About Us Advertise with us Be a Reporter E-Paper

ಅಂಕಣಗಳು

ಬಾಲಕರಿಗೆ ಸನ್ನಡತೆ ಕಲಿಸದಿರುವುದು ಅನಾಹುತಕ್ಕೆ ಆಹ್ವಾನ

- ಡಾ.ಎಸ್.ಬಿ.ಜೋಗುರ

ನಮ್ಮ ದೇಶದಲ್ಲಿ ನಿರ್ಭಯಾ ಪ್ರಕರಣದ ನಂತರ ಮಹಿಳಾ ದೌರ್ಜನ್ಯದ ವಿಷಯದಲ್ಲಿ ಸಾಕಷ್ಟು ಚುರುಕಾಗಿ ಕಾನೂನು ಮತ್ತು ಪೋಲಿಸ ವ್ಯವಸ್ಥೆ ಕಾರ್ಯನಿರ್ವಹಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗಲಿಲ್ಲ. ಮತ್ತೆ ಮತ್ತೆ ಮಾಧ್ಯಮಗಳಲ್ಲಿ ಅತ್ಯಾಚಾರದ ಪ್ರಕರಣಗಳು ಬಯಲಾಗುತ್ತಲೇ ಇವೆ. ಹುಡುಗಿಯರನ್ನು ಚುಡಾಯಿಸುವುದು ಒಂದು ಅಪರಾಧವೆಂದು ಗೊತ್ತಿದ್ದರೂ ಅದು ಕೂಡಾ ಮತ್ತೆ ಅಲ್ಲಲ್ಲಿ ಸುದ್ದಿಯಾಗುವದಿದೆ. ಇವತ್ತು ನಮ್ಮ ಮಕ್ಕಳನ್ನು ಕುಳ್ಳರಿಸಿಕೊಂಡು ಸರಿ-ತಪ್ಪುಗಳ ವ್ಯವಹಾರಗಳ ಬಗ್ಗೆ, ಮೌಲ್ಯಗಳ ತಿಳಿಸಿ ಹೇಳುವ ಪುರಸತ್ತು ಈ ಮಿಂಚಿನೋಟದ ಬದುಕಿನಲ್ಲಿ ಪಾಲಕರಿಗೂ ಇಲ್ಲದಾಗಿದೆ. ಇನ್ನು ಪಾಲಕರಿಗೆ ತಮ್ಮ ಮಕ್ಕಳಿಗೆ ನೀತಿಪಾಠ ಹೇಳಬೇಕು ಎನ್ನುವ ಹಂಬಲವಿದ್ದರೂ ಅದಕ್ಕೆ ಮಕ್ಕಳಾದವರು ಸರಿಯಾಗಿ ಪ್ರತಿಸ್ಪಂದಿಸುವದಿಲ್ಲ. ಒಳ್ಳೆಯ ಮಾತು, ವಿಚಾರವೇ ಅವರಿಗೆ ಕಿರಕಿರಿ ಎನಿಸುತ್ತಿದೆ. ಪೀಳಿಗೆಯ ನಡುವಿನ ಅಂತರದ ಮಾತು ಅಲ್ಲಿ ಅಂತರದಲ್ಲಿಯೇ ಉಳಿಯುವದರಿಂದ ಪ್ರಯತ್ನ ವ್ಯರ್ಥವಾಗುತ್ತಿದೆ.

ನಾವು ಚಿಕ್ಕವರಾಗಿದ್ದಾಗ ನಮ್ಮ ಅಪವರ್ತನೆಗಳನ್ನು ತಿದ್ದಲು ಕುಟುಂಬ, ನೆರೆಹೊರೆ, ಗೆಳೆಯರು, ಶಾಲೆ, ಸಮುದಾಯ ಹೀಗೇ ಇಡೀ ಊರೇ ಮುಂದಾಗಿ ಅಹಿತಕರವಾದ ವರ್ತನೆಗಳನ್ನು ತಿದ್ದುವಲ್ಲಿ ನೆರವಾಗುತ್ತಿದ್ದರು. ಜೊತೆಗೆ ಆಗ ಬರುತ್ತಿದ್ದ ಚಲಚಿತ್ರಗಳು ಕೂಡಾ ಬದುಕಿಗೊಂದು ಉತ್ತಮ ಸಂದೇಶವನ್ನು ಕೊಡುವದಿತ್ತು. ಡಾ.ರಾಜಕುಮಾರರ ಬಂಗಾರದ ಮನುಷ್ಯ ಸಿನೇಮಾ ಅದೇಷ್ಟೋ ಮುರುಕು ಒಕ್ಕಲುತನಗಳನ್ನು ನೆಟ್ಟಗೆ ಮಾಡಿರುವದಿತ್ತು. ಆ ಚಿತ್ರ ಕೃಷಿಯ ಕಡೆಗೆ ಒಲವು ತೋರಲು ಕಾರಣವಾಗಿರುವದಿತ್ತು. ಹೀಗೆ ಸಮಾಜದಲ್ಲಿಯ ಅಪಸಂಸ್ಕೃತಿಯನ್ನು ಸರಿಪಡಿಸುವಲ್ಲಿ ಅನೇಕ ಬಗೆಯ ಸಂಘ-ಸಂಸ್ಥೆಗಳು ಅತ್ಯಂತ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದವು. ಈಗಲೂ ಆ ಬಗೆಯ ಹೊಣೆಗಾರಿಕೆಯನ್ನು ಹೊರುವ ಜಯಮಾನ ಜಾರಿಯಾಗಬೇಕಿದೆ ಆದರೆ ಯಾರು ಮುಂದಾಗಬೇಕು..? ಎನ್ನುವುದು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತಾಗಿದೆ.

ಅಪ್ಪ-ಅಮ್ಮ ಕಲಿಸದಿದ್ದರೆ ಊರೇ ಕಲಿಸುವುದು, ಬುದ್ದಿ ಊರೇ ಕಲಿಸುವುದು. ನಿನ್ನ ಹೀಗೆ ಬೆಳೆಯಲು ಬಿಟ್ಟರೆ ಮಾನ ಹೋಗುವುದು, ಹಳ್ಳಿಯ ಮಾನ ಹೋಗುವುದು. ಎನ್ನುವ ಹಾಡೊಂದು ಬಹುಷ: ಹಣಬಲವೋ ಜನಬಲವೋ ಎನ್ನುವ ಸಿನೇಮಾದಲ್ಲಿತ್ತು. ಈಗ ಆ ಹಾಡು ಇದ್ದಕ್ಕಿದ್ದಂತೆ ನೆನಪಾಗಲು ಒಂದು ಬಲವಾದ ಕಾರಣವಿದೆ. ಬಿಹಾರದ ಸೌಪಾಲ್ ಜಿಲ್ಲೆಯ ದಪರ್ಖಾ ಎನ್ನುವ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ವಸತಿಶಾಲೆಯ ವಿದ್ಯಾರ್ಥಿನಿಯರು ಆಟದ ಮೈದಾನದಲ್ಲಿ ನೆರೆಯ ಗ್ರಾಮದ ಕೆಲ ಟಪೋರಿ ಹುಡುಗರು ಆ ಬಾಲಕಿಯರನ್ನು ಚುಡಾಯಿಸಿದ್ದಲ್ಲದೇ ಅವರ ಬಗ್ಗೆ ಅಶ್ಲೀಲವಾಗಿ ಶಾಲೆಯ ಗೋಡೆಗಳ ಮೇಲೆ ಬರೆದು ದಬ್ಬಾಳಿಕೆ ನಡೆಸಿರುವುದು ಮಾತ್ರವಲ್ಲದೇ, ಆ ಹುಡುಗಿಯರು ಅದನ್ನು ಪ್ರತಿಭಟಿಸಿದಾಗ ಆ ಹುಡುಗರು ತಮ್ಮ ಊರಿನ ಜನರೊಂದಿಗೆ ಬಂದು ಆ ಶಾಲೆಯ ಸುಮಾರು 30 ರಷ್ಟು ಹುಡುಗಿಯರನ್ನು ಹಿಗ್ಗಾ ಮುಗ್ಗಾ ಥಳಿಸಿ ಹೋಗಿರುವದಿದೆ. ಅವರ ಮೇಲೆ ಪೋಲಿಸರಿಗೆ ದೂರು ಸಲ್ಲಿಸಿರುವದಿದೆ.

ನಂತರದ ಬೆಳವಣಿಗೆಯಲ್ಲಿ ಆ ಪ್ರದೇಶದ ರಾಜಕೀಯ ನಾಯಕರು ಪ್ರವೇಶಿಸುವುದು, ಹಲ್ಲೆ ಮಾಡಿದವರನ್ನು ಹೆದರಿಸಿ ಬೆದರಿಸಿ ಕೈ ಬಿಡುವುದು ಇವೆಲ್ಲಾ ಮಾಮೂಲು. ಈಚೆಗಷ್ಟೇ ನಾವು ಗಾಂಧಿ ಜಯಂತಿಯನ್ನು ಆಚರಿಸಿ ಅವರ ಆದರ್ಶಗಳ ಬಗ್ಗೆ ಮಾತನಾಡಿದ್ದು ಇನ್ನೂ ಹಸಿ ಹಸಿಯಾಗಿಯೇ ಇದೆ. ಗಾಂಧೀಜಿಯವರು ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸತ್ಯಾಗ್ರಾಹ ಆರಂಭಿಸಿದ್ದು ಈ ಬಿಹಾರ ರಾಜ್ಯದ ಚಂಪಾರಣ್ ಮೂಲಕ. ಗಾಂಧೀಜಿಯವರ ಧರ್ಮಪತ್ನಿಯ ಹೆಸರಲ್ಲಿರುವ ಈ ಶಾಲೆಯ ವಿದ್ಯಾರ್ಥಿನಿಯರ ಮೇಲೆ ನಡೆದ ಈ ಹಲ್ಲೆಯನ್ನು ಖಂಡಿಸುವ ಜೊತೆಗೆ, ಚುಡಾಯಿಸಿರುವ ಕಿರಾತಕರಿಗೆ ಮಾಡಬೇಕು. ಮತ್ತದೇ ಪ್ರಶ್ನೆ ಬೆಕ್ಕಿಗೆ ಗಂಟೆ ಕಟ್ಟುವವರಾರು..?

ಒಂದು ಜಮಾನಾದಲ್ಲಿ ಹೆಣ್ಣು ತನ್ನ ಮೇಲಾಗುವ ಎಲ್ಲ ಬಗೆಯ ದೌರ್ಜನ್ಯಗಳನ್ನು ಅದ್ಯಾವುದೋ ಒಂದು ಬಗೆಯ ಸಾಮಾಜಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಸಹಿಸಿಕೊಳ್ಳುವದಿತ್ತು. ತನ್ನದಲ್ಲದ ಕಾರಣಕ್ಕೂ ನೋವನ್ನು ನುಂಗಿ ಬದುಕಬೇಕಿತ್ತು. ಆಗ ಅವಳಿಗೆ ಶಿಕ್ಷಣವಿರಲಿಲ್ಲ. ಪುರುಷ ಪ್ರಧಾನ ಸಮಾಜದ ಅಧಿಪತ್ಯದ ಅಡಿಯಲ್ಲಿಯೇ ಆಕೆ ಬದುಕುವ ಅನಿವಾರ್ಯತೆಯಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಈಗವಳು ಪುರುಷನಂತೆ ಎಲ್ಲ ವಲಯಗಳಲ್ಲಿಯೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜೊತೆಗೆ ತನ್ನ ತೋರುತ್ತಿದ್ದಾಳೆ. ಕಾನೂನು ಈಗವಳ ಬೆನ್ನಿಗೆ ನಿಂತು ಕೆಲಸ ಮಾಡುವದಿದೆ. ಅತ್ಯಾಚಾರದ ಪ್ರಕರಣಗಳಲ್ಲಿ ಅನೇಕರಿಗೆ ಗಲ್ಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಗಳಾದ ಉದಾಹರಣೆಗಳಿವೆ. ಹೀಗೆಲ್ಲಾ ಇರುವಾಗಲೂ ಅವರನ್ನು ಚುಡಾಯಿಸಿರುವದು ಮಾತ್ರವಲ್ಲದೇ ಊರಿನ ಜನರನ್ನು ಕರೆತಂದು ಅವರ ಮೇಲೆ ಹಲ್ಲೆ ಮಾಡುವ ಕ್ರಮವನ್ನು ಕುರಿತು ನಾಗರಿಕ ಸಮಾಜ ಗಂಭೀರವಾಗಿ ಯೋಚಿಸಬೇಕಿದೆ. ಬಿಹಾರದ ರಾಜಧಾನಿ ಪಾಟ್ನಾದಿಂದ 200 ಕಿ.ಮೀ ದೂರದಲ್ಲಿರುವ ಈ ದಪರ್ಖಾ ಎನ್ನುವ ಗ್ರಾಮದಲ್ಲಿ ನಡೆದ ಈ ಘಟನೆ ಅಪಸಂಸ್ಕೃತಿಯ ಪ್ರತೀಕದಂತಿದೆ.

ಹಿರಿಯರೆನಿಸಿಕೊಂಡವರು ಈ ಬಗೆಯ ಸನ್ನಿವೇಶದಲ್ಲಿ ತಮ್ಮ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಬೇಕೇ ಹೊರತು ಮಂಗಗಳಿಗೆ ಹೆಂಡ ಕುಡಿಸುವ ಯತ್ನ ಮಾಡಬಾರದು. ಅಷ್ಟಕ್ಕೂ ಆ ಬಾಲಕಿಯರ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯ ಮತ್ತು ಶಿಕ್ಷಾರ್ಹ ವರ್ತನೆ. ಕೇವಲ ಆ ಬಾಲಕಿಯರನ್ನು ಮಾತ್ರವಲ್ಲದೇ ಅದನ್ನು ತಡೆಯಲು ಬಂದ ಶಿಕ್ಷಕರನ್ನು ಕೂಡಾ ಥಳಿಸಿರುವದಿದೆ.
ಘಟನೆಯನ್ನು ಕುರಿತು ದೂರು ದಾಖಲಾಗಿದ್ದರೂ ಮುಂದಿನ ಬೆಳವಣಿಗೆಗಳ ಬಗ್ಗೆ ಮಾತ್ರ ಖಚಿತವಾಗಿ ಹೇಳುವಂತಿಲ್ಲ. ನಮ್ಮಲ್ಲಿ ಎಲ್ಲ ಸಂಗತಿಗಳು ಸಹವಾಸದಲ್ಲಿಯೇ ಸಾಗುವದರಿಂದ ಇದರ ಪರಿಣಾಮ ಹೀಗೆಯೇ ಎಂದು ಹೇಳುವಂತಿಲ್ಲ. ಹುಡುಗಿಯರನ್ನು ಚುಡಾಯಿಸುವುದು ಒಂದು ರೋಗವೇ ಹೌದು. ಈ ರೋಗಕ್ಕೆ ಮನೆಯ ಮದ್ದೇ ರಾಮಬಾಣ. ಮನೆಯ ಮೊದಲ ಪಾಠಶಾಲೆ ಎನ್ನುತ್ತೇವೆ ಇಲ್ಲಿ ಕೊಡಲಾಗುವ ಅನೌಪಚಾರಿಕ ಶಿಕ್ಷಣದಲ್ಲಿ ಹೆಣ್ಣನ್ನು ಪರಿಭಾವಿಸುವ ರೀತಿಯ ಬಗ್ಗೆ ಸಾಕಷ್ಟು ಹೊಣೆಗಾರಿಕೆಯಿಂದ ಹೆತ್ತವರು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಇದರಿಂದ ಸಾಕಷ್ಟು ಮನ:ಪರಿವರ್ತನೆಗಳಾಗುತ್ತವೆ.

ಮಹಿಳೆಯ ಮೇಲಿನ ದೌರ್ಜನ್ಯಗಳ ನಿವಾರಣೆಯಲ್ಲಿ ನಮ್ಮ ಮನ:ಪ್ರವೃತ್ತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿರುವುದು ತೀರಾ ಅವಶ್ಯಕ. ಮನೆಯ ಈ ಬಗೆಯ ರೋಗಕ್ಕೆ ಹೆತ್ತವರು ಗುಳಿಗೆ, ಇಂಜಕ್ಷನ್ ಕೊಟ್ಟರೆ ಅದು ಸರಿಹೋಗಬಲ್ಲದು. ಇಲ್ಲದಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯ ಎನ್ನುವ ಹಂತ ತಲುಪುವ ಸ್ಥಿತಿಯೂ ಬರಬಹುದು.

Tags

Related Articles

Leave a Reply

Your email address will not be published. Required fields are marked *

Language
Close