಗಿಸಿ ಭಾರತ ಅಂದಾಕ್ಷಣ ಅಧ್ಯಾತ್ಮದ ತವರು ಎಂದು ಗುರುತಿಸುವಂತೆ ಮಾಡಿತೋ , ಹಿಂದೂಧರ್ಮದ ಸಾರ್ವಕಾಲಿಕ ಮೌಲ್ಯಗಳನ್ನು ಜಗಜ್ಜಾಹೀರಾಗುವಂತೆ ಮಾಡಿ ಜಗತ್ತನ್ನೇ ದಿಗ್ಭ್ರಮೆಗೊಳಿಸಿತೋ ಅಂತಹ ವಿಶ್ವ ಸರ್ವಧರ್ಮ ಸಮ್ಮೇಳನ ಸಮಾವೇಶಗೊಂಡಿದ್ದರ ಹಿಂದೆ ಒಂದು ಹಿಡನ್ ಅಜೆಂಡಾ ಇತ್ತೆಂಬುದು ಹೊಸ ಸುದ್ದಿಯೇನಲ್ಲ.

ವಲ್ಡರ್ ಕೊಲಂಬಿಯನ್ ಎಕ್‌ಸ್ಪೊಸಿಷನ್ ನಡೆಸಬೇಕೆಂದು 1889 ರಲ್ಲಿ ಚಿಕಾಗೋದ ಕೆಲ ಪ್ರಮುಖ ನಾಗರಿಕರು ತೀರ್ಮಾನಿಸಿದರು. ಆರಂಭದ ಉದ್ದೇಶ ಇಷ್ಟೆ : ಲೌಕಿಕ ಜಗತ್ತಿನಲ್ಲಿ ಮಾನವ ಸಾಧಿಸಿರುವ ಅದ್ಭುತ ಪ್ರಗತಿಯನ್ನು ಒಂದೇ ಕಡೆ ಪ್ರದರ್ಶಿಸುವುದು. ಆದರೆ , ವ್ಯವಸ್ಥಾಪಕರ ಚಿಂತನೆ ಆಮೇಲೆ ಬದಲಾಗಿ , ಲೌಕಿಕ ಪ್ರಗತಿಯ ಜೊತೆಗೆ ಚಿಂತನೆಯ ನೆಲೆಯಲ್ಲೂ ಮಾನವ ನಡೆಸಿದ ಪ್ರಯೋಗಗಳನ್ನು ಅರಿಯುವ ಅಗತ್ಯವನ್ನು ಕಂಡುಕೊಂಡರು. ಧರ್ಮ ಮತ್ತು ಅಧ್ಯಾತ್ಮದ ಸೆಳೆತ ಅದಾಗಲೇ ಜಗತ್ತನ್ನಾವರಿಸಿತ್ತು. ಪ್ರತಿನಿಧಿಗಳನ್ನು ಸಮ್ಮೇಳನದಲ್ಲಿ ಭಾಗಿಯಾಗುವಂತೆ ಮಾಡಿ , ಆಯಾ ಧರ್ಮಗಳ ಸಾರಶ್ರೇಷ್ಠತೆ ಮತ್ತು ಘನತೆಯನ್ನು ಪ್ರಚುರಪಡಿಸುವುದು ಯುಕ್ತವೆನಿಸಿ ಅಸ್ತಿತ್ವಕ್ಕೆ ಬಂದದ್ದೇ ವಿಶ್ವ ಸರ್ವಧರ್ಮ ಸಮ್ಮೇಳನ. ಇದು 1893 ಸಪ್ಟೆಂರ್ಬ 11ರ ಸೋಮವಾರ ಬೆಳಗ್ಗೆ 10 ಗಂಟೆಗೆ 8000 ಸಾವಿರ ಮಂದಿ ಕುಳಿತುಕೊಳ್ಳುವ ಆರ್ಟ್ ಪ್ಯಾಲೇಸ್ ಎಂಬ ವಿಶಾಲವಾದ ಪ್ರಾಂಗಣದಲ್ಲಿ ನಡೆಯಿತು. ಜಗತ್ತಿನ ಎಲ್ಲ ಧರ್ಮಗಳೂ ಪರಸ್ಪರ ಪೂರಕ ಹಾಗೂ ಶ್ರೇಷ್ಠ , ಎಲ್ಲ ಧರ್ಮಗಳ ಗುರಿಯೊಂದೇ ಎಂಬುದನ್ನು ಸ್ಥಾಪಿಸುವ ಇರಾದೆ ಕ್ರೈಸ್ತಧರ್ಮದ ಮೇಲ್ಮೆಯನ್ನು ಜಗತ್ತಿಗೆ ಸಾರುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶ ವಾಗಿತ್ತು ಎಂದು ವಿವೇಕಾನಂದರು ಹೇಳಿದ ಮಾತಿನಲ್ಲಿ ಸ್ಪಷ್ಟವಾಗುತ್ತದೆ.

ತನ್ನನ್ನು ಜಗತ್ತಿಗೆ ಪರಿಚಯಿಸಿದ ಸಮ್ಮೇಳನದ ಬಗ್ಗೆ ವಿವೇಕಾನಂದರ ಈ ಮಾತಿನಲ್ಲಿ ಅನಾದರ ಖಂಡಿತಾ ಇಲ್ಲ. ಅವರು ಆಡಿದ್ದು: ಇಂಥದೊಂದು ಬೃಹತ್ ಪ್ರಮಾಣದ ಯೋಜನೆಯನ್ನು ರೂಪಿಸಿ ಅದನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯಗತಗೊಳಿಸಿದ ಆ ಮಹಾಮತಿ ಧರ್ಮಪ್ರಚಾರಕರಲ್ಲ , ವಕೀಲರು. ಅನೇಕ ಚರ್ಚುಗಳ ಗಣ್ಯರ ಸಭೆಗೆ ಅಧ್ಯಕ್ಷರು , ಮಧುರ ನುಡಿಯ ಶಾಂತಸ್ವಭಾವದ ಪ್ರಕಾಶಮಾನವಾದ ಅವರ ಕಣ್ಣುಗಳ ಮೂಲಕ ಅವರ ಆತ್ಮ ಸಮಸ್ತವೂ ನುಡಿಯುತ್ತದೆ.

ಕ್ರೈಸ್ತ ಜಗತ್ತಿಗೆ , ಮುಖ್ಯವಾಗಿ ಅಮೆರಿಕನ್ನರಿಗೆ ಇದು ಕಲಿಸಿದ ಮಹತ್ತ್ವದ ಪಾಠವೆಂದರೆ ಕ್ರೈಸ್ತಧರ್ಮಕ್ಕಿಂತ ಹೆಚ್ಚು ಪೂಜ್ಯವಾದ ಧರ್ಮಗಳು ಜಗತ್ತಿನಲ್ಲಿವೆಂಬುದು. ತಾತ್ತ್ವಿಕ ಚಿಂತನೆಯಲ್ಲಿ, ಆಧ್ಯಾತ್ಮಿಕ ಅನುಭವದ ಸಾಂದ್ರತೆಯಲ್ಲಿ, ಸ್ವತಂತ್ರವಾದ ಆಲೋಚನ ಶಕ್ತಿಯಲ್ಲಿ, ಮಾನವ ಅನುಕಂಪೆಯ ವಿಷಯದಲ್ಲಿ , ವೈಶಾಲ್ಯ ಮತ್ತು ಪ್ರಾಮಾಣಿಕತೆಗಳಲ್ಲಿ, ನೈತಿಕ ಸೌಂದರ್ಯ ಮತ್ತು ದಕ್ಷತೆಗಳಲ್ಲಿ ಕೂದಲೆಳೆಯಷ್ಟೂ ಯಾರಿಗೂ ಬಿಟ್ಟುಕೊಡದ ಆ ಧರ್ಮಗಳು ಕ್ರೈಸ್ತಧರ್ಮವನ್ನು ಹಿಂದೆಬಿಟ್ಟು ಎಷ್ಟೋ ಎಂದು.

ಥಿಯೋಸೋಫಿಕಲ್ ದಿಂದ ಆ್ಯನಿಬೆಸೆಂಟ್ , ಬ್ರಹ್ಮಸಮಾಜದಿಂದ ಪ್ರತಾಪಚಂದ್ರ ಮಜುಂದಾರ್ , ಜೈನಧರ್ಮದಿಂದ ವೀರಚಂದ್ರ ಗಾಂಧಿ ಪ್ರತಿನಿಧಿಯಾಗಿ ಈ ಸಮ್ಮೇಳನದಲ್ಲಿದ್ದರು. ಇವರೆಲ್ಲರ ಭಾಷಣ ಮುಗಿದ ಮೇಲೆ ವಿವೇಕಾನಂದರು ಭಾಷಣ ನೀಡಿದ್ದರು. ಡಾ. ಬರೋಸ್ ಎಂಬವರು ವಿವೇಕಾನಂದರನ್ನು ಸಭೆಗೆ ಪರಿಚಯಿಸಿದರು. ಆಮೇಲೆ ಏನಾಯಿತು ಎಂಬುದು ಇತಿಹಾಸ. ‘ಭಾಷಣದ ಆರಂಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕುರಿತು ಹೇಳಹೊರಟರು. ಆದರೆ ಅವರು ತಮ್ಮ ಉಪನ್ಯಾಸ ಮುಗಿಸಿದಾಗ ಹಿಂದೂಧರ್ಮ ಪುನರ್ ಸೃಷ್ಟಿಗೊಂಡಿತ್ತು’ಎಂದು ಸೋದರಿ ನಿವೇದಿತಾ ಉಪನ್ಯಾಸದ ಬಗ್ಗೆ ಹೇಳುತ್ತಾರೆ.

ಸಂಕುಚಿತ ಪಂಥಭಾವನೆ , ಸ್ವಮತಾಭಿಮಾನ , ಅದರ ಭೀಕರ ಸಂತಾನವಾದ ಮತಾಂಧತೆಯೇ ಇತ್ಯಾದಿ ಜಗತ್ತನ್ನು ಕಾಡುವ ಸಮಸ್ಯೆಗಳಿಗೆ ಈ ಸಮ್ಮೇಳನದ ಮೂಲಕ ಪರಿಹಾರವನ್ನು ಕಾಣುವ ಆಶಯವನ್ನು ವ್ಯಕ್ತಪಡಿಸುತ್ತಾ 15 ನಿಮಿಷಗಳ ಉಪನ್ಯಾಸದಲ್ಲಿ ವಿವೇಕಾನಂದರು ಹೇಳಿದ್ದು , ಭಾಗವಹಿಸಿದ ಪ್ರತಿನಿಧಿಗಳಿಗೆ , ಆಯೋಜಕರಿಗೆ ಅಚ್ಚರಿ ಮತ್ತು ಆನಂದವನ್ನುಂಟು ಮಾಡಿದ್ದು ಸಹಜವೇ. ಅವರ ವ್ಯಕ್ತಿತ್ವದಲ್ಲಿ ಸ್ವಜನ ಸ್ವದೇಶಾಭಿಮಾನಗಳು ತುಂಬಿ ತುಳುಕಾಡುತ್ತಿದ್ದವು. ಮತಗಳಲ್ಲಿ ಪ್ರಾಚೀನತಮವಾದ ಮತದ ಪ್ರತಿನಿಧಿ ವಯಸ್ಸಿನಲ್ಲಿ ಪ್ರತಿನಿಧಿಗಳಿಗಿಂತಲೂ ಚಿಕ್ಕವರಾಗಿದ್ದರೂ ಪ್ರತಿಭೆಯಲ್ಲಿ ಯಾರಿಗೇನೂ ಕಡಿಮೆಯಾಗಿರಲಿಲ್ಲ.

ವಿಶ್ವಸರ್ವಧರ್ಮ ಸಮ್ಮೇಳನದಿಂದ ವಿವೇಕಾನಂದರ ಕೀರ್ತಿ ವೃದ್ಧಿಸಿತು. ಇದು ಭಾರತೀಯರನ್ನು ಸೇರಿ ಹಲವು ಪಾಶ್ಚಾತ್ಯರನ್ನು ಅಸೂಯೆಗೀಡಾಗಿಸಿತು. ಅವರ ಚಾರಿತ್ರ್ಯಹರಣಕ್ಕಾಗಿ ಪ್ರಯತ್ನ ನಡೆಯಿತು. ಅವರನ್ನು ಅಸ್ಪಶ್ಯರಂತೆ ಕಂಡರು, ಅಕಾರ್ಯಗಳಿಗೆ ಪ್ರಚೋದಿಸಿದರು. ಮೊದಮೊದಲು ವಿವೇಕಾನಂದರನ್ನು ಅಪವಾದಗಳಿಗೆ ಗುರಿಯಾಗಿಸುವಲ್ಲಿ ಪ್ರಯತ್ನಿಸಿದವರೇ ಆಮೇಲೆ ವಿವೇಕಾನಂದರಿಗೆ ನೇರಪತ್ರದ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡರು. ವಿವೇಕಾನಂದರ ಪ್ರಕಾರ ಈ ಸಮ್ಮೇಳನ ಜಗತ್ತಿಗೆ ಏನನ್ನಾದರೂ ಪ್ರಕಟಪಡಿಸಿದ್ದರೆ ಅದು ಇದು: ಪಾವಿತ್ರ್ಯ, ಪರಿಶುದ್ಧತೆ, ದಯೆಗಳು ಯಾವುದೇ ಒಂದು ಧರ್ಮದ ಸ್ವಂತ ಆಸ್ತಿಯಲ್ಲ .

ಇವರ ಉಪನ್ಯಾಸಗಳನ್ನು ಮೆಚ್ಚಿ ನ್ಯೂಯಾರ್ಕ್ ಹೆರಾಲ್ಡ್ ಪತ್ರಿಕೆ ಹೀಗೆ ಬರೆಯಿತು : ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದ ಅತ್ಯಂತ ಸಮರ್ಥ ವ್ಯಕ್ತಿಯಾಗಿದ್ದರು. ಅವರ ಮಾತುಗಳನ್ನು ಕೇಳಿದ ನಂತರ ಭಾರತದಂತಹ ದೇಶಕ್ಕೆ ವಿವೇಕಾನಂದರಂಥವರನ್ನು ಧಾರ್ಮಿಕ ಪ್ರತಿನಿಧಿಯಾಗಿ ಕಳಿಸುವುದು ಹೆಮ್ಮೆಯ ವಿಚಾರವಾಗಿದೆ ಎಂಬುವುದರಲ್ಲಿ ಸಂಶಯವಿಲ್ಲ . ಪ್ರೆಸ್ ಆಫ್ ಅಮೆರಿಕ ಕೂಡ ಹೊಗಳಿ ಬರೆಯಿತು. ಅಮೆರಿಕದಲ್ಲಿ ಭಾರತದ ಘನತೆ , ಔನ್ನತ್ಯ ಮತ್ತು ಎತ್ತರಕ್ಕೆ ಒಯ್ದ ವಿವೇಕಾನಂದರ ಬಗ್ಗೆ ಭಾರತೀಯರಿಗೆ ಅಪೂರ್ವಾನಂದವಾಯಿತು. ಖೇತ್ರಿ ಮಹಾರಾಜರು ಇದಕ್ಕಾಗಿ ಸ್ಮರಣೀಯ ಸಮಾರಂಭವನ್ನು, ಮದ್ರಾಸಿನ ಮಹಾರಾಜರು ಪ್ರತ್ಯೇಕ ಸಮ್ಮೇಳನವನ್ನು ನಡೆಸಿದರು. ಕೋಲ್ಕತ್ತಾದಲ್ಲಿ ರಾಜಾಪ್ಯಾರಿ ಮೋಹನ್ ಮುಖರ್ಜಿಯವರು ವಿವೇಕಾನಂದರ ಸಾಧನೆಯ ಸ್ಮರಣ ಕಾರ್ಯಕ್ರಮವನ್ನು ಹಮ್ಮಿಕೊಂಡರು.

‘ನನ್ನ ಕುರಿತ ಅಪಪ್ರಚಾರಗಳಿಂದಾಗಿ ನೀವು ಚಿಂತಿತರಾಗಿದ್ದೀರೆಂಬುದು ತಿಳಿದು ನನಗೆ ಅತೀವ ಅಚ್ಚರಿಯಾಗಿದೆ. ಶುದ್ಧ ಹಿಂದೂ ಪದ್ಧತಿಯ ಆಹಾರವನ್ನು ನಾನು ಸೇವಿಸಬೇಕೆಂದು ನೀವೇನಾದರೂ ಬಯಸುವುದಾದರೆ ಸ್ವಲ್ಪ ಹಣವನ್ನೂ, ಅಡುಗೆ ಭಟ್ಟರನ್ನೂ ಕಳಿಸಿಕೊಡಿ. ಆದರೆ ನನ್ನ ಸಹಾಯ ಮಾಡುವುದಕ್ಕೆ ಸಿದ್ಧರಿಲ್ಲ. ಮನಬಂದಂತೆ ಆಡಿಕೊಳ್ಳುತ್ತಿರುತ್ತಾರೆ, ಅಷ್ಟೆ. ಅವರ ಬಗ್ಗೆ ನಗುವುದನ್ನು ಬಿಟ್ಟರೆ ಬೇರೇನೂ ಮಾಡಲಾರೆ. ಅವರ ಟೀಕೆಗಳಿಗೆ ನಾನು ಚಿಂತಿಸುವುದಿಲ್ಲ. ನಾನು ಯಾವುದೇ ವ್ಯಕ್ತಿಯ ಅಥವಾ ಯಾವುದೇ ಜಾತಿಯ ಗುಲಾಮನಲ್ಲ. ಇಂತಹ ರಾಜಕಾರಣದಲ್ಲಿ ಭಾಗಿಯಾಗಲಾರೆ. ನನ್ನ ರಾಜಕಾರಣವೇನಿದ್ದರೂ ದೇವರು ಮತ್ತು ಸತ್ಯದೊಂದಿಗೆ ಮಾತ್ರ’- ಈ ಸಂದರ್ಭದಲ್ಲಿ ವಿವೇಕಾನಂದರು ತಮ್ಮ ಶಿಷ್ಯರಿಗೆ ಹೇಳಿದ ಮಾತಿದು.

ಸರಳವಾದ ಬದುಕು, ಉತ್ಕಟವಾದ ಚಿಂತನೆಯನ್ನು ರೂಢಿಸಿಕೊಂಡ ವಿವೇಕಾನಂದರಿಗೆ ಯಾವುದೂ ಭಾರತವನ್ನು ಹಾಗೂ ಹಿಂದೂಧರ್ಮವನ್ನು ವಿಶ್ವ ಭ್ರಾತೃತ್ವವನ್ನು ತನ್ನ ಉಪನ್ಯಾಸದ ಆರಂಭದಲ್ಲೇ ಸತ್ಯಗೊಳಿಸಿದ ಅವರು ಹಿಂದೂದರ್ಶನದ ಸಾರ್ವಕಾಲಿಕ ಶ್ರೇಷ್ಠಮೌಲ್ಯಗಳನ್ನು ವಿಶ್ವದ ಮುಂದೆ ಅನಾವರಣಗೊಳಿಸಿದ ಪರಿ ಅವರನ್ನು ಇಂದಿಗೂ ಜಗತ್ತು ಬೆರಗುಗಣ್ಣಿನಿಂದ ನೋಡುತ್ತಲೇ ಇರುವಂತೆ ಮಾಡಿದೆ. ವಿಶ್ವ ಸರ್ವಧರ್ಮ ಸಮ್ಮೇಳನ ನಿಜವಾದ ಅರ್ಥದಲ್ಲಿ ಸಾರ್ಥಕ್ಯವನ್ನು ಪಡೆದದ್ದು ಈ ರೀತಿಯಲ್ಲಿ. ಭಾರತದ ಪಾಲಿಗೆ ವಿವೇಕಾನಂದರು ರಾಷ್ಟ್ರದ್ರಷ್ಟಾರರಾಗುವುದಕ್ಕೆ ಈ ಸಮ್ಮೇಳನ ಇಂಬು ನೀಡಿತು. ಜಗತ್ತಿನ ಚರಿತ್ರೆಯಲ್ಲೂ
ಇದು ಅಚ್ಚಳಿಯದೇ ಉಳಿಯಿತು.

Tags

Related Articles

Leave a Reply

Your email address will not be published. Required fields are marked *

Language
Close