ವಿಶ್ವವಾಣಿ

ಕಿಟೆಲ್ ಕೋಶಕ್ಕೂ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು!

ರ್ಥಕೋಶ ಅಂದಮೇಲೆ ಅದರಲ್ಲಿ ಪದಾರ್ಥ ಇರಲೇಬೇಕಲ್ಲವೇ? ‘ಪದಾರ್ಥ’ ಅಂದರೇನು? ಪದದ ಅಥವಾ ಶಬ್ದದ ಅರ್ಥ. ಹಾಗಾಗಿ ಅರ್ಥಕೋಶವನ್ನು ಶಬ್ದಕೋಶ, ಶಬ್ದಾರ್ಥಕೋಶ ಹೇಳುವುದುಂಟು. ಶಬ್ದಗಳನ್ನು ಅಕಾರಾದಿಯಾಗಿ ಪಟ್ಟಿ ಮಾಡಿ ಅರ್ಥ ಕೊಟ್ಟಿರುತ್ತಾರೆ. ಇಂಥಿಂಥ ಶಬ್ದಕ್ಕೆ ಇಂಥಿಂಥ ಅರ್ಥ ಎಂದು ನಿಘಂಟು (ನಿರ್ಣಯ, ತೀರ್ಮಾನ) ಮಾಡಿರುತ್ತಾರೆ. ಆದ್ದರಿಂದಲೇ ಅದನ್ನು ನಿಘಂಟು ಎನ್ನುತ್ತೇವೆ. ಇಂಗ್ಲಿಷ್‌ನಲ್ಲಿ ಡಿಕ್ಷನರಿ. ಆದರೆ ನಮ್ಮ ಕರಾವಳಿ ಪ್ರದೇಶಕ್ಕೆ ಬನ್ನಿ. ನಮ್ಮಲ್ಲಿ ‘ಪದಾರ್ಥ’ ಅಂದರೆ ಸಾರು ಹುಳಿ ಮುಂತಾದ ಮೇಲೋಗರ. ಅನ್ನದೊಂದಿಗೆ ಕಲಸಿಕೊಂಡು ಉಣ್ಣಲಿಕ್ಕೆ ಸಿದ್ಧಪಡಿಸಿದ ಆಹಾರ ವಿಶೇಷ. ‘ಇವತ್ತು ಊಟಕ್ಕೆ ಎಂಥ ಪದಾರ್ಥ ಮಾಡಿದ್ರಿ?’ ಎಂದು ಪಕ್ಕದ್ಮನೆ ಪಂಕಜಮ್ಮ ಕೇಳಿದರೆ ಪದಾರ್ಥ ಉಳಿದಿತ್ತು, ಅದನ್ನೇ ಮುಗಿಸಿದ್ವಿ’ ಎಂದು ಈಚೆಮನೆ ಈಶ್ವರೀಬಾಯಿಯ ಉತ್ತರ ಸಿದ್ಧವಿರುತ್ತದೆ. ಅಲ್ಲಿ ಪದಾರ್ಥವೆಂದರೆ ಸಾರು, ತೊವ್ವೆ, ಪಲ್ಯ, ಹುಳಿ, ಕಾಯಿರಸ, ಮಜ್ಜಿೆಹುಳಿ, ತಂಬುಳಿ, ಚಟ್ನಿಯಾವುದೂ ಆಗುತ್ತದೆ. ‘ಅನ್ನದೊಂದಿಗೆ ಕಲಸಿಕೊಂಡು’ ಎಂದೆನಾದರೂ ಕೆಲವು ಪದಾರ್ಥಗಳನ್ನು ಅನ್ನದೊಂದಿಗೆ ಕಲಸಿಕೊಳ್ಳಬೇಕಂತಲೂ ಇಲ್ಲ, ಹಾಗೆಯೇ ತಿನ್ನಬಹುದು. ಅವೆಲ್ಲವೂ ಪದಾರ್ಥಗಳೇ. ಈ ಲೇಖನದ ಮಟ್ಟಿಗೆ ಅದೇ ವಿಶಾಲ ಅರ್ಥವನ್ನಿಟ್ಟುಕೊಂಡು ಮುಂದುವರಿಯೋಣ.

ಕೆನಡಾ ದೇಶದ ಡೆನಿಸ್ ವಿಲ್ಲೆನ್ಯೂವ್ ಎಂಬೊಬ್ಬ ಫ್ರೆಂಚ್ ಲೇಖಕ/ಚಿತ್ರನಿರ್ದೇಶಕ ಹೇಳುತ್ತಾನೆ: `I have always been in love with language. My favorite book is a dictionary. I have always loved words.’ ನನ್ನದೂ ಅದೇ ಅಭ್ಯಾಸ. ನನಗೂ ನಿಘಂಟು ಅಂದರೆ ಪಂಚಪ್ರಾಣ. ಅತಿ ನೆಚ್ಚಿನ ಪುಸ್ತಕ. ಯಾವುದೋ ಒಂದು ಶಬ್ದದ ಅರ್ಥ ಕಂಡುಕೊಂಡು ಮುಚ್ಚಿಡುವುದಲ್ಲ, ನಾನು ಕೆಲವೊಮ್ಮೆ ಬಿಡುವಿನ ಸಮಯದ ಸದುಪಯೋಗಕ್ಕಂತಲೇ ನಿಘಂಟು ತೆರೆದು ಒಂದೆರಡು ಪುಟಗಳನ್ನು ಇಡಿಯಾಗಿ, ಅಲ್ಲಿರುವ ಎಲ್ಲ ಪದಗಳ ಅರ್ಥವಿವರಣೆ ವ್ಯುತ್ಪತ್ತಿ ವ್ಯಾಖ್ಯಾನಗಳ ಓದುವುದುಂಟು! ಅದೆಲ್ಲವನ್ನೂ ಅಕ್ಷರಶಃ ನೆನಪಿನಲ್ಲಿಟ್ಟುಕೊಳ್ಳುತ್ತೇನಂತಲ್ಲ, ಆದರೆ ಒಂದೊಂದು ಪದ ಮತ್ತದರ ಪದಾರ್ಥ ಸಹ ನನಗೆ ‘ಅಗೆವ ಬುದ್ಧಿಗೆ ಅನಂತ ಅವಕಾಶ’ ಅಂತನಿಸುತ್ತದೆ. ನನ್ನ ಆಲೋಚನೆಗಳನ್ನು ಹರಿತಗೊಳಿಸುತ್ತದೆ. ಮನಸ್ಸಿಗೆ ಆನಂದ ತಂದುಕೊಡುತ್ತದೆ. ಈ ‘ಚಟ’ ನಿಮ್ಮಲ್ಲೂ ಕೆಲವರಿಗೆ ಈಗಾಗಲೇ ಇರಬಹುದೆಂದುಕೊಂಡಿದ್ದೇನೆ. ಇಲ್ಲವಾದರೂ ಈ ಲೇಖನವನ್ನೋದಿದ ಮೇಲೆ ಹೊಸದಾಗಿ ಅಂಟಿಕೊಳ್ಳಬಹುದು. ಅದು ಸುಲಭವಾಗಲೆಂದು ‘ಅರ್ಥಕೋಶದಲ್ಲಿ ‘ಅಡುಗೆ ಪದಾರ್ಥ’ಗಳೊಂದಿಷ್ಟನ್ನು ನೋಡೋಣ. ಕನ್ನಡದ ಮಹಾನ್ ನಿಘಂಟು ಎನಿಸಿದ, ರೆವರೆಂಡ್ ಫರ್ಡಿನಾಂಡ್ ಕಿಟೆಲ್ ರಚಿಸಿದ, ಮಂಗಳೂರಿನ ಮಿಷನ್ 1894ರಲ್ಲಿ ಪ್ರಕಟಿಸಿದ, ಸುಮಾರು 1800 ಪುಟಗಳ ಬೃಹತ್ ಗ್ರಂಥ ‘ಕನ್ನಡಇಂಗ್ಲಿಷ್’ ಡಿಕ್ಷನರಿಯೇ ನಮಗೆ ಈ ಚಟುವಟಿಕೆಗೆ ಅತ್ಯಂತ ಸೂಕ್ತ ಮತ್ತು ಸಮಂಜಸ ಆಕರ. ನನ್ನ ಬಳಿ ಇದರ ಮುದ್ರಿತ ಪ್ರತಿ ಇಲ್ಲ, ಅಂತರ್ಜಾಲದಿಂದ ಇಳಿಸಿಕೊಂಡಿರುವ ಪಿಡಿಎಫ್ ಇದೆ.

ಕಿಟೆಲ್ ಕೋಶದ 546ನೆಯ ಪುಟವನ್ನು ತೆರೆದರೆ ಅಲ್ಲಿ ‘ಗುಗ್ಗರಿ’ ಎಂಬ ಪದಪದಾರ್ಥ ಕಣ್ಣಿಗೆ ಬೀಳುತ್ತದೆ. ವಿವಿಧ ಧಾನ್ಯಗಳಿಂದ ತಯಾರಿಸುವ ಗುಗ್ಗರಿ (ಗುಗ್ಗುರಿ) ಭಕ್ಷ್ಯ ಬಹುಶಃ ನಿಮಗೆ ಗೊತ್ತೇ ಇರುತ್ತದೆ. ಸಹ ಗುಗ್ಗರಿ ಪದದ ಮೊದಲ ಅರ್ಥವನ್ನು Grain boiled whole or half, dressed, and seasoned’  ಎಂದೇ ಕೊಟ್ಟಿದ್ದಾರೆ. ತೆಲುಗಿನಲ್ಲಿ ‘ಗುಗ್ಗಿಳ್ಳು’, ಮರಾಠಿಯಲ್ಲಿ ‘ಘುಗರೀ’, ತಮಿಳಿನಲ್ಲಿ ‘ಸುಂಡಲ್’ ಸಮಾನಾರ್ಥಕ ಪದಗಳೆಂದು ನಮೂದಿಸಿದ್ದಾರೆ. ಮಗುವಿಗೆ ಹೆಸರಿಡುವ ಸಂದರ್ಭದಲ್ಲಿ ‘ಗುಗ್ಗರಿ’ ಮಾಡುತ್ತಾರೆ ಎಂಬ ವಿಚಾರವೂ ಕಿಟೆಲ್‌ಗೆ ಗೊತ್ತಿದೆ. ‘ಬಂಧು ಬಳಗವು ಕೂಡಿ ಹೊಂದಿ ಜೋಗುಳ ಹಾಡಿ ಹಿಂದೆ ಸತ್ತವರ ಹೆಸರಿಟ್ಟು ಗುಗ್ಗರಿ ತಿಂದು ಕೂಸಂ ತೂಗುವರು’ ಎಂಬ ಸರ್ವಜ್ಞ ವಚನವೊಂದನ್ನೂ ದಾಖಲಿಸಿದ್ದಾರೆ. ನಮಗೆ ಐದನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ‘ನೂಲೊಲ್ಲ್ಯಾಕ ಚೆನ್ನೀ’ ಜನಪದ ಗೀತೆ ಬಹುಶಃ ಕಿಟೆಲ್‌ಗೆ ಗೊತ್ತಿರಲಿಲ್ಲ. ಗೊತ್ತಿರುತ್ತಿದ್ದರೆರಾಟೆ, ಕದರ, ಚಿಲ್ಲು, ಕಟ್ಟೆ ಇವನ್ನೆಲ್ಲ ಮಾಡಿಸಿಕೊಟ್ಟ ಮೇಲೂ ಗಂಡನ ಬಳಿ ‘ಗುಗ್ಗುರಿಲ್ಲೋ ಜಾಣಾ ಗುಗ್ಗುರಿಲ್ಲೋ ಜಾಣಾ’ ಎನ್ನುವ ಚೆನ್ನಿ, ಮತ್ತು ‘ಗೋದಿ ಕಡಲಿ ತರಿಸಿ ಗುಗ್ಗುರಿ ಹಾಕಿಸಿ ಕೊಟ್ಟ’ ಗಂಡನ ಬಗ್ಗೆಯೂ ಖಂಡಿತ ಉಲ್ಲೇಖಿಸುತ್ತಿದ್ದರು. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ವರ್ಷದಲ್ಲೊಮ್ಮೆ ಹೊಲಗಳಲ್ಲಿಯೇ ಗುಗ್ಗರಿ ಆಚರಣೆ ಇರುತ್ತದೆ. ಮೆಣಿಸಿನ ಗಿಡಗಳಿಗೆ ಎಲೆ ಮುರುಟುವ ರೋಗ ತಗುಲಿದಾಗ ಅದರ ನಿವಾರಣೆಗಾಗಿ ಐದು ಬಗೆಯ ಧಾನ್ಯ(ಗೋಧಿ, ಜೋಳ, ಕಡ್ಲೆ, ಹೆಸರು, ಅಲಸಂಡೆ)ಗಳನ್ನು ಉಪ್ಪು ಹಾಕಿ ಹೊಲದಲ್ಲಿಯೇ ಕುದಿಸಿ ಗುಗ್ಗರಿ ತಯಾರಿಸುತ್ತಾರೆ. ನಾಲ್ಕು ಪ್ರತ್ಯೇಕ ಚಿಕ್ಕ ಅರಿವೆಗಳನ್ನು ತೆಗೆದುಕೊಂಡು, ಕುದಿಸಿದ ಕಾಳುಗಳನ್ನು ಅವುಗಳಲ್ಲಿ ಕಟ್ಟಿ, ಬೇರೆಬೇರೆ ದಿಕ್ಕಿಗಿರುವ ಮೂರು ಮೆಣಸಿನಗಿಡಗಳಿಗೆ (ಮೂರು ದಿಕ್ಕಿಗೆ) ಕಾಳಿನ ಒಂದೊಂದು ಗಂಟನ್ನು ಕಟ್ಟಿ ನಾಲ್ಕನೆಯದನ್ನು ಹೊಲದ ಮಧ್ಯದಲ್ಲಿ ಒಂದು ಗಿಡಕ್ಕೆ ಕಟ್ಟುತ್ತಾರೆ. ಹೀಗೆ ಇನ್ನೊಂದು ದಿಕ್ಕಿನಿಂದ ರೋಗ ಹೊರಟು ಹೋಗುವುದೆಂಬ ಭಾವನೆ ಜನಪದರಲ್ಲಿವೆ. ಆಮೇಲೆ, ಗಿಡಗಳಿಗೆ ಕಟ್ಟಿದ ಗಂಟುಗಳನ್ನು ಬಿಟ್ಟು ಉಳಿದ ಗುಗ್ಗರಿಗಳನ್ನು ಕುಟುಂಬದ ಮಂದಿಯೆಲ್ಲ ಹೊಲದಲ್ಲಿಯೇ ತಿನ್ನುತ್ತಾರೆ. ಸೋಲಾಪುರದಲ್ಲಿರುವ ಕನ್ನಡಿತಿ ಉಷಾ ಆಳಂದ ಒಮ್ಮೆ ಅವರದೇ ಹೊಲದ ಗುಗ್ಗರಿ ಹಬ್ಬದ ಚಿತ್ರಗಳನ್ನು ನನಗೆ ಕಳಿಸಿದ್ದರು.

ಗುಗ್ಗರಿ ಪದದ ಎರಡನೆಯ ಅರ್ಥ ‘ರೋಮಾಂಚ, ರೋಮಹರ್ಷಣ, ಮೈಯ ಕೂದಲೆಲ್ಲ ನಿಮಿರುವುದು ಅಂದರೆ ಗುಗ್ಗರಿಸಿಕೊಳ್ಳುವುದು’ ಎಂದು ಕಿಟೆಲ್ ವಿವರಿಸುತ್ತಾರೆ. ಮೂರನೆಯ ಅರ್ಥವೂ ಸ್ವಾರಸ್ಯಕರವಾಗಿದೆ. ಗುಗ್ಗರಿಗೋಲು ಅಂತ ಶಿಕ್ಷೆಯ ವಿಧಾನವಂತೆ. ಶಾಲೆಯಲ್ಲಿ ಗಂಡುಮಕ್ಕಳಿಗೆ ಆ ಶಿಕ್ಷೆ ವಿಧಿಸುವುದು ಆ ಕಾಲದಲ್ಲಿ ಸಾಮಾನ್ಯವಾಗಿತ್ತಂತೆ. ನೆಲದ ಮೇಲೆ ಕುಳಿತುಕೊಂಡ ಭಂಗಿಯಲ್ಲಿ ಕೈಗಳೆರಡನ್ನೂ ಕಾಲುಗಳ ನಡುವಿಂದ ಮೊಣಕಾಲಿನ ಮೇಲಕ್ಕೆ ತಂದು ಕಟ್ಟುವುದು, ಆ ಗಂಟಿನ ಕೆಳಗೆ ಒಂದು ಚಿಕ್ಕ ಕೋಲನ್ನು ಮೊಣಕಾಲುಗಳಿಗೆ ತಾಗುವಂತೆ ಇಡುವುದು. ಒಟ್ಟಿನಲ್ಲಿ ಅತ್ತಿಂದಿತ್ತ ಅಲ್ಲಾಡದಂತೆ ಮಾಡುವುದು. ಅಂತಹ ಶಿಕ್ಷೆಯನ್ನು ಅನುಭವಿಸಲಿಕ್ಕೂ ಸಿದ್ಧ, ಆದರೆ ಪೋಕ್ರಿ ಮಾಡುವುದನ್ನಂತೂ ಬಿಡೆವು ಎನ್ನುತ್ತಿದ್ದರೋ ಏನೋ ಆ ಹುಡುಗರು, ಗುಗ್ಗರಿ ತಿಂದು ಬೆಳೆದ

ಒಂದು ಪದದ ಬೆನ್ನತ್ತಿ ಹೋದರೆ ನಮಗೆ ಏನೇನೆಲ್ಲ ಹೊಸಹೊಸ ವಿಚಾರಗಳು ತಿಳಿಯುತ್ತವೆ ಎಂದು ಒಳ್ಳೆಯ ಉದಾಹರಣೆಯಾಗಿ ‘ಗುಗ್ಗರಿ’ಯನ್ನು ಆಯ್ದುಕೊಂಡದ್ದು. ಆದರೆ ಗುಗ್ಗರಿ ಮಾತ್ರವಲ್ಲ, ಕನ್ನಡನಾಡಿನ ವಿವಿಧ ತಿಂಡಿತಿನಸುಗಳೆಲ್ಲವನ್ನೂ ಕಿಟೆಲ್ ಕೋಶದಲ್ಲಿ ದಾಖಲಿಸಿದ್ದಿದೆ. ರೊಟ್ಟಿ, ಮುದ್ದೆ, ಚಪಾತಿ, ಅನ್ನ, ಅವುಗಳಿಗೆ ವ್ಯಂಜನವಾಗಿ ಬಗೆಬಗೆಯ ಸಾರುಗಳು, ಗೊಜ್ಜು, ಪಚ್ಚಡಿ, ಬಜ್ಜಿ, ಕುಸುಮ್ಬರಿ (ಕೋಸುಂಬ್ರಿ), ಪಳದ್ಯ, ಸಾಮ್ಬಾರು ಮುಂತಾದುವೆಲ್ಲದರ ವಿವರಗಳಿವೆ. ಇವುಗಳನ್ನು ತಯಾರಿಸುವುದಕ್ಕೆ ಹುಣಸೆಹಣ್ಣು, ಜೀರಿಗೆ, ಹಸಿಮೆಣಸಿನಕಾಯಿ ಇತ್ಯಾದಿ ಉಪಯೋಗವಾಗುತ್ತವೆಂದು ಕಿಟೆಲ್ ವಿವರಿಸುತ್ತಾರೆ. ವಿಧಾನಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರುವುದೂ ಗೊತ್ತಾಗುತ್ತದೆ. ಉದಾಹರಣೆಗೆ, ಚಪಾತಿ ಅಂದರೆ ‘”a cake fl attened with the hand without a roller’ ಎಂದು ಕಿಟೆಲ್ ವಿವರಣೆ. ಆದರೆ ಲಟ್ಟಣಿಗೆಯಿಲ್ಲದೆ ಕೈಯಿಂದಲೇ ತಟ್ಟಿ ಮಾಡುವುದನ್ನು ನಾವು ಚಪಾತಿ ಎನ್ನುವುದಿಲ್ಲವಲ್ಲ? ರೊಟ್ಟಿಯ ವೈವಿಧ್ಯಗಳನ್ನೂ ಕಿಟೆಲ್ ತಿಳಿಸಿದ್ದಾರೆ. ಉತ್ತರ ಕರ್ನಾಟಕದವರು ಮಾಡುವ ಜೋಳದ ರೊಟ್ಟಿಗೂ, ಮೈಸೂರಿನ ಕಡೆ ಮಾಡುವ ರಾಗಿಯ ರೊಟ್ಟಿಗೂ ಬಹಳ ವ್ಯತ್ಯಾಸವಿದೆ. ಜೋಳದ ಹಿಟ್ಟಿಗೆ ಕುದಿಸಿದ ನೀರನ್ನು ಹಾಕಿ, ಚನ್ನಾಗಿ ಒಣ ಹಿಟ್ಟು ಹಾಕಿ ಅಂಗೈಯಿಂದ ಹಪ್ಪಳದ ರೀತಿ ತೆಳುವಾಗಿ ಬಡಿದು ಹೆಂಚಿಗೆ ಹಾಕಿ ಜೋರಾಗಿ ಉರಿ ಹಚ್ಚಿ ಸುಡುತ್ತಾರೆ. ಇಲ್ಲವೇ, ಕೆಂಡದ ಮೇಲೂ ರೊಟ್ಟಿ ಸುಟ್ಟು ‘ಕೆಂಡದ ರೊಟ್ಟಿ’ ಮಾಡುತ್ತಾರೆ. ಬ್ರಾಹ್ಮಣರು ರೊಟ್ಟಿಗೆ ‘ಭಕ್ಕರಿ’ ಎಂಬ ಪದ ಬಳಸುತ್ತಾರೆ. ಕಿಟೆಲ್ ಅದನ್ನೂ ದಾಖಲಿಸಿದ್ದಾರೆ. ಮೈಸೂರು ಕಡೆ ರಾಗಿ ಹಸಿಹಿಟ್ಟಿಗೆ ಚಿಕ್ಕದಾಗಿ ಈರುಳ್ಳಿ, ಹಸಿಮೆಣಸಿನಕಾಯಿ ಹೆಚ್ಚಿ ಅಂಗೈಯ ದಪ್ಪದಷ್ಟು ತಟ್ಟಿ ಎಣ್ಣೆ ಸುರಿದು ಚನ್ನಾಗಿ ಬೇಯಿಸುತ್ತಾರೆ. ಅದೇ ರಾಗಿ ರೊಟ್ಟಿ. ಜೊತೆ ನಂಚಿಕೊಳ್ಳುವ ‘ತೊಕ್ಕು’ ಮಾಡುವ ವಿಧಾನದ ಬಗ್ಗೆ ಕಿಟೆಲ್ ಹೀಗೆ ಬರೆದಿದ್ದಾರೆ: ‘ಮೆಣಸಿನಕಾಯಿ ಮತ್ತು ಉಪ್ಪು ಎರಡನ್ನೂ ಎಲೆ ಅಥವಾ ಹಣ್ಣುಗಳೊಂದಿಗೆ ಸೇರಿಸಿ ಕುಟ್ಟಿ ಸ್ವಲ್ಪ ನೀರು ಹಾಕಿ ಬೇಯಿಸಿ ತಯಾರಿಸಿದ ಪದಾರ್ಥ. ಯಾವ ಥರದ ಎಲೆ ಅಥವಾ ಹಣ್ಣು ಎಂದು ತಿಳಿಸಿಲ್ಲ. ನಮ್ಮೂರಲ್ಲಿ ಹೆಚ್ಚಾಗಿ ಮಾವಿನಕಾಯಿಯ ತೊಕ್ಕು ಮಾಡುತ್ತೇವೆ. ಇಂಗಿನ ಒಗ್ಗರಣೆ ಘಮಘಮ ನೆನಪಿಸಿಕೊಂಡರೆ ಈಗಲೇ ಬಾಯಿಯಲ್ಲಿ ನೀರೂರುತ್ತದೆ.

ಪಳದೆ’ ಎಂಬ ಪದಕ್ಕೆ ಕಿಟೆಲ್ ಪ್ರಕಾರ ಉತ್ತರ ಮಾಡುವ ಮಜ್ಜಿಗೆ ಸಾರು ಎಂದು ಅರ್ಥ. ಸಾಮಾನ್ಯವಾಗಿ ಇದಕ್ಕೆ ಯಾವುದೇ ಬಗೆಯ ತರಕಾರಿಯನ್ನು ಸೇರಿಸುವುದಿಲ್ಲ. ಕರಾವಳಿ ಮತ್ತು ಮಲೆನಾಡುಗಳಲ್ಲಿ ‘ಪಳದ್ಯ’ ಎನ್ನುತ್ತಾರೆ. ಇದಕ್ಕೆ ತರಕಾರಿ ಸೇರಿಸುತ್ತಾರೆ. ಮಜ್ಜಿಗೆ ಪಳದ್ಯಕ್ಕೆ ‘ತೇವನ’ ಎಂಬ ಪದವನ್ನೂ ಕಿಟೆಲ್ ತಿಳಿಸಿದ್ದಾರೆ. ಬದನೆಕಾಯಿ ಎಣ್ಣೆಗಾಯಿಯ ವಿವರ ಕಿಟೆಲ್ ಕೊಟ್ಟಿರುವುದು ಹೀಗೆ:  Brinjals fi lled with condiments and boiled in oil and a little water.  ಇನ್ನು, ಬದನೆಕಾಯಿಯ ಬಜ್ಜಿ (ಭರ್ತಾ ಎನ್ನುತ್ತೇವೆ, ಮಾಡುವ ವಿಧಾನದ ಬಗ್ಗೆ ಕಿಟೆಲ್ ಕೊಟ್ಟಿರುವ ಮಾಹಿತಿ: ‘ಇಡೀ ಬದನೆಕಾಯಿಯನ್ನು ಸುಟ್ಟು ಮೇಲಿನ ಸಿಪ್ಪೆ ಸುಲಿದು ಕೈಯಿಂದ ಅದನ್ನು ಚನ್ನಾಗಿ ಹಿಸುಕಿ ಉಪ್ಪು, ಮೆಣಸಿನಕಾಯಿ ಇತ್ಯಾದಿಗಳನ್ನು ಬೆರೆಸಿ ಆಮೇಲೆ ಮೊಸರು ಸೇರಿಸುತ್ತಾರೆ.’ ಪ್ರಯಾಣಕಾಲದಲ್ಲಿ ಬುತ್ತಿಯಂತೆ ಕಟ್ಟಿಕೊಂಡು ಹೋಗಲಿಕ್ಕಾಗುವ ‘ಕಲಸನ್ನ’ವನ್ನೂ, ಅಕ್ಕಿಯನ್ನು ತುಪ್ಪ ಮತ್ತು ಹಾಲಿನೊಂದಿಗೆ ಕುದಿಸಿ ಆಮೇಲೆ ಮೊಸರು ಸೇರಿಸಿದಾಗ ಸಿಗುವ ‘ಬಕಾಳಾಭಾತು’ವನ್ನೂ ಕಿಟೆಲ್ ವಿವರಿಸಿದ್ದಾರೆ. ಬೇಳೆ ಕಾಳುಗಳನ್ನು ಕುದಿಸಲು ಎಸರು ಇಡುವ ಕ್ರಿಯೆಯಿಂದ ಹಿಡಿದು ಒಗ್ಗರಣೆ ಹಾಕಲಿಕ್ಕೆ ಎಲ್ಲ ಸಾಮಗ್ರಿಗಳ ವಿವರಣೆ ಇದೆ. ಉಣ್ಡಲಿಗೆಯನ್ನು ಉತ್ತರ ಕರ್ನಾಟಕದಲ್ಲಿ ಜೋಳದ ಹಿಟ್ಟಿನಿಂದ, ಮಲೆನಾಡುಕರಾವಳಿಗಳಲ್ಲಿ ಅಕ್ಕಿಹಿಟ್ಟಿನಿಂದ ಮಾಡುತ್ತಾರೆ ಎಂದಿದೆ. ಆಮವಡೆ ಅಥವಾ ಆಮ್ಬೋಡೆಯ ವಿವರಣೆ–  diff erent split pulse soaked in water, strained, ground in a mortar till solid mixed with spices and then fried in ghee or oil as cakes and soaked in curdled milk ಎಂದು ಓದಿದಾಗ ನಾಲಗೆಯ ಮೇಲೆ ಕುಣಿದಾಡಿತೇನೋ ಅಂತನಿಸುತ್ತದೆ. ಹಾಗೆಯೇ ಮೈಸೂರ ಕಡೆಗೆ ಮಾಡುವ ಮುಚ್ಚೋರೆಯ ವಿವರಣೆ– ‘ಅಕ್ಕಿ ಮತ್ತು ಹೆಸರಿನ ಹಿಟ್ಟಿಗೆ ಉಪ್ಪು ಮತ್ತು ಜೀರಿಗೆ ಸೇರಿಸಿ ಸ್ವಲ್ಪ ನೀರು ಹಾಕಿ ನಾದಿಕೊಂಡು ಚಕ್ಕುಲಿ ಮಾಡುವ ಒತ್ತಳ್ಳಿನಲ್ಲಿ ಹಿಟ್ಟು ಇಟ್ಟು, ಎಣ್ಣೆ ಅಥವಾ ತುಪ್ಪದ ಬಾಣಲೆಯಲ್ಲಿ ದಾರದ ರೀತಿಯಲ್ಲಿ ಒತ್ತಿ ಕರಿದು ತೆಗೆಯಬೇಕು. ಗಾರಿಗೆ, ಚಕ್ಕುಲಿ, ಬೋಣ್ಡಾ, ಪೂರಿ, ತೂತಪ್ಪಚ್ಚಿ, ಗಿಣ್ಣ, ಜಿಲಿಬಿಲಿ, ಎರೆಯಪ್ಪ, ಪಂಚಕಜ್ಜಾಯ, ಚಿಗಳಿ, ತಂಬಿಟ್ಟು, ಹೋಳಿಗೆಯಾವುದನ್ನೂ ಕಿಟೆಲ್.

ಹೋಳಿಗೆಯ ಪ್ರಸ್ತಾವ ಬಂದಿದ್ದರಿಂದ ಈಗ ಕಿಟೆಲ್ ಮಹಾಶಯರನ್ನು ಬಿಟ್ಟು, ನಮ್ಮವರೇ ಆದ ಪಾ. ವೆಂ. ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಪುಸ್ತಕದ ಪುಟ ತೆರೆಯಬೇಕು. ಅದರಲ್ಲಿ ಅವರು ಹೋಳಿಗೆಯ ಜನ್ಮ ಜಾಲಾಡಿಸಿದ್ದಾರೆ. ಪಾ.ವೆಂ ಬರೆಯುತ್ತಾರೆ: ‘ವಾಸ್ತವಿಕವಾಗಿ ಹೆಚ್ಚಿನ ಕೋಶಗಳಲ್ಲಿ ‘ಹೋಳಿಗೆ’ ಪದಕ್ಕೆ ಇರುವ ಅರ್ಥ ಮೈಯಲ್ಲಿ ಏಳುವ ಗುಳ್ಳೆ, ಹುಗುಳು ಎಂದಲ್ಲದೆ ಸಿಹಿತಿಂಡಿಯೆಂದಲ್ಲ. ಚನ್ನಬಸವಣ್ಣನ ಒಂದು ವಚನದಲ್ಲಿ ಕಡುಬು, ಕಜ್ಜಾಯಗಳೊಡನೆ ಹೋಳಿಗೆಯೂ ಪ್ರಸ್ತಾವಿಸಲ್ಪಟ್ಟಿದೆಯಾದ್ದರಿಂದ 12ನೆಯ ಶತಮಾನದಲ್ಲಿ ಅದು ಪ್ರಚಲಿತ ತಿಳಿಯುತ್ತದೆ. 13ನೆಯ ಶತಮಾನದ ಜೈನ ಕಾವ್ಯ ಶಾಂತೀಶ್ವರ ಪುರಾಣದಲ್ಲಿ ಅಂಗರ ಹೋಳಿಗೆಯ ಉಲ್ಲೇಖವಿದೆ. ಅದರ ಸಂಸ್ಕೃತ ರೂಪ ಅಂಗಾರ ಸ್ಫೋಟಿಕಾ. ಅಂದರೆ, ಕೆಂಡದಲ್ಲಿ ಸುಟ್ಟ ಉಬ್ಬುರೊಟ್ಟಿ. ಸಂಸ್ಕೃತ ಕೋಶಗಳಲ್ಲಿ ಅಂಗಾರ ಸ್ಫೋಟಿಕಾ ಎಂಬ ತಿಂಡಿಯ ಸುದ್ದಿ ಇಲ್ಲ. ಅಲ್ಲಿ ಕೂಡ ಸ್ಫೋಟಿಕಾ ಎಂದರೆ ಗುಳ್ಳೆ ಎಂದೇ ಅರ್ಥ. ಅಂಗರ ಹೋಳಿಗೆ ಈಗಿನ ಹೂರಣದ ಸಿಹಿ ತಿಂಡಿಯೇ ಆಗಿತ್ತೋ ಬರೀ ಉಬ್ಬುರೋಟ್ಟಿಯೋ ತಿಳಿಯದು. ಹುಣ್ಣಿಮೆಯ ಚಂದ್ರನಂತೆ ಅದು ಬೆಳ್ಳಗೆ ಮತ್ತು ಶಾಂತೀಶ್ವರ ಪುರಾಣದ ಹೇಳಿಕೆ. ಚನ್ನಬಸವಣ್ಣನ ವಚನದಿಂದಾಗಿಯಷ್ಟೇ ಅದು ಸಿಹಿ ಭಕ್ಷ್ಯವೆಂದು ಊಹಿಸಬಹುದು. ಸ್ಫೋಟಿಕಾ ಅಂದರೆ ಉಬ್ಬಲು, ಸುಟ್ಟು ಅಥವಾ ಕಾದು ಉಬ್ಬಿದ್ದು. ಅದೇ ಪೋಳಿಗೆ, ಹೋಳಿಗೆ. ಮರಾಠಿಯ ಪೋಳಿ ಅದೇ ಗೋತ್ರದ್ದು. ನಾದಿದ ಹಿಟ್ಟಿನ ಉಂಡೆಯೊಳಗೆ ಹೂರಣ ತುಂಬಿಸಿ ಲಟ್ಟಿಸಿ ಅಥವಾ ತಟ್ಟಿ ಹೆಂಚಿನಲ್ಲಿ ಬೇಯಿಸುವ ವಿಧಾನ ಆಮೇಲೆ ಸೇರಿಕೊಂಡದ್ದು. ಹೂರಣ ಎಂದರೆ ಸಂಸ್ಕೃತದಲ್ಲಿ ಪೂರಣ (ತುಂಬುವುದು ಎಂದರ್ಥ). ಇದು ಎಳ್ಳು, ಸಕ್ಕರೆ, ಕಡಲೆ, ಹೆಸರು ಬೇಳೆಯದು. ರವೆ, ಕಲಸಿದ ತೆಂಗಿನತುರಿ ಇತ್ಯಾದಿ ಯಾವುದೇ ಆಗಬಹುದೆಂದು ಆಧುನಿಕ ಪಾಕಶಾಸ್ತ್ರಜ್ಞರ ಆವಿಷ್ಕಾರ. ಹೋಳಿಗೆಗೆ ಸಂಬಂಧಿಸಿದ ಶಬ್ದಗಳು ಸಂಸ್ಕೃತಪ್ರಾಕೃತ ಮೂಲವಾಗಿದ್ದರೂ ಅದರ ಬೆಳವಣಿಗೆಯೆಲ್ಲ ಕರ್ನಾಟಕದಲ್ಲಿ ಆದಂತೆ ಕಾಣುತ್ತದೆ. ತೆಲುಗಿಗೂ ‘ಪೋಳಿ’ ಹೋಗಿದೆ. ಅದು ಕನ್ನಡದಿಂದಲೇ ಬಂತೆಂದು ತೆಲುಗು ಕೋಶ ಹೇಳುತ್ತದೆ. ಆದರೆ ಕರ್ನಾಟಕದ ಸೀಮೆಯೊಳಗೇನೇ ಹಳೇ ಮೈಸೂರಿನಲ್ಲಿ ಹೋಳಿಗೆಯನ್ನು ಹೋಲುವ ಒಬ್ಬಟ್ಟು ಇದೆ. ಇದಕ್ಕೆ ತೊಗರಿಬೇಳೆಯ ಹೂರಣ. ಒಬ್ಬಟ್ಟು ತೆಲುಗಿನಲ್ಲಿ ಬಬ್ಬಟ್ಲು ಆಗಿದೆ.’

ನಿಘಂಟುಗಳ ವಿಚಾರ ಅಂದಮೇಲೆ ನಮ್ಮೊಡನಿರುವ ನೂರೈದರ ಹೈದ ವೆಂಕಟಸುಬ್ಬಯ್ಯನವರನ್ನು ಮರೆಯಲಾದೀತೇ? ಅವರು ‘ದೋಸೆ’ಯನ್ನು ಕುರಿತು ಬರೆದಿರುವ ಒಂದು ಟಿಪ್ಪಣಿ ಇಲ್ಲಿ ಉಲ್ಲೇಖನೀಯ. ‘ದೋಸೆ ಎಂಬುದು ದೇಶಿ ಶಬ್ದ. ತಮಿಳಿನಲ್ಲಿ ದೋಸ, ಕನ್ನಡದಲ್ಲಿ ದೋಸೆ. ಈ ಶಬ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ನೀಡಿರುವ ಅರ್ಥ ಹೀಗಿದೆ: ಅಕ್ಕಿ ಹಾಗೂ ಉದ್ದು ಅಥವಾ ಬೇರೆ ಧಾನ್ಯಗಳನ್ನು ಒಂದು ಪ್ರಮಾಣದಲ್ಲಿ ನೆನೆಸಿಟ್ಟು ಆಮೇಲೆ ರುಬ್ಬಿ ಹಿಟ್ಟು ಹುಳಿಯಾದ ಮೇಲೆ ಹೆಂಚಿನ ಮೇಲೆ ಹೊಯ್ದು ಬೇಯಿಸಿ ಮಾಡುವ ಒಂದು ಬಗೆಯ ಖಾದ್ಯ. ಓದಿದಾಗ ದೋಸೆಯ ಬಗ್ಗೆ ನಮಗೆ ಸಂಪೂರ್ಣ ಪರಿಚಯ ಆದಂತೆಯೇ ಅನಿಸುತ್ತದೆ ಅಲ್ಲವೇ? ಹೌದು. ಅದಕ್ಕೆ ಕಾರಣ ನಮಗೆ ದೋಸೆ ಚನ್ನಾಗಿ ಗೊತ್ತು. ಪ್ರತಿವಾರವೂ ತಿನ್ನುತ್ತೇವೆ. ದಿನಕ್ಕೆರಡು ಬಾರಿ ತಿನ್ನುವವರೂ ಉಂಟು. ಆದ್ದರಿಂದ ಅದರ ಬಗ್ಗೆ ಹೆಸರು ಹೇಳಿದರೇ ಸಾಕು, ಯಾರೂ ಅದರ ಅರ್ಥವನ್ನು ತಿಳಿಸಿ ಕೊಡಬೇಕಾಗಿಲ್ಲ. ಆದರೆ ದೋಸೆಯನ್ನು ನೋಡದವರಿಗೆ ಇದರ ಪರಿಚಯ ಮಾಡಿಕೊಡುವುದು ಹೇಗೆ? ಈಚೆಗೆ ಪ್ರಕಟವಾದ ಒಂದು ಇಂಗ್ಲಿಷ್ ನಿಘಂಟಿನಲ್ಲಿ ವಿವರಿಸಿರುವ ರೀತಿಯನ್ನು ನೋಡಿ. Dosa: One of the breads of the South India. Rice and dal fl ours, self-fermented, in shape like a thin Chapati, perhaps twelve inches or more in diameter. Cooked on a hot-plate with one side crisp and golden. Often folded over a vegetable fi lling. (See also Idli).

ನೋಡಿದಿರಾ? ಇದೇ ನಮಗೂ ನಿಘಂಟುಕಾರರಿಗೂ ಇರುವ ನಾವಾದರೋ ಹಸಿವಾದೊಡೆ ಸಿಕ್ಕಿದ್ದನ್ನು ಮುಕ್ಕುತ್ತೇವೆ. ಆ ತಿನಿಸನ್ನು ಮಾಡುವ ವಿಧಾನವಾಗಲೀ, ಅದರ ಹೆಸರು ಯಾವ ಭಾಷೆಯಲ್ಲಿ ಹುಟ್ಟಿಕೊಂಡು ಯಾವ ಭಾಷೆಗೆ ಹರಿಯಿತು ಮುಂತಾದ ಸ್ವಾರಸ್ಯಗಳಾಗಲೀ ನಮಗೆ ಗೊತ್ತಿರುವುದಿಲ್ಲ, ತಿಳಿದುಕೊಳ್ಳುವ ಆಸಕ್ತಿ ವ್ಯವಧಾನಗಳೂ ನಮಗಿರುವುದಿಲ್ಲ. ನಿಘಂಟುಕಾರರು ಹಾಗಲ್ಲ. ಅವರು ಪ್ರತಿಯೊಂದನ್ನೂ ಬಿಡಿಸಿ ಬಿಡಿಸಿ ವಿವರಿಸಬೇಕಾಗುತ್ತದೆ. ನಾವೆಲ್ಲ ಅವರ ಸಮಾನರಲ್ಲ ನಿಜ. ಆದರೆ ನಿಘಂಟು ಎಂಬ ನಿಧಿ ನಮ್ಮ ಕೈಯಲ್ಲಿದ್ದೂ ಅದರ ಮೌಲ್ಯ ಮಹತ್ತ್ವ ಗೊತ್ತಿಲ್ಲದಿರುವುದು ಒಳ್ಳೆಯದಲ್ಲ. ತಿಂಡಿತಿನಿಸನ್ನು ಇಲ್ಲಿ ಬರೀ ಉದಾಹರಣೆಯಾಗಿಯಷ್ಟೇ ಆಯ್ದುಕೊಂಡದ್ದು. ಸರ್ವತೋಮುಖ ಜ್ಞಾನಾಭಿವೃದ್ಧಿಗೆ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು, ಅಲ್ಲವೇ? ಹಾಗಾಗಿ, ಉತ್ತಮವಾದೊಂದು ನಿಘಂಟಿನೊಂದಿಗೆ ನಮ್ಮ ಸಖ್ಯ ಮೊಳೆಯಲಿ. ಪ್ರತಿದಿನವೂ ಅದನ್ನೊಮ್ಮೆ ತೆರೆದು ನೋಡುವ ಅಭ್ಯಾಸ ಬೆಳೆಯಲಿ. ಭಾಷೆಬಳಕೆ ತಿಳಿವಳಿಕೆಯ ತೇಜಸ್ಸಿನಿಂದ ನಮ್ಮ ಪ್ರಭಾವಲಯ ಇನ್ನಷ್ಟು ಬೆಳಗಲಿ.