About Us Advertise with us Be a Reporter E-Paper

ಅಂಕಣಗಳು

ಮಾನವಸಹಿತ ಗಗನಯಾನದ ಶ್ರೇಯ ನಾರಾಯಣನ್‌ಗೆ ಸಲ್ಲಬೇಕು

ಹೇಮಂತ್ ಗೌಡ

ಹೊಸ ದಾಖಲೆಗಳನ್ನು ಬರೆಯುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸುವುದನ್ನು ಸಾಮಾನ್ಯವಾಗಿಸಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಿನ ನಾಲ್ಕು ವರ್ಷಗಳ ಮಟ್ಟಿಗೆ ಮೈಲುಗಲ್ಲುಗಳ ಮೇಲೆ ಮೈಲುಗಲ್ಲುಗಳನ್ನು ನೆಡುವ ಧಾವಂತಕ್ಕೆ ಸಿದ್ಧವಾಗುತ್ತಿದೆ.

ಇವುಗಳಲ್ಲಿ ಚಂದ್ರಯಾನ-2 ಇನ್ನೇನು ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಮಂಗಳ ಹಾಗೂ ಚಂದ್ರನ ಅಂಗಳಗಳ ಬಳಿಕ ಭಾರತದ ದೃಷ್ಟಿಯು ಮಾನವಸಹಿತ ಬಾಹ್ಯಾಕಾಶ ಯಾನದ ಮೇಲೆ ಬಿದ್ದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ತಾಂತ್ರಿಕ ಕೌಶಲಗಳನ್ನೂ ಭಾರತ ಅದಾಗಲೇ ಮೈಗೂಡಿಸಿಕೊಂಡಿದ್ದು ಜಾಗತಿಕ ಮಟ್ಟದಲ್ಲಿ ಮುಂದಿನ ವರ್ಷಗಳಲ್ಲಿ ತನ್ನದೇ ಆದ ಛಾಪು ಮೂಡಿಸಲು ಸರ್ವಸನ್ನದ್ಧವಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆದಲ್ಲಿ, ಡಿಸೆಂಬರ್ 2021ರ ವೇಳೆಗೆ ಗಗನಯಾನವೆಂಬ ಭಾರತದ್ದೇ ಆದ ಗಗನನೌಕೆಯಲ್ಲಿ ಭೂಮಿಯ ಅತ್ಯಂತ ಹತ್ತಿರದಲ್ಲಿ ಇರುವ ಕಕ್ಷೆಯ ಬಳಿ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ತೇಲಾಡಲಿದ್ದಾರೆ! ಈ ಕನಸನ್ನು 2007ರಿಂದಲೇ ಕಾಣಲು ಇಸ್ರೋ ಆರಂಭಿಸಿದ್ದು, ಇಲ್ಲಿಯವರೆಗಿನ ಹನ್ನೊಂದು ವರ್ಷಗಳಲ್ಲಿ ಅಭೂತಪೂರ್ವವಾಗಿ ಪೂರ್ವ ತಯಾರಿಗಳನ್ನು ಮಾಡಿಕೊಂಡಿದೆ.

ಎಷ್ಟರ ಮಟ್ಟಿಗೆ ಎಂದರೆ, ಕಳೆದ ತಿಂಗಳು ನಡೆದ ಸ್ವತಂತ್ರೋತ್ಸವದ ಸಂದರ್ಭ ಕೆಂಪು ಕೋಟೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2022ರ ವೇಳೆಗೆ ಭಾರತೀಯ ಪುತ್ರ ಅಥವಾ ಪುತ್ರಿಯೊಬ್ಬಳು 2022ರ ಒಳಗೆ ತ್ರಿವರ್ಣ ಧ್ವಜ ಹಿಡಿದು ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಎಂದು ಘಂಟಾಘೋಷವಾಗಿ ಹೇಳುವಷ್ಟು! ಪ್ರಧಾನಿ ನೀಡಿರುವ ಡೆಡ್‌ಲೈನ್ ಒಳಗೆ ಈ ಮಿಶನ್‌ಅನ್ನು ಮಾಡಿ ಮುಗಿಸಲು ಇಸ್ರೋ ಛಲದಂಕಮಲ್ಲನಂತೆ ನಿಂತಿದೆ.

ಇದಕ್ಕೆ ಬಲವಾದ ಪುರಾವೆಗಳೂ ಇವೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಪೂರ್ವಭಾವಿಯಾಗಿ ಕಳೆದ ಹನ್ನೊಂದು ವರ್ಷಗಳಿಂದ ಮೂರು ಪ್ರಯೋಗಾರ್ಥ ಪರೀಕ್ಷೆಗಳನ್ನು ನಡೆಸಲಾಗಿದ್ದು, ಎಲ್ಲವೂ ಯಶಸ್ವಿಯಾಗಿವೆ. ಈ ಮೊದಲ ಪರೀಕ್ಷೆಯಾಗಿ 2007ರಲ್ಲಿ ಇಬ್ಬರನ್ನು ಹೊರಬಲ್ಲ ಕ್ಯಾಪ್ಸೂಲ್ ಒಂದನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಿ, ಅದು 12 ದಿನಗಳ ಬಳಿಕ ಭೂಮಿಗೆ ಸುರಕ್ಷಿತವಾಗಿ ಮರಳಿತ್ತು. ಈ ವರ್ಷ ಮಾಡಿದ ಮತ್ತಷ್ಟು ಸುಧಾರಿತ ಪರೀಕ್ಷೆಗಳಲ್ಲೂ ಸಹ ಯಶ ಸಾಧಿಸಿರುವುದು ಇಸ್ರೋ ಉತ್ಸಾಹ ಹಾಗು ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಇಷ್ಟು ಮಾತ್ರವಲ್ಲದೇ ಬಾಹ್ಯಾಕಾಶದಲ್ಲಿ ಸೇವಿಸಲು ವಿಶೇಷವಾದ ಆಹಾರ ತಯಾರಿಕೆಯಲ್ಲಿ ‘ರಕ್ಷಣಾ ಆಹಾರ ಸಂಶೋಧನಾಲಯ’(ಡಿಎಫ್‌ಆರ್‌ಎಲ್) ಯಶಸ್ವಿಯಾಗಿದೆ. ಅಲ್ಲದೇ ಗಗನಯಾತ್ರಿಗಳಿಗೆ ಅಗತ್ಯವಾದ ವಿಶೇಷ ಸೂಟ್‌ಗಳ ಮಾದರಿಯೂ ಸಜ್ಜಾಗಿದೆ. ಈ ಕಾರಣಕ್ಕಾಗಿಯೇ ಕಳೆದ ವರ್ಷಾಂತ್ಯಕ್ಕಾಗಲೇ ಮಾನವಸಹಿತ ಗಗನಯಾನವನ್ನು ಕೈಗೊಳ್ಳುವ ಕುರಿತಂತೆ ಇಸ್ರೋಗೆ ಸಾಕಷ್ಟು ವಿಶ್ವಾಸ ಮೂಡಿತ್ತು. ಮಾನವಸಹಿತ ಮಿಶನ್‌ಗಳಿಗೆಂದೇ ಇಸ್ರೋ, ಶ್ರೀಹರಿಕೋಟಾದ ತನ್ನ ಉಡಾವಣಾ ಕೇಂದ್ರದಲ್ಲಿ ಮೂರನೇ ಲಾಂಚ್ ಪ್ಯಾಡ್ ನಿರ್ಮಾಣಕ್ಕೆ ಸನ್ನದ್ಧವಾಗಿದೆ.

ಗುರುತ್ವಾಕರ್ಷಣಾ ಬಲದ ನೆರವಿಲ್ಲದೇ ಜೀವಿಸುವ ಹಾಗು ಕಾರ್ಯಾಚರಿಸುವ ಕುರಿತಾಗಿ ತರಬೇತಿ ನಡೆಸಲು ಬೆಂಗಳೂರಿನ ಬಳಿ ಇಸ್ರೋ ವಿಶೇಷ ಸೌಲಭ್ಯವನ್ನೂ ಮಾಡಿಕೊಂಡಿದೆ. ಅದಾಗಲೇ ಈ ಕುರಿತಂತೆ ಅಗತ್ಯವಾದ ತಂತ್ರಜ್ಞಾನಗಳನ್ನು ಸಂಸ್ಥೆ ಸಿದ್ಧಪಡಿಸಿಕೊಂಡಿದೆ. ಯಾವುದೇ ಚಾನ್ಸ್‌ ತೆಗೆದುಕೊಳ್ಳಲು ಇಚ್ಛಿಸದೇ  ಇವೇ ತಂತ್ರಜ್ಞಾನಗಳನ್ನು ಇನ್ನಷ್ಟು ಬಾರಿ ಪ್ರಯೋಗ ನಡೆಸುವ ಮೂಲಕ ತನ್ನ ಮೊದಲ ಯತ್ನದಲ್ಲೇ ಯಶ ಸಾಧಿಸಲು ವಿರಾಟ ಛಲ ತೊಟ್ಟಿದೆ. ಸ್ವದೇಶಿ ತಂತ್ರಜ್ಞಾನ ಸಾಕಷ್ಟು ಬಳಸಿ ಉಪಕರಣಗಳನ್ನು ಸ್ವದೇಶೀಯಾಗೇ ನಿರ್ಮಿಸಲಾಗಿದೆ. ಈ ಹಾದಿಯಲ್ಲಿ 15,000 ಉದ್ಯೋಗಗಳನ್ನೂ ಸೃಷ್ಟಿ ಮಾಡಲಾಗಿದೆ.

ಸುಮಾರು 3.7 ಟನ್ ತೂಕದ ಸ್ಪೇಸ್ ಕ್ಯಾಪ್ಸೂಲ್‌ನಲ್ಲಿ, ಮೂರು ಮಂದಿಯನ್ನು ಭೂ ಮೇಲ್ಮೈನಿಂದ 400 ಕಿ.ಮೀ. ಎತ್ತರದ ಕಕ್ಷೆಗೆ ಕಳುಹಿಸಿ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಿಸುವ ಯೋಜನೆಯ ರಥವಾಗಿ ಜಿಎಸ್‌ಎಲ್‌ವಿ ಎಂಕೆ 3 ಕೆಲಸ ಮಾಡಲಿದೆ. ಬಾಹ್ಯಾಕಾಶದಲ್ಲಿ ನಮ್ಮದೇ ವ್ಯೋಮಾನಾಟರನ್ನು ತೇಲುವಂತೆ ಮಾಡುವ ಈ ಕೆಲಸವು ಉಡಾವಣೆಯಾದ 15-20 ನಿಮಿಷಗಳಲ್ಲಿ ಮುಗಿಯಲಿದೆ. ಮೊದಲ ಯಾತ್ರೆಯಲ್ಲಿ ಭಾರತೀಯ ವಾಯುಪಡೆಯ ಪೈಲಟ್‌ಗಳು ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ಹೆಮ್ಮೆಯ ವಿಚಾರವೆಂದರೆ, ಭಾರತದ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮದ ಮುಖ್ಯಸ್ಥೆಯಾಗಿ ವಿ ಆರ್ ಲಲಿತಾಂಬಿಕಾ ಎಂಬ ಹೆಣ್ಣುಮಗಳು ನೇತೃತ್ವ ವಹಿಸಿರುವುದು. ಪಿಎಸ್‌ಎಲ್‌ವಿ ಹಾಗು ಜಿಎಸ್‌ಎಲ್‌ವಿಗಳ ಯಶೋಗಾಥೆಯ ಹಿನ್ನೆಲೆ ಶಕ್ತಿಯಾದ ಲಲಿತಾಂಬಿಕಾ, ದೇಶದ ಬಾಹ್ಯಾಕಾಶ ವಿಜ್ಞಾನದ ದಂತಕಥೆಯಾಗಲಿದ್ದಾರೆ.

ಈ ಮುನ್ನ ಅಮೆರಿಕ, ರಷ್ಯಾ ಹಾಗು ಚೀನಾ ಮಾತ್ರವೇ ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ತಮ್ಮದೇ ಸ್ವಂತ ಸಾಮರ್ಥ್ಯದಲ್ಲಿ ಕಳುಹಿಸಿವೆ. ಈ ಸಾಧನೆಗೈಯ್ಯಲಿರುವ ನಾಲ್ಕನೇ ದೇಶ ಭಾರತವಾಗಲಿದೆ. ಈ ಮುನ್ನ 1984ರಲ್ಲಿ ರಾಕೇಶ್ ಶರ್ಮಾ ಸೋವಿಯತ್‌ನ ಮಿಶನ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಮಿಕ್ಕಂತೆ ಭಾರತೀಯ ಸಂಜಾತರಾದ ಕಲ್ಪನಾ ಚಾವ್ಲಾ ಹಾಗು ಸುನಿತಾ ವಿಲಿಯಮ್‌ಸ್ ನಾಸಾದ ಭಾಗವಾಗಿ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಭಾಗವಾಗುವ ಅವಕಾಶವನ್ನು ದಿನಗಳಲ್ಲಿ ಪಡೆಯಲು ಭಾರತ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅರ್ಹತೆಗಳನ್ನು ಪಡೆದುಕೊಳ್ಳುವತ್ತ ಸಾಗಿದೆ. ಭೂಮಿ, ಚಂದ್ರ ಹಾಗು ಮಂಗಳಗಳು ಒಂದೇ ಉದ್ಯಮದ ಭಾಗವಾಗಿರಲಿವೆ ಎಂದಿದ್ದ ಮಾಜಿ ರಾಷ್ಟ್ರಪತಿ ಹಾಗು ಭಾರತೀಯ ವೈಜ್ಞಾನಿಕ ರಂಗದ ದಿಗ್ಗಜ ಅಬ್ದುಲ್ ಕಲಾಂರ ದೂರದೃಷ್ಟಿ ಹಾಗೂ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾವಹ ವಿಕ್ರಂ ಸಾರಾಭಾಯ್ ಕಂಡ ಕನಸುಗಳು ಹಾಗು ಅವರು ಹಾಕಿಕೊಟ್ಟ ಅಡಿಪಾಯಗಳಿಗೊಂದು ಸಾಕಾರ ರೂಪ ಕೊಡುವ ನಿಟ್ಟಿನಲ್ಲಿ ಗಗನಯಾನ ಮಹತ್ವದ ಘಟ್ಟವಾಗಿದೆ. ಸದ್ಯ ಮಾನವಸಹಿತ ಯಾತ್ರೆಗೆ ಸಕಲ ರೀತಿಯಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿರುವ ಭಾರತ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪರ್ಯಾಯವಾದ ವ್ಯವಸ್ಥೆ ಮಾಡಿಕೊಳ್ಳಲು ಖಂಡಿತವಾಗಿಯೂ ಮುಂದಡಿ ಇಡಲಿದೆ. ಪಾಶ್ಚಾತ್ಯ ದೇಶಗಳಿಗಿಂತ ಹಲವು ಪಟ್ಟು ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಭಾರತಕ್ಕೆ ಇದೇನೂ ಅಸಾಧ್ಯವಾದ ಕೆಲಸವಲ್ಲ.

ದೇಶದ ಸಾರ್ವಜನಿಕ ವಲಯದ ಯಾವ ಸಂಸ್ಥೆಯೂ ವೃತ್ತಿಪರತೆ ಹಾಗು ಕಾರ್ಯಕ್ಷಮತೆ ವಿಚಾರದಲ್ಲಿ ಇಸ್ರೋದ ಅರ್ಧದಷ್ಟು ಮಟ್ಟಕ್ಕೂ ಬರಲಾರವು. ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳುವ ನಮ್ಮೆಲ್ಲರ ಪುಣ್ಯಕ್ಕೆ ಅಧಿಕಾರಶಾಹಿ ವ್ಯಾಪ್ತಿಯಿಂದ ದೂರವಿರಿಸಿಲಾಗಿದೆ. ಈ ಕಾರಣ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ವೇಳೆ ಕುಂಭಕರ್ಣ ವಿಳಂಬವಾಗುವ ಮಾತೇ ಇಲ್ಲ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ಇದೇ ವಿಷಂಯವಾಗಿ ಇನ್ನಷ್ಟು ಇಂಬು ನೀಡಲು ಪ್ರಧಾನ ವೈಜ್ಞಾನಿಕ ಸಲಹೆಗಾರರ ಹುದ್ದೆಯನ್ನು ಆರಂಭಿಸಿತು.

1960ರ ದಶಕದಲ್ಲಿ, ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಭ್ರೂಣಾವಸ್ಥೆಯ ದಿನಗಳಲ್ಲಿ ವಿಜ್ಞಾನಿಗಳು ಹಾಗು ಎಂಜಿನಿಯರ್‌ಗಳು ಬೈಸಿಕಲ್‌ನಲ್ಲಿ ಓಡಾಡುತ್ತಾ, ಸಂಬಂಧಪಟ್ಟ ಪರಿಕರಗಳನ್ನು ಎತ್ತಿನ ಗಾಡಿಗಳ ಮೇಲೆ ಹೊತ್ತೊಯ್ಯುತ್ತಾ ಕಂಡು ಪಾಶ್ಚಾತ್ಯ ಶಕ್ತಿಗಳು ನಮ್ಮನ್ನು ಅಣಕ ಮಾಡಿದ್ದವು. ಆದರೆ ನೋಡ ನೋಡುತ್ತಿದ್ದಂತೆಯೇ ತನ್ನದೇ ಗಗನ ನೌಕೆಗಳನ್ನು ನಿರ್ಮಿಸುವ ಮಟ್ಟಕ್ಕೆ ಬೆಳೆದ ಭಾರತ ಮುಂದಿನ ದಿನಗಳಲ್ಲಿ ಭೂ ಸರ್ವೇಕ್ಷಣೆ, ಹವಾಮಾನ ಮುನ್ಸೂಚನೆ, ಸಂಪರ್ಕ, ವೈದ್ಯಕೀಯ, ಮಿಲಿಟರಿ, ನಾವಿಕ ಕ್ಷೇತ್ರಗಳಿಗೆ ಅಗತ್ಯವಾದ ಅತ್ಯಂತ ಸುಧಾರಿತ ಉಪಗ್ರಹಗಳನ್ನು ಅದಾಗಲೇ ನಮ್ಮದೇ ಸಾಮರ್ಥ್ಯದಲ್ಲಿ ಉಡಾವಣೆ ಮಾಡಿ ಚಂದ್ರ ಹಾಗು ಮಂಗಳನ ಅಂಗಳಕ್ಕೂ ಕಾಲಿಡುವ ಮಟ್ಟಕ್ಕೆ ಬೆಳೆದಿರುವುದು ಇದೇ ಪಾಶ್ಚಾತ್ಯ ದೇಶಗಳ ಹೊಟ್ಟೆ ಉರಿಗೆ ಕಾರಣವಾಗಿರುವುದೂ ಭಾರೀ ಉಪಗ್ರಹಗನ್ನು ಹೊತ್ತೊಯ್ಯಬಲ್ಲ ಜಿಎಸ್‌ಎಲ್‌ವಿ ರಾಕೆಟ್ ಉಡಾವಣೆಗೆ ಅತ್ಯಗತ್ಯವಾದ ಕ್ರಯೋಜಿನಿಕ್ ಇಂಜಿನ್ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ನಿರಾಕರಿಸಿದ್ದ ಅಮೆರಿಕ, ಬಳಿಕ ರಷ್ಯಾದ ಮೇಲೂ ಇದೇ ವಿಚಾರವಾಗಿ ಪರೋಕ್ಷ ಒತ್ತಡ ಹೇರಿ ನಮಗೆ ಆ ತಂತ್ರಜ್ಞಾನ ಕೈಗೆಟುಕದಂತೆ ನೋಡಿಕೊಂಡಿತ್ತು!

ಆದರೆ ಛಲದಂಕಮಲ್ಲರಾದ ನಂಬಿ ನಾರಾಯಣನ್‌ರಂಥ ವಿಜ್ಞಾನಿಗಳು ದ್ರವ ಇಂಧನ ಚಾಲಿತ ಇಂಜಿನ್‌ನಅನ್ನು ಅಭಿವೃದ್ಧಿ ಮಾಡಿದ್ದಲ್ಲದೇ ಇದೇ ವಿಚಾರವಾಗಿ ಸಾಕಷ್ಟು ಸುಧಾರಿತ ಸಂಶೋಧನೆಗಳಿಗೂ ಮುಂದಾಗಿ ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೆ 1994ರ ನಾರಾಯಣನ್ ಹಾಗು ಕೆ ಚಂದ್ರಶೇಖರ್‌ರಂಥ ಅಪ್ಪಟ ದೇಶಭಕ್ತ ವಿಜ್ಞಾನಿಗಳ ಮೇಲೆ ದೇಶದ್ರೋಹದ ಸುಳ್ಳು ಆಪಾದನೆ ಹೊರಿಸಿ, ಬಂಧಿಸಿ ಸಾಕಷ್ಟು ಮಾನಸಿಕ ಹಿಂಸೆ ನೀಡಲಾಯಿತು. ಅಲ್ಲದೇ 23 ವರ್ಷಗಳ ಕಾಲ ನ್ಯಾಯಾಲಯಗಳಿಗೆ ಅಲೆಯುವಂತೆ ಮಾಡಲಾಯಿತು. ಆದರೆ ನಾರಾಯಣನ್ ಮಾಡಿಕೊಟ್ಟ ‘ವಿಕಾಸ್ ಇಂಜಿನ್’ ಮೂಲಕ ಪಿಎಸ್‌ಎಲ್‌ವಿ ರಾಕೆಟ್‌ಗಳು ಇನ್ನಷ್ಟು ಬಲಶಾಲಿಯಾಗಿ, ಭಾರತವನ್ನುಚಂದ್ರನ ಅಂಗಳಕ್ಕೆ ತಂದು ನಿಲ್ಲಿಸುವುದನ್ನು ತಡೆಯಲು ಯಾವ ವಿದೇಶೀ ಅಸೂಯೆ, ಹೊಟ್ಟೆಕಿಚ್ಚು ಹಾಗು ನಮ್ಮಲ್ಲೇ ಇರುವ ದೇಶದ್ರೋಹಿಗಳು ಹಾಗು ನಮ್ಮನ್ನಾಳುತ್ತಿರುವ ಸ್ಥಾನಗಳಲ್ಲಿರುವ ಆತ್ಮ ಮಾರಿಕೊಂಡ ಕೆಲವು ಪಾತಕಿ ಶಕ್ತಿಗಳ ಕೈಯ್ಯಲ್ಲಿ ಆಗಲಿಲ್ಲ. ಅಷ್ಟು ಮಾತ್ರವಲ್ಲದೇ ಭಾರತದ ಕ್ರಯೋಜಿನಿಕ್ ಇಂಜಿನ್ ಕನಸನ್ನೂ ಭಂಗಗೊಳಿಸಲು ಈ ಕಾಣದ ಕೈಗಳಿಗೆ ಸಾಧ್ಯವಾಗಲಿಲ್ಲ. ಹೆಚ್ಚೆಂದರೆ 20 ವರ್ಷಗಳ ಕಾಲ ಭಾರತದ ಮಹತ್ವಾಕಾಂಕ್ಷೆಯನ್ನು ಮುಂದೂಡಿದ್ದೇ ಬಂತು.

ನ್ಯಾಯಾಂಗ ಭಗೀರಥ ಹೋರಾಟದಲ್ಲಿ ಕೊನೆಗೂ ಗೆಲುವು ಸಾಧಿಸಿದ ನಾರಾಯಣನ್ ತಮ್ಮ ಪರಿಶ್ರಮ ಹಾಗು ತ್ಯಾಗಗಳ ಫಲದಿಂದ ದೇಶ ಸಾಧಿಸಿದ ಪ್ರಗತಿಯನ್ನು ನೋಡಿ ಸಂತೃಪ್ತರಾದರೆ ಪೈಶಾಚಿಕ ಮಟ್ಟದ ಚಿತ್ರಹಿಂಸೆ ಅನುಭವಿಸಿದ ಕಾರಣ ಯಾತನೆ ಅನುಭವಿಸಿ ಕೋಮಾ ತಲುಪಿದ್ದ ಚಂದ್ರಶೇಖರ್ ತಾವು ನಿರಪರಾಧಿ ಎಂದು ಘೋಷಣೆಯಾಗುವ ಎರಡು ದಿನಗಳ ಹಿಂದೆಯಷ್ಟೇ ನಮ್ಮನ್ನು ಅಗಲಿದ್ದಾರೆ.

ಅದಾಗಲೇ ಮೊದಲ ಯತ್ನದಲ್ಲೇ ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸುವ ಮೂಲಕ, ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅದೂ ಕೇವಲ 450 ಕೋಟಿರು.ಗಳ ಖರ್ಚಿನಲ್ಲಿ, 18 ತಿಂಗಳ ಅವಧಿಯಲ್ಲಿ ಮಂಗಳನ ಅಂಗಳಕ್ಕೆ ಕಾಲಿಡುವ ತನ್ನ ಕನಸನ್ನು ಇಸ್ರೋ ನನಸು ಮಾಡಿಕೊಂಡಿತ್ತು. ಇದೇ ಕೆಲಸ ಮಾಡಲು ಅಮೆರಿಕದ ಹತ್ತು ವರ್ಷಗಳು ತಗುಲಿದ್ದವು!

ಮೊನ್ನೆಯಷ್ಟೇ ಬ್ರಿಟನ್‌ನ ಎರಡು ಉಪಗ್ರಹಗಳನ್ನು ನಮ್ಮದೇ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದೇವೆ. ಅಮೆರಿಕ, ಬ್ರಿಟನ್, ಇಸ್ರೇಲ್, ರಷ್ಯಾಗಳನ್ನೂ ಸೇರಿದಂತೆ 28 ದೇಶಗಳ 237 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ವಿವಿಧ ಕಕ್ಷೆಗಳಿಗೆ ಸೇರಿಸಿದೆ. ಇನ್ನು ಗಗನಯಾನದಲ್ಲಿ ಭಾರತ ಯಶಸ್ವಿಯಾದಲ್ಲಿ, ಮುಂದಿನ ದಿನಗಳಲ್ಲಿ ಇದೇ ಕ್ಷೇತ್ರಕ್ಕೆ ಖಾಸಗೀ ಪಾಲುದಾರಿಕೆ ಇನ್ನಷ್ಟು ಹರಿದುಬಂದಲ್ಲಿ ಅಚ್ಚರಿಯಿಲ್ಲ. ಸ್ಟಾರ್ಟ್ ಅಪ್ ಯುಗವಾದ ಇಂದಿನ ದಿನಗಳಲ್ಲಿ ಭಾರತಲ್ಲೂ ಎಲಾನ್ ಮಸ್ಕ್‌ಗಳು ಹಾಗು ಸ್ಪೇಸ್ ಎಕ್‌ಸ್ನಂಥ ಸಂಸ್ಥೆಗಳು ಹುಟ್ಟಿಕೊಂಡಲ್ಲಿ ಅಚ್ಚರಿಯಿಲ್ಲ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ನಾವಿದನ್ನು ಅದಾಗಲೇ ಸಾಬೀತು ಪಡಿಸಿದ್ದೇವೆ.

ಬ್ರಿಟಿಷರು ಬಿಟ್ಟು ಹೋದ ವಸಾಹತುಶಾಹೀ ಗುಲಾಮಗಿರಿಯ ಪಳೆಯುಳಿಕೆಗಳನ್ನೇ ಬಹಳ ಹೆಮ್ಮೆಯಿಂದ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿರುವ ಅಧಿಕಾರಶಾಹಿ ವರ್ಗ ಹಾಗು ರಾಜಕೀಯ ವ್ಯವಸ್ಥೆಗಳಲ್ಲಿರುವ ಮತಬ್ಯಾಂಕ್ ಶೂರರು ದಬ್ಬಾಳಿಕೆ, ದೌರ್ಜನ್ಯಗಳ ಮೂಲಕ ನಂಬಿ ನಾರಾಯಣನ್‌ರಂಥ ಪ್ರತಿಭಾನ್ವಿತರನ್ನು ಹೊಸಕಿ ಹಾಕಿ ದೇಶದ ಪ್ರಗತಿಗೆ ಮಾರಕವಾಗಿದ್ದರೆ ಮತ್ತೊಂದೆಡೆ, ದೇಶೀ ಸಂಸ್ಕಾರ, ಸಂಸ್ಕೃತಿಗಳ ಸಾಕ್ಷಾತ್ ಹಿನ್ನೆಲೆಗಳಿಂದ ಬಂದ ಮುನ್ನಡೆಸಲ್ಪಟ್ಟ ಇಸ್ರೋ ಮುಂದೆ ಅದೇ ಬ್ರಿಟಿಷರು ಇಂದು ತಲೆಬಾಗಿ ನಿಲ್ಲುವಂತಾಗಿದೆ. ಎಂಥ ಜನರನ್ನು ಆದರ್ಶವನ್ನಾಗಿಟ್ಟುಕೊಳ್ಳಬೇಕು ಎಂಬುದು ನಮ್ಮ ವಿವೇಚನೆಗಳಿಗೆ ಬಿಟ್ಟಿದ್ದು.

Tags

Related Articles

Leave a Reply

Your email address will not be published. Required fields are marked *

Language
Close