About Us Advertise with us Be a Reporter E-Paper

ಅಂಕಣಗಳು

ನೌಕರಿ, ಚೋಕರಿ ಮುಂದೆ ಮರೆಯಾಯ್ತು ಗುರುವಿನ ಚಾಕರಿ!

ಗಂಗಾವತಿ ಪ್ರಾಣೇಶ್

ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆ ಮುಗಿಯಿತು. ಒಂದು ದಿನ ಎಲ್ಲರೂ ತಮ್ಮ, ತಮ್ಮ ಗುರುಗಳನ್ನು ನೆನೆದುಕೊಂಡು ಹಿಗ್ಗಿದರು, ತಮ್ಮ ಬಾಲ್ಯಕ್ಕೆ ಜಾರಿ ಮೈ ಮರೆತರು. ಗುರುವಿಗೇ ತಿರುಮಂತ್ರ ಹಾಕುವ ಶಕ್ತಿಯುಳ್ಳ ದೇವೇಗೌಡರೂ ಯಾವದೋ ಒಂದು ಪತ್ರಿಕೆಯಲ್ಲಿ ತಮ್ಮ ಗುರುವನ್ನು ಸ್ಮರಿಸಿಕೊಂಡು ಹೇಳಿಕೆ ಕೊಟ್ಟಿದ್ದನ್ನು ಓದಿದ ಮೇಲಂತೂ ನನಗೆ ಮೇಲೆ ಭಯಭಕ್ತಿ ಹುಟ್ಟಿತು. ನನಗೂ ನನ್ನ ಹಾಸ್ಯ ರಂಗದಲ್ಲಿ ಹತ್ತು ಹದಿನೈದು ಜನ ಗುರುಗಳೇಎಂದು ಕರೆದು ಕಾಲು ಮುಗಿಯುವ ಶಿಷ್ಯರಿದ್ದಾರೆ. ಅವರಿಗೆಲ್ಲ ಸಾಮೂಹಿಕವಾಗಿ ವಾಟ್ಸಪ್‌ನಲ್ಲಿ ಒಂದು ಸಂದೇಶ ಕಳಿಸಿದ್ದೆ. ಅದು ಏನೆಂದರೆ, ‘ನನ್ನನ್ನು ಗುರುವೆಂದು ನಂಬಿಸಿ, ನನಗೇ ಗುರುವಾಗಿರುವ, ಪ್ರತಿನಿತ್ಯ ತಮ್ಮ ನಡವಳಿಕೆ, ಮಾತುಗಳಿಂದ ನನಗೆ ಬುದ್ದಿ ಕಲಿಸುತ್ತಿರುವ ನನ್ನೆಲ್ಲ ಶತ್ರು ಸಮಾನರಾದ ಶಿಷ್ಯರಿಗೆ ಗುರುದಿನದ ಶುಭಾಶಯಗಳುಎಂಬುದಾಗಿತ್ತು. ಯಾರದೂ ಚಕಾರಉತ್ತರವಿಲ್ಲ. ಸತ್ಯವೇ ಇದೆ ಎಂಬುದು ದೃಢ ನಿಶ್ಚಯ.

ಅನೇಕ ನನ್ನ ಶಿಷ್ಯರು ಊರಿಂದ ಬಂದ ಕೂಡಲೇ, ಊರಿಗೆ ಹೊರಡುವಾಗ ನಾನಿರುವ ಸ್ಥಳಕ್ಕೆ ಬಂದು ಕಾಲು ಮುಟ್ಟಿ ನಮಸ್ಕರಿಸಿ ತೆರಳುತ್ತಾರೆ. ಮಲಗಿದಾಗ ಕಾಲು ಮುಟ್ಟಿ ನಮಸ್ಕಾರ ಮಾಡಬಾರದು ಎಂಬ ಒಂದು ಶಾಸ್ತ್ರವಿದೆ. ಎಬ್ಬಿಸಿ, ಕುಳಿತುಕೊಂಡ ಮೇಲೆ, ಅದೂ ಕಾಲನ್ನು ಕೆಳಗೆ ಇಳಿಬಿಟ್ಟ ಮೇಲೆ ನಮಸ್ಕರಿಸಬೇಕು ಎಂಬ ಮಾತಿದೆ. ಮಲಗಿದವರ ಕಾಲಿಗೆ ನಮಸ್ಕರಿಸುವುದು ಶವ ನಮಸ್ಕಾರ ಎನಿಸಿಕೊಳ್ಳುತ್ತದೆ. ಮಲಗಿದಲ್ಲೇ ನಮಸ್ಕಾರ ಮಾಡಿಸಿಕೊಳ್ಳುವದು ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಇದನ್ನೆಲ್ಲ ಆಗಾಗ ಅವರಿಗೆ ಪುರಸೊತ್ತಾದಾಗ ಹೇಳುತ್ತಿರುತ್ತೇನೆ (ಅವರಿಗೆ ಪುರುಸೊತ್ತು ಸಿಕ್ಕಾಗ, ನನಗಲ್ಲ ಎಂಬುದು ನೆನಪಿರಲಿ). ಇದನ್ನು ನೆನಪಿಟ್ಟ ಕೆಲ ಶಿಷ್ಯರು ನನ್ನನ್ನು ಮಲಗಿದ್ದರೆ ಎಬ್ಬಿಸಿ ಕೂಡಿಸಿ ನಮಸ್ಕಾರ ಮಾಡುತ್ತಾರೆ, ಇನ್ನು ಕೆಲವರು ನಾನು ಕುಳಿತಿದ್ದರೆ ಮಲಗುವವರಿಗೆ ಕಾದು ಕೂತು ಮಲಗಿದ ಮೇಲೇಯೇ ನಮಸ್ಕಾರ ಮಾಡಿ ವಿಜಯದ ನಗು ನಗುತ್ತಾ, ಭವಿಷ್ಯತ್ತಿನ ಕನಸುಗಳಿಗೆ ಕಾದು ಕೂರುತ್ತಾರೆ.

ಕಾಲಿಗೆ ನಮಸ್ಕರಿಸುವದು ಈಚೆಗೆ ತೀರಾ ಕಡಿಮೆಯಾಗುತ್ತಿದೆ. ಹಾಯ್, ಹಲೋ ಶೇಕ್ ಹ್ಯಾಂಡ್, ಸೆಲ್ಫಿಗಳಿಗೆ ಬಂದು ಬಿಟ್ಟಿದೆ. ಕಾಲುಗಳಿಗೇ ಏಕೆ ನಮಸ್ಕಾರ? ಗುರುಗಳಾದವರು ತಮ್ಮ ಜ್ಞಾನದ ಗಳಿಕೆಗೆ ಕಾಲುಗಳಿಂದಲೇ ನಡೆದಾಡಿ, ದೇಶ ತಿರುಗಿ, ಸಂಚರಿಸಿ ಜ್ಞಾನ ಗಳಿಸಿರುತ್ತಾರೆ ಅಲ್ಲವೇ? ತಿರುಗಾಡಿ ಜ್ಞಾನ ಸಂಪಾದಿಸಿರುವ ಕಾಲುಗಳ ಶಕ್ತಿ ನನಗೂ ಬರಲಿ ಎಂದೇ ಕಾಲಿಗೆ ನಮಸ್ಕಾರ. ಸಂಚರಿಸಿದ್ದು, ತಿರುಗಾಡಿದ್ದು ಕಾಲುಗಳಾದರೂ ಬುದ್ದಿ ಸಂಗ್ರಹವಾದದ್ದು ತಲೆಯಲ್ಲಿ. ಹಾಗೆಂದು ತಲೆ ಮುಟ್ಟುವಂತಿಲ್ಲ ಅಲ್ಲವೆ? ತಲೆಗೆ ಜ್ಞಾನವನ್ನು ತುಂಬಿದ್ದು ತಲೆಯನ್ನು ಹೊತ್ತು ತಿರುಗಿದ ಕಾಲುಗಳೇ ಶ್ರೇಷ್ಠವಲ್ಲವೇ? ಅಭಿವೃದ್ಧಿಗೆ ಯಾರು ಮೂಲಕಾರಣರು ಎಂಬುದನ್ನು ಹುಡುಕಿ ಕೃತಜ್ಞತೆಯಿಂದ ಅವರನ್ನು ಹಿಡಿದು ನಮಸ್ಕರಿಸುವದೇ, ಅವರು ಎಷ್ಟೇ ಕೆಳಗಿದ್ದರೂ ನಮಸ್ಕರಿಸಲು ಹಿಂಜರಿಯಬಾರದೆಂಬುದೇ ಕಾಲು ಮುಗಿಯುವಿಕೆಯ ಹಿಂದಿರುವ ಸೂತ್ರ, ಶ್ರದ್ಧೆಯ ಸಂಕೇತ.

ಅದಕ್ಕೆ ನೋಡಿ, ತಲೆ ಮುಟ್ಟಲು ಬಂದರೆ ಹಿಂದೆ ಸರಿಯುತ್ತೇವೆ. ಕಾಲಿಗೆ ಬಿದ್ದವರನ್ನು ನಾವೇ ಎತ್ತುತ್ತೇವೆ. ಬಾಚಿ ತಬ್ಬಿಕೊಳ್ಳುತ್ತೇವೆ. ಇದು ನಮ್ಮ ಸಂಸ್ಕೃತಿ, ಅದಕ್ಕೆ ಮಕ್ಕಳಿಗೆ ಕಾಲು ಮುಟ್ಟಿ ನಮಸ್ಕರಿಸುವದನ್ನು ಕಲಿಸೋಣ, ಕೈ ಕುಲಕಿ, ಕಾಲೆಳೆಯುವ ಸಂಸ್ಕೃತಿಯನ್ನು ಕಲಿಸುವದು ಬೇಡ. ಟ್ಯಾಂಕ್ ಎಷ್ಟೋ ಸಾವಿರ ಲೀಟರ್ ನೀರನ್ನು ಹೊತ್ತು ನಿಲ್ಲುವುದು ಕೆಳಗಿನ ಸಣ್ಣ ಪೈಪಿನಿಂದ ಬಂದ ನೀರನ್ನೆ ತಾನೇ? ತಲೆಯೆಂಬ ಟ್ಯಾಂಕಿಗೆ ನೀರೆಂಬ ಜ್ಞಾನ ಸರಬರಾಜು ಮಾಡುವದು ಕಾಲುಗಳೆಂಬ ಪೈಪುಗಳೇ. ಟ್ಯಾಂಕ್ ಖಾಲಿಯಾದರೆ ನಾವು ಮೇಲೆ ನೋಡುವದಿಲ್ಲ. ಕೆಳಗಿನ ಪೈಪುಗಳನ್ನು ಗಮನಿಸುತ್ತೇವೆ ತಾನೆ? ಅದಕ್ಕೆ ನಿಮ್ಮ ಕಾಲುಗಳು ಗಟ್ಟಿಯಿರುವಾಗಲೇ ತಿರುಗಾಡಿ ಜ್ಞಾನ ಸಂಪಾದಿಸಿಕೊಳ್ಳಿ ತಲೆಗೆ ಬೆಲೆ, ಕಾಲುಗಳಿಂದಲೇ!

ಆದರೆ ಈಗೆಲ್ಲಿದೆ? ಕಾಲು ಹಿಡಿಯುವವರ ಸಂಖ್ಯೆ ಕುಗ್ಗಿ, ತಲೆ ಹಿಡಿಯುವವರ ಸಂಖ್ಯೆ, ಕಟ್ಟುವಷ್ಟು ಬೆಳೆಯುತ್ತಿದೆ. ಗುರುಕರುಣೆ ಗುರುಚರಣಾ ಇವೆರಡೂ ಬಾಳಿಗೆ ಭದ್ರ ಬುನಾದಿ. ಗುರುದಿನಾಚರಣೆಯ ತಿಂಗಳಲ್ಲಿ ಗುರುಚರಣವನ್ನು ಹಿಡಿಯೋಣ, ಗುರುಕರುಣಾ ಇಡೀ ವರ್ಷ ನಮ್ಮನ್ನು ರಕ್ಷಿಸುತ್ತದೆ. ನಾನು ಅಂದಿಗೂಇಂದಿಗೂ ಬೀಚಿಯವರನ್ನೆ ಗುರುವೆಂದವನು. ಅವರನ್ನು ನಾನು ಜೀವಂತ ನೋಡುವದಾಗಲೇ ಇಲ್ಲ.ಅವರು ಬೆಂಗಳೂರಲ್ಲಿ ತಿರುಗಾಡುವಾಗ ನಾನಿಲ್ಲಿ ಗಂಗಾವತಿಯಲ್ಲಿ ಇಪ್ಪತ್ತು ವರ್ಷದವ, ಅರವತ್ತರ ಆಸುಪಾಸಿನ ನಾನು ಈಗ ಬೆಂಗಳೂರಲ್ಲಿ ಅವರ ಹೆಸರಿನಿಂದ ಪ್ರೀತಿವಿಶ್ವಾಸ ಗಳಿಸಿರುವಾಗ ಅವರು ಲೋಕವನ್ನು ಬಿಟ್ಟೇ ಮೂವತ್ತೆಂಟು ವರ್ಷಗಳಾದವು. ನನ್ನದು ನಿತ್ಯ ನಾನು ಹೇಳುತ್ತಿರುವದೆಲ್ಲ ಬೀಚಿಯವರದೇ. ಅವರೇ ನನ್ನ ಮಾನಸಗುರು, ಅನ್ನದಾತರು, ಬೀಚಿ ಸಾಹಿತ್ಯ ನನಗೆ ಕಾಲುಗಳಿಗೆ ಶಕ್ತಿ ತುಂಬಿತು. ನಾಲ್ಕು ನೂರಕ್ಕೂ ಹೆಚ್ಚು ಊರುಗಳನ್ನು ತಿರುಗಿಸಿತು. ಅನುಭವ ಎಂಬ ನೀರನ್ನು ತಲೆಯೆಂಬ ಟ್ಯಾಂಕಿಗೆ ತುಂಬಿತು.

ಹತ್ತಿರ ಹತ್ತಿರ ಅವರ ಬರವಣಿಗೆಗೆ ಐವತ್ತು ವರ್ಷಗಳಾಗಿದ್ದರೂ ಬೀಚಿಯವರ ಕೃತಿಗಳನ್ನೆಲ್ಲ ಓದುವವರಿಗೆ ಈಗಲೂ ಅವರು ಗುರುವಾಗಬಲ್ಲರು. ನಾನು ಗುರುಸೇವೆಯನ್ನು ದೈಹಿಕವಾಗಿ ಮಾಡಿದವನಲ್ಲ. ಮುಖವನ್ನೇ ನೋಡದವ ಹೇಗೆ ಸೇವೆ ಮಾಡಲಿ? ಅದರ ಶಾಪವೋ, ಪ್ರತಿಫಲವೋ ನನಗಿರುವ ಹೆಚ್ಚು ಶಿಷ್ಯರು ನನ್ನ ಸೇವೆ ಸದಾ ಜೊತೆಗಿದ್ದು ಮಾಡುವವರಲ್ಲ, ನನಗಿಂತ ಮುಂಚೆ ಊರಿಗೆ ಹೋಗುವ ಬಸ್ಸು ಹಿಡಿಯುವವರು, ನನಗಿಂತ ಮುಂಚೆ ಉಣ್ಣುವವರು, ನನಗಿಂತ ಮುಂಚೆಯೆ ಮಾತನಾಡಿ ಹೇಳಬೇಕಾದ ವಿಷಯವನ್ನು ಹೇಳಿಬಿಡುವವರು, ಕೇಳಬೇಕಾದ ಜನರನ್ನೂ ಎಬ್ಬಿಸಿ ಕಳಿಸುವವರೂ ಇದ್ದಾರೆ. ಎಂಟು ಹತ್ತುಜನ ಶಿಷ್ಯರು ಮಾತನಾಡಿದ ಮೇಲೆ ನಾನು ಎದ್ದು ನಿಂತಾಗ ಎದುರಿಗೆ ಮೈಕ್‌ನವರು, ಪೆಂಡಾಲಿನವರು, ಅಲ್ಲಿಯೇ ಮಲಗಲು ಬಂದಿರುವವರು ಮಾತ್ರ ಉಳಿದ ಉದಾಹರಣೆಗಳು ಬೇಕಾದಷ್ಟಿವೆ. ಅದಕ್ಕೆಂದು ನಾನು ಮಾತನಾಡಲು ಎದ್ದಕೂಡಲೇ ಮಿತ್ರ ಡುಂಡಿರಾಜರ ಕವಿತೆಯೊಂದಿಗೆ ಆರಂಭ ಮಾಡುತ್ತೇನೆ. ಅವರು ಬರೆದಂತೆ,

ಇದುವರೆಗೂ ಮಾತನಾಡಿದ ನನ್ನ ಸ್ನೇಹಿತರು

ಹೇಳಿಬಿಟ್ಟಿದ್ದಾರೆ ಎಲ್ಲ ಜೋಕುಗಳನ್ನು

ಆದರೂ ನನ್ನದೆಂಥ ಪುಣ್ಯ, ಉಳಿಸಿದ್ದಾರೆ

ಇನ್ನೂ ಕೇಳುವ ಜನರನ್ನು

ಎಂಬುದನ್ನು ಹೇಳಿಯೇ ನಾನು ಮಾತನಾಡುತ್ತಿರುವುದು ನಿಮ್ಮ ಪುಣ್ಯದಿಂದ ಎಂದು ಅವರಿಗೆ ಖಾತ್ರಿಮಾಡುತ್ತೇನೆ. ತಮ್ಮದಾದ ಕೂಡಲೇ ಊರಿಗೆ, ಕೆಲವರು ರೂಮಿಗೆ, ಕೆಲವರು ಸಂಘಟಕರ ಬಳಿ, ಹೋಗಿ ಸ್ಟೇಜ್ ಮೇಲೆ ನಾನೊಬ್ಬನೇ ನಿಂತಿರುತ್ತೇನೆ. ಎಷ್ಟೋ ಸಲ ಇದ್ದಾರೆಂಬ ಭ್ರಮೆಯಿಂದ ಹಿಂತಿರುಗಿ ನೋಡಿದರೆ ಕುರ್ಚಿಗಳು ಆರು ಕಾಯುವವರಿಲ್ಲಾ..ಎಂಬ ಹಾಡನ್ನು ನಿತ್ಯ ವೇದಿಕೆ ಮೇಲೆ ಹಾಡಿಕೊಳ್ಳುತ್ತಿರುತೇನೆ.

ಭೀಮಸೇನ್ ಜೋಷಿಯಂಥವರು, ಶಿಶುನಾಳ, ಷರೀಫನಂಥವರು ಗುರುಸೇವೆಯನ್ನು ಕಾಯಾವಾಚಾ ಮನಸಾ ವರ್ಷಗಟ್ಟಲೆ ಮಾಡಿ ಜ್ಞಾನ ಪಡೆದರು. ಗುರುಗಳ ಮನೆಯಲ್ಲಿ ಹಗಲು ರಾತ್ರಿ ನೀರು ಹೊತ್ತು ವಿದ್ಯೆ ಕಲಿತರಂತೆ ಭೀಮಸೇನ ಜೋಷಿ. ವರ್ಷಗಟ್ಟಲೆ ಗುರುಗಳು ಪಾಠ ಹೇಳುವಾಗ ದನದ ಕೊಟ್ಟಿಗೆಯಲ್ಲಿ ಮರೆಗೆ ಕುಳಿತು ಸಂಗೀತ ಕೇಳಿದ್ದರರಂತೆ. ಷರೀಫರಂತೂ ಗೋವಿಂದ ಭಟ್ಟರಿಗೆ ಕೈಕಾಲು ಒತ್ತಿ, ಪೂಜೆಗೆ ಅಣಿಮಾಡಿ, ಅಡಿಗೆಮಾಡಿ ಉಣಿಸಿದ್ದಾರೆ. ಈಗಿನಅದರಲ್ಲೂ ನಾವೇ ಊಟತಂದು ಎಲೆಗೆ ಬಡಿಸಿ ಬನ್ನಿ ಎಂದು ಕರೆದರೂ ವಾಟ್ಸಾಪ್‌ನಲ್ಲಿ ಮುಳುಗಿರುತ್ತಾರೆ. ಕೈಕಾಲು ಒತ್ತುವದಿರಲಿ, ಅವರು ಮೊಬೈಲು ನೋಡುತ್ತಾ ಓಡಾಡುವಾಗ ನನ್ನನ್ನೆಲ್ಲಿ ತುಳಿಯುತ್ತಾರೋ ಅಂತ ಸರಿದು, ಮುದುರಿ ಕುಳಿತು ಕೊಳ್ಳುತ್ತೇನೆ. ನಿಮಗೆ ವಯಸ್ಸಾಯಿತು ನಿಮ್ಮನ್ಯಾರು ನೋಡುತ್ತಾರೆ? ಎಂದು ನನಗೆ ಅಭಿಮಾನಿಗಳು ಕೊಟ್ಟ ಶಾಲು, ಬಟ್ಟೆ, ಸೇಂಟುಗಳನ್ನು ಕಸಿದುಕೊಳ್ಳುತ್ತಾರೆ. ನನ್ನ ಜೋಕುಗಳನ್ನು ತಾವೇ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡು, ಪೆಚ್ಚಾಗಿ ಕೂತ ನನ್ನನ್ನು ನೋಡಿ ಹೊಸದು ಹುಡುಕಿರಿ, ನಿಮಗೆಷ್ಟು ಅನುಭವ ಆಗಿದೆ, ಎಂದು ಜರೆಯುತ್ತಾರೆ. ತಮಗೆ ಅನುಕೂಲವಿರೋ ಊರುಗಳಿಗೆ ಒಪ್ಪಿಕೊಳ್ಳಿ ಎನ್ನುತ್ತಾರೆ. ನಾನೇ ಬೇಗ ಎದ್ದು ರೆಡಿಯಾಗಿ ಅವರ ಮನೆಗೇ ಹೋಗಿ ಅವರನ್ನು ಕೂಗಿ ಕೂಗಿ ಕರೆಯುವವರೆಗೂ ಮಲಗಿದ್ದು ಎದ್ದು ಬರುತ್ತಾರೆ.

ಶಾಲಾದಿನಗಳಲ್ಲಿ ನಾನು ಗುರುಗಳ ಮಾತು ಕೇಳಲಿಲ್ಲ. ಈಗ ನನ್ನ ಮಾತೂ ಯಾರೂ ಕೇಳುವುದಿಲ್ಲಕಾಲವೆಂದರೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ವೈರಿಯೂ ಹೌದು, ಸಮಾಧಾನಿಸುವ ಮಿತ್ರನೂ ಹೌದು. ಇರಲಿ, ಇದು ಲೌಕಿಕ ಗುರುಶಿಷ್ಯರ ಸಂಬಂಧದ ಬಗ್ಗೆ ನನಗಾದ ಅನುಭವಗಳು. ಅಧ್ಯಾತ್ಮಕ್ಕೆ ಬಂದರೆ, ಸ್ಥಾನ ದೊಡ್ಡದು. ಗುರು ವ್ಯಕ್ತಿಯೇ ಆಗಬೇಕೆಂದಿಲ್ಲ, ತತ್ವ, ಆದರ್ಶ, ಗುರಿಗಳು ಗುರುವಾಗಬಲ್ಲವು. ಮಹಾಭಾರತದಲ್ಲಿನ ಭಗವದ್ಗೀತೆ ಎಲ್ಲರಿಗೂ ಗೊತ್ತು ಅದು ಜಗತ್ ಪ್ರಸಿದ್ದಿ. ಅದರಲ್ಲೆ ಉದ್ಧವಗೀತಾ ಅಥವಾ ಅವಧೂಗೀತಾ ಎಂಬ ಒಂದು ಸ್ಕಂದವಿದೆ. ಸಕಲ ಶಾಸ್ತ್ರಗಳ ಹೃದಯ ಶ್ರೀಮದ್ಭಾಗವತ. ಭಾಗವತ ಹೃದಯ ಹನ್ನೊಂದನೆಯ ಸ್ಕಂದ. ಹನ್ನೊಂದನೆ ಸ್ಕಂದದ ಹೃದಯವೇ ಉದ್ಧವಗೀತಾ.

ಇದರಲ್ಲಿ ಒಟ್ಟು 24 ಗುರುಗಳನ್ನು ಪ್ರಕೃತಿಯಲ್ಲಿ ಗುರುತಿಸಲಾಗಿದೆ. ಅವುಗಳೇ ಭೂಮಿ, ವಾಯು, ಆಕಾಶ, ನೀರು ಅಗ್ನಿ, ಚಂದ್ರ, ಪಾರಿವಾಳ, ಅಜಗರ, ಸಮುದ್ರ, ಪತಂಗ, ಜೇನುಹುಳು, ಆನೆ, ಬೇಡ, ಜಿಂಕೆ, ಮೀನು, ಪಿಂಗಳಾ ಎಂಬ ವೇಶ್ಯೆ, ಮಗು, ಕುಮಾರಿ, ಬಾಣಗಾರ, ಸರ್ಪ, ಜೇಡರ ಹುಳು, ಕಣಜದ ಹುಳು, ಕುರರ ಪಕ್ಷಿ. ಇವುಗಳನ್ನು ವಿಸ್ತರಿಸಿ ಹೇಳುತ್ತಾ ಹೋದರೆ ಪತ್ರಿಕೆಯ ಎಲ್ಲ ಪುಟಗಳು ತುಂಬುತ್ತವೆ. ಕಾರಣ, ಆಸಕ್ತರು ಭಾಗವತದ ಹನ್ನೊಂದನೆ ಅಧ್ಯಾಯದ ಉದ್ಧವಗೀತೆ ಓದಲು ವಿನಂತಿ.

ಗಿರತಿ ಇತಿ ಗುರು ಅಂದರೆ ನುಂಗಿ ಹಾಕುವವನು ಎಂಬುದು ಅರ್ಥ. ಎಲೆಯಲ್ಲಿರುವದನ್ನು ನುಂಗಿ ಶಿಷ್ಯನ ಆಸ್ತಿಪಾಸ್ತಿಯನ್ನು ನುಂಗಿ ಹಾಕುವವನು ಎಂದು ಅರ್ಥವಲ್ಲ. ಹಾಗಾದರೆ ಗುರು ಶಿಷ್ಯನಲ್ಲಿರುವ ಯಾವದನ್ನು ನುಂಗಿ ಹಾಕುತ್ತಾನೆ? ಅವನ ಸಂಶಯ, ಅವನ ಅಜ್ಞಾನ, ಅವನ ವಿಪರೀತ ಜ್ಞಾನ, ರಾಗ, ದ್ವೇಷಗಳನ್ನು ನುಂಗಿ ಹಾಕುತ್ತಾನೆ. ಇವನೇ ಗುರು. ಆದರೆ, ಇಂದು ಇಂಗ್ಲೀಷ ಶಿಕ್ಷಣದ ಮೋಹಕ್ಕೆ ಬಿದ್ದ ನಾವು ಡೊನೇಶನ್ ಕೊಟ್ಟು ಕಾಲೇಜ ಸೇರಿ, ಫೀ ಕಟ್ಟಿ ಪಾಠ ಕೇಳಿ, ಪರೀಕ್ಷೆ ಎಂಬ ಒತ್ತಡಕ್ಕೆ ಸಿಲುಕಿ, ರ್ಯಾಂಕ್ ಎಂಬ ಹಗ್ಗದ ಕುಣಿಕೆಗೆ ತಲೆ ಆತ್ಮ ಹತ್ಯೆ ಎಂಬ ದುರ್ಗತಿಯನ್ನು ಪಡೆಯುತ್ತಿದ್ದೇವೆ. ಡೊನೇಷನ್ ರೂಪದಲ್ಲಿ ತಂದೆಯ ಆಸ್ತಿ, ದುಡಿಮೆಯನ್ನೂ ನುಂಗುವ ಗುರುಗಳಿರುವ ಕಾಲೇಜಿನ ವಿದ್ಯೆ ನಿಮಗೆ ಮತ್ತೆ ಅವೆಲ್ಲವನ್ನು ಗಳಿಸಿಕೊಡುವ ಉದ್ಯೋಗ ನೀಡುತ್ತದೆ. ಉದ್ಯೋಗ ಕೊಡುವ ವಿದ್ಯೆ ವಿದ್ಯೆ ಅಲ್ಲ, ಎಲ್ಲ ಉದ್ಯೋಗಗಳಿಂದ ಮುಕ್ತಿ ಕೊಟ್ಟು ಮನಶ್ಯಾಂತಿ ಕೊಡುವದೇ ವಿದ್ಯೆ ಅದಕ್ಕೆ ಶಂಕರಾಚಾರ್ಯರು ಹೇಳಿದ್ದು ಸಾ ವಿದ್ಯಾ ಯಾ ವಿಮಕ್ತಯೇ. ನಮ್ಮನ್ನು ಎಲ್ಲದರಿಂದ ಮುಕ್ತಿಗೊಳಿಸುವದೇ ವಿದ್ಯೆ, ನಮ್ಮ ಶಬ್ದ ಭಂಡಾರ, ಮಾತಿನ ಜಾಣ್ಮೆ ಶಬ್ದಗಳ ಎಲ್ಲ ಕೌಶಲಗಳೂ ಭುಕ್ತಯೇ ನತು ಮುಕ್ತಯೆಅಂದರೆ ಅನ್ನ ಕೊಡಬಲ್ಲವುಗಳೇ ಹೊರತು ಆನಂದ ಕೊಡುವದಿಲ್ಲ. ತನ್ನ ಅನ್ನ ಸಂಪಾದಿಸಿಕೊಳ್ಳಲೆಂದೇ ವಿದ್ಯೆ ಕಲಿತವನು ಇನ್ನೊಬ್ಬರಿಗೆ ಆನಂದವನ್ನು ಕೊಡುವದು ಸಾಧ್ಯವಿಲ್ಲ. ನೌಕರಿ, ಚೋಕರಿಗಳೇ ಗುರಿಯಾದವನು ಗುರುವಿನ ಚಾಕರಿ ಮಾಡುವುದಿಲ್ಲ. ಅವನೇನಿದ್ದರೂ ಐಟಿಬಿಟಿಗಳ ಷಿಕಾರಿಯೆ ಸರಿ.

Tags

Related Articles

Leave a Reply

Your email address will not be published. Required fields are marked *

Language
Close