About Us Advertise with us Be a Reporter E-Paper

ವಿರಾಮ

ಆ ಹಿಮಾಚ್ಛಾದಿತ ಕಗ್ಗಾಡಿನ ನಡುವೆ ಪ್ರತ್ಯಕ್ಷಳಾದ ಸನ್ಯಾಸಿನಿ ಕನ್ನಡತಿ ಲಲಿತಾ ಮಾಜಿ!

*ಗಜಾನನ ಶರ್ಮ,

ಅದು ಗೋಮುಖದ ಪಾದಯಾತ್ರೆಗಳಿಗೆ ನಿರ್ಮಿಸಿದ ಕಾಲು ಹಾದಿ. ಅಕ್ಕ ಪಕ್ಕದಲ್ಲಿ ಬೆಳೆದ ಮರಗಳು, ಗಿಡಗಂಟಿಗಳು. ಅವುಗಳಿಂದ ಉದುರಿದ ತರಗೆಲೆಗಳು. ರೆಂಬೆ ಕೊಂಬೆ ಬೇರುಗಳ ಚಪ್ಪರ ಬೇರೆ. ಮದ್ಯೆ ಉರುಟು ಕಲ್ಲುಗಳು. ಇಳಿಜಾರು ಹಾದಿ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅಡಿಗಳ ಆಳದ ಎತ್ತರ ಪರ್ವತದ ಸಡಿಲಗೊಂಡ ಭಯಾನಕ ಕಾಲು ಹಾದಿ. ಇಂಥ ಹಾದಿಯಲ್ಲಿ ಬೇಸಿಗೆಯಲ್ಲಿ ಒಂದು ಕೈ ನೋಡಿ ಬಿಡಬಹುದೇನೋ, ಇಳಿಯಲು. ಆದರೆ ಇದು ಮಳೆಗಾಲ, ಹಿಮ ಸುರಿವ ಚಳಿಗಾಲದಲ್ಲಿ! ಆದರೂ ಕೆಳಗೆ ಹೋಗಿ ಆ ಗುಹೆಯಲ್ಲಿರುವ ಸನ್ಯಾಸಿನಿಯನ್ನು ನೋಡಿ ಬರುವ ಆಸೆ. ಸನ್ಯಾಸಿನಿ ಇರುವ ಜಾಗಕ್ಕೆ ನಾವು ಹೋಗಬಹುದೋ, ಇಲ್ಲವೋ ಅನ್ನುವ ಆತಂಕ. ಬಂಡೆಯ ಮೇಲೆ ಬಂಡೆ ಮಲಗಿದ ಅದರ ಅಡಿಯಲ್ಲಿ ಆರು ಅಡಿ ಅಗಲ ನಾಲ್ಕು ಅಡಿ ಉದ್ದದ ಅತಿ ಕಿರಿದಾದ ಗುಹೆ. ಅಲ್ಲೊಂದು ಮೂಲೆಯಲ್ಲಿ ಬಾಲಕೃಷ್ಣನ ಮತ್ತು ಉಡುಪಿಯ ಶ್ರೀ ಪೇಜಾವರ ವಿಶ್ವೇಶ್ವರ ತೀರ್ಥರ ಭಾವಚಿತ್ರ. ಈಚೆ ಮೂರಡಿ ಎತ್ತರ, ಒಂದೂವರೆ ಅಡಿ ಅಗಲದ ಕಟ್ಟೆ. ಆ ಕಟ್ಟೆಯಲ್ಲಿ ಒಂದಿಷ್ಟು ಪುಸ್ತಕಗಳ ಜೋಡಣೆ. ಆ ಪುಸ್ತಕಗಳಲ್ಲಿ ಕನ್ನಡದ ವೇದಾಂತ ಪುಸ್ತಕಗಳೂ ಇದ್ದವು. ಸಮುದ್ರ ಮಟ್ಟದಿಂದ ಸುಮಾರು ಹನ್ನೊಂದು ಸಾವಿರ ಅಡಿ ಎತ್ತರದ ಈ ನಿರ್ಜನ ಕಗ್ಗಾಡಿನ ಕಗ್ಗಲ್ಲು ಬಂಡೆಗಳ ಆ ಪುಟ್ಟ ಗುಹೆಯಲ್ಲಿ ಕಳೆದ ಒಂದೂವರೆ ದಶಕಗಳಿಂದ ಇದ್ದು ತಪಸ್ವಿನಿ, ಸನ್ಯಾಸಿನಿ, ವಿರಾಗಿಯಾಗಿ, ದೈವ ಸಾಕ್ಷಾತ್ಕಾರಕ್ಕೆ ಮುಖ ಮಾಡಿ ಪಯಣಿಸುತ್ತಿರುವವರು ಲಲಿತಾ ಮಾಜಿ. ಇವರು ಮೂಲತಃ ಕರ್ನಾಟಕದವರು. ಹೆಚ್ಚುಕಮ್ಮಿ ತನ್ನ 20ರ ಹರೆಯದಲ್ಲಿ ಮನೆ ಬಿಟ್ಟವರು. ಈಗ ಅವರಿಗೆ 50ರ ಹರೆಯ! ಯಾರಿವರು? ಏನಿವರು? ಹೇಗಿವರು? ಅವರ ಸನ್ಯಾಸ ಆಶ್ರಮದ ಸುಖ, ದುಃಖ, ಸಾಕ್ಷಾತ್ಕಾರ ಎಲ್ಲವುಗಳ ಅತಿ ವಿಸ್ಮಯಕಾರಕ ವಿವರಣೆಗಳನ್ನು ಒಳಗೊಂಡ ಅಪರೂಪದ ಲೇಖನ. ಲಲಿತಾ ಅವರ ರಿಕೆ, ಆಗ್ರಹದ ಕಾರಣಕ್ಕೆ ಅವರ ಭಾವಚಿತ್ರ ಪ್ರಕಟಿಸಿಲ್ಲ.

ನಾವುಗಳು ಬೂಟು ಕಟ್ಟಿಕೊಂಡು ಚೀಲಗಳನ್ನು ಬೆನ್ನಿಗೇರಿಸುತ್ತಿದ್ದಂತೆಯೇ ದೂರದಲ್ಲಿ ಲಲಿತಾ ಮಾಜಿ ಬರುತ್ತಿರುವುದು ಕಾಣಿಸಿತು! ‘ನನಗೆ ಕಾಯ್ತಾ ಇದ್ದೀರಾ’ ಎನ್ನುತ್ತಾ ಅವರು ಹತ್ತಿರ ಬರುತ್ತಿದ್ದಂತೆ ನನಗೆ ನಿಜಕ್ಕೂ ಆಶ್ಚರ್ಯವಾಯಿತು! ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ‘ಗಂಗೋತ್ರಿಗೆ ಹೋಗಲೇ ಇಲ್ವಾ ಮಾಜಿ’ ಎಂದು ಪ್ರಶ್ನಿಸಿದರು ಯೋಗಾತ್ಮಾನಂದರು. ‘ಹೋಗಿ ನನ್ನ ಕೆಲಸ ಮುಗಿಸಿ ಬಂದೆ’ ಎಂದು ನಗುತ್ತಾ ಹೇಳಿದ ಆಕೆ ‘ಬನ್ನಿ, ಇಲ್ಲೇ ನನ್ನ ಆಶ್ರಮ’ ಎಂದಾಗ ನಮಗೆ ಇನ್ನಷ್ಟು ವಿಸ್ಮಯ. ನಾವು ಕುಳಿತದ್ದು ಅವರ ಗುಹೆಗೆ ಇಳಿಯುವಲ್ಲಿ. ಅವರು ಹೇಳಿದ ಸ್ಥಳ ಅದೇ ಎಂಬುದನ್ನು ನಾವು ಊಹಿಸಿಯೂ ಇರಲಿಲ್ಲ. ಅಲ್ಲಿ ಕೆಳಗೆ ಇಳಿಯುವ ದಾರಿಯ ಕುರುಹು ನಮಗೆ ಕಂಡೇ ಇರಲಿಲ್ಲ. ಅವರು ತೋರಿಸಿದ ಕಡೆ ನೋಡಿದಾಗ ನಮಗೆ ಗಾಬರಿಯಾಯಿತು. ಪೂರ್ಣ ಇಳಿಜಾರು. ಮಲೆನಾಡಿನ ಅದರಲ್ಲೂ ಜೋಗದ ಬಳಿಯ ಹುಕ್ಕಲಿನಂತಹ ಪಶ್ಚಿಮ ಘಟ್ಟದ ನೆತ್ತಿಯ ಅಡವಿ ನಡುವಿನ ಗ್ರಾಮದಲ್ಲಿ ಹುಟ್ಟಿದ ನನಗೆ ಇಂತಹ ಹಾದಿ, ಕಡಿದಾದ ಇಳಿಜಾರು ಹೊಸದೇನಲ್ಲ.

ಆದರೆ ಇವರ ಗುಹೆಗೆ ಇಳಿಯಬೇಕಾಗಿದ್ದ ಇಳಿಜಾರು ನನ್ನಂಥವರಿಗೂ ಗಲಿಬಿಲಿ ಹುಟ್ಟಿಸುವಂತಿತ್ತು. ಲಲಿತ ಮಾಜಿ ನಮ್ಮನ್ನು ನೋಡಿ ‘ಒಂದು ಕೆಲಸ ಮಾಡಿ, ನೀವು ಈ ಕಚ್ಚಾ ದಾರಿಯಲ್ಲಿ ಇಳಿಯಲು ಕಷ್ಟವಾಗಬಹುದು. ನೀವಿಲ್ಲೇ ಸ್ವಲ್ಪಹೊತ್ತು ಕೂತಿರಿ. ನಾನು ಬಿಸಿಬಿಸಿ ಕಾಫಿ ಮಾಡಿ ಇಲ್ಲಿಗೆ ತಂದು ಬಿಡ್ತೀನಿ’ ಎನ್ನುತ್ತಾ ನಾವು ಬೇಡ ಬೇಡ ಎಂದದ್ದು ಕೇಳದವರಂತೆ ಇಳಿಜಾರಿನಲ್ಲಿ ಸರಸರನೆ ನಡೆದೆ ಬಿಟ್ಟರು. ಸುಮಾರು ಐವತ್ತರ ಆಸುಪಾಸಿನ ವಯೋಮಾನದ ಚೈತನ್ಯ, ಚಟುವಟಿಕೆ, ವೇಗ, ಮುಖದಲ್ಲಿ ಸದಾ ಮಿನುಗುವ ಮಂದಹಾಸ, ಆಕೆಯ ವರ್ಚಸ್ಸು ಗಮನ ಸೆಳೆಯುವಂತಹದ್ದು . ಈ ಕಾಡಿನ ನಡುವಿನ ಏಕಾಂತ ವಾಸ್ತವ್ಯ, ಇಂತಹ ನಿರ್ಜನಾರಣ್ಯದಲ್ಲಿ ನಿರ್ಭಯದಿಂದ ನೆಲೆನಿಂತ ಸ್ಥೈರ್ಯ ಎಂತಹವರಿಗೂ ಬೆರಗು ಮೂಡಿಸುವಂತಿತ್ತು. ಅವರು ಇಳಿದದ್ದು ನಡೆನಡೆದು ಸವೆದ ಹಾದಿಯೇನೂ ಆಗಿರಲಿಲ್ಲ. ನಾವು ತಿಂಡಿ ತಿಂದ ಸ್ಥಳದಲ್ಲಿ ಬಲಕ್ಕೆ ಇಳಿಜಾರು ಇದ್ದುದರಿಂದ, ಗೋಮುಖದ ಪಾದಯಾತ್ರಿಗಳಿಗೆಂದು ನಿರ್ಮಿಸಲಾದ ಕಾಲು ಹಾದಿಯನ್ನು ಒಂದಿಷ್ಟು ಕಲ್ಲು ಕಟ್ಟಿ ಎತ್ತರಿಸಿ ತುಸು ವಿಶಾಲ ಹೀಗೆ ಕಟ್ಟಲ್ಪಟ್ಟ ಕಟ್ಟೆಯನ್ನು ಇಳಿದೇ ಅವರ ಗುಹೆಯತ್ತ ಹೋಗಬೇಕಿತ್ತು. ಪಕ್ಕದಲ್ಲಿ ಬೆಳೆದಿದ್ದ ಮರಗಳಿಂದ ಉದುರಿದ ಎಲೆಗಳು ರೆಂಬೆಕೊಂಬೆ ಕೋಲು ಕಡ್ಡಿ ಉರುಟುಗಲ್ಲುಗಳು ಎಲ್ಲವೂ ಹರಡಿಬಿದ್ದ ನಡು ನಡುವೆ ಗಿಡಗಂಟಿಗಳು ಬೆಳೆದ ಇಳಿಜಾರು ಹಾದಿ. ಸುಮಾರು ಮೂರು ಸಾವಿರ ಅಡಿಗೂ ಮಿಕ್ಕ ಎತ್ತರದ ಆ ಪರ್ವತದ ಮೇಲಿನ ಸಡಿಲ ಭೂಮಿಯಿಂದ ಉರುಳಿದ ಕಲ್ಲುಗಳು ಅಲ್ಲಲ್ಲಿ ಮರದ ಬೇರು ಬಿಳಲುಗಳಿಗೆ ಅಡ್ಡಲಾಗಿ ನಿಂತು, ಮುಂದೆ ಇರುವ ಅವಕಾಶಕ್ಕಾಗಿ ಕಾದಿರುವಂತೆ ಕಾಣಿಸುತ್ತಿದ್ದವು!

ನನಗೆ ಹೋಗಿ ಅವರ ಗುಹೆಯನ್ನು ನೋಡಿ ಬರುವ ಆಸೆ. ಆದರೆ ಸನ್ಯಾಸಿನಿಯೊಬ್ಬರೇ ಇರುವ ಸ್ಥಳಕ್ಕೆ ಹೋಗುವುದು ಸರಿಯೋ ತಪ್ಪೋ ಎಂಬ ಗೊಂದಲ. ಸರಿ ಏನಾದರೂ ಆಗಲಿ ಎಂದುಕೊಂಡು ನಮ್ಮ ಗುರುಗಳಾದ ಯೋಗಾತ್ಮಾನಂದರ ಬಳಿ ಕೇಳಿದೆ. ಅವರು ‘ಹೋಗಿ ನೋಡಿ ಬರಲೇನು ಅಡ್ಡಿಯಿದ್ದಂತಿಲ್ಲ. ಆದರೆ ಮಾತನಾಡುತ್ತ ಕುಳಿತುಕೊಳ್ಳಬಾರದು. ಯಾಕೆಂದರೆ ಇನ್ನೂ ಬಹಳ ನಡೆಯಬೇಕು. ಈಗ ಬಂದದ್ದು ಶೇಕಡಾ ಐದರಷ್ಟೂ ಆಗಿಲ್ಲ. ಮತ್ತೆ ಇಲ್ಲಿ ಸಂಜೆ ಆಯ್ತು ಅಂದ್ರೆ ವಾತಾವರಣ ಹೇಳೋಹಂಗಿಲ್ಲ’ ಎಂದು ಕೊಟ್ಟರು. ಇಷ್ಟು ಹೇಳಿದ್ದೇ ಸಾಕೆಂಬಂತೆ ನಾನು ಒಂದೊಂದೇ ಮರವನ್ನು ಆಧರಿಸಿ ಹಿಡಿದುಕೊಳ್ಳುತ್ತಾ, ಇಳಿಯುವ ದಾರಿ ಮತ್ತು ಸುತ್ತಮುತ್ತಲ ದೃಶ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಾ ಗುಹೆಯತ್ತ ಇಳಿದೆ. ಸುಮಾರು ನೂರೈವತ್ತು ಇನ್ನೂರು ಅಡಿ ಆಳಕ್ಕಿಳಿದರೆ, ಅಲ್ಲಿ ಹತ್ತೆಂಟು ಮರಗಳ ನಡುವೆ ಒಂದರ ಮೇಲೊಂದು ಬಿದ್ದಂತೆ ಎರಡು ದೈತ್ಯ ಬಂಡೆಗಳು! ಅದರ ಕೆಳಗೆ ಗುಹೆ. ನಾನು ಕೆಳಗೆ ಇಳಿಯುತ್ತಿದ್ದಂತೆ ಮೊದಲು ಕಾಣಿಸಿದ್ದು ಸುಮಾರು ಹದಿನೈದು ಅಡಿಗಳ ಅಂತರದ ಎರಡು ಮರಗಳ ನಡುವೆ ಕಟ್ಟಲ್ಪಟ್ಟ ಪ್ಲಾಸ್ಟಿಕ್ ಹಗ್ಗದ ನ್ಯಾಲೆಗಳು. ಗುಹೆಯ ಎದುರಿಗೆ ಸುಮಾರು ಆರೇಳು ಅಡಿ ಅಗಲ ಹಾಗೂ ಹನ್ನೆರಡು ಅಡಿ ಎನ್ನಬಹುದಾದಷ್ಟು ಉದ್ದದ, ಮಧ್ಯ ಮಧ್ಯ ಸಣ್ಣಗೆ ಬಿರುಕುಬಿಟ್ಟ ಸಿಮೆಂಟ್ ಮೆತ್ತಿದ ಅಂಗಳ.

ನಡುವೆ ದೊಡ್ಡ ಬಂಡೆಯ ಅಡಿಯಲ್ಲಿ ಒಂದು ಗುಹೆ. ಅದು ಒಳಗೆ ಸುಮಾರು ಆರಡಿ ಅಗಲ ನಾಲ್ಕೈದು ಅಡಿ ಉದ್ದವಿತ್ತು. ಅದರ ಒಳ ಅಂಚಿನಲ್ಲಿ ಸುಮಾರು ಒಂದೂವರೆ ಅಡಿ ಅಗಲದ ಮೂರಿಂಚು ಎತ್ತರದ ಕಟ್ಟೆ. ಅದರ ಮೇಲೆ ಬಹಳಷ್ಟು ಪುಸ್ತಕಗಳನ್ನು ಅದರಲ್ಲಿ ಒಂದಿಷ್ಟು ಕನ್ನಡದ ವೇದಾಂತದ ಪುಸ್ತಕಗಳೂ ಇದ್ದಂತೆ ಕಾಣಿಸಿತು. ಆ ಪುಟ್ಟ ಕಟ್ಟೆಯ ಬಲಬದಿಗೆ ಎರಡು ದೊಡ್ಡ ಮೋಂಬತ್ತಿಗಳು. ಅದಕ್ಕೂ ಬಲಬದಿಗೆ ಒಂದು ಬಾಲಕೃಷ್ಣನ ಮತ್ತು ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳ ಫೋಟೊ. ಪಕ್ಕದಲ್ಲಿ ಕೆಲವು ಪುಟ್ಟ ಪುಸ್ತಕಗಳನ್ನಿಟ್ಟ ವ್ಯಾಸಪೀಠ. ಮೂಲೆಯಲ್ಲೊಂದು ಪ್ಲಾಸ್ಟಿಕ್ ಚಾಪೆ. ಆ ಗುಹೆಯನ್ನು ಪ್ರವೇಶಿಸಲು ಸುಮಾರು ಮೂರಡಿ ಎತ್ತರದ, ಎರಡು ಅಡಿ ಅಗಲದ ದ್ವಾರ. ಮರದ ಚೌಕಟ್ಟು ಅಳವಡಿಸಲ್ಪಟ್ಟ ಅದಕ್ಕೆ ಶೀಟಿನ ಬಾಗಿಲು. ಗುಹೆಯ ಹೊರಗೆ ಇಳಿಬಿದ್ದ ಬಂಡೆಯನ್ನೂ ಸೇರಿಕೊಂಡಂತೆ ನಿರ್ಮಿಸಲಾದ ಸುಮಾರು ಎಂಟು ಆರು ಅಡಿ ಅಗಲದ ಜಿಂಕ್ ಶೀಟ್ ಮಾಡು. ಅದಕ್ಕೆ ಸಿಮೆಂಟ್ ಮೆತ್ತಿದ ಶಿಥಿಲವಾದ ಗೋಡೆ. ಎಡಬದಿಗೆ ಮತ್ತೊಂದು ಸಣ್ಣ ಗುಹೆ. ಅದಕ್ಕೂ ಮರದ ಚೌಕಟ್ಟು ಮತ್ತು ಮೂರಡಿ ಉದ್ದ ಮತ್ತು ಎರಡು ಅಡಿ ಅಗಲದ ಪುಟ್ಟ ದ್ವಾರ, ಅದಕ್ಕೂ ಶೀಟಿನದೇ ಬಾಗಿಲು. ಎಡಭಾಗದಲ್ಲಿಯೂ ಇನ್ನೊಂದು ಪುಟ್ಟ ಮಾಡು. ಆ ಮಾಡಿ ನಡಿಗೆ ಮತ್ತು ಅತ್ತ ಬಲಭಾಗದ ಪುಟ್ಟ ಮಾಡಿ ನಡಿಗೆ ಸ್ಟೀಲ್ ಮತ್ತು ಪ್ಲಾಸ್ಟಿಕ್ ಬಕೆಟ್ ಗಳು ಪಾತ್ರೆಗಳು, ಲೋಟ ಚೊಂಬಗಳು, ಚೀಲಗಳು, ಡಬ್ಬಗಳು, ಆಲೂಗಡ್ಡೆ, ಚೀನಿಕಾಯಿಯಂತಹ ತರಕಾರಿಗಳು… ಹೀಗೆ ಹಳ್ಳಿಮನೆಯೊಂದರಲ್ಲಿ ಹರಡಿ ಬಿದ್ದಂತಿದ್ದ ನಿತ್ಯೋಪಯೋಗಿ ವಸ್ತುಗಳು…. ಒಟ್ಟಿನಲ್ಲಿ ಸನ್ಯಾಸಿನಿಯ ಸಂಸಾರದ ಸಾಮಾನು, ಸರಂಜಾಮುಗಳು.

ನಡುವಿನ ಗುಹೆ ಪ್ರಾಯಶಃ ವಿಶ್ರಾಂತಿ ಕೊಠಡಿ. ಅದರ ಎದುರು ಅಂಗಳಕ್ಕೆ ಹೊಂದಿಕೊಂಡಂತೆ ಎರಡಡಿ ಅಗಲದ ಅರ್ಧ ಅಡಿ ಎತ್ತರದ ಕಟ್ಟೆ. ಆ ಕಟ್ಟೆಯ ಮೇಲೆ ಸುಮಾರು ಮುಕ್ಕಾಲು ಅಡಿ ವ್ಯಾಸದ ಒಂದು ಗೋಲಾಕಾರದ ಕಪ್ಪು ಅದಕ್ಕೆ ಎರಡು ಬೆಳ್ಳಿಯ ಕಣ್ಣುಗಳು. ಹಣೆಗೆ ಕುಂಕುಮ ಗಂಧ. ಅದರ ಪಕ್ಕದಲ್ಲಿ ಇನ್ನೊಂದು ಗಣೇಶನನ್ನು ಹೋಲುವ ಶಿಲೆ. ಅದಕ್ಕೂ ಕುಂಕುಮ ಗಂಧ ಲೇಪನ. ಪಕ್ಕದಲ್ಲಿ ಕೃಷ್ಣನ, ಪೇಜಾವರ ಶ್ರೀಗಳ ಮತ್ತು ಚಿನ್ಮಯಾನಂದರ ಪುಟ್ಟ ಫೋಟೋಗಳು. ಕಟ್ಟೆ ಹಿಂದಿನ ಬಂಡೆಯ ಗೋಡೆಯಲ್ಲಿ ಕೇಸರಿ ಬಣ್ಣದಲ್ಲಿ ‘ಮಾ ಅಂಜಿನಿ ಗುಹಾ’ ಎಂದು ದೇವನಾಗರಿ ಲಿಪಿಯಲ್ಲಿ ಬರೆದ ಬರಹ. ಅದೇ ರೀತಿ ಎಡಬದಿಯ ಸಿಮೆಂಟ್ ಗೋಡೆಯ ಮೇಲೂ ‘ಜೈ ಶ್ರೀ ರಾಮ್’ ಮತ್ತು ಕೆಳಗೆ ‘ಜೈ ಹನುಮಾನ್’ ಎಂಬ ಬರಹ.

ನಾನು ಮೇಲಿನಿಂದಿದ ಇಳಿದು ಬರುವುದಕ್ಕೂ, ಲಲಿತಾ ಮಾ ಒಂದು ಟ್ರೇಯಲ್ಲಿ ಉದ್ದುದ್ದದ ಲೋಟಗಳಲ್ಲಿ ಬಿಸಿಬಿಸಿ ಕಾಫಿ ಇಟ್ಟುಕೊಂಡು ಹೊರಡುವುದಕ್ಕೂ ಸರಿಯಾಯಿತು. ನಾನು ಅಂಗಳಕ್ಕೆ ಇಳಿದವನೇ ಬೂಟು ಕಳಚಿ ಅವರಿಗೆ ನಮಸ್ಕರಿಸಿದೆ. ಅವರು ತಕ್ಷಣ ‘ಬಿಸಿಯಾಗಿದೆ, ಕುಡಿದುಬಿಡಿ’ ಎಂದು ಉದ್ದ ಲೋಟದ ತುಂಬ ಕಾಫಿ ಕೊಟ್ಟರು.
ದಿವ್ಯದ ಯಾಚನೆ ಎಂಬ ಸುಮಧುರ ಯಾತನೆ
ಸಮುದ್ರಮಟ್ಟದಿಂದ ಬಹುತೇಕ ಹನ್ನೊಂದೂವರೆ ಸಾವಿರ ಅಡಿಗಳೆತ್ತರದ ಈ ನಿರ್ಜನ ನಡುವಿನ ಕಗ್ಗಲ್ಲು ಬಂಡೆಗಳ ಅಡಿಯ ಗುಹೆಯಲ್ಲಿ, ಎಲ್ಲೋ ದೂರ ದಕ್ಷಿಣದ, ಕನ್ನಡನಾಡಿನ ಏಕಾಂಗಿ ಹೆಣ್ಣುಮಗಳೊಬ್ಬಳು ಒಂಟಿಯಾಗಿ ಬದುಕುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ನಮ್ಮಿಂದ ಕಲ್ಪಿಸಿಕೊಳ್ಳಲಾಗದ ಇಂತಹದ್ದೊಂದು ಬದುಕನ್ನು ಅರ್ಥೈಸಿಕೊಳ್ಳುವುದಾದರೂ ಹೇಗೆ? ಇಲ್ಲಿಗೆ ಬಂದು ಆಕೆ ಪಡೆದಿರಬಹುದಾದರೂ ಏನು? ಆಕೆ ಬಹು ನಿರೀಕ್ಷೆಯಿಟ್ಟು ಹುಡುಕಿ ಬಂದದ್ದು ಆಕೆಗೆ ಇಲ್ಲಿ ಸಿಕ್ಕಿರಬಹುದೇ? ನಿತ್ಯ ಬದುಕಿನ ನೂರು ತಲ್ಲಣಗಳಿಂದ ಆಕೆಗೀಗ ಬಿಡುಗಡೆ ದಕ್ಕಿರಬಹುದೆ? ಸತ್ಯದರ್ಶನ ಆಕೆಗೆ ಸಾಧ್ಯವಾಗಿದೆಯೆ? ಈಶ್ವರ ಸಾಕ್ಷಾತ್ಕಾರ ಸಂಪನ್ನಗೊಂಡಿರಬಹುದೇ? ಪರಮಸತ್ಯದ ಇಂತಹದನ್ನು ನಿರ್ಲಿಪ್ತ, ನಿರ್ವಿಕಾರ, ನೈಷ್ಠಿಕ ಬದುಕು ಅನಿವಾರ್ಯವೇ? ಆಕೆಯ ನಿತ್ಯದ ಬದುಕೀಗ ನಿಜಕ್ಕೂ ಆತಂಕ ಮುಕ್ತವಾಗಿದ್ದೀತೆ? ಅಥವಾ ನಿರ್ಮೋಹವೆಂಬ ಭ್ರಮೆಯೊಂದನ್ನು ಬೆನ್ನು ಹತ್ತಿ ಬಂದು, ಮತ್ತೀಗ ಅದರಿಂದ ಹಿಂದೆ ಸರಿಯಲಾಗದೇ ಆಂತರ್ಯದಲ್ಲಿ ಆಕೆಯೂ ಮರುಗುತ್ತಿರಬಹುದೇ? ಈ ನಿರ್ಜನ ಪ್ರದೇಶದಲ್ಲಿ ಆಕೆಗೆ ತನ್ನ ನಿತ್ಯ ಬದುಕಿನ ನಿರ್ವಹಣೆಯ ಚಿಂತೆ ಕಾಡುತ್ತಿಲ್ಲವೇ? ಅಥವಾ ಶಾಶ್ವತವೆಂಬ ಶಾಶ್ವತಕ್ಕಾಗಿ ನಡೆಸುತ್ತಿರಬಹುದಾದ ನಿತ್ಯ, ನೈಮಿತ್ತಿಕ ಉಪಾಸನೆಗಳಿಂದ, ಕಠಿಣ ಯೋಗಿಕ ಸಾಧನೆಗಳಿಂದ, ವ್ರತೋಪವಾಸಗಳಿಂದ, ಆಕೆ ಸ್ವಾನಂದಾಮೃತ ತೃಪ್ತರಾಗಿರಬಹುದೇ? ಈಗ ಲೌಕಿಕ ಬದುಕಿನ ಸಕಲ ಆಕರ್ಷಣೆಗಳಿಂದ ಸಂಪೂರ್ಣ ಮುಕ್ತರಾಗಬಹುದೇ?
ಹೀಗೆ ಹಲವು ಸಂದೇಹಗಳು. ಯಾವುದನ್ನು ಕೇಳಬಹುದು, ಯಾವುದನ್ನು ಕೇಳಬಾರದು ಅರ್ಥವಾಗಲಿಲ್ಲ. ಕೊನೆಗೆ ವೈಯಕ್ತಿಕ ಬದುಕಿನ ಸರ್ವೇಸಾಮಾನ್ಯ ಪ್ರಶ್ನೆಗಳ ಮೂಲಕ ಪ್ರಶ್ನೋತ್ತರಕ್ಕೊಂದು ಪ್ರವೇಶ ಪಡೆಯೋಣವೆಂದು ನಿರ್ಧರಿಸಿ, ‘ಮಾಜಿ ನೀವು ಇಲ್ಲಿ ಎಷ್ಟು ವರ್ಷದಿಂದ ಇದ್ದೀರಿ?’ ಎಂದು ಪ್ರಶ್ನಿಸಿದೆ.

ಯಾವ ಬೃಂದಾವನವು ಸೆಳೆಯಿತೋ!
‘ನಾನು ಇಲ್ಲಿಗೆ ಬಂದು ಹದಿನಾಲ್ಕು ವರ್ಷ ಆಯ್ತು. ಮೊದಲು ಅಂದರೆ ಸುಮಾರು ಸಾವಿರದ ಒಂಭೈನೂರ ಎಂಬತ್ತೆರಡರಿಂದ ವಿವೇಕಾನಂದ ಸನ್ಯಾಸಿನಿಯಾಗಿ ಸೇವೆ ಮಾಡ್ತಿದ್ದೆ. ಅಲ್ಲಿ ಅನುಷ್ಠಾನ, ಯೋಗ, ಅಧ್ಯಯನ, ಸಾರ್ವಜನಿಕ ಸೇವೆ ಹೀಗೆಲ್ಲಾ ಹರಡಿಕೊಂಡಿತ್ತು ನಮ್ಮ ಬದುಕು. ಅದೇ ಒಂದು ಜಗತ್ತು’ ಎನ್ನುತ್ತ ನಿಟ್ಟುಸಿರು ಬಿಟ್ಟರು.
‘ನಿಮ್ಮ ಬಾಲ್ಯ ಹೇಗಿತ್ತು? ನಿಮ್ಮನ್ನು ಯಾವ ಆಕರ್ಷಣೆ ಸನ್ಯಾಸದತ್ತ ಸೆಳೀತು? ನಿಮ್ಮ ತಂದೆತಾಯಿ ಆಕ್ಷೇಪಿಸಲಿಲ್ಲವಾ? ಇದನ್ನೆಲ್ಲ ಕೇಳಬಹುದೋ, ಕೇಳಬಾರದೋ ಗೊತ್ತಿಲ್ಲ. ಹೇಳಬಹುದಾದ್ರೆ ಹೇಳಿ’ ಎಂದೆ.

‘ಹೇಳಬಾರದು ಅಂತ ಏನೂ ನಿಯಮ ಇಲ್ಲ. ಯಾಕೆ ಸುಮ್ಮನೆ ‘ಭೂತ’ದ ‘ಭೂತ’ದೊಡನೆ ಒಡನಾಟ ಅನ್ನೋದು ಬಿಟ್ಟರೆ ಕುರಿತು ಮಾತನಾಡಬಾರದು, ಅದು ನಿಷಿದ್ಧ ಅನ್ನುವಂತಹದ್ದು ಏನೂ ಇಲ್ಲ. ನಾನು ಚಿಕ್ಕಂದಿನಲ್ಲಿ ನನ್ನ ತಂದೆ, ತಾಯಿಯರ ಜೊತೆ ಬೆಂಗಳೂರಿನಲ್ಲಿ ಇದ್ದೆ. ನನ್ನ ತಂದೆತಾಯಿ ಆಗಾಗ ಅವರ ಜೊತೆ ನನ್ನನ್ನೂ ಚಿನ್ಮಯ ಮಿಷನ್, ರಾಮಕೃಷ್ಣ ಮಠ ಮುಂತಾದ ಕಡೆ ಕರೆದುಕೊಂಡು ಹೋಗುತ್ತಿದ್ದರು. ಸಹಜವಾಗಿ ನನಗೂ ಅವುಗಳ ಕುರಿತು ಶ್ರದ್ಧೆ ಬೆಳೆದಿತ್ತು. ಆದರೆ ನನ್ನ ವರ್ತನೆ ಇತರರಿಗಿಂತ ಕೊಂಚ ಭಿನ್ನವಾಗಿತ್ತು ಅಂತ ನನ್ನ ಈಗಿನ ಭಾವನೆ. ಕೆಲವು ವೇಳೆ ನನಗೇ, ನಾನು ಭಿನ್ನ ಅಂತ ಅನಿಸುತಿತ್ತು. ಎಷ್ಟೋ ದಿನ ರಾತ್ರಿ ಮಲಗಿದಾಗ ಕಣ್ಣು ಮುಚ್ಚುತ್ತಿದ್ದಂತೆಯೇ, ನನ್ನ ಕಣ್ಣೆದುರು ಒಂದು ಬೆಳಕಿನ ಪ್ರವಾಹ ಹರಿಯತೊಡಗುತ್ತಿತ್ತು. ಆಮೇಲೆ ಯಾವಾಗ್ಲೋ ನನಗೆ ನಿದ್ದೆ ಬರ್ತಿತ್ತು. ಆದ್ರೆ ಬೆಳಿಗ್ಗೆ ಅಪ್ಪ ಅಮ್ಮನಿಗೆ ಹೇಳೋದಕ್ಕೆ ಸಾಧ್ಯವಾಗ್ತಿರಲಿಲ್ಲ. ಏನೂಂತ ಹೇಳೋದು? ರೂಪ ಇಲ್ಲ, ಶಬ್ದ ಇಲ್ಲ, ಬರೀ ಬೆಳಕಿನ ಹೊಳೆ.

ಎಷ್ಟೋ ಸಲ ರಾತ್ರಿ ಕನಸಿನಲ್ಲಿ ಭಯದಿಂದ ಓಡುತ್ತಿದ್ದೆ. ಓಡೋದು ಅಂದ್ರೆ ಓಡ್ತಾ ಇರೋದು. ಅದು ಯಾವುದೋ ಅವ್ಯಕ್ತ ಭಯದಿಂದ ಓಡ್ತಿದ್ದೆ, ಕೊನೇಗೆ ಓಡಿ, ಓಡಿ, ರಾಮಕೃಷ್ಣಪರಮಹಂಸರ ಫೋಟೋ ಅಥವಾ ಮೂರ್ತಿಯ ಮರೆಯಲ್ಲಿ ಅವಿತು ಕುಳಿತು ಕೊಳ್ತಿದ್ದೆ. ಅಲ್ಲಿ ನನಗೇನೋ ಸಾಂತ್ವನ. ಏನೋ ನೆಮ್ಮದಿ! ಹೀಗೆ ಏನೇನೋ ಚಿಕ್ಕಂದಿನ ನೆನಪು’ ಎಂದವರೇ ಎದ್ದು ಒಳಗೆ ಹೋದರು. ಯಾಕೆ ಹೋದರೆಂದು ತಿಳಿಯಲಿಲ್ಲ. ಅರೆನಿಮಿಷದಲ್ಲಿ ಅವರು ಬರುತ್ತಿದ್ದರಂತೆ ನನ್ನ ಮುಂದಿನ ಪ್ರಶ್ನೆ ಸಿದ್ಧವಾಗಿತ್ತು.

‘ಮುಂದೆ ನೀವು ಸನ್ಯಾಸ ಕಡೆ ಹೇಗೆ ಬಂದಿರಿ? ನಿಮ್ಮ ತಂದೆತಾಯಿ ಆಕ್ಷೇಪಿಸಲಿಲ್ಲವೇ?’
‘ಸನ್ಯಾಸ’ ಎನ್ನುತ್ತ ನಕ್ಕು, ಅವರು ತುಸು ‘ನಿಮಗೆ ಹೇಳಬೇಕು ಅಂದ್ರೆ, ಸನ್ಯಾಸಕ್ಕೆ ನಾವು ಬರೋದಲ್ಲ. ಭಗವಂತ ಬಯಸಿ ತರೋದು. ಯಾವುದೋ ಕಾಣದ ಕೈ ನಮ್ಮನ್ನು ಸೆಳೆಯೋದು. ನನಗೆ ನಾನು ಸಂನ್ಯಾಸಿನಿ ಆಗ್ತೀನಿ ಅನ್ನೋ ಕಲ್ಪನೆಯೂ ಇರಲಿಲ್ಲ. ಆಗಬೇಕು ಅನ್ನೋ ಸಂಕಲ್ಪವೂ ಇರಲಿಲ್ಲ. ನಾನು ನನ್ನ ಪದವಿ ಪರೀಕ್ಷೆ ಮುಗಿಸಿ, ಮನೆಯಲ್ಲಿದ್ದಾಗ, ‘ಸಮಾಜಸೇವೆಗಾಗಿ ಸನ್ಯಾಸಿನಿಯರಾಗಲು ಸಿದ್ಧವಿರುವ ಯುವತಿಯರು ಬೇಕು’ ಅನ್ನುವ ವಿವೇಕಾನಂದ ಕೇಂದ್ರದ ಜಾಹೀರಾತು ನೋಡಿದೆ. ಅದ್ಯಾಕೋ ನನ್ನನ್ನು ತುಂಬ ಸೆಳೀತು. ಅದಕ್ಕೆ ಅಪ್ಲೈ ಮಾಡಿದೆ. ಕರೆ ಬಿಡ್ತು. ಹೋಗಬೇಕು ಅಂತ ಗಾಢವಾಗಿ ಅನ್ನಿಸಲಿಕ್ಕೆ ಪ್ರಾರಂಭವಾದಾಗ ಮನೆಯಲ್ಲಿ ಹೇಳ್ದೆ. ಮನೆಯಲ್ಲಿ ದೊಡ್ಡ ಸಂಘರ್ಷವೇ ನಡೀತು. ನಾನು ನನ್ನ ನಿರ್ಧಾರಕ್ಕೆ ಕಟ್ಟುಬಿದ್ದಾಗ ತಂದೆತಾಯಿ ಇನ್ನಿಲ್ಲದಂತೆ ಆಕ್ಷೇಪ ಮಾಡಿದರು. ಮನೆಯಲ್ಲಿ ನಿತ್ಯ ಯುದ್ಧ ನಡೆಯಿತು. ವಾದ-ವಿವಾದ, ಬೈಗುಳ, ಅಳು. ಕೊನೆಗೆ ಮೌನ. ಇಡೀ ಮನೆ ಒಂದು ರೀತಿಯ ಸೂತಕದ ಮನೆಯಂತಾಯಿತು. ಮೌನ, ಮೌನ, ಸುದೀರ್ಘ ಮೌನ. ಆದರೆ ನಾನು ನಿಶ್ಚಯಿಸಿಬಿಟ್ಟಿದ್ದೆ, ಅಲ್ಲ, ಭಗವಂತ ನಿಶ್ಚಯಿಸಿಬಿಟ್ಟಿದ್ದ. ಹಾಗಾಗಿ ಬಂಧನಗಳೆಲ್ಲವನ್ನೂ ಕಳಚಿಕೊಂಡು ಹೋಗಿ ಕೇಂದ್ರಕ್ಕೆ ಸೇರ್ಪಡೆಗೊಂಡೆ. ಬಹಳ ವರ್ಷ ವಿವೇಕಾನಂದ ಕೇಂದ್ರದ ಆಶ್ರಯದಲ್ಲಿ ಅಸ್ಸಾಮಿನ ಶಾಲೆಯೊಂದರಲ್ಲಿ ಸೇವೆ ಸಲ್ಲಿಸಿದೆ.‘ಮತ್ತೆ ಅಲ್ಲಿಂದ ಬಿಡುಗಡೆ ಹೇಗಾಯಿತು? ಹಿಮಾಲಯಕ್ಕೆ ಹೇಗೆ ಬಂದಿರಿ? ಈಗಲೂ ವಿವೇಕಾನಂದ ಕೇಂದ್ರದ ಸಂಪರ್ಕ ಇದೆಯಾ?’

‘ಭಗವಂತ ತನ್ನ ಇಚ್ಛೆ ನಡೆದೇ ತೀರುವಂತಹ ಸನ್ನಿವೇಶ ತಾನೇ ಸೃಷ್ಟಿಸಿಕೊಳ್ಳುತ್ತಾನೆ ಎಂಬುದಕ್ಕೆ ನಾನು ವಿವೇಕಾನಂದ ಕೇಂದ್ರ ಬಿಡಲು ಕಾರಣವಾದ ಘಟನೆ ಸಾಕ್ಷಿ. ನಾನು ಅಸ್ಸಾಮಿನ ಶಾಲೆಯಲ್ಲಿದ್ದಾಗ ಕೂಡ ಆಗಾಗ ಇವನ್ನೆಲ್ಲ ಬಿಟ್ಟು ಭಗವಂತನ ಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೋ, ಹೋಗಿಬಿಡೋಣ ಅನ್ನಿಸುತ್ತಿತ್ತು. ಆದರೆ ವಿವೇಕಾನಂದ ಕೇಂದ್ರದಲ್ಲಿ ಬದುಕಿಗೆ ಒಂದು ರೀತಿಯ ಭದ್ರತೆ, ನಿಶ್ಚಿತತೆ ಸಿಕ್ಕಿತ್ತು. ಅದನ್ನು ಕಳೆದುಕೊಂಡು, ಕಳಚಿಕೊಂಡು ಹೊರಡುವುದು ಸುಲಭಸಾಧ್ಯವೆಂದು ನನಗೇ ಅನ್ನಿಸುತ್ತಿರಲಿಲ್ಲ.

ಒಂದು ದಿನ ಶಾಲೆ ಮುಗಿದ ಎಷ್ಟೋ ಹೊತ್ತಿನ ನಂತರ ನಮ್ಮ ವಿದ್ಯಾರ್ಥಿಯೊಬ್ಬನ ತಂದೆ ದೂರವಾಣಿ ಕರೆ ಮಾಡಿ ತನ್ನ ಮಗು ಇನ್ನೂ ಶಾಲೆಯಿಂದ ಬಂದಿಲ್ಲವೆಂದೂ, ಶಾಲೆಯಲ್ಲಿಯೇ ಇದ್ದಾನೆಯೋ ನೋಡಿ ಎಂದು ಹೇಳುತ್ತಾರೆ. ಅದೊಂದು ದೊಡ್ಡ ಶಾಲೆ. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು. ನಾವು ಮಾತಾಜಿಗಳು ಹುಡುಕಿದೆವು. ಮಗು ಸಿಗಲಿಲ್ಲ. ಪೋಷಕರೂ ಶಾಲೆಯ ಬಳಿ ಬಂದು ಗೋಳಾಡಿದರು. ನಮ್ಮೆಲ್ಲರಿಗೂ ಬಹಳ ದುಃಖವಾಯಿತು. ಅದು ನನ್ನ ತರಗತಿಯ, ನಾನು ಅತಿಯಾಗಿ ಪ್ರೀತಿಸುವ ಮಗುವಾಗಿತ್ತು. ರಾತ್ರಿಯಾದರೂ ಮಗು ಸಿಗಲಿಲ್ಲವೆಂದಾದಾಗ ನಾನು ದೇವರ ಪಾದದಲ್ಲಿ ತಲೆಯಿಟ್ಟು ಅಳತೊಡಗಿದೆ. ‘ದೇವರೇ ಮಗುವನ್ನು ಹುಡುಕಿಕೊಡು. ಅದಕ್ಕೆ ಏನೂ ಅಪಾಯವಾಗದಿರಲಿ. ಬೆಳಗಾಗುವ ಹೊತ್ತಿಗೆ ಮಗುವಿನ ಸುಳಿವು ತಿಳಿದರೆ ನಾನು ನನ್ನ ಜೀವನವನ್ನು ನಿನಗೇ ಮುಡಿಪಿಡುತ್ತೇನೆ. ನಿನ್ನನ್ನು ಹುಡುಕಿಕೊಂಡು ನಿನ್ನಲ್ಲಿಗೇ ಬಂದುಬಿಡುತ್ತೇನೆ. ನನಗೆ ಹೇಗಾದರೂ ಮಾಡಿ ಸುಳಿವು ಸಿಕ್ಕುವಂತೆ ಮಾಡು, ಪರಮಾತ ್ಮ’ ಎಂದು ಆತನಿಗೆ ಸಂಪೂರ್ಣ ಶರಣು ಹೋದೆ. ಮರುದಿನ ಬೆಳಗಾಗುವಷ್ಟರಲ್ಲಿ ಮಗುವಿನ ತಂದೆ ಬಂದು, ಮಗುವು ತಮ್ಮ ಸಂಬಂಧಿಕರೊಬ್ಬರ ಬಳಿ ಇರುವನೆಂದು ಹೇಳಿದರು. ನನಗೆ ದೇವರೇ ಪ್ರತ್ಯಕ್ಷವಾದಷ್ಟು ಆನಂದವಾಯಿತು. ರಾತ್ರಿಯ ನಿರ್ಧಾರಕ್ಕೆ ಕಟ್ಟುಬೀಳುವ ಇಚ್ಛೆ ಪ್ರಬಲವಾಯಿತು. ಆ ದಿನವೇ ವಿವೇಕಾನಂದ ಕೇಂದ್ರದ ಎಲ್ಲ ಬಂಧನಗಳನ್ನೂ ಕಳಚಿಕೊಂಡು ಹಿಮಾಲಯದತ್ತ ಹೊರಟುಬಿಟ್ಟೆ.’

‘ಹೊರಡುವಾಗ ಎಲ್ಲಿಗೆ ಅಂತ ನಿಖರವಾದ ಗುರಿ ಇತ್ತಾ? ಇಂತಹ ಗುರುವಿನ ಅಡಿಯಲ್ಲಿ ಇಂತಹ ಮಾಡಬೇಕು ಅಂತ ಏನಾದರೂ ಸಂಕಲ್ಪ ಇತ್ತಾ?’ ಅಂತ ಕೇಳಿದೆ. ‘ಗುರಿ, ಸಂಕಲ್ಪ ಅಂತೆಲ್ಲ ಏನೂ ಇರಲಿಲ್ಲ. ಒಟ್ಟಿನಲ್ಲಿ ಬಂಧನಗಳನ್ನು ಬಿಡಿಸಿಕೊಂಡು ಹಿಮಾಲಯಕ್ಕೆ ಹೋಗಬೇಕು. ಯಾರಾದರೂ ಗುರುವನ್ನು ಹುಡುಕಿಕೊಂಡು ಭಗವಂತನ ಸಾಕ್ಷಾತ್ಕಾರಕ್ಕೆ ಸಿದ್ಧಳಾಗಬೇಕು ಅನ್ನೋ ಒಂದೇ ಸಂಕಲ್ಪ. ಹಿಮಾಲಯದ ಯಾವ ದಿಕ್ಕಿಗೆ ಹೋಗಬೇಕು. ಎಲ್ಲಿ ಉಳಿದುಕೊಳ್ಳಬೇಕು ಅಂತ ಯಾವುದೇ ಗೊತ್ತು ಗುರಿಗಳನ್ನೂ ಇಟ್ಟುಕೊಳ್ಳದೇ ಹೊರಟಿದ್ದೆ.’ಅವರ ಮಾತಿನಲ್ಲಿ ದೃಢತೆಯಿತ್ತು. ಅದು ನನ್ನ ಕುತೂಹಲಕ್ಕೆ ಇನ್ನಷ್ಟು ಇಂಬು ಕೊಡತೊಡಗಿತು. ಅವರ ಮಾತನ್ನು ಕೇಳಿದೆ.‘ಯಾವುದಾದರೂ ಗುರುವನ್ನು ಹುಡುಕಿಕೊಳ್ಳಬೇಕು ಅಂದ್ರಲ್ಲ. ಯಾರು ನಿಮ್ಮ ಗುರು? ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ನಿರ್ದಿಷ್ಟ ವ್ಯಕ್ತಿತ್ವ ಇತ್ತೇ ಅಥವಾ ನಿರಾಕಾರ, ನಿರ್ಗುಣ ಸ್ವರೂಪವನ್ನೇ ಅಥವಾ ಯಾವುದೇ ತತ್ವವನ್ನೇ ಗುರುವೆಂದು ಬಗೆದು ಹೊರಟಿರಾ?’.

‘ನಿಖರವಾದ ಗುರಿ ಏನೂ ಇರಲಿಲ್ಲ. ಆರಂಭದಲ್ಲಿ ನನಗೆ ಪೇಜಾವರ ವಿಶ್ವೇಶ್ವರತೀರ್ಥರು ಗುರುವಾಗಿದ್ದರು. ಅನಂತರ ಚಿನ್ಮಯ ಮಿಷನ್ನಿನ ಚಿನ್ಮಯಾನಂದರನ್ನು ಗುರುವಾಗಿ ಸ್ವೀಕರಿಸಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಮುನ್ನಡೆಸಿದ್ದು ನನ್ನದೇ ಅಂತರಾತ್ಮ. ಅದು ಬೋಧೆ ನೀಡಿದಂತೆ ಸಾಗುತ್ತಿದ್ದೆ. ನನಗೆ ಎಲ್ಲೇ ಹೋದರೂ ಗುರುಕೃಪೆ, ದೈವಕೃಪೆ ಜೊತೆಗಿದ್ದವು. ನಾನು ಗೊತ್ತು ಗುರಿ ಇಲ್ಲದೇ ಹಿಮಾಲಯದತ್ತ ಬಂದಾಗ ಕೂಡ ತೊಂದರೆಯಾಗಿಲ್ಲ. ನನ್ನನ್ನು ಯಾವುದೋ ಪುಣ್ಯದ ಕವಚ ಆವರಿಸಿಕೊಂಡಿತ್ತು. ಎಲ್ಲಿಗೇ ಹೋದರೂ ಅಲ್ಲಿಂದ ಮುಂದಿನ ದಾರಿಗೆ ಲಿಂಕ್ ಸಿಗುತ್ತಿತ್ತು. ನಾನು ಯಾವುದೇ ಪೂರ್ವ ತಯಾರಿಯಿಲ್ಲದೆ ಹರಿದ್ವಾರಕ್ಕೆ ಬಂದೆ. ಅಲ್ಲಿ ನನಗೆ ಡಾ. ಅರುಣಾ ಕುಲಕರ್ಣಿ ಅನ್ನುವವರು ತುಂಬಾ ಸಹಾಯ ಮಾಡಿದರು. ಇನ್ನೂ ಯಾರು ಯಾರೋ ಅಪರಿಚಿತರೆಲ್ಲ ಸಹಾಯ ಮಾಡಿದರು. ನನಗೆ ಸುಭದ್ರಾ ವಿಳಾಸ ಕೊಟ್ಟರು. ಇನ್ನೂ ಕೆಲವು ಬೇರೆ ಮಾತಾಜಿಯವರ ಪರಿಚಯ ತಿಳಿಸಿ ವಿವರ ಕೊಟ್ಟರು. ಅವರು ತುಂಬಾ ಒಳ್ಳೆಯ ಸಾಧಕಿ. ನನಗೆ ಆರಂಭದಲ್ಲಿ ಆಶ್ರಯ ಕೊಟ್ಟರು. ನಮ್ಮ ಕನ್ನಡದವರೇ. ನಾನು ಧರೇಲಿಯಲ್ಲಿ ಅವರ ಆಶ್ರಮದಲ್ಲಿ ಸುಮಾರು ಎರಡು, ಮೂರು ತಿಂಗಳು ಇದ್ದೆ. ಹಾಗೆ ಅಲ್ಲಿ ಬೇರೆ ಆಶ್ರಮಗಳಲ್ಲೂ ಇದ್ದೆ. ಅನಂತರ ಒಂದು ವರ್ಷ ಯಮುನೋತ್ರಿಗೆ ಹೋಗಿ ನೆಲೆಸಿದೆ. ನಂತರ ಸುಭದ್ರಾ ಮಾ ಅವರು ತಪೋವನದಲ್ಲಿ ಇದ್ದಾರೆ ಅಂತ ತಿಳಿದು, ತಪೋವನಕ್ಕೆ ಮೂರು ವರ್ಷ ಅಲ್ಲಿ ಉಳಿದೆ. ಆಮೇಲೆ ಇಲ್ಲಿಗೆ ಬಂದೆ. ಇಲ್ಲಿ ಹದಿನಾಲ್ಕು ವರ್ಷಗಳಿಂದಲೂ ಇದ್ದೇನೆ.’

‘ಮಾಜಿ, ನೀವು ಈ ಆಶ್ರಮಕ್ಕೆ ಹೇಗೆ ಬಂದಿರಿ? ಇಲ್ಲಿ ನೆಲೆಸಬಹುದು ಅನ್ನೋ ಪ್ರೇರಣೆ ನಿಮಗೆ ಯಾರಿಂದ ದೊರೆಯಿತು? ಇದನ್ನು ಹೇಗೆ ಹುಡುಕಿಕೊಂಡಿರಿ?’ ಎಂದು ಕೇಳಿದೆ. ಲಲಿತಾ ಮಾಜಿ ಮಾತನಾಡಲು ಉತ್ಸುಕರಾಗಿದ್ದರು. ಅವರೀಗ ಸಂಪೂರ್ಣ ತಮ್ಮನ್ನು ತಾವು ಅನಾವರಣಗೊಳಿಸಿಕೊಳ್ಳಲು ಸಿದ್ಧರಾದಂತಿತ್ತು. ಮುಕ್ತ ಮನಸ್ಸಿನಿಂದ ಮಾತನಾಡತೊಡಗಿದರು.
‘ತಪೋವನದಿಂದ ಗಂಗೋತ್ರಿಗೆ ಬಂದಾಗ ನನಗೆ ಗಂಗೋತ್ರಿಯ ಸುತ್ತಮುತ್ತ ಎಲ್ಲಾದರೂ ಇಚ್ಛೆ ಉಂಟಾಯಿತು. ಈ ಗಂಗೋತ್ರಿಯ ಕಂಪನವೇ ಹಾಗಿದೆ. ಪ್ರಾಯಶಃ ಇಲ್ಲಿನ ವೈಬ್ರೇಶನ್ ಮನಗಂಡೇ ಭಗವತ್ಪಾದರು ಇದನ್ನು ಗಂಗೋತ್ರಿಯೆಂದು ಕರೆದಿರಬೇಕು. ಯಾಕೆಂದರೆ ಪುಣ್ಯ ಕ್ಷೇತ್ರವೆಂದರೆ ತಾನೂ ಪವಿತ್ರವಾಗಿ ತನ್ನನ್ನು ಸ್ಪರ್ಶಿಸಿದವರನ್ನೂ ಪವಿತ್ರಗೊಳಿಸಬೇಕು. ಈ ಪವಿತ್ರ ತಾಣದಲ್ಲಿ ನನಗೆ ಉಳಿಯುವ ಆಸೆಯಾಗಿದ್ದು ನಿಜ. ಆದರೆ ಉಳಿದುಕೊಳ್ಳುವುದೆಲ್ಲಿ? ನಾನು ಗಂಗೋತ್ರಿಯಲ್ಲಿ ಇದ್ದು ಎಲ್ಲಿಯಾದರೂ ದೀರ್ಘಾವಧಿಯ ವಾಸ್ತವ್ಯಕ್ಕೆ ಆಶ್ರಯ ಸಿಕ್ಕೀತಾ ಎಂದು ಶೋಧಿಸುತ್ತಲೇ ಇದ್ದೆ. ಭಾಗೀರಥೀ ನದಿಯ ಪಾತ್ರದಲ್ಲಿ ಮೇಲ್ಭಾಗದಲ್ಲಿ ಎಲ್ಲಾದರೂ ಗುಹೆಗಳು ಸಿಗಬಹುದೇನೋ ಬಹಳ ದಿನ ಹುಡುಕಾಡಿದೆ. ದಿನವೂ ನದೀಪಾತ್ರದಲ್ಲಿ ಬಹುದೂರ ಸಂಚರಿಸಿತ್ತಿದ್ದೆ. ಒಂದು ದಿನ ಯಾರೋ ಒಬ್ಬ ಸಜ್ಜನರು ಹೀಗೊಂದು ಗುಹೆ ಇದೆ ಅಂತ ಹೇಳಿದರು. ಇಲ್ಲಿ ಬಂದು ನೋಡಿದೆ. ಇದರ ದ್ವಾರಕ್ಕೆ ಬಾಗಿಲುಗಳು ಇರಲಿಲ್ಲ. ಆದರೂ ನನಗೆ ಹಿಡಿಸಿತು. ಬಾಗಿಲುಗಳು ಇಲ್ಲದೇ ಬದುಕಬಹುದು. ಆದರೆ ದ್ವಾರಗಳಿಲ್ಲದ ಬದುಕು ಕಷ್ಟ. ನನಗೆ ಭಗವತ್ ದ್ವಾರವೇ ತೆರೆದಿದೆ! ಅದು ಮುಚ್ಚುವುದು ಬೇಡ. ಬಾಗಿಲುಗಳೇ ಇಲ್ಲದಿರುವಾಗ ಮುಚ್ಚುವ ಪ್ರಮೇಯವೇ ಬರುವುದಿಲ್ಲ ವೆಂದುಕೊಂಡೆ. ಇದು ಈಶಾವಾಸ್ಯ ಗುರುಗಳಿಗೆ ಸೇರಿದ್ದು ಅಂತ ತಿಳೀತು. ಅವರನ್ನು ಕೇಳಿದೆ. ಅವರು ಸಂತೋಷದಿಂದ ಒಪ್ಪಿದರು. ಅನಂತರ ಇಲ್ಲಿಗೆ ಬಂದೆ. ಈಗ 14 ವರ್ಷದಿಂದ ಇಲ್ಲೇ ಇದ್ದೇನೆ.’

‘ಮಾಜಿ, ಚಳಿಗಾಲದಲ್ಲೂ ಅಂದರೆ ಹಿಮ ಸುರಿಯುವ ಕಾಲದಲ್ಲೂ ಇಲ್ಲಿ ಒಬ್ಬರೇ ಇರುತ್ತೀರಾ?’ ನೇರ ಪ್ರಶ್ನೆ.
‘ಇರುತ್ತಿದ್ದೆ. ಈಗ ಎರಡು ವರ್ಷಗಳಿಂದ ಕೆಳಗೆ ಗಂಗೋತ್ರಿ ಇಲ್ಲವೇ ಉತ್ತರ ಕಾಶಿಗೆ ಹೋಗುತ್ತೇನೆ’.
ಕೊನೆಯ ಪ್ರಶ್ನೆಯನ್ನು ಕೇಳಿದೆ ‘ಮಾಜಿ ನಿಮಗೆ ಇಲ್ಲಿ ಭಯವಾಗಲ್ವಾ? ಪ್ರಾಣಿಗಳು ನುಗ್ಗಬಹುದು, ಕಲ್ಲು ಬಂಡೆಗಳು ಪ್ರವಾಹ ಬರಬಹುದು, ಯಾರೋ ದುಷ್ಕರ್ಮಿಗಳು ಆಕ್ರಮಣ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಈ ಒಂಟಿತನ ಶಿಕ್ಷೆ ಅಲ್ಲವಾ?’ಎಂದು ಕೇಳಿದೆ.

ಅದಕ್ಕೆ ಅವರು ಜೋರಾಗಿ ನಕ್ಕುಬಿಟ್ಟರು. ‘ನಾನು ಇಲ್ಲಿ ಇದ್ದೇನೆ ಅಂದರೆ ಇದುವರೆಗೂ ಹಾಗೇನೂ ಆಗಿಲ್ಲ ಅಂತಲ್ಲವೇ? ಆಗದೇ ಇರೋದು ಆಗುತ್ತೆ ಅಂತ ಭಯ ಪಡೋದ್ರಲ್ಲಿ ಯಾವ ಅರ್ಥ ಇದೆ? ಈಗ ನೀವು ಇಲ್ಲಿ ಕುಳಿತಿದ್ದೀರಿ. ಯಾವುದಾದರೂ ಬಂಡೆ ಬಿದ್ದರೆೆ ಏನು ಮಾಡುತ್ತೀರಿ? ಹಾಗೇನೂ ಆಗಲ್ಲ ಎಂಬ ಧೈರ್ಯದಿಂದ ತಾನೇ ನೀವು ಕುಳಿತಿರುವುದು? ಎಲ್ಲಕ್ಕಿಂತ ಮುಖ್ಯವಾಗಿ ಭಗವಂತನ ಚಿಂತನೆಯಲ್ಲಿ ಮುಳುಗಿದ್ದರೆ ಹೊರಗಿನ ಯಾವ ಭಯವೂ ಇರೋಲ್ಲ. ಇನ್ನು ಒಂಟಿತನ ಅನ್ನೋದು. ಹೌದು, ಈ ಒಂಟಿತನವೇ ನಮ್ಮನ್ನು ಭಗವಂತ್ ಚಿಂತನೆಗೆ ತೊಡಗಿಸುವ ಪ್ರಪ್ರಥಮ ಸೋಪಾನ. ನಿಮಗೆ ಒಂಟಿತನ ಶಿಕ್ಷೆ ಅನಿಸಬಹುದು. ಆದರೆ ಒಬ್ಬ ಯೋಗಿಗೆ ಅದು ದೈವ ಒದಗಿಸುವ ಅಪೂರ್ವ ಅವಕಾಶ. ಜಗತ್ತಿನಿಂದ ಗದ್ದಲಗಳಿಂದ ಬಿಡಿಸಿಕೊಳ್ಳುವುದೇ ಸಾಧನೆಯ ಮೊದಲ ಹೆಜ್ಜೆ.’ ಅವರ ಮಾತಿನಲ್ಲಿ ದೃಢತೆ, ಕಣ್ಣಿನಲ್ಲಿ ಕಾಂತಿ, ಅವರ ದೈಹಿಕ ಭಾಷೆಯಲ್ಲಿ ವ್ಯಕ್ತವಾಗುತ್ತಿದ್ದ ಅವರ ನಿರ್ಭಯತೆಯನ್ನು ನಿರ್ಭಿಡೆಯಿಂದ ಸೂಚಿಸುತ್ತಿದ್ದವು. ಅವರಿಗೆ ಯಾವ ಗೊಂದಲವಾಗಲಿ, ಸಂಶಯವಾಗಲಿ, ಭಯವಾಗಲಿ ಇರುವಂತೆ ಕಾಣಿಸಲಿಲ್ಲ. ಸಂದೇಹ ಭಯಾತಂಕಗಳು ಇದ್ದದ್ದು ನಮಗೆ. ಅವರ ದೃಢತೆ ನಮಗೆ ಸುಲಭಕ್ಕೆ ಅರ್ಥವಾಗುವ ಸಂಗತಿಯೂ ಅಲ್ಲ. ಸುಲಭಕ್ಕೆ ಅರ್ಥವಾಗುವ ವ್ಯಕ್ತಿತ್ವ ಅವರದ್ದಲ್ಲ ಎನ್ನಿಸಿತು.

‘ಕೊನೆಯದಾಗಿ ಮಾಜಿ, ನಿಮಗೆ ಭಗವಂತನ ಸಾಕ್ಷಾತ್ಕಾರ ಆಗಿದೆಯಾ? ಇಲ್ಲಿನ ಬದುಕು ನಿಮಗೆ ತೃಪ್ತಿ ತಂದಿದೆಯಾ?’ ಎಂದು ಕೇಳಿಬಿಟ್ಟೆ. ನನ್ನ ಈ ಪ್ರಶ್ನೆಯಿಂದ ಲಲಿತಾ ಮಾಜಿಯವರು ಮಾತ್ರ ತುಸುವೂ ವಿಚಲಿತರಾಗಲಿಲ್ಲ. ಅವರು ಎದ್ದು ನಿಂತು, ನನ್ನತ್ತ ಎರಡು ಹೆಜ್ಜೆ ಹಾಕಿ ‘ಸಾಕ್ಷಾತ್ಕಾರ ಆಗಿದೆಯೋ ಇಲ್ಲವೋ ನನಗೂ ತಿಳಿಯದು. ಆದರೆ ಭಗವಂತನ ಸಾನ್ನಿಧ್ಯದ ಅನುಭವ ಆಗಿದೆ. ಆಗ ನಾನು ತಪೋವನದಲ್ಲಿ ಇದ್ದೆ. ಒಂದು ದಿನ ಅದೇನು ಆಂತರಿಕ ಒತ್ತಡವೋ, ಮನಸ್ಸಿನಾಳದ ಅಪ್ಸೆಯೋ, ಹಿಮದ ಹಾದಿಯಲ್ಲಿ ನಡೆಯಬೇಕು ಅನ್ನೋ ಬಯಕೆ ಹುಟ್ಟಿ ಅನುಷ್ಠಾನ ಮುಗಿದ ತಕ್ಷಣ ಆಶ್ರಮದಿಂದ ಹೊರಟುಬಿಟ್ಟೆ. ಕಣ್ಣಿಗೆ ಬಿದ್ದ ಒಂದು ದಾರಿ ಹಿಡಿದು ನಡೆಯತೊಡಗಿದೆ. ಹಾಗೇ ನಡೆಯುತ್ತಾ ತುಂಬಾ ದೂರ ಹೋಗಿಬಿಟ್ಟೆ. ಕುರಿತು ಯೋಚಿಸಲಿಲ್ಲ. ಮುಂದೆ ಗುರಿ ಏನು ಎಂದು ಚಿಂತಿಸಲಿಲ್ಲ. ಯಾಕೆ ಎಲ್ಲಿಗೆ ಹೋಗುತ್ತಿದ್ದೇನೆಂದು ನನಗೆ ಗೊತ್ತಿರಲಿಲ್ಲ. ಎಷ್ಟು ಹೊತ್ತು ಹಾಗೆ ನಡೆಯುತ್ತಿದ್ದೆನೋ ಅರಿವಿಲ್ಲ. ಹಲವು ಗಂಟೆಗಳ ಕಾಲ ಎಷ್ಟೋ ದೂರ ನಡೆದ ಮೇಲೆ ಇನ್ನು ನಡೆಯಲಾರೆ ಅನ್ನಿಸಿತು. ನಿಂತೆ. ನಿಲ್ಲುತ್ತಿದ್ದಂತೆ ಅದುವರೆಗೂ ನಡೆದ ಸುಸ್ತಿಗೋ, ಅನುಷ್ಠಾನ ಮುಗಿದ ತಕ್ಷಣ ಹೊರಟ ಶ್ರಮಕ್ಕೊ, ಬೆಳಗಿನಿಂದ ಆಹಾರ ಸೇವಿಸದೆ ಇದ್ದ ಕಾರಣಕ್ಕೋ, ತಲೆ ಸುತ್ತಿದಂತಾಗಿ, ಕೆಳಗೆ ಬಿದ್ದು ಬಿಟ್ಟೆ. ಪ್ರಜ್ಞೆ ತಪ್ಪಿತ್ತೋ ತಿಳಿಯಲಿಲ್ಲ. ತುಸು ಸಮಯದ ಅನಂತರ ಕಣ್ಣು ಬಿಟ್ಟಾಗ ನಾನು ಎಲ್ಲಿರುವೆನೆಂಬುದೇ ತಿಳಿಯಲಿಲ್ಲ. ಸುತ್ತಲೂ ನೋಡಿದೆ. ನಾನು ಹಿಂತಿರುಗಬೇಕಾದ ದಿಕ್ಕು ಯಾವುದೆಂಬುದೂ ಗೊತ್ತಾಗಲಿಲ್ಲ. ಎತ್ತ ನೋಡಿದರೂ ಅಖಂಡ ಹಿಮದ ರಾಶಿ. ನೋಡುವ ಕಣ್ಣು ಓಡುವವರೆಗೂ ನೀರ್ಗಲ್ಲ ಬಂಡೆಗಳು!

ನನಗೆ ದಿಗ್ಭ್ರಮೆಯಾಯಿತು. ಒಳಗೊಳಗೇ ಭಯವಾಯಿತು. ನಾನೇಕೆ ಬಂದೆ, ಹಿಂತಿರಗುವುದು ಹೇಗೆಂಬುದೇ ತಿಳಿಯದಾಯಿತು. ‘ಕೃಷ್ಣಪರಮಾತ್ಮಾ , ನೀನೇ ಗತಿ’ ಎಂದು ಧ್ಯಾನಿಸಿದೆ. ಎಷ್ಟು ಹೊತ್ತು ಕಣ್ಣುಮುಚ್ಚಿ ಕುಳಿತಿದ್ದೆನೋ ಗೊತ್ತಿಲ್ಲ . ಕಂಬನಿ ಉಕ್ಕಿ ಗಲ್ಲಗಳೆಲ್ಲವೂ ತೋಯ್ದು ಹೋಗಿತ್ತು. ನನಗಾಗುತ್ತಿದ್ದುದು ಭಯವೋ, ಆತಂಕವೋ, ಅದೊಂದು ಬಗೆಯ ಅಖಂಡ ತೃಪ್ತಿಯೋ ಅರ್ಥವಾಗಿದ ಸ್ಥಿತಿಯಲ್ಲಿದ್ದೆ.

ಕಣ್ಣು ತಿಳಿಯಾದಾಗ ದೂರದಲ್ಲಿ ಉದ್ದದ ಕೋಲೊಂದನ್ನು ಭುಜದ ಮೇಲಿಟ್ಟುಕೊಂಡು ಅದರ ಮೇಲೆ ಎರಡು ಕೈಗಳನ್ನು ಹೇರಿಕೊಂಡ ತರುಣ ತುರುಗಾಹಿಯೊಬ್ಬ ಬರುತ್ತಿರುವ ಸ್ಪಷ್ಟ ಚಿತ್ರ ಕಾಣಿಸಿತು. ಬಾಲ್ಯದಲ್ಲಿ ನೋಡುತ್ತಿದ್ದ ತುರುಗಾಹಿ ಕೃಷ್ಣನ ಮಸುಕು ಚಿತ್ರದಂತೆ ಅದು ಕಾಣುತ್ತಿತ್ತು. ನವಿಲುಗರಿ ಇರಲಿಲ್ಲ ಅಷ್ಟೇ. ಬರಬರುತ್ತಾ ಚಿತ್ರ ಸ್ಪಷ್ಟವಾಗಿ ನಾನು ಆತನನ್ನು ಕೈಬೀಸಿ ಕರೆಯಬೇಕೆಂದು ಕೊಂಡರೂ ನನ್ನ ಕಂಠವೇ ಕುಸಿದು ಹೋಗಿತ್ತು. ಆಶ್ಚರ್ಯವೆಂದರೆ ಆತನೇ ನನ್ನತ್ತ ಬಂದ. ಪರಿಚಯ ಇರುವವರಂತೆ, ‘ಇಷ್ಟು ದೂರ ಯಾಕೆ ಬಂದಿರಿ? ನೀವು ಎಲ್ಲಿಗೆ ಹೋಗಬೇಕು?’ ಎಂದ. ನನಗೆ ಗೊತ್ತಿಲ್ಲ ಎನ್ನಬೇಕೆಂದುಕೊಂಡೆ. ಆದರೆ ಹೇಳಲಾಗಲಿಲ್ಲ. ಆತನೇ ಮಾತು ಮುಮದುವರಿಸಿದ. ‘ತಪೋವನಕ್ಕೆ ಹೋಗಬೇಕಲ್ಲವೇ, ಬನ್ನಿ ನನ್ನ ಹಿಂದೆ’ ಎಂದ. ಅವನ್ಯಾರೋ ಅಪರಿಚಿತ, ಅವನ ಹಿಂದೆ ಹೋಗುವುದು ಸರಿಯೋ ತಪ್ಪೋ ಎಂದು ಯೋಚಿಸದೆ ಮರುಮಾತಿಲ್ಲದೆ ಹೊರಟುಬಿಟ್ಟೆ. ಅವನನ್ನು ನೋಡಿದರೆ ‘ಭೋಟಿಯಾ’ ತರುಣನಂತಿದ್ದ. ತುಸು ಹೊತ್ತಿನಲ್ಲೇ ತಪೋವನದ ನಮ್ಮ ಗುಹೆಯ ದ್ವಾರದಲ್ಲಿದ್ದೆವು. ಹೋಗುವಾಗ ಅದೆಷ್ಟೋ ದೂರ ನಡೆದ ನೆನಪು. ಈಗ ದೂರವೆನ್ನಿಸಲೇ ಇಲ್ಲ. ಅವನ ಬೆನ್ನ ಹಿಂದೆ ಬರುವಾಗ ಅದೇನೋ ದಿವ್ಯ ಆನಂದ. ಅಮ್ಮನ ಜೊತೆಗೆ ಹೋಗುತ್ತಿರುವ ಪುಳಕ, ಅದ್ಭುತ ಅನುಭೂತಿ. ಅನಿರ್ವಚನೀಯ ಆತ್ಮತೃಪ್ತಿ! ಕೊನೆಗೆ, ಗುಹೆಯ ಬಾಗಿಲಲ್ಲಿ ನಿಂತು ಅವನನ್ನು ಒಳಗೆ ಕರೆದೆ. ಅವನು ಬರಲೇ ಇಲ್ಲ . ನನ್ನನ್ನು ನೋಡಿ ಮುಗುಳ್ನಕ್ಕ. ನನಗೆ ಗಂಟಲು ಸರಿ ಹೋಗಿತ್ತು.

ಅವನ ಬಳಿ ಹೋಗಿ ಅವನನ್ನೇ ಕೇಳಿದೆ ‘ನಿಜ ಹೇಳು, ಯಾರು ನೀನು? ನಿನ್ನ ಹೆಸರೇನು?’ ಎಂದೆ. ಅವನು ಮತ್ತೆ ಮುಗುಳು ನಗೆ ಚೆಲ್ಲಿದನೇ ಹೊರತು ಮಾತನಾಡಲಿಲ್ಲ. ನಾನು ಆತನೊಡನೆ ಮತ್ತೆ ಕೇಳಿದೆ. ‘ನನಗೆ ಅರ್ಥವಾಯಿತು. ನೀನು ಪರಮಾತ್ಮ . ನೀನೇ ಕೃಷ್ಣ, ಹೌದು ನೀನೆ!!’ ನಾನು ಹೇಳುತ್ತಲೇ ಇದ್ದೆ…. ಆದರೆ ಆತ ನಗುತ್ತಾ ಹೊರಟು ಹೋಗಿದ್ದ!
ಆತ ಇಂದಿಗೂ ನನ್ನೊಳಗೆ ಪ್ರಶ್ನೆಯಾಗಿ ನಿಂತಿದ್ದಾನೆ. ಇಂದಿಗೂ ಆ ಪ್ರಸಂಗ ನನ್ನೊಳಗೊಂದು ಪುಳಕವೆಬ್ಬಿಸುತ್ತದೆ. ಭಗವಂತನೆಂದರೆ ಇಂತವರೇ ಅಲ್ಲವೇ?’ ಎಂದು ಮಾಜಿ ಮೌನವಾದರು. ತುಸು ಸಮಯದ ನಂತರ ‘ನಿಮ್ಮ ಇನ್ನೊಂದು ಪ್ರಶ್ನೆ, ಈ ಬದುಕು ನಿಮಗೆ ತೃಪ್ತಿ ತಂದಿದೆಯಾ ಎಂದಲ್ಲವೇ? ಇದು ಯಾವುದೇ ಸನ್ಯಾಸಿಗೆ ಕೇಳುವ ಪ್ರಶ್ನೆ ಅಲ್ಲ. ಅಂದರೆ ನೀವು ಕೇಳಿದ್ದು ತಪ್ಪು ಎಂಬ ಅಭಿಪ್ರಾಯ ನನ್ನದಲ್ಲ. ಆದರೆ ಈ ಪ್ರಶ್ನೆಗೆ ಸನ್ಯಾಸಿ ಉತ್ತರಿಸುವುದು ಕಷ್ಟ. ಯಾಕೆಂದರೆ ಸನ್ಯಾಸದ ಉದ್ದೇಶವೇ ಬದುಕನ್ನು ಮೀರುವುದು. ಬದುಕಲ್ಲಿ ಆತ ತೃಪ್ತನಾದರೆ ಆತನ ಮೋಕ್ಷದ ಅಥವಾ ಭಗವತ್ ಸಾಕ್ಷಾತ್ಕಾರದ ಆಕಾಂಕ್ಷೆಯೇ ಸ್ಥಗಿತಗೊಳ್ಳುತ್ತದೆ. ಅಂದರೆ ಹೊಟ್ಟೆಪಾಡಿಗಾಗಿ ಸನ್ಯಾಸವನ್ನು ಆಶ್ರಯಿಸಿದವರಿಗೆ ಈ ಪ್ರಶ್ನೆಯೇ ಹೊರತು, ಬದುಕನ್ನು ಮೀರಲು ಹೊರಟ ಸಾಧುಗಳಿಗಲ್ಲ.’ ಎಂದರು. ನಾನು ಆ ಪ್ರಶ್ನೆ ಕೇಳಬಾರದಿತ್ತು ಎಂದುಕೊಂಡೆ. ನನ್ನೊಳಗೆ ಇನ್ನೂ ಹತ್ತೆಂಟು ಪ್ರಶ್ನೆಗಳು ಹಾಗೆಯೇ ಉಳಿದಿದ್ದವು. ಕೆಯ ಮುಖವೋ ಗೋಮುಖ! ಅದೆಂತಹ ಮುಗ್ಧತೆ! ಅದೆಂತಹ ಸೌಮ್ಯತೆ! ಎಲ್ಲರೂ ಒಬ್ಬೊಬ್ಬರಾಗಿ ಮಾಜಿ ಅವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟೆವು.

Tags

Related Articles

Leave a Reply

Your email address will not be published. Required fields are marked *

Language
Close