ವಿಶ್ವವಾಣಿ

ಆಫ್ರಿಕಾ ಖಂಡದಲ್ಲೀಗ ಉಗ್ರವಾದದ ಕಗ್ಗತ್ತಲೆ

ನಿಮಗೆ ಗೊತ್ತಿದೆಯೋ ಇಲ್ಲವೋ, ನೀವಿದನ್ನು ಓದುತ್ತಿರುವ ಹೊತ್ತಿನಲ್ಲೇ  ಆಫ್ರಿಕದಲ್ಲಿ ಕನಿಷ್ಠ ಐದು ಜಾಗಗಳಲ್ಲಿ ಭಯೋತ್ಪಾದಕರ ಭೀಕರ ಹೊಡೆದಾಟಗಳಾಗುತ್ತಿವೆ. ಜನಸಾಮಾನ್ಯರ ಮೇಲೆ ಮುಗಿಬಿದ್ದ ಉಗ್ರರು ಅವರಲ್ಲಿ ಹಲವರನ್ನು ಬೂಟುಗಾಲುಗಳಿಂದ ಒದೆಯುತ್ತಿದ್ದಾರೆ. ಬಂದೂಕುಗಳ ಹಿಡಿಯಿಂದ ಆ ಅಮಾಯಕರ ತಲೆಗೆ ಬೆನ್ನಿಗೆ ತೊಡೆಗಳಿಗೆ ಕುಟ್ಟುತ್ತಿದ್ದಾರೆ. ಅವರ ಮನೆಯ ಅಕ್ಕಿಬೇಳೆ ಬಲಾತ್ಕಾರದಿಂದ ಅಪಹರಿಸುತ್ತಿದ್ದಾರೆ. ಅವರ ಮನೆಯ ಹೆಣ್ಣುಗಳನ್ನು ಎಳೆದೊಯ್ಯುತ್ತಿದ್ದಾರೆ. ಆ ಜನಸಾಮಾನ್ಯರ ಪುಟ್ಟ ಕಂದಮ್ಮಗಳನ್ನು ಕೂಡ ಎಳೆದು ಸೆಳೆದು ತಮ್ಮ ಗಾಡಿಗಳೊಳಗೆ ನೂಕುತ್ತಿದ್ದಾರೆ. ನೀವು ಈ ಲೇಖನ ಓದಿ ಮುಗಿಸುವಷ್ಟರಲ್ಲಿ ಅಲ್ಲೊಂದು ಅಬಲೆಯ  ಹರಣವಾಗಿರಬಹುದು, ಮತ್ತೊಂದು ಅನಾಥ ಹುಡುಗನ ಜೀವ ಹೋಗಿರಬಹುದು.

ಇದು ಇಂದಿನ ಆಫ್ರಿಕಾ! ಈ ವರ್ಷದ ಮೊದಲ ದಿನದಿಂದ ಇಂದಿನವರೆಗೆ (ಜುಲೈ 23) ಆಫ್ರಿಕಾದಲ್ಲಿ ಬೋಕೋ ಹರಾಮ್ ಸಂಘಟನೆ ನಡೆಸಿರುವ ದೊಡ್ಡ ಮಟ್ಟದ ದಾಳಿಗಳು 59. ಕೊಲೆಯಾಗಿ ಹೋದ ಅಮಾಯಕ ಜೀವಗಳ ಸಂಖ್ಯೆ 460. (ಇದು ಸರಕಾರೀ ಸಂಸ್ಥೆಗಳಿಗೆ ಸಿಕ್ಕ ಸಂಖ್ಯೆ ಅಷ್ಟೆ. ವಾಸ್ತವದ ಹಿಂಸೆ ಇದಕ್ಕೆ ಹತ್ತು ಪಟ್ಟಿರಬಹುದು) ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ತೀವ್ರ ಚಟುವಟಿಕೆಯಲ್ಲಿರುವ ಇಸ್ಲಾಮಿಕ್ ಸ್ಟೇಟ್  ಸಂಘಟನೆ ಇದೇ ಅವಧಿಯಲ್ಲಿ ಮಾಡಿರುವ ದೊಡ್ಡ ದಾಳಿಗಳ ಸಂಖ್ಯೆ 216, ದಾಳಿಯಲ್ಲಿ ಸತ್ತವರು 1516 ಮಂದಿ! ಸೊಮಾಲಿಯಾ ಎಂಬ, ಆಫ್ರಿಕದ ಪೂರ್ವ ಕರಾವಳಿಗಂಟಿರುವ ಪುಟ್ಟ ದೇಶವೊಂದರಲ್ಲಷ್ಟೇ ಕ್ರಿಯಾಶೀಲವಾಗಿರುವ ಅಲ್-ಶಬಾಬ್ ಎಂಬ ಉಗ್ರಸಂಘಟನೆ ಈ ವರ್ಷದ ಆರು ತಿಂಗಳಲ್ಲಿ 61 ದಾಳಿಗಳನ್ನು ನಡೆಸಿದೆ, 315 ನಿಷ್ಪಾಪಿಗಳನ್ನು ಕೊಂದಿದೆ. ಈ ಎಲ್ಲ ಜೆಹಾದಿ ಸಂಘಟನೆಗಳು 2007ರಿಂದ 2011ರವರೆಗೆ ಆಫ್ರಿಕದಲ್ಲಿ ನಡೆಸಿದ್ದ ಉಗ್ರದಾಳಿಗಳ ಸಂಖ್ಯೆ 132. ಆದರೆ, 2012ರಿಂದ 17ರವರೆಗಿನ ಐದು ವರ್ಷಗಳಲ್ಲಿ  ಸಂಖ್ಯೆ 358ಕ್ಕೇರಿತು. ಬಹುಶಃ ಬೇರೆ ಯಾರೊಬ್ಬರೂ ಈ ಸಂಘಟನೆಗಳ ಕೃತ್ಯಗಳನ್ನು ತಡೆಯುವ ಸಾಹಸಕ್ಕಿಳಿಯದೇ ಹೋದರೆ 2020ರ ಹೊತ್ತಿಗೆ ಆಫ್ರಿಕಾ ಧಗಧಗಿಸುವ ಖಾಂಡವ ವನವಾಗಬಹುದು. ದಿನಕ್ಕೆರಡು ದೊಡ್ಡ ದಾಳಿಗಳು, ನೂರಾರು ಜನಸಾಮಾನ್ಯರ ಹತ್ಯೆಗಳು ಮಾಮೂಲು ಸುದ್ದಿಯಾಗಬಹುದು. ಆಫ್ರಿಕದಲ್ಲಿ ಭೂಕಂಪವಾದರೂ ಜಗತ್ತಿಗೆ ಗೊತ್ತಾಗುವುದಿಲ್ಲ, ಆದರೆ ಬ್ರಿಟನ್ನಿನ ರಾಣಿಯೋ ಅಮೆರಿಕದ ಅಧ್ಯಕ್ಷನೋ ವಾಡಿಕೆಗಿಂತ ಒಂದು ಆಕ್ಷೀ ಹೆಚ್ಚಾಗಿ ಸೀನಿದರೆ ಅದು ಅಂತಾರಾಷ್ಟ್ರೀಯ ಸುದ್ದಿ – ಎಂಬ ಮಾತೊಂದು ಹಿಂದೆ ಸುದ್ದಿಮನೆಯಲ್ಲಿತ್ತು. ಕಾಲ ಬದಲಾದರೂ  ವಿಷಯದಲ್ಲಿ ಜಗತ್ತಿನ ಉಪೇಕ್ಷೆ ಮಾತ್ರ ಬದಲಾಗಿಯೇ ಇಲ್ಲ. ದಿನನಿತ್ಯ ಬೇಯುವ ಕುಲುಮೆಯಾಗಿದ್ದರೂ ಆಫ್ರಿಕ ಇಂದಿಗೂ ಪತ್ರಿಕೆಗಳ ಕುತೂಹಲ ಕೆರಳಿಸುತ್ತಿಲ್ಲ. ದಿನಾ ಸಾಯೋರಿಗೆ ಅಳೋರ್ಯಾರು ಎನ್ನುವ ಗಾದೆಯನ್ನೇ ಕೊಂಚ ಬದಲಾಯಿಸಿ, ದಿನಾ ಸಾಯುವ ಆಫ್ರಿಕನ್ನರ ಬಗ್ಗೆ ಸುದ್ದಿ ಮಾಡೋರ್ಯಾರು ಎಂದು ಜಗತ್ತು ಆ ಕಗ್ಗತ್ತಲ ಖಂಡಕ್ಕೆ ಸ್ವಾಟೆ ತಿರುವಿ ಕೂತಿದೆ. ಆಫ್ರಿಕದ ಭಯೋತ್ಪಾದಕ ದಾಳಿಗಳ ಸುದ್ದಿಗಳನ್ನು ಸಿಎನ್‌ಎನ್, ಬಿಬಿಸಿಯಂಥ ಸುದ್ದಿಮಾಧ್ಯಮಗಳು ಕೂಡ ಒಂದೆರಡು ನಿಮಿಷದ ಫಿಲ್ಲರ್‌ಗಳಂತೆ ತೋರಿಸುತ್ತಿವೆ. ಈ ಖಂಡ  ದಟ್ಟದುರ್ದೈವಿ!

ಮಧ್ಯಪ್ರಾಚ್ಯದಲ್ಲಷ್ಟೇ ಅಟ್ಟಹಾಸ ಮೆರೆಯುತ್ತಿದ್ದ ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಕಳೆದೊಂದು ದಶಕದಿಂದ ಆಫ್ರಿಕವನ್ನು ತಮ್ಮ ನಿಲುದಾಣವನ್ನಾಗಿ ಮಾಡಿಕೊಂಡಿವೆ. ಮಧ್ಯಪ್ರಾಚ್ಯದಲ್ಲಿ ಈ ಸಂಘಟನೆಗಳಿಗೆ ನಿತ್ಯದ ವ್ಯವಹಾರ ನಡೆಸುವುದು ಕಷ್ಟವಾಗಿರುವುದು ಒಂದು ಕಾರಣ. ಅಲ್ಲದೆ ಅತ್ತ ಅಮೆರಿಕನ್ ಸೇನೆ, ಇತ್ತ ಯುರೋಪಿಯನ್ ಒಕ್ಕೂಟಗಳ ಸೇನೆಗಳು ಎಂದು ಮುಗಿಬೀಳುತ್ತವೆ ಎನ್ನುವಂತಿಲ್ಲ. ಉಗ್ರರ ಭವಿಷ್ಯ ಅಲ್ಲಿ ಅನಿಶ್ಚಿತ. ಕಳೆದೆರಡು ದಶಕಗಳಲ್ಲಿ ಶತ್ರುಸೈನ್ಯಗಳು ಉಗ್ರರ ತಂತ್ರಗಾರಿಕೆಯನ್ನು ಬಹಳ ಚೆನ್ನಾಗಿ ಅರ್ಥೈಸಿಕೊಂಡಿವೆ. ಉಗ್ರರ ಅಡಗುದಾಣಗಳ  ಮ್ಯಾಪ್ ಇದೀಗ ಅಮೆರಿಕನ್ ಸೈನ್ಯದ ಬಳಿ ಸಿದ್ಧವಾಗಿದೆ. ಇನ್ನು, ಈ ಉಗ್ರರಿಗೂ ಅಷ್ಟೇ – ಅವವೇ ಸಿರಿಯಾ, ಅಫಘಾನಿಸ್ತಾನಗಳನ್ನು ಎಷ್ಟು ಹಿಂಡಲಾದೀತು? ಸಂಪದ್ಭರಿತವಾಗಿದ್ದ ಆ ದೇಶಗಳನ್ನು ಕುಟ್ಟಿ ಪುಡಿಮಾಡಿ ಸ್ಮಶಾನಸದೃಶ ಮಾಡಿಯಾಯಿತು. ಇನ್ನು ಆ ದೇಶಗಳಿಂದ ಹೆಕ್ಕಿ ತೆಗೆಯಬಹುದಾದ ಆರ್ಥಿಕತೆ ಲವಲೇಶವೂ ಉಳಿದಿಲ್ಲ. ಹಾಗಾಗಿ, ತಮ್ಮ ವಿಳಾಸವನ್ನು ಉಗ್ರರು ಬದಲಿಸಬೇಕಾದ ಅನಿವಾರ್ಯತೆ ಎದುರಾಗಿರುವುದು ಸಹಜ. ಮುಂದಿನ ಯಾತ್ರೆಗೆ ಅವರು ನೋಡಿದ್ದು ಆಫ್ರಿಕಾದತ್ತ. ಮುಖ್ಯ ಕಾರಣಗಳು – ಆಫ್ರಿಕದ ಬಡತನ,  ರಾಷ್ಟ್ರಗಳಲ್ಲಿ ಭುಗಿಲೆದ್ದಿರುವ ಅರಾಜಕತೆ, ಸುಲಭದಲ್ಲಿ ಅಡಗುದಾಣಗಳನ್ನು ಬದಲಿಸಬಹುದಾದ ಅನುಕೂಲ ಮತ್ತು ಏರುತ್ತಿರುವ ಮುಸ್ಲಿಮ್ ಜನಸಂಖ್ಯೆ.

ಮೊನ್ನೆ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲ್ಪಟ್ಟಾಗ ಆಫ್ರಿಕದ ಒಂದು ದೇಶ ಎಲ್ಲರ ಗಮನ ಸೆಳೆಯಿತು. ಅದೇ ನೈಜೀರಿಯಾ. ಈಗ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶಗಳಲ್ಲಿ 6-7ನೇ ಸ್ಥಾನದಲ್ಲಿರುವ ನೈಜೀರಿಯಾ, ಇನ್ನು ಎಂಟು ವರ್ಷಗಳೊಳಗಾಗಿ ಮೂರನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ ಎಂದೇ ಎಲ್ಲ ವರದಿಗಳೂ ಹೇಳಿದವು. ಸದ್ಯಕ್ಕೆ ಚೀನಾ  ಭಾರತಗಳ ನಂತರ ಮೂರನೇ ಸ್ಥಾನದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಇದೆ. ಆದರೆ, 2024ರ ವೇಳೆಗೆ, ಜನಸಂಖ್ಯೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿ, ಅದಕ್ಕಿಂತ ಹಲವು ಪಟ್ಟು ಚಿಕ್ಕದಾದ ನೈಜೀರಿಯಾ ಆ ಸ್ಥಾನವನ್ನು ಆಕ್ರಮಿಸಲಿದೆಯಂತೆ. ನೈಜೀರಿಯಾದ ಜನಸಂಖ್ಯೆ ಆ ಹೊತ್ತಿಗೆ 30 ಕೋಟಿ ದಾಟುತ್ತದೆ ಎಂದು ಅಂದಾಜು ಮಾಡಲಾಗಿದೆ. ನೈಜೀರಿಯಾದಲ್ಲಿ ಜನಸಂಖ್ಯೆ ಬೆಳೆಯುತ್ತಿರಬಹುದು; ಆದರೆ ಆ ಓಟಕ್ಕೆ ತಕ್ಕಂತೆ ಆರ್ಥಿಕತೆ ದಾಪುಗಾಲಿಡುತ್ತಿಲ್ಲ. ಈ ದೇಶದ ದಕ್ಷಿಣ ಭಾಗದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರಬಹುದು;  ನಗರಗಳು ಕಣ್ ಬಿಟ್ಟಿರಬಹುದು; ಉದ್ಯೋಗಾವಕಾಶಗಳು ಹೆಚ್ಚುತ್ತಿರಬಹುದು; ರಸ್ತೆಗಳು ಝಗಮಗಿಸುತ್ತಿರಬಹುದು. ಆದರೆ ಒಟ್ಟು ಜನಸಂಖ್ಯೆಯ ಅರ್ಧಕ್ಕರ್ಧ ಮುಸ್ಲಿಮರಿರುವ ಉತ್ತರ ಭಾಗದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ. ಅಲ್ಲಿ ರಸ್ತೆಗಳೇ ನಾಸ್ತಿ! ಜನ ನಿರುದ್ಯೋಗಿಗಳು. ಅದಕ್ಕೆ ತಕ್ಕಂತೆ, ಹಾಸು ಹೊದ್ದುಕೊಳ್ಳುವಷ್ಟು ಬಡತನ. ಇವೆರಡರ ಬೈ ಪ್ರಾಡಕ್‌ಟ್ ಆಗಿ ಕಳ್ಳತನ, ದರೋಡೆ, ಸುಲಿಗೆ, ಕೊಲೆಯಂಥ ಹಿಂಸಾಚಾರ ವಿಜೃಂಭಿಸುವುದು ಬೇಡವೇ? ಅದಂತೂ ಅಲ್ಲಿ ಧಾರಾಳ.

ಶಿಥಿಲವಾಗುವ ಹಾದಿಯಲ್ಲಿರುವ ಮರದ ಬೊಡ್ಡೆಗೆ ಒರಲೆ ಹಿಡಿಯಲು ಹೆಚ್ಚು ಸಮಯ  ಬಡತನ, ಅನಕ್ಷರತೆ, ವಿಪರೀತ ಜನಸಂಖ್ಯೆಯ ಸಮಸ್ಯೆಗಳಿಂದಾಗಿ ಬಾಯಿಕಳೆದು ಬೋರಲು ಬಿದ್ದಿರುವ ನೈಜೀರಿಯಾದ ಉತ್ತರ ಭಾಗವನ್ನು 2008ರ ಸಮಯದಲ್ಲಿ ಭಯೋತ್ಪಾದನೆ ಬಹಳ ಪ್ರೀತಿಯಿಂದ ಅಪ್ಪಿಕೊಂಡಿತು. ಅಲ್ಲಿ ಕಾಲಿಟ್ಟ ಒಂದೇ ವರ್ಷದಲ್ಲಿ ಬೋಕೋ ಹರಾಮ್‌ನ ಹರಾಮಿಗಳು ತಮ್ಮ ಉಗ್ರಸ್ವರೂಪ ತೋರಲು ಶುರುವಿಟ್ಟರು. ಹಳ್ಳಿಹಳ್ಳಿಗಳೇ ಬೆಂಕಿಗೆ ಆಹುತಿಯಾದವು. ರಾತ್ರಿಯಲ್ಲಲ್ಲ, ಹಾಡುಹಗಲಲ್ಲೇ ಉಗ್ರರು ಹಳ್ಳಿಗಳಿಗೆ ನುಗ್ಗಿ ಜನರನ್ನು ಮನೆಗಳಿಂದ ಎಳೆದು ಬಯಲಲ್ಲಿ ಕೂಡಿಹಾಕಿ ಕತ್ತು ಕತ್ತರಿಸುವ ಕೆಲಸ ಶುರುಹಚ್ಚಿಕೊಂಡರು. ಎಲ್ಲೆಲ್ಲೂ ರಕ್ತದ ಹೊಳೆ ಹರಿಯಿತು.  ಅತ್ಯಾಚಾರವಾಗಿ ಬೀದಿ ಬೀದಿಗಳಲ್ಲಿ ಹೆಣಗಳಂತೆ ಬಿದ್ದರು. ಮಕ್ಕಳನ್ನು ಅಪಹರಿಸುತ್ತಿದ್ದ ಉಗ್ರರು ಆ ಮಕ್ಕಳಿಗೆ ಆತ್ಮಹತ್ಯಾ ದಾಳಿ ನಡೆಸುವ ತರಬೇತಿ ಕೊಟ್ಟು ಆಸ್ಪತ್ರೆ, ಮಾಲ್, ಶಾಲೆಗಳಿಗೆ ಕಳಿಸಿ ಉಡಾಯಿಸಿದರು. 2014ರಲ್ಲಿ ಉತ್ತರ ನೈಜೀರಿಯಾದ ಚೀಬಕ್ ಎಂಬಲ್ಲಿ ಬರೋಬ್ಬರಿ 300 ಶಾಲಾಮಕ್ಕಳನ್ನು ಅಪಹರಿಸಿ ಒತ್ತೆಯಲ್ಲಿಟ್ಟಾಗ ಬೋಕೋ ಹರಾಮ್‌ನ ಕೃತ್ಯಗಳು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಒಂದಷ್ಟು ಸದ್ದುಮಾಡಿತು. ಮಾನವ ಹಕ್ಕುಗಳ ಕಾರ್ಯಕರ್ತರು ಬೊಬ್ಬೆ ಹೊಡೆದದ್ದಾಯಿತು. ಮಕ್ಕಳ ಹಕ್ಕುಗಳ ರಕ್ಷಕರು ವಿಶ್ವಸಂಸ್ಥೆಯ ಬಾಗಿಲು ಬಡಿದದ್ದಾಯಿತು. ಆದ  ಏನು? 2009ರಿಂದ 2016ರವರೆಗಿನ ಏಳು ವರ್ಷಗಳಲ್ಲಿ ಈ ಭಯೋತ್ಪಾದಕ ಸಂಘಟನೆ ನೈಜೀರಿಯಾದಲ್ಲಿ ಕೊಂದು ಚೆಲ್ಲಿದ್ದು 25,000 ಮಂದಿಯನ್ನು!

2015ರಲ್ಲಿ ನೈಜೀರಿಯಾ, ನೈಜರ್, ಚಾಡ್, ಕ್ಯಾಮರೂನ್ ಮತ್ತು ಬೆನಿನ್ – ಈ 5 ಆಫ್ರಿಕನ್ ದೇಶಗಳು ಅಮೆರಿಕಾ, ಬ್ರಿಟನ್, ಫ್ರಾನ್‌ಸ್ಗಳ ಸಹಯೋಗದಲ್ಲಿ ಬೋಕೋ ಹರಾಮ್ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದವು. ಆ ವೇಳೆಗಾಗಲೇ ಮೂರನೇ ಹಂತದ ಕ್ಯಾನ್ಸರಿನ ರೂಪ ತಳೆದಿದ್ದ ಉಗ್ರವಾದವನ್ನು ದೇಶದಿಂದ ಬೇರುಸಮೇತ ಕಿತ್ತೆಸೆಯುವುದು ಅವುಗಳಿಗೆ ಅಸಾಧ್ಯ ಕೆಲಸವೇ ಆಗಿತ್ತೆನ್ನೋಣ.  ಹೋರಾಡುವಷ್ಟು ಹೋರಾಡಿ ಕೊನೆಗೊಂದು ದಿನ, ಬೋಕೋ ಹರಾಮಕೋರರನ್ನು ಬುಡಮಟ್ಟದಿಂದ ಕಿತ್ತೆಸೆದೆವು ಎಂದು ಹೇಳಿಕೆ ಕೊಟ್ಟು ಸುಮ್ಮನಾದವು. ಆದರೆ ಉಗ್ರರೆಲ್ಲಿ ಖಾಲಿಯಾಗಿದ್ದರು? ಅವರು ನೈಜೀರೀಯಾದಿಂದ ತಮ್ಮ ತಾವನ್ನು ಚಾಡ್ ಸರೋವರದ ಪ್ರಾಂತ್ಯಕ್ಕೆ ಬದಲಾಯಿಸಿಕೊಂಡಿದ್ದರು ಅಷ್ಟೆ! ಸುಮಾರು 650 ಕಿಲೋಮೀಟರ್ ಸುತ್ತಳತೆಯ ಸುಂದರ ಚಾಡ್ ಸರೋವರದ ಪ್ರಾಂತ್ಯ ಭಯೋತ್ಪಾದಕರ ಹೊಸ ಆಶ್ರಯತಾಣವಾಯಿತು. ಬೋಕೋ ಹರಾಮ್ ಉಗ್ರರ ಕ್ರೌರ್ಯಕ್ಕೆ ಬೆಚ್ಚಿದ್ದ ಒಂದಷ್ಟು ಸಾಫ್‌ಟ್ ಉಗ್ರರು ಮಾತೃಕೂಟದಿಂದ ಹೊರಬಿದ್ದು ತಮ್ಮದೇ ಆದ ಇಸ್ಲಾಮಿಕ್ ಸ್ಟೇಟ್  ಪಶ್ಚಿಮ ಆಫ್ರಿಕಾ ಎಂಬ ಸಂಘಟನೆ ಕಟ್ಟಿಕೊಂಡರು. ಅವರಿಗೂ ಇವರಿಗೂ ಹಾವುಮುಂಗುಸಿಯ ಜಗಳ ಶುರುವಾಯಿತು. ದಿನಬೆಳಗಾದರೆ ಬಂದೂಕಿನ ಸದ್ದು ಮಾಮೂಲಿಯಾಯಿತು. ನೂರಾರು ಹೆಣ ಉರುಳಿದವು. ಹಳ್ಳಿಗಳು ಜೀವಂತ ಸ್ಮಶಾನಗಳಾದವು. ಯಾವ ಹೊತ್ತಲ್ಲಿ ಯಾವ ಮೂಲೆಯಲ್ಲಿ ಬಾಂಬ್ ಸಿಡಿಯುತ್ತದೆ, ಯಾವ ಕಟ್ಟಡ ಹೊತ್ತಿ ಉರಿಯುತ್ತದೆ ಹೇಳಲು ಸಾಧ್ಯವಿಲ್ಲವೆಂಬ ಪರಿಸ್ಥಿತಿ ಏರ್ಪಟ್ಟಿತು. ಅಷ್ಟರಲ್ಲಿ ಇವರಿಬ್ಬರ ಜಗಳದ ಲಾಭ ಪಡೆಯಲೆಂದು 2016ರಲ್ಲಿ ಐಸಿಸ್ ಕೂಡ ರಂಗಪ್ರವೇಶ ಮಾಡಿತು. ಅದು ಬೋಕೋ ಹರಾಮ್‌ನಿಂದ ಸಿಡಿದು ಹೊರಬಂದಿದ್ದ  ತನ್ನ ತೆಕ್ಕೆಗೆ ಸೆಳೆದುಕೊಂಡಿತು.

ಪಶ್ಚಿಮ ಆಫ್ರಿಕಾದಿಂದ ಪೂರ್ವ ಆಫ್ರಿಕದವರೆಗೆ – ಸಮುದ್ರ ತೀರದಿಂದ ಸಮುದ್ರ ತೀರದವರೆಗೆ – ಹರಡಿರುವ ನಡುಮಧ್ಯದ ಭಾಗವನ್ನು ಸಹೆಲ್ ಎನ್ನುತ್ತಾರೆ. ದುರಂತವೆಂದರೆ ಆಫ್ರಿಕದ ಬಹಳಷ್ಟು ನೀರುನೆಲೆಗಳಿರುವ ಈ ಭಾಗ ಜಗತ್ತಿನಲ್ಲೇ ಅತಿ ದರಿದ್ರ ನೆಲವೂ ಹೌದು! ಒಟ್ಟು ಜನಸಂಖ್ಯೆಯಲ್ಲಿ 99.9% ಭಾಗ ಮುಸ್ಲಿಮರು. ಅಭಿವೃದ್ಧಿ ಇಲ್ಲವೇ ಇಲ್ಲ. ಕೈಗಾರಿಕೆಗಳನ್ನಂತೂ ಕೇಳಬೇಡಿ. ಆಹಾರಕ್ಕೆ ಇಲ್ಲಿ ಮುಗಿಲುಮುಟ್ಟಿದೆ ಹಾಹಾಕಾರ. ಭಯೋತ್ಪಾದನೆಯ ತೀವ್ರ ಸಮಸ್ಯೆಯಿಂದಾಗಿ ಜಮೀನಿನ ನೆಲ ಪಾಳುಬಿದ್ದಿದೆ.  ದಿನನಿತ್ಯ ಮಾತಾಡುತ್ತಿವೆ. ಹೆಣ್ಣು ಇಲ್ಲಿ ಭೋಗವಸ್ತು. ಮಕ್ಕಳು, ಬಾಂಬ್ ಕಟ್ಟಿ ಸಿಡಿಸಲು ಬೇಕಾದ ಆಟಿಕೆವಸ್ತುಗಳು. ಪಶ್ಚಿಮದ ಮಾಲಿಯಿಂದ ಪೂರ್ವದ ಸೊಮಾಲಿಯಾದವರೆಗೆ ಈ ಭಾಗದಲ್ಲಿ ಯಾವ ದೇಶದಲ್ಲೂ ಸದೃಢ ಸರಕಾರವಿಲ್ಲ. ಉಗ್ರರ ಅಟ್ಟಹಾಸವನ್ನು ಮೆಟ್ಟಿನಿಲ್ಲುವ ನಾಯಕನಿಲ್ಲ. ಹಾಗಾಗಿ ಎಲ್ಲೆಲ್ಲೂ ಭಯೋತ್ಪಾದಕರ ಷರಿಯಾ ಸರಕಾರ. ಮಾಲಿಯಲ್ಲಿ ಕಳೆದ ಏಳು ವರ್ಷಗಳಿಂದ ಬೋಕೋ ಹರಾಮ್ ಮತ್ತು ಐಸಿಸ್‌ನವರದ್ದೇ ಆಡಳಿತ. ಸರಕಾರವಿಲ್ಲದ ಚಾಡ್‌ನಲ್ಲೂ ಅದೇ ಸ್ಥಿತಿ. ಯುದ್ಧ, ಬಾಂಬು, ಕೊಲೆ, ಕತ್ತುಕೀಳಾಟ, ಹೆಂಗಸರ ಮೇಲೆ  ಮಾದಕ ದ್ರವ್ಯಗಳ ಹೊಳೆ. ಸಹೆಲ್ ಭಾಗದ ಅಷ್ಟೂ ಭಯೋತ್ಪಾದಕರಿಗೆ ಅತ್ಯಾಧುನಿಕ ಶಸ್ತ್ರಗಳನ್ನು ಹಿಂದಿನ ಬಾಗಿಲಲ್ಲಿ ಪೂರೈಸುತ್ತಿರುವುದು ಚೀನಾ, ರಷ್ಯ, ಅಮೆರಿಕಗಳು. ಎದುರಿನ ಬಾಗಿಲಲ್ಲಿ ನಿಂತು ಅದೇ ಭಯೋತ್ಪಾದಕರ ಜೊತೆ ಬಂದೂಕಿನ ಕಾಳಗ ಮಾಡುತ್ತಿರುವವರೂ ಅವರೇ! ಬ್ಯುಸಿನೆಸ್ ಮತ್ತು ಮಾನವಕಲ್ಯಾಣ ಎರಡು ಪ್ರತ್ಯೇಕ ಡಿಪಾರ್ಟ್‌ಮೆಂಟುಗಳು ನೋಡಿ!

ಸಹೆಲ್‌ನ ಕೆಳಭಾಗಕ್ಕೆ ಬಂದರೆ ಅಲ್ಲಿದೆ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್. ಹೆಸರಿಗೆ ತಕ್ಕಂತೆ ಕಗ್ಗತ್ತಲ ಖಂಡದ ನಟ್ಟನಡುಭಾಗದಲ್ಲಿ ಕೂತಿರುವ ಪುಟ್ಟ ದೇಶ. ಇಲ್ಲಿನ ಮುಖ್ಯ  ವಜ್ರದ ಬೇಟೆ. ದಟ್ಟ ಅರಣ್ಯಗಳ ನಡುವಿನಲ್ಲಿ ಭೂಮಿಯ ಗರ್ಭ ಮುಟ್ಟಲು ಗುಂಡಿ ತೋಡುತ್ತಿದ್ದಾರೋ ಎನ್ನಿಸುವಂಥ ಪಾತಾಳಗಳಲ್ಲಿ ಮಣ್ಣನ್ನು ಎತ್ತಿ ಎತ್ತಿ ಎರಚುತ್ತ, ಮಣ್ಣು ಸೋಸಿ ಹೊಳೆವ ಕಲ್ಲಿಗೆ ಆಸೆಯಿಂದ ಹುಡುಕುತ್ತ ಕಳೆದುಹೋಗಿರುವ ಈ ಜನರ ಮಧ್ಯಾಹ್ನದ ಊಟ ಗೆದ್ದಲು, ಬಾವಲಿ, ಇಲಿ-ಹೆಗ್ಗಣ! ಆಫ್ರಿಕ ಖಂಡದ ಕಿನಾರೆಗೆ ಈ ದೇಶ ಎಷ್ಟು ದೂರದಲ್ಲಿದೆಯೋ ಅದಕ್ಕಿಂತ ದೂರದಲ್ಲಿದೆ ಇವರಿಂದ ನಾಗರಿಕತೆ ಮತ್ತು ತಂತ್ರಜ್ಞಾನ. ವಜ್ರಾನ್ವೇಷಕರಿಗೆ ಇಲ್ಲಿ ಮನೆಗಳಿಲ್ಲ; ಇದ್ದರೂ ಅವು ಸುಭದ್ರವಲ್ಲ.  ಆ ವಜ್ರ ಹುಡುಕುವ ಗುಂಡಿಗಳನ್ನು ಬಿಟ್ಟರೆ ಬೇರೆ ಭವಿಷ್ಯವಿಲ್ಲ. ಸಾಕ್ಷರತೆ, ಆರೋಗ್ಯ ಎರಡೂ ಇವರಿಗೆ – ಕಿವುಡನಿಗೆ ಸಂಗೀತದಂತೆ – ಅಪರಿಚಿತ. ಹಾಗಿದ್ದರೂ ಈ ದೇಶ ಆಫ್ರಿಕದಲ್ಲಿ ಭಯೋತ್ಪಾದನೆಯಿಂದ ಕಂಗೆಟ್ಟುಕೂತ ದಟ್ಟದರಿದ್ರ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಒಂದೊಂದು ಊರೂ ಕ್ರೆûಸ್ತ – ಮುಸಲ್ಮಾನ ಎಂದು ಎರಡು ಹೋಳಾಗಿದೆ. ಇವೆರಡೂ ತಂಡಗಳ ನಡುವೆ ಮುಗಿಯದ ಕದನ, ನಿಲ್ಲದ ವ್ಯಾಜ್ಯ. ಅತ್ತಣಿನ ಕೆಲವರನ್ನು ಇತ್ತಣಿನವರು ಅಪಹರಿಸಿ ತಲೆ ಕತ್ತರಿಸಿಯೋ ದೇಹ  ಕಾಡುಗುಡ್ಡಗಳಲ್ಲಿ ಚೆಲ್ಲುತ್ತಾರೆ. ಇತ್ತಣಿನ ಒಂದಷ್ಟು ಮಂದಿಯನ್ನು ಅತ್ತಣಿನವರು ಎಳೆದಾಡಿ ಕಿವಿ, ಮೂಗು, ಕಣ್ಣು, ಬಾಯಿಗಳನ್ನು ಕ್ಯಾಬೇಜು ಕೆತ್ತಿದಂತೆ ಹರಿತವಾದ ಚೂರಿಗಳಲ್ಲಿ ಕೆತ್ತಿ ಹರಿದು ರಸ್ತೆಗಳಲ್ಲಿ ಚೆಲ್ಲುತ್ತಾರೆ. ಇಡೀ ದೇಶದಲ್ಲಿ ಭೀಭತ್ಸ, ಭಯಾನಕ, ರೌದ್ರಗಳನ್ನು ಬಿಟ್ಟರೆ ಬೇರೆ ರಸಗಳೇ ಇಲ್ಲ. ನೈಜೀರಿಯಾ, ನೈಜರ್ ದೇಶಗಳ ತೈಲದ ಬಾವಿಗಳು ಬರಿದಾದ ಮೇಲೆ ಅಲ್-ಶಬಾಬ್, ಬೋಕೋ ಹರಾಮ್, ಇಸ್ಲಾಮಿಕ್ ಸ್ಟೇಟ್, ಅಲ್ ಖೈದಾಗಳ ಸದಸ್ಯರೆಲ್ಲ ಈ ಆಫ್ರಿಕದ ನಡುದೇಶಕ್ಕೆ ಬರಬಹುದು. ಆಗ ಈ  ನಡೆಯಬಹುದಾದ ಕ್ರೌರ್ಯವನ್ನು ಸರಿಗಟ್ಟಬಲ್ಲ ಶಬ್ದಗಳು ನಿಘಂಟಿನಲ್ಲಿ ಸಿಗಬಹುದೆ?

ಒಟ್ಟಿನಲ್ಲಿ ಆಫ್ರಿಕಾ ನತದೃಷ್ಟ ಖಂಡ. ತನ್ನ ಇತಿಹಾಸದ ಮೊದಲ ಸಾವಿರ ವರ್ಷಗಳ ಕಾಲ ಈ ಖಂಡ ಹೊರಜಗತ್ತಿನ ಜೊತೆ ಹೆಚ್ಚು ಸಂಪರ್ಕ ಸಾಧಿಸದೆ ಆಧುನಿಕತೆಗೆ ತೆರೆದುಕೊಳ್ಳದೆ ಚಿಪ್ಪಿನೊಳಗಿನ ಆಮೆಯಂತೆ ಕಳೆಯಿತು. ನಂತರದ ಸಾವಿರ ವರ್ಷಗಳ ಕಾಲ ಯುರೋಪಿನ ಪರಂಗಿಗಳಿಂದ ಆಳಿಸಿಕೊಂಡು ತುಳಿಸಿಕೊಂಡು ಗುಲಾಮಗಿರಿಯ ಚಾಕರಿ ಮಾಡಿತು. ಅವೆರಡು ಕರಾಳ ಅಧ್ಯಾಯಗಳು ಮುಗಿದು ಇನ್ನೇನು ನಿಟ್ಟುಸಿರು ಬಿಡಬೇಕೆನ್ನುವಷ್ಟರಲ್ಲಿ ಮಧ್ಯಪ್ರಾಚ್ಯದ ಇಸ್ಲಾಮಿಕ್ ಮೂಲಭೂತವಾದೀ  ದಟ್ಟ ನೆರಳು ಈ ಖಂಡವನ್ನು ಆವರಿಸಿಕೊಳ್ಳುತ್ತಿದೆ. ಖಂಡದ ಬಹುತೇಕ ಅರ್ಧ ಭಾಗ ಈ ಉಗ್ರರ ಕಪಿಮುಷ್ಟಿಗೆ ಈಗಾಗಲೇ ಸಿಕ್ಕಿಯಾಗಿದೆ. ಆಫ್ರಿಕದ ದೇಶಗಳಲ್ಲಿ ಬಲವಾದ ಸರಕಾರಗಳು ಬಂದಾವೆಂದು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲ ಆಶಿಸುವಂತಿಲ್ಲ. ಬಡತನ, ಅನಕ್ಷರತೆಗಳ ಪಾತಾಳದಲ್ಲಿ ಬಿದ್ದಿರುವ ಈ ದೇಶಗಳನ್ನು ಎತ್ತಿ ನಿಲ್ಲಿಸಲು ಅಂತಿಂಥ ಕ್ರೇನು ಸಾಲದು! ಆದರೆ ಈ ಬಡತನ, ಅನಕ್ಷರತೆ, ನಿರುದ್ಯೋಗ, ಅರಾಜಕತೆ, ಕೋಮುವಾದ, ಮೂಲಭೂತವಾದಗಳನ್ನೇ ಬಂಡವಾಳ ಮಾಡಿಕೊಂಡು ಠಿಕಾಣಿ ಹೂಡಿರುವ ಭಯೋತ್ಪಾದಕ ಸಂಘಟನೆಗಳು  ಮೂರ್ನಾಲ್ಕು ದಶಕಗಳಲ್ಲಿ ಈ ಖಂಡವನ್ನು ಅದೆತ್ತ ನಡೆಸಿಕೊಂಡು ಹೋಗುತ್ತವೋ ದೇವರೇ ಬಲ್ಲ!

ಮನುಷ್ಯನ ನಾಗರಿಕತೆ ಆಫ್ರಿಕದಿಂದ ಪ್ರಾರಂಭವಾಯಿತೆಂದು ಹೇಳುತ್ತಾರೆ. ಆ ನಾಗರಿಕತೆಯ ಮುಕ್ತಾಯ ಕೂಡ ಅಲ್ಲಿಂದಲೇ ಆಗಬಹುದೇನೋ!