About Us Advertise with us Be a Reporter E-Paper

ವಿರಾಮ

ಸೈನಿಕನಾಗುವ ಕನಸು

*ಎಲ್. ಪಿ. ಕುಲಕರ್ಣಿ

ಸೈನಿಕನಾಗುವ ಬಹುದಿನಗಳ ಕನಸನ್ನು ಬೆಂಬತ್ತಿ, ಸೇನಾ ಆಯ್ಕೆಯ ರ್ಯಾಲಿಗೆ ಸಂದರ್ಭದಲ್ಲಿ ದೊರೆತ ಅನುಭವವಾದರೂ ಎಂಥದ್ದು?

ಆಗ ನಮ್ಮೆಲ್ಲರದು ಹಗುರ ವಯಸ್ಸು , ಅಂದರೆ 18 ರ ಆಸುಪಾಸು. ಆ ವಯಸ್ಸಿನ ಎಲ್ಲ ಯುವಕರಿಗೂ ಒಂದು ಕನಸು ಇದ್ದೇ ಇರುತ್ತದೆ. ನೆಚ್ಚಿನ ಸಿನಿಮಾ ನಟ ಅನುಕರಣೆ ಮಾಡುತ್ತ ನಾವೂ ಅವರ ಹಾಗೇನೆ ಆಗ್ಬೇಕು, ಕ್ರಿಕೇಟ್ ಪ್ಲೇಯರ್ ಹಾಗೆ ನಾನೂ ಒಬ್ಬ ಬ್ಯಾಟ್ಸಮನ್ ಇಲ್ಲವೇ ಬೌಲರ್ ಆಗ್ಬೇಕು, ಇಲ್ಲವೇ ಸೈನ್ಯ ಸೇರಿ ಸೈನಿಕ ನಾಗ್ಬೇಕು ಅನ್ನೋ ತುಡಿತ. ಆ ವಯಸ್ಸೇ ಬೆಟ್ಟ ಕುಟ್ಟಿ ಪುಡಿ ಮಾಡೋ, ನೆಲ ಒದ್ದು ನೀರು ತರಿಸೋ ತಾಕತ್ತಿನ ಪ್ರದರ್ಶನ ಮಾಡೋ ಹುಂಬುತನದ ವಯಸ್ಸು.

ಹತ್ತು-ಹನ್ನೆರಡು ಮಕ್ಕಳಿಂದ ಕೂಡಿದ, ಒಂದು ಅಂಗನವಾಡಿಯ ಹಾಗೇ ಕಾಣುವ ಅವಿಭಕ್ತ ಕುಟುಂಬದ ಮನೆ ನಮ್ಮದು. ಅಲ್ಲಿ ಅಮ್ಮ-ಅಪ್ಪ, ಮಾಮ-ಮಾಮಿ, ದೊಡ್ಡಮ್ಮ-ದೊಡ್ಡಪ್ಪ,ಚಿಕ್ಕಮ್ಮ-ಚಿಕ್ಕಪ್ಪ………ಹೀಗೆ ಎಲ್ಲರೂ ಒಬ್ಬರನ್ನೊಬ್ಬರು ಅರ್ಥೈಸಿ ಕೊಂಡು ಅನ್ಯೂನ್ಯವಾಗಿದ್ದೆವು.

ನನ್ನ ಚಿಕ್ಕ ಸೋದರ ಮಾವ ಆರ್ಮಿಯಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ. ವರ್ಷದಲ್ಲಿ ಒಂದೋ-ಎರಡೋ ತಿಂಗಳು ರಜೆ ಮೇಲೆ ಬರೋ ಮಾವನೇ ನಮಗೆ ಪ್ರಾಯ. ಚಿಕ್ಕ ಮಕ್ಕಳ ಅಚ್ಚು ಮೆಚ್ವಿನ ಹಿರೋ ಆಗಿದ್ದ. ಆವಾಗ ಮೊಬೈಲ್ ಹಾವಳಿ ಇದ್ದಿದ್ದಿಲ್ಲಾ. ಆತ ಬರಬೇಕಾದರೆ ಒಂದು ತಿಂಗಳ ಹಿಂದೆ ಇನ್‌ಲ್ಯಾಂಡ್‌ಲೆಟರ್ ಬರೆದು ಹಾಕುತ್ತಿದ್ದ. ಅದರಲ್ಲಿ ‘ನಾನು ಮುಂದಿನ ತಿಂಗಳ ಮೊದಲ ವಾರದಲ್ಲಿ ಬರುವೆ’ ಎಂಬ ವಾಕ್ಯ ಓದುತ್ತಿದ್ದಂತೆ ನಮಗೇನೋ ಒಂದು ತರಹದ ಹುರುಪು ಹಾಗೂ ಉತ್ಸಾಹ. ಆತ ಹೆಚ್ಚಾಗಿ ತಡರಾತ್ರಿ ರೈಲಿನಲ್ಲಿ ಬೆಟ್ಟದ ಗಾತ್ರದ ಲಗೇಜುಗಳನ್ನು ಹೊತ್ತುಕೊಂಡು ಬರುತ್ತಿದ್ದ. ಮಾವ ಬರೋ ಅಂದಾಜು ಹಿಂದಿನ ಎರಡು ರಾತ್ರಿಗಳನ್ನು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಬರೋ ಟ್ರೇನ್ ನೋಡುತ್ತಾ ಕಾಲ ಕಳೆಯುತ್ತಿದ್ದೆವು. ಬಂದೊಡನೆಯೇ ಆತನನ್ನು ತಬ್ಬಿಕೊಂಡು ಯೋಗ ಕ್ಷೇಮ ವಿಚಾರಿಸುತ್ತಾ, ಕ್ಷಣದಲ್ಲಿಯೇ ನಮ್ಮ ದೃಷ್ಟಿ ಲಗೇಜ್ ಗಳ ಕಡೆ ಹರಿಯುತ್ತಿತ್ತು. ಆ ವಯಸ್ಸಲ್ಲಿ ಮಕ್ಕಳಿಗೆ ಇಷ್ಟವಾಗೋದು ಆಟದ ಸಾಮಾನುಗಳು ಜೊತೆಗೆ ಬಟ್ಟೆ ಹಾಗೂ ಸಿಹಿ ತಿಂಡಿಗಳು. ಮಾವ ತಾನು ತಂದ ಈ ವಸ್ತುಗಳನ್ನು ಒಂದೊಂದಾಗೇ ನಮಗೆಲ್ಲರಿಗೂ ಕೊಡುತ್ತಿದ್ದ, ಆತ ಮರಳಿ ಹೊಗೋವರೆಗೂ ನಮ್ಮ ಮನೆಯಲ್ಲಿ ದಿನ ನಿತ್ಯ ವಾತಾವರಣ.

ಮಾವ ಹೇಳುತ್ತಿದ್ದ ಸೈನಿಕರ ಸಾಹಸದ ಕಥೆಗಳು, ತಾನು ಸೈನ್ಯದಲ್ಲಿ ಕೆಲಸ ಮಾಡೊ ರೀತಿ, ಯುದ್ಧರಂಗದಲ್ಲಿ ಅವರೆಲ್ಲಾ ಹೋರಾಡೋ ರೋಮಾಂಚನಕಾರಿ ಅನುಭವ, ಎಲ್ಲವೂ ನನಗೆ ಬಾಲ್ಯದ ಆ ವಯದಲ್ಲಿಯೇ ಸೈನಿಕನಾಗೋ ಛಾಪು ಮೂಡಿಸಿಬಿಟ್ಟಿದ್ದವು. ಮೊದಲೇ ಶಿಸ್ತಿನ ಸಿಪಾಯಿಯಾದ ಮಾವ ಬಂದಾಗಲೆಲ್ಲಾ ನಮ್ಮೆಲ್ಲರನ್ನೂ ಪ್ರಾತಃ ಕಾಲದಲ್ಲಿ ಬೇಗ ಎಬ್ಬಿಸಿ, ರನ್ನಿಂಗ್ ಜೊತೆಗೆ ಕೆಲವೊಂದಿಷ್ಟು ವ್ಯಾಯಾಮ ಪ್ರ್ಯಾಕ್ಟೀಸ್ ಮಾಡಿಸುತ್ತಿದ್ದ.

ಪಿ.ಯು.ಸಿ. ಮುಗಿಯುತ್ತಿದ್ದಂತೆ ಸೈನ್ಯ ಸೇರೋ ಆ ಮಹದಾಸೆಗೆ ಕಾಲ ಕೂಡಿಬಂದಿತ್ತು, ರನ್ನಿಂಗ್,ಪುಲ್ಲಪ್‌ಸ್ ಪ್ರತಿ ದಿನ ಪ್ರಾತಃಕಾಲ ನಾಲ್ಕು ಗಂಟೆಯಿಂದ ಆರು ಗಂಟೆಯ ವರೆಗೆ ಪ್ರ್ಯಾಕ್ಟೀಸ್ ಮಾಡಿದ್ದೂ ಆಯಿತು. ಪ್ರಥಮವಾಗಿ ನಾನು ವಿಜಯಪುರದಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಹೊರಟೆ. ಆಗ ಡಿಸೆಂಬರ್ ತಿಂಗಳಾದ್ದರಿಂದ ಮೈ ಕೊರೆಯುವ ಚಳಿ. ತಡರಾತ್ರಿ ವಿಜಯಪುರ ಬಸ್ ಸ್ಟ್ಯಾಂಡಿನಲ್ಲಿ ಬಂದು ನಿಂತಾಗ, ಎಷ್ಟು ತಡೆದುಕೊಂಡರೂ ಚಳಿ ನನ್ನ ಬಿಡಲಿಲ್ಲ. ಗದ-ಗದ ನಡುಗುತ್ತ ರಾತ್ರಿ ಅಲ್ಲೇ ಕಳೆದೆ. ಪೋಲಿಸ್ ಬಂದು ನನ್ನ ವಿಚಾರಿಸಿದಾಗ, ಬಸ್ ಟಿಕೇಟ್ ತೋರಿಸಿ ನನ್ನ ಹೇಳಿದೆ. ಆತ ಅದನ್ನರಿತು ಮಲಗಬೇಡಾ, ಕಳ್ಳ ಕಾಕರ ಹಾವಳಿ ಇದೆ, ಹಣದ ಕಡೆ ಜೋಪಾನ ಎಂದು ಎಚ್ಚರಿಕೆ ಸಂದೇಶ ಕೊಟ್ಟು ಹೊರಟ. ನಿದ್ದೆ ಇಲ್ಲದೇ ಬಿಟ್ಟ ಕಣ್ಣು ಬಿಟ್ಟಂತೆ ಕುಳಿತ ನಾನು ಮುಂಜಾನೆ ನಾಲ್ಕು ಗಂಟೆಗೆ ವಿಜಯಪುರದ ಸೈನಿಕ ಶಾಲೆಯ ಆವರಣಕ್ಕೆ ಹೊರಟೆ. ಅದಾಗಲೇ ಅಲ್ಲಿ ಎಲ್ಲ ಯುವಕರು ಸರದಿ ಸಾಲಿನಲ್ಲಿ ನಿಂತಿದ್ದರು. ತಿಂಡಿ ತಿನ್ನಲು, ಮೂತ್ರ ವಿಸರ್ಜನೆ ಮಾಡಲು ಎಲ್ಲಿ ನನ್ನ ಸರದಿ ತಪ್ಪಿ ಹೋಗುತ್ತೋ ಅಂತಾ ನಿಂತೆ.

ಭಾವೀ ನರ್ಸಿಂಗ್ ಅಸಿಸ್ಟಂಟ್
ಬೆಳಿಗ್ಗೆ ಸರಿಯಾಗಿ ಒಂಬತ್ತು ಗಂಟೆಗೆ ನನ್ನ ಸರದಿ ಬಂತು. ಆರ್ಮಿ ಆಫಿಸರ್ ಮೊದಲು ನನ್ನ ಎತ್ತರ ಚೆಕ್ ಮಾಡಿದ್ರು. ಒ.ಕೆ ಆಯ್ತು. ನನ್ನ ಪಿ.ಯು.ಸಿ ವಿಜ್ಞಾನ ಅಂಕಪಟ್ಟಿಯನ್ನು ಪರಿಶೀಲಿಸಿ, ‘ಓಹೋ ನೀ ವಿಜ್ಞಾನ ಅಭ್ಯರ್ಥಿಯೆ! ಸರಿ’ ಎಂದು ಎದೆಯ ಮೇಲೆ ಮಾರ್ಕರ್‌ನಿಂದ 340 ಘೆಅ (ಘ್ಠ್ಟೆಜ್ಞಿಜ ಅಜಿಠ್ಞಿಠಿ) ಅಂತ ಬರೆದು ಮುಂದೆ ಕಳಿಸಿ ಮತ್ತೆ ಒಂದು ಗಂಟೆ ಕೂಡ್ರಿಸಿದರು. ಇದೆಲ್ಲಾ ಮುಗಿಯೋದ್ರೊಳಗೆ ಹನ್ನೊಂದು ಆ ಖಾಲಿ ಹೊಟ್ಟೆಲಿ ನಾಲ್ಕು ಸುತ್ತು ಗ್ರೌಂಡ್ ಓಡಿಸಿದ್ರು. ಆಹಾರವಿಲ್ಲದೇ ಮೊದಲೇ ಹೈರಾಣಾದ ನಾನು, ಗಟ್ಟಿ ಮನಸ್ಸು ಮಾಡಿ ಎರಡನೇ ಸುತ್ತು ಓಡೋವಾಗ, ಒಬ್ಬ ನನ್ನ ಕಾಲಿಗೆ ತೊಡರು ಹಾಕಿ ಕೆಡವಿ ತಾನು ಮುಂದೆ ಸಾಗಿದ, ನೆಲಕ್ಕೆ ಬಿದ್ದ ನನಗೆ ಉಸಿರು ಗಟ್ಟಿದಂತಾಗಿ, ಕೈಕಾಲಿಗೆ ಗಾಯವಾದವು. ಈ ಕಾರಣ ನೇಮಕಾತಿಯಿಂದ ಹೊರ ಉಳಿದೆ, ಮನಸ್ಸಿಗೆ ಆಘಾತವಾದರೂ ತೋರಿಸಿಕೊಳ್ಳದೇ ಹಾಗೇ ಬಂದೆ.

ಮಾರನೇ ವರ್ಷ ಜನೇವರಿ ತಿಂಗಳಲ್ಲಿ ಮೈಸೂರಿನ ಚಾಮುಂಡಿ ಸ್ಟೇಡಿಯಮ್‌ನಲ್ಲಿ ನಡೆದ ಏರ್ ಮನ್ ರ್ಯಾಲಿಯಲ್ಲಿ ಭಾಗವಹಿಸಲು ನಿಗದಿಯಾದ ದಿನಕ್ಕಿಂತಲೂ ಮುಂಚಿತವಾಗಿ ಹೋಗಿದ್ದೆ. ಮುನ್ನಾ ದಿನದ ಸಂಜೆ ಹೋಗಿ ನೋಡಿದ್ರೆ ಯಾವ ಅಭ್ಯರ್ಥಿಗಳೂ ಕಾಣಲಿಲ್ಲ. ಸಂಶಯ ಬಂದು, ಹತ್ತಿರದಲ್ಲಿರುವ ಏರ್‌ಫೋರ್ಸ್ ಕಛೇರಿಗೆ ಹೋಗಿ ವಿಚಾರಿಸಿದೆ. ‘ನಾಳೆ ನಡೆಯ ಬೇಕಿದ್ದ ಏರ್‌ಮನ್ ನೇಮಕಾತಿ ರ್ಯಾಲಿ ತಾಂತ್ರಿಕ ತಜ್ಞರ ಅನುಪಸ್ಥಿತಿಯಿಂದಾಗಿ ರದ್ದು ಪಡಿಸಲಾಗಿದೆ, ಹೊಸ ನೇಮಕಾತಿ ಬಗ್ಗೆ ಮುಂದಿನ ದಿನಮಾನಗಳಲ್ಲಿ ತಿಳಿಸಲಾಗುವುದು’ ಅಂತಾ ನೋಟೀಸ್ ಬೋರ್ಡ್‌ಲಿ ಬರೆದಿದ್ದು ಓದಿ ಮನಸ್ಸಿಗೆ ಬೇಜಾರಾಗಿ, ವಾಪಸಾದೆ. ಮತ್ತೆ ನಾಲ್ಕೈದು ಬಾರಿ ಸೇನಾ ನೇಮಕಾತಿಗೆ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಅದೇಕೋ ನನಗೆ ಈ ಜನ್ಮದಲ್ಲಿ ಸೇನೆ ಸೇರೋ ಭಾಗ್ಯ ಒದಗಲಿಲ್ಲಾ, ಆದರೆ ಈ ಅನುಭವದಿಂದ ಜೀವನದಲ್ಲಿ ಕಷ್ಟ ಮತ್ತು ಸವಾಲಗಳನ್ನು ಎದುರಿಸುವ ಪಾಠ ಕಲಿತೆ.

ಸೇನೆಯಲ್ಲಿ ನಮ್ಮ ನೇಮಕಾತಿ ಆಗಲಿ ಬಿಡಲಿ, ಆದರೆ ಅದಕ್ಕಾಗಿ ನಾವು ಹಾಕೋ ಪ್ರಾಮಾಣಿಕ ಪ್ರಯತ್ನ ನಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ ಅನ್ನೋ ಸತ್ಯವನ್ನಂತು ಕಂಡುಕೊಂಡೆ. ಯುದ್ಧ ಮಾಡೋ ಸೈನಿಕನ ಧೈರ್ಯ, ಸಾಹಸಗಳು ನಮ್ಮ ಬದುಕಿನಲ್ಲಿ ಹಲವು ತೊಂದರೆಗಳನ್ನು ಎದುರಿಸಲು ಶಕ್ತಿ ಹಾಗೂ ಸ್ಫೂರ್ತಿಯನ್ನು ಕೊಡುತ್ತವೆ. ಬದುಕಿನಲ್ಲಿ ಶಿಸ್ತು, ಸಮಯ ಪಾಲನೆ, ಸಂಯಮ, ಛಲ, ದೃಢತೆ, ಇವುಗಳನ್ನೂ ಸಹ ಕಲಿಸುತ್ತವೆ. ಕೊನೆಯದಾಗಿ ಹೇಳುವದಾದರೆ ಪ್ರಾಮಾಣಿಕ ಪ್ರಯತ್ನದಿಂದ ಅತಿ ಹೆಚ್ಚು ಯುವಕರು ಸೇನಾ ನೇಮಕಾತಿಗಳಲ್ಲಿ ಪಾಲ್ಗೊಳ್ಳಿ , ಆದ್ರೆ ನೇಮಕಾತಿ ಆಗದೇ ಹೋದರೆ ಹತಾಶರಾಗಬೇಡಿ, ಅದರಿಂದ ಕಲಿತ ಪಾಠವನ್ನು ಮರೆಯ ಬೇಡಿ. ಕೇವಲ ದೇಶ ರಕ್ಷಿಸೋ ಸೈನಿಕರಷ್ಟೇ ಸೈನಿಕರಲ್ಲಾ, ಸಮಾಜದಲ್ಲಿನ ಅನ್ಯಾಯ, ಅಸಹಿಷ್ಣುತೆ, ಆಂತರಿಕ ಸಮಸ್ಯೆಗಳು, ಅನಾಚಾರ ವಿರುದ್ಧ ಹೋರಾಡಿ ಜಯ ದೊರಕಿಸಿಕ್ಕೋಳ್ಳೋ ಪ್ರತಿಯೊಬ್ಬ ನಾಗರಿಕನೂ ಸೈನಿಕನೇ.

Tags

Related Articles

Leave a Reply

Your email address will not be published. Required fields are marked *

Language
Close