About Us Advertise with us Be a Reporter E-Paper

ಅಂಕಣಗಳು

ತರುಣರನ್ನು ಆಕರ್ಷಿಸುವ ತೇಜಸ್ವಿ ಎಂಬ ಚುಂಬಕ!

ನಚ್ಚು-ಮೆಚ್ಚು: ಸದಾಶಿವ್ ಸೊರಟೂರು ಶಿಕ್ಷಕ

ಕುವೆಂಪು ಕನ್ನಡಕ್ಕೆ ಕೊಟ್ಟಿದೇನು ಅಂತ ಯಾರಾದರೂ ಪ್ರಶ್ನಿಸಿದರೆ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಉತ್ತರವೇ ಪೂರ್ಣಚಂದ್ರ ತೇಜಸ್ವಿ. ಅಪ್ಪನಿಗಿಂತ ತೀರಾ ಭಿನ್ನವಾಗಿ ಬೆಳೆದು ನಿಂತವರು ಅವರು. ಕುವೆಂಪು ಸಾಹಿತ್ಯವನ್ನು ಒಂದು ಕಡೆ ಮತ್ತೊಂದು ಕಡೆ ತೇಜಸ್ವಿಯವರನ್ನು ಇಟ್ಟರೆ ಒಂದು ಔನ್ಸ ಹೆಚ್ಚು ತೇಜಸ್ವಿಯವರೇ ತೂಗಿಯಾರೇನೊ! ಒಮ್ಮೆ ಯಾರೊ ತೇಜಸ್ವಿಯವರನ್ನು ನೀವು ನಿಮ್ಮ ತಂದೆಯಷ್ಟು ಎತ್ತರಕ್ಕೆ ಏರಲಾರರಿ ಅಂದಿದ್ದಕ್ಕೆ ಹೌದು ಕುವೆಂಪು ಕೂಡ ನನ್ನಷ್ಟು ಆಳಕ್ಕೆ ಇಳಿಯಲಾರರು ಅಂತ ಉತ್ತರಿಸಿದ್ದರು. ಯಾವ ಹಂಗಿಗೂ, ಯಾರ ಮುಲಾಜಿಗೂ, ಹೆಸರು, ಕೀರ್ತಿ, ಹಣ, ಪ್ರಶಸ್ತಿ, ಹೊಗಳಿಕೆ, ಸನ್ಮಾನ ಮೊದಲಾದವುಗಳಿಂದ ತುಂಬಾನೇ ದೂರ ಉಳಿದು ಬಾಳಿದ ಕಾಡಿನ ಸಂತ ಅವರು. ಪ್ರಕೃತಿಯ ಮಧ್ಯೆ ಸ್ವಚ್ಛಂದವಾಗಿ ಬಾಳಿದವರು. ಕಾಡಿನಂತಹ ಊರಲ್ಲಿ ಹುಟ್ಟಿ ನಾಡಿಗೆ ಬಂದು ಮತ್ತೆ ಕಾಡಿಗೆ ಮರಳಿ ಕಾಡಿನ ಒಂದಾಗಿ ಹೋದ ತೇಜಸ್ವಿ, ಕನ್ನಡದ ಪಾಲಿಗೆ ದಕ್ಕಿದ ಅಪೂರ್ವ ವ್ಯಕ್ತಿತ್ವ.

 ತೇಜಸ್ವಿಯವರು ಬದುಕಿದ್ದರೆ ಈ ವೇಳೆ ಅವರಿಗೆ ಎಂಬತ್ತು ವರ್ಷ ವಯಸ್ಸಾಗಿರುತ್ತಿತ್ತು. ಅವರು ತಮ್ಮ ಹುಟ್ಟಿದ ಹಬ್ಬವನ್ನು ಕಾಡಿನ ಯಾವುದೋ ಮೂಲೆಯಲ್ಲಿ ಹಕ್ಕಿಗಳನ್ನು ಹುಡುಕುತ್ತಾ, ಮೀನನ್ನು ಹಿಡಿಯುತ್ತಾ, ಕರಿಯಪ್ಪನ ಜೊತೆ ಬಿರಿಯಾನಿ ತಿನ್ನುತ್ತಾ ಎಂಗ್ಟ, ಮಂದಣ್ಣನ ಜೊತೆ ಕಾಡು ತಿರುಗುತ್ತಾ ಆಚರಿಸುತ್ತಿದ್ದರೊ ಏನೋ! ’ನಿಜಕ್ಕೂ ಮನುಷ್ಯ ಬದುಕುಬೇಕಾದದ್ದು ಹೀಗೆ’ ಅಂತ ಸ್ವತಃ ತಾವೇ ತೋರಿಸಿಕೊಟ್ಟಿದ್ದು ಅವರ ಹೆಗ್ಗಳಿಕೆ.

‘ನಾನು ವಿeನ ಪದವೀಧರನಲ್ಲ, ವಿeನಿಯೂ ಅಲ್ಲ. ನಾನು ಉಚ್ಚ ಶಿಕ್ಷಣ ಪಡೆದಿದ್ದು ಸಾಹಿತ್ಯದಲ್ಲಿ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಮುತ್ತಲಿನ ವಿದ್ಯಮಾನಗಳನ್ನು ನೋಡುತ್ತಾ, ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಬಂದೆ. ನಾನು ಕಂಡ ಪಶು ಪಕ್ಷಿ, ಕ್ರಿಮಿಕೀಟಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಷ್ಟೇ ನಾನು ಅವುಗಳ ಬಗ್ಗೆ ಅಭ್ಯಾಸ ಮಾಡಿದವನು. ನಾನು eನೋಪಾಸಕನಾಗಲೀ, ವಿದ್ವಾಂಸನಾಗಲೀ ಅಲ್ಲ. ಸಾಹಿತ್ಯವೇ ನನ್ನ ಸ್ವಧರ್ಮ. ಹಾಗಾಗಿ ಏನೂ ಬರೆದರೂ ಅದಕ್ಕೆ ಸಾಹಿತ್ಯದ ಪರಿವೇಷ, ಕತೆ, ಕಾದಂಬರಿಗಳ ಛಾಯೆ ಇರುತ್ತದೆ’ ಅನ್ನುವ ಅವರ ಈ ಮಾತುಗಳಲ್ಲಿ ಅವರ ವ್ಯಕ್ತಿತ್ವ ಇದೆ. ತೇಜಸ್ವಿ ಇಂದಿಗೂ ನಮಗೆ ಯಾಕೆ ಕಾಡುವಷ್ಟು ಇಷ್ಟವಾಗ್ತಾರೆ ಅಂದರೆ ಅವರ ಈ ನೇರವಂತಿಕೆಗೆ! ಇಂತಹ ವಿಚಾರಗಳಿಂದಲೇ ಅವರು ನಮ್ಮಗಳ ಮಧ್ಯೆ ಇಂದಿಗೂ ಜೀವಂತ.

‘ಯುವಕರಿಗೇಕೆ ತೇಜಸ್ವಿ ಇಷ್ಟ?’ ಆರೇಳು ತಿಂಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಮಳಿಗೆಗೆ ಪುಸ್ತಕಕೊಳ್ಳಲು ಹೋದಾಗ ಅಲ್ಲಿಯವರನ್ನು ಕೇಳಿz. ‘ಇಂದಿಗೂ ಹೆಚ್ಚು ಮಾರಾಟವಾಗುವ ಪುಸ್ತಕಗಳು ಯಾವುವು?’ ಎಂದು ಪ್ರಶ್ನಿಸಿz. ‘ತೇಜಸ್ವಿಯವರ ಪುಸ್ತಕಗಳಿಗೆ ಬೇಡಿಕೆ ಇದೆ; ಅದರಲ್ಲೂ ತೇಜಸ್ವಿಯವರ ಪುಸ್ತಕ ಕೇಳುವ ಮಂದಿಯಲ್ಲಿ ಯುವಕರೇ ಹೆಚ್ಚು’ ಅಂದಿದ್ದರು. ತೇಜಸ್ವಿ ಯುವಕರ ಪಾಲಿಗೆ ಇಂದಿಗೂ ಹಾಟ್ -ವರಿಟ್! ಕನ್ನಡ ಸಾಹಿತ್ಯದಲ್ಲಿ ಸಂಶೋಧನೆಗೆ ತೊಡಗಿಕೊಂಡಿರುವ ವಿದ್ಯಾರ್ಥಿಯೊಬ್ಬ ನನ್ನ ಬಳಿ ಹೇಳಿಕೊಂಡ ಅನುಭವ ಎಷ್ಟು ಸೊಗಸಾಗಿದೆ ಕೇಳಿ, ‘ತೇಜಸ್ವಿಯವರ ಪುಸ್ತಕ ಹಿಡಿದು ಬಸ್ಸಿನಲ್ಲೋ, ರೈಲಿನ, ರಸ್ತೆಯಲ್ಲೋ ನಡೆದುಹೋಗುತ್ತಿದ್ದರೆ ನಮ್ಮ ಕಡೆ ನೋಡುವವರು ಪುಸ್ತಕದೊಂದಿಗೆ ನಮ್ಮನ್ನು ಕೂಡ ಒಂದು ತೂಕದ ನೋಡುತ್ತಾರೆ, ತೂಕದ ಪುಸ್ತಕ ಓದುವವರು ತೂಕದವರಲ್ಲದೆ ಇನ್ನೇನು ಎಂಬ ಭಾವ ಅವರದು!’ ಅದು ನನಗೂ ಕೂಡ ಅನೇಕ ಬಾರಿ ಅನುಭವಕ್ಕೆ ಬಂದಿದೆ. ಅದು ಸತ್ಯವೂ ಕೂಡ. ಇಂದಿಗೂ ತೇಜಸ್ವಿ ನಾಡಿನ ಯುವಕರ ಮನದಲ್ಲಿ ಅವರು ಹಸುರಾಗಿಯೇ ಇzರೆ. ಇದಕ್ಕೆ ಕಾರಣ ಅವರ ಒಂದು ವಿಶ್ವವಿದ್ಯಾಲಯದಂತಹ ವ್ಯಕ್ತಿತ್ವ ಮತ್ತು eನ. ವಿಶೇಷವೆಂದರೆ ಅವರೆಲ್ಲೂ ತಾವೊಬ್ಬ ಸಾಹಿತಿಯೆಂದಾಗಲಿ, ಹೋರಾಟದ ನಾಯಕನೆಂದಾಗಲಿ, ಪ್ರಕೃತಿಯ ಆರಾಧಕನೆಂದಾಗಲಿ ಹಾಗೂ ಮತ್ಯಾವುದೊ ಲೇಬಲ್ ನಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅವರು ಕೇವಲ ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಿದರು ಮತ್ತು ಹಾಗೆ ಇದ್ದರು ಕೂಡ. ‘ಮನುಷ್ಯರನ್ನು ಮನುಷ್ಯರಂತೆ ನೋಡುವುದೇ ಧರ್ಮ, ಅವರನ್ನು ಕೊಂದು ಉಳಿಸಿಕೊಳ್ಳಬೇಕಾದ್ದು ಅನ್ನುವುದಾದರೆ ಅದೊಂದು ಧರ್ಮವಾ?’ ಎಂಬ ಅವರ ಮಾತು ಅವರು ಬದುಕಿದ ರೀತಿಯನ್ನು ಹೇಳುತ್ತದೆ.

‘ನಾನು ಬರೆಯಬೇಕು ಅಂದುಕೊಂಡವನಲ್ಲ, ಬರವಣಿಗೆ ನನ್ನ ಕ್ಷೇತ್ರವೇ ಅಲ್ಲ.ಛಾಯಾಚಿತ್ರ ಗ್ರಹಣ ನನ್ನ ಆಸಕ್ತಿಯ ಕ್ಷೇತ್ರ. ಬಹುಜನ ನನ್ನ ಸಾಹಿತಿ ಅಂದು ಅಂದು ಬರೆಯುವಂತೆ ಮಾಡಿದರು. ಅದರಲ್ಲಿ ಒಂದಿಷ್ಟು ಜಾಸ್ತಿ ಎಂಬಂತೆ ತೊಡಗಿಕೊಂಡೆ’ ಅನ್ನುತ್ತಾರೆ. ತಮ್ಮ ಬರವಣಿಗೆಯಲ್ಲಿ ಸಾಕಷ್ಟು ಸರಳವಾಗಿಯೆ ಅದು ಯಾವುದೇ ವಿಷಯವಾದರೂ ಕೂಡ ಅದಕ್ಕೊಂದು ಸಾಹಿತ್ಯ ದಿರಿಸು ತೊಡಿಸಿ ಮಂಡಿಸುವ ಅವರ ಶೈಲಿ ಯುವಕರಿಗೆ ಆಪ್ತ! ಕಣ್ಣಿಗೆ ಹೊಡೆಯುವ ಅತೀವ ಕಲ್ಪನೆ, ಪದಗಳ ಅದ್ದೂರಿತನ, ಪದಗಳಿವೆ ಅಂತ ಅತೀ ಧಾರಾಳ ಬಳಕೆ, ಪಾಂಡಿತ್ಯ ಪ್ರದರ್ಶನದ ಚಪಲ… ಇವು ಯಾವನ್ನೂ ಅವರಲ್ಲಿ ಕೇಳಲೇ ಬೇಡಿ. ತಮ್ಮ ಮುಂದಿರುವ ವ್ಯಕ್ತಿಗಳನ್ನೇ ಪಾತ್ರಗಳನ್ನಾಗಿ ಬಳಸಿಕೊಂಡು ತೀರಾ ಸಣ್ಣ ಸಣ್ಣ ವಿಚಾರಗಳೊಳಗೆ ಇರುವ ಬದುಕಿನ ಘನತೆಯನ್ನು ತೋರಿಸುವ ಪ್ರಯತ್ನ ಅವರದು. ಅದಕ್ಕೆಂದೇ ತೇಜಸ್ವಿ ಇಷ್ಟವಾಗುತ್ತಾರೆ. ನವ್ಯದಿಂದಲೇ ಬರವಣಿಗೆ ಆರಂಭಿಸಿದರೂ ಮುಂದಿನ ದಿನಗಳಲ್ಲಿ ಅದನ್ನು ದಾಟುವ ಪ್ರಯತ್ನವನ್ನು ಮಾಡಿ ಯಾವ ಹೇರುವಿಕೆಗೂ ಒಳಗಾಗದೆ ಅವರು ಬರೆದೇ ಬರೆದರು.

ಬರವಣಿಗೆಯೊಂದಿಗೆ, ತೇಜಸ್ವಿ ವ್ಯಕ್ತಿತ್ವ, ಅವರು ಬೆಳೆಸಿಕೊಂಡ ಹವ್ಯಾಸಗಳು ಸಹ ಅವರತ್ತ ನಮ್ಮನ್ನು ಸೆಳೆಯುತ್ತವೆ. ಗಾಳ ಹಾಕಿ ದಿನಗಟ್ಟಲೆ ಮೈ ಮರೆತು ಮೀನು ಹಿಡಿಯುವುದು, ತನ್ನ ಬರಹಗಳಿಗೆ ಅಲ್ಲಿ ಹೊಸ ಹೊಳಹುಗಳನ್ನು ಹುಡುಕುವುದು, ಹೆಚ್ಚಿನ ಬಾರಿ ಹಿಡಿದ ಮೀನನ್ನು ನೋಡಿ ಒಂದು ಪುಟ್ಟ ಅಭ್ಯಾಸ ನಡೆಸಿ ಮತ್ತೆ ನೀರಿಗೆ ಬಿಡುವುದು, ಶಿಕಾರಿಗಾಗಿ ಕಾಡು ಅಲೆಯುತ್ತಾ ಕಾಡಿನ ಒಗಟುಗಳನ್ನು ಬಿಡಿಸುತ್ತಾ ಸಾಗುವ ಅವರ ಕುತೂಹಲಗಳು ನಮ್ಮನ್ನು ಕಾಡುತ್ತವೆ. ಮರಗಿಡಗಳೊಂದಿಗೆ ಒಂದಾಗಿ ಕೂತು ಪಕ್ಷಿಗಳ ಚಿತ್ರ ತೆಗೆಯುವ ಧ್ಯಾನಸ್ಥ ಸ್ಥಿತಿ ಅವರಿಗೆ ಮೌನದ ಮಾತಾಡಿಕೊಳ್ಳುವುದನ್ನು ಕಲಿಸಿಕೊಟ್ಟಿತು. ಅವರ ಕ್ಯಾಮೆರಾ ಕ್ರೇಜಿನ ಬಗ್ಗೆ ಓದಿದ ಇಂದಿನ ಯುವಕರು ಆಶ್ಚರ್ಯಪಡುತ್ತಾರೆ.

ತಾನಾಯ್ತು ತನ್ನ ಪಾಡಾಯ್ತು ಅಂತ ಕಾಡಿನೊಳಗೆ ಸೇರಿಕೊಂಡು ಇದ್ದು ಬಿಡಲಿಲ್ಲ. ಅಲ್ಲಿದ್ದುಕೊಂಡೇ ನಾಡು ನುಡಿಗಾಗಿ ತುಡಿದ ಜೀವ ಅದು. ರೈತ ಮುಖಂಡನಾಗಿ ರೈತರ ಪರವಾದ ಹೋರಾಟ, ಭಾಷೆಯ ಕುರಿತಾದ ಅವರ ಕಾಳಜಿಗಳು, ಯೂನಿಕೋಡ್ -ಂಟ್ ಗಾಗಿ ಅವರು ಮಾಡಿದ ಪ್ರಯತ್ನಗಳು, ಧರ್ಮದ ವಿಷಯದಲ್ಲಿ ಅವರು ಹೊಂದಿದ್ದ ನಿಲುವುಗಳು ಇಂದಿಗೂ ಮಾದರಿ ಮತ್ತು ಕ್ರಾಂತಿಕಾರಿ.

ತಮ್ಮ ಬರವಣಿಗೆಗಿಂತ ಹೆಚ್ಚು ಬರೀ ವೇದಿಕೆಯ ಮೇಲೆ ಕಾಣಿಸಿಕೊಂಡು ಹೆಸರು ಬಾಚುವ, ನಾಲ್ಕು ಪುಸ್ತಕ ಬರೆದ ಮಾತ್ರಕೆ ಸಾಹಿತಿ ಎಂದು ಹೇಳಿಕೊಳ್ಳುವ, ಸದಾ ಒಂದಂದು ವ್ಯತಿರಿಕ್ತವಾದ ಹೇಳಿಕೆ ಕೊಡುತ್ತಾ ಜನರ ಬಾಯಲ್ಲಿ ಉಳಿಯಲು ಪ್ರಯತ್ನಿಸುವ, ತಾವು ಬರೆದಿz ಅದ್ಭುತ ಸಾಹಿತ್ಯವೆಂದು ಬೀಗುವ, ಕೇವಲ ಹಣ, ಪ್ರಶಸ್ತಿಯೆ ಪ್ರಮುಖವಾಗಿಟ್ಟುಕೊಂಡು ಬರೆಯುವ, ಬರವಣಿಗೆಯೆ ಬೇರೆ ಬದುಕೇ ಬೇರೆ ಎಂಬಂತೆ ಇರುವ ನಿತ್ಯದ ವ್ಯಕ್ತಿತ್ವಗಳನ್ನು ಕಾಣುತ್ತಿರುವ ಯುವಕರಿಗೆ ತೇಜಸ್ವಿ ಅದ್ಭುತವೆನಿಸುತ್ತಾರೆ. ಅವರ ವಿಭಿನ್ನ ಬದುಕು ಮತ್ತು ಬರವಣಿಗೆಯಲ್ಲಿ ಯುವಕರಿಗೆ ಒಂದು ಅಯಸ್ಕಾಂತೀಯ ಆಕರ್ಷಣೆ. ತೇಜಸ್ವಿ ವಿಚಾರಗಳೂ ಕೂಡ ಎಂದಿಗೂ ಪ್ರಸ್ತುತ.

Tags

Related Articles

Leave a Reply

Your email address will not be published. Required fields are marked *

Language
Close