About Us Advertise with us Be a Reporter E-Paper

ವಿ +

ಮನಸ್ಸನ್ನು ಗೆದ್ದವ ಎಲ್ಲವನ್ನೂ ಗೆಲ್ಲ ಬಲ್ಲ

ಸಾಧನೆ ಮಾಡಬೇಕು, ಆದರೆ ಹೇಗೆ? ಏನು? ಎಂದು ಯೋಚಿಸುವುದರಲ್ಲೇ ದಿನ ಕಳೆದುಬಿಡುತ್ತೇವೆ. ಸಾಧಿಸುವ ಛಲವಿದೆ, ಬಲವಿದೆ ಆದರೇನು ಮಾಡುವುದು ಧೈರ್ಯವೇ ಇಲ್ಲ, ಮನಸ್ಸಿನಲ್ಲಿ ಸಾಧಿಸಬೇಕೆಂಬ ಧೃಡ ನಿಶ್ಚಯವೇ ಇಲ್ಲ. ಇದು ಒಬ್ಬಿಬ್ಬರ ಮಾತಲ್ಲ, ಈಗಿನ ಸಮಾಜದಲ್ಲಿ ಅನೇಕರದ್ದು ಇದೇ ಗೋಳು. ಚಂಚಲವಾದ ಮನಸ್ಸು ಯಾವ ಗೆಲುವಿಗೆ ಮುನ್ನುಡಿ ಬರೆಯಲು ಬಿಡುತ್ತಿಲ್ಲವೆಂದು. ಮನಸ್ಸಿದ್ದರೆ ಮಾರ್ಗ ಎನ್ನುವುದು ಸತ್ಯ. ಒಂದು ವೇಳೆ ನಿಮ್ಮ ಮನಸ್ಸೇ ನಿಮ್ಮ ಹತೋಟಿಯಲ್ಲಿರದೇ ಹೋದರೆ? ಗೆಲುವಿನ ಮಾತು ಬದಿಗಿರಲಿ ಏನು ಮಾಡಬೇಕು ಎನ್ನುವುದೂ ಕಾಣದೆ ಎಡಬಿಡಂಗಿ ಬದುಕಾಗಿಬಿಡುತ್ತದೆ.

ಹಗಲುಗನಸಲ್ಲೇ ಮುಳುಗದಿರಿ:
ಡಾ.ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳಿದಂತೆ ‘ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆ ಬರದಂತೆ ಕಾಡುವುದು ಕನಸು’. ಈ ಮಾತನ್ನು ಒಂದಿಷ್ಟು ಜನ ಎಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ಎಂದರೆ ರಾತ್ರಿ ಮಲಗಿದಾಗಲೂ ಸೂರನ್ನು ನೋಡುತ್ತಾ ಇನ್ನೆರೆಡು ವರ್ಷಗಳ ನಂತರ ನಾನು ಹೀಗಿರುತ್ತೇನೆ, ಹಾಗಿರುತ್ತೇನೆ ಎಂದು ತಾವು ಕಲ್ಪನೆಯ ಲೋಕದಲ್ಲಿ ವಿಹರಿಸಿಕೊಂಡು, ನಕ್ಕು ನಿದ್ದಗೆ ಜಾರಿ ಬಿಡುತ್ತಾರೆ. ಆದರೆ ಆ ಕಲ್ಪನೆ ನೈಜಾಂಶವಾಗಲು ಏನು ಮಾಡಬೇಕೆಂಬ ಸಣ್ಣ ಆಲೋಚನೆಯನ್ನು ಅವರು ಮಾಡುವುದೇ ಇಲ್ಲ. ಹಗಲುಗನಸಲ್ಲೇ ದಿನ ಕಳೆಯುತ್ತಾ ಜೀವನಪರ್ಯಂತ ಬದುಕನ್ನು ನೂಕಬೇಕಾಗುತ್ತದೆ. ಕನಸು ನನಸಾಗಬೇಕೆಂದರೆ ಮೊದಲು ಮನಸ್ಸಿನಲ್ಲಿ ಗಟ್ಟಿಯಾಗಿ ನಿರ್ಧಾರ ಮಾಡಿ ಅದರಂತೆ ನಡೆದುಕೊಳ್ಳಬೇಕು.

ತಪ್ಪಾದೊಡನೆ ಹಿನ್ನೆಡೆಯೆಂದುಕೊಳ್ಳಬಾರದು:
ಧೃಡ ನಿರ್ಧಾರ ಮಾಡಾಗಿದೆ. ಇನ್ನು ನಾನು ಗೆದ್ದೇ ತೀರುತ್ತೇನೆ ಎನ್ನುತ್ತಾ ಛಲದಿಂದ ಮುನ್ನುಗ್ಗುತ್ತಾರೆ ಕೆಲವರು. ತಮ್ಮ ಹಾದಿಯಲ್ಲಿ ಒಂದು ಸಣ್ಣ ತಪ್ಪಾಯಿತು, ಇಲ್ಲವೇ ತಮ್ಮಿಂದ ಯಾವುದೋ ಒಂದು ಸಣ್ಣ ಕಾರ್ಯ ಸಾಧ್ಯವಾಗಲಿಲ್ಲ ಎಂದಾಕ್ಷಣ ಮುಖ ಸಪ್ಪೆ ಮಾಡಿಕೊಂಡು ‘ಈ ಕೆಲಸ ನನ್ನಿಂದಾಗದು’ ಎಂದು ಸುಮ್ಮನಾಗಿಬಿಡುತ್ತಾರೆ. ಸಾಧನೆ ಎನ್ನುವುದೇನು ಸಣ್ಣ ವಿಚಾರವಲ್ಲ. ಅಂತದ್ದರಲ್ಲಿ ಆ ಹಾದಿಯಲ್ಲಿ ಕಲ್ಲು-ಮುಳ್ಳು, ಕಷ್ಟ-ನಷ್ಟ, ಸೋಲು-ಗೆಲುವು ಸರ್ವೇ ಸಾಮಾನ್ಯ. ಇವೆಲ್ಲವನ್ನೂ ಜಯಿಸಿದರೆ ಮಾತ್ರ ಗೆಲುವು ಸಾಧ್ಯ. ಮನಷ್ಯನೆಂದ ಮೇಲೆ ತಪ್ಪು ಸಹಜವಲ್ಲವೇ. ಆದರೆ ಆ ತಪ್ಪನ್ನು ಅರಿತು ಮುಂದೆ ಮತ್ತೆ ಅಂತಹ ತಪ್ಪಾಗದಂತೆ ನಡೆದರೆ ಮಾರುದ್ದವಷ್ಟೆ.

ನಮ್ಮ ಮೇಲೆ ನಮಗೇ ನಂಬಿಕೆಯಿಲ್ಲದಿದ್ದರೆ?
‘ಅಯ್ಯೋ ಇಷ್ಟು ದೊಡ್ಡ ಕೆಲಸ ನನ್ನಿಂದ ಸಾಧ್ಯನಾ?’, ‘ಒಂದು ವೇಳೆ ತಪ್ಪಾಗಿಬಿಟ್ಟರೆ?’ ಹೀಗೆಲ್ಲಾ ಪ್ರಶ್ನೆಗಳು ಹುಟ್ಟುವುದು ಸಹಜ. ಆದರೆ ಈ ರೀತಿಯ ಪ್ರಶ್ನೆಗಳನ್ನು ಹುಟ್ಟುತ್ತಲೇ ಕೊಲ್ಲುವ ಪ್ರಯತ್ನ ಮಾಡಿ. ‘ಯೆಸ್, ಐ ಕ್ಯಾನ್ ಡು ಇಟ್’ ಎನ್ನುವ ನಿಮ್ಮ ನಂಬಿಕೆ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮಾನಸಿಕವಾಗಿ ಗೆಲುವು ನನ್ನದೇ ಎಂದು ನಿಶ್ಚಯಿಸಿದರೆ ಯಾವ ಸೋಲೂ ಸಹ ನಿಮ್ಮ ಬಳಿ ಸುಳಿಯುವ ಮಾಡುವುದಿಲ್ಲ.

ಕ್ರಿಯಾತ್ಮಕವಾಗಿರಲಿ ಚಿಂತನೆಗಳು:
ಕೇವಲ ದೇಹದ ಶಕ್ತಿಯಿಂದ ಗೆಲ್ಲುತ್ತೇನೆ ಎನ್ನುವಂತಹ ಕೆಲಸಗಳು ತೀರಾ ಕಡಿಮೆ. ಶಕ್ತಿ ಜತೆ ಯುಕ್ತಿಯೂ ಅತೀ ಮುಖ್ಯ. ಯಾವುದಾದರೊಂದು ಕೆಲಸವನ್ನು ಆರಂಭಿಸಬೇಕಾದಲ್ಲಿ ಒಂದೇ ಮಾರ್ಗದಲ್ಲಿ ಯೋಚಿಸಬೇಡಿ. ಈ ಕೆಲವಸನ್ನು ಇನ್ನವುದಾದರೂ ರೀತಿಯಲ್ಲಿ ಮಾಡಬಹುದೇ ಎನ್ನುವುದನ್ನು ಯೋಚಿಸಿ. ಹಾಗೊಂದು ವೇಳೆ ಬೇರೆ ಮಾರ್ಗವೇ ಸುಲಭವೆನಿಸಿದರೆ ಬೇರೆಯವರ ಮಾತಿಗೆ ಎಣೆ ಕೊಡದೆ ಮುನ್ನುಗ್ಗಿ. ಮನಸ್ಸನ್ನು ಬೇರೆ ರೀತಿ ಚಿಂತನೆಗೆ ತಳ್ಳದೆ ಈ ರೀತಿ ಯೋಚಿಸುವುದು ಒಳಿತು.

ಕಿವುಡರಾಗಿ:
ಏನಾದರೂ ಸಾಧಿಸಲು ಅಣಿಯಾಗುತ್ತಿದ್ದೀರ ಎಂದಾಕ್ಷಣ ನಿಮ್ಮ ಮನಸ್ಸನ್ನು ಬೇರತ್ತ ಸೆಳೆಯಲೆಂದೇ ಒಂದಿಷ್ಟು ಜನರು ನಿಮ್ಮ ಅಕ್ಕ-ಪಕ್ಕ ಬರುತ್ತಾರೆ. ಅವರು ಬಂದು ಏನೇ ಹೇಳಿದರೂ ‘ಹೂಂ, ಸರಿ, ಆಗಲಿ’ ಎಂದು ಅವರ ಮಾತಿಗೆ ಒಪ್ಪಿದವರಂತೆ ಅವರನ್ನು ನಂಬಿಸಿ ಕಳುಹಿಸಿ. ಆದರೆ ಅವರ ಯಾವ ಮಾತನ್ನು ನೀವು ಕೇಳಿಸಿಕೊಳ್ಳಬೇಡಿ. ಅನಾವಶ್ಯಕ ಮಾತುಗಳಿಂದ ನಿಮಗೆ ಯಾವುದೇ ಲಾಭವಿಲ್ಲ. ಅಂತಹ ಮಾತುಗಳಿಂದ ಮನಸ್ಸು ಮತ್ತಷ್ಟು ಚಂಚಲವಾದೀತೆ ಹೊರೆತು ಬೇರೇನು ಸಾಧ್ಯವಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close