About Us Advertise with us Be a Reporter E-Paper

ಅಂಕಣಗಳು

ಪ್ರತಿಭಾವಂತರಿಗೆ ಇಂದು ಅಂತರ್ಜಾಲವೇ ವೇದಿಕೆ…!

Ted Talk

ಭಾರತದಲ್ಲಿ ಎಲ್ಲವೂ ಉತ್ತಮ ಶೈಕ್ಷಣಿಕ ಪ್ರತಿಭೆಯನ್ನೇ ಅವಲಂಬಿಸಿದೆ. ಉದಾಹರಣೆಗೆ ನೀವು ತರಗತಿಯ ಜಾಣ ಹುಡುಗ/ಗಿಯಾಗಿದ್ದರೆ ಡ್ರಾಮಾದಲ್ಲಿಯೂ ನಿಮಗೇ ಮುಖ್ಯ ಪಾತ್ರ…ಎಷ್ಟೊಂದು ಅಲ್ಲವೇ? ಬಾಲಿವುಡ್ ನಟರನ್ನೂ ಹೀಗೆ ವಿದ್ಯಾರ್ಹತೆ ಮೇಲೆ ಆರಿಸಿದ್ದರೆ ಏನು ಕತೆ?! ‘ನೀವು ಹೀರೊ/ಹೀರೋಯಿನ್ ಆಗಬೇಕಾ? ಎಲ್ಲಿ ನಿಮ್ಮ ಅಂಕಪಟ್ಟಿ ತೋರಿಸಿ’ ಅಂದರೆ ಎಷ್ಟು ಅಸಂಬದ್ಧ. ಜೂನಿಯರ್ ಇಮ್ರಾನ್ ಹಶ್ಮಿ ಆಗಬಲ್ಲವನು ‘ಬಯಾಲಜಿ’ಯಲ್ಲಿ ಒಳ್ಳೇ ಮಾರ್ಕ್‌ಸ್ ಗಳಿಸಿರಬೇಕು ಎಂದು ನಿಬಂಧನೆ ಇಡುವುದು ಎಷ್ಟು ಭಯಂಕರ.

ಶಾಲೆಯಲ್ಲಿದ್ದಾಗ ನಮ್ಮ ಪಿ.ಟಿ.ಟೀಚರನ್ನು ಅಣಕಿಸುವುದು ನನ್ನ ಅಭ್ಯಾಸವಾಗಿತ್ತು. ಒಮ್ಮೆ ಇದನ್ನು ಸಮಾಜಶಾಸ್ತ್ರ ಕಲಿಸುವ ಉಪಾಧ್ಯಾಯರು ನೋಡಿಬಿಟ್ಟರು. ಇನ್ನೇನು ಹತ್ತಿರ ಬಂದು ದಂಡಿಸುತ್ತಾರೆ ಎಂದು ನಾನು ಹೆದರಿ ನಿಂತಿದ್ದೆ. ಇನ್ನೊಂದು ಸಾರಿ ಹೀಗೆ ಮಾಡಿದರೆ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆ ಎನ್ನುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಅವರು ಅದೇನನ್ನೂ ಮಾಡದೆ ‘ ನಾಟಕದಲ್ಲಿ ಒಂದು ಪಾತ್ರ ವಹಿಸುತ್ತೀಯಾ? ಈ ಸಾರಿ ನಾನು ಮಾಡಿಸುತ್ತಿದ್ದೇನೆ’ ಎಂದರು. ನನಗದು ಅತ್ಯಂತ ನಾಟಕೀಯ ಗಳಿಗೆಯಾಗಿ ಮಾತು ಮರೆತು ನಿಂತೆ. ಖಂಡಿತ ನನಗೆ ನಟನಾಗಬೇಕೆಂಬ ಆಸೆಯಿತ್ತು. ಆ ನೆವದಲ್ಲಿ ಸ್ಟೇಜ್ ಹತ್ತಲು ಕಾತರನಾಗಿದ್ದೆ.

ಒಬ್ಬ ನ್ಯೂಸ್ ರಿಪೋರ್ಟರ್ ಪಾತ್ರವನ್ನು ನನಗೆ ಕೊಟ್ಟರು. ಈಗ ನೋಡಿ, ಅದನ್ನುಹೇಗೆ ನಿಭಾಯಿಸಬೇಕು ಎಂಬ ಗೊಂದಲದಲ್ಲಿ ಬಿದ್ದೆ. ಎಂದಿಗೂ ಪತ್ರಿಕೆ ಓದಿದವನಲ್ಲ, ‘ಬಾಂಬೇ ಟೈಮ್‌ಸ್’ ಸಿಕ್ಕರೆ ಕಣ್ಣಾಡಿಸುತ್ತಿದ್ದುದು ಗಾಸಿಪ್ ಕಾಲಂಗಳ ಮೇಲೆ ಮಾತ್ರ. ಹೀಗೇ ಒದ್ದಾಡುತ್ತಿದ್ದಾಗ ಅದೇ ನಾಟಕದಲ್ಲಿ ‘ಟ್ರಾಶ್ ಕಿಂಗ್’ ಪಾತ್ರ ನಿರ್ವಹಿಸುತ್ತಿದ್ದ ನನ್ನ ಜ್ಯೂನಿಯರ್ ಒಂದು ದಿನ ರಿಹರ್ಸಲ್‌ಗೆ ಬರಲಿಲ್ಲ. ಅಧ್ಯಾಪಕರು ನೀನು ಅದನ್ನುಮಾಡು ಎಂದರು. ಸುಮ್ಮನೆ ಅವನ ಬದಲಿಯಂತೆ ನಟಿಸಲು ಬಯಸದ ನಾನು ಅದಕ್ಕೆ ನನ್ನದೇ ತಮಾಷೆಯ ಟಚ್ ನೀಡಿದೆ. ನಿಜಕ್ಕೂ ಖುಷಿ ಆಯಿತು. ಸರಿ, ನ್ಯೂಸ್ ರಿಪೋರ್ಟರ್ ಬದಲು ನೀನು ಟ್ರಾಶ್‌ಕಿಂಗ್ ಆದರೇ ಚೆನ್ನ ಎಂದು ಹೇಳಿಬಿಟ್ಟರು. ಹೀಗಾಗಿ ನಾನು ಸ್ವಯಂಪ್ರತಿಭೆಯಿಂದ ಕಷ್ಟಪಟ್ಟು ಗಳಿಸಿದ ಮೊದಲ ಪಾತ್ರ ಸ್ನೇಹಿತರೇ, ಒಬ್ಬ ಟ್ರಾಶ್ ಕಿಂಗ್‌ದಾಗಿತ್ತು. ಆದರೆ ನನಗದು ದೊಡ್ಡ ಸಂಗತಿಯಾಗಿತ್ತು. ಪಾಪ, ನನ್ನ ಜ್ಯೂನಿಯರ್, ಒಂದು ದಿನ ಗೈರಾಗಿದ್ದಕ್ಕೆ ಪಾತ್ರವೇ ಅವನ ಕೈತಪ್ಪಿ ಹೋಯಿತು. ಮಾರನೇ ದಿನ ಶಾಲೆಗೆ ಬಂದಾಗ ನಾನು ಅದನ್ನು ನಿರ್ವಹಿಸಲಿರುವೆ ಎಂದು ಗೊತ್ತಾಯಿತು. (ಆಮೇಲೆ ಇನ್ನೆಂದೂ ತಪ್ಪಿಸಿಕೊಳ್ಳಲಿಲ್ಲವೆನ್ನಿ.)

ಸರಿ, ವಾರ್ಷಿಕೋತ್ಸವದ ದಿನ ನಮ್ಮ ನಾಟಕ ರಂಗಕ್ಕೇರಿತು. ನಾನು ಕಾಣಿಸಿಕೊಂಡು ಒಂದು ಸಂಭಾಷಣೆ ಹೇಳಿದ್ದೇ ತಡ ಜನ ನಕ್ಕು ಪ್ರೋತ್ಸಾಹಿಸಿದರು. ನನಗದು ಬಹಳ ಹಿತವೆನಿಸಿತು. ಹೀಗೆ ರಂಗದ ಮೇಲೆ ಬೇರೆ ಬೇರೆ ಪಾತ್ರವಾಗುವುದೇ ನನಗೆ ಬೇಕಾದದ್ದು, ನಾನೊಬ್ಬ ಕಲಾವಿದನಾಗಬೇಕು, ಅದೇ ನನಗೆ ಪರಮಪ್ರಿಯ ಎಂಬ ಯೋಚನೆಗಳು ಮೂಡಿದವು. ಅದೊಂದು ಸಂತಸದ ಅನುಭೂತಿ. ಹತ್ತನೇ ತರಗತಿ ಮುಗಿಯುವ ವೇಳೆಗೆ ನನ್ನ ಗುರಿ ಗಟ್ಟಿಗೊಂಡಿತು. ನನ್ನ ತಂದೆಯ ಬಳಿ ಹೋಗಿ ಬಯಸುವೆ ಎಂದು ಹೇಳಿದೆ. ಚೆನ್ನಾಗಿ ಕಲಿಯುವ ಒಬ್ಬ ಹುಡುಗ, ಹೀಗೆ ವಿದ್ಯಾಭ್ಯಾಸಕ್ಕೆ ತೊಡಕಾಗಬಹುದಾದ ನಟನಾವೃತ್ತಿಗೆ ಹೋಗುತ್ತೇನೆ ಎಂದರೆ ಪೋಷಕರಿಗೆ ನಿಜಕ್ಕೂ ಅದೊಂದು ಕಳವಳಕಾರಿ ಸಂಗತಿ.

ಆದರೆ ನನ್ನ ತಂದೆ ಬಹಳ ಶಾಂತವಾಗಿ ಅದನ್ನು ನಿಭಾಯಿಸಿದರು. ಒಂದು ಸಿಂಗಲ್ ಥಿಯೇಟರ್ ಒಡೆಯರಾಗಿದ್ದ (ಈಗ ಮಲ್ಟಿಪ್ಲೆಕ್‌ಷ್ ಹೊಂದಿದ್ದಾರೆ) ಅವರಿಗೆ ಸಿನಿಮಾ ಜಗತ್ತಿನ ಸಂಪರ್ಕ ಚೆನ್ನಾಗಿತ್ತು. ಹಾಗಾಗಿ ‘ಆಯಿತು, ಮಗನೇ, ನಟನಾಗಬೇಕು ಎನ್ನುವುದು ನಿನ್ನ ಆಸೆಯಾದರೆ ನಾನು ಅದಕ್ಕೆ ಅಡ್ಡಿ ಬರುವುದಿಲ್ಲ. ಆದರೆ ಕ್ಷೇತ್ರದಲ್ಲಿ ತುಂಬ ಕಷ್ಟಪಡಬೇಕು ಎಂದು ಅನುಭವದಿಂದ ಬಲ್ಲೆ. ನಿನ್ನೆಲ್ಲ ಪ್ರತಿಭೆ, ಸಮಯ ಪಣಕ್ಕಿಟ್ಟರೂ ನಿನಗೆ ತಕ್ಷಣ ಯಶಸ್ಸು ಸಿಗದೇ ಇರಬಹುದು. ಆದ್ದರಿಂದ ದುರ್ಗಮವಾದ, ಉದ್ದಾನುದ್ದವಾದ ಹಾದಿಯೊಂದನ್ನು ಸವೆಸಲು ತಯಾರಿರಬೇಕು. ಅಷ್ಟಾದ ಮೇಲೆಯೂ ಅದು ನಿನ್ನನ್ನು ಎಲ್ಲಿಗೆ ಕರೆತಂದು ಬಿಡುತ್ತದೆ ಖಚಿತವಿಲ್ಲ. ಎಲ್ಲಿಗಾದರೂ ಕರೆದೊಯ್ಯುತ್ತದೆಯೇ ಹೇಳಲಾಗದು. ಅಷ್ಟೊಂದು ಹತಾಶೆ, ನಿರಾಶೆಗಳಿಗೆ ಅವಕಾಶ ಇರುವ ಪಥ ಅದು ಎಂದು ಎಚ್ಚರಿಸಲು ಬಯಸುತ್ತೇನೆ. ನಿನಗೆ ಏನಾಗಬೇಕೆಂದಿದೆಯೋ ಅದು ಈಡೇರಿಸಿಕೋ, ಅದಕ್ಕೆ ನನ್ನ ಯಾವ ಇಲ್ಲ. ಆದರೆ ಉದ್ಧಾರ-ಪತನ ಎರಡನ್ನೂ ಮಾಡಬಲ್ಲ ಆಯ್ಕೆಯನ್ನು ಸಂಭಾಳಿಸಲು ನಿನ್ನ ಕೈಯಲ್ಲಿ ಸಾಧ್ಯವೇ ಯೋಚಿಸು’ ಎಂದರು.

ಏನು ಮಾರಾಯ, ನಾನಾಗ ಇನ್ನೂ ಹುಡುಗ. ಇಷ್ಟೆಲ್ಲ ಕೇಳಿ ತಣ್ಣಗಾದೆ. ನಟನಾಗಬೇಕೆಂಬ ಆಸೆಯ ಕದ ಮುಚ್ಚಿ, ಕಾಲೇಜು ಅಭ್ಯಾಸದಲ್ಲಿ ತೊಡಗಿಸಿಕೊಂಡೆ. ಅಲ್ಲೂ ಅಷ್ಟೆ. ಸುತ್ತಲಿದ್ದವರೆಲ್ಲ ‘ಸೈನ್‌ಸ್ ತಗೋ’ಎಂದು ಉಪದೇಶಿಸಿದರು. ಆಮೇಲೆ ‘ಎಂಜಿನಿಯರಿಂಗ್ ಓದು’ ಎಂದು ಆಗ್ರಹಿಸಿದರು. ನಾನು ಪಾಲಿಸಿದೆ. ಅದರಲ್ಲಿ ಮತ್ತೆ, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸ್ಪೆಷಲ್ ವಿಷಯವಾಗಿದ್ದರೆ ಒಳ್ಳೆಯದು ಚರ್ಚೆಯಾಯಿತು. ಆದರೆ ನಾನು ಸಿವಿಲ್ ಆರಿಸಿಕೊಂಡೆ.

ಸೆಮಿಸ್ಟರ್, ವರ್ಷಗಳು ಉರುಳಿ, ನಾವೆಲ್ಲ ಅಸೈನ್‌ಮೆಂಟ್, ಜರ್ನಲ್ ಸಲ್ಲಿಸುವ ಸಮಯ. ಒಂದು ದಿನ ಕ್ಲಾಸ್‌ರೂಂನಲ್ಲಿ ಕುಳಿತಿದ್ದೆ. ಒಂದು ವಾರದ ಹಿಂದಿನಿಂದ ಮನಸ್ಸಿನಲ್ಲಿ ಅದೇ ಗುಂಗು. ಅಭಿನಯ ಕಲೆಯನ್ನು ನಾನು ಬೆಂಬತ್ತಬೇಕಿತ್ತು. ಪ್ರತಿ ವರ್ಷ ಏನೆಲ್ಲ ದೊಡ್ಡ ಸಂಗತಿಗಳು ಸಿನಿಮಾ ಕ್ಷೇತ್ರದಲ್ಲಿ ಸಂಭವಿಸುತ್ತಿವೆ. (ಅದೇ ವರ್ಷ ಟೀವಿಯಲ್ಲಿ ‘ಮಹಾಭಾರತ’ ತೆರೆ ಕಂಡಿತು. ಸಾಕಷ್ಟು ಕಲಾವಿದರು ಅದರಿಂದಾಗಿ ಬೆಳಕು ಕಂಡರು. ಎಷ್ಟೊಂದು ಹೊಸ ನಟ-ನಟಿಯರು ಪ್ರವೇಶಿಸುತ್ತಿದ್ದಾರೆ. ನಾನು ಸುಮ್ಮನುಳಿದು ತಪ್ಪು ಮಾಡಿದೆ…ಇದೇ ಆಲೋಚನೆ ಪೇರಿಸಿಕೊಳ್ಳುತ್ತಾ ಹೋಗಿ, ಒಂದು ದಿನ ನಾನು ಅಕ್ಷರಶಃ ಸಿಡಿದೆ. ಕಾಲೇಜಿನಿಂದ ಓಡಿಬಂದು ಮನೆಯಲ್ಲಿ ಕೂತು ಮನಃಪೂರ್ವಕ ಅತ್ತೆ.

ಏನೋ ಆರಿಸಿಕೊಂಡು, ಏನೋ ಓದುತ್ತಾ ಇರುವುದು…ಇದು ನನ್ನ ಅಸ್ಮಿತೆಯಲ್ಲ. ಇದು ನಾನಲ್ಲ. ನನಗೆ ಬೇಕಾಗಿರುವುದು ಬೇರೇನೋ ಇದೆ. ನನಗೆ ಪ್ರತಿಭೆಯಿರುವ ಆ ಇನ್ನೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ ಎಂದು ತೀವ್ರವಾಗಿ ಅನಿಸಿ ಮತ್ತೆ ತಂದೆಯ ಬಳಿ ಓಡಿದೆ. ಈ ಬಾರಿ ಅವರಿಗೆ ಆಸೆಯ ಉತ್ಕಟತೆ ಮನವರಿಕೆಯಾಯಿತು. ಆಯಿತು, ನಿನ್ನಿಚ್ಛೆಯಂತೆಯೇ ಆಗಲಿ. ನಟನಾಗುವ ಅವಕಾಶಕ್ಕಾಗಿ ಕಾಯಿ. ಬದುಕು ಒಂದು ದಾರಿ ತೋರಿಸುತ್ತದೆ ಎಂದು ಸಂತೈಸಿದರು. ಸರಿಯಾಗಿ ಒಂದು ತಿಂಗಳ ನಂತರ ನನ್ನ ಫೇಸ್‌ಬುಕ್ ‘ಫೀಡ್’ನಲ್ಲಿ ಆರೂವರೆ ಸೆಕೆಂಡ್‌ಗಳ ಒಂದು ವಿಡಿಯೋ ನೋಡಿದೆ. ಗೆಳೆಯರೇ, ಅದು ಡೇವಿಡ್ ಲೋಪೆಜ್ ಎಂಬಾತ ನಿರ್ಮಿಸಿದ್ದ ಕೇವಲ ಆರೂವರೆ ಕ್ಷಣಗಳ ವಿಡಿಯೋ. ನನ್ನ ಜೀವನದ ಗತಿಯನ್ನೇ ಅದು ಬದಲಿಸಲಿದೆ ಎಂದು ಆಗ ಅನ್ನಿಸಿರಲಿಲ್ಲ.

ಅದೊಂದು ತಮಾಷೆಯ ವಿಡಿಯೋ. ಮನರಂಜನೆಯ ಪ್ರಕಾರದಂತೆ ಅದು ತೋರಿತು. ನಮ್ಮ ನಿರೂಪಕ ಅಳವಡಿಸಿದ ‘ವೈನ್’ ಯರಾದರೂ ಆರೂವರೆ ಕ್ಷಣ ಅವಧಿಯ ವಿಡಿಯೋ ತಯಾರಿಸಿ, ಪ್ರಸರಣಗೊಳಿಸಬಹುದಾದ ಒಂದು ಆ್ಯಪ್-ಸಾಫ್‌ಟ್ವೇರ್ ಸಾಧನ ಎಂಬುದು ಗೊತ್ತಾಯಿತು. ಹಾಸ್ಯ, ಸಂಗೀತ, ಕವಿತೆ…ಅದರ ವಿಷಯ ಈ ಯಾವುದೂ ಆಗಿರಬಹುದು. ನಾನೂ ‘ವೈನ್’ ಪ್ರಕಾರದಲ್ಲಿ ಒಂದು ಕೈ ನೋಡಬೇಕು ಎಂದು ಸಜ್ಜುಗೊಂಡೆ. ಇಲ್ಲಿ ನಿಮ್ಮ ಮುಂದೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ, ಅಂತಾರಾಷ್ಟ್ರೀಯ ‘ವೈನರ್‌ಸ್’ರಿಂದ ಧಾರಾಳವಾಗಿ ಕಾಪಿ ಹೊಡೆದೆ.

ಅಂತೂ ನನ್ನದೊಂದು ಸ್ವಂತ ‘ವೈನ್’ ಅಪ್‌ಲೋಡ್ ಮತ್ತು ನೋಟಿಫಿಕೇಶನ್‌ಸ್ಗೆ ಕಾಯುತ್ತಾ ಕುಳಿತೆ. ಅದೋ, ಒಂದು ಬಂತು. ನೋಡಿ ಎದೆ ಧಸಕ್ಕೆಂದಿತು. ತಡಮಾಡದೆ ಅದನ್ನು ಅಳಿಸಿಹಾಕಿದೆ. ಎರಡನೆಯದು, ಮೂರನೆಯದು…ಹೀಗೇ ಮುಂದುವರಿಯುತ್ತಾ ಬರೀ ನೆಗೆಟಿವ್ ಕಾಮೆಂಟ್‌ಗಳೇ ಬಂದವು. ನಾನೂ ಹಟ ಬಿಡದೆ ಎಲ್ಲವನ್ನೂ ಅಳಿಸುತ್ತ ಒಂದು ಮೆಚ್ಚುಗೆಯ ಮಾತಿಗೆ ಕಾದೆ. ನೀವೂ ಕಲಿತುಕೊಳ್ಳಿ, ನಿಮ್ಮಿಂದ ಎಲ್ಲ ನೇತ್ಯಾತ್ಮಕತೆಯನ್ನು ಸಾರಾಸಗಟು ತೆಗೆದು ಹಾಕಬೇಕೆಂದರೆ ಹೀಗೇ ಮಾಡಬೇಕು!

ಮೂರು ವಿಡಿಯೋಗಳು ಅಪ್‌ಲೋಡ್ ಆದ ಮೇಲೆ ನಕಲು ಮಾಡುವುದು ಬೇಜಾರಾಯಿತು. ‘ಏನಾದರೂ ‘ದೇಸಿ’ ನಿನ್ನ ದೇಶದ್ದು, ನೀನೇ ಸ್ವತಃ ಯೋಚಿಸಿದ್ದು’ ಎಂದು ನನ್ನನ್ನು ನಾನು ಹುರಿದುಂಬಿಸಿಕೊಂಡೆ. ಪ್ರತಿ ಹುಡುಗಿ ಸುಲಭವಾಗಿ, ಇಷ್ಟವಾಗಿ ಬೇಯಿಸುವ ‘ಮ್ಯಾಗಿ’ಯನ್ನು ವಸ್ತುವಾಗಿ ಆರಿಸಿಕೊಂಡು ನನ್ನ ಪ್ರಥಮ ವೈನ್ ನಿರ್ಮಿಸಿದೆ. ಗೆಳೆಯರೆ, ಅದು ಭಾರಿ ಯಶಸ್ವಿಯಾಯಿತು. ಆ ಬಳಿಕ ಹೊಸ ನೋಟ, ರುಚಿ ಹೊಂದಿರುವ ವಿಡಿಯೋಗಳನ್ನು ನಾನು ಒಂದಾದಮೇಲೊಂದರಂತೆ ತಯಾರಿಸಿದೆ. ದೈನಿಕದ ಮಾಮೂಲಿ ಸಂಗತಿಗಳು, ಸುತ್ತಲಿನ ಮಾಮೂಲಿ ಜನರನ್ನೇ ವಸ್ತು-ವಿಷಯ ಮಾಡಿಕೊಂಡೆ. ಅಂದಹಾಗೆ, ಈ ಮಧ್ಯೆ ಎಂಜಿನಿಯರಿಂಗ್ ಸಹ ಮುಂದುವರಿಸಿದ್ದೆ ಹೇಳುವುದನ್ನು ಮರೆಯುವಂತಿಲ್ಲ…

ನನ್ನ ಪ್ರಯೋಗಗಳಿಗೆ ಶುರುವಿನಲ್ಲಿ 200 ಬೆಂಬಲಿಗರು ಇದ್ದದ್ದು ಈಗ ಅವರ ಸಂಖ್ಯೆ 2,77,000ಕ್ಕೆ ಏರಿದೆ. ಅಂತೂ ಸೋಷಿಯಲ್ ಮೀಡಿಯಾದಿಂದ- ಎಷ್ಟೋ ಜನರಿಗೆ ಆದಂತೆ- ನನ್ನ ಜೀವನದಲ್ಲಿಯೂ ಏನೋ ಪರಿವರ್ತನೆ ಆಯಿತು. ನಿಮ್ಮ ವಿಷಯದಲ್ಲಿಯೂ ಅದು ನಿಜವಾಗಬಹುದು. ಮನಃಪೂರ್ವಕ ಪ್ರಯತ್ನಿಸಬೇಕಷ್ಟೆ. ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆಂದರೆ, ಪ್ರತಿಭೆಯನ್ನು ಹತ್ತಿಕ್ಕಿದರೆ ಯಾವುದೋ ಒಂದು ಬಿರುಕಿನಿಂದ ಅದು ಒಸರಲಾರಂಭಿಸುತ್ತದೆ. ನನ್ನ ಬದುಕಿನಲ್ಲಿ ಅಂತರ್ಜಾಲ ಅಂತಹ ಒಂದು ಬಿರುಕಾಯಿತು. ಬದುಕು ಯಾವುದೋ ಕಂಡುಕೊಳ್ಳುತ್ತದೆ ಎಂದು ನನ್ನ ತಂದೆ ಹೇಳಿದ ಹಾಗೆ, ಪ್ರತಿಭೆಯೂ ತನಗೆ ಬೇಕಾದ ಮಾರ್ಗ ತಾನೇ ಹುಡುಕುತ್ತದೆ. ನನ್ನ ಬದುಕಿನಲ್ಲಿ ಅಂತರ್ಜಾಲ ಅಂತಹ ಒಂದು ಬಿರುಕಾಯಿತು.

ಈಗ ಅದು ಇನ್ನೂ ದೊಡ್ಡದಾಗಿದೆ. ಹೆಚ್ಚು ಜನರನ್ನು ಒಳಗೊಳ್ಳಬಲ್ಲುದಾಗಿದೆ. ಅದಕ್ಕೆ ಯಾರಿಗಾದರೂ, ಯಾವುದಕ್ಕಾದರೂ ಪ್ರಸಿದ್ಧಿ ತಂದುಕೊಡುವ ತಾಕತ್ತಿದೆ. ಆಡಿಷನ್‌ಗಳಿಗೆಂದು ಮುಂಬಯಿಗೋ ಮತ್ತೆಲ್ಲಿಗೋ ಹೋಗುವ ಗೋಜೇ ಈಗ ಇಲ್ಲ. ಇಂಟರ್‌ನೆಟ್ ಈಗ ಯಾರಾದರೂ ಆರಿಸಿಕೊಳ್ಳಬಹುದಾದ ರಂಗಮಂಚ. ನಿಮಗೂ ಪರಿಚಿತವಾಗಿರಬಹುದಾದ ಹಿಂದಿ ಚಿತ್ರರಂಗದ ಆಡಿಷನ್‌ಗಳಲ್ಲಿ ಪ್ರತಿ ಲಕ್ಷಗಟ್ಟಲೆ ಕಲಾವಿದರು ಭಾಗವಹಿಸುತ್ತಾರೆ. ಅವರಲ್ಲಿ ಒಬ್ಬರಿಗೆ ಪಾತ್ರ ದೊರೆಯುತ್ತದೆ. ಉಳಿದವರು ನಿರಾಶರಾಗಿ ವಾಪಸಾಗುತ್ತಾರೆ. ಬೇಕಾದಷ್ಟು ಸಿನಿಮಾಗಳು ತಯಾರಾಗುತ್ತಿವೆ, ಬಂಡಿಗಟ್ಟಲೆ ನಿರ್ದೇಶಕರು ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದಾರೆ ಎಂದರೂ ಬೆರಳೆಣಿಕೆಯ ಕೆಲವರಿಗೆ ಅವಕಾಶಗಳು ದೊರೆಯುತ್ತವೆ. ಅದು ಅವರ ನೈಜ ಯೋಗ್ಯತೆಯ ಕಾರಣದಿಂದಲೇ ಅಥವಾ ಪ್ರಭಾವಿಗಳ ಸಂಪರ್ಕ ಅವರಿಗೆ ಇರುವುದರಿಂದಲೇ ಎಂಬುದು ಬಗೆಹರಿಯದ ವಿಚಾರ. ಇಂಥ ವೇಳೆ ಸೋಷಿಯಲ್ ಮೀಡಿಯಾ ಒಂದು ಪರ್ಯಾಯವಾಗಿ ಕಾಣಿಸುತ್ತದೆ. ಅದೇ ಅಸಂಖ್ಯ ಪ್ರತಿಭಾನ್ವಿತರಿಗೆ ತೆರೆದುಕೊಂಡ ಸುವರ್ಣಾವಕಾಶವಾಗಿದೆ.

ನಾನಷ್ಟೇ ಉತ್ತಮ ಪ್ರತಿಭೆಗಳು, ಕೇವಲ ರೋಚಕತೆ ನೆಚ್ಚಿಕೊಂಡವರು (ಕಮಾಲ್ ಆರ್ ಖಾನ್ ಇದಕ್ಕೆ ಉದಾಹರಣೆ) ಹೀಗೆ ಎಲ್ಲರನ್ನೂ ಅಂತರ್ಜಾಲ ಬರಮಾಡಿಕೊಂಡಿದೆ. ಒಂದು ಅಂತಾರಾಷ್ಟ್ರೀಯ ಉದಾಹರಣೆ ನೀಡಬೇಕೆಂದರೆ, ಲೋಗನ್ ಪಾಲ್ ಎಂಬಾತ ವಾಸಿಸುವುದಕ್ಕೆ ಮನೆಯೂ ಇಲ್ಲದೆ ಬೀದಿಯಲ್ಲಿದ್ದ ನಿರಾಶ್ರಿತನಾಗಿದ್ದ. ತನ್ನ ವೈನರ್ ಕರಿಯರ್‌ಅನ್ನು ರಸ್ತೆಯಿಂದಲೇ ಆರಂಭಿಸಿದ ಆತನ ಬಳಿ ಇದ್ದುದು ಕೇವಲ ಒಂದು ಮೊಬೈಲ್ ಇಂಟರ್‌ನೆಟ್ ಸಂಪರ್ಕ. ಇಂದಾತ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾನೆ. ವಿಶ್ವದ ಅತಿ ಹೆಚ್ಚು ಫಾಲೋಯರ್‌ಸ್ ಹೊಂದಿರುವ ವೈನರ್ ಆಗಿದ್ದಾನೆ.

ಇಂದು ಕೇವಲ ಸುದ್ದಿ ಬಿತ್ತರಿಸುವ ಅಥವಾ ಜನರನ್ನು ಸಂಪರ್ಕದಲ್ಲಿರಿಸುವ ಮಾಧ್ಯಮವಾಗಿ ಅಷ್ಟೇ ಉಳಿದಿಲ್ಲ. ವಿಶ್ವದ ಬೃಹತ್ ವಾಣಿಜ್ಯ ಕಂಪನಿಗಳು ಅದರಲ್ಲಿ ‘ವೆಬ್ ಸೀರೀಸ್’ ಪ್ರಸಾರ ಮಾಡುತ್ತಿವೆ. ನೆಟ್‌ಫ್ಲಿಕ್‌ಸ್ನಂತಹ ಸಂಸ್ಥೆಗಳು ಇಂದು ಮನೆಮಾತಾಗಿವೆ. ಅವು ಬಿತ್ತರಿಸುತ್ತಿರುವ (ಸ್ಟ್ರೀಮಿಂಗ್) ಅನೇಕ ಕಾರ್ಯಕ್ರಮಗಳನ್ನು ನೀವೆಲ್ಲ ಖಂಡಿತ ವೀಕ್ಷಿಸಿರುತ್ತೀರಿ. ಮಾಡುತ್ತಿಲ್ಲ. ಯಾವುದೇ ಕತ್ತರಿ ಪ್ರಯೋಗವಿಲ್ಲ, ವಿಶ್ವದ ಎಲ್ಲೆಡೆ ಇರುವ ವೀಕ್ಷಕರನ್ನು ನೇರವಾಗಿ ತಲುಪಬಹುದು ಮುಂತಾದ ಅನುಕೂಲಗಳು ಈ ದಿಟ್ಟ ಪ್ರಯತ್ನಗಳಿಗೆ ದಕ್ಕಿವೆ.

ಒಟ್ಟಾರೆ ಹೇಳಬೇಕೆಂದರೆ, ಅತ್ಯಂತ ಯಶಸ್ವಿಯಾಗಿ ಈ ಮಾಧ್ಯಮ ಬಳಸಿದ್ದೇನೆ ಅಂತಲ್ಲ. ಹಣ ನನ್ನ ಜೇಬಿನಲ್ಲಿ ತುಂಬಿ ತುಳುಕುತ್ತಿದೆ ಎಂದೂ ಅಲ್ಲ…ಅಂತರ್ಜಾಲವನ್ನು ನನ್ನ ಪ್ರತಿಭೆಯ ಮಾಧ್ಯಮವಾಗಿ ಬಳಸಿಕೊಂಡಿರುವುದು ನನಗೆ ತುಂಬ ಸಂತಸ ತಂದಿದೆ. ಎಲ್ಲರೂ ಅಂದರೆ ಒಂದು ಅಭಿವ್ಯಕ್ತಿ ಬೇಕಾದ ಎಲ್ಲರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವಕಾಶ ಸಿಕ್ಕಿರುವುದು ಬಹಳ ಕ್ರಾಂತಿಕಾರಿ ಸಂಗತಿ. ನಟರು, ಗಾಯಕರಷ್ಟೇ ಅಲ್ಲ, ಉತ್ತಮ ವೇದಿಕೆ ದೊರೆತಿರದ ಪ್ರತಿಭಾನ್ವಿತ ಬಾಣಸಿಗರು ಅದನ್ನು ಬಳಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಎಲ್ಲ ಸಾಂಪ್ರದಾಯಿಕ ವೇದಿಕೆಗಳನ್ನು ಅಂತರ್ಜಾಲ ಇಂದು ಒಂದು ಮಹಾನ್ ವೇದಿಕೆಯಾಗಿದೆ.

ಆದ್ದರಿಂದ ಮಿತ್ರರೇ, ಯಾವುದಾದರೂ ಆಸೆಯನ್ನು, ಕನಸನ್ನು, ಮಹತ್ವಾಕಾಂಕ್ಷೆಯನ್ನು ನಿಮ್ಮಲ್ಲೇ ಬಚ್ಚಿಟ್ಟುಕೊಂಡಿದ್ದರೆ, ಅದನ್ನು ಹೊರಗೆಳೆಯಲು ಇದು ಸಕಾಲ. ಇಷ್ಟವಿರದ ಯಾವುದೋ ವೃತ್ತಿ ಮಾಡುತ್ತಾ ನೀರಸ ಜೀವನ ನಡೆಸುವುದನ್ನು ಬಿಡಿ. ನಿಮ್ಮೆಲ್ಲ ಪ್ರತಿಭೆಗಳನ್ನು ‘ಶೋಕೇಸ್’ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಯುಕ್ತವಾಗಿ ಬಳಸಿ ಎನ್ನುವುದಷ್ಟೇ ನನ್ನ ಸಂದೇಶ.

ಪರಿಚಯ: ಇಪ್ಪತ್ತೇಳರ ಹರೆಯದ ಆಶೀಶ್ ಚಂಚಲಾನಿ, ಮಹಾರಾಷ್ಟ್ರ ಮೂಲದವರು. ಚಲನಚಿತ್ರೋದ್ಯಮದಲ್ಲೇ ತೊಡಗಿದ್ದ ಕುಟುಂಬದ ಹಿನ್ನೆಲೆ ಅವರದು. ಅಕ್ಷಯ್ ಕುಮಾರ್ ಅವರಿಂದ ಸ್ಫೂರ್ತಿಗೊಂಡವರು. ಆದರೆ ಎಂಜಿನಿಯರಿಂಗ್ ಶಿಕ್ಷಣದಲ್ಲಿ ತೊಡಗಿ ತಮ್ಮ ನಟನೆಯ ಕನಸುಗಳನ್ನು ಕೆಲ ಕಾಲ ಮುಂದೂಡಿದ್ದರು.

ಇದೀಗ ಮಹಾನ್ ವೇದಿಕೆಯಾದ ಅಂತರ್ಜಾಲ ಬಳಸಿ ಒಬ್ಬ ಯಶಸ್ವಿ ವೈನರ್ ಮತ್ತು ಯೂ ಟ್ಯೂಬ್ ಸೆನ್ಸೇಶನ್ ಆಗಿದ್ದಾರೆ. ಅವರ ಹಾಸ್ಯಪ್ರಧಾನ ವಿಡಿಯೋಗಳು ಮತ್ತು ಅಣಕಗಳು ಅತ್ಯಂತ ಜನಪ್ರಿಯವಾಗಿವೆ. 100ಕ್ಕೂ ಹೆಚ್ಚು ವಿಡಿಯೋಗಳನ್ನು ನಿರ್ಮಿಸಿ ಸುಮಾರು 6 ದಶಲಕ್ಷ ಚಂದಾದಾರವನ್ನುಗಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close