ವಿಶ್ವವಾಣಿ

ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ: ಕಿರಿದೇ ಕ್ಯೂಟ್!

ರವತ್ತುಎಪ್ಪತ್ತರ ದಶಕಗಳಲ್ಲಿ ಬಿನಾಕಾ ಟೂತ್‌ಪೇಸ್‌ಟ್ ಬಳಸುತ್ತಿದ್ದವರಿಗೆ ಇದು ಗೊತ್ತಿರುತ್ತದೆಹೊಸ ಟೂತ್‌ಪೇಸ್‌ಟ್ ಅದರ ಪ್ಯಾಕೆಟ್‌ನಲ್ಲಿ ಪ್ಲಾಸ್ಟಿಕ್‌ನ ಪುಟ್ಟದೊಂದು ಪ್ರಾಣಿ ಅಥವಾ ಪಕ್ಷಿ ಇರುತ್ತಿತ್ತು. ಅಂತಹ ಪ್ರಾಣಿಪಕ್ಷಿ ಗೊಂಬೆಗಳನ್ನು ಸಂಗ್ರಹಿಸುವುದು ಕೆಲವರಿಗೆ ಒಂದು ಒಳ್ಳೆಯ ಹವ್ಯಾಸವೂ ಆಗಿರುತ್ತಿತ್ತು. ನಾಯಿ, ಬೆಕ್ಕು, ಹಸು, ಕುರಿ, ಗಿಳಿ, ಕೋಳಿ, ಮೊಲ, ಆಮೆ, ಆನೆ, ಒಂಟೆ, ಕತ್ತೆ, ಕುದುರೆ, ಹುಲಿ, ಸಿಂಹ, ಕರಡಿ, ಮೊಸಳೆ, ಜಿರಾಫೆ ಇವೆಲ್ಲ ವಿಧವಿಧ ಬಣ್ಣಗಳವು ಸಿಗುತ್ತಿದ್ದವು. ಸಸ್ಯಾಹಾರಿಗಳಿಗೂ ಬಾಯಿಯಲ್ಲಿ ನೀರೂರುವಂತೆ ಇರುತ್ತಿತ್ತು, ಆ ‘ಕ್ಯೂಟ್’ ಮಿಕಗಳ ವರ್ಣವೈವಿಧ್ಯ! ನಾಣ್ಯನೋಟು, ಅಂಚೆಚೀಟಿ, ಬೆಂಕಿಪೊಟ್ಟಣ, ಕವರ್ ಇತ್ಯಾದಿಗಳಂತೆಯೇ ಅದೂ ಒಂದು ಕಲರ್‌ಫುಲ್ ಕಲೆಕ್ಷನ್ ಆಗಿ ಕಂಗೊಳಿಸುತ್ತಿತ್ತು. ನಮ್ಮ ಮನೆಯಲ್ಲೂ ಹತ್ತಿರಹತ್ತಿರ ನೂರರಷ್ಟು ಬಿನಾಕಾ ಗೊಂಬೆಗಳು ಸಂಗ್ರಹವಾಗಿದ್ದವು. ಒಂಥರದಲ್ಲಿ ಪುಟ್ಟದೊಂದು ಝೂ ಇದ್ದಂತೆ. ಚಿಕ್ಕ ಮಕ್ಕಳಿಗೆ ಪ್ರಾಣಿಪಕ್ಷಿಗಳನ್ನು ಪರಿಚಯಿಸಿಕೊಳ್ಳಲಿಕ್ಕೆ, ಅವುಗಳ ಬಗ್ಗೆ ಕುತೂಹಲ ಹೆಚ್ಚಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತಿತ್ತು.

ಒಂದು ಟೂತ್‌ಪೇಸ್‌ಟ್ ಆಗಿ ಬಿನಾಕಾ ಬ್ರಾಂಡ್ ಅಷ್ಟೊಂದು ಸರ್ವಶ್ರೇಷ್ಠವಾಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಾಣಿಗೊಂಬೆಗಳಿಂದಾಗಿ ಮತ್ತು ರೇಡಿಯೊ ಸಿಲೋನ್‌ನಲ್ಲಿ ಪ್ರತಿ ಬುಧವಾರ ಪ್ರಸಾರವಾಗುತ್ತಿದ್ದ ಅಮೀನ್ ಸಯಾನಿಯ ಸಿಹಿಜೇನ ದನಿಯ ಕಾರ್ಯಕ್ರಮದಿಂದಾಗಿ ಬಿನಾಕಾ ಎಂಬ ಹೆಸರಂತೂ ಆ ಕಾಲದಲ್ಲಿ ಮನೆಮನೆಗಳಲ್ಲೂ ಚಿರಪರಿಚಿತ. ಹತ್ತಿಪ್ಪತ್ತು ವರ್ಷಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಬಿನಾಕಾ ಬ್ರಾಂಡ್ ಆಮೇಲೆ ಸಿಬಾಕಾ ಎಂದು ಹೆಸರು ಬದಲಾಯಿಸಿಕೊಂಡಿತು. ಕೋಲ್ಗೇಟ್ ಕಂಪನಿಯು ಸಿಬಾಕಾ ಬ್ರಾಂಡ್‌ಅನ್ನು ಸ್ವಾಧೀನಪಡಿಸಿಕೊಂಡಿತು. ಪ್ರಾಣಿಪಕ್ಷಿ ಗೊಂಬೆಗಳು ಕ್ರಮೇಣ ಮಾಯವಾದುವು.

ಗ್ರಾಹಕರನ್ನು ಆಕರ್ಷಿಸಲಿಕ್ಕಾಗಿ ಗೃಹೋಪಯೋಗಿ ಉತ್ಪನ್ನಗಳೊಂದಿಗೆ ಇನ್ನ್ಯಾವುದೋ ಚಿಕ್ಕಪುಟ್ಟ ವಸ್ತುವನ್ನು ಉಚಿತವಾಗಿ ಕೊಡುವುದು ಎಲ್ಲ ಕಂಪನಿಗಳೂ ಆಗಾಗ ಬಳಸುವ ಮಾರ್ಕೆಟಿಂಗ್ ತಂತ್ರ. ಆ ತಂತ್ರ ಅಲ್ಲಿಗೇ ನಿಲ್ಲುವುದಿಲ್ಲ. ಅಂತಹ ಯೋಜನೆಗಳು ಸಾಮಾನ್ಯವಾಗಿ ಸ್ವಲ್ಪ ಸಮಯ ಮಾತ್ರ ಇರುತ್ತವೆ. ‘ಬಾ ನೊಣವೆ ಬಾ ನೊಣವೆ ಬಾ ನನ್ನ ಬಲೆಗೆ’ ಎಂದು ಗ್ರಾಹಕರಿಗೆ ಉತ್ಪನ್ನದ ರುಚಿ ಹತ್ತಿಸಿದ ಮೇಲೆ ಕಂಪನಿಯು ಉಚಿತ ಕೊಡುಗೆಯನ್ನು ನಿಲ್ಲಿಸಿಬಿಡುತ್ತದೆ. ನಾಜೂಕುತನದಿಂದ ಆ ಉತ್ಪನ್ನದ ಬೆಲೆಯನ್ನೂ ಹೆಚ್ಚಿಸಿಬಿಡುತ್ತದೆ. ತನಗರಿವಿಲ್ಲದಂತೆಯೇ ಗ್ರಾಹಕ ಟೋಪಿ ಹಾಕಿಸಿಕೊಂಡಾಗಿರುತ್ತದೆ. ಆದರೆ ಬಿನಾಕಾ ಪ್ರಾಣಿಗೊಂಬೆಗಳ ವಿಚಾರ ಮಾತ್ರ ಸ್ವಲ್ಪ ಭಿನ್ನ. ನಿರಂತರ ಹತ್ತಿಪ್ಪತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಅವು ಜನಪ್ರಿಯವಾಗಿದ್ದವೆಂದರೆ, ಬಳಕೆದಾರರಿಗೆ ಆ ಉಚಿತ ‘ಉಚಿತ’ ಎನ್ನುವುದರ ಹೊರತಾಗಿ ಏನೋ ಒಂದು ವಿಶೇಷ ಆಕರ್ಷಣೆ ಇತ್ತು. ಬಿನಾಕಾ ಟೂತ್‌ಪೇಸ್‌ಟ್ ಕಂಪನಿಯು ವರ್ಷಗಟ್ಟಲೆ ಆ ಆಫರ್‌ಅನ್ನು ಮುಂದುವರಿಸಿತ್ತೆಂದರೆ ಮಾರ್ಕೆಟಿಂಗ್ ಹೊರತಾಗಿ ಅದರ ಹಿಂದೆ ಏನೋ ಒಂದು ಕಾರಣ ಇತ್ತು.

ಇವತ್ತಿನ ಅಂಕಣದಲ್ಲಿ ವಿವರಿಸಬೇಕೆಂದಿರುವ ಒಂದು ವೈಜ್ಞಾನಿಕ ಸಿದ್ಧಾಂತಕ್ಕೆ ಈ ಬಿನಾಕಾ ಪ್ರಾಣಿಗೊಂಬೆಗಳು ಅತ್ಯಂತ ಸೂಕ್ತ ಉದಾಹರಣೆ ಎಂದು ನನಗನಿಸಿದ್ದರಿಂದ ಅವುಗಳನ್ನಿಲ್ಲಿ ನೆನಪಿಸಿಕೊಂಡಿದ್ದೇನೆ. ನಿಮಗೂ ನೆನಪಿಗೆ ಬರುವಂತೆ ಮಾಡಿದ್ದೇನೆ.

ಈಗ ಬಿನಾಕಾ ಪ್ರಾಣಿಗೊಂಬೆಗಳನ್ನೊಮ್ಮೆ ಪಕ್ಕಕ್ಕಿಡೋಣ. ಪಂಜೆ ಮಂಗೇಶರಾಯರು ಬರೆದ ಕಥೆಗಳಲ್ಲಿನ ‘ಮೂರು ಕರಡಿಗಳು’ ಕಥೆಯನ್ನು ಒಮ್ಮೆ ನೆನಪಿಸಿಕೊಳ್ಳೋಣ. ಸಣ್ಣ ಕರಡಿ, ಹದಾ ಕರಡಿ, ದೊಡ್ಡ ಕರಡಿಹೀಗೆ ಮೂರು ಕರಡಿಗಳು ವಾಸವಾಗಿದ್ದ ಮನೆಯೊಳಗೆ ಒಬ್ಬ ಪುಟ್ಟ ಹುಡುಗಿಯು ಹೋಗಿ ದಾಂಧಲೆಯೆಬ್ಬಿಸಿ ಬರುವ ಕಥೆ. ಪಂಜೆಯವರು ಬಹುಶಃ ಇದನ್ನು ಇಂಗ್ಲಿಷ್ ಸಾಹಿತ್ಯದಿಂದ ಪಡೆದು ಕನ್ನಡದ ಕಂಪು ಬೆರೆಸಿ ಬರೆದದ್ದಿರಬಹುದು. ಏಕೆಂದರೆ ‘ಗೋಲ್ಡಿಲಾಕ್ ಆ್ಯಂಡ್ ದ ತ್ರೀ ಬೇರ್ಸ್’ ಎಂಬ ಹೆಸರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿನ ಅತ್ಯಂತ ಜನಪ್ರಿಯ ಫೇರಿಟೇಲ್‌ಗಳಲ್ಲೊಂದು ಎಂದು ಜಗದ್ವಿಖ್ಯಾತ. ಮೂಲ ಇಂಗ್ಲಿಷ್‌ನಲ್ಲೂ, ಪಂಜೆಯವರ ಕನ್ನಡ ಆವೃತ್ತಿಯಲ್ಲೂ, ದೊಡ್ಡ ಕರಡಿ ಮತ್ತು ಹದಾ ಕರಡಿಯ ಭೂಮಿಕೆ ಕಡಿಮೆ. ಹುಡುಗಿ ಎಬ್ಬಿಸಿದ ದಾಂಧಲೆಯ ಅತಿ ಹೆಚ್ಚಿನ ಫಲಾನುಭವಿ ಸಣ್ಣ ಕರಡಿ. ಫಲಾನುಭವಿ ಎಂದರೆ ಅದಕ್ಕೆ ಒಳ್ಳೆಯದಾಯ್ತು ಅಂತಲ್ಲ, ಹುಡುಗಿಯ ದಾಂಧಲೆಯಿಂದ ಅದಕ್ಕೆ ಹೆಚ್ಚು ಎಫೆಕ್‌ಟ್ ಆಯ್ತು ಎಂದು. ಕಥೆ ರಂಜನೀಯವೆನಿಸುವುದೇ ‘ಸಣ್ಣ ಕರಡಿಯ ಹಾಸಿಗೆ ಹಾಳಾಯ್ತು, ಸಣ್ಣ ಕರಡಿಯ ಮಂಚ ಮುರಿದುಬಿತ್ತು, ಸಣ್ಣ ಕರಡಿಯ ತಟ್ಟೆಯಲ್ಲಿದ್ದ ಪಾಯಸ ಮಾಯವಾಯ್ತು…’ ಅಂತೆಲ್ಲ ಕರಡಿಯ ಉಲ್ಲೇಖವೇ ಹೆಚ್ಚು ಬರುವುದರಿಂದ. ಕಥೆ ಓದುವ/ಕೇಳುವ ಮಗುವಿನ ಮನಸ್ಸಿನ ತುಂಬೆಲ್ಲ ಸಣ್ಣ ಕರಡಿಯ ಚಿತ್ರಣವೇ ದಟ್ಟವಾಗಿ ಹಬ್ಬುವುದರಿಂದ.

ಇಲ್ಲಿಯೂ ಅದೇ ಒಂದು ವೈಜ್ಞಾನಿಕ ಸಿದ್ಧಾಂತ ಕೆಲಸ ಮಾಡುತ್ತದೆ ಎಂದು ನನಗನಿಸಿತ್ತದೆ. ಏನದು? ನಮಗೆ ಪುಟ್ಟಪುಟ್ಟ ವಸ್ತುಗಳು, ಪ್ರಾಣಿಪಕ್ಷಿಗಳ ಪುಟ್ಟ ಮರಿಗಳು, ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಪುಟಾಣಿ ಪ್ರತಿಕೃತಿಗಳು ಏಕೆ ಹೆಚ್ಚು ಇಷ್ಟವಾಗುತ್ತವೆ, ಮುದ್ದುಮುದ್ದಾಗಿ ‘ಕ್ಯೂಟ್’ ಅಂತನಿಸುತ್ತವೆ ಎನ್ನುವುದೇ ಆ ಸಿದ್ಧಾಂತ.

ಒಂದು ಪುಟ್ಟ ವಸ್ತು, ಅಥವಾ ಪ್ರಾಣಿಯ ಮರಿ, ಅಥವಾ ಒಂದು ಪುಟ್ಟ ಮಗು ತುಂಬ ಮುದ್ದಾಗಿ ಇದೆ ಎಂದು ನಮಗೆ ಅನಿಸುವುದೇನೋ ಅನಿಸುತ್ತದೆ. ಆದರೆ ಅದನ್ನು ಮಾತಿನಲ್ಲಾಗಲೀ ಅಕ್ಷರಗಳಲ್ಲಾಗಲೀ ವಿವರಿಸುವುದು ಕಷ್ಟ. ವೈಜ್ಞಾನಿಕ ವಿವರಣೆವಿಶ್ಲೇಷಣೆಗಳಂತೂ ಇನ್ನೂ ಕಷ್ಟ. ಬಹುಶಃ ಇದುವರೆಗೆ ವೈಜ್ಞಾನಿಕ ಅಧ್ಯಯನಗಳೂ ಮನುಷ್ಯನಲ್ಲಿ ಭಯ, ಗಾಬರಿ, ಚಿಂತೆ ಮುಂತಾದ ಭಾವನೆಗಳ ಬಗ್ಗೆ ನಡೆದಿವೆಯೇ ಹೊರತು ‘ಕ್ಯೂಟ್’ ಅಂತನಿಸುವುದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಂತಿಲ್ಲ. ಹಾಗೆ ನೋಡಿದರೆ ಮಾರ್ಕೆಟಿಂಗ್‌ನಲ್ಲಿ, ಫ್ಯಾಷನ್‌ನಲ್ಲಿ, ಡಿಸೈನ್‌ನಲ್ಲಿ ‘ಕ್ಯೂಟ್‌ನೆಸ್’ಗೇ ಅಗ್ರ ನಿಜವಾಗಿ ಕ್ಯೂಟ್ ಅಂತನಿಸದಿರುವುದಕ್ಕೂ ಜಾಹಿರಾತಿನ ಮೋಡಿಯಿಂದ ಎಲ್ಲಿಲ್ಲದ ಕ್ಯೂಟ್‌ನೆಸ್ ತರಿಸಬಲ್ಲರು ಮಾರ್ಕೆಟಿಂಗ್ ಮೇಧಾವಿಗಳು. ಒಂದಂತೂ ನಿಜ. ಆಕಾರದಲ್ಲಿ, ಗಾತ್ರದಲ್ಲಿ ಪುಟ್ಟದಾಗಿ ಇರುವಂಥದೇ ಹೆಚ್ಚು ಮುದ್ದಾಗಿ ಕಾಣಿಸುವುದು. ಅದನ್ನೊಮ್ಮೆ ಕೈಯಲ್ಲಿ ಹಿಡಿದು ಪ್ರೀತಿಯಿಂದ ಹಿಂಡಿ ಹಿಪ್ಪೆ ಮಾಡಿಬಿಡೋಣ ಅನಿಸುವುದು. ಅದು ಬೇಕಿದ್ದರೆ ನಾಯಿಮರಿಯಿರಲಿ, ಬೆಕ್ಕಿನ ಮರಿಯಿರಲಿ, ಛಂಗನೆ ನೆಗೆಯುವ ಕರುವಿರಲಿ, ಕಿಲಕಿಲ ನಗುವಾಗ ಕೆನ್ನೆಗಳಲ್ಲಿ ಗುಳಿ ಮೂಡುವ ಪುಟ್ಟ ಮಗು ಇರಲಿ, ಗೊಂಬೆಯಿರಲಿ, ಗೊಂಬೆಮನೆಯಿರಲಿ, ಮುಷ್ಟಿಯೊಳಗೆ ಮುಚ್ಚಿಟ್ಟುಕೊಳ್ಳಬಲ್ಲ ತಿಂಡಿ ಪದಾರ್ಥವೇ ಪುಟಾಣಿ ಸೈಜಿನದು ಹೆಚ್ಚು ಮುದ್ದು. ಕಿರಿದೇ ಕ್ಯೂಟ್.

ಯಾಕೆ ಹೀಗೆ? ಇದಕ್ಕೆ ವಿಜ್ಞಾನವು ಒದಗಿಸಿರುವ ಆರು ಕಾರಣಗಳು ತುಂಬ ಸ್ವಾರಸ್ಯಕರವಾಗಿವೆ.

1. ಪ್ರಕೃತಿಸಹಜವಾಗಿ ನಾವೆಲ್ಲರೂ ‘ಪೋಷಕರು’: 1943ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ, ಪ್ರಾಣಿಗಳ ವರ್ತನೆಯನ್ನು ಕುರಿತು ಅನೇಕ ಸಂಶೋಧನೆಗಳನ್ನು ನಡೆಸಿರುವ, ವಿಜ್ಞಾನಿ ಕೊನ್ರಾಡ್ ಲೊರೆಂಜ್ ಎಂಬುವರು ವಿವರಿಸಿರುವಂತೆದುಂಡಗಿನ ತಲೆ, ಪುಟ್ಟ ದೇಹ, ದೊಡ್ಡ ಕಣ್ಣುಗಳು ಇವಿಷ್ಟಿದ್ದರೆ ಮರಿಯನ್ನು ಹೆಚ್ಚು ಪ್ರೀತಿಸುವ ತುಡಿತ ತಾಯಿಪ್ರಾಣಿಯಲ್ಲಿ ತೀವ್ರವಾಗುತ್ತದೆ. ಆಯಾ ಜೀವಪ್ರಭೇದದ ಮತ್ತು ಉಳಿವಿಲ್ಲಿಯೂ ಇದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರಾಣಿಳಲ್ಲಷ್ಟೇ ಅಲ್ಲ, ಮನುಷ್ಯನಿಗೂ ಇದು ಅನ್ವಯಿಸುತ್ತದೆ. ಈ ಕ್ಷೇತ್ರದಲ್ಲಿ ನಡೆದಿರುವ ಇತ್ತೀಚಿನ ಸಂಶೋಧನೆಗಳಂತೂ ಇನ್ನೂ ಆಸಕ್ತಿಕರವಾದೊಂದು ವಿಷಯವನ್ನು ತಿಳಿಸುತ್ತವೆ. ಏನೆಂದರೆ, ಮನುಷ್ಯನಲ್ಲಿ ಬರೀ ರೂಪ ಅಥವಾ ಗಾತ್ರವಷ್ಟೇ ಅಲ್ಲ, ಶಬ್ದ ಮತ್ತು ವಾಸನೆಗಳೂ ಪಾತ್ರ ವಹಿಸುತ್ತವೆ. ಪುಟ್ಟ ಮಗುವಿನ ಕಿಲಕಿಲ ನಗು, ಪುಟ್ಟ ಮಗುವಿನ ದೇಹವು ಸೂಸುವ ಆ ಒಂದು ಅನನ್ಯ ವಿಶೇಷ ಪರಿಮಳ (ಜಾನ್ಸನ್‌ಸ್ ಬೇಬಿ ಪೌಡರ್‌ನಿಂದ ಬಂದದ್ದಲ್ಲ, ಪರಿಮಳ) ತಾಯಿಯಲ್ಲಿ, ಅಥವಾ ಆ ಮಗುವಿನ ಲಾಲನೆಪಾಲನೆ ಮಾಡುವ ಯಾರಲ್ಲೇ ಆದರೂ ಮಮತೆಯ ಮಹಾಪೂರ ಉಕ್ಕುವಂತೆ ಮಾಡಬಲ್ಲವು. ಮತ್ತೆ ಕೆಲವು ಸಂಶೋಧನೆಗಳು ಇನ್ನೂ ಒಂದು ಸ್ವಾರಸ್ಯಕರ ಅಂವನ್ನು ಹೊರಗೆಡಹಿವೆಅದೇನೆಂದರೆ ಪುಟ್ಟ ವಸ್ತುಗಳು ನಮಗೆ ಕ್ಯೂಟ್ ಅಂತನಿಸುವುದಷ್ಟೇ ಅಲ್ಲ, ನಮ್ಮ ಮನಸ್ಸಿನಲ್ಲಿ ಅವುಗಳ ಗಾತ್ರ, ಆಕಾರ (ಬಹುಶಃ ತೂಕ ಸಹ) ನಿಜವಾದ ಪ್ರಮಾಣಕ್ಕಿಂತ ಇನ್ನೂ ಪುಟ್ಟದಾಗಿರುತ್ತದೆ. ಎಲ್ಲಿಯವರೆಗೆಂದರೆ, ಒಂದಕ್ಕಿಂತ ಹೆಚ್ಚು ಮಕ್ಕಳಿರುವ ತಾಯಂದಿರು ತಂತಮ್ಮ ಕೊನೆಯ ಮಗುವನ್ನು ಎಷ್ಟು ಮೇಲೂ ಇನ್ನೂ ಪುಟ್ಟದಾಗಿಯೇ ಇದೆಯೆಂದು ಭಾವಿಸುತ್ತಾರಂತೆ! ಒಟ್ಟಿನಲ್ಲಿ ಪ್ರೀತಿ ಮತ್ತು ಗಾತ್ರಗಳದು ವಿಲೋಮ ಅನುಪಾತ.

2. ಪುಟ್ಟ ವಸ್ತುಗಳು ನಮ್ಮನ್ನು ಹೆಚ್ಚು ಜಾಗರೂಕರನ್ನಾಗಿಸುತ್ತವೆ: ವಸ್ತು ‘ಕ್ಯೂಟ್’ ಆಗಿದ್ದಷ್ಟೂ ಅದನ್ನು ಹೆಚ್ಚು ಮೃದುವಾಗಿ ಹ್ಯಾಂಡಲ್ ಮಾಡುವಂತೆ, ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳುವಂತೆ ನಮಗೆ ಪ್ರೇರಣೆ ನೀಡುತ್ತದೆ. ಶೋಕೇಸ್‌ನಲ್ಲಿಟ್ಟಿರುವ ಪುಟ್ಟದೊಂದು ಆಲಂಕಾರಿಕ ವಸ್ತುವನ್ನೋ ಆಟಿಗೆಯನ್ನೋ ಎತ್ತಿಕೊಳ್ಳುವಾಗ ನಾವು ತೋರುವ ಜಾಗ್ರತೆ ಇತರ ದೈನಂದಿನ ಉಪಯೋಗದ ವಸ್ತುಗಳನ್ನು ಅತ್ತಿಂದಿತ್ತ ಎತ್ತಿಡುವಾಗ ತೋರುವ ಜಾಗ್ರತೆಗಿಂತ ದ್ವಿಗುಣವಾಗಿರುತ್ತದೆ. ಬಹುಶಃ ನಿಮ್ಮ ಗಮನಕ್ಕೂ ಬಂದಿರುತ್ತದೆ. 2009ರಲ್ಲಿ ವಿಜ್ಞಾನಿಗಳು ನಡೆಸಿದ ಒಂದು ಸಮೀಕ್ಷಾಪ್ರಯೋಗದಲ್ಲಿ, ಸಮೀಕ್ಷಾರ್ಥಿಗಳು ಎಷ್ಟು ನಾಜೂಕಾಗಿ ವಸ್ತುಗಳನ್ನು ಮತ್ತು ಉಪಕರಣಗಳನ್ನು ಹ್ಯಾಂಡಲ್ ಮಾಡುತ್ತಾರೆ ಎಂದು ತುಲನೆ ಮಾಡಲಾಯ್ತು. ಮುದ್ದಾದ ನಾಯಿಮರಿ ಮತ್ತು ಬೆಕ್ಕಿನ ಮರಿಯ ಚಿತ್ರಗಳನ್ನು ತೋರಿಸಿ ಆಮೇಲೆ ಉಪಕರಣಗಳನ್ನು ಹ್ಯಾಂಡಲ್ ಮಾಡುವಂತೆ ಕೇಳಿದಾಗ ಅವರು ತೋರಿದ ಜಾಗರೂಕತೆ, ಬೇರೆ ಚಿತ್ರಗಳನ್ನು ತೋರಿಸಿ ಕೇಳಿದಾಗಿನದಕ್ಕಿಂತ ಹೆಚ್ಚು ಇತ್ತಂತೆ. ಜಪಾನ್‌ನ ವಿಶ್ವವಿದ್ಯಾಲಯವೊಂದರ ಪ್ರೊಫೆಸರುಗಳೂ ಈ ಬಗ್ಗೆ ಕೆಲವು ಅಧ್ಯಯನಗಳನ್ನು ನಡೆಸಿದ್ದಾರೆ. ಮಗು, ಪುಟ್ಟದೊಂದು ಗೊಂಬೆ, ನಾಯಿ ಮರಿ, ಬೆಕ್ಕಿನ ಮರಿಹೀಗೆ ‘ಕ್ಯೂಟ್’ ಅನಿಸುವಂಥ ಯಾವುದನ್ನೇ ನೋಡಿದರೂ ನಮ್ಮಲ್ಲಿ ಕಾಳಜಿಕಳಕಳಿಗಳ ಭಾವನೆ ಒತ್ತೊತ್ತಿ ಬರುತ್ತದೆ. ಆ ಭಾವನೆಯಿಂದಾಗಿ, ನಮ್ಮ ಸುತ್ತಮುತ್ತಲಿನ ಬೇರೆಲ್ಲ ವಸ್ತುಗಳನ್ನೂ ಜಾಗರೂಕತೆಯಿಂದ ಹ್ಯಾಂಡಲ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಂದರೆ, ಕ್ಯೂಟ್ ಆಗಿ ಕಾಣಿಸಿದ್ದನ್ನು ನಾವು ಜಾಗ್ರತೆಯಿಂದ ಬಳಸುತ್ತೇವೆ ಅಷ್ಟೇ ಅಲ್ಲ, ಸುಕೋಮಲವಾಗಿ ನೋಡಿಕೊಳ್ಳಬೇಕು ಎಂದೆನಿಸುವ ವಸ್ತುಗಳು ನಮಗೆ ಹೆಚ್ಚು ಕ್ಯೂಟ್ ಆಗಿ ಕಂಡು ಬರುವುದೂ ಹೌದು!

3. ವಸ್ತು ಜೀವಿ ಪುಟ್ಟದಾಗಿದ್ದಷ್ಟೂ ನಮಗದರಿಂದ ಕಡಿಮೆ ಅಪಾಯ: ಇದೂ ಪ್ರಕೃತಿಯದೇ ಒಂದು ಏರ್ಪಾಡು. ಮನುಷ್ಯರಲ್ಲಾದರೆ ಪುಟ್ಟ ಮಗು, ಪ್ರಾಣಿಗಳಲ್ಲಾದರೆ ಪುಟ್ಟ ಮರಿ, ಆರಂಭಿಕ ದಿನಗಳಲ್ಲಿ ಬಹುತೇಕ ಅಸಹಾಯಕ ಸ್ಥಿತಿಯಲ್ಲಿ ಇರುತ್ತದೆ. ಎಲ್ಲದಕ್ಕೂ ತಾಯಿಯನ್ನೇ ಅವಲಂಬಿಸಿರುತ್ತದೆ. ಅದರಿಂದ ನಮಗೆ ಯಾವ ಅಪಾಯ ತಾನೆ ಆಗಬಲ್ಲದು? ನಿರ್ಜೀವ ವಸ್ತುಗಳ ವಿಚಾರದಲ್ಲೂ ಇದು ಹೆಚ್ಚೂಕಡಿಮೆ ಅನ್ವಯವಾಗುವಂಥದ್ದೇ. ನಮಗಿಂತ ಕಡಿಮೆ ಗಾತ್ರದ ವಸ್ತು ನಮ್ಮನ್ನು ಮುಗಿಸಲಾರದು ಎಂಬೊಂದು ಭರವಸೆ ನಮ್ಮ ಮನಸ್ಸಿನ ಮೂಲೆಯಲ್ಲಿ ಭದ್ರವಾಗಿ ಇರುತ್ತದೆ. ಪುಟ್ಟದಾಗಿದ್ದಷ್ಟೂ ನಮ್ಮ ಪ್ರೀತಿಗೆ ಪಾತ್ರವಾಗುತ್ತದೆ.

4. ವಯೋಮಿತಿಯಿಲ್ಲದೆ ನಮಗೆಲ್ಲರಿಗೂ ಆಟಿಕೆಯೆಂದರೆ ಇಷ್ಟವೇ: ಆಗಲೇ ಹೇಳಿದಂತೆ ಕ್ಯೂಟ್‌ನೆಸ್‌ಅನ್ನು ನಾವು ನಿರ್ಜೀವ ವಸ್ತುಗಳಿಗೂ ಅನ್ವಯಿಸುತ್ತೇವೆ. ಗೊಂಬೆಗಳು, ಆಟಿಕೆಗಳು ‘ಕ್ಯೂಟ್’ ಆಗಿದ್ದಷ್ಟೂ ನಮಗೆ ಹೆಚ್ಚು ಇಷ್ಟವಾಗುತ್ತವೆ. ಆರಂಭದಲ್ಲಿ ನಿಜವಾಗಿಯೂ ಕರಡಿಯನ್ನೇ ಹೋಲುತ್ತಿದ್ದ ಟೆಡ್ಡಿಬೇರ್‌ಗಳು ಈಗೀಗ ಕರಡಿಗಿಂತ ಹೆಚ್ಚಾಗಿ ಮನುಷ್ಯನಂತೆ, ಪುಟ್ಟ ಮಗುವಿನಂತೆ ಕಾಣಿಸಿಕೊಳ್ಳಲಾರಂಭಿಸಿವೆ. ಇದೇ ಮಾರ್ಪಾಡು ಈಗ ವಿನ್ಯಾಸವಾಗುತ್ತಿರುವ ಕಾರು ಮತ್ತಿತರ ವಾಹನಗಳಲ್ಲಿ, ಇನ್ನಿತರ ಪರಿಕರಗಳಲ್ಲೂ ಆಗುತ್ತಿದೆ. ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾಡೆಲ್‌ಗಳಿಗೆ ಈಗಿನ ಕಾರುಗಳು, ಬೈಕುಗಳು ಇನ್ನಷ್ಟು ಚಂದ ಎಂದು ನಮಗನಿಸುತ್ತದೆ. ‘ನಾವು ವಯಸ್ಕರು, ನಮಗದು ಆಟಿಕೆಯಲ್ಲ ನಿಜವಾದ ಬಳಕೆಗೆ ಇರುವ ವಾಹನ’ ಎಂದು ನಾವಂದುಕೊಂಡರೂ ನಮ್ಮೊಳಗಿನ ‘ಮಗುವಿನ ಮನಸ್ಸು’ ನಮ್ಮೆಲ್ಲ ಪರಿಕರಗಳನ್ನು ಒಂದೊಂದು ಆಟಿಕೆಯೆಂದೇ ಪರಿಗಣಿಸಿರುತ್ತದೆ. ಪುಟ್ಟ ಮಕ್ಕಳು ಕ್ಯೂಟ್ ಆಗಿರುತ್ತಾರೆ, ಅವರು ಬಳಸುವ ಆಟಿಕೆಗಳೂ ಕ್ಯೂಟ್ ಎಂಬ ಭಾವನೆ ಪ್ರತಿಯೊಬ್ಬರ ಮನಸ್ಸಿಲ್ಲೂ ಆಳವಾಗಿ ಬೇರೂರಿರುತ್ತದೆ.

5. ನಮ್ಮ ನಿಯಂತ್ರಣದಲ್ಲೇ ಎಲ್ಲವೂ ಇರಬೇಕು ಎಂದು ಬಯಸುತ್ತೇವೆ: ನಮ್ಮದೇ ಮನೆಯ ಅಥವಾ ಕಟ್ಟಡಗಳ ಪುಟ್ಟ ಪ್ರತಿಕೃತಿಗಳು ನಮ್ಮಲ್ಲೊಂದು ವಿಶೇಷ ಭಾವವನ್ನು ಸ್ಫುರಿಸುತ್ತವೆ. ಅದು, ‘ಎಲ್ಲವೂ ನಮ್ಮ ನಿಯಂತ್ರಣದಲ್ಲಿದೆ’ ಎಂಬ ಭರವಸೆಯ ಭಾವನೆ. ಡಾ. ರುತ್ ವೆಸ್ತೈಮರ್ ಎಂಬ ಪ್ರಖ್ಯಾತ ಮನಃಶಾಸ್ತ್ರಜ್ಞೆ ತನ್ನ ಬಳಿ ಚಿಕಿತ್ಸೆಗೆ ಬರುವವರಿಗೆಂದೇ, ವಿಶೇಷವಾಗಿ ಮಕ್ಕಳಿಗೆಂದೇ, ಇಂಥ ಪ್ರತಿಕೃತಿಗಳನ್ನು ಬಳಸುತ್ತಾರೆ. ‘ಮೆಯೊಳಗೆ ನೀನು ಹೇಗೆ ವರ್ತಿಸಬೇಕು’ ಎಂದು ವಿವರಿಸುವಾಗ ಈ ರೀತಿಯ ಪುಟ್ಟ ಮನೆಯನ್ನು ತೋರಿಸಿ ವಿವರಿಸಿದರೆ ಪರಿಣಾಮ ಹೆಚ್ಚು, ಚಿಕಿತ್ಸೆ ಬೇಗ ಫಲ ಕೊಡುತ್ತದೆ ಎಂದು ಡಾ.ರುತ್ ತನ್ನದೇ ಬಾಲ್ಯದಲ್ಲಿ ನಾತ್ಸಿಗಳಿಂದಾಗಿ ನಿರಾಶ್ರಿತರಾದ ಕುಟುಂಬದಲ್ಲಿ ಬೆಳೆದ ಡಾ.ರುತ್‌ಗೆ ಪುಟ್ಟ ಮನೆಯ ಪ್ರತಿಕೃತಿಯೇ ದೊಡ್ಡದೊಡ್ಡ ಬಂಗಲೆಗಳಿಗಿಂತ ಹೆಚ್ಚಾಗಿ ತನ್ನದು ಎಂಬ ಭಾವನೆಯನ್ನು ಮೂಡಿಸುತ್ತದಂತೆ.

6. ಪುಟ್ಟ ವಸ್ತುಗಳಲ್ಲಿ ಸಂಕೀರ್ಣ ಮಾಹಿತಿ ಭರಪೂರವಾಗಿರುತ್ತದೆ: ಮಿನಿಯೇಚರ್ ಮಾಡೆಲ್‌ಸ್ ಎಂದು ನಾವು ಇಂಗ್ಲಿಷ್‌ನಲ್ಲಿ ಏನನ್ನುತ್ತೇವೋ ಅವುಗಳ ಒಂದು ವಿಶೇಷ ಪ್ರಯೋಜನವೆಂದರೆ ಪುಟ್ಟ ಆಕಾರದಲ್ಲೇ ಸಮಗ್ರ ಮಾಹಿತಿ ತುಂಬಿರುವುದು. ಅಂತಹ ‘ಮಾಹಿತಿ ಸಾಂದ್ರತೆ ಅಥವಾ ಶ್ರೀಮಂತಿಕೆ’ ನಮ್ಮ ಎಲ್ಲ ಇಂದ್ರಿಯಗಳಿಗೂ, ಮಿದುಳಿಗೂ ಹೆಚ್ಚು ಆಪ್ಯಾಯಮಾನವೆನಿಸುತ್ತದೆ. ಕೂಡ ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದುಬಂದಿರುವ ವಿಚಾರವೇ. ನಮ್ಮ ಕಣ್ಣು, ಮತ್ತು ಸ್ಪರ್ಶಜ್ಞಾನ ಸಹ, ಯಾವುದೇ ದೃಶ್ಯ ಅಥವಾ ಸನ್ನಿವೇಶವನ್ನು ಅನುಭವಿಸುವಾಗ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ದಟ್ಟವಾದ ಭಾಗಗಳತ್ತಲೇ ಮೊದಲು ಗಮನ ಕೊಡುತ್ತದೆ. ಹಾಗಾಗಿಯೇ, ಮೂರು ಆಳುಗಳಷ್ಟು ಎತ್ತರದ ‘ತಟ್ಟೀರಾಯ’ನನ್ನು ನೋಡಿದಾಗಿದಕ್ಕಿಂತ ಹೆಚ್ಚು ಸಂತೋಷ, ಮಿದುಳಿಗೆ ಹೆಚ್ಚು ಉದ್ದೀಪನ, ನಮಗೆ ಚನ್ನಪಟ್ಟಣದ ಬಣ್ಣದ ಗೊಂಬೆ, ಮೂರೇ ಮೂರು ಇಂಚು ಎತ್ತರದ್ದನ್ನು ನೋಡಿದಾಗ ಆಗುತ್ತದೆ. ಏಕೆಂದರೆ ಆ ಪುಟ್ಟ ಗೊಂಬೆ ಇಡೀ ಎಲ್ಲ ಅಂಶಗಳನ್ನೂ ನಮಗೆ ಸಮಗ್ರವಾಗಿ ತೋರಿಸಬಲ್ಲದಾಗಿರುತ್ತದೆ.

ವಿಜ್ಞಾನಿಗಳನ್ನು ನಾವು ವಿಚಿತ್ರ ದೃಷ್ಟಿಯಿಂದ ನೋಡುತ್ತೇವೆ. ಐನ್‌ಸ್ಟೈನ್ ಮಹಾಶಯನಿಂದ ಹಿಡಿದು ಹಿಂದೆ ಆಗಿಹೋಗಿರುವ, ಈಗ ಬದುಕಿರುವ, ಮುಂದೆ ಹುಟ್ಟಲಿರುವ ಹೆಚ್ಚಿನೆಲ್ಲ ವಿಜ್ಞಾನಿಗಳು ಒಂಥರ ಕುರೂಪಿಗಳು, ಅವರಲ್ಲಿ ‘ಕ್ಯೂಟ್‌ನೆಸ್’ ಏನೇನೂ ಇರುವುದಿಲ್ಲ ಎಂದು ವಿಜ್ಞಾನಿಗಳ ಬಗ್ಗೆ ನಮ್ಮಲ್ಲೊಂದು ಪೂರ್ವಗ್ರಹ ಇದ್ದೇ ಇರುತ್ತದೆ. ಹಾಗಿರುವಾಗಲೂ ‘ಕ್ಯೂಟ್‌ನೆಸ್’ಅನ್ನು ಕುರಿತು ವಿಜ್ಞಾನಿಗಳು ಒದಗಿಸಿಕೊಟ್ಟಿರುವ ಈ ಎಲ್ಲ ವಿವರಗಳು ಕ್ಯೂಟ್ ಆಗಿಯೇ ಕುತೂಹಲಕಾರಿಯೂ ಆಗಿವೆ, ಅಲ್ಲವೇ?