About Us Advertise with us Be a Reporter E-Paper

Uncategorized

ನಮ್ಮವರ ಖುಷಿಯೇ ನೈಜ ಸಂಭ್ರಮ

• ನರೇಂದ್ರ ಎಸ್. ಗಂಗೊಳ್ಳಿ

ಅಮ್ಮ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಳು. ಅವಳ ಸುತ್ತ ನಾನು, ನಮ್ಮಪ್ಪ, ಮೂರು ಜನ ಅಣ್ಣಂದಿರು, ಇಬ್ಬರು ತಂಗಿಯರು ನಿಂತಿದ್ದೆವು. ಅಮ್ಮನ ಕಣ್ಣಲ್ಲಿ  ಅಮ್ಮ ಕಣ್ಮುಚ್ಚುವುದಕ್ಕೆ ಮುನ್ನ ಕೊನೇ ಮಾತು ಹೇಳಿದಳು. ‘ನಿಮ್ಮೆಲ್ಲರ ಪ್ರೀತಿ ನೋಡಿ ನಂಗೆಷ್ಟು ಖುಷಿಯಾಗ್ತಿದೆ ಗೊತ್ತಾ. ನಾವು ಇದೇ ಥರ ಆಗಾಗ ಒಟ್ಟಾಗಿ ಸೇರುತ್ತಾ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು.!’

ಇದು ಇತ್ತೀಚೆಗೆ ನಾನು ಓದಿದ ಸಣ್ಣ ಕತೆ. ಅದು ಕತೆಯಷ್ಟೇ ಅಲ್ಲ ಅನ್ನೋದು ಸತ್ಯ. ನಿಜ ಅಲ್ವಾ. ಇಂತದ್ದೊಂದು ಪರಿಸ್ಥಿತಿ ನಮ್ಮ ಬದುಕಿನಲ್ಲಿ ಯಾವತ್ತೂ ಬರಬಾರದು. ಹೊಸದೇನನ್ನೋ ಸಾಧಿಸುತ್ತೀನಿ ಎನ್ನುತ್ತಾ ತೀರಾ ಒಂದು ಬದುಕು ಕಟ್ಟಿಕೊಳ್ಳುವ ಭರದಲ್ಲಿ ಕೆಲಸ,  ಸಂಬಳ, ತಿರುಗಾಟ ಎನ್ನುತ್ತಾ ತೀರಾ ಹತ್ತಿರದ ಸಂಬಂಧಗಳನ್ನೇ ದೂರ ವಿಡುತ್ತಾ ಸಾಗುವವರ ಸಂಖ್ಯೆ ಇವತ್ತು ಬಹಳ ದೊಡ್ಡದು. ನಮ್ಮದಲ್ಲದ ಖುಷಿಯನ್ನು ಕಂಡು ಕೊಳ್ಳುವ ಧಾವಂತದಲ್ಲಿ ನಿಜವಾದ ಆತ್ಮ ತೃಪ್ತಿ ನೀಡುವ  ಕೌಟುಂಬಿಕ ಪ್ರೀತಿಯನ್ನು ಸಾಮ ರಸ್ಯಗಳನ್ನು ಮರೆಯುತ್ತಿದ್ದೇವೆ ಎನ್ನುವುದು ವಿಷಾದನೀಯ ಸಂಗತಿ.

ನಮ್ಮನ್ನು ಸಾಕಿ ಸಲುಹಿದ ತಂದೆ ತಾಯಿಗಳಿರಬಹುದು. ಒಡನಾಡಿ ಬೆಳೆದ ಅಕ್ಕ ತಂಗಿ ಅಣ್ಣ ತಮ್ಮಂದಿರಿರಬಹುದು ಅಥವಾ ನಮ್ಮನ್ನು ಮುದ್ದಿನಿಂದ ಲಾಲಿಸುತ್ತಿದ್ದ ನಮ್ಮ ನಗುವಿನಲ್ಲಿ ತಮ್ಮ ಸಂತೋಷವನ್ನು  ಕೊಳ್ಳುತ್ತಿದ್ದ ದೊಡ್ಡಪ್ಪ, ಚಿಕ್ಕಮ್ಮ, ಅತ್ತೆ-ಮಾವ, ಅಜ್ಜ- ಅಜ್ಜಿ, ಗುರುಗಳು ಹೀಗೆ ಯಾರೇ ಆಗಿರಲಿ ಅವರು ಯಾವತ್ತಿಗೂ ಬಯಸು ವಂತಾದ್ದು ನಮ್ಮಿಂದ ಒಂದಷ್ಟು ಅಕ್ಕರೆಯ ಮಾತು. ಕಕ್ಕುಲಾತಿಯ ನೋಟ ಮಾತ್ರ. ಅಷ್ಟು ಮಾತ್ರವನ್ನು ನಾವು ಅವರಿಗೆ ಕೊಡಲಾರೆವು ಎಂದಾದಲ್ಲಿ ನಮ್ಮ ಸಾಧನೆಗಳಿಗೆ ಏನರ್ಥ. ಅವರೊಂದಿಗೆ ಯಾವತ್ತಿಗೂ ಕೂಡ ಒಂದು ನವಿರಾದ ಮತ್ತು ನಿರಂತರವಾದ ಸಂಬಂಧ ವನ್ನು ಇಟ್ಟುಕೊಳ್ಳಿ. ದಿನದಲ್ಲಿ ಒಂದು ಸಣ್ಣ ಸಮಯವನ್ನಾದರೂ ನಾವು ನಮ್ಮ ಆತ್ಮೀಯರಿಗಾಗಿ ಅದರಲ್ಲೂ ವಿಶೇಷವಾಗಿ  ತಾಯಿಗಳಿಗೆ ನೀಡೋಣ. ಹಬ್ಬ ಹರಿದಿನಗಳು ಬಂದಾಗ ಎಲ್ಲರೂ ಸೇರು ವಂತಹ ಸಂದರ್ಭವನ್ನು ಪೊಳ್ಳು ನೆವಗಳನ್ನು ಹೇಳಿ ಖಂಡಿತಾ ತಪ್ಪಿಸಿ ಕೊಳ್ಳಬೇಡಿ. ನಿಜವಾದ ಸಂತೋಷ ಸಿಗುವುದು ನಾವು ನಮ್ಮವರ ಖುಷಿಗೆ ಕಾರಣರಾದಾಗ ಮಾತ್ರ. ಇದು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಪಾಲಿಸೋಣ. ಅಗಲುವವರ ಕಣ್ಣುಗಳಲ್ಲಿ ಯಾವತ್ತೂ ವಿಷಾದವಿರಬಾರದು.

Tags

Related Articles

Leave a Reply

Your email address will not be published. Required fields are marked *

Language
Close