About Us Advertise with us Be a Reporter E-Paper

ವಿವಾಹ್

ಆ ರಾತ್ರಿ.. ಅವನೊಟ್ಟಿಗೆ…

- ಮಂದಾರ ಸಾಗರ

ಅವತ್ತು ನನ್ನ ಸಂಭ್ರಮಕ್ಕೆ ಎಲ್ಲೆ ಎನ್ನೋ ಶಬ್ಧವೇ ಮರೆತೋಗಿತ್ತು. ಮನೆ ನನ್ನದೇ ನಗುವಿನ ಸದ್ದು. ನಾ ಮುಡಿದಿದ್ದ ಮಲ್ಲಿಗೆಯದ್ದೇ ಘಮ. ಕಾರಣ ಅವನೇ. ಅವತ್ತು ದೀಪಾವಳಿ, ಬರೀ ದೀಪಾವಳಿ ಅಲ್ಲ.. ಅವನೊಟ್ಟಿಗೆ ನನಗೆ ಮೊದಲ ದೀಪಾವಳಿ. ನಮ್ಮಿಬ್ಬರ ಬದುಕಲ್ಲಿ ಕತ್ತಲೆಂಬುದು ದೂರವಾಗಿ ದೀಪದ ಬೆಳಕು ಪ್ರಜ್ವಲಿಸಿದ ದಿನ.

ಮುಂಜಾನೆ ಎದ್ದವಳಿಗೆ ಅಭ್ಯಂಗನ ಕಾಯುತ್ತಿತ್ತು. ಪ್ರತಿದಿನ ಜೀನ್‌ಸ್ ತೊಟ್ಟು ಮೆರೆಯುತ್ತಿದ್ದವಳಿಗೆ ಅವತ್ತು ಸೀರೆ ನೆರಿಗೆ ಹೆಣ್ಣಿನ ನಾಚಿಕೆಯನ್ನು ತಂದು ಕೊಟ್ಟಿತ್ತು. ಪೂಜೆಯಲ್ಲೇನೂ ವ್ಯತ್ಯಾಸವಿಲ್ಲ. ಪ್ರತಿ ವರ್ಷ ಕುಮಾರಿಯಾಗಿ ಮಾಡುತ್ತಿದ್ದ ಪೂಜೆಯೆಲ್ಲಾ ಈ ಶ್ರೀಮತಿಯಾಗಿ ಮಾಡಿದ್ದಷ್ಟೇ ಬದಲಾವಣೆ. ನಾನೇ ಆರತಿ ತಟ್ಟೆ ಹಿಡಿದು ಬೆಳಗುತ್ತಿದ್ದವಳು ಈ ಬಾರಿ ಅವನ ಕೈಗೆ ಹಿಡಿದು ನಿಂತಿದ್ದೆ ಅಷ್ಟೇ. ಹಗಲಿನಲ್ಲಿಲ್ಲದ ಹಬ್ಬದ ಖುಷಿ ರಾತ್ರಿಯ ದೀಪದ ಬೆಳಕಿನಲ್ಲಿ ನಮಗೆ ಕಂಡಿತ್ತು.

ಅವತ್ತು ಎಲ್ಲಿಲ್ಲದ ನಾಚಿಕೆ ನನ್ನ ಕಾಡಿದ್ದಂತೂ ಸತ್ಯ. ಸುಲಭವಾಗಿ ಅವನಿಗೆ ಸಿಕ್ಕುತ್ತಿದ್ದ ನಾನು ಅಂದು ಅದೆಷ್ಟು ಕಾಡಿದ್ದೆನೆಂದರೆ ಅವನ ಹಣೆಯ ಮೇಲಿದ್ದ ಬೆವರ ಹನಿಗಳ ಗರ್ಭದಿಂದ ಮರಿಗಳೆಲ್ಲಾ ಹುಟ್ಟಿ ಬಿಟ್ಟಿದ್ದವು. ಮಹಾಲಕ್ಷ್ಮಿ ರೂಪದಲ್ಲಿದ್ದ ನನ್ನ ಬಾಚಿ ಬೇಕೆಂಬುದು ಅವನಾಸೆಯಾಗಿತ್ತು. ನನಗೋ ನಾಚಿಕೆ ತಾಳಲಾರದೆ ಮಹಡಿ ಮೇಲಿನ ಕೋಣೆಯಲ್ಲೆಲ್ಲಾ ‘ಅವ್ರನ್ ಬಿಟ್ ಇವ್ರನ್ ಬಿಟ್ ಇವರ್ಯಾರು’ ಎನ್ನುವಂತೆ ಆಟ ಆಡಿಸೋಕೆ ಶುರುಮಾಡಿದ್ದೆ. ಬೆಳಿಗ್ಗೆ ಅವನ ಮೊಣಗಾಲ ಮೇಲೆ ಇರಿಸಿಕೊಂಡು ನನ್ನ ಕಾಲಿಗೆ ಹಾಕಿದ್ದ ಗೆಜ್ಜೆ ಆ ರಾತ್ರಿಗೆ ಹೆಚ್ಚೇ ಶಬ್ಧ ಮಾಡುತ್ತಿತ್ತು. ಡಂಗುಟ್ಟುತ್ತಿದ್ದ ಪಟಾಕಿಗಳ ಶಬ್ಧದ ನಡುವೆಯೂ ನನ್ನ ಗೆಜ್ಜೆಯ ಶಬ್ಧ ಮಾತ್ರ ಎಲ್ಲರ ಕಿವಿಗೆ ನಾಟುವಂತೆ ಕೇಳುತ್ತಿತ್ತು. ಅವನಿಗೋ ಒಂದೆಡೆ ನನ್ನಾಸೆಯಾದರೆ ಇನ್ನೊಂದೆಡೆ ನನ್ನ ಗೆಜ್ಜೆ ನನ್ನ ಹೆತ್ತವರು ಎದ್ದಾರೆಂಬ ಭಯ.

ಕೆಲ ಸಮಯದ ಬಳಿಕ ಅವನ ಬಗ್ಗೆ ಕರುಣೆ ಹುಟ್ಟಿ ಸೆರಗಂಚನ್ನು ಅವನಿಡಿಯಲು ಅನುವು ಮಾಡಿಕೊಟ್ಟೆ. ಅಂತೂ ಸೆರಗು ಹಿಡಿದ ಅವನು ನನ್ನ ಹಿಂಬದಿಯಿಂದ ತಬ್ಬಿದ್ದ. ನಾವಿಬ್ಬರೂ ಹಚ್ಚಿದ್ದ ಹಣತೆಗಳಲ್ಲಿ ಇನ್ನೂ ಎಣ್ಣೆ ಖಾಲಿಯಾಗಿರಲಿಲ್ಲ. ಅರ್ಧವಿದ್ದ ಆ ಹಣತೆಯನ್ನು ಮತ್ತಷ್ಟು ಎಣ್ಣೆ ಹಾಕಿ ಎಂದೂ ಆರದಿರಲಿ ಎಂದು ಆ ದೇವರಲ್ಲೊಂದು ಕೋರಿಕೆಯನ್ನಿಟ್ಟೆ. ಮನೆಯ ಟೆರಸ್ ಮೇಲೆ ಅವನ ತೋಳಿಗೊರಗಿ ಕುಳಿತ ದೂರದಲ್ಲೆಲ್ಲೋ ಗಗನ ಮುಟ್ಟುವಂತೆ ಕಾರಂಜಿಯಾಗುತ್ತಿದ್ದ ರಾಕೆಟ್ ಪಟಾಕಿಗಳನ್ನು ನೋಡುತ್ತಾ ಕುಳಿತೆವು.

ಸ್ವರ್ಗ ಕಣ್ಣ ಮುಂದೆ ಬಂದು ಕುಳಿತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಅವನಿಗೂ ಹಾಗೇ ಎನಿಸಿ ಇನ್ನೇನು ನನ್ನ ಹಣೆಯ ಮೇಲೆ ಮುತ್ತಿಡಬೇಕು ಅಷ್ಟರಲ್ಲಿ ಅಮ್ಮ ‘ಹಬ್ಬ ಹಾಡೋರು ಬಂದಿದ್ದಾರೆ, ಮನೆಯ ಮಗಳು ನೀನು, ದೀಪ ಒಳಗೆ ತೆಗೆದುಕೋ ಬಾ’ ಎಂದಿದ್ದರು. ಅಯ್ಯೋ ಈ ಹಬ್ಬ ಹಾಡೋರು ಒಂದೆರಡು ನಿಮಿಷ ತಡವಾಗಿ ಬರಬಾರದಿತ್ತೇ ಎಂದು ಗುನುಗುತ್ತ ಎದ್ದೆ.

Tags

Related Articles

Leave a Reply

Your email address will not be published. Required fields are marked *

Language
Close