About Us Advertise with us Be a Reporter E-Paper

ವಿರಾಮ

ಟ್ಯಾಕ್ಸಿ ಪ್ರಸಂಗ

ಕಾರ್ತಿಕ್ ಸೋಮಯಾಜಿ ಉಪ್ಪೂರು

ದಲಾವಣೆಯೇ ಪ್ರಕೃತಿಯ ನಿಯಮವೆನ್ನುತ್ತಾರೆ.ಒಲೆಯಿಂದ ಹಿಡಿಸೂಡಿಯಿಂದ ವಾಕ್ಯೂಮ್ ಕ್ಲೀನರ್‌ವರೆಗೆ, ಪತ್ರದಿಂದ ವಾಟ್ಸಪ್‌ವರೆಗೆ ಏನೆಲ್ಲಾ ಬದಲಾವಣೆಗಳಾಗಿವೆ. ಇಂತಹ ನವಜಗತ್ತಿನ ಜಾರುಬಂಡಿಯಲ್ಲಿ ಹಿರಿಯರು ಪಡುವ ಪರದಾಟವನ್ನು ನೋಡಿದಾಗ ನಗುವು, ಕಾರುಣ್ಯಭಾವವೂ ಮೂಡುವುದಲ್ಲದೆ, ನಾವು ಹಳಬರಾದಾಗ ಆಗುವ ಬದಲಾವಣೆ ಹಾಗು ಪಡಬೇಕಾದ ಪಚೀತಿಯನ್ನು ನೆನೆದುಕೊಂಡು ಭಯವೂ ಆಗುತ್ತದೆ. ಬಸ್ಸಿಗಾಗಿ ಕಾಯುವುದು, ರಿಕ್ಷಕ್ಕಾಗಿ ಗೋಳಾಡುತ್ತಿದ್ದ ನನ್ನ ಅಮ್ಮನಿಗೆ ಸೊಸೆಯು, ಮೊಬೈಲಿನಲ್ಲಿ ಸಲ ಕ್ಲಿಕ್ ಮಾಡಿ ನಾವಿರುವಲ್ಲೇ ಟ್ಯಾಕ್ಸಿಯನ್ನು ಹಾಜರುಪಡಿಸುವ ವಿಚಿತ್ರ ಪ್ರಪಂಚ ಪರಿಚಯಿಸಿದಾಗ ಆದ ಸ್ವಾರಸ್ಯಕರ ಘಟನೆ ಇಲ್ಲಿದೆ.

ಅಪಾರ್ಟ್‌ಮೆಂಟಿನಿಂದ ಮತ್ತು ಶಾಪಿಂಗ್ ಮಾಲ್‌ಗೆ ಹೋಗಿ ಹಿಂದಿರುಗುವ ಯೋಜನೆ ನನ್ನ ಅನುಪಸ್ಥಿತಿಯಲ್ಲಿ ಸಿದ್ದವಾಯಿತು. ‘ಬನ್ನಿ ಅತ್ತೆ ಉಬರ್ ಡೈವರ್ ಕೆಳಗೆ ಕಾಯುತ್ತಿದ್ದಾನೆ’ ಎಂದು ಅಮ್ಮನನ್ನು ಹೊರಗೆ ಕರೆದುಕೊಂಡು ಹೋದಳು. ಅಮ್ಮನಿಗೆ ಆಶ್ಚರ್ಯ, ಡ್ರೈವರ್ ಹೊರಗೆ ಕಾಯುತ್ತಿದ್ದಾನೆ! ಏನೂ ಹೇಳದೆ ಟ್ಯಾಕ್ಸಿ ಹತ್ತಿದಳು. ಈ ಮನೆಯ ಬಳಿ ಯಾವಾಗಲೂ ಕಾಯುತ್ತಿರಬೇಕು, ಹಾಗಾಗಿ ಬೇಗ ಸಿಕ್ಕ ಎಂದು ಮನದಲ್ಲೇ ಅಂದುಕೊಂಡಳು. ಪಾರ್ಕ್ ಬಳಿ ಇಳಿದಾಗ ಸೊಸೆ ಹಣ ಕೊಡದಿರುವುದನ್ನು ನೋಡಿ ಮತ್ತೊಮ್ಮೆ ಚಕಿತಳಾದಳು. ಏಕೆ ಹಣ ತೆಗೆದುಕೊಂಡಿಲ್ಲ ಎಂಬ ಸಂಶಯ! ಪಾರ್ಕ್‌ನಲ್ಲಿ ಸುತ್ತಾಡಿದ ಮೇಲೆ, ‘ಬನ್ನಿ ಅತ್ತೆ ಶಾಪಿಂಗ್ ಮಾಲ್‌ಗೆ ಹೋಗೋಣ, ಉಬರ್ ಡ್ರೈವರ್ ಪಾರ್ಕ್ ಗೇಟ್ ಬಳಿ ಕಾಯುತ್ತಿದ್ದಾನೆ’ ಅಂದಾಗ, ಅತ್ತೆಗೆ ತುಸು ಅನುಮಾನ, ತುಸು ಗೊಂದಲ. ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ಇಷ್ಟು ಹೊತ್ತು ತಾಳ್ಮೆಯಿಂದ ತಡೆಹಿಡಿದಿದ್ದರೂ, ಈಗ ಸಹನೆಯ ಆಣೆಕಟ್ಟು ಒಡೆದು ಪ್ರಶ್ನೆಗಳ ಸುರಿಮಳೆಗೈದಳು.

ಆ ಉಬರ್ ಡ್ರೈವರ್ ಪರಿಚಯ ನಿನಗೆ ಹೇಗೆ? ಎಷ್ಟು ದಿನಗಳಿಂದ ಪರಿಚಯ? ನಿನ್ನ ಹಿಂದೆ ಸುತ್ತುವುದೇ ಅವನ ಕಸುಬಾ? ಹೀಗೆ ನಿನ್ನ ಹಿಂದೆ ಸುತ್ತಿ ದುಡ್ಡು ತೆಗೆದುಕೊಳ್ಳದಿದ್ದರೆ ಅವನ ಹೊಟ್ಟೆಪಾಡೇನು? ನಿನ್ನ ಗಂಡನಿಗೂ ಇದು ಗೊತ್ತಾ? ಪೇಪರಿನಲ್ಲಿ ಓದಿದ್ದೇನೆ, ಕಾರು ಚಾಲಕರ ಕುರಿತು ಬೆಂಗಳೂರಿನಂತ ಸಿಟಿಯಲ್ಲಿ ತುಂಬಾ ಜಾಗರೂಕರಾಗಿರಬೇಕೆಂದು. ಅವರೊಂದಿಗೆ ಈ ರೀತಿ ಮಕ್ಕಳಾಟ ಇಟ್ಟುಕೊಳ್ಳಬೇಡ. ಅವನು ನಿನ್ನ ಹತ್ತಿರ ದುಡ್ಡು ತೆಗೆದುಕೊಳ್ಳದೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗ್ತಾನೆ ಅಂದ್ರೆ ನನಗೆ ನಂಬೋಕೆ ಆಗ್ತಿಲ್ಲ’ ಹೀಗೆ ಒಂದರಮೇಲೊಂದು ಕೇಳುತ್ತಿರಲು, ಕೆಲವು ಕ್ಷಣ ಈ ಅತ್ತೆಗೆ ನನ್ನ ಪತ್ನಿಗೆ ಗಾಭರಿಯಾಗಿ, ಸ್ಥಂಭೀಭೂತಳಾದಳು.

ಕೊನೆಗೆ ಚೇತರಿಸಿಕೊಂಡು, ಈ ಎಲ್ಲಾ ಗೊಂದಲಕ್ಕೆ ಕಾರಣ ಆ್ಯಪ್ ಮೂಲಕ ಟ್ಯಾಕ್ಸಿ ಬುಕ್ ಮಾಡಿ, ಆ್ಯಪ್ ಮೂಲಕವೇ ಹಣ ಪಾವತಿ ಮಾಡುವ ತಂತ್ರಜ್ಞಾನವೇ ಕಾರಣ ಎಂದು ಆಕೆಗೆ ಅರಿವಾಯಿತು. ಮನದಲ್ಲೇ ಅತ್ತೆಯ ಮುಗ್ಧತೆಗೆ ನಕ್ಕು, ಒಂದೊಂದಾಗಿ ವಿವರಿಸತೊಡಗಿದಳು. ‘ಅತ್ತೆ, ಉಬರ್ ಎಂಬುದು ಒಂದು ಸಂಸ್ಥೆ, ಯಾವುದೇ ವ್ಯಕ್ತಿ ಅಲ್ಲ. ನನ್ನ ಮೊಬೈಲಲ್ಲಿ ಉಬರ್ ಸಂಸ್ಥೆಯ ಆಪ್ ಇದೆ. ನಾನಿರುವ ಸ್ಥಳ, ಹೋಗಬೇಕಾಗಿರುವ ಸ್ಥಳಗಳ ಮಾಹಿತಿಕೊಟ್ಟರೆ ಆ ಕಂಪನಿಯ ಸಾವಿರಾರು ಟ್ಯಾಕ್ಸಿ ಡ್ರೈವರ್‌ಗಳ ಪೈಕಿ ಒಬ್ಬರಿಗೆ ಆ ಸಂದೇಶ ಮುಟ್ಟಿಸಿ, ಆ ಟ್ಯಾಕ್ಸಿಯನ್ನು ನಮ್ಮ ಸ್ಥಳಕ್ಕೆ ಕಳಿಸುತ್ತಾರೆ. ನನ್ನ ಮೊಬೈಲಲ್ಲಿ ಆ ಟ್ಯಾಕ್ಸಿ ಮನೆಯ ಬಳಿಗೆ ಬಂದಿದೆಯಾ, ಆ ಕ್ಷಣಕ್ಕೆ ಎಲ್ಲಿದೆ ಎಲ್ಲವು ತಿಳಿಯುತ್ತದೆ. ನಾನು ಹಣ ಕೊಡುವುದಕ್ಕೆ ಇನ್ನೊಂದು ಆ್ಯಪ್ ಇದೆ. ಕ್ಯಾಷ್ ಕೊಡಬೇಕಾಗಿಲ್ಲ. ಅದು ನನ್ನ ಬ್ಯಾಂಕ್ ಅಕೌಂಟಿಂದ ಆ ಕಂಪನಿಗೆ ಹಣ ತಲುಪಿಸುತ್ತದೆ. ಸತ್ಯವಾಗಿ ನನಗೂ ಆ ಡ್ರೈವರಿಗೂ ಏನೂ ಇದನ್ನು ಕೇಳಿ ಅತ್ತೆ ಮನಸಾರೆ ನಕ್ಕು, ತನ್ನ ಮೂಢತೆಗೆ ತಾನೇ ಬೈಯ್ದುಕೊಂಡರು. ಸೊಸೆಯನ್ನು ರಮಿಸಿದ್ದೂ ಆಯಿತು.

ತಂತ್ರಜ್ಞಾನವೆಂಬ ನಿರಂತರ ಬದಲಾಗುತ್ತಿರುವ ನದಿಯಲ್ಲಿ ಈಜಾಡುವುದು ನನ್ನಂಥ ಯುವಪೀಳಿಗೆಗೇ ಕಷ್ಟಸಾಧ್ಯವಿರುವಾಗ, ಹಿರಿಯರಿಗೆ ಒಗ್ಗಿಕೊಳ್ಳುವುದು ಬಲು ಪ್ರಯಾಸದಾಯಕವೇ ಸರಿ. ಈ ಕಾಲದಲ್ಲಿ ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳಿಗೆ ತಿಳಿಹೇಳುವುದಕ್ಕಿಂತ, ಅವರಿಂದ ಕಲಿಸಿಕೊಳ್ಳುವುದೇ ಜಾಸ್ತಿಯಾಗಿದೆ. ಈ ಕಲಿಕೆಯ ಪ್ರಕ್ರಿಯೆಯಲ್ಲಿ, ಮೇಲೆ ಹೇಳಿದಂತಹ ತಮಾಷೆಯ ಪ್ರಸಂಗಗಳು ಘಟಿಸಿ, ನಗು ಉಕ್ಕಿಸುವುದೂ ಉಂಟು.

Tags

Related Articles

Leave a Reply

Your email address will not be published. Required fields are marked *

Language
Close