About Us Advertise with us Be a Reporter E-Paper

ಅಂಕಣಗಳು

ತಾನಸೇನರ ಹಾಡುಗಾರಿಕೆಗೆ ಕವಡೆಯ ಕಿಮ್ಮತ್ತು !!

- ಎಸ್. ಷಡಕ್ಷರಿ

ಜಗದ್ವಿಖ್ಯಾತ ಹಾಡುಗಾರ ತಾನಸೇನರ ನಾವೆಲ್ಲ ಕೇಳಿದ್ದೇವಲ್ಲವೇ? ಅವರು ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿ ಇದ್ದವರು. ಮಹಾನ್ ಸಂಗೀತಗಾರರಾಗಿದ್ದ ತಾನಸೇನರ ಬದುಕಿನ ಅನೇಕ ಘಟನೆಗಳು ದಂತಕತೆಗಳಾಗಿವೆ. ಅದರಲ್ಲೂ ಆತ ರಾತ್ರಿಯ ಹೊತ್ತು ಕತ್ತಲಲ್ಲಿ ಕುಳಿತು ದೀಪಕ ರಾಗವನ್ನು ಹಾಡುತ್ತಿದ್ದರೆ ದೀಪಗಳು ತಾವೇ ತಾವಾಗಿ ಹೊತ್ತಿಕೊಂಡು ಉರಿಯುತ್ತಿದ್ದವು ಎಂಬ ಮಾತು ಜನಜನಿತ. ಹಾಗೆಯೇ ಅವರ ಸಮಾಧಿಯ ಬಳಿ ಇರುವ ಹುಳಿ ಹುಣಿಸೇ ಮರದ ಹುಳಿ ಮತ್ತು ಎಲೆ ತಿಂದವರ ಸ್ವರ ಶುದ್ಧಿಯಾಗುತ್ತದೆ ಎಂಬ ಮಾತೂ ಚಾಲ್ತಿಯಲ್ಲಿದೆ. ಉತ್ಪ್ರೇಕ್ಷೆಯೇ ಇರಬಹುದು!)

ಆದರೆ ತಾನಸೇನರ ಹೆಸರೇ ರೋಮಾಂಚನ ಉಂಟು ಮಾಡುತ್ತದೆ. ಅವರ ಹೆಸರಿನಿಂದಲೇ ಸ್ಫೂರ್ತಿ ಪಡೆಯದ ಸಂಗೀತಪ್ರಿಯರು ಇರಲಿಕ್ಕಿಲ್ಲ. ಅವರು ಧೀಮಂತ ಸಂಗೀತಗಾರರು, ಕವಿ ಮತ್ತು ರಾಗ ಸೃಷ್ಟಿಕರ್ತರು. ಅವರು ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿದ್ದ ‘ನವ ಮಣಿ’ಗಳಲ್ಲೊಬ್ಬರು. ಅಕ್ಬರನ ಮೆಚ್ಚುಗೆಗೆ ಪಾತ್ರರಾದ ಗಾಯಕರು.

ಆತನಿಂದಲೇ ತಾನಸೇನರಂತಹ ಹಾಡುಗಾರ ಮತ್ತೊಬ್ಬನಿಲ್ಲ ಎಂಬ ಹೊಗಳಿಕೆಗೆ ಪಾತ್ರರಾದವರು. ಅಷ್ಟೇ ಅಲ್ಲ. ಚಕ್ರವರ್ತಿಗೆ ಪರಮಾಪ್ತರಾಗಿದ್ದವರು. ಬಹುಶಃ ಈ ಎಲ್ಲ ಕಾರಣಗಳಿಂದ ತಾನಸೇನರಲ್ಲಿ ನನ್ನ ಯಾರೂ ಇಲ್ಲ ಎಂಬ ಅಹಂಕಾರ ಉಂಟಾಗಿದ್ದಿರಬಹುದು.

ಆದರೆ ತಾನಸೇನರಿಗಿಂತ ಒಳ್ಳೆಯ ಕಲಾವಿದರು ಒಬ್ಬರಿದ್ದರು. ಆದರೆ ಅವರು ಅಕ್ಬರನ ದರ್ಬಾರಿನಲ್ಲಿರಲಿಲ್ಲ. ಅವರ ಹೆಸರು ವಿಠಲ ನಾಥಜೀ. ಒಮ್ಮೆ ಸ್ವತಃ ಸಂಗೀತಗಾರರಾದ ವಿಠಲ ನಾಥಜೀಯವರು ತಾನಸೇನರನ್ನು ಹಾಡಲಿಕ್ಕಾಗಿ ಆಹ್ವಾನಿಸಿದ್ದರಂತೆ. ತಾನಸೇನರು ಬಂದು ಚೆನ್ನಾಗಿ ಹಾಡಿದರಂತೆ.

ಎಲ್ಲರೂ ಮೆಚ್ಚಿ ತಲೆದೂಗಿದರು. ಕೊನೆಯಲ್ಲಿ ತಾನಸೇನರನ್ನು ಗೌರವಿಸುವಾಗ ಅವರಿಗೆ ಫಲತಾಂಬೂಲದ ಜತೆಗೆ ಐನೂರು ಚಿನ್ನದ ವರಹಗಳ ಥೈಲಿಯನ್ನು ಮತ್ತು ಅದರ ಮೇಲೊಂದು ಕವಡೆಯನ್ನೂ ಕೊಡಲಾಯಿತಂತೆ. ಬಹುಶಃ ವರಹಗಳನ್ನು ಕಂಡು ತಾನಸೇನರ ಮುಖ ಅರಳಿರಬೇಕು. ಹಾಗೆಯೇ ಕವಡೆಯನ್ನು ಕಂಡು ಕುತೂಹಲವೂ ಉಂಟಾಗಿರಬೇಕು.

ಅವರು ‘ಈ ಕವಡೆಯನ್ನು ಕೊಡುತ್ತಿರುವುದರ ಅರ್ಥವೇನು?’ ಎಂದು ಪ್ರಶ್ನಿಸಿದಾಗ, ವಿಠಲ ನಾಥಜೀಯವರು ತಾವು ಚಕ್ರವರ್ತಿ ಅಕ್ಬರನ ದರ್ಬಾರಿನ ಗಾಯಕ ಪದವಿಯಲ್ಲಿದ್ದೀರಿ. ಆ ಪದವಿಯನ್ನು ಗೌರವಿಸಲೋಸುಗ ಐನೂರು ಚಿನ್ನದ ವರಹಗಳನ್ನು ಕೊಡಲಾಗಿದೆ. ನಿಮ್ಮ ಸಂಗೀತಕ್ಕೆ ಅದರ ಮೇಲಿಟ್ಟಿರುವ ಕವಡೆಯ ಬೆಲೆಯನ್ನು ಕೊಡಲಾಗಿದೆ ಎಂದಾಗ, ತಾನಸೇನರಿಗೆ ಅವಮಾನವಾದದ್ದು ಸಹಜ. ಅವರು ಸಿಟ್ಟಿನಿಂದ ನನ್ನ ಸಂಗೀತಕ್ಕೆ ಕವಡೆಯ ಬೆಲೆ ನೀವೇಕೆ ಹಾಡಿ ತೋರಿಸಬಾರದು ಎಂದು ಪಂಥಾಹ್ವಾನ ನೀಡಿದರು. ಆಗ ವಿಠಲ ನಾಥಜೀಯವರು ಹಾಡಿದರಂತೆ. ಅವರು ಎಷ್ಟು ಚೆನ್ನಾಗಿ ಹಾಡಿದರೆಂದರೆ ತಾನಸೇನರೇ ಅವರ ಗಾಯನವನ್ನು ಮೆಚ್ಚಿ ತಲೆದೂಗಿದ್ದಲ್ಲದೆ ಅವರನ್ನು ಅಪ್ಪಿಕೊಂಡು ಗೌರವ ಸೂಚಿಸಿದರಂತೆ. ಅಷ್ಟೇ ಅಲ್ಲ. ಕೀರ್ತಿ, ರಾಜಗೌರವ ಸಿಕ್ಕ ಮಾತ್ರಕ್ಕೆ ಉಬ್ಬಿಹೋಗಬಾರದು ಎಂಬ ಮಾತನ್ನು ಅರ್ಥಮಾಡಿಕೊಂಡರಂತೆ. ತಾನಸೇನರಿಗೆ ನನಗಿಂತ ಚೆನ್ನಾಗಿ ಹಾಡುವವರು ಇದ್ದಾರೆ. ನಾನು ಪಡೆದಿರುವ ರಾಜ ಮರ್ಯಾದೆಗೆ ಅಹಂಕಾರದಿಂದ ಉಬ್ಬಬಾರದು ಎಂಬ ಸತ್ಯದ ಅರಿವಾಯಿತಂತೆ.

ಮೇಲಿನ ಘಟನೆಯನ್ನು ಸಂತೋಷಕುಮಾರ ಗುಲ್ವಾಡಿಯವರು ಬರೆದಿರುವ ‘ತಾನಸೇನ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಅವರು ಸಾಕಷ್ಟು ಸಂಶೋಧನೆ ಮಾಡಿ ಸೊಗಸಾಗಿ ಬರೆದಿರುವ ಈ ಪುಸ್ತಕ ತಾನಸೇನರ ಜೀವನದ, ಸಾಧನೆಯ ಮತ್ತು ಕೃತಿಗಳ ಸಮಗ್ರ ಪರಿಚಯ ಮಾಡಿಕೊಡುತ್ತದೆ. ಸಂಗೀತಪ್ರಿಯರೇ ಅಲ್ಲ, ಎಲ್ಲರೂ ಓದಬೇಕಾದ ಪುಸ್ತಕ. ಅವರಿಗೆ ಅಭಿನಂದನೆಗಳು.

ನಮಗೂ ಯಾವಾಗಲಾದರೂ ನನ್ನ ಸಮಾನ ಯಾರೂ ಇಲ್ಲವೆಂಬ ಭ್ರಮೆ ಉಂಟಾದರೆ ಆಗ, ನಮ್ಮ ಸಾಧನೆಯ ಬೆಲೆ ವರಹಗಳೋ ಅಥವಾ ಕವಡೆಯೋ ಎಂಬುದನ್ನು ಯೋಚಿಸಬಹುದು ಅಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close