About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಬೈಲುಕುಪ್ಪೆಯ ಸ್ವರ್ಣ ಮಂದಿರ

ಮಂಜುನಾಥ. ಡಿ.ಎಸ್.

ಕುಶಾಲನಗರದ ಬಳಿಯಿಂದ ಒಳಹಾದಿ ಹಿಡಿದು ಬೆಟ್ಟಗುಡ್ಡಗಳ ಅಂಕುಡೊಂಕು ಹಾಗು ಉಬ್ಬುತಗ್ಗಿನ ಕಿರುದಾರಿಯಲ್ಲಿ ಕೆಲವು ಕಿಲೋಮೀಟರ್ ಕ್ರಮಿಸಿ ಕಾತರದಿಂದ ನಿರೀಕ್ಷಿಸುತಿದ್ದ ಚಕ್ರಾಕರದ ಗೋಚರಿಸುತ್ತಿದ್ದಂತೆ ಮನಸ್ಸು ಗರಿಗೆದರಿತು; ಬೈಲುಕುಪ್ಪೆಯಲ್ಲಿರುವ ನಾಮ್‌ಡ್ರೊಲಿಂಗ್ ನಿಂಗ್ಮಪ ಬೌದ್ಧ ವಿಹಾರ ಯಾ ಸ್ವರ್ಣಮಂದಿರದ ದರ್ಶನಕ್ಕಾಗಿ ಹಾತೊರೆಯಿತು; ಕೇವಲ ಕೇಳರಿತಿದ್ದ ಈ ಮಂದಿರವನ್ನು ಕಣುಂಬಿಕೊಳ್ಳುವ ಸಮಯ ಸನ್ನಿಹಿತವಾಯಿತು.

ವರ್ಣರಂಜಿತ ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ಪದ್ಮಪುಷ್ಪಗಳ ರಂಗೋಲಿಗಳು ಭವ್ಯ ಮಂದಿರಕ್ಕೆ ಸ್ವಾಗತಿಸಿದವು. ಆಗ ತಾನೆ ವರುಣನ ಕೃಪೆಯಿಂದ ನೆಂದ ನೆಲದಲ್ಲಿ ಮೂಡಿದ್ದ ದೇಗುಲದ ಪ್ರತಿಬಿಂಬ ವಿಶೇಷ ಮೆರುಗು ನೀಡಿತ್ತು. ಚಕ್ರದಲ್ಲಿನ ಪ್ರತಿಮೆಗಳು ಕುತೂಹಲ ಮೂಡಿಸಿದವು. ಗೋಪುರದಲ್ಲಿದ್ದ ದೊಡ್ಡ ಭಾವಚಿತ್ರ ಸಂಸ್ಥಾಪಕರನ್ನು ಕಣ್ಮುಂದೆ ನಿಲ್ಲಿಸಿತು. ಮಂದಿರದ ಎಡಪಾರ್ಶ್ವ ದಲ್ಲಿರುವ ಬೃಹತ್ ಘಂಟೆ ಗಮನಸೆಳೆಯಿತು. ತುಸು ಹಿಂಬದಿಗಿ ರುವ ತಾರಾ ಮಂದಿರದ ಗೋಪುರದಲ್ಲಿನ ಕನಕ ವರ್ಣದ ಕುಸುರಿ ಕೆಲಸದ ಅಂಚುಗಳು, ಜಿಂಕೆಗಳು, ಹಾಗು ಘಂಟಾಕೃತಿಗಳು ತಮ್ಮ ಸೌಂದರ್ಯದಿಂದ ಚಿತ್ತಾಕರ್ಷಿಸಿದವು.

ವಿಶಾಲವಾದ (ಸ್ವರ್ಣಮಂದಿರ) ಪದ್ಮಸಂಭವ ವಿಹಾರದ ಗೋಪುರದಲ್ಲಿಯೂ ಚಿನ್ನದ ಬಣ್ಣದ ಜಿಂಕೆಗಳು ಮತ್ತು ಘಂಟಾ ಕೃತಿಗಳಿವೆ. ಪ್ರಶಾಂತ ಹಾಗು ಆಧ್ಯಾತ್ಮಿಕ ಪರಿಸರದ ಈ ಪ್ರಾರ್ಥನಾ ಮಂದಿರದ ಮುಖ್ಯ ಆಕರ್ಷಣೆ ಪದ್ಮಸಂಭವ, ಸುಖ ಯಾಮಿ, ಮತ್ತು ಅಮಿತಾಯುಸ್ ಸಂತರ ಮೂರ್ತಿ ಗಳು. ಇವಲ್ಲದೆ ಅನೇಕ ಇತರ ವಿಗ್ರಹಗಳೂ ಇಲ್ಲಿವೆ. ಮೂರೂ ಮಂದಿರಗಳಲ್ಲಿರುವ ಟಿಬೆಟ್‌ನ ಸಾಂಪ್ರದಾಯಿಕ ವರ್ಣಚಿತ್ರಗಳು ಮತ್ತು ಬೌದ್ಧಧರ್ಮದ ಪುರಾಣಕಥೆಗಳ ಪಾತ್ರ ಗಳು ಅರಿವಿಗೆ ನೆರ ವಾಗುವಂತಿದ್ದವು. ಬೈಲುಕುಪ್ಪೆಯ ಟಿಬೆಟಿಯ ನ್ನರ ನೆಲೆಯ ಪಕ್ಷಿ ನೋಟ ನೀಡುವ ಮಾದರಿಯೂ ಇಲ್ಲಿದೆ.

ನಿಂಗ್ಮ ಸಂಪ್ರದಾಯದ ಸ್ವರ್ಣಮಂದಿರ ಲೋಕಾರ್ಪಣೆ ಗೊಂಡಿದ್ದು 1999ರ ಸೆಪ್ಟಂಬರ್ 24ರಂದು. ಪರಮ ಪೂಜ್ಯ ಪೇಮ ನೋರ್ಬು ರಿಂಪೋಚೆಯವರು ಭಾರತಕ್ಕೆ ಬಂದ ಹೊಸತ ರಲ್ಲಿ ಕೇವಲ ಮುನ್ನೂರು ರೂಪಾಯಿಗಳ ಬಿದಿರು ಬಳಸಿ ರಚಿಸಿದ ಬೌದ್ಧವಿಹಾರದಲ್ಲಿ ಬೆರಳೆಣಿಕೆಯಷ್ಟು ಲಾಮಾಗಳಿದ್ದರು. ಇಂದು ಸುಮಾರು ಐದು ಸಾವಿರ ಭಿಕ್ಷುಗಳು ಹಾಗು ಬೌದ್ಧ ವಿಶ್ವವಿದ್ಯಾನಿಲಯವಿದ್ದು ಬುದ್ಧನ ಉಪದೇಶ ಗಳನ್ನು ಪಸರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಕೇಂದ್ರ ಇದಾಗಿದೆ. ಬೆಳಗಿನ ಒಂಬತ್ತು ಘಂಟೆಯಿಂದ ಸಂಜೆ ಆರರವರೆಗೆ ವೀಕ್ಷಣೆಗೆ ತೆರೆದಿರುವ ಈ ದೇಗುಲ ಮೈಸೂರಿನಿಂದ 82 ಕಿಲೋ ಮೀಟರ್ ಹಾಗು ಮಡಿಕೇರಿಯಿಂದ 36 ಕಿಲೋಮೀಟರ್ ದೂರ ದಲ್ಲಿದೆ. ಸ್ವಂತ ವಾಹನ ಇದ್ದರೆ ಪ್ರವಾಸ ಪ್ರಯಾಸವೆನಿಸುವುದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close