About Us Advertise with us Be a Reporter E-Paper

ಅಂಕಣಗಳು

ಚಿಂತಕರ’ ಬತ್ತಳಿಕೆಯಿಂದ ಬಂದ ‘ವೈದಿಕ ಬ್ರಾಹ್ಮಣರು ಹಾಗೂ ಲೌಕಿಕ ಬ್ರಾಹ್ಮಣರು’ ಎಂಬ ಹೊಸ ವಾದ!

ಸಂಸ್ಕೃತದಲ್ಲಿ ಕಾಕದಂತಪರೀಕ್ಷೆ ಎಂಬ ಹೆಸರಿನ ನ್ಯಾಯವೊಂದಿದೆ. ಕಾಗೆಗೆ ಹಲ್ಲುಗಳಿವೆಯೇ, ಇದ್ದರೆ ಎಷ್ಟಿವೆ ಎಂದು ಸುಮಾರು ಜನ ಪಂಡಿತರು ಒಮ್ಮೆ ಸಭೆ ಸೇರಿ ಚರ್ಚಿಸಿದರಂತೆ. ಆ ಚರ್ಚೆಗೆ ಕಾರಣ ಏನು ಎಂದರೆ – ತಾವು ಪಂಡಿತರೆಂದು ಭಾವಿಸಿದ ನಾಲ್ಕೈದು ಮಂದಿ ಜೊತೆ ಸೇರಿದ್ದರು. ಅವರಿಗೆ ಆ ಕ್ಷಣದಲ್ಲಿ ಮಾಡಲು ಬೇರೇನೂ ಕೆಲಸವಿರಲಿಲ್ಲ. ಒಂದಿಲ್ಲೊಂದು ವಿಷಯದ ಮೇಲೆ ಪಟ್ಟಾಂಗ ಹೊಡೆಯುವುದು ಬಿಟ್ಟರೆ ಬೇರೆ ಕೆಲಸ ಅವರಿಗೆ ಗೊತ್ತಿರಲೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಾವೊಂದು ಗಂಭೀರವಾದ ವಿಷಯದ ಮೇಲೂ ಚಿಂತನೆ ನಡೆಸುವಷ್ಟು ಬೌದ್ಧಿಕತೆ ಅವರಾರಿಗೂ ಇರಲಿಲ್ಲ! ಹೀಗಾಗಿ, ಹೇಗೂ ಹೊತ್ತು ಕಳೆಯಬೇಕು; ತಮ್ಮತಮ್ಮಲ್ಲೇ ಮಾತಾಡಿಕೊಂಡು ಮನರಂಜನೆ ಪಡೆಯುತ್ತ ಕಾಲ ಕಳೆಯಬೇಕು ಎಂದು ನಿರ್ಧರಿಸಿದ ಆ ಪಂಡಿತರು ಕಾಗೆಯ ಹಲ್ಲಿನ ಬಗ್ಗೆ ಬಹಳ ಗಂಭೀರವಾದ ಚರ್ವಿತಚರ್ವಣ ನಡೆಸುತ್ತ ಕೂತುಬಿಟ್ಟರಂತೆ. ಕಾಗೆಗೆ ಹಲ್ಲಿದ್ದರೂ ಇರದೇ ಇದ್ದರೂ ಅದರಿಂದ ಅವರಿಗೆ ಆಗಬೇಕಾದ ಲಾಭ-ನಷ್ಟ ಏನೂ ಇರಲಿಲ್ಲ. ಆದರೂ ಹೊತ್ತುಕಳೆಯಲಿಕ್ಕೆ ಬೇಕಾಗಿ ಘನಗಂಭೀರವಾದ ಚರ್ಚೆ ನಡೆದೇ ನಡೆಯಿತು!

ಹಾಗೆ ಮೊನ್ನೆ ದಾವಣಗೆರೆಯಲ್ಲಿ ಒಂದು ಕಾರ್ಯಕ್ರಮ ಆಯೋಜನೆಯಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು – ಈ ಮೂರು ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿದ್ದವು. ಅಲ್ಲಿ, ‘ಕರ್ನಾಟಕ ಪರಂಪರೆಯ ಜಾತ್ಯತೀತ ನೆಲೆಗಳು’ (ಇದರ ಅರ್ಥ ದೇವರೇ ಬಲ್ಲ!) ಎಂಬ ಹೆಸರಲ್ಲಿ ಒಂದು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದ ಮಾತುಗಳನ್ನು ಓದಿ: ಉತ್ತರ ಭಾರತದಲ್ಲಿನ ವಾಣಿಜ್ಯ ವಿನಿಮಯ ಧರ್ಮಗಳು ಕರ್ನಾಟಕಕ್ಕೆ ಬಂದಾಗ ಕೃಷಿ ಕೇಂದ್ರಿತ ಧರ್ಮಗಳಾಗಿ ಬದಲಾಗಿದ್ದವು. ಜೈನ ಧರ್ಮ ಕೂಡ ಕರ್ನಾಟಕಕ್ಕೆ ಬಂದ ಬಳಿಕ ವ್ಯವಸಾಯ ಧರ್ಮವಾಯಿತು. ಆದರೆ, ಅದಕ್ಕಿಂತ ಮೊದಲೇ ಇಲ್ಲಿ ಕೃಷಿಕರ ಜತೆಗೆ ದೇಸಿ ವ್ಯವಹಾರ ನಡೆಸುತ್ತಿದ್ದವರು ಜೈನರಾಗುವುದಿಲ್ಲ. ಅವರು ಲಿಂಗಾಯತರಾಗುತ್ತಾರೆ. ಲೇವಾದೇವಿ ಧರ್ಮಗಳು ಇಲ್ಲಿ ಕೃಷಿಕ ಧರ್ಮಗಳಾಗಿ ಮಾರ್ಪಾಟು ಆದವು. ಹಾಗಾಗಿ ಕುವೆಂಪು ಅವರ ಪೂರ್ವಿಕರು ಜೈನರಾಗಿದ್ದರು.’

 ಈಗ ಈ ಮಾತನ್ನು ಬೇಕಾದರೆ ಮತ್ತೊಮ್ಮೆ ಓದಿ, ಮಗದೊಮ್ಮೆ ಓದಿ. ತಲೆ ಕೆಳಗೆ ಹಾಕಿ ಶೀರ್ಷಾಸನ ಹಾಕಿ ಓದಿ. ಏನಾದರೂ ಅರ್ಥವಾಯಿತೆ? ನಮ್ಮ ದೇಶದಲ್ಲಿ ಕೃಷಿ ಕೇಂದ್ರಿತ ಧರ್ಮ, ಕೃಷಿ ಕೇಂದ್ರಿತವಲ್ಲದ ಧರ್ಮ ಎಂದು ಏನಾದರೂ ಇದೆಯೇ? ಜೈನ ಧರ್ಮ ಕರ್ನಾಟಕಕ್ಕೆ ಬಂದ ಮೇಲೆ ವ್ಯವಸಾಯ ಧರ್ಮವಾಯಿತು ಎಂದರೆ ಏನರ್ಥ? ಜೈನರು ಕರ್ನಾಟಕದ ಹೊರಗೆ ಅನ್ನ ತಿನ್ನುತ್ತಿರಲಿಲ್ಲವೆ? ವ್ಯವಸಾಯ ಮಾಡುತ್ತಿರಲಿಲ್ಲವೆ? ಕರ್ನಾಟಕಕ್ಕೆ ಬಂದ ಮೇಲೆ ಅದು ವ್ಯವಸಾಯ ಧರ್ಮವಾಯಿತಾದರೆ ಕರ್ನಾಟಕವನ್ನು ನೂರಾರು ವರ್ಷಗಳ ಕಾಲ ಆಳಿದ ಜೈನ ರಾಜವಂಶಗಳನ್ನು ಯಾವ ಕೆಟಗರಿಯಲ್ಲಿ ಹಾಕಬೇಕು? ಏಕಕಾಲಕ್ಕೆ ಅದು ವ್ಯವಸಾಯ ಧರ್ಮವೂ ಕ್ಷತ್ರಿಯ ಧರ್ಮವೂ ಆಗಿತ್ತೆ? ಇನ್ನು ಇಲ್ಲಿ (ಅಂದರೆ ಕರ್ನಾಟಕದಲ್ಲಿ) ಕೃಷಿಕರ ಜೊತೆ ದೇಸಿ ವ್ಯವಹಾರ ನಡೆಸುತ್ತಿದ್ದವರು ಯಾರು? ದೇಸಿ ವ್ಯವಹಾರ ಎಂದರೆ ಏನು? ಅವರು ಜೈನರಾಗುವುದಿಲ್ಲ, ಲಿಂಗಾಯತರಾಗುತ್ತಾರೆ ಎಂದರೆ ಅರ್ಥ ಏನು? ಲೇವಾದೇವಿ ವ್ಯವಹಾರ ಮತ್ತು ದೇಸಿ ವ್ಯವಹಾರಗಳು ಬೇರೆ ಬೇರೆ – ಎಂದರೆ ಏನು? ಲೇವಾದೇವಿ ಧರ್ಮ ಎಂದರೆ ಯಾವುದು? ಅದು ಯಾವಾಗ ಕೃಷಿ ಧರ್ಮ ಆಯಿತು? ಬಹುಶಃ ಐನ್‌ಸ್ಟೈನರ ಸಾಪೇಕ್ಷ ಸಿದ್ಧಾಂತವನ್ನಾದರೂ ಓದಿ ಮನನ ಮಾಡಿಕೊಳ್ಳಬಹುದೇನೋ. ಬ್ಯಾಬಿಲೋನಿಯನ್ನರು ಮಣ್ಣಹೆಂಟೆಗಳ ಮೇಲೆ ಗೀಚಿದ ಸಂಕೇತಗಳ ಗೂಢವನ್ನಾದರೂ ಒಡೆಯಬಹುದೇನೋ. ರಾಹುಲ್ ಗಾಂಽಯ ಭಾಷಣಕ್ಕಾದರೂ ಅರ್ಥ ಹಚ್ಚಬಹುದೇನೋ. ಆದರೆ ಈ ಚಿಂತಕ-ವಿಚಾರವಾದಿ-ಪ್ರಗತಿಪರ-ಸಾಕ್ಷಿಪ್ರe ಹೇಳುತ್ತಿರುವ ಮಣ್ಣಾಂಗಟ್ಟಿ ಮಾತಿನ ಗೂಢ-ಗಾಢಾರ್ಥಗಳನ್ನು ಮಾತ್ರ ಯಾವ ಪಾತಾಳಗರಡಿ ಹಾಕಿದರೂ ಬಿಡಿಸಲು ಸಾಧ್ಯವಿಲ್ಲ!

ಇದೇ ಬಂಜಗೆರೆ ಮುಂದುವರಿದು ಹೇಳುತ್ತಾರೆ: ‘ವೈದಿಕ ಬ್ರಾಹ್ಮಣರ ಪ್ರಭಾವ ಮತ್ತು ಸಂಖ್ಯೆ ಎರಡೂ ದಕ್ಷಿಣ ಭಾರತದಲ್ಲಿ ಕಡಿಮೆ. ಪಂಪನನ್ನು ಬ್ರಾಹ್ಮಣ ಎಂದು ಗುರುತಿಸಿದ್ದರೂ ಆತ ವೈದಿಕ ಬ್ರಾಹ್ಮಣನಲ್ಲ; ಲೌಕಿಕ ಬ್ರಾಹ್ಮಣ. ಕೃಷಿ ಮಾಡಿಕೊಂಡು ಬಂದ ಬ್ರಾಹ್ಮಣ. ಹಿಂದುತ್ವದ ಉಗ್ರ ಪ್ರತಿಪಾದಕರಾಗಿರುವ ಭೈರಪ್ಪ ಕೂಡ ವೈದಿಕರಲ್ಲ; ಅವರು ಹೊಯ್ಸಳ ಕರ್ನಾಟಕದ ಬ್ರಾಹ್ಮಣರು. ಶ್ಯಾನುಭೋಗರಾಗಿ, ರೈತರಾಗಿ ಕೆಲಸ ಮಾಡುವವರು. ಇತರ ಬ್ರಾಹ್ಮಣರು ಅವರನ್ನು ಶ್ರೇಷ್ಠರೆಂದು ಎಂದೂ ಪರಿಗಣಿಸಿಲ್ಲ!’ ತನ್ನ ಈ ಮಾತಿನ ಮೂಲಕ ಬಂಜಗೆರೆ, ತನ್ನ ಗುಂಪಿನ ಇತರ ವಿಚಾರವ್ಯಾಽಗಳು ಇಷ್ಟೂ ವರ್ಷಗಳ ಕಾಲ ಬೆಳೆಸುತ್ತ ಬಂದ ವಾದವನ್ನೇ ಬುಡಮೇಲೆ ಮಾಡಿದ್ದೇನೆಂಬುದನ್ನು ಬಹುಶಃ ಅರಿತಿಲ್ಲ! ಈ ವಿಚಾರಭಯಂಕರರು ಇಷ್ಟು ವರ್ಷ ಹೇಳಿದ್ದೇನು? ಇಡೀ ಭಾರತದ ಸಮಾಜವನ್ನು ಬ್ರಾಹ್ಮಣರು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದಾರೆ. ತಾವು ಹೇಳಿದಂತೆ ಸಮಾಜದ ಉಳಿದೆಲ್ಲರೂ ಕೇಳುವಂತೆ ಮಾಡಿದ್ದಾರೆ. ಇವರು ಯಾರೂ ಕೃಷಿ ಕೆಲಸ ಮಾಡುತ್ತಿರಲಿಲ್ಲ. ವೇದಗಳನ್ನು ಕಂಠಪಾಠ ಮಾಡಿ ಉರುಹೊಡೆಯುವುದೇ ಇವರ ಜೀವನವಾಗಿತ್ತು. ಈ ಬ್ರಾಹ್ಮಣರನ್ನು ಸಮಾಜದ ಉಳಿದೆಲ್ಲರೂ ಅನ್ನ-ಬೇಳೆ ಕೊಟ್ಟು ಸಾಕಬೇಕಿತ್ತು… ಇಷ್ಟೆಲ್ಲ ಹೇಳಿದ್ದ ಬುದ್ಧಿಜೀವಿ ಬಳಗದ್ದೇ ಪ್ರತಿನಿಽಯಾದ ಬಂಜಗೆರೆ ಈಗ ಹೇಳುತ್ತಿರುವ ಮಾತುಗಳು ಮಾತ್ರ ಅವಷ್ಟಕ್ಕೂ ತದ್ವಿರುದ್ಧವಾಗಿದೆ! ಈಗ ಈತ ಹೇಳುತ್ತಾನೆ, ಬ್ರಾಹ್ಮಣರು ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರಲಿಲ್ಲ; ಅವರ ಪ್ರಭಾವ ಸಮಾಜದಲ್ಲಿ ಹೆಚ್ಚೇನೂ ಇರಲಿಲ್ಲ; ಬ್ರಾಹ್ಮಣರು ಕೃಷಿಯನ್ನೂ ಮಾಡುತ್ತಿದ್ದರು, ಶ್ಯಾನುಭೋಗಿಕೆಯನ್ನೂ ಮಾಡುತ್ತಿದ್ದರು!

ಹಿಂದೊಮ್ಮೆ ಹೇಳಿದ್ದೆ, ಈ ದೇಶದಲ್ಲಿ ಪ್ರಗತಿಪರರೆಂದು ಕರೆಸಿಕೊಳ್ಳುವವರು ಯಾರು ಗೊತ್ತೆ? ಸರಕಾರ ಯಾವ ಪ್ರಗತಿ ಕೆಲಸವನ್ನು ಕೈಗೊಂಡರೂ ಅದನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹತ್ತಿಕ್ಕಲು ಪ್ರಯತ್ನಿಸುವವರು. ಪ್ರಗತಿಯ ಕೆಲಸಗಳಿಗೆ ಕಲ್ಲು ಹಾಕುವವರು. ಜಾತ್ಯತೀತರು ಯಾರು ಗೊತ್ತೆ? ಯಾರು ಎಲ್ಲ ವಿಷಯಗಳಲ್ಲೂ-ಅಗತ್ಯ ಇರಲಿ ಇಲ್ಲದಿರಲಿ-ಜಾತಿಯನ್ನು ಎಳೆದುತರುತ್ತಾರೋ ಅವರು! ನಾನು ನನ್ನ ಇಡೀ ಶಿಕ್ಷಣ ಮುಗಿಸಿ ನೌಕರಿಗೆಂದು ಬೆಂಗಳೂರು ಸೇರುವವರೆಗೂ ನನಗೆ ವಿಶ್ವೇಶ್ವರಯ್ಯನವರು ಬ್ರಾಹ್ಮಣರು ಎಂದು ಗೊತ್ತಿರಲಿಲ್ಲ. ಅವರು ಬ್ರಾಹ್ಮಣರಾಗಿದ್ದಕ್ಕೇ ಮೀಸಲಾತಿ ವಿರೋಽಸಿದರು ಎಂಬ ಸಂಶೋಧನೆಯನ್ನು ನಮ್ಮ ಪ್ರಗತಿಪರ, ಬ್ರಾಹ್ಮಣವಿರೋಽ ಬ್ರಿಗೇಡ್ ಮಾಡಿದ ಮೇಲಷ್ಟೇ ವಿಶ್ವೇಶ್ವರಯ್ಯನವರ ಜಾತಿಯನ್ನು ತಿಳಿಯುವಂತಾಯಿತು.

ಹಾಗೆಯೇ, ಭೈರಪ್ಪನವರ ಕಾದಂಬರಿಗಳನ್ನು ಓದಿದ ಬಹುತೇಕ ಓದುಗರಿಗೆ ಬಹುಶಃ ಅವರು ಬ್ರಾಹ್ಮಣರೆಂಬುದು ಗೊತ್ತಿರಲಿಕ್ಕಿಲ್ಲ. ಭೈರಪ್ಪ ಒಂದು ವೇಳೆ ಲಿಂಗಾಯತರೋ, ಕುರುಬರೋ, ಒಕ್ಕಲಿಗರೋ, ದಲಿತರೋ ಆಗಿದ್ದರೂ ಅವರ ಅಭಿಮಾನಿಗಳಿಗೆ ಕಾದಂಬರಿಯ ಓದಿಗೆ ಅದ್ಯಾವುದೂ ತೊಡಕಾಗುತ್ತಿರಲಿಲ್ಲ. ಯಾರು ತನ್ನ ಹೆಸರಲ್ಲಿ ಜಾತಿಸೂಚಕವನ್ನು ವಿಜೃಂಭಣೆಯಿಂದ ಹಾಕಿಕೊಳ್ಳುತ್ತಾನೋ, ಯಾರು ಜಾತಿಯ ನೆಲೆಯಿಂದಲೇ ತನ್ನ ಶಿಕ್ಷಣ, ಉದ್ಯೋಗ, ಬಡ್ತಿ, ಪ್ರಶಸ್ತಿ ಎಲ್ಲವನ್ನೂ ಪಡೆಯುತ್ತಾನೋ, ಯಾರಿಗೆ ಜಾತಿಯೊಂದೇ ಸಕಲ ಸೌಲಭ್ಯಗಳನ್ನೂ ಪಡೆಯಲು ಅರ್ಹತೆಯಾಗಿದೆಯೋ ಅಂಥವನು ಈ ದೇಶದಲ್ಲಿ ಜಾತ್ಯತೀತವಾದಿ ಎಂದು ಕರೆಸಿಕೊಳ್ಳುತ್ತಾನೆ! ಯಾರು ತನ್ನ ಜಾತಿಯನ್ನು ಎಲ್ಲೂ ಮುಂದಿಟ್ಟು ನೌಕರಿ, ಪ್ರಶಸ್ತಿ, ಮನೆ-ಮಾರು, ಸರಕಾರಿ ಸೈಟು ಪಡೆಯುವುದಿಲ್ಲವೋ ಆತ ಈ ದೇಶದಲ್ಲಿ ಜಾತಿವಾದಿ! ಕೋಮುವಾದಿ! ಹಿಂದುತ್ವದ ಉಗ್ರ ಪ್ರತಿಪಾದಕ!

ಇನ್ನು ನಮ್ಮ ದೇಶದಲ್ಲಿ ವಿಚಾರವಾದಿಗಳು ಎಂದು ಯಾರನ್ನು ಕರೆಯುತ್ತಾರೆ ಎಂಬುದು ನಿಮಗೆಲ್ಲ ಗೊತ್ತಿದ್ದೀತು. ಯಾರಿಗೆ ತಲೆಯಲ್ಲಿ ಒಂದೇ ಒಂದು ಔನ್ಸಿನಷ್ಟು ಕಾಮನ್‌ಸೆನ್ಸ್ ಇರುವುದಿಲ್ಲವೋ, ತರ್ಕಬದ್ಧವಾದ ಸಿದ್ಧಾಂತ ಪ್ರತಿಪಾದನೆ ಎಂದರೆ ಯಾರಿಗೆ ಅಲರ್ಜಿಯೋ, ಯಾರು ಸಂಶೋಧನೆ-ಅಧ್ಯಯನ ಎಂದು ಹೇಳಿದೊಡನೆ ಮೈಮೇಲೆ ಬಿಸಿನೀರು ಬಿದ್ದಂತೆ ಹೌಹಾರುತ್ತಾರೋ ಅಂಥವರು ನಮ್ಮಲ್ಲಿ ವಿಚಾರವಾದಿಗಳು! ಅವರು ತಮ್ಮ ಕೋಣಕ್ಕೆ ಮೂರೇ ಕಾಲು ಎಂದರೆ, ಮರುದಿನವೇ ದೇಶದ ಪಠ್ಯಪುಸ್ತಕಗಳಲ್ಲಿ, ಕೋಣಗಳಿಗೆ ಇರುವುದು ಮೂರೇ ಕಾಲು ಎಂಬ ಸಾಲು ಪ್ರಕಟವಾಗುತ್ತದೆ. ಕೋಟ್ಯಂತರ ವಿದ್ಯಾರ್ಥಿಗಳು ಅದನ್ನೇ ಓದಿ ಉರುಹೊಡೆದು ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಈ ದೇಶದ ದುರಂತ.

ವಿಚಾರವಾದಿಗಳನ್ನು ಅವರ ಪಾಡಿಗೆ ಬಿಡಿ. ಅವರಿಂದ ದೇಶದ ಏಳಿಗೆಗೆ ಒಂದಂಶವೂ ಲಾಭ ಇಲ್ಲ. ಅಂಥವರು ಅವರ ಪಾಡಿಗೆ ಅರಚಾಡುತ್ತಿರಲಿ. ನಮಗೇನೂ ಅವರ ಜೊತೆ ಲೇನಾದೇನಾ ಇಲ್ಲವಲ್ಲ ಎಂದು ಕೆಲವರು ಹೇಳುತ್ತಾರೆ. ಕುಂವೀ, ಬಂಜಗೆರೆ, ಚಂಪಾ, ಭಗವಾನ್ ಮುಂತಾದ ಅರೆಹುಚ್ಚರು ಅವರ ಪಾಡಿಗೆ ದಿನಕ್ಕೊಂದು ಹೊಸ ಸಿದ್ಧಾಂತ ಒದರುತ್ತಿರಲಿ, ಅವರನ್ನು ನಿರ್ಲಕ್ಷಿಸೋಣ ಎಂಬುದು ಬಹುಜನರ ಅಭಿಪ್ರಾಯ. ಆದರೆ, ನೆರಳನ್ನು ತೋರಿಸಿ ಪಿಶಾಚಿ ಎಂದು ಬೆದರಿಸುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೂ ಅದು ಪಿಶಾಚಿಯಲ್ಲ, ನೆರಳು ಮಾತ್ರ ಎಂಬ ತಿಳಿವಳಿಕೆ ಕೊಡುವ ಕೆಲಸವನ್ನೂ ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ ಬುದ್ಧಿಜೀವಿ, ಚಿಂತಕ, ವಿಚಾರವಾದಿ, ಪ್ರಗತಿಪರ, ಜಾತ್ಯತೀತ, ಸಾಕ್ಷಿಪ್ರe ಎಂದೆಲ್ಲ ಬಗೆಬಗೆಯ ಹಣೆಪಟ್ಟಿ ಹಚ್ಚಿಕೊಂಡು ಓಡಾಡುವ ವ್ಯಕ್ತಿಗಳನ್ನೆಲ್ಲ ಒಮ್ಮೆ ನೋಡಿ. ಇವರು ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು? ಇವರು ಬರೆದ ಮೂರು ಮತ್ತೊಂದು ಪುಸ್ತಕವನ್ನು ಯಾರು ಓದುತ್ತಾರೆ? ಆದರೂ ಇವರೆಲ್ಲ ಸರಕಾರದ ವಿವಿಧ ನಿಗಮ, ಮಂಡಳಿ. ಪ್ರಾಽಕಾರಗಳಲ್ಲಿ ಮೂರ್ನಾಲ್ಕು ವರ್ಷಕ್ಕೆ ಗೂಟ ಹೊಡೆದು ಕೂತಿದ್ದಾರೆ. ಇವರಿಗೆ ಸಲ್ಲಿಕೆಯಾಗುವ ಸವಲತ್ತುಗಳೆಲ್ಲವೂ ಜನಸಾಮಾನ್ಯರು ಕಟ್ಟುವ ತೆರಿಗೆ ದುಡ್ಡಿನದು. ಇಂಥ ಬಕಾಸುರರನ್ನು ಸಾಕಲೆಂದೇ ಸರಕಾರ ಕೂಡ ಕನ್ನಡ ಅಭಿವೃದ್ಧಿ ಪ್ರಾಽಕಾರ, ಪುಸ್ತಕ ಪ್ರಾಽಕಾರ, ಮತ್ತೊಂದು ಇನ್ನೊಂದು ಎನ್ನುತ್ತ ನೂರಾರು ಬೋರ್ಡುಗಳನ್ನು ತೆರೆದಿದೆ. ಅಲ್ಲೆಲ್ಲ ಕನ್ನಡದ ಕೆಲಸ ಎಷ್ಟು ಆಗುತ್ತದೋ, ಆದರೆ ಜನರ ತೆರಿಗೆ ದುಡ್ಡು ಮಾತ್ರ ಧಂಡಿಯಾಗಿ ಖರ್ಚಾಗುತ್ತದೆ. ಈ ಇಷ್ಟೂ ಬುದ್ಧಿಜೀವಿಗಳು ಸರಕಾರದ ಒಂದಿಲ್ಲೊಂದು ಯೋಜನೆಯಲ್ಲಿ ಸೇರಿಕೊಂಡು ತಿಂಗಳು ತಿಂಗಳೂ ಲಕ್ಷಗಟ್ಟಲೆ ಕಮಾಯಿ ಗಿಟ್ಟಿಸುತ್ತಾರೆ. ಮಾತ್ರವಲ್ಲ ತಮ್ಮ ಸಂಬಂಽಕರೆಲ್ಲರಿಗೂ ಅದೇ ಇಲಾಖೆಗಳಲ್ಲಿ ಮೇಲು-ಕೆಳಗಿನ ಹುದ್ದೆಗಳನ್ನು ಒದಗಿಸಿಕೊಡುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯಂಥ ಸರಕಾರೀ ಬಿಳಿಯಾನೆಗಳು ವರ್ಷಕ್ಕೆ ಹತ್ತಾರು ಸಂಕಿರಣಗಳನ್ನೂ, ಕಾರ್ಯಾಗಾರಗಳನ್ನೂ ನಡೆಸುತ್ತಲೇ ಇರುತ್ತವೆ. ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ಯೂನಿವರ್ಸಿಟಿ ಕ್ಯಾಂಪಸ್‌ಗಳ ಒಳಗೇ ನಡೆಯುವುದರಿಂದ ಜನಸಾಮಾನ್ಯರಿಗೆ ಅವುಗಳ ಕಿಂಚಿತ್ ವಾಸನೆಯೂ ಹತ್ತುವುದಿಲ್ಲ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಮತ್ತೆ ಮತ್ತೆ ವೇದಿಕೆ ಹತ್ತಿ ಭಾಷಣ ಬಿಗಿದು ಟಿಎ-ಡಿಎಗಳನ್ನು ಕಿಸೆ ತುಂಬಿಸಿಕೊಂಡು ಸಂಭಾವನೆ ಎಂದು ಸಾವಿರಾರು ರುಪಾಯಿಗಳನ್ನು ಲಕೋಟೆಯಲ್ಲಿ ಪಡೆಯುವವರೆಲ್ಲ ಈ ಬುದ್ಧಿಜೀವಿಗಳೆಂಬ ನಿಲಯ ಕಲಾವಿದರೇ. ಆಸಕ್ತಿ ಇರುವವರು ಯಾರಾದರೂ ಕರ್ನಾಟಕ ಸರಕಾರದ ನಿಯಂತ್ರಣದಲ್ಲಿರುವ ಅಷ್ಟೂ ಸಂಸ್ಥೆಗಳಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಡೆದಿರುವ ಸಂಕಿರಣಗಳ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆ ಸಹಾಯದಿಂದ ಹೊರತೆಗೆಯಲಿ. ಆಗ ಗೊತ್ತಾದೀತು ಬುದ್ಧಿಜೀವಿಗಳ ಅಸಲಿಯತ್ತು. ‘ಕನ್ನಡ ನಾಡಲ್ಲಿ ಜಾತ್ಯತೀತ ನೆಲೆಗಳು, ಮಧ್ಯಕಾಲೀನ ಯುಗದ ಮಹಿಳೆಯರ ಸಮಸ್ಯೆಗಳು, ವಸಾಹತೋತ್ತರ ಭಾರತದಲ್ಲಿ ಪುರೋಹಿತಶಾಹಿಯ ಪ್ರಭಾವ’ – ಇವೆಲ್ಲ ಹೀಗೆ ನಡೆಯುವ ಸಂಕಿರಣಗಳ ವಿಷಯಗಳು. ಒಂದೊಂದು ಸಂಕಿರಣಕ್ಕೂ ಸಾವಿರಾರು ರುಪಾಯಿ ಅಲ್ಲ ಲಕ್ಷಗಳಷ್ಟು ಖರ್ಚು. ಅದೇ ಜೋಳಿಗೆಗಳ ಒಡ್ಡೋಲಗ, ಅವರದ್ದೇ ಸಿದ್ಧಾಂತಗಳ ಮೆರವಣಿಗೆ, ಅವರದೇ ಮೇಜವಾನಿಗಳು, ಬಿಟ್ಟಿ ಬಿರಿಯಾನಿಗಳು!

ಕೆಲ ದಿನಗಳ ಹಿಂದೆ ಒಂದು ಸಂದರ್ಶನದಲ್ಲಿ ಪ್ರಕಾಶ್ ಬೆಳವಾಡಿ ಹೇಳುತ್ತಿದ್ದರು, ವಿಚಾರವಾದಿಗಳಿಗೆ ಯಾವ ವಿಷಯದ ಬಗ್ಗೆಯೂ ತಿಳಿವಳಿಕೆ ಇರುವುದಿಲ್ಲ. ಆದರೆ ಮೈಕ್ ಹಿಡಿದು ಅಣ್ವಸ ಸ್ಥಾವರದ ಬಗ್ಗೆ ಮಾತಾಡಿ ಎನ್ನಿ, ಅವರು ಮಾತಾಡುತ್ತಾರೆ – ಅಂತ! ಇದು ನೂರಕ್ಕೆ ನೂರೊಂದು ಶೇಕಡಾ ನಿಜವಾದ ಮಾತು. ಈ ದೇಶದಲ್ಲಿ ಒಬ್ಬ ಚಪ್ಪಲಿ ಹೊಲಿಯುವ ಚರ್ಮಕಾರನಾಗಬೇಕಾದರೂ ಒಂದಿಷ್ಟು ತಿಂಗಳ ತರಬೇತಿ ಬೇಕು. ಆದರೆ, ಬುದ್ಧಿಜೀವಿಯಾಗುವುದು ಅತ್ಯಂತ ಸುಲಭದ ಕೆಲಸ! ದಿನ ಬೆಳಗಾದರೆ ನೀವು ಬಾಯಿಗೆ ಬಂದಂತೆ ಆಡಿಕೊಂಡು, ಸಿಕ್ಕಸಿಕ್ಕ ವೇದಿಕೆಗಳಲ್ಲಿ ಓತಪ್ರೋತ ಬಾಯಿಭೇದಿ ಮಾಡಿಕೊಂಡು, ಹೊಸ ಹೊಸ ಸಿದ್ಧಾಂತಗಳನ್ನು ಹೆಣೆಯುತ್ತ ತಿರುಗಾಡುತ್ತಿದ್ದರಾಯಿತು!

ನೀವು ಕುಟ್ಟಿದ ತೌಡನ್ನೇ ಮಹಾಪ್ರಸಾದ ಎಂದು ವಿಶ್ವಾಸಾರ್ಹ ಪತ್ರಿಕೆಗಳು ಪ್ರಕಟಿಸುತ್ತವೆ. ಚಾನೆಲ್‌ಗಳು ಬ್ರೇಕಿಂಗ್ ನ್ಯೂಸ್ ಆಗಿ ತೋರಿಸುತ್ತವೆ. ನಿಮ್ಮ ಮುಂದಿನ ಮೂರ್ನಾಲ್ಕು ತಿಂಗಳ ಗಂಜಿಗೆ ಅಂತೂ ಇಂತೂ ಒಂದು ದಾರಿಯಾಗುತ್ತದೆ. ನಿಮ್ಮ ಮಾತಿನಲ್ಲಿ ಅರ್ಥಹೀನತೆಯ ಪ್ರಮಾಣ ಹೆಚ್ಚಿದ್ದಷ್ಟೂ ದೊಡ್ಡ ಪ್ರಶಸ್ತಿ ಸಿಗುವ ಸಾಧ್ಯತೆ ಹೆಚ್ಚು. ಬಹುಶಃ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರಿದಿದ್ದರೆ ಭಗವಾನ್, ಬಂಜಗೆರೆ, ಮರುಳಸಿದ್ದಪ್ಪ ಮುಂತಾದವರೆಲ್ಲ ಸಾಲಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಲ್ಲಿ ಕೂರುತ್ತಿದ್ದರು. ಈಗಲೂ ಆ ಸಾಧ್ಯತೆ ದಟ್ಟವಾಗಿಯೇ ಇದೆ. ‘ನಿರಸ್ತಪಾದಪೇ ದೇಶೇ ಏರಂಡಃ ಅಪಿ ದ್ರುಮಾಯತೇ’ ಅಲ್ಲವೆ?

ಈ ಬುದ್ಧಿಜೀವಿಗಳ ಹುಚ್ಚುತನಗಳು ಒಂದೆರಡಲ್ಲ. ಇತ್ತೀಚೆಗೆ ಹರಪ್ಪಾ ನಾಗರಿಕತೆಯನ್ನು ಕಟ್ಟಿದವರು ದ್ರಾವಿಡರು ಎಂಬ ಹೊಸ ವಾದ ಎದ್ದುಕೂತಿದೆ. ತಮಾಷೆ ಎಂದರೆ, ಕರ್ನಾಟಕದಲ್ಲಿ ಮಾರಪ್ಪ, ಬೀರಪ್ಪ ಮುಂತಾದ ಹೆಸರುಗಳು ಸಾಮಾನ್ಯ. ಹಾಗಾಗಿ ಹರಪ್ಪ ಕೂಡ ಇಂಥಾದ್ದೇ ಯಾರೋ ವ್ಯಕ್ತಿ ಇರಬೇಕು; ಹಾಗಾಗಿ ಹರಪ್ಪ ನಮ್ಮದೇ ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ. ಹರಪ್ಪ ಎಂಬುದು ಸಿಂಧೂ ನಾಗರಿಕತೆಯ ಜನ ಕೊಟ್ಟ ಹೆಸರಲ್ಲ. ಹರಪ್ಪ ಎಂಬ ಊರಲ್ಲಿ ಬ್ರಿಟಿಷರು ಅಗೆದಾಗ ಅಲ್ಲಿ ಈ ನಾಗರಿಕತೆಯ ಕುರುಹುಗಳು ಸಿಕ್ಕಿದ್ದರಿಂದ ಆ ಹೆಸರು ಬಂತು ಅಷ್ಟೆ – ಎಂಬ ಮೂಲಭೂತವಾದ ತಿಳಿವಳಿಕೆ ಕೂಡ ನಮ್ಮ ಜನಕ್ಕಿಲ್ಲ ಎಂದರೆ ಏನೆನ್ನಬೇಕು! ಹರಪ್ಪ ಎಂಬುದು ಪಂಜಾಬಿ ಹೆಸರು. ಈಗ, ನಾವು ದ್ರಾವಿಡರಿಗೆ ಪಂಜಾಬಿ ಗೊತ್ತಿತ್ತು ಎಂದೋ ಪಂಜಾಬಿಯೂ ದ್ರಾವಿಡ ಭಾಷೆ ಎಂದೋ ವಾದಕ್ಕೆ ಹೊರಡೋಣವೆ? ೨೦೧೯ರ ಚುನಾವಣೆಗೆ ಆರ್ಯ-ದ್ರಾವಿಡ ಸಂಘರ್ಷ ಎಂಬುದನ್ನೂ ಒಂದು ವಾದವಾಗಿ, ಸಮಸ್ಯೆಯಾಗಿ ಬಿಂಬಿಸಬೇಕೆಂದು ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆಯಾಗಿದೆ. ಅದನ್ನು ಶಿರಸಾವಹಿಸಿ ಪಾಲಿಸಲು ಒಂದು ದೊಡ್ಡ ಗಂಜಿಪಡೆ ಸಿದ್ಧವಾಗಿದೆ. ಅವರಿಗೆ ಇಂಥ ವಾದಗಳನ್ನೆಲ್ಲ ಶತಾಯಗತಾಯ ಮುಂದೆ ತರಬೇಕಾಗಿದೆ. ಬಂಜಗೆರೆಯ ವೈದಿಕ ಬ್ರಾಹ್ಮಣ-ಲೌಕಿಕ ಬ್ರಾಹ್ಮಣ ಎಂಬ ತಲೆಕೆಟ್ಟ ಅರೆಹುಚ್ಚುವಾದವೂ ಈ ಅಜೆಂಡಾದ ಒಂದು ಭಾಗ.

ಪಾಯಸವನ್ನು ಪಯಸ್ಸು-ಅರ್ಥಾತ್ ಹಾಲಿನಿಂದ ಮಾಡುತ್ತಾರೆ. ಹಾಗಾಗಿ ಹಸುವಿನಿಂದ ದೊರೆಯತಕ್ಕದ್ದು ಪಾಯಸ ಎಂದು ನಿಶ್ಚಿತವಾಯಿತು. ಗೋಮಯ-ಅರ್ಥಾತ್ ಸೆಗಣಿ ಕೂಡ ಹಸುವಿನಿಂದಲೇ ಸಿಗುತ್ತದೆ. ಹಾಗಾಗಿ ಸೆಗಣಿ ಕೂಡ ಪಾಯಸವೇ ಅಂದರೆ ಹೇಗೆ? ಬುದ್ಧಿಜೀವಿಗಳೆಂಬ ಲದ್ದಿಜೀವಿಗಳದ್ದೆಲ್ಲ ಇಂಥ ಗೋಮಯ-ಪಾಯಸೀಯ ತರ್ಕಗಳೇ. ಇಂಥ ಹುಚ್ಚರನ್ನು ವೇದಿಕೆಯಲ್ಲಿ ಕೂರಿಸಿ ಭಾಷಣ ಮಾಡಿಸಿ ಚಪ್ಪಾಳೆ ಹೊಡೆದು ಹುರಿದುಂಬಿಸುವ ಅಯೋಗ್ಯರು ಇನ್ನೆಷ್ಟು ದೊಡ್ಡ ಮೂರ್ಖರಿರಬೇಕು!

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close