About Us Advertise with us Be a Reporter E-Paper

ಅಂಕಣಗಳು

ಜನಕಲ್ಯಾಣಕ್ಕೆ ಮುಂದಾದಾಗ ಸರಕಾರಕ್ಕೆ ಹೃದಯ ಇರಬೇಕು!

ಪ್ರತಿಯೊಬ್ಬ ವ್ಯಕ್ತಿಯೂ ಸಂವೇದನಾಶೀಲ ನಾಗಿರಬೇಕೆಂಬುದು ನೀತಿ ಕಥೆ. ಆದರೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ವ್ಯಕ್ತಿಯಷ್ಟೆ ಮುಖ್ಯವಾಗಿ ಸರಕಾರಗಳೂ ಸಂವೇದನಾಶೀಲತೆಯಿಂದ ಕೂಡಿರಬೇಕು. ನಾಗರಿಕ ಸರಕಾರಗಳು ಕೆಲವೊಂದು ನೀತಿನಿಯಮ ಮತ್ತು ಕಾನೂನು ಕಟ್ಟಳೆಗಳನ್ನು ರೂಪಿಸಿಕೊಂಡಿರುತ್ತವೆ. ತಾನು ರೂಪಿಸಿಕೊಂಡ ಕಾನೂನುಗಳಿಂದ ಸ್ವತಃ ಅವನ್ನು ರೂಪಿಸಿದಂತಹ ಸರಕಾರವೇ ಹೊರತಾಗಿರುವುದಿಲ್ಲ. ಪಾಲಿಸುವ ಮಹತ್ತರ ಜವಾಬ್ದಾರಿ ಸರಕಾರಕ್ಕೂ ಇರುತ್ತದೆ. ಇಂತಹ ನಿಯಮಗಳಿಗೆ ಸರಕಾರಗಳು ಎಷ್ಟರ ಮಟ್ಟಿಗೆ ಸ್ಪಂದಿಸುತ್ತವೆ ಎಂಬುದರ ಮೇಲೆ ಜನಸಾಮಾನ್ಯನ ಸಂತೃಪ್ತಿದಾಯಕ ಜೀವನ ನಿರ್ಧರಿಸಲ್ಪಡುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಭದ್ರತಾ ಭಾವನೆ ಮೂಡಿಸುವಲ್ಲಿ ಸರಕಾರದ ನಡವಳಿಕೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ವೇಳೆ ತಾನು ರೂಪಿಸಿಕೊಂಡ ಕಾನೂನು ನಿಯಮಗಳಲ್ಲಿ ಸರಕಾರವು ಎಡವಿದ್ದಾದರೆ ಜನಸಾಮಾನ್ಯರಿಗೆ ಕಾನೂನು ಪಾಲಿಸುವಂತೆ ತಿಳಿಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ನೈತಿಕತೆ ಕಳೆದುಕೊಂಡ ಆಡಳಿತ ಪದ್ಧತಿಯಲ್ಲಿ ಅರಾಜಕತೆ ತಾಂಡವವಾಡಲಾರಂಭಿಸುತ್ತದೆ. ಆದ್ದರಿಂದಲೇ ನಮ್ಮನ್ನಾಳುವವರನ್ನು ಕುರಿತು ಸರಕಾರಗಳಿಗೆ ಕಣ್ಣು, ಕಿವಿಗಳಿರಬೇಕು ಎಂದು ಚುಚ್ಚಿ ಹೇಳುತ್ತಾರೆ. ಕಣ್ಣು, ಕಿವಿ ಇಲ್ಲದ ಸರಕಾರಗಳಿಂದ ಮಹತ್ತರವಾದ ಆಶಯಗಳನ್ನು ನಿರೀಕ್ಷಿಸಲಾಗುವುದಿಲ್ಲವೆಂಬುದು ಈ ಮಾತಿನ ಮರ್ಮವಾಗಿದೆ.

ಇತ್ತೀಚಿಗೆ ಕೆಲ ಶಾಸಕರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಧರಣಿಯನ್ನು ಕೈಗೊಂಡಿದ್ದರು. ಅವರ ಬೇಡಿಕೆ ಏನೆಂದರೆ ಈ ಹಿಂದೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಸಹ ಈವರೆಗೆ ಉಭಯ ಸದನಗಳಲ್ಲಿ ಮಂಡನೆಯಾಗಿರುವುದಿಲ್ಲ. ಈ ಕುರಿತಾಗಿ ಸಂಬಂಧಿಸಿದ ಸಚಿವರು ಉಭಯ ಮಂಡಿಸುವುದಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಈ ಕುರಿತಾಗಿ ‘ಅನ್ವರ್ ಮಾಣಿಪ್ಪಾಡಿ ವರದಿ’ ಎಂದು ಕರೆಯಲಾಗುವ ಅಲ್ಪಸಂಖ್ಯಾತರ ಆಯೋಗದ ವರದಿಯನ್ನು ಎರಡೂ ಸದನಗಳಲ್ಲಿ ಮಂಡಿಸಬೇಕೆಂದು ವಿಧಾನಪರಿಷತ್ತಿನ ಸಭಾಧ್ಯಕ್ಷರು ರೂಲಿಂಗ್‌ನ್ನು ನೀಡಿರುತ್ತಾರೆ. ಇದರ ಮಧ್ಯದಲ್ಲಿಯೇ ರಾಜ್ಯ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿ ಇನ್ನು ನಾಲ್ಕೇ ವಾರಗಳಲ್ಲಿ ವರದಿಯನ್ನು ಮಂಡಿಸಬೇಕೆಂದು ಸೂಚನೆಯನ್ನು ನೀಡಿದೆ.

ಇದಲ್ಲದೆ ವಿಧಾನಮಂಡಲದ ಹಕ್ಕು ಬಾಧ್ಯತಾ ಸಮಿತಿ ತನ್ನ ವರದಿಯಲ್ಲಿ ಮಾಣಿಪ್ಪಾಡಿ ವರದಿಯನ್ನು ಮಂಡಿಸಲು ಆದೇಶಿಸಿದೆ. ಇಷ್ಟೆಲ್ಲಾ ಘಟನೆಗಳು ಜರುಗಿದ್ದರೂ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ವರದಿಯನ್ನು ಮಂಡಿಸುವುದಕ್ಕೆ ಸರಕಾರ ಹಿಂದೇಟು ಹಾಕಿದೆ. ಇಲ್ಲಿ ಉದ್ಭವಿಸುವ ಮೂಲ ಪ್ರಶ್ನೆಯೆಂದರೆ ಆಳುವ ಸರಕಾರವೊಂದು ಇಷ್ಟೆಲ್ಲಾ ಆದೇಶಗಳನ್ನು ಧಿಕ್ಕರಿಸಿ ಸಂಬಂಧಿತ ನ್ಯಾಯಾಲಯ, ಮಂಡಳಿ ಮತ್ತು ಪ್ರಾಧಿಕಾರಗಳ ಸೂಚನೆಗಳನ್ನು ನಿರ್ಲಕ್ಷಿಸುವುದಾರೆ ಇಂತಹ ಸರಕಾರಗಳು ಜನಸಾಮಾನ್ಯನಿಗೆ ಕಾನೂನು ಪಾಲಿಸುವಂತೆ ಬುದ್ಧಿ ಹೇಳುವ ನೈತಿಕತೆಯನ್ನು ಹೊಂದಿರಬಹುದೆ? ಅಥವಾ ಉಳ್ಳವರು ತಮಗಿಚ್ಛೆ ಬಂದ ರೀತಿಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಲಾಢ್ಯರು ತಮ್ಮ ಜೀವನವನ್ನು ಸುಲಲಿತವಾಗಿ ಮುಂದೂಡಬಹುದೆ?

ಕಳೆದ ಸರಕಾರದ ಆಡಳಿತದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಹಿಂಬಡ್ತಿಯಿಂದಾಗಿ ಉಂಟಾಗಬಹುದಾಗಿದ್ದ ದೋಷಗಳನ್ನು ಸರಿಪಡಿಸುವುದಕ್ಕಾಗಿ ಹೊಸದಾದ ನಿಯಮಾವಳಿಯೊಂದನ್ನು ರೂಪಿಸಿ ಉಭಯ ಸದನಗಳಲ್ಲಿಯೂ ವಿಧೇಯಕವನ್ನು ಮಂಡಿಸಲಾಗಿತ್ತು. ಉಭಯ ಸದನಗಳ ಸರ್ವಾನುಮತದಿಂದ ಒಪ್ಪಿತವಾಗಿದ್ದ ವಿಧೇಯಕವನ್ನು ರಾಷ್ಟ್ರಪತಿಯವರ ಅಂಕಿತ ಪಡೆದುಕೊಳ್ಳುವುದಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿತ್ತು. ಹೀಗೆ ಅನುಮೋದನೆಗೊಂಡ ವಿಧೇಯಕವು ಪ್ರಸ್ತುತ ಜಾರಿಯಲ್ಲಿರುವ ಸಂವಿಧಾನದ ಅನುಚ್ಛೇದಗಳು, ನ್ಯಾಯಾಲಯದ ತೀರ್ಪುಗಳು ಹಾಗೂ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯನ್ನೊಡ್ಡಬಹುದಾದ ಯಾವುದಾದರೂ ಅಂಶಗಳನ್ನು ಒಳಗೊಂಡಿರಬಹುದೆ ಎಂದು ಪ್ರಶ್ನಿಸಿ ಘನತೆವೆತ್ತ ರಾಷ್ಟ್ರಪತಿಗಳು ಕಾನೂನು ಸಮಾಲೋಚಿಸಿ ಆನಂತರದಲ್ಲಿ ಒಪ್ಪಿಗೆಯ ಮುದ್ರೆಯನ್ನೊತ್ತಿದ್ದರು. ಆ ದಿನದಿಂದ ರಾಷ್ಟ್ರಪತಿಯವರ ಅಂಕಿತ ಪಡೆದ ವಿಧೇಯಕವು ಅಧಿಕೃತ ಕಾನೂನಿನ ಸ್ವರೂಪವನ್ನು ಪಡೆದುಕೊಂಡಂತಾಗಿದೆ. ಹೀಗೆ ರಾಷ್ಟ್ರಪತಿಯವರಿಂದ ಅನುಮೋದನೆಗೊಂಡ ಕಾನೂನು ಕರ್ನಾಟಕದಲ್ಲಿ ಜಾರಿಯಲ್ಲಿದ್ದರೂ ಸಹ ಈ ವರೆಗೆ ಅನುಷ್ಠಾನಕ್ಕೆ ಬಂದಿರುವುದಿಲ್ಲ.

ಇದರ ಬಗ್ಗೆ ಸದನದಲ್ಲಿ ಪ್ರಶ್ನಿಸಿದಾಗಲೂ ಸಹ ಸಚಿವರು ಹಾರಿಕೆಯ ಉತ್ತರವನ್ನು ನೀಡಿ ಕೈ ತೊಳೆದುಕೊಂಡಿರುತ್ತಾರೆ. ಹಾಗಿದ್ದಲ್ಲಿ ಸರಕಾರದಿಂದಲೇ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿ ರುವುದರ ಹಿನ್ನೆಲೆಯಲ್ಲಿ ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳು ಪ್ರಕರಣಗಳ ಇತ್ಯರ್ಥಪಡಿಸುವಿಕೆಯಲ್ಲಿ ಉಲ್ಲಂಘನೆ ಮಾಡುತ್ತಿರಬಹುದು? ಅಥವಾ ಬಲಾಢ್ಯರು ಮತ್ತು ಪ್ರಭಾವಿಶಾಲಿಗಳು ತಮ್ಮ ಅಧಿಕಾರವನ್ನು ಬಳಸಿ ಜನಸಾಮಾನ್ಯರ ಹಕ್ಕುಗಳನ್ನು ಮತ್ತು ಆಸ್ತಿಪಾಸ್ತಿಗಳನ್ನು ಕಬಳಿಸುತ್ತಿರುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕಾದವರು ಹೇಗೆ ಕಣ್ಣುಮುಚ್ಚಿ ಕುಳಿತಿರಬಹುದೆಂಬುದನ್ನು ಗ್ರಹಿಸಬಹುದಾಗಿದೆ. ಹಾಗಿದ್ದರೆ ಸರಕಾರಗಳು ತಮ್ಮ ನಾಗರಿಕರ ಹಕ್ಕು, ರಕ್ಷಣೆ ಮತ್ತು ಬಾಧ್ಯತೆಗಳನ್ನು ಪುರಸ್ಕರಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿ ರುವುದರಲ್ಲಿ ಸತ್ಯಾಂಶಗಳನ್ನು ಕಾಣಬಹುದಾಗಿದೆಯೆ?

ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಎದುರಿನಲ್ಲಿ ಅತ್ಯಂತ ದುಬಾರಿಯಾದ ಪಂಚತಾರಾ ಹೋಟೆಲ್ ತಲೆಯೆತ್ತಿ ನಿಂತಿದೆ. ಇಂತಹ ಪ್ರತಿಷ್ಠಿತ ಜನಸಾಮಾನ್ಯರಾರೂ ಚಹ ಕುಡಿಯುವುದಕ್ಕೂ ಸಾಧ್ಯವಿಲ್ಲ! ಅಷ್ಟೊಂದು ದುಬಾರಿಯಾದ ಈ ಹೋಟೆಲ್‌ನಲ್ಲಿ ದಿನವೊಂದಕ್ಕೆ ಕೊಠಡಿಯೊಂದರ ಬಾಡಿಗೆ ಸುಮಾರು ಮುವತ್ತು ಸಾವಿರ ರು.ಗೂ ಹೆಚ್ಚಾಗಿದೆ. ಆದರೆ ಹೀಗೆ ತಲೆ ಎತ್ತಿ ನಿಂತಿರುವ ಖಾಸಗಿ ಹೋಟೆಲ್‌ನ ಕಟ್ಟಡ ನಿರ್ಮಾಣಗೊಂಡಿರುವುದು ವಕ್‌ಫ್ ಗೆ ಸೇರಿದ ಆಸ್ತಿಯಲ್ಲಿ. ಸುಮಾರು ವರ್ಷಗಳ ಹಿಂದೆ ಈ ಆಸ್ತಿಯನ್ನು ವರ್ಷವೊಂದಕ್ಕೆ ಇಪ್ಪತ್ತೈದು ಸಾವಿರ ರುಪಾಯಿಗಳ ದರದಲ್ಲಿ ನೂರು ವರ್ಷಗಳ ಅವಧಿಗೆ ಪರಭಾರೆಯನ್ನು ಮಾಡಲಾಗಿದೆ. ವಕ್‌ಫ್ ನಿಯಮಕ್ಕೆ ವಿರುದ್ಧವಾಗಿದ್ದರೂ ಸಹ ಸರಕಾರದಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿ, ಪುನಃ ವಕ್‌ಫ್ ಸಂಸ್ಥೆಗೆ ಹಸ್ತಾಂತರಿಸುವ ಕ್ರಮಕ್ಕೆ ಯಾವ ಸರಕಾರಗಳೂ ಕೈಹಾಕಿರುವುದಿಲ್ಲ. ಹೀಗೆ ಕರ್ನಾಟಕ ರಾಜ್ಯಾದ್ಯಂತ ಸುಮಾರು ಇಪ್ಪತ್ತೇಳು ಸಾವಿರ ಎಕರೆಯಷ್ಟು ಬೆಲೆ ಬಾಳುವ ವಕ್‌ಫ್ ಆಸ್ತಿ ಬೇರೆಯವರ ಪಾಲಾಗಿವೆ. ಇದರಲ್ಲಿ ಬಹಳಷ್ಟು ಪ್ರಭಾವಿ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಕಪ್ಪ ಕಾಣಿಕೆಯನ್ನು ನೀಡುವ ಪ್ರಭಾವಿ ಉದ್ಯಮಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿರುವ ಆಯಕಟ್ಟಿನ ಸ್ಥಳಗಳಲ್ಲಿರುವ ಇಂತಹ ಆಸ್ತಿಯನ್ನು ಲಪಟಾಯಿಸಲಾಗಿದ್ದು ಮೊತ್ತ ಸುಮಾರು ಎರಡು ಲಕ್ಷದ ಮುವತ್ತು ಸಾವಿರ ಕೋಟಿ ರುಪಾಯಿಯಷ್ಟು ಎಂದು ಅಂದಾಜಿಸಲಾಗಿದೆ. ಇಷ್ಟು ಪ್ರಮಾಣದ ಆಸ್ತಿಯನ್ನು ಸರಕಾರವು ಹಿಂಪಡೆದು ವಕ್‌ಫ್ಗೆ ಪುನಃ ಹಸ್ತಾಂತರಿಸಿದಲ್ಲಿ ಅಲ್ಪಸಂಖ್ಯಾತರ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಜನಾಂಗದವರ ಅಭಿವೃದ್ಧಿಗೆ ಅಪಾರ ಪ್ರಮಾಣದ ಆದಾಯದ ಅವಕಾಶ ಒದಗುವುದರಿಂದ ಅವರ ಮೂಲಭೂತ ಅಗತ್ಯಗಳಾದ ಶಿಕ್ಷಣ, ಆರೋಗ್ಯ, ನೈರ್ಮಲ್ಯಕ್ಕಾಗಿ ಬಳಸಬಹುದಾಗಿರುತ್ತದೆ. ಆದರೆ ಅಗಾಧ ಪ್ರಮಾಣದ ಆಸ್ತಿಯನ್ನು ಲಪಟಾಯಿಸಿರುವ ಕೆಲವು ಮುಖಂಡರುಗಳ ರಕ್ಷಣೆಗೆ ನಿಂತಿರುವ ಸರಕಾರ, ವರದಿಯನ್ನು ಪ್ರಕಟಿಸುವ ಬದಲಿಗೆ ರಕ್ಷಣೆಗೆ ನಿಂತಂತಾಗಿದೆ ಎಂದು ಆರೋಪಿಸಲಾಗಿದೆ.

ಇಷ್ಟೆಲ್ಲಾ ಪ್ರಕರಣಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಕೆ. ಕಾಂತಾ ರವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ಕೂಡಲೇ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದು ಆದೇಶ ನೀಡಿತ್ತು. ಆದರೆ ರಾಜ್ಯ ಸರಕಾರ ಮೇಲ್ಮನವಿಯನ್ನು ಸಲ್ಲಿಸಿ ಸುಮ್ಮನಾಗಿತ್ತು. ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾಗಿದ್ದ ಡಿ.ಎಚ್. ಶಂಕರಮೂರ್ತಿಯವರು ರೂಲಿಂಗ್ ನೀಡಿ ಎರಡೂ ಸದನಗಳಲ್ಲಿ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮಂಡಿಸುವಂತೆ ಆದೇಶಿಸಿದ್ದರು. ಸರಕಾರವು ಸಭಾಪತಿಯವರ ಆದೇಶಕ್ಕೆ ಪುಡಿಗಾಸು ಕಿಮ್ಮತ್ತನ್ನೂ ನೀಡದಿರುವುದರಿಂದ ಸಭಾಪತಿಯವರು ಮುಂದೆ ತಾವು ಯಾವ ತೀರ್ಮಾನವನ್ನು ಕೈಗೊಳ್ಳಬೇಕೆಂದು ಸಲಹೆಯನ್ನು ಕೋರಿ ರಾಜ್ಯಪಾಲರಲ್ಲಿ ಮನವಿಯನ್ನು ಸಲ್ಲಿಸಿದ್ದರು. ಈ ಮಧ್ಯೆ ಮೇಲ್ಮನವಿಯನ್ನು ಪುರಸ್ಕರಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯವು 30.8.2018 ರಂದು ತೀರ್ಪು ನೀಡಿ, ಇನ್ನು ನಾಲ್ಕೇ ವಾರದಲ್ಲಿ ಎರಡೂ ಸದನಗಳಲ್ಲಿ ವರದಿಯನ್ನು ಮಂಡಿಸುವಲ್ಲಿ ಸರಕಾರವು ವಿಫಲವಾದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದೆ.

ಹೀಗೆ ಒತ್ತಾಯಿಸುತ್ತಿರುವುದು ಸಹ ರಾಜಕೀಯ ಪ್ರೇರಿತವಲ್ಲ ಎನ್ನಲಾಗುವುದಿಲ್ಲ! ಆದರೆ ನಾಗರಿಕನಲ್ಲಿ ಏಳಬಹುದಾದ ಬಹು ಮುಖ್ಯ ಪ್ರಶ್ನೆಯೆಂದರೆ ಸರಕಾರವು ನಿಯಮಗಳನ್ನು ಎಷ್ಟರ ಮಟ್ಟಿಗೆ ಪಾಲಿಸುವುದರಲ್ಲಿ ಮತ್ತು ಸಂವಿಧಾನಾತ್ಮಕ ಅಂಗಗಳ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದರಲ್ಲಿ ಬದ್ಧತೆಯನ್ನು ತೋರಿದೆ ಎಂಬುದು ಮುಖ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಕಲ್ಯಾಣವನ್ನು ಎತ್ತಿ ಹಿಡಿಯುವ ಯಾವುದೇ ಸರಕಾರಗಳಿಗೆ ಕಣ್ಣು, ಕಿವಿ, ಹೃದಯಗಳಿರಬೇಕು ಎಂದು ಹೇಳುವುದು ಇದಕ್ಕಾಗಿಯೇ.

Tags

Related Articles

Leave a Reply

Your email address will not be published. Required fields are marked *

Language
Close