About Us Advertise with us Be a Reporter E-Paper

ಗುರು

ಅಧ್ಯಾತ್ಮಿಕ ಅಭ್ಯುದಯದ ಜೀವ ಸ್ವರ ವಿಜಯದಾಸರು

- ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ಪ್ರದಾಯಕಂ
ವಿಜ್ಞಾನ ವಿಮಲಂ ಶಾಂತಂ ವಿಜಯಾರ್ಯ ಗುರುಂ ಭಜೇ॥
ವೇದೇತಿಹಾಸ ಪುರಾಣಗಳ ಮಥಿತಾರ್ಥವದ ಈಶ ದಾಸರ ಸ್ವರೂಪ ಹಾಗೂ ಅನುಬಂಧ, ಇಬ್ಬರನ್ನು ಜೋಡಿಸುವ ಭಕ್ತಿಮಾರ್ಗವನ್ನು ಮೊದಲ ಬಾರಿಗೆ ಪ್ರಸ್ತುತಪಡಿಸಿದವರು ಶ್ರೀ ಮಧ್ವಾಚಾರ್ಯರು. ಇವರ ಸ್ಪೂರ್ತಿ, ಅನುಕರಣೆ, ಅನುಸರಣೆ, ಅನುಗ್ರಹಾದಿಗಳಿಂದ ಹುಟ್ಟಿದ್ದು ‘ಹರಿದಾಸ ಸಾಹಿತ್ಯ’. ಈ ಸಾಹಿತ್ಯವನ್ನು ಜಗತ್ತಿಗೆ ನೀಡಿದವರು ಹರಿದಾಸವರ್ಯರು. ಭವ್ಯತೆ ಸಾರಿದ ಮೊದಲ ಪ್ರವರ್ತಕರು ಶ್ರೀಪುರಂದರದಾಸರ ಬಳಿಕ ಐದು ಶತಮಾನಗಳ ಪರಂಪರೆಯುಳ್ಳ ಸಾಹಿತ್ಯದ ಕೇಂದ್ರಬಿಂದು ಶ್ರೀವಿಜಯದಾಸ (1682ರಿಂದ 1755)ರೆಂದರೆ ತಪ್ಪಾಗದು.

ತಾಳಿಕೋಟೆ ಯುದ್ಧದ ನಂತರ ಸಾಮಾಜಿಕ ವಿಘಟನೆಯಾದ ಸಂದರ್ಭದಲ್ಲಿ ಉದಯಿಸಿ ಹರಿದಾಸ ಚತುಷ್ಟಯರೆಂದು ಪ್ರಸಿದ್ಧರಾದ ಪುರುಷರಲ್ಲಿ ಎರಡನೆಯವರು ವಿಜಯದಾಸರು. ದಾಸರ ಜೀವನವೇ ಒಂದು ಅದ್ಭುತ ಪವಾಡದಂತಿದೆ. ಅತಿ ಬಡ ಜೀವನವನ್ನು ಸಾಗಿಸಿ ಅತಿ ಎತ್ತರಕ್ಕೆ ಬೆಳೆದ ಧೀಮಂತ ಪುರುಷರು. ನಿರರ್ಥಕ ಜೀವನವನ್ನು ಸಮರ್ಥ, ಸಾರ್ಥಕವನ್ನಾಗಿಸಿ, ಉನ್ನತ ಸ್ಥಾನ ಪಡೆದವರ ಪುಣ್ಯಸಾಧಕರಿವರು. ಜ್ಞಾನ ಭಕ್ತಿ ವೈರಾಗ್ಯ ಧುರೀಣರು. ಭೃಗು ಋಷಿ ಅಂಶ ಸಂಭೂತರೆಂದು ಪ್ರತೀತಿ.
ಹರಿದಾಸ ಬಂಧುಗಳಿಗೆಲ್ಲ ಇವರೇ ಶ್ರೀರಕ್ಷೆ. ಹರಿದಾಸ ಪರಂಪರೆಯ ರಾಜಹಂಸ. ಅವರ ಕೃತಿಗಳು ವರ್ಣರಂಜಿತ ರಂಗವಲ್ಲಿ ಹಾಕಿರುವ ಸಂಭ್ರಮದ ಆಗರ. ಅಧ್ಯಾತ್ಮಿಕ ಅಭ್ಯುದಯದ ಜೀವ ಸ್ವರ. ದಾಸಸಾಹಿತ್ಯಕ್ಕೆ ಸೈದ್ಧಾಂತಿಕ ಮಹತಿಯನ್ನು ತಂದುಕೊಟ್ಟ ಹಿರಿಮೆ ವಿಜಯದಾಸರದು. ರಸಸಿದ್ಧಿ ಮತ್ತು ವಾಕ್ಸಿದ್ಧಿಗಳಿಂದ ದ್ವೈತಸಿದ್ಧಾಂತದ ಶಾಸ್ತ್ರಪ್ರಮೇಯಗಳನ್ನು ಬರಿಯ ಒಣತತ್ವವಾಗಿ ಮಾತ್ರವೇ ಉಳಿಯಲು ಬಿಡದೆ ನಿತ್ಯಬದುಕಿನಲ್ಲಿ ಅನುಷ್ಠಾನವಾಗುವಂತೆ ಸಕಲರಿಗೂ ಆರ್ಥವಾಗುವ ರೀತಿಯಲ್ಲಿ ಅಭಿವ್ಯಕ್ತಿಸಿ ನವಮನ್ವಂತರವೊಂದನ್ನು ನಿರ್ಮಿಸಿದ ಮನೀಷಿಗಳು.

ಸುಳಾದಿದಾಸರೆಂದೆ ಪ್ರಖ್ಯಾತರಾದ ವಿಜಯದಾಸರು ಕೀರ್ತನೆ, ಉಗಾಭೋಗ, ಸುಳಾದಿಗಳು ಅವ್ಯಾಹತವಾಗಿ ಹೊರಹೊಮ್ಮಿಸುತ್ತಿದ್ದ ವಿಶ್ವಕೋಶವಾಗಿದ್ದರು. ಅವರು ವ್ಯಾಸಸಾಹಿತ್ಯ, ದಾಸಸಾಹಿತ್ಯಗಳೆಂಬ ಜೋಡಿಹಕ್ಕಿಗಳು ಬೀಡುಬಿಟ್ಟಿದ್ದ ಗೂಡು. ವಿಜಯದಾಸರಿಗೆ ಗುರುಕರುಣೆ ದೊರೆತ ಬಳಿಕ ಅಪಾರ ಐಶ್ವರ್ಯ ಹರಿದು ಬರಲು ಪ್ರಾರಂಭವಾಯಿತು. ಹಾಗೆಯೇ ಆಡಿದ ಮಾತು ಹಾಡಾಯಿತು. ನುಡಿದ ವಚನ ಆಶೀರ್ವಾದವಾಯಿತು.

ವಿಜಯನಗರ ಸಾಮ್ರಾಜ್ಯ ಯವನರ ದಾಳಿಗೀಡಾದ ನೂರು-ನೂರೈವತ್ತು ವರ್ಷಗಳ ಕಾಲ ದಾಸ ವಾಙ್ಮಯವಾಹಿನಿಯು ಗುಪ್ತಗಾಮಿನಿಯಾಗಿದ್ದು, ಅದನ್ನು ಪುನರುತ್ಥಾನಗೊಳಿಸಲು ಮಹಾಶಕ್ತಿಯೊಂದು ಅವತರಿಸಿ ಇಂತಹ ಸನ್ನಿವೇಶದಲ್ಲಿ ಜನ್ಮವೆತ್ತಿದವರು ಭಕ್ತಿಯೋಗಿ ವಿಜಯದಾಸರು. ಪುರಂದರ, ಕನಕರಿಂದ ಭಕ್ತಿ ಭಾಗೀರಥಿಯಾಗಿ ಹರಿದು ಬಂದ ದಾಸಸಾಹಿತ್ಯದ ಪ್ರಥಮ ಘಟ್ಟವಾದರೆ, ದ್ವಿತೀಯ ಘಟ್ಟ ಪ್ರಾರಂಭವಾಗುವುದೇ ವಿಜಯದಾಸರಿಂದ; ದಾಸಸಾಹಿತ್ಯವನ್ನು ಪುನರುಜ್ಜೀವನ ಗೊಳಿಸಿದ್ದಲ್ಲದೆ ಹರಿದಾಸ ಪರಂಪರೆಯು ಇವತ್ತಿಗೂ ಅವಿಚ್ಛಿನ್ನವಾಗಿ ಹರಿದು ಬರುವಂತಾಗಿಸಿದ ಕೀರ್ತಿ ಇವರದ್ದು.

ದಾಸವಾಣಿಯ ಶಕ್ತಿ
ಶ್ರೀವ್ಯಾಸರಾಯರ ನಂತರ ಅಪಾರ ಶಿಷ್ಯವೃಂದವನ್ನು ಹೊಂದಿದ ಕೀರ್ತಿ ಶ್ರೀ ವಿಜಯದಾಸರಿಗೆ ಸಲ್ಲುತ್ತದೆ. ಜಗನ್ನಾಥದಾಸರಂತಹ ಪಂಡಿತರನ್ನು ರಂಗನೊಲಿದದಾಸರನ್ನಾಗಿ ಮಾಡಿ ಹರಿಕಥಾಮೃತಸಾರ ಬರೆಯುವಂತೆ ಮಾಡಿದ ಕೀರ್ತಿಶಾಲಿಗಳು. ಕೂಸಿಮಗದಾಸ ಸಮಾಜದ ನಿಂದನೆಗೆ ಪಾತ್ರರಾದ ದಾಸರು. ಪ್ರಕಾಂಡ ಪಂಡಿತರು, ವಿದ್ವನ್ಮಣಿಗಳು ಆದ ಕಲ್ಲೂರು ಸುಬ್ಬಣ್ಣಾಚಾರ್ಯರು, ಮಡಿವಂತಿಕೆಯ ಗಡಿದಾಟಿ ಹೊರಗೆ ಬಂದು ಶ್ರೀದಾಸರ ಶಿಷ್ಯರಾಗಿ ತನ್ಮೂಲಕ ಸಮಾಜಮುಖಿ ಜೀವನಕ್ಕೆ ಊರುಗೋಲಾದ ‘ಭಕ್ತಿ ಪಂಥ’ಕ್ಕೆ ವಿಶಿಷ್ಟ ಕೃತಿಗಳ ಮೂಲಕ ಕೊಡುಗೆ ನೀಡಿದ್ದರು.

ಪುರಂದರದಾಸರು ಪೂರೈಸಬೇಕಿದ್ದ ಐದು ಲಕ್ಷ ಕೃತಿಗಳಲ್ಲಿ ಇವರಿಗಾಗಿ ಇಪ್ಪತ್ತೈದು ಸಾವಿರ ಕೃತಿಗಳನ್ನು ಮೀಸಲಿಟ್ಟರೆಂಬ ಪ್ರತೀತಿ ಇದೆ. ಸಂಖ್ಯೆ ಹಾಗೂ ಸತ್ವದಲ್ಲಿ ಸಾಟಿಯಿಲ್ಲದ ಸಾಧನೆ ಮಾಡಿದ ಇವರ ಮಹತ್ವ ಎಂತಹವರಿಗೂ ಅಚ್ಚರಿಯನ್ನುಂಟುಮಾಡದಿರದು. ಅವರ ಕೃತಿಗಳು ನಮ್ಮೆಲ್ಲರ ಜ್ಞಾನದೀಪಿಕೆ. ಅವರ ಸಾಹಿತ್ಯಾಧ್ಯಯನ, ಸಾಧನ ಸೋಪಾನ ತದನುಸಂಧಾನ ಮೋಕ್ಷ ಮಾರ್ಗ ಪ್ರದೀಪನ. ‘‘ವಿ’ ಎಂದು ಜಪಿಸಿರಲು ವಿರುಕತಿ ದೊರಕುವುದು. ‘ಜ’ ಎನ್ನೆ ಜನನ ಮರಣ ನಾಶವು, ‘ಯ’ ಎನ್ನೆ ಎಲ್ಲದಿಕ್ಕಿಂತ ಭಕ್ತ್ಯಧಿವಿತ್ತು, ‘ರಾಯ’ ಎನ್ನೆ ರಾಯರಾಯನ ತೋರ್ಪುದು’ ಎಂಬ ಗೋಪಾಲದಾಸರ ವಾಣಿಯು, ಗುರುಭಕ್ತಿಯನ್ನು ವಿಜಯದಾಸರ ಶಕ್ತಿಯನ್ನು ಬಹಳ ಚೆನ್ನಾಗಿ ಮನವರಿಕೆ ಮಾಡಿಕೊಡುತ್ತದೆ.

ಸಮಕಾಲೀನ ಬದುಕಿನ ಸಂಕಟಗಳನ್ನು, ತಲ್ಲಣಗಳನ್ನು, ಸಾಮಾಜಿಕ ಪರಿಸ್ಥಿತಿಯನ್ನು ಅವರ ಕೃತಿಗಳಿಂದ ಅರಿಯಬಹುದು. ವ್ಯಕ್ತಿತ್ವದ ನಿರ್ಮಿತಿಯನ್ನು, ಮೌಲ್ಯಗಳ ಪಾತ್ರವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಧರ್ಮ ತತ್ವಜ್ಞಾನಗಳು ಆಡಂಬರ ಡಾಂಬಿಕತೆಯ ಮುಸುಕಿನಲ್ಲಿ ಮರೆಯಾಗಿದ್ದವು. ಇವೆರಡಕ್ಕೂ ಅಂಟಿದ ಜಿಡ್ಡನ್ನು ತೊಳೆದು ತಿಳಿಯಾಗಿಸಿದವರು ವಿಜಯದಾಸರು.
ಪುರಂದರದಾಸರು, ವಾದಿರಾಜ, ಕನಕದಾಸರೊಂದಿಗೆ ದಿವ್ಯ ಭವ್ಯವಾಗಿ ದಾಸಪರಂಪರೆಯ ಗುಡಿ ಕಟ್ಟಿದರೆ, ವಿಜಯದಾಸರು ಅದಕ್ಕೆ ಶಿಖರವಿಟ್ಟರು. ಗೋಪಾಲದಾಸರು ಕಳಸ ಏರಿಸಿದರು. ಅನಂತರ ಜಗನ್ನಾಥದಾಸರು ದಾಸಕೂಟದ ಘನತೆಗೌರವಗಳನ್ನು ಗಗನದೆತ್ತರಕ್ಕೆ ಎತ್ತಿಹಿಡಿದರು. ನಂತರದ ದಾಸವರೇಣ್ಯರು ಈ ದಾಸಪ್ರಾಸಾದವನ್ನು ತಮ್ಮ ವಿವಿಧ ವಾಙ್ಮಯ ಪ್ರಾಕಾರಗಳಿಂದ ಶೃಂಗರಿಸಿ ಅಲಂಕರಿಸಿದರು.

ವಿಜಯದಾಸರು ಆಯುಷ್ಯದ ಬಹುಭಾಗವನ್ನು ತೀರ್ಥಯಾತ್ರೆಗಳಲ್ಲೆ ಕಳೆದಿರುವರು. ಕ್ಷೇತ್ರ ಪರ್ಯಟನ ಹಿಂದಿನ ಕಾಲದಿಂದ ಬಂದದು. ವಿಜಯದಾಸರು ತಮ್ಮ ದಾಸ ಜೀವಿತದಲಿ ಪ್ರತಿವರ್ಷ ಆಷಾಢ ಶುದ್ಧ ಏಕಾದಶಿಯಂದು ಪಂಢರಾಪುರಕ್ಕೂ, ನವರಾತ್ರಿಯಲ್ಲಿ ತಿರುಪತಿಗೂ, ಮಧ್ವನವಮಿಗೆ ಉಡುಪಿಗೂ ಹೋಗುತ್ತಿದ್ದರಂತೆ. ಜತೆಗೆ ಭರತಖಂಡದ ಎಲ್ಲ ತೀರ್ಥಕ್ಷೇತ್ರಗಳನ್ನು ಎರಡು ಬಾರಿಯಾದರು ಸಂದರ್ಶಿಸಿದ್ದರೆಂದು ತಿಳಿದು ಬರುತ್ತದೆ. ವಿಜಯದಾಸರ ತೀರ್ಥಕ್ಷೇತ್ರ ಸುಳಾದಿಯು ವಾದಿರಾಜರ ತೀರ್ಥ ಪ್ರಬಂಧದಂತೆ ಕನ್ನಡ ದಾಸಸಾಹಿತ್ಯದ ತೀರ್ಥಪ್ರಬಂಧವೆಂದು ಪ್ರಖ್ಯಾತಿ ಪಡೆದಿದೆ.

ಆಂಧ್ರಪದೇಶದ ಗುಂತಕಲ್ಲಿನ ಸಮೀಪ ಭಾಸ್ಕರ ಕ್ಷೇತ್ರವೆನಿಸಿದ ಚಿಪ್ಪಗಿರಿ ತಪೋಭೂಮಿಯಲ್ಲಿ ಕಾರ್ತೀಕ ಶುದ್ದ ದಶಮಿಯಂದು ವೈಕುಂಠವಾಸಿಗಳಾಗಿ, ಈಗಲೂ ಅವರನ್ನು ನಂಬಿ ಬರುವ ಅನೇಕ ಭಕ್ತರ ಅಭಿಷ್ಟಗಳನ್ನು ಪೂರೈಸುವ ಪರಮ ಕಾರುಣ್ಯಮೂರ್ತಿಗಳಾದ ಭೃಗು ಅಂಶ ಸಂಭೂತರಾದ ಶ್ರೀದಾಸರಾಯರ ಆರಾಧನೆ ಚಲಪ್ರತಿಮೆಗಳಾದ ಭೂಸುರ ಭಕ್ತಕೋಟಿಯ ಅಧಿಷ್ಠಾನದಲ್ಲಿ ಅನ್ನ ಸಂತರ್ಪಣೆಯು ನಡೆಯಲಿದೆ.

ವಿಜಯಕವಚದ ವೈಶಿಷ್ಟ್ಯತೆ
‘ಸ್ಮರಿಸಿ ಬದುಕಿರೋ.. ದಿವ್ಯ ಚರಣಕೆರಗಿರೋ..’ ಕಲಿಯುಗದಲ್ಲಿ ನಾಮಸ್ಮರಣೆಗೆ ವಿಶೇಷ ಮಹತ್ವವಿದೆ. ಶ್ರೀಪಾದರಾಜ ವಿರಚಿತ ‘ಕೃತಯುಗದಲ್ಲಿ’ ಎಂಬ ಉಗಾಭೋಗವು ಇದಕ್ಕೆ ನಿದರ್ಶನ. ಹರಿಸ್ಮರಣೆಯಂತೆ, ಯತಿಶ್ರೇಷ್ಟರ, ಹರಿದಾಸರ ಅಷ್ಟೇ ಮಹತ್ವಪೂರ್ಣವಾದುದು. ಇಂತಹ ನಾಮಸ್ಮರಣೆಯ ಸಾಲಿನಲ್ಲಿ ‘ವಿಜಯಕವಚ’ವು ವಿಜಯದಾಸರ ಕೃತಿಗಳಲ್ಲೇ ಅತ್ಯಂತ ಶ್ರೇಷ್ಟವಾಗಿದೆ.

ಗುರುಸ್ತುತಿ ಮಂತ್ರತುಲ್ಯವಾಗಬೇಕಾದರೆ ಅದರಲ್ಲಿ ಗುರುಗಳ ಮಹಿಮಾಶಕ್ತಿ, ತಪೋಬಲ, ಶಿಷ್ಯನ ಮೇಲೆ ಕೃಪೆ, ಶಿಷ್ಯನ ದೃಢವಾದ ಶ್ರದ್ಧೆ, ಗುರುಭಕ್ತಿ ಇವೆಲ್ಲ ಮೇಳೈಸಿರಬೇಕು. ಆಗ ಗುರುವಿನ ಸುಪ್ರಸಾದ ಊರ್ಧ್ವಮುಖಿಯಾದ ಶಿಷ್ಯನೆಡೆ ಹರಿದು ಬರುತ್ತದೆ. ಅಂತಹ ಕೃತಿ ‘ವಿಜಯ ಕವಚ’. ವಿವಿದಾರ್ಥಗಳ ಬೆಳಕು ಹೊರ ಸೂಸುತ್ತ, ಈ ಸ್ತುತಿರತ್ನ ನಂಬಿದವರ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ ಪಠಣೆ, ಚಿಂತನೆ, ಅನುಸಂಧಾನ, ಸಾಧನವೇ ವಿಜಯ ಕವಚ.

ಜನಸಾಮಾನ್ಯರಿಗೆ, ಹಲವು ಸ್ತೋತ್ರಗಳನ್ನು ಹೇಳಲು ಬಾರದವರಿಗೆ, ಅನಕ್ಷರಸ್ಥರು ಸಹ ಕಂಠಪಾಠ ಮಾಡಿ ಹಾಡುವಂತೆ ‘ವಿಜಯಕವಚ’ ರಚಿಸಿ ಮಹದುಪಕಾರ ಮಾಡಿದವರು ಶ್ರೀ ವ್ಯಾಸವಿಠ್ಠಲರು.

Tags

Related Articles

Leave a Reply

Your email address will not be published. Required fields are marked *

Language
Close