About Us Advertise with us Be a Reporter E-Paper

ಗುರು

ಹಬ್ಬ ಬರೀ ಮನೆಗಲ್ಲ, ಮನಸ್ಸಿಗೂ…!

ಸದಾಶಿವ್ ಸೊರಟೂರು

ನುಮಾನವಿಲ್ಲ, ಬದುಕಿನ ಸಂಭ್ರಮವೇ ಹಬ್ಬ! ಸಂಭ್ರಮಕ್ಕೆ ಹಲವು ಗರಿಗಳು. ಗರಿಗಳಿಗೆ ನೂರಾರು ಬಣ್ಣಗಳು. ಅದಕ್ಕೆಂದೆ ಹಬ್ಬವೆಂದರೆ ಸಾಕು ಕಣ್ಣುಗಳು ಅರಳುತ್ತವೆ. ಹಬ್ಬಗಳ ಇತಿಹಾಸವನ್ನು ಹೊಕ್ಕಿ ನೋಡಿದರೂ ನಿಮಗಿಲ್ಲಿ ಸಾಕಷ್ಟು ರಂಗು ಕಾಣಿಸುತ್ತದೆ. ಅಲ್ಲಿ ಹಬ್ಬಕ್ಕಾಗಿ ಹಬ್ಬವಿದ್ದಿಲ್ಲ. ಇಡೀ ಬದುಕನ್ನೇ ಅಲಂಕರಿಸಿಕೊಂಡವನ ಅತೀವ್ರ ಸಂಭ್ರಮವಿರುತ್ತಿತ್ತು. ಹಬ್ಬವೆಂದರೆ ದೇಹಕ್ಕೂ ಮನಸ್ಸಿಗೂ ಅದರಾಚೆಯ ಸಂಬಂಧಗಳಿಗೂ ಹಚ್ಚಿಕೊಳ್ಳುವ ಒಂದು ಅತೀ ದೊಡ್ಡ ಸಡಗರ.

ಹಬ್ಬಗಳು ಈಗೀಗ ಬಹಳ ಮಾಡಿ ಕವಲು ದಾರಿಗೆ ಬಂದು ಅಲ್ಲಿಂದ ಸೆಳೆತಕ್ಕೆ ಸೋತು ಎತ್ತಲೋ ಸಾಗುತ್ತಿವೆ. ಮೂಲ ಆಶಯವನ್ನು ಬಿಟ್ಟು ಬೇರೆಯೆಲ್ಲವೂ ಇರುತ್ತದೆ.

ಹಬ್ಬ ಶುದ್ದ ಫ್ಯಾಶನ್ ರೂಪ ಪಡೆದುಕೊಂಡಿದೆ. ಅದು ಈಗ ಅಷ್ಟಾಗಿ ಧಾರ್ಮಿಕ ಕ್ರಿಯೆಯಾಗಿ ಉಳಿದಿಲ್ಲ. ಒಂದು ರೇಷ್ಮೆ ಸೀರೆ, ಬಿಳಿಯ ಬಣ್ಣದ ರೇಷ್ಮೆ ಪಂಚೆ ಅಂಗಿಯಂತಹ ಉಡುಗೆ, ತಿನ್ನಬೇಕು ಅಂತ ಆಸೆಯಾದ ತಿಂಡಿಗಳು. ತೋರ್ಪಡಿಕೆಗಾಗಿ ಹೊರಗಿನ ಮಟ್ಟದ ಸಿಂಗಾರಗಳಿಗೆ ಈಗ ಆದ್ಯತೆ. ಈಗ ಅದ್ದೂರಿಯ ವಿಷಯದಲ್ಲಿ ಪರಸ್ಪರ ಸ್ಪರ್ಧೆಗೆ ಬಿದ್ದಿದ್ದೇವೆ.

ಕಾಲ ಬದಲಾದಂತೆ ಅವೂ ಇರಲಿ ಬಿಡಿ. ಆದರೆ ಹಬ್ಬ ಬೇಕಾಗಿರುವುದು ಮನಸ್ಸಿಗೂ ಕೂಡ. ಮನಸ್ಸೊಂದು ಹಬ್ಬ ಮಾಡಬೇಕು. ಹಬ್ಬದಲ್ಲಿ ಮಿಂದು ರಂಗಾಗಬೇಕು. ಹಬ್ಬಗಳು ಹುಟ್ಟಿಕೊಂಡಿದ್ದು ಇದೇ ಕಾರಣಕ್ಕೆ. ಏಕಾತನದ ಬದುಕಿಗೊಂದು ಚಂದದ ಬ್ರೇಕ್ ಹಾಕಿ ಒಂದಿಷ್ಟು ನಿಮ್ಮನ್ನು ಬೂಸ್‌ಟ್ ಮಾಡಿ ಮುಂದಿನ ದಿನಗಳಿಗೆ ಉತ್ಸಾಹದಿಂದ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದವು. ಈಗಲೂ ಕೂಡ ಅದು ಬೇಕಾಗಿದೆ. ಅದರಲ್ಲೂ ಇಂದಿನ ಜಂಜಾಟದ ಬದುಕಿನಲ್ಲಿ ಹಬ್ಬವೊಂದು ಮೊದಲು ಮನಸ್ಸಿನಲ್ಲಾಗಬೇಕು. ಅದರ ಅವಶ್ಯಕತೆ ತುಂಬಾ ಇದೆ. ಹೋರಾಂಗಣದ ತೋರ್ಪಡಿಕೆಯ ಹಬ್ಬ ಸಾಕಷ್ಟು ಜೋರಾಗಿಯೇ ಇರುವಾಗ ಮನಸ್ಸಿನ ಕಡೆ ಗಮನವೀಯಲೇ ಬೇಕಾಗುತ್ತದೆ. ಇಂದಿನ ಉದ್ವೇಗದ, ಜಂಜಾಟದ, ಒತ್ತಡದ ಬದುಕಿಗೆ ಅದರ ಅವಶ್ಯಕತೆ ಇದೆ.

ಹಬ್ಬ ದೇಹಕ್ಕೂ ಮನಸ್ಸಿಗೂ ಆಗಲಿ. ಹಬ್ಬದ ದಿನ ನೀವು ಕೇವಲ ನೀವಾಗಿ! ನೀವು ಲಾಯರೊ, ಲೆಕ್ಚರರೊ ಆಗಿದ್ದರೆ ಅದನ್ನು ಮನಸ್ಸಿನಿಂದ ಕಳಚಿ ಸೈಡಿಗಿಡಿ. ನಿಮ್ಮ ಮೊಬೈಲ್‌ಗಳನ್ನು ಕಡ್ಡಾಯವಾಗಿ ಬಂದ್ ಮಾಡಿ ಎತ್ತಿಟ್ಟುಬಿಡಿ. ಟಿವಿಯನ್ನಂತೂ ಆನ್ ಮಾಡಲೇ ಬೇಡಿ. ಎಲ್ಲೊ ದೂರದಲ್ಲಿರುವವರಿಗೆ ಸಂದೇಶ ಕಳುಹಿಸಲು ಹೆಣಗಾಡುವ ಬದಲು ನಿಮ್ಮೊಂದಿಗೆ ಇರುವವರೊಂದಿಗೆ ಮನಸ್ಸು ಬಿಚ್ಚಿಕೊಳ್ಳಿ. ಅಕ್ಕಪಕ್ಕದ ಮಾತಾಗಿ. ಬೆರೆಯಿರಿ. ಹಬ್ಬದ ಊಟ ಯಾವುದೊ ಹೋಟೆಲ್ ನಲ್ಲಿ ನಡೆಯುವುದು ಬೇಡ. ಮನೆಯ ಸದಸ್ಯರೆಲ್ಲ ಸೇರಿ ನಿಮಿಷ್ಟದ ಮತ್ತು ಹಬ್ಬವೊಂದು ಬಯಸುವ ಅಡುಗೆಯನ್ನು ಮನೆಯಲ್ಲೇ ತಯಾರಾಗಲಿ. ಹಬ್ಬಕ್ಕಾಗಿ ಜಿಪುಣತನ ಸಲ್ಲ, ಹಾಗಂತ ಹಣದ ಹೊಳೆಯೇ ಹರಿಯಬೇಕೆಂದೇನೂ ಇಲ್ಲ. ನಿಮ್ಮ ಅವಶ್ಯಕತೆಗಳನ್ನು ಚೆನ್ನಾಗಿಯೇ ಒದಗಿಸಿಕೊಳ್ಳಿ. ಹೊಸ ಬಟ್ಟೆಗಳೇ ಆಗಲಿ. ಬೇರೆ ದಿನಗಳಲ್ಲಿ ಹೊಸ ಬಟ್ಟೆ ಧರಿಸುವುದಕ್ಕಿಂತ ಹಬ್ಬದ ದಿನ ಧರಿಸುವುದು ಮನಸ್ಸಿಗೆ ಪ್ರಫುಲ್ಲತೆ ತರುತ್ತದೆ. ಪೂಜೆ ವಿಧಿ ವಿಧಾನಗಳು ಎಲ್ಲರಿಗೂ ಇಲ್ಲ. ಇಷ್ಟವಾದವರು ಅದರಲ್ಲಿ ತೊಡಗಿಕೊಳ್ಳಿ. ಅವುಗಳಲ್ಲಿ ನಂಬಿಕೆ ಇಲ್ಲದವರು ಮನಸ್ಸಿಗೆ ಖುಷಿಕೊಡುವ ಯಾವುದಾದರೂ ಒಂದೊಳ್ಳೆ ಕಾರ್ಯದಲ್ಲಿ ತೊಡಗಿ.

ಪ್ರತಿಯೊಂದು ಹಬ್ಬಗಳೂ ಒಂದು ವಿಶೇಷತೆಯನ್ನು ಹೊತ್ತುಕೊಂಡೆ ಬರುತ್ತವೆ. ಅವುಗಳನ್ನು ಅನುಸರಿಸಿ. ಹಬ್ಬಗಳು ಆಟಗಳನ್ನು ಜೊತೆಗೆ ತಂದಿರುತ್ತವೆ ಅವುಗಳನ್ನು ಮೈಮರೆತು ಆಡಿ. ಯುಗಾದಿಯಲ್ಲಿ ಕೆಲವು ಕಡೆ ಮರಕ್ಕೆ ಜೋಕಾಲಿ ಕಟ್ಟಿ ಆಡುವ ರೂಢಿಯಿದೆ. ಆಗ ಮನಸ್ಸೊ ಇಚ್ಛೆ ಜೀಕಿಬಿಡಿ. ಜಾತಿ, ಧರ್ಮ, ಅಂತಸ್ತು ಬಿಟ್ಟು ಹಬ್ಬದಲ್ಲಿ ಎಲ್ಲರೊಂದಿಗೆ ಬೆರೆಯಿರಿ. ಹಬ್ಬ ಬರೀ ಅದರಾಚೆ ಇಲ್ಲಸಲ್ಲದ್ದು ಬೇಡ. ಹಬ್ಬದ ಮರುದಿನ ಬದುಕು ಒಂದು ಕಳೆ ಕಟ್ಟಿಕೊಳ್ಳುವಂತಾಗಬೇಕು. ಇಲ್ಲದಿದ್ದರೆ ಹಬ್ಬಗಳಾದರೂ ಏನಕ್ಕೆ? ಅಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close