About Us Advertise with us Be a Reporter E-Paper

ಅಂಕಣಗಳುವಿರಾಮ

‘ಪ್ರೀತಿ’ಯ ಆಕರದ ಅತ್ಯಪೂರ್ವ ಕಲಾಕೃತಿಗಳು

ಅಂತರಂಗ ತಟ್ಟುವ ಮೂರು ‘ನಿರ್ದೇಶಕರ’ ಸಿನಿಮಾಗಳ ಪ್ರೀತಿ ಗೀತ

ಸಿನಿಮಾ ದಿನದಿಂದ ದಿನಕ್ಕೆ ಅತಿ ಪ್ರಖರವಾದ ಸಾಮಾಜಿಕ ಚಿಂತನೆ, ಪರಿವರ್ತನೆ, ಪ್ರಖರತೆ ಮತ್ತು ಸಹಬಾಳ್ವೆಯ ಕನಸುಗಳತ್ತ ದಾಪು ಗಾಲಿಟ್ಟು ಬರುತ್ತಿದೆ. ಸಿನಿಮಾ ವರ್ತಮಾನದಲ್ಲಿ ಸಾಹಿತ್ಯ ಕ್ಷೇತ್ರ, ಸೃಜನಶೀಲ ವ್ಯವಸಾಯ ಮತ್ತು ವ್ಯವಸಾಯಿಕರು ಮಾಡದ ‘ಮನುಷ್ಯ ಮುಖೀ’ ಕೆಲಸವನ್ನ ಕೃತಿಶೀಲವಾಗಿ ನಿರ್ವಹಿಸುತ್ತಿವೆ. ಬುದ್ಧಿಜೀವಿಗಳು ಅಂತ ಕರೆದುಕೊಂಡ ಸ್ವಘೋಷಿತ ವರ್ಗ, ದೇಶವನ್ನ, ಸಮಾಜವನ್ನ, ಮನುಷ್ಯ ಮನುಷ್ಯನ ಮಧ್ಯೆಯ  ಬಂಧವನ್ನ ಒಡೆದು ಪುಡಿಗಟ್ಟುತ್ತಿದ್ದರೆ, ಸಿನಿಮಾ ಮತ್ತದರ ಸೂತ್ರದಾರಿಕೆ ಸದ್ದುಗದ್ದಲ, ಘೋಷಣೆ ಏನೊಂದೂ ಇಲ್ಲದೆ ತನ್ನ ಪಾಡಿಗೆ ತಾನು ತಣ್ಣಗೆ ಸಮಾಜವನ್ನ, ಮನಸುಗಳನ್ನ, ಮಾನವನ ಅಂತರಂಗವನ್ನ ಕಟ್ಟುವ, ಬೆಸೆಯುವ ಅತ್ಯಂತ ಪವಿತ್ರವೂ, ಜರೂರತ್ತೂ ಆದಂತಹ ಕೆಲಸವನ್ನ ತನ್ನ ಸೃಜನಾತ್ಮಕ ಅಭಿವ್ಯಕ್ತಿಯ ಮಾರ್ಗದಲ್ಲಿ ‘ಕಲಾತ್ಮಕ’ ಪರಿಧಿಯನ್ನ ಮೀರದೆ ಸಾತ್ವಿಕವಾಗಿ, ಸುಂದರವಾಗಿ ಮಾಡುತ್ತಿದೆ. ಸಿನಿಮಾಕೃಷಿ, ಸಾಹಿತ್ಯ ಕೃಷಿಗೆ ಸಮಾನಾಂತರವಾಗಿ ಈ ದೇಶದಲ್ಲಿ ಬೆಳೆದಿಲ್ಲ. ಅಂದರೆ ಆ ಜಗದ ಗೇಯತೆಯನ್ನ, ಗುಣಪ್ರಮಾಣಗಳನ್ನ ಇದೇ ಬೌದ್ಧಿಕವರ್ಗ  ಗುರುತಿಸಲು ಬಿಡಲೂ ಇಲ್ಲ. ಸಾಹಿತ್ಯ ಕೃಷಿಗಿಂತ ಒಂದು ಕೈ ಮಿಗಿಲಾಗಿ ಸಿನಿಮಾ, ಸಿನಿಮಾ ಸಾಹಿತ್ಯ, ಸಿನಿಮಾದ ಕಲಾಮೌಲ್ಯ ದಾಖಲಿಸಲ್ಪಟ್ಟರೂ, ಸಮಾಜದ ರುಗ್ಣತೆಗೆ, ಛಿದ್ರತೆಗೆ ಅದು ತಕ್ಷಣದ ಪ್ರಭಾವೀ ಮದ್ದಾಗಿ ಪರಿಣಮಿಸಿದರೂ, ಈ ವ್ಯವಸ್ಥಿತ ಹುನ್ನಾರಿನ ಲಿಟರೇಚರ್ ವರ್ಗ ಸಿನಿಮಾ ಕ್ಷೇತ್ರವನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಶತಮಾನ ದಾಟಿದರೂ ಕನ್ನಡ ಸಾಹಿತ್ಯ ಪರಿಷತ್ತು ತನ್ನ ತೆಕ್ಕೆಯ ಪ್ರತಿಷ್ಠಿತ ಒಂದೇ ಒಂದು ಪ್ರಶಸ್ತಿಯನ್ನೂ ಸಿನಿಮಾ ಸಾಹಿತ್ಯಕ್ಕೆ, ಸಾಹಿತಿಗಳಿಗೆ ನೀಡಿಲ್ಲ.

ಹುಣಸೂರು ಕೃಷ್ಣಮೂರ್ತಿ,  ಶಾಸ್ತ್ರಿ, ಜಿ.ವಿ.ಅಯ್ಯರ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ನರೇಂದ್ರ ಬಾಬು, ಗೀತಪ್ರಿಯ, ಚಿ. ಉದಯಶಂಕರ್, ಆರ್. ಎನ್. ಜಯಗೋಪಾಲ್, ವಿಜಯಾನಾರಸಿಂಹ – ಈ ಮಹನೀಯರು ಇತ್ತ ಚಿತ್ರ ಸಾಹಿತ್ಯ ಸಿನಿಮಾ ಕೃತಿಯ ಚೌಕಟ್ಟಿನ ಆಚೆ ದಾಖಲೂ ಆಗಲಿಲ್ಲ, ಚರ್ಚೆಯೂ ಆಗಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದ ಜಾತ್ರೆಯ ಪೆಂಡಾಲಿನಲ್ಲಿ ‘ಚಿತ್ರಸಾಹಿತ್ಯ’ ಇಂದಿಗೂ ಒಂದು ಗಾಂಭೀರ್ಯದ ಗೋಷ್ಠಿಗೆ, ಸಂವಾದಕ್ಕೆ ಆಕರ, ಆಹಾರ ಎರಡೂ ಆಗಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕಂತೂ ಎಂಟು ದಶಕ ದಾಟಿದರೂ  ಕ್ಷೇತ್ರದ ಈ ದಿವ್ಯ ಮತ್ತು ವ್ಯವಸ್ಥಿತ ನಿರ್ಲಕ್ಷ್ಯವನ್ನ, ಅಸ್ಪೃಶ್ಯತೆಯನ್ನ ಚಿತ್ರರಂಗ, ಚಿತ್ರಸಾಹಿತ್ಯಕ ವರ್ಗ ಪರಿಗಣಿಸಲೂ ಇಲ್ಲ. ಪರಿಣಾಮಕಾರಿಯಾದ ಪರ್ಯಾಯವನ್ನ ಹುಡುಕಲೂ ಇಲ್ಲ. ಪ್ರತಿಭಟಿಸಲೂ ಇಲ್ಲ. ಸಿನಿಮಾ ಸಾಹಿತ್ಯ ಸಿನಿಮಾಕ್ಕಷ್ಟೇ ಸೀಮಿತಗೊಂಡು, ರಚಿತರಿಗೂ (ಚಿತ್ರ ಸಾಹಿತಿಗಳಿಗೂ) ಅದರ ಗೊಡವೆಯಿಲ್ಲ. ಬರೆಯುತ್ತಾರೆ, ಸಂಭಾವನೆ ಪಡೆಯುತ್ತಾರೆ ಅಥವಾ ಪಡೆಯದೇ ಕೊರಗು ತ್ತಾರೆ. ಅಲ್ಲಿಗೆ ಆ ಪರ್ವ ಮುಗಿಯುತ್ತದೆ. ಚಿತ್ರರಂಗಕ್ಕಂತೂ ತನ್ನದೇ ಆದ ಕೃತುಶಕ್ತಿ, ಅದರ ಮೌಲ್ಯಪ್ರಜ್ಞೆ, ಪ್ರಭಾವದ ಅರಿವು, ತನ್ನ ಮಾಧ್ಯಮದ ಅಗಾಧವಾದ  ಯಾವುದರ ಅರಿವೂ ಇಲ್ಲ. ಸಿನಿಮಾ, ಅದರ ಖರ್ಚು, ಹಾಕಿದ ಹಣದ ವಾಪಸಾತಿ ಇದೇ ಆ ರಂಗದ ಪ್ರಥಮ ಕಾಳಜಿ. ಲಾಗಾಯ್ತಿನಿಂದಲೂ ಇಂಥ ಒಂದು ನೀರಸ ವಾತಾವರಣದಲ್ಲೇ ಸಿನಿಮಾ ಸಾಹಿತ್ಯ ಮತ್ತು ಸಾಹಿತ್ಯಕವರ್ಗ ಬೆಳೆದು ಬಂದರೂ, ಅಲ್ಲಲ್ಲಿ ಅದು ಜನಪ್ರಿಯತೆ, ಅಭಿರುಚಿ ದೌರ್ಬಲ್ಯಕ್ಕೆ ತುತ್ತಾಗಿ, ಹದ, ಹಾದಿ ಎರಡನ್ನೂ ಕಳಕೊಂಡೂ ಒಟ್ಟಂದದ ಸೃಜನಶೀಲತೆಗೆ ಎಂದೂ ಭಂಗ ತಂದಿಲ್ಲ, ದ್ರೋಹವನ್ನೂ ಬಗೆದಿಲ್ಲ. ಈ ಎಂಬತ್ತೆರಡು ವರ್ಷಗಳಲ್ಲಿ ಸಿನಿಮಾ ಕೃಷಿ ಹೆಚ್ಚು ಜನರ  ಬರಲು, ಜನಜೀವನದ  ಮಧ್ಯೆ ಅರಳಲು ಯತ್ನಿಸಿದೆ. ಸಿನಿಮಾ ಅಂತ ಬಂದಾಗ ಅಲ್ಲಿನ ಸಾಹಿತ್ಯದ ಕೃಷಿ ಮತ್ತದರ ಮಿತಿ ಕೇವಲ ಸಂಭಾಷಣೆ, ಚಿತ್ರಕತೆ, ಹಾಡು ಅಷ್ಟಕ್ಕೇ ಮಿತಿಗೊಳ್ಳುವುದಿಲ್ಲ; ಗೊಳ್ಳಲೂ ಬಾರದು. ನಿರ್ದೇಶಕ, ನಟ, ಛಾಯಾಗ್ರಾಹಕ, ಸಂಗೀತಗಾರ, ಗಾಯನ ಹೀಗೆ ಸಿನಿಮಾದ ಎಲ್ಲಾ ಅಂಗೋಪಾಂಗಗಳೂ ಕೂಡಿಕೊಳ್ಳುತ್ತವೆ. ಹಾಗಾಗಿಯೇ ಸಿನಿಮಾ ಅಂದರೇ ಒಂದು ಟೆಕ್‌ಸ್ಟ್. ಅದು ಒಂದು ಪ್ರಬುದ್ಧ, ಪ್ರಖರ ಸಾಹಿತ್ಯದ ಪ್ರಕಾರ.

ಶಕೆ ಬದಲಾವಣೆಯ ಸಂಕ್ರಮಣ

ಸಾಹಿತ್ಯದ ಒಟ್ಟೂ ಆಶಯವೇ ನಮ್ಮೊಳಗಿನ  ಕಂಡುಕೊಳ್ಳುವುದು. ಸಮಾಜ, ಸಂಸ್ಕೃತಿಯನ್ನ ಮಾನವತೆಯ ನೆಲೆಗಟ್ಟಿನಲ್ಲಿ ನಿರೂಪಿಸುವುದು. ಮನುಷ್ಯ ಮನುಷ್ಯನಾಗಿ ಬದುಕುವಂತೆ, ಪರರೂ ಬದುಕಿಕೊಳ್ಳುವಂತೆ, ಸಮತೆ, ಸಾಮ್ಯತೆ, ಸಾಮರಸ್ಯ, ಸಹಬಾಳ್ವೆ, ಸಹಚಿಂತನೆ, ಸಹ-ಗಮನದ ಮನೋಭೂಮಿಕೆಯನ್ನ ಹುಟ್ಟುಹಾಕುವುದು ತಾನೆ. ಈ ಆಶಯಗಳನ್ನ ವರ್ತಮಾನದಲ್ಲಂತೂ ಹೊಸ ತಲೆಮಾರಿನ ನಿರ್ದೇಶಕರು ಅತ್ಯಂತ ಅಚ್ಚುಕಟ್ಟಾಗಿ, ಶ್ರೇಷ್ಠ ಮಟ್ಟದಲ್ಲಿ ಪ್ರಚುರ ಪಡಿಸುತ್ತಿದ್ದಾರೆ. ಸಿನಿಮಾ ಅಂದರೆ ಕೇವಲ ಊಹೆ, ಭ್ರಮೆ, ಕನಸು, ಅವಾಸ್ತವ ಅಂತಿದ್ದ ನೆಲೆಯಿಂದ ರಚನಾತ್ಮಕತೆ, ಸಾಮಾಜಿಕ ಬದ್ಧತೆ, ಬದುಕು-ಬವಣೆಗಳ ದಿಕ್ಕಿನತ್ತ ಮುಖಮಾಡಿದೆ. ಒಟ್ಟೂ ಸಮಾಜದ  ಬದುಕಿನ ಅಂತರಂಗದ ವಿಷಮತೆಯ ಬಗ್ಗೆ ಇಂದಿನ ಸಿನಿಮಾಗಳು ಸ್ಪಂದಿಸುತ್ತಿವೆ; ಮಾತನಾಡುತ್ತಿವೆ. ಪರ್ಯಾಯವಾಗಿ ಒಂದು ಸಾಮಾಜಿಕ ಚಿಂತನೆ, ಅರಿವು ಮತ್ತು ಅಹವಾಲಿನ ಪ್ರಜ್ಞೆಯಲ್ಲಿ ಅಭಿಪ್ರಾಯಗಳನ್ನು ಕ್ರೋಢೀಕರಿಸುತ್ತಿದೆ. ಹೊಸ ತಲೆಮಾರು, ಹೊಸ ಬದುಕು ಮತ್ತು ಆರೋಗ್ಯಯುತ ಸಾಮಾಜಿಕ ಬದುಕಿಗೆ ತಂತಮ್ಮ ಕೃತಿಗಳ ಮೂಲಕ ಒಂದು ನಿರ್ದಿಷ್ಟ ಆಶಯವನ್ನ ಸಂಘಟಿಸುತ್ತಿವೆ. ಉದ್ದಕ್ಕೂ ಇಂತಹ ಜವಾಬ್ದಾರಿಗಳನ್ನ ತಮ್ಮ ಸೃಜನಾತ್ಮಕ ಪ್ರಕ್ರಿಯೆಯ ಮೂಲಕ ಸಾಹಿತ್ಯಕ ವರ್ಗ ನಿರ್ವಹಿಸುತ್ತಾ ಬಂದಿತ್ತು. ಆದರೆ ಇಂದು ಅವೆಲ್ಲವನ್ನೂ ಮರೆತು ಸ್ವಹಿತಾಸಕ್ತಿ,  ಲಾಬಿ, ಪಕ್ಷೀಯ ಚಿಂತನೆ, ಚಟುವಟಿಕೆಗಳಲ್ಲಿ ಸಮಾಜ ವಿಮುಖಿಗಳಾಗಿದ್ದರೆ, ಸಿನಿಮಾದ ಸೃಜನಶೀಲ ರು ಅವರು ಮರೆತ ಜಾಗವನ್ನ ಸಮರ್ಥವಾಗಿ ಆಕ್ರಮಿಸಿದ್ದಾರೆ. ಸಿನಿಮಾ ಸೃಜನಶೀಲರಿಗೆ ಎಡ, ಬಲ, ಮಧ್ಯ ಅನ್ನುವ ಪಂಥ ಪ್ರಬೇಧಗಳಿಲ್ಲ. ಅವರಿನ್ನೂ ಆ ವ್ಯಸನಕ್ಕೆ ಈಡಾಗಿಲ್ಲ. ಕಾರಣ ಇಂದಿನ ಸಿನಿಮಾಕರ್ತರ ತಲೆಮಾರು ಹೊಸತು. ಯಂಗ್ ಅಂಡ್ ಎನೆರ್ಜೆಟಿಕ್. ತೆರೆದ ಮನಸು. ಎಲ್ಲವನ್ನೂ ತೆರೆದ ಕಣ್ಣಿನಿಂದ ನೋಡುವ ತಾಳ್ಮೆ, ಔದಾರ್ಯ, ಸಾಕ್ಷಿಪ್ರಜ್ಞೆ, ಸತ್ಯಸಂಧತೆ ಅವರಲ್ಲಿದೆ. ಮೊಂಡು, ಪೂರ್ವಗ್ರಹ, ತಮ್ಮ ತೀರ್ಮಾನಕ್ಕೆ  ಜೋಡಿಸಿ ಆಕೃತಿಗೊಳಿಸುವ ಸೋಕಾಲ್‌ಡ್ ಸಾಹಿತಿಗಳ, ಬುದ್ಧಿಜೀವಿಗಳ ಖಯಾಲಿ ಇವರಿಗಿನ್ನೂ ಅಂಟಿಲ್ಲ.

ಇಷ್ಟಾಗಿ, ಕನ್ನಡ ಚಿತ್ರರಂಗದಲ್ಲಿ ಬಂದ, ಬರುತ್ತಿರುವ ಹೊಸ ಜನರೇಷನ್ ಸಂಪೂರ್ಣ ಮೇಲೆ ಹೇಳಿದ ಮಾರ್ಗದಲ್ಲೇ ನಡೆದು ಬರುತ್ತಿದ್ದಾರೆ ಅನ್ನುವಂತಿಲ್ಲ. ಕನ್ನಡ ಚಿತ್ರರಂಗ ಒಟ್ಟಾರೆ ಸಮೃದ್ಧವಾಗಿದೆ ಎಂದೂ ತೀರ್ಮಾನಿಸುವಂತಿಲ್ಲ. ಚಿತ್ರದ ಕಟ್ಟೋಣ ಸರ್ವ ಸಮಗ್ರ ಅನ್ನುವಂತಿಲ್ಲ. ಕಳೆ, ಕೊಳೆ ಎರಡೂ ಇದ್ದಾಗಲೂ ಚಿತ್ರ ಹೊಸೆಯುವ ಪರಿಕ್ರಮ ಪರಂಪರೆಯನ್ನ ಮುರಿದು ಹೊಸ ಪಾರಮ್ಯವನ್ನ ಸಾಧಿಸುತ್ತಿದೆ. ಅದು ಆಶಾದಾಯಕ. ಋಜುದಾಯಕ. ‘ಶಕೆ’  ಲಕ್ಷಣದಾಯಕ.

ಈ ವರ್ಷ ಆಗಸ್‌ಟ್ ಮುಗಿದಾಗ ಈ ವರೆಗೆ ಬಂದ ಕನ್ನಡ ಚಿತ್ರಗಳ ಸಂಖ್ಯೆ 160. ಕಳೆದ ವರ್ಷ ಒಟ್ಟಾರೆ ಬಿಡುಗಡೆ ಆದ ಚಿತ್ರಗಳು 208. ಸೆಪ್ಟೆಂಬರ್‌ನಲ್ಲಿ 40 ಸಿನಿಮಾಗಳು ಬಿಡುಗಡೆಗೆ ಸಿದ್ಧವಿವೆ. ಕಳೆದ ಎರಡು ತಿಂಗಳಿನಲ್ಲಿ 70 ಸಿನಿಮಾಗಳು ಸೆನ್ಸಾರ್ ಆಗಿವೆ. ಮೊನ್ನಿನ ವರಮಹಾಲಕ್ಷ್ಮಿಗೆ 17 ಸಿನಿಮಾಗಳು ಮುಹೂರ್ತ ಕಂಡಿವೆ. ಇದರಲ್ಲಿ ಶೇ.90 ಹೊಸಬರು. ಈ ಎಲ್ಲಾ ಲೆಕ್ಕಾಚಾರದಲ್ಲಿ 2018 ಹೆಚ್ಚು ಕಮ್ಮಿ 225ಕ್ಕೂ ಹೆಚ್ಚು ಚಿತ್ರಗಳನ್ನ  ಕಳೆದ ವರ್ಷ 208 ಚಿತ್ರಗಳಿಗೆ ಹಾಕಲ್ಪಟ್ಟ ಬಂಡವಾಳ ರು.1460 ಕೋಟಿ. ಹಿಂದೆ ಬಂದ ಬಂಡವಾಳ ರು.650 ಕೋಟಿ. ಶೇ.60ಕ್ಕೂ ಹೆಚ್ಚಿನ ನಷ್ಟ. ಈ ವರ್ಷ ಬಂಡವಾಳ ರು.1800 ಕೋಟಿ ದಾಟುವ ಲಕ್ಷಣ ಗೋಚರಿಸುತ್ತಿದೆ. ಈವರೆಗೆ ಗೆದ್ದ, ಸೂಪರ್ ಡ್ಯೂಪರ್ ಅನ್ನಿಸಿಕೊಂಡ ಚಿತ್ರಗಳ ಸಂಖ್ಯೆ ಎರಡಂಕಿಯನ್ನೂ ಮುಟ್ಟಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಮುಂದೆ ದರ್ಶನ್ ಅವರ ‘ಕುರುಕ್ಷೇತ್ರ’, ಪುನೀತ್‌ರ ‘ನಟಸಾರ್ವಭೌಮ’, ಯಶ್ ಅವರ ‘ಕೆಜಿಎಫ್’, ಸುದೀಪ್-ಶಿವಣ್ಣ ಜುಗಲ್‌ಬಂದಿ ‘ವಿಲನ್’, ನಿಖಿಲ್  ‘ಸೀತಾರಾಮ ಕಲ್ಯಾಣ’, ರಕ್ಷಿತ್ ಶೆಟ್ಟಿಯ ‘ಶ್ರೀಮನ್ನಾರಾಯಣ’ ಮುಂತಾದ ಭರ್ಜರಿ ನಿರೀಕ್ಷೆಯ ಸಿನಿಮಾಗಳಿವೆ.

ಇಂಥ ಪರಿಸರ, ಪರಿಸ್ಥಿತಿಯ ಮಧ್ಯೆ 2018ರ ಕ್ಲೈಮಾಕ್‌ಸ್ ತುಂಬಾ ಅನಿರೀಕ್ಷಿತ, ಅನಿಯಮಿತ, ಭರ್ಜರಿ ಆಗಲಿದೆಯೇನೋ ಅನ್ನುವ ನಿರೀಕ್ಷೆಯನ್ನ ಹುಟ್ಟುಹಾಕಿದ್ದು ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮತ್ತು ‘ಒಂದಲ್ಲಾ ಎರಡಲ್ಲಾ..’ ಎರಡೂ ಚಿತ್ರಗಳು, ಕತೆ, ಚಿತ್ರಕತೆ, ನಿರೂಪಣೆ ಮತ್ತು ಪಾತ್ರ ಬದ್ಧತೆಯೇ ಸಿನಿಮಾ ಮೀಡಿಯಂನ ಆಧಾರ ಸ್ಥಂಭಗಳು ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿವೆ. ಸ್ಟಾರ್, ಸ್ಟಾರ್‌ಡಮ್, ಗಾಂಧೀನಗರದ  ಲೇವಾದೇವಿ, ಜ್ಯೋತಿಷ್ಯ ಎಲ್ಲವನ್ನೂ ತಲೆಕೆಳಗು ಮಾಡಿದ್ದಷ್ಟೇ ಅಲ್ಲ, ಮುರಿದು ಮುಕ್ಕಿ, ಅವಕ್ಕೆ ಮುಕ್ತಿಯನ್ನೂ ಕರುಣಿಸಿವೆ.

ಸಿನಿಮಾ ನೋಡುವುದೂ ಒಂದು ಕಲೆ

ನನ್ನ ಸಿನಿಮಾ ನೋಡುವಿಕೆಗೆ ಆಗಾಗ ಸುಗ್ಗಿ, ಸುಯೋಗ ಎರಡೂ ಪ್ರಾಪ್ತಿಯಾಗುವುದುಂಟು. ಈ ವರ್ಷವಂತೂ ಆಗಾಗ ಇಂಥ ಸಂತೋಷ, ಸಂಭ್ರಮ, ಸೌಭಾಗ್ಯ ನನ್ನ ಪಾಲಿನದ್ದಾಗಿದೆ. ಸಿನಿಮಾ ಹೇಗೆ ಉತ್ತಮವಾಗಿರಬೇಕು ಅನ್ನುವ ನಿರೀಕ್ಷೆ ಹೊಂದುತ್ತೇವೋ, ನೋಡುವ ನೋಟವೂ ಶುದ್ಧ, ಸುಸಂಸ್ಕೃತ, ಸಂಸ್ಕಾರಯುತ ವಾಗಿರಬೇಕಾಗುತ್ತದೆ. ಸಿನಿಮಾ ನೋಡುವುದೂ ಒಂದು ಆರ್ಟ್, ಕಲೆ.  ಸಿದ್ಧತೆ ಬೇಕಾಗುತ್ತದೆ. ನಾನು ಈ ಎರಡು ವಾರಗಳಲ್ಲಿ ಅತ್ಯುತ್ತಮ ಅನಿಸಬಹುದಾದ ಮೂರು ಸಿನಿಮಾಗಳನ್ನ ನೋಡಿದೆ. ಈಗಾಗಲೇ ಪ್ರಸ್ತಾಪಿಸಿದ ಕನ್ನಡದ ಎರಡು ಸಿನಿಮಾಗಳ ಜತೆ, ತೆಲುಗಿನ ‘ಗೀತ ಗೋವಿಂದಂ’ ಕೂಡ ಸೇರಿದ್ದು ವಿಶೇಷ, ವಂಡರ್. ರಿಷಬ್ ಶೆಟ್ಟಿ, ದತ್ತಾತ್ರೇಯ ಸತ್ಯಪ್ರಕಾಶ್ ಮತ್ತು ಪರಶುರಾವಲ ಮೇಲಿನ ಮೂರು ಸಿನಿಮಾಗಳ ನಿರ್ದೇಶಕರು.

‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’, ‘ಒಂದಲ್ಲಾ ಎರಡಲ್ಲಾ..’ ಮತ್ತು ‘ಗೀತ ಗೋವಿಂದಂ’ ಈ ಮೂರೂ ಸಿನಿಮಾಗಳೂ ಅಂತರ್ಗತಗೊಳಿಸಿಕೊಂಡದ್ದು ಪ್ರೀತಿ,  ಮತ್ತು ಪ್ರೀತಿಯನ್ನೇ. ಒಂದು ಅಕ್ಷರ ಪ್ರೀತಿ ಅಂದರೆ ಭಾಷಾ ಪ್ರೀತಿ, ಎರಡನೆಯದ್ದು ಜೀವನ ಪ್ರೀತಿ, ಮೂರನೆಯದ್ದು ಪ್ರೇಮದ ಉತ್ತರಾರ್ಧ ಪ್ರೀತಿಯನ್ನ ಹೊದ್ದು ಹಚ್ಚಡವಾದ ಚಿತ್ರ.

‘ಸ.ಹಿ.ಪ್ರಾ.ಶಾ.ಕಾ’ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ, ಕನ್ನಡ ಶಾಲೆಯ ದುಃಸ್ಥಿತಿ, ಅತಂತ್ರತೆ ಮತ್ತು ಅಲ್ಲಿನ ಸಾಮಾಜಿಕ ಅಸಹಾಯಕತೆಯ ಮೇಲೆ ಬೆಳಕನಿಟ್ಟು ಮುನ್ನಡೆದರೆ, ‘ಒಂದಲ್ಲಾ ಎರಡಲ್ಲಾ’ ಬದುಕು ಅಂದರೆ ಮನುಷ್ಯ, ಪ್ರಾಣಿ, ಜಾತಿ, ಬಣ್ಣ, ವರ್ಗ, ಬಡವ, ಬಲ್ಲಿದ ಎಲ್ಲವನ್ನೂ ಮೀರಿದ, ಇಲ್ಲಾ  ಒಳಗೊಂಡ ಒಂದು ನಿರ್ಮಲ ಭಾವಪ್ರಪಂಚ ಅನ್ನುತ್ತದೆ. ಇನ್ನು ‘ಗೀತ ಗೋವಿಂದಂ’ ಗೀತೆಯನ್ನೇ ಜಗತ್ತಿಗೆ ನೀಡಿದ ಕೃಷ್ಣನ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವ್ಯಕ್ತ ಪ್ರೀತಿಯ ಅಗಾಧ ಕಡಲಿಗೆ ಸಾದೃಶ್ಯ. ಕೊನೆಗೂ ಬದುಕು, ಸಮಾಜ, ಸಂಸ್ಕೃತಿ, ಸಂವೇದನೆ, ಸಂಬಂಧ, ಪ್ರೀತಿಯೇ ಇಲ್ಲದ ಮೇಲೆ ನೆಲೆಗೊಳ್ಳುವುದಾದರೂ ಹೇಗೆ? ಮೂರೂ ಸಿನಿಮಾಗಳ ಆಶಯ ಇದು.

ಭಾಷೆ ಅದೊಂದು ಭಾವ. ಆ ಭಾವ ಜೀವದ ತಂತು. ಅದು ತಾಯ ಪ್ರೀತಿ. ಅದಕ್ಕೇ ಹುಟ್ಟುವ ಮಗುವಿನ ನಾಲಗೆಯಲ್ಲಿ  ಹುಟ್ಟುವ, ಹೊರಳುವ, ಹೊಮ್ಮುವ ಭಾವ-ಭಾಷೆಗೆ ಮನುಷ್ಯ ಕುಲ ಇಟ್ಟ ಹೆಸರು ಮಾತೃಭಾಷೆ. ಜಗತ್ತಿನ ಯಾವ ಮೂಲೆಯಲ್ಲಿನ ವ್ಯಕ್ತಿಯೇ ಆಗಿರಲಿ, ಅವನಿಗೆ ಮಾತೃಭಾಷೆ ಒಂದೇ ಇರುವುದು. ಅದಕ್ಕೇ ಅದು ಮಾತೃಭಾಷೆ. ಈ ಭಾಷೆಗೇ ತೊಡಕು, ಕಂಟಕ, ಅನಾಥತೆ, ಅತಂತ್ರತೆ ಪ್ರಾಪ್ತವಾಗುವುದು ಹೆತ್ತತಾಯಿಗೇ ಒದಗಿದ ಆಪತ್ತು, ವಿಪತ್ತು. ಕಾಸರಗೋಡಿನ ಪ್ರದೇಶ, ಭಾಷಾವಾರು ಪ್ರಾಂತ್ಯ ರಚನೆಯ ಕಾಲದಿಂದಲೂ ತಾಯ ಭಾಷೆಯ, ಮಾತೃಭಾಷಾ ವಿದ್ಯಾಭ್ಯಾಸ ದಿಂದ ವಂಚಿತವಾಗಿದೆ. ಗಡಿನಾಡ ಕಾರಣಕ್ಕೆ ಕನ್ನಡ ಭಾಷಿಕರು ಬಹುಸಂಖ್ಯಾತರಾದರೂ  ಹಿಡಿತದಲ್ಲಿ, ಅವರ ಆಡಳಿತದ ಕಪಿಮುಷ್ಠಿಯಲ್ಲಿ ನಲುಗುತ್ತಿದ್ದಾರೆ.

ಈ ಹೆಸರಿಗೂ ಜನಪ್ರಿಯತೆಯ ಮುದ್ರೆಯೇ!?

ಕಯ್ಯಾರ ಕಿಞ್ಞಣ್ಣ ರೈಗಳು, ಪಂಜೆ ಮಂಗೇಶರಾಯರು ತಮ್ಮ ಜೀವಿತದ ಅವಧಿಪೂರ್ಣ ಕಾಸರಗೋಡು ಕನ್ನಡವಾಗಬೇಕು, ಕರ್ನಾಟಕಕ್ಕೆ ಸೇರಬೇಕು ಅನ್ನುವ ರಣಹೋರಾಟ ಮಾಡಿದರು. ಆದರೆ ಕರ್ನಾಟಕದ ಜನತೆಯ ಇಚ್ಛಾಶಕ್ತಿಯ ಕೊರತೆ, ಗಡಿನಾಡಿನ ಬಗ್ಗೆ ಮಧ್ಯನಾಡಿಗರಿಗಿರುವ ತೀವ್ರ ನಿರ್ಲಕ್ಷ್ಯ, ಆಡಳಿತದ, ರಾಜಕೀಯ ಧುರೀಣರ ಪಡಪೋಷಿತನಗಳಿಂದ ಕಾಸರಗೋಡು ಇಂದಿಗೂ ಅತಂತ್ರವಾಗಿಯೇ ಉಳಿದಿದೆ. ಕರ್ನಾಟಕದ ಪ್ರೀತಿಗೂ ದಕ್ಕದೆ, ಮಲಯಾಳಿ ದೇಶದ ಔದಾರ್ಯಕ್ಕೂ ಭಾಜನವಾಗದೆ  ಬಳಲುತ್ತಿದೆ. ಇಂಥ ಒಂದು ರುದ್ರವಾಸ್ತವಕ್ಕೆ ರಿಷಭ್‌ಶೆಟ್ಟಿ ಕನ್ನಡಿಯನ್ನಲ್ಲ, ಎದೆಯನ್ನ ಒಡ್ಡಿದ್ದಾರೆ. ಕಾಸರಗೋಡಿನ ಕನ್ನಡ ಶಾಲೆಗಳ, ಕನ್ನಡ ಭಾಷೆಗೆ ಒದಗಿದ ಒಂದು ಚಾರಿತ್ರಿಕ ದುರ್ಗತಿಯನ್ನ ಜನಪ್ರಿಯ ಸಿನಮಾವೊಂದರ ವಸ್ತುವನ್ನಾಗಿ ಸ್ವೀಕರಿಸಬಹುದು ಅನ್ನುವುದೇ ರಿಷಬ್‌ಗಿರುವ ತನ್ನ ಕೃತಿಶಕ್ತಿಯ ಮೇಲಿನ ಖಚಿತವಾದ ನಂಬಿಕೆ, ವಿಶ್ವಾಸಕ್ಕೆ ಸಾಕ್ಷಿ. ಮಸುಕಾದ ಹಳದಿವರ್ಣದ ಹಿನ್ನೆಲೆಯಲ್ಲಿ ಪಡಿಮೂಡುವ ಕಡುಕಪ್ಪು ಬಣ್ಣದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’, ಹೆಚ್ಚುಕಮ್ಮಿ ಗಾಂಧಿನಗರದ ಸುತ್ತಳತೆಗೆ ಸಮಾನಾಗಿರುವಷ್ಟು ಉದ್ದ ಹೆಸರು. ಸಂಪೂರ್ಣ ಆಸಕ್ತಿ,  ಕಳಕೊಂಡ ಪ್ರಾಥಮಿಕ ಶಾಲೆ ಈಚಿನ ದಿನಗಳಲ್ಲಿ ಕವಿ ಜಯಂತ ಕಾಯ್ಕಿಣಿ ಅವರ ಸಿನಿಮಾ ಗೀತೆಗೆ ವಸ್ತುವಾಗಿ ನೆನಪಿನ ಶ್ರೀಮಂತಿಕೆ ಪಡಕೊಂಡ ಸಾರ್ಥಕ್ಯ ಬಿಟ್ಟರೆ ಇನ್ನೇನಿದೆ ಹೇಳಿ. ‘ರಿಕ್ಕಿ’, ‘ಕಿರಿಕ್ ಪಾರ್ಟಿ’ ಚಿತ್ರ ನಿರ್ದೇಶಿಸಿ ತಾನೊಬ್ಬ ಜನಪ್ರಿಯ ನಿರ್ದೇಶಕ ಎಂಬ ಹಣೆಪಟ್ಟಿ ಹೊಂದಿದ್ದರೂ, ಭಟ್ಟರಂಥವರು, ಸೂರಿಯಂಥವರೇ ಮಕಾಡೆ ಮಲಗಿದ್ದನ್ನ ಕಂಡಿಲ್ಲವೇ ಈ ನೆಲ. ಹೀಗಾಗಿ ನನಗೆ ರಿಷಬ್‌ಶೆಟ್ಟಿ ಮುಖ್ಯವಾಗಿ, ಅದರಲ್ಲೂ ಕನ್ನಡ ಚಿತ್ರಗಳ ಅಭಿವ್ಯಕ್ತಿಯ ಒಂದು ಹೊಸ ಭಾಷೆ, ಭಾಷ್ಯವಾಗಿ  ಅವರ ವಸ್ತುವಿನ ಆಯ್ಕೆಯಲ್ಲಿ. ಅವರ ಪ್ರಥಮ ನಿರ್ದೇಶನವೇ ನಮ್ಮ ಮಲೆನಾಡಿನ  ಸಮಸ್ಯೆ ನಕ್ಸಲಿಸಂ ಕುರಿತಾಗಿತ್ತು. ಎರಡನೇ ಚಿತ್ರ ‘ಕಿರಿಕ್’ ಕಾಲೇಜು ದಿನಗಳ ಅಂತರಂಗ ಬಹಿರಂಗ. ಮೂರನೆಯ ಚಿತ್ರ ನಾಡುನುಡಿ ನಮನ. ನಿಜಕ್ಕಾದರೆ, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಜಾಗದಲ್ಲಿ ‘ಕಥಾಸಂಗಮ’ ಇರಬೇಕಿತ್ತು. ಪುಟ್ಟಣ್ಣನ ಇತಿಹಾಸ ಮುರಿದು ಹೊಸ ಬಹುಕಥಾಗುಚ್ಛ ದಾಖಲೆಯಾಗಬೇಕಿತ್ತು. ಕಥೆಯ ಆಯ್ಕೆಯಲ್ಲಿಯೇ ನಮ್ಮ ಬಹುತೇಕ ನಿರ್ದೇಶಕರು ಎಡವುತ್ತಾರೆ. ನಂತರ ಚಿತ್ರಕಥೆ, ಸಂಭಾಷಣೆಯಲ್ಲಿ ಇನ್ನೊಂದು ಹೆಜ್ಜೆ ತಪ್ಪುತ್ತಾರೆ.  ಪಾತ್ರಗಳ ಆಯ್ಕೆ. ಒಮ್ಮೆ ಇಲ್ಲಿ ಗೆಲುವು ಸಾಧಿಸಿದರೂ ಸ್ಕ್ರೀನ್‌ಪ್ಲೇಯಲ್ಲಿ ಗೋವಿಂದ ನೀನೇ ಗತಿ ಕಾಣುತ್ತಾರೆ, ಕಾಣಿಸುತ್ತಾರೆ. ‘ಸರಕಾರಿ ಶಾಲೆ’ಯ ಯಶಸ್ಸು ಈ ಎಲ್ಲಾ ಹಂತಗಳಲ್ಲೂ ರಿಷಬ್ ಒಂದಕ್ಕಿಂತ ಒಂದು ಹಂತದ ಮೇಲೆ ಸಾಧಿಸಿದ ದಿಗ್ವಿಜಯ. ಸಿನಿಮಾ ಅಂದರೆ ಕಥೆ, ಕಥಾನಕ, ನಿರೂಪಣೆಯ ಹರಿವು. ಈ ಎಲ್ಲಾ ಮಜಲುಗಳನ್ನ ಬದುಕಿನಂತೇ ಜೀವತುಂಬಿ ಸಹಜ ಸುಂದರ ಚಿತ್ರಿಕೆಗಳನ್ನಾಗಿಸುವವರು ಪಾತ್ರಧಾರಿಗಳೇ. ನೆನಪಿಡಿ, ಪಾತ್ರ, ಪಾತ್ರಧಾರಿಗಳು ಕಥೆ-ಕಥಾನಕದ ಆಶಯದ ನಿರೂಪಕರೇ ಹೊರತು ಅವರೇ ಕಥೆ-ಕಥಾನಕ  ಚಿತ್ರಸರ್ವಸ್ವ ಅಲ್ಲವೇ ಅಲ್ಲ. ಈ ಸಂವಿಧಾನವನ್ನ ಶಿಲ್ಪಿಯಂತೆ ನಿರೂಪಿಸಿ ಹೋದವರು ಪುಟ್ಟಣ್ಣ ಕಣಗಾಲ್. ರಿಷಬ್ ವರ್ತಮಾನದ ಪುಟ್ಟಣ್ಣ.

‘ಸ.ಹಿ.ಪ್ರಾ.ಶಾ.ಕಾ’ದಲ್ಲಿ ಅನಂತ್‌ನಾಗ್ ಮತ್ತು ರಮೇಶ್‌ಭಟ್ ಇವರಿಬ್ಬರನ್ನ ಬಿಟ್ಟರೆ ಜನಪ್ರಿಯ, ಜನಗುರುತಿನ ಇನ್ನಾವ ನಟರೂ ಇಲ್ಲ. ಆದರೆ ಅಲ್ಲಿ ಬರುವ ಹತ್ತಾರು ಪಾತ್ರಗಳನ್ನು ಅಲ್ಲಿ ಮಾಡಿದವರನ್ನ ಬಿಟ್ಟು ಇನ್ನಾರೂ ಮಾಡಲಾರರೇನೋ ಅನ್ನುವಷ್ಟು ತಾಧ್ಯಾತ್ಮ. ಹಾಗೇ ಈ ಚಿತ್ರದ ಪ್ರತೀ ಇಂಚನ್ನೂ ರಿಷಬ್ ಕಡೆದಿದ್ದಾರೆ, ಕಟ್ಟಿದ್ದಾರೆ. ಭಾಷೆಯ ಬಗ್ಗೆ ಮಾತಾಡುವ ಈ ಸಿನಿಮಾ  ಕನ್ನಡದ, ಪ್ರಾಂತ್ಯದ, ಗಡಿನಾಡಿನ ಸಂಸ್ಕೃತಿಯ ಒಂದು ಉಜ್ವಲ ಕಣಜವಾಗಿ ಆರಂಭಗೊಳ್ಳುತ್ತದೆ. ಹಾಗೇ ಆರಂಭದಲ್ಲಿ ನಿರೂಪಿತಗೊಳ್ಳುವ ಹಾಡು ನನಗೆ ‘ಮಸಣದ ಹೂ’ವಿನ ‘ಕನ್ನಡ ಕರಾವಳೀ…’ ಹಾಡನ್ನ ನೆನಪಿಸಿತು. ಧಾಟಿಯಲ್ಲಲ್ಲ, ಸಾಹಿತ್ಯದಲ್ಲಿ, ಚಿತ್ರಿಕೆಯಲ್ಲಿ. ಪುಟ್ಟಣ್ಣನ ಚಿತ್ರದ ಹಾಡುಗಳು ಕೆಲವು ಬಾರಿ ಚಿತ್ರದ ಕಥಾಹಂದರದಿಂದ ಹೊರಗೇ ನಿಂತು ಒಳಗಿನ ಭಾವಪ್ರಪಂಚದ ಸ್ಪೂರ್ತಿಬಿಂದುಗಳಾಗುತ್ತವೆ. ಆದರೆ ರಿಷಬ್‌ನ ಚಿತ್ರಗಳ ಹಾಡುಗಳು ಕಥೆಯನ್ನ ಬೆಳೆಸುತ್ತವೆ; ಅರ್ಥವಂತಿಕೆಯಿಂದ ಒಂದು ಪಾತ್ರವೇ ಆಗಿ ನೋಡುವ ನೋಟದೊಳಗೆ ಮಾಟವನ್ನೂ ಮಾಡಿಬಿಡುತ್ತದೆ. ರಿಷಬ್  ಉತ್ತಮ ತಂತ್ರಜ್ಞ.

ಕತ್ತಿ ಅಲುಗಿನ ನಡೆ

ಹಾಗೇ ಈ ಚಿತ್ರ ಕತ್ತಿ ಅಲುಗಿನ ನಡೆ. ಕಾಸರಗೋಡಿನ ಗಡಿನಾಡ ಕನ್ನಡದ ಗತಿಸ್ಥಿತಿಯ ಬಗ್ಗೆ ಯೋಚಿಸಿದಾಗಲೆಲ್ಲ ಪಾರ್ತಿಸುಬ್ಬನಿಂದ ಹಿಡಿದು ಕಯ್ಯಾರ, ಪಂಜೆ ಹೀಗೆ ಹತ್ತಾರು ಸೇನಾನಿಗಳು, ಹೋರಾಟ, ಇತಿಹಾಸ ಕಣ್ಣೆದುರು ನಿಂತುಬಿಡುತ್ತದೆ. ಇದನ್ನಷ್ಟೇ ರಿಷಬ್ ಹಿಡಿದು ಹೊರಟಿದ್ದರೆ ಅದು ಸಿನಿಮಾ ಆಗುತ್ತಿರಲಿಲ್ಲ, ಅದೊಂದು ಡಾಕ್ಯುಮೆಂಟರಿ ಆಗುತ್ತಿತ್ತು. ಅಥವಾ ಕಾಸರಗೋಡು, ಅಲ್ಲಿನ ಜನಜೀವನ, ಆ ಮಧ್ಯೆ ಕನ್ನಡಕ್ಕೊದಗಿದ ದುಃಸ್ಥಿತಿ, ಕಾಸರಗೋಡಿನ ಕರಾವಳಿ ಕರೆಯ  ಸಂಸ್ಕೃತಿ ಇವನ್ನಷ್ಟೇ ಹದವಾಗಿ ಸ್ಲೋಪೇಸ್‌ನಲ್ಲಿ ನಿರೂಪಿಸಿದ್ದರೆ ಅದು ಕಾಸರವಳ್ಳಿ ಚಿತ್ರವಾಗುತ್ತಿತ್ತು. ಕೇವಲ ಅವಾರ್ಡು, ಜನರಿಗಿಲ್ಲ ನೋಡುವ ‘ರಿವಾರ್ಡು’. ಆದರೆ ನಿರ್ದೇಶಕನಿಗೆ ಈ ಚಿತ್ರ ಜನಪ್ರಿಯ ಪಠ್ಯವೂ ಆಗುವ ಜೊತೆ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಒದಗಿದ ಕನ್ನಡ ಭಾಷೆಯ ದುಃಸ್ಥಿತಿಯನ್ನ ಕನ್ನಡ ಜನಕೋಟಿಯ ಎದುರು ಇಡಬೇಕಾದ ಜರೂರತ್ತೂ ಇತ್ತು. ಈ ಚಿತ್ರದ ವಸ್ತುವನ್ನ ಭಾರೀ ಸೀರಿಯಸ್ಸು ಅಂತ ಭಾವಿಸಿ, ‘ಸ.ಹಿ.ಪ್ರಾ.ಶಾ.ಕಾ’ವನ್ನು ಗಂಭೀರವಾಗಿ ನಿರೂಪಿಸಿದ್ದರೆ ರಿಷಬ್‌ಗೆ ಇಂದು ಸಿಕ್ಕಿದ ಜನಪ್ರಿಯತೆ, ಕುಟುಂಬ  ಕಿತ್ತೆದ್ದು ಬಂದು ನೋಡುವ ‘ನೋಟ’ ದಕ್ಕುತ್ತಿರಲಿಲ್ಲ. ಇಂಥ ಸಮಾಜನಿಷ್ಠ ಸಮಾಜಮುಖೀ ವಸ್ತು ಮೊದಲು ಅದು ಜನನೋಡುವ ಚಿತ್ರವಾಗಬೇಕು. ಆಗಲೇ ಒಂದು ಸಾಮಾಜಿಕ ಅರಿವು, ಜಾಗ್ರತೆ, ಒಟ್ಟಾಗುವಿಕೆ ಆಗಲು ಸಾಧ್ಯ. ಹೀಗಾಗಿ ರಿಷಬ್ ಚಿತ್ರ ಉದ್ದಕ್ಕೂ ನಿರೂಪಿಸುವ ನೆಲೆಯನ್ನ ಲಘುವಾಗಿಸಿದರು. ಸರಳ, ಸುಂದರ ನುಡಿಗಟ್ಟು ಭಾಷೆ ಬಳಸಿದರು. ಮಾತು ಮಾತಿನ ಮಧ್ಯೆ ‘ಪನ್’ ಒಡೆದರು. ಪ್ರತೀ ಪಾತ್ರಗಳಿಗೆ ‘ದೇಹಭಾಷೆ’ (ಬಾಡಿ ಲ್ಯಾಂಗ್ವೇಜ್) ಅಳವಡಿಸಿದರು. ಹೇಳಬೇಕಾದದ್ದನ್ನ ತೀರಾ ಲಘುವಾದ ಧಾಟಿಯಲ್ಲಿ ನಿರೂಪಿಸಿದ್ದು  ತನ್ನ ಕೃತಿ ಮಾರುಕಟ್ಟೆಗೆ ಬರುವ ಮೊದಲೇ ಅದರ ‘ನೋಟ’ದ ಫಲಪ್ರದತೆಯ ನಿರಕ್ಕು ಇದೆ, ಇತ್ತು ಅನ್ನುವುದರ ಖಚಿತತೆ. ಇದು ಕೂಡ ಒಬ್ಬ ಉತ್ತಮ ನಿರ್ದೇಶಕನ ಲಕ್ಷಣವೇ ಅಲ್ವಾ. ಹಾಗಂತ ಸಿನಿಮಾ ಲಘುವಾಗಿದೆ ಅನ್ನೋ ಕಾರಣಕ್ಕೆ ಸೊಂಟದ ಕೆಳಗಿನ ಪದಪದಾರ್ಥಗಳನ್ನ ಬಳಸಿಲ್ಲ. ಮಕ್ಕಳೇ ಬಹಳ ಇರುವ ‘ಸ.ಹಿ.ಪ್ರಾ.ಶಾ.ಕಾ’ ಪೂರ್ಣ ಕುಟುಂಬದ, ಹೆಂಗಸರು ಮಕ್ಕಳೇ ತುಂಬಿ ತುಳುಕುವ ಥೇಟರುಗಳಿಗೆ ಕಾರಣವಾಗಿದೆ. ಸಹ್ಯ, ಸಭ್ಯ, ಸುಭಗ ಹಾಸ್ಯ ಮಿಶ್ರಿತ ಸಂಭಾಷಣೆ ಈ ಚಿತ್ರದ  ಕನ್ನಡ ಚಿತ್ರಗಳಲ್ಲಿ ಹ್ಯೂಮರ್ ಹೇಗಿರಬೇಕು ಅನ್ನುವುದಕ್ಕೆ ‘ಸ.ಹಿ.ಪ್ರಾ.ಶಾ.ಕಾ’, ಒಂದು ಚೊಕ್ಕ ಉದಾಹರಣೆ. ಕನ್ನಡ ನಿರ್ದೇಶಕರಿಗೆ ಒಂದೊಳ್ಳೆ ಪಠ್ಯ. ಹಾಗೇ ಪೂರ್ಣ ಚಿತ್ರದಲ್ಲಿ ‘ಡ್ರಾಮಾ’ವನ್ನ ವಸ್ತುಸ್ಥಿತಿಯ ಜ್ವಾಲಾಗ್ನಿಯೊಂದಿಗೆ ಹೊಸೆದು, ಹುರಿಗೊಳಿಸಿ ನೀಡಿದ ರೀತಿ ಇದೆಯಲ್ಲ ಅದೂ ಒಂದು ಮಾದರಿ. ಹೀಗಾಗಿಯೇ ಇದೊಂದು ಮಾದರೀ ಹಿರಿಯ ಪ್ರಾಥಮಿಕ ಶಾಲೆ.

ಇಷ್ಟಾಗಿಯೂ, ರಾಜ್ಯಾದ್ಯಂತ ತಂಡೋಪತಂಡವಾಗಿ ಸರಕಾರಿ ಶಾಲೆಗೆ ಬರುತ್ತಿದ್ದರೂ, ಇದರ ವಸ್ತು ಮತ್ತು ಕ್ಲೈಮ್ಯಾಕ್ಸಿನ ಬಗ್ಗೆ ಕೆಲವರ ಆರೋಪ, ಆಕ್ಷೇಪ, ಅಪಸ್ವರ ಉಂಟು.  ನೆಲಮೂಲದ ಚಳವಳವನ್ನು, ಹೋರಾಟವನ್ನ, ಹೋರಾಟಗಾರರನ್ನು ಮರೆಯಲಾಗಿದೆ. ಇದ್ದ ಒಬ್ಬ ಹೋರಾಟಗಾರನನ್ನೂ ಅಬ್ಬರದ, ಅಪ್ರಬುದ್ಧನನ್ನಾಗಿ ತೋರಿಸಲಾಗಿದೆ. ಚಿತ್ರದ ಕಥೆಯಲ್ಲಿ ಕನ್ನಡ ಮತ್ತು ಕನ್ನಡ ಶಾಲೆಗಳ ಅತಂತ್ರತೆಯ ಸಮಗ್ರ ಚಿತ್ರಣ ಬಂದಿಲ್ಲ. ಪ್ರಥಮಾರ್ಧ ಓಕೆ, ದ್ವಿತೀಯಾರ್ಧ ಜಾಳು. ಕ್ಲೈಮ್ಯಾಕ್‌ಸ್ ಬೇರೆ ತರ ಇರಬೇಕಿತ್ತು. ಮುಂತಾಗಿ ಆಕ್ಷೇಪಗಳುಂಟು. ಆಕ್ಷೇಪ ಅಂದೆ, ವಿಮರ್ಶೆ ಅಂದಿಲ್ಲ ನಾನು. ಕಾರಣ ಇವುಗಳೆಲ್ಲ ವಿಮರ್ಶೆ ಆಗಲು ಯೋಗ್ಯವಲ್ಲದ ಅಬ್ಸರ್ವೇಶನ್.

ಇದು ವಸ್ತುಸ್ಥಿತಿ ಚಿತ್ರ ಅಲ್ಲ!

‘ಸ.ಹಿ.ಪ್ರಾ.ಶಾ.ಕಾ.’ ಒಂದು ಕಮರ್ಷಿಯಲ್  ಫೀಚರ್ ಫಿಲ್‌ಮ್. ಹೋರಾಟ, ಸಾಕ್ಷಿ, ತಥಾಖಚಿತ ಸಮಸ್ಯೆಯ ಅನಾವರಣ, ನಡೆದ ನಡೆಯ ಕರಾರುವಾಕ್ ಚಿತ್ರಣ ಮುಂತಾಗಿ ಮಾಡಿದರೆ ಅದು ಸಾಕ್ಷ್ಯಚಿತ್ರವಾಗುತ್ತದೆಯೇ ಹೊರತು, ಒಂದು ಫೀಚರ್ ಫಿಲ್‌ಮ್ ಆಗದು. ರಿಷಬ್ ಉದ್ದೇಶ ಕಾಸರಗೋಡಿನ ಕನ್ನಡ ಶಾಲೆಗಳ ದುಃಸ್ಥಿತಿ, ಅಲ್ಲಿ ಆಗುತ್ತಿರುವ ಕನ್ನಡ ಭಾಷೆಯ ಮೇಲಿನ ದಾಳಿ, ದಬ್ಬಾಳಿಕೆ ಕನ್ನಡ ಭಾಷಿಕರ ಅತಂತ್ರತೆ-ಅಸಹಾಯಕತೆಗಳ ಮೇಲೆ ಬೆಳಕು ಚೆಲ್ಲುವುದು ಮತ್ತು ಸಮಸ್ತ ಕನ್ನಡಿಗರನ್ನ ಭಾವನಾತ್ಮಕವಾಗಿ ತಟ್ಟಿಮುಟ್ಟಿ ಎಚ್ಚರಿಸುವುದು. ಜೊತೆಗೆ ಒಂದು ಚಿತ್ರಕೃತಿಯಾಗಿ ಒಂದಿಷ್ಟು  ಒದಗಿಸುವುದು. ಆದಾಗ್ಯೂ ಹಾಡುಗಳಲ್ಲಿ ಕಾಸರಗೋಡಿನ ಹೋರಾಟದ ಅಸ್ಮಿತೆಯನ್ನು ಅನಾವರಣಗೊಳಿಸಲಾಗಿದೆ. ಇನ್ನು ಹೋರಾಟಗಾರರ ಚಿತ್ರ, ವಿವರ. ಅದಕ್ಕೆ ಕಯ್ಯಾರರಂಥವರ ಮೇಲೆ ರಾಜ್ಯ ಸರಕಾರ ಸಾಕ್ಷ್ಯಚಿತ್ರ ತಯಾರಿಸಿದೆ. ಅದನ್ನ ನೋಡಬಹುದು. ಚಿತ್ರದಲ್ಲಿ ಬರುವ ಅಬ್ಬರದ ಹೊಡಿಬಡಿಕಡಿ ಹೋರಾಟಗಾರನ ಪಾತ್ರ ಅದು ನೈಜವಾದದ್ದೇ. ಇಂಥ ನೂರಾರು ಜನ ಗಡಿಭಾಗದ ಹೋರಾಟದಲ್ಲಿ ಸಿಗುತ್ತಾರೆ. ಅದರಲ್ಲೂ ಕಾಸರಗೋಡು ಭಾಗದಲ್ಲಿದ್ದಾರೆ. ಯಕ್ಷಗಾನದ ದೈತ್ಯ ವೇಷಧಾರಿಯೊಬ್ಬ ಸಾಂಕೇತಿಕವಾಗಿ ವಾಸ್ತವದಲ್ಲೂ ಪ್ರತಿಕ್ರಿಯಿಸುವ ರೀತಿಯೇ ರಿಷಬ್‌ನ ಸೂಕ್ಷಜ್ಞತೆಗೆ ಸಾಕ್ಷಿ ಎನಿಸುತ್ತದೆ. ಅಷ್ಟಕ್ಕೂ  ರಿಷಬ್ ಹೊಸೆದ ಕಥೆ. ವಸ್ತುಸ್ಥಿತಿ ಅನ್ನಿಸಿದರೂ ಅದು ಯಥಾಸ್ಥಿತಿಯ ಚಿತ್ರಣವಲ್ಲ. ಕಲ್ಪಿತಕಥೆಗೆ ವಾಸ್ತವದ ನೆಲೆಗಟ್ಟು. ಹೀಗಾಗಿಯೇ ನಾನು ಆರಂಭದಲ್ಲೇ ಅಂದಿದ್ದು, ಸಿನಿಮಾ ಮಾಡುವುದು ಹೇಗೆ ಒಂದು ಕಲೆಯೋ ನೋಡುವುದೂ ಕೂಡ ಅಂತ.

ಹೌದು, ಕಥೆಯ ಪ್ರಥಮಾರ್ಧದಷ್ಟು ದ್ವಿತೀಯಾರ್ಧ ಗಟ್ಟಿಯಾಗಿ ಕೂಡಿಲ್ಲವೇನೋ ಅನ್ನಿಸಿದ್ದು ನಿಜವೇ. ಆದರೂ ಮಕ್ಕಳು ಮೂಲವಾಗಿ ಸಾಗುವ ಕಥನಗಾರಿಕೆಯಲ್ಲಿ ಮಕ್ಕಳ ಮನಸ್ಸಿನ ಪ್ರತಿಬಿಂಬ ಕಥೆಯಾಗಿ, ಕಥಾನಕವಾದ ಪರಿ ಇದೆ. ಹಾಗಾಗಿ ಅನಂತ್‌ನಾಗ್ ಅವರ ಪಾತ್ರ, ಪ್ರವೇಶ, ಒಂದು  ಅಂತ್ಯ ಇವೆಲ್ಲ ಮಕ್ಕಳ ಚಿತ್ತಾಕೃತಿಯ ಪ್ರತಿಫಲನ ಅಂತಲೇ ಭಾವಿಸಬೇಕೇನೋ. ಆಮೇಲೆ ಇಲ್ಲೊಂದು ಸೂಕ್ಷ್ಮತೆ ಇದೆ. ಚಿತ್ರದ ಪ್ರಥಮಾರ್ಧವನ್ನು ನಿರ್ದೇಶಕ ರಿಷಬ್ ಸ್ವತಃ ನಿರೂಪಿಸುತ್ತಾ ಸಾಗಿ, ದ್ವಿತೀಯಾರ್ಧವನ್ನು ಮಕ್ಕಳ ಹೆಗಲಿಗೆ ಏರಿಸಿ ತಾನು ಹಿಂದೆ ಸರಿಯುತ್ತಾರೆ. ಮಕ್ಕಳೇ ಅವರ ಯೋಚನೆಯಂತೆ ಚಿತ್ರವನ್ನ ಮುಂದುವರಿಸುತ್ತಾ ಕೊನೆಯ ಭಾಗವನ್ನು ಅನಂತ್‌ನಾಗ್ ಪಾತ್ರಕ್ಕೆ ವಹಿಸಿಕೊಡುತ್ತಾರೆ. ಈ ತಂತ್ರಗಾರಿಕೆ ಕೂಡ ರಿಷಬ್ ಅವರ ನಿರ್ದೇಶಕನ ಜಾಣ್ಮೆ ಅಂತಲೇ ನನ್ನ ಭಾವನೆ. ಅಲ್ಲೊಂದು ಜಾಳು, ಸಿನಿಮ್ಯಾಟಿಕ್, ಡ್ರಾಮಾ  ಇದ್ದಾಗಲೂ ನಮ್ಮ ಕನ್ನಡ ಶಾಲೆಗಳು, ಮೇಲಧಿಕಾರಿಗಳ ಭ್ರಷ್ಟತೆ, ನ್ಯಾಯಾಂಗ, ಅಲ್ಲಿನ ಬ್ರಿಟಿಷ್ ಬಳುವಳಿಯ ಕಾರ್ಯವಿಧಾನ, ಇವೆಲ್ಲವನ್ನೂ ರಿಷಬ್ ತೆಳುವಾದ ಗೇಲಿಗೆ, ಕಟಕಿಗೆ ಈಡುಮಾಡುತ್ತಲೇ, ವ್ಯವಸ್ಥೆ ಮತ್ತು ಆಡಳಿತದ ಟೊಳ್ಳು, ಸುಳ್ಳು, ಭ್ರಮೆ, ಮುಖವಾಡಗಳನ್ನ ಕಳಚುತ್ತಾ ಸಾಗುತ್ತಾರೆ.  ಇಷ್ಟವಾಗುತ್ತದೆ. ಹೋರಾಟಗಾರರ ಡೋಂಗಿತನ, ಪತ್ರಕರ್ತರ ಖೊಟ್ಟಿತನ, ಒಂದು ಊರಿನ ಸಾಮುದಾಯಿಕ ಬದುಕಿನ ಚಿತ್ರಣ ಇವೆಲ್ಲವೂ ಮನನೀಯ. ಹಾಡು, ಸಾಹಿತ್ಯ, ಕ್ಯಾಮೆರಾ, ಚಿತ್ರಿಕೆಗೆ ಬಳಸಿದ ಸ್ಥಳಗಳು ಎಲ್ಲವೂ ಅನನ್ಯ. ಚಿತ್ರದ ಪ್ರತೀ ಪಾತ್ರವೂ  ಮತ್ತೆ ಮತ್ತೆ ಮೆಲುಕು ಹಾಕುವ ಅಪರೂಪದ ಪಾತ್ರಪ್ರಪಂಚ. ಕರ್ನಾಟಕ ಸರಕಾರ ಈ ಚಿತ್ರವನ್ನು ‘ವಿಶೇಷ ಚಿತ್ರ’ ಎಂದು ಪರಿಗಣಿಸಿ, ಕನ್ನಡ ನಾಡಿನ ಮೂಲೆ ಮೂಲೆಗಳಲ್ಲೂ ವಿಶೇಷ ಪ್ರದರ್ಶನ ಏರ್ಪಡಿಸಬೇಕು.

ಒಂದಲ್ಲ ಎರಡಲ್ಲ..

‘ಒಂದಲ್ಲ ಎರಡಲ್ಲ..’ ಚಿತ್ರದ ಕಥಾಹಂದರ ‘ಸ.ಹಿ.ಪ್ರಾ.ಶಾ.ಕಾ’ಗಿಂತ ಸಂಕೀರ್ಣ-ಸೂಕ್ಷ್ಮ. ಡಿ.ಸತ್ಯಪ್ರಕಾಶ್ ಆರಿಸಿಕೊಳ್ಳುವ ವಸ್ತುವೇ ಅಂತಾದ್ದು. ಅವರ ಚಿತ್ರಜೀವನದ ಆರಂಭಕ್ಕೆ ಕಲಶ ಇಟ್ಟ ಕಿರುಚಿತ್ರ ‘ಜಯನಗರ ನಾಲ್ಕನೇ ಬ್ಲಾಕ್’ನಿಂದ, ಅವರ ಪ್ರಥಮ ನಿರ್ದೇಶನದ ಹಿರಿಚಿತ್ರ ‘ರಾಮ ರಾಮರೇ’ಗೆ ಕೂಡ  ಮಾತು ಅನ್ವಯಿಸುತ್ತದೆ. ‘ಒಂದಲ್ಲಾ ಎರಡಲ್ಲಾ’ ಮೇಲ್ನೋಟಕ್ಕೆ ಸಮೀರ್ ಎಂಬ ಮುಗ್ಧ ಹುಡುಗನ ‘ಭಾನು’ ಎಂಬ ಗೋವಿನ ಪ್ರೀತಿಯ, ಮತ್ತದರ ಅಗಲಿಕೆಯ ಕತೆ ಅಂದುಬಿಡಬಹುದು. ಅಥವಾ ಗೋರಕ್ಷಣೆ, ಗೊಹತ್ಯೆ, ಗೋರಾಜಕೀಯದ ಪ್ರಸಕ್ತ ಸಂದರ್ಭದಲ್ಲಿ ಗೋವು, ಸಾಮಾಜಿಕ ಬದುಕಿನ ಜೀವವೂ, ಆಹಾರವೂ ಏಕಕಾಲದಲ್ಲಿ ಆಗಿಯೂ ಜೀವನಪ್ರೀತಿಯ ಉದಾತ್ತತೆಯ ಪ್ರಶ್ನೆ ಬಂದಾಗ ಆ ಎರಡನ್ನೂ ಮೀರಿ ನಿಲ್ಲುವ, ಆ ಮೀರುವಿಕೆಯಲ್ಲಿ ರಾಮ, ರಹೀಮ, ಏಸು ಎಲ್ಲರೂ ಒಂದಾಗಿ ಬಿಡುವ ಸಹಜತೆಯನ್ನು ಬಿಂಬಿಸಿದ ಚಿತ್ರವಾಗಿಯೂ  ಇವೆರಡರನ್ನೂ ದಾಟಿ ಈ ಚಿತ್ರ, ಚಿರಂತನ ಹಾಡಾದ ‘ಗೋವಿನ ಹಾಡು’ವಿನ ಆಧುನಿಕ ಪರಿಭಾಷೆಯಾಗಿಯೂ ಕಂಡುಬಿಡುತ್ತದೆ. ಇಲ್ಲವೇ ‘ಮಗು’ ಅನ್ನುವ ಪ್ರೀತಿ, ಪ್ರಜ್ಞೆ, ಸಂವೇದನೆ ಏಕತ್ರಗೊಂಡಾಗ ಅದು ಮನುಷ್ಯ, ಪ್ರಾಣಿ, ಜಾತಿ, ಮತ, ಗೋತ್ರ ಯಾವುದನ್ನೂ ಲೆಕ್ಕಿಸದೆ ಎಲ್ಲಾ ಎಲ್ಲೆಗಳನ್ನು ಮೀರಿ ‘ಮಾನವತೆ’ ಎಂಬ ಅಗಾಧ ಪ್ರೀತಿಯ ಕಡಲಿನಲ್ಲಿ ಲೀನಗೊಂಡು ಬಿಡದೇ?

ಮೂವತ್ತು ವರ್ಷಗಳ ಹಿಂದೆ ಮಗನನ್ನು ಕಳಕೊಂಡ, ಕಂಡ ಕಂಡ ಮಕ್ಕಳೆಲ್ಲ ನನ್ನ ಮಗ ಎಂದೇ ಭಾವಿಸಿ ಬದುಕುವ  ಮನೆಗೆಲಸದ ಹೆಣ್ಮಗಳ ಗಂಡನೇ ಮಗನಾಗಿ, ಬೀದಿ ಭಿಕಾರಿಯಂತೆ ಹಣವೇ ಬದುಕಿನ ಸರ್ವಸ್ವ ಎಂದೇ ಬದುಕಿದ ಹುಲಿವೇಷದ ಆತನಿಗೂ, ಅನಾಮಿಕನ ತಾಯ್ತನದ ಒಡಲಿನಲ್ಲಿ ‘ಅಪ್ಪ’ನ ದರ್ಶನವಾಗುವುದು, ಕಳೆದು ಹೋದ ಭಾನು (ಹಸು) ದೇವಸ್ಥಾನದಲ್ಲಿ ಪೂಜೆ ಮಾಡಿಸಿದರೆ ಸಿಗುತ್ತಾಳೆ ಅಂದ ಮಾತು ಕೇಳಿ ಆಂಜನೇಯನ ಗುಡಿಗೆ ಭಾವಚೋದಕವಾಗಿ ಪೂಜಾಸಾಮಾಗ್ರಿ ಹಿಡಿದು ಸಾಗುವ ಸಮೀರ, ಅರ್ಚನೆ ಚೀಟಿ ಹಿಡಿದು ಬಂದ ಬಾಲಕ ಮುಸ್ಲಿಂ ಹುಡುಗ ಎಂದು ಅರಿವಾದರೂ ಆರ್ದ್ರತೆ, ಅಕ್ಕರೆ, ಅಪ್ಯಾಯತೆಯಿಂದಲೇ ಕಂಡು  ಮಗುವಿನಲ್ಲೇ ಹಸುತ್ವ, ಮಗುತ್ವ ಎರಡನ್ನೂ ಕಾಣುವ ವಯೋವೃದ್ಧ ಪುರೋಹಿತ, ಕಳಕೊಂಡ ನೋವು ಸಮಾಜವನ್ನ, ಸಮೂಹವನ್ನ ತಂತಮ್ಮ ಎಲ್ಲಾ ಇತಿಮಿತಿಗಳನ್ನ ಮೀರಿ ಒಂದಾಗಿಸುವ ಜೀವನಪ್ರೀತಿ, ಹೀಗೆ ಒಂದಲ್ಲಾ ಎರಡಲ್ಲಾ ಹಲವು ಹತ್ತು ಬಗೆಯಲ್ಲಿ  ಅವರವರ ಭಾವಕ್ಕೆ ಅರ್ಥವಾಗುವ ‘ಒಂದಲ್ಲಾ ಎರಡಲ್ಲಾ’ ಚಿತ್ರ ಸಹಜ, ಸರಳವಾಗಿ ಒಬ್ಬ ಮುಗ್ಧ, ಆದರೆ ತುಂಟ ಹುಡುಗನ ಹುಡುಗಾಟಿಕೆಯ ರೂಪಾಂತರದ ಕಥೆ ಎಂದೂ ಹೇಳಿಬಿಡಬಹುದು.  ಸಿನಿಮಾ, ಕಾವ್ಯ, ಗದ್ಯ, ಚಿತ್ರಕಲಾಕೃತಿ ಯಾವುದೇ ಸೃಜನಾತ್ಮಕ  ಅಭಿವ್ಯಕ್ತಿ ‘ಇದಂ  ಎಂಬ ಏಕನೆಲೆಯ ನೋಟಕ್ಕೆ, ಅರ್ಥಕ್ಕೆ, ವ್ಯಾಖ್ಯಾನಕ್ಕೆ ದಕ್ಕಬಾರದು. ಹಾಗೆ ದಕ್ಕಿದರೆ ಅದೊಂದು ಅತ್ಯುತ್ತಮ  ಕೃತಿ ಎನಿಸಿಕೊಳ್ಳಲಾದರು. ನೋಟಕ್ಕೆ, ಅರ್ಥಕ್ಕೆ  ಬಹುಮುಖಿಯಾಗಿ ದಕ್ಕಿದಾಗಲೇ ಅದೊಂದು ಶ್ರೇಷ್ಠ ಕಲಾಕೃತಿ ಎನಿಸಿಕೊಳ್ಳುತ್ತದೆ.

ಭಾರತಕ್ಕೆ ಬರೆದ ಭಾಷ್ಯ

‘ಒಂದಲ್ಲಾ ಎರಡಲ್ಲಾ’ ಚಿತ್ರ ಈ ಹಿನ್ನೆಲೆಯಲ್ಲೇ ಅದೊಂದು ‘ಬೆಸ್‌ಟ್’ ಅಂತ ಅನ್ನಿಸಿಕೊಳ್ಳುತ್ತದೆ. ನವಿರಾದ ನಿರೂಪಣೆ ಮಕ್ಕಳೊಂದಿಗೆ ಮಕ್ಕಳಾಗುವ, ಪ್ರೌಢರೊಂದಿಗೆ ಪ್ರೌಢರಾಗುವ, ಪ್ರಾಣಿಗಳೊಂದಿಗೆ ಮೂಕ ಜೀವವಾಗಿ ಸ್ಪಂದಿಸುವ ನಿರ್ದೇಶಕ ಸತ್ಯಪ್ರಕಾಶ್ ಅವರ ನಿರಾಕಾರ, ನಿರಸನಗೊಳ್ಳುವ ವ್ಯಕ್ತಿತ್ವ ಅವರ  ಬಹುದೊಡ್ಡ ಶಕ್ತಿ. ಪ್ರಕಾಶ್ ಪಾತ್ರಗಳನ್ನು, ಸನ್ನಿವೇಶಗಳನ್ನು ಕಟ್ಟುವುದಿಲ್ಲ, ಹುಟ್ಟಿಸುತ್ತಾರೆ. ಸಿನಿಮಾದ ಮೂಲಕ ಪ್ರತಿಜಗತ್ತನ್ನ ಸೃಜಿಸುವ ತಾಕತ್ತು ಪ್ರಕಾಶ್‌ಗಿದೆ, ಇದು ಸತ್ಯ. ಪ್ರಕಾಶ್‌ರ ‘ಒಂದಲ್ಲಾ ಎರಡಲ್ಲಾ’ ಅತ್ಯಂತ ಕಾಂಟೆಂಪರರಿ ಚಿತ್ರ. ಅವರೊಬ್ಬ ಅತಿಸೂಕ್ಷ್ಮ ಸಂವೇದಿತ್ವದ ನಿರ್ದೇಶಕ ಅನ್ನುವುದಕ್ಕೆ ಗೋವು, ಹುಲಿ, ಮಗು ಈ ಮೂರು ಜೀವ, ಭಾವ, ಜಗತ್ತನ್ನು ಇಟ್ಟುಕೊಂಡು, ಸಮಾಜ ಅನ್ನುವ ನಿರ್ದೇಶಿತ ಸರಕನ್ನ ಅದರ ಆಕಾರ, ವಿಕಾರ, ವಿವಶತೆಗಳನ್ನ ಬಿಚ್ಚಿಡುವ ಬಗೆ ವರ್ತಮಾನದ ಭಾರತಕ್ಕೆ ಬರೆದ ಭಾಷ್ಯದಂತಿದೆ.  ಜೀವನಪ್ರೀತಿ ಇವೆರಡೇ ಬದುಕಿನ ಅಂಗಣದ ಚಿರಸತ್ಯ. ಪ್ರಕಾಶ್ ತಾನು ಎತ್ತಿಕೊಳ್ಳುವ ವಸ್ತುವಿನ ಮೂಲಕ ಲೌಕಿಕ-ಅಲೌಕಿಕದ  ನೆಲೆಗಳನ್ನು ಗಾಢವಾಗಿ ಮುಟ್ಟುತ್ತಾರೆ. ತಟ್ಟುತ್ತಾರೆ. ಒಳಹೊರಗಿನ ಬದುಕಿಗೆ ಜರಡಿಯನ್ನೂ ಹಿಡಿಯುತ್ತಾರೆ. ಜೀವನದ ಆತ್ಯಂತಿಕ ಸತ್ಯ ಶೋಧ, ಅವರ ಚಿತ್ರಕೃತಿಯ ಅಂತಿಮ ಆಶಯ. ಸರಳ, ಸುಂದರ ಆದರೆ ‘ಒಂದಲ್ಲಾ ಎರಡಲ್ಲಾ’ ಮಾರ್ಮಿಕ. ಸಮೀರ್‌ನ ಪಾತ್ರದ ಬಾಲಕನಂತೂ ನೀರು ಕುಡಿದಂತೆ, ಮುಗ್ಧತೆಯೇ ಮೈವೆತ್ತಂತೆ ಅಭಿವ್ಯಕ್ತಿಗೊಂಡಿದ್ದಾನೆ. ಹಾಗೇ ‘ಭಾನು’ ಹೆಸರಿನ ಹಸುವಿನಿಂದ ಹಿಡಿದು ಪ್ರತಿಯೊಬ್ಬ ಕಲಾವಿದರೂ ಎಲ್ಲಿಯೂ  ಇಲ್ಲ. ಸಾಕ್ಷಾತ್ ಆಯಾಯ ಪಾತ್ರವೇ ಆಗಿ ಆಕೃತಿಗೊಂಡಿದ್ದಾರೆ.

ಗೀತ ಗೋವಿಂದಂ

ಇನ್ನು ತೆಲುಗಿನ ‘ಗೀತ ಗೋವಿಂದಂ’. ಇದು ಗೋಕುಲದ ಕೃಷ್ಣ ರಾಧೆಯರ ಹಸಿಹಸಿಯಾದ ಪ್ರೀತಿ ಪ್ರೇಮದ ಕಥೆಯ ನೆರಳಿನಂತಿದೆ. ಪ್ರೀತಿ, ಲವ್ ಅದರ ಮೇಲೆ ಭಾರತೀಯ ಚಿತ್ರರಂಗದಲ್ಲೇ ಸಾವಿರ ಸಾವಿರ ಸಿನಿಮಾಗಳು ಬಂದಿವೆ. ಮಹಾನ್ ಚಿತ್ರ, ಎವರ್‌ಗ್ರೀನ್ ಚಿತ್ರ, ಮಹೋನ್ನತ ಚಿತ್ರಗಳೆಲ್ಲ ಪ್ರೀತಿಯ ಎಳೆಯಲ್ಲೇ ದಾಖಲಾಗಿವೆ. ಆದರೆ ಪರಶುರಾಮ್ ಎಂಬ ಯುವ ನಿರ್ದೇಶಕ, ಪ್ರೀತಿಯ ಇನೋಸೆನ್‌ಸ್ ಅನ್ನು ಎದುರಿಟ್ಟು  ಫ್ರೇಮ್‌ವರ್ಕ್‌ನ ಆವರಣದಲ್ಲಿ ಆಟ ಆಡಿದ ರೀತಿ ಇದೆಯಲ್ಲ, ‘ವಾವ್’ ನಿಜಕ್ಕೂ ಅವನಿಗೊಂದು ಸಲಾಮ್ ಹೊಡೆಯಲೇ ಬೇಕು. ಕಾಲೇಜು ಶಿಕ್ಷಕ. ಅವನದ್ದೇ ಆದ ಫ್ರೆಂಡ್‌ಸ್ ಗ್ಯಾಂಗ್. ಕುಡಿತ, ಗಮ್ಮತ್ತು ಎಲ್ಲವೂ ಇದೆ. ಆದರೆ ಆತ್ಮಶುದ್ಧ ಹುಡುಗ. ಪೂರ್ಣ ಪುರುಷ. ಪ್ರೀತಿಗಾಗಿ ಹಾತೊರೆದು ಹಂಬಲಿಸುವ ಹುಡುಗ. ತನ್ನದೇ ಆದ ರೀತಿಯಲ್ಲಿ ಇಂತಹದ್ದೇ ಹುಡುಗಿ ಬೇಕು ಎಂದು ಕನಸು ಕಾಣುವ ತೀವ್ರ ಪ್ರೇಮಿ. ಅವನಂದುಕೊಂಡ ಹುಡುಗಿ ಕನಸಲ್ಲೂ, ಮರುದಿನ ದೇವಸ್ಥಾನದಲ್ಲೂ ನಂತರ ತಂಗಿಯ  ಊರಿಗೆ ಹೊರಟ ಬಸ್ಸಿನಲ್ಲೂ …, ಹೆಚ್ಚೇನು ತನ್ನ ಪಕ್ಕದ ಸೀಟಿನಲ್ಲೇ ಬಂದು ಕುಳಿತುಕೊಳ್ಳುತ್ತಾಳೆ. ಅಲ್ಲಿಗೆ ನಾಯಕ ವಿಜಯ್ ಗೋವಿಂದ, ನಾಯಕಿ ಗೀತಾ ಮುಖಾಮುಖಿ.

ಈ ಎಲ್ಲಾ ವಿವರಗಳನ್ನ ವಿಜಯ್ ತನ್ನ ಗೆಳೆಯನಿಗೆ ಮೊಬೈಲ್ ಕಾಲ್ ಮಾಡಿ ರವಾನಿಸುತ್ತಾನೆ. ಅವನು ಘಳಿಗೆಗೆ ಒಂದೊಂದು ಐಡಿಯಾ ಕೊಡುತ್ತಾನೆ. ನಾಯಕ ವಿಜಯ್‌ನ ಕೇಳಿ, ಅವನು ಕುಳಿತ ಸೀಟಿನ ಒಂದು ಭಾಗದಲ್ಲಿ ಅವಳು ಅಂಗಾತ ಮಲಗುತ್ತಾಳೆ. ಗಾಢನಿದ್ದೆ. ಆಗ ಗೆಳೆಯ ಅವಳಿಗೊಂದು ಕಿಸ್ ಮಾಡು,  ಅದೇ ನಾಂದಿ ಅನ್ನುತ್ತಾನೆ. ಆದರೆ ವಿಜಯ್ ಪುಕ್ಕಲ. ಸಾತ್ವಿಕ. ಆದರೂ ಉಕ್ಕುವ ಯೌವನದ ಹೊಳೆಯಲ್ಲಿ ಮನಸೆಂಬ ನೆರೆ. ತೇಲಾಡಿ, ತುಳುಕಾಡಿ, ಮುಳುಗಿ ಎದ್ದು ಕೊನೆಗೂ ಮುತ್ತು ಕೊಡಲು ಬಾಗುತ್ತಾನೆ. ಆಗಲೂ ಬೇಡ ಅನ್ನಿಸುತ್ತದೆ. ಮುತ್ತು ಬೇಡ, ಅವರ ಅನುಮತಿ ಇಲ್ಲದೆ ಕೊಟ್ಟರೆ ಅದು ಅಸಭ್ಯ. ಕನಿಷ್ಠ ಒಂದು ‘ಸೆಲ್ಫಿ’ ಎಂದು ಬಾಗುತ್ತಾನೆ. ಅಷ್ಟು ಹೊತ್ತಿಗೆ ಬಸ್ ಹೊಂಡಕ್ಕೆ ಬೀಳುತ್ತದೆ. ನಾಯಕನ ಎಲ್ಲಾ ಸ್ಥಿಮಿತ ಮೀರಿ ನಾಯಕಿಯ ತುಟಿಗೆ ನಾಯಕನ  ಲಾಖ್ ಆಗುತ್ತದೆ. ಮುಂದಿನದ್ದು ಜ್ವಾಲಾಗ್ನಿ, ಜ್ವಾಲಾಮುಖಿ. ಎಚ್ಚರಗೊಳ್ಳುವ ನಾಯಕಿ. ಕೆಂಡಾಮಂಡಲ, ಜರಿತ, ಥೂ ಎಂಬ ಉಗಿತ. ಈ ಮಧ್ಯೆ ‘ಮೇಡಂ ನಾನಂಥವನಲ್ಲ, ಆಕಸ್ಮಿಕ ಇದು, ಸಾರಿ, ಸಾರಿ’ ಎಂಬ ನಾಯಕನ ಗೋಗರೆತ. ಆದರೆ ಕೋಪೋದ್ರಿಕ್ತ ನಾಯಕಿ ಅಣ್ಣನಿಗೆ ಕಾಲ್ ಮಾಡುತ್ತಾಳೆ. ಅವನೋ ತಂಗಿಗಾಗಿ ಒಂದೇನು ಹತ್ತು ಜೀವ ತೆಗೆವ ರಾಕ್ಷಸ. ನಡೆದದ್ದನ್ನ ಹೇಳಿ ತಂಗಿ ಅತ್ತಾಗ ಅಲ್ಲೊಂದು ಘಟಸ್ಪೋಟ. ಅವರು ಬಸ್ಸನ್ನು ಬೆಳಗು ಜಾವದಲ್ಲಿ ಅಡ್ಡ ಹಾಕಿ, ಇವನನ್ನು  ತುಂಡಾಗಿಸಲು ಬರುತ್ತಾರೆ. ಆಶ್ಚರ್ಯ ಎಂದರೆ ನಾಯಕನ ತಂಗಿ ಮದುವೆ ಆಗುವ ಗಂಡು ಇದೇ ನಾಯಕಿಯ ಅಣ್ಣನೇ. ಮುಂದೇನು? ಇದೇ ಕತೆ-ಕುತೂಹಲ.

‘ಗೀತ ಗೋವಿಂದಂ’ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ಕಿರಿಕ್‌ಪಾರ್ಟಿ ರಷ್ಮಿಕಾ ಮಂದಣ್ಣ ಕಾಂಬಿನೇಷನ್ನಿನ ಚಿತ್ರ. ನಿರ್ದೇಶಕ ಪರಶುರಾಮ್ ಪ್ರೀತಿ, ಅದರ ಆರ್ದ್ರತೆ, ಆಳದ ಮುಗ್ಧತೆ, ಸಾತ್ವಿಕತೆಗಳನ್ನ ಮತ್ತು ಇಷ್ಟೆಲ್ಲಾ ಇದ್ದೂ ಒಬ್ಬ ಉತ್ಕಟ ಪ್ರೇಮಿ ತಾನು ಪ್ರೇಮಿಸುವ ಹೆಣ್ಣಿನ ಕಣ್ಣಲ್ಲಿ ಒಬ್ಬ ಅಸಭ್ಯನಾಗಿ, ಅನಾಗರಿಕನಾಗಿ  ಸ್ಥಿತಿ ಬಂದಾಗ ಆಗುವ ಅನಾಹುತ, ಹಿಂಸೆ, ಚಡಪಡಿಕೆ, ಭಯ, ಇವುಗಳನ್ನ ಅದೆಷ್ಟು ಸಹಜ ಮತ್ತು ನವಿರಾಗಿ ತೆಗೆದಿದ್ದಾರೆ ಅಂದರೆ, ಗ್ರೇಟ್. ಪ್ರೀತಿ, ಪ್ರೇಮ ಮತ್ತು ಪ್ರಣಯದ ಮಧ್ಯೆಯ ಬಿಟ್ಟ ಸ್ಥಳ ತುಂಬುವ ಸಂವೇದಾನಾತ್ಮಕ ಕೆಲಸವನ್ನ ಪರಶುರಾಮ್ ಎಷ್ಟು ನವಿರಾಗಿ, ಪಕ್ವವಾಗಿ, ಎಲ್ಲಿಯೂ ಸಭ್ಯತೆಯ ಗಡಿ ದಾಟದೆ ಒಂದು ದೃಶ್ಯ ಕಾವ್ಯವನ್ನೇ ಸೃಜಿಸಿದ್ದು, ಅದಕ್ಕೆ ವಿಜಯ್, ರಷ್ಮಿಕಾ ಸ್ಪರ್ಧಾತ್ಮಕವಾಗಿ ಅಭಿನಯಿಸಿದ್ದು ಅಪರೂಪದಲ್ಲಿ ಅಪರೂಪ. ಸಿನಿಮಾದಲ್ಲಿ, ಅದರಲ್ಲೂ ತೆಲುಗಿನಲ್ಲಂತೂ ಲವ್ ಅಂತ  ಅದರ ಸೂಕ್ಷ್ಮ ಎಳೆಗಳಿಗಿಂತ ವಾಚ್ಯದ ಅಭಿವ್ಯಕ್ತಿಯೇ ಅಧಿಕ. ಆದರೆ ಪರಶುರಾಮ್, ಪ್ರೀತಿ ಅನ್ನುವ ಸಂವೇದನೆಯ ಆಂತರ್ಯದ ಮೃದು ಮತ್ತು ಸೂಕ್ಷ್ಮ ಎಳೆಗಳನ್ನ ಎಳೆದೆಳೆದು ಮೀಟಿದ್ದು, ಈಂಟಿದ್ದು ‘ಗೀತ ಗೋವಿಂದಂ’ ಬ್ಲಾಕ್‌ಬಸ್ಟರ್ ಆಗುವುದರ ಜತೆ ಒಂದು ಮೌಲಿಕ ಕೃತಿಯಾಗಿಯೂ ದಾಖಲಾಗಿದೆ.

ಈ ಮೂರೂ ಚಿತ್ರಗಳಲ್ಲಿ ‘ಪ್ರೀತಿ’ ‘ನೆಲೆ ಸಾಮ್ಯತೆ’ಯಾದರೆ ಮೂರೂ ಯುವ ನಿರ್ದೇಶಕರು ಕಥೆ, ಕಥಾನಕ, ನಿರೂಪಣೆ ಇವೇ ಒಂದು ಕೃತಿಯ ಮೌಲ್ಯ, ಯಶಸ್ಸು, ಗಟ್ಟಿತನ ಎಂದು ನಂಬಿದ್ದು. ನಿರ್ದೇಶಕನೇ  ನಿರ್ಣಾಯಕ ವ್ಯಕ್ತಿ, ಅವನೇ ನಾಯಕ-ನಾವಿಕ ಎಂಬ ಎರಡೆಣಿಸದ ನಿರ್ಧಾರ. ಕಥೆ, ಸ್ಕ್ರೀನ್‌ಪ್ಲೇ, ನಿರ್ದೇಶನ ಇವು ಗಟ್ಟಿಗೊಂಡರೆ, ಘನೀಕರಿಸಿದರೆ ಪಾತ್ರಧಾರಿಗಳಾರೇ ಆದರೂ ಚಿತ್ರವನ್ನು ಜೀವಂತೀಕರಿಸಬಹುದು. ಗೆಲ್ಲಿಸಬಹುದು. ಗೆಲುವಿಗೆ ಈಗಾಗಲೇ ನಿರ್ಧರಿಸಿದ ಸೂತ್ರಗಳಿಲ್ಲ, ಆ ಜಾಗದಲ್ಲಿ ನಿರ್ದೇಶಕನ ಕೃತುಶಕ್ತಿಯ ಧಾರೆ ಎರೆಯಲ್ಪಡಬೇಕು ಅನ್ನುವುದನ್ನ ಋಜುಪಡಿಸಿದ್ದಾರೆ.  ಕಥಾ ಮೂಲ, ನಿರೂಪಣಾ ಮೂಲ, ನಿರ್ದೇಶಕ ಮೂಲದತ್ತ ಸಿನಿಮಾ ಮತ್ತೆ ಮುಖಮಾಡುತ್ತಿರುವುದರ ಸೂಚನೆ ಇದು. ಈ ಮೂರೂ ಸಿನಿಮಾಗಳಲ್ಲಿ ಸಿದ್ಧಸೂತ್ರಗಳಿಲ್ಲ. ಕಮರ್ಷಿಯಲ್ ಸಿನಿಮಾ ಆಗಿಯೂ, ಹೃದಯ  ಬಿಚ್ಚುಡುಗೆ, ಕಚ್ಚುಡುಗೆ, ಕೊಚ್ಚುಡುಗೆಗಳಿಲ್ಲ. ಪೂರ್ಣ ಕುಟುಂಬ ಕುಳಿತು ನೋಡುವ ಚಿತ್ರಗಳು.

ಕನ್ನಡ ಚಿತ್ರರಂಗ ಒಟ್ಟಾರೆಯಾಗಿ ಆರ್ಥಿಕ ಸೋಲಿನ ಬಿಸಿಯಲ್ಲಿ ನಲುಗುತ್ತಿರುವಾಗಲೂ ಸೃಜನಾತ್ಮಕ ಶಕ್ತಿ ಪ್ರದರ್ಶನದಲ್ಲಿ ಹಿಂದೆ ಬಿದ್ದಿಲ್ಲ. ಹೊಸ ತಲೆಮಾರು ಎದುರು ನಿಂತು ‘ನಾಳೆ’ಯನ್ನ ನಿರೀಕ್ಷೆ ಮಾಡುವಂತೆ ಮಾಡಿದೆ. ರಕ್ಷಿತ್ ಶೆಟ್ಟಿ, ಆದರ್ಶ್ ಈಶ್ವರಪ್ಪ (ಶುದ್ಧಿ), ರಕ್ಷಿತ್ ತೀರ್ಥಹಳ್ಳಿ (ಹೊಂಬಣ್ಣ), ರಾಜ್.ಬಿ.ಶೆಟ್ಟಿ (ಒಂದು ಮೊಟ್ಟೆಯ ಕಥೆ), ಪ್ರಶಾಂತ್ ನೀಲ್ (ಉಗ್ರಂ), ವೆಂಕಟ್ ಭಾರದ್ವಾಜ್ (ಕೆಂಪಿರುವೆ), ನರ್ತನ್ (ಮಫ್ತಿ), ಜಯತೀರ್ಥ  ಮನಸುಗಳು), ತರುಣ್ ಸುಧೀರ (ಚೌಕ), ಎಂ.ಜಿ.ಶ್ರೀನಿವಾಸ್ (ಶ್ರೀನಿವಾಸ ಕಲ್ಯಾಣ), ಸಿಂಪಲ್ ಸುನಿ (ಆಪರೇಷನ್ ಅಲಮೇಲಮ್ಮ), ಬಿ.ಪ್ರದೀಪ್ ವರ್ಮಾ (ಊರ್ವಿ), ಸಂತೋಷ್ ಆನಂದ್ (ರಾಜಕುಮಾರ), ಪಿ.ಸಿ.ಶೇಖರ್ (ರಾಗ), ಬಿ.ಮಂಜುನಾಥನ್ (ಆ ಎರಡು ವರ್ಷಗಳು), ಶಿವು-ಜಗನ್ (ಏಪ್ರಿಲ್‌ನ ಹಿಮಬಿಂದು), ಅರವಿಂದ್ ಕೌಶಿಕ್ (ಹುಲಿರಾಯ), ರೋಹಿತ್ ಪದಕಿ (ದಯವಿಟ್ಟು ಗಮನಿಸಿ), ಹೇಮಂತ್ ರಾವ್ (ಗೋಧಿ ಬಣ್ಣ) ಹೀಗೆ ಪಟ್ಟಿಮಾಡಬಹುದಾಗಿದೆ. ಕನ್ನಡದ ಭವಿಷ್ಯ ಹೊಸಬರ ಕೈಯಲ್ಲಿದೆ. ಹಳಬರಂತೂ ಆಗಲೇ ಹಾದಿ ಬಿಟ್ಟಾಗಿದೆ. ಹೊಸಬರೂ ಗೆಲುವಿಗೆ  ಮಾಗಬೇಕು. ಹಳಬರಂತೆ ನಾವೇ, ನಮ್ಮಿಂದ ಅನ್ನುತ್ತಾ ಕೊನೆಗೆ ಸ್ಟಾರ್ ನಟರ ‘ಪಾದಸೇವೆ’ ಮಾಡುವ ಪ್ರಾರಬ್ಧಕ್ಕೆ ತುತ್ತಾದದ್ದನ್ನ ನೆನಪಿಡಬೇಕು. ಆರಂಭದಲ್ಲಿದ್ದ ಕಥೆ, ಸ್ಕ್ರಿಪ್‌ಟ್, ನಿರೂಪಣೆಯ ಪ್ರೀತಿ ಅದು ಅವರ ಉಸಿರು, ಪ್ರಾಣ ಆಗಬೇಕು. ಹಾಗಾದಾಗ ಮಾತ್ರ ಗಟ್ಟಿ, ಗಹನ, ಗೆಲುವಿನ ಚಿತ್ರ ಯಾತ್ರೆ ನಿರಂತರ ಆಗಲು ಸಾಧ್ಯ. ಆ ದಿಕ್ಕಿನಲ್ಲಿ ಕನ್ನಡಕ್ಕೆ ರಿಷಭ್ ಶೆಟ್ಟಿ, ಸತ್ಯಪ್ರಕಾಶ್ ಇಂದಿನ ಮಾದರಿ.

Tags

Related Articles

Leave a Reply

Your email address will not be published. Required fields are marked *

Language
Close