About Us Advertise with us Be a Reporter E-Paper

ಅಂಕಣಗಳು

ನಿಂತ ನೆರೆ, ಮಾಯದ ಬರೆ

ಶತಮಾನದ ಅತ್ಯಂತ ಭೀಕರ ಪ್ರವಾಹದಿಂದ ನಲುಗಿಹೋಗಿರುವ ಕೇರಳ ಮತ್ತೆ ತನ್ನ ಹಿಂದಿನ ವೈಭವಕ್ಕೆ ಮರಳಲು ಸಾಕಷ್ಟು ಸಮಯವೇ ಹಿಡಿದೀತು. ಪ್ರಕೃತಿಯ ಮುನಿಸಿನ ಪ್ರಮಾಣ ಕೇರಳದ ಬುಡವನ್ನೇ ಅಲುಗಾಡಿಸಿದೆ. ದೇವರ ನಾಡು ಇಂದು ಅಕ್ಷರಶಃ ಛಿದ್ರಗೊಂಡಿದೆ. ವಿಕೋಪದ ಪ್ರಕೋಪ ಕೇರಳವನ್ನು ನಿತ್ರಾಣಗೊಳಿಸಿದೆ. ನೆರೆ ಪರಿಸ್ಥಿತಿ ಸುಧಾರಿಸಿದ್ದು, ಪರಿಸ್ಥಿತಿ ಸಹಜತೆಯತ್ತ ಮರಳುವ ನಿಟ್ಟಿನಲ್ಲಿ ಕೊಂಚ ಆಶಾಭಾವ ಮೂಡಿಸಿದೆ. ಕೇರಳದ ಈ ಪರಿಸ್ಥಿತಿಗೆ ಇಡೀ ದೇಶವೇ ಮಮ್ಮುಲ ಮರುಗಿದೆ. ತನ್ನ ಕೈಲಾದ ನೆರವು ಸಂತ್ರಸ್ತರ ಆರ್ತನಾದಕ್ಕೆ ದೇಶವಾಸಿಗಳು ಸಾಂತ್ವನದ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ‌್ಯಗಳಿಗೆ ಮೊದಲ ಆದ್ಯತ. ಕೇರಳದ ವಿಕೋಪ ಸಹ ಇದಕ್ಕೆ ಭಿನ್ನವಲ್ಲ. ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ನೆರೆ ಕಡಿಮೆಯಾದರೂ ಅದು ತಂದು ಹೋಗುವ ಗೋಳು ತೀರದು. ಉಕ್ಕಿದ ನೀರು ಮತ್ತ ಹಳ್ಳ ಸೇರಿ ನಿರುಮ್ಮಳವಾಗಬಹುದು. ಆದರೆ ಅದರ ಉಬ್ಬರದ ಅಬ್ಬರದಲ್ಲಿ ಅವಶೇಷಗೊಂಡ ಬದುಕು ಮತ್ತೆ ಕಟ್ಟಿಕೊಳ್ಳುವುದು ಯಾವುದೇ ಸಮುದಾಯಕ್ಕೆ ಸಾಹಸವೇ ಸರಿ. ನೆರೆ ನಿಂತ ಮೇಲೆ ನಷ್ಟದ ಲೆಕ್ಕ ಶುರುವಾಗುತ್ತದೆ. ಜೊತೆಗೆ ಸಾಂಕ್ರಾಮಿಕ ರೂಗಗಳ ಪಿಡುಗು ಸಂತ್ರಸ್ತರನ್ನು ಬಿಡದೆ ಕಾಡುತ್ತದೆ. ಸಾಂಕ್ರಾಮಿಕ ರೋಗ ರುಜಿನಗಳು ಹರಡದಂತೆ ಕಟು ಎಚ್ಚರಿಕೆ ವಹಿಸಬೇಕಾದ್ದು ಈಗ ಸರಕಾರದ ಆದ್ಯ ಕರ್ತವ್ಯವಾಗಿದೆ. ಇದೆ ಜೊತೆಗೇ ಚೂರಾದ ಬದುಕುಗಳನ್ನು ಕಟ್ಟುವ ಪ್ರಕ್ರಿಯೆ ಸಹ ನಡೆಯಬೇಕು. ಕೇರಳದಲ್ಲಿ ಮೇಲ್ನೋಟದ ಅಂದಾಜಿನಂತೆ 20 ಸಾವಿರ ಕೋಟಿಗೂ ಮಿಕ್ಕಿನ ಹಾನಿ ಸಂಭವಿಸಿದೆ. ಇದೇನೂ ಸಣ್ಣ ಪ್ರಮಾಣವಲ್ಲ. ರಾಜ್ಯ ಹಾಗೂ ಕೇಂದ್ರ ಈ ಪರಿಯ ಪುನರ್ವಸತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಸುಲಭದ ಮಾತಲ್ಲ. ಹಾಗೆಂದು ಸುಮ್ಮನೆ ಕೂರುವುದೂ ಅಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಭೀಕರತೆಯ ಮೊದಲಂದಾಜು ಮಾಡಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರಕಾರವು ಕೇರಳದ ಬೆನ್ನಿಗೆ ನಿಲ್ಲಬೇಕಿದೆ. ಯಾವುದೇ ರೀತಿಯ ರಾಜಕಾರಣದ ಕಮಟು ಬಾರದಂತೆ ಎಚ್ಚರ ವಹಿಸಬೇಕಿದೆ. ಜನರಿಗೆ ಬದುಕು ಕಟ್ಟಿಕೊಡುವ ಮಹತ್ಕಾರ್ಯದಲ್ಲಿ ಇಡೀ ದೇಶ ಕೇರಳಿಗರ ಜೊತೆ ನಿಲ್ಲಬೇಕಿರುವುದ ಕರ್ತವ್ಯ.

Tags

Related Articles

Leave a Reply

Your email address will not be published. Required fields are marked *

Language
Close