About Us Advertise with us Be a Reporter E-Paper

ಅಂಕಣಗಳು

ರವೀಂದ್ರನಾಥ ಠಾಗೋರರಂತೆ ಕವಿಯಾಗುವುದು ಬದುಕಿನ ಉದ್ದೇಶ!

ಕುತೂಹಲಕಾರಿಯಾದ ಮೇಲಿನ ಮಾತುಗಳನ್ನು ತಮ್ಮ ತಂದೆಯವರ ಡೈರಿಯಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದವರು ಯಾರು ಗೊತ್ತೇ? ಅವರು ಹೀಗೆ ಬರೆಯಲು ಕಾರಣವಾದ ಘಟನೆ ಅವರ ಕಾದಂಬರಿಯಷ್ಟೇ ಕುತೂಹಲಕಾರಿ! ಆದರೆ ಇದು ನೈಜಘಟನೆ!

1936ರಲ್ಲಿ ಅವರಿಗಿನ್ನೂ ಹದಿನಾರರ ವಯಸ್ಸು! ಹುಚ್ಚುಕೋಡಿ ಮನಸ್ಸು! ಸಾಹಿತಿಯಾಗುವ ಕನಸು! ಆದರೆ ಆಗಿನ ಕಾಲದಲ್ಲಿ ಸಾಹಿತಿಯಾಗಿ, ಅದರಿಂದ ಬರುವ ಸಂಪಾದನೆಯ ಬದುಕನ್ನು ನಡೆಸುತ್ತೇನೆ ಎನ್ನುವವರಿಗೆ ಎಂಟೆದೆ ಧೈರ್ಯ ಬೇಕಿತ್ತು. ಅದೂ ಅಲ್ಲದೆ ವಕೀಲರಾಗಿದ್ದ ಅವರ ತಂದೆಯವರಿಗೆ ಮಗ ಸಾಹಿತಿಯಾಗುವುದು ಸುತರಾಂ ಇಷ್ಟವಿರಲಿಲ್ಲ. ‘ಏನೇ ಆಗಲಿ, ನೀನು ಸಾಹಿತಿಯಾಗಕೂಡದು’ ಎನ್ನುತ್ತಾ, ಮಗನನ್ನು ಬೈದು ಬಡಿದು ಬರೆಯುವುದನ್ನು ತಪ್ಪಿಸುತ್ತಿದ್ದರು. ಸಾಹಿತಿಯಾಗುವ ಹುಚ್ಚಿನಲ್ಲಿದ್ದ ಅವರು ಎಸ್.ಎಸ್.ಎಲ.ಸಿ.  ಪರೀಕ್ಷೆಯಲ್ಲಿ ಪದೇ ಪದೇ -ಲಾಗುತ್ತಿದ್ದರು. ಆದರೆ ಮತ್ತೆ ಮತ್ತೆ ಪರೀಕ್ಷೆಗೆ ಕಟ್ಟುತ್ತಿದ್ದರು.

ಒಮ್ಮೆ ಪರೀಕ್ಷಾ ಸಮಯದಲ್ಲಿ ಅವರು ಪಠ್ಯ ಪುಸ್ತಕ ಓದುವುದನ್ನು ಬಿಟ್ಟು ಕತೆಯೊಂದನ್ನು ಬರೆಯುವುದರಲ್ಲಿ ಮಗ್ನರಾಗಿದ್ದರು. ಆಗ ಅಲ್ಲಿಗೆ ತಂದೆಯವರು ಬಂದದ್ದೂ, ಬೆನ್ನ ಹಿಂದೆಯೇ ನಿಂತದ್ದೂ ಅವರಿಗೆ ಗೊತ್ತಾಗಲಿಲ್ಲ. ಮಗ ಓದುವುದನ್ನು ಬಿಟ್ಟು ಕತೆ ಬರೆಯುತ್ತಿರುವುದನ್ನು ಕಂಡ ತಂದೆಯವರಿಗೆ ಬಹಳ ಸಿಟ್ಟು ಬಂತು.

ಕೈಯ್ಯಲ್ಲಿದ್ದ ಕಬ್ಬಿಣದ ಬೆತ್ತದಿಂದ ಮಗನ ಬೆನ್ನಿನ ಮೇಲೆ ಬಾರಿಸಿದರು. ಮಗನ ಕೈಯ್ಯಲ್ಲಿದ್ದ ಪೆನ್ನನ್ನು ಕಿತ್ತುಕೊಂಡು ಮುರಿದು ಹಾಕಿದರು. ‘ಇಂದು ನಿನ್ನ ಪೆನ್ನೂ-ಬೆನ್ನೂ ಮುರಿದಿದ್ದೇನೆ. ಈವತ್ತಿನಿಂದ ನೀನು ಕತೆ-ಗಿತೆ ಬರೆದರೆ ನಿನ್ನ ಕೈ ಮುರಿದುಬಿಡುತ್ತೇನೆ’ ಎಂದು ಬೆದರಿಸಿದರು.

ತಂದೆಯವರು ಕೆಟ್ಟ ಸಿಟ್ಟಿನಿಂದ, ಕೊಟ್ಟ ಪೆಟ್ಟಿನಿಂದ ಅವರಿಗೆ ತುಂಬ ದುಃಖವಾಯಿತು. ಇನ್ನು ಮುಂದೆ ಬರೆಯಲೇಬಾರದೆಂದೆನಿಸಿತು. ಅದುವರೆಗೆ ಬರೆದುದ್ದನ್ನೆಲ್ಲ ತೆಗೆದುಕೊಂಡು ನೀರೊಲೆಯ ಬೆಂಕಿಗೆ ಹಾಕಿ, ಸಾಹಿತಿಗಳ ಬಾಳು ಇಷ್ಟೇನೇ ಎಂದು ಅಳತೊಡಗಿದರು.

ಆದರೆ ಅಂದು ಮಧ್ಯರಾತ್ರಿ ಎದ್ದು, ವಕೀಲರಾದ ತಂದೆಯವರ ಡೈರಿಯಂದು ಕಡೆ ದೊಡ್ಡ ಅಕ್ಷರಗಳಲ್ಲಿ ‘ನಾನು ನಿಮ್ಮಂತೆ ವಕೀಲನಾಗುವುದಕ್ಕೆ ಇಷ್ಟಪಡುವುದಿಲ್ಲ. ರವೀಂದ್ರನಾಥ ಠಾಗೋರರಂತೆ ಕವಿಯಾಗುವುದು ನನ್ನ ಜೀವನದ ಉದ್ದೇಶ’ ಎಂದು ಬರೆದು ರುಜು ಮಾಡಿದರು.

ಇದಾದ ನಂತರ ಅವರು ತಾವು ಆಯ್ದುಕೊಂಡಿದ್ದ ಹಾದಿಯ ಮುಂದುವರಿದರು. ಅವರು ಬರೆದ ಮೊದಲ ಕತೆ ‘ಪುಟ್ಟನ ಚೆಂಡು’. ಪ್ರಕಟವಾದ ಮೊದಲ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮಿ’. ಅವರು ಅರವತ್ತೆಂಟಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದರು. ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ರೂಪುಗೊಂಡು ಹೆಸರು ಮಾಡಿದೆವು. (ಹಂಸಗೀಗೆ, ಚಂದವಳ್ಳಿಯ ತೋಟ, ಚಕ್ರತೀರ್ಥ, ನಾಗರ ಹಾವು, ಮಸಣದ ಹೂವು ಇತ್ಯಾದಿ) ಶ್ರೇಷ್ಠ ಕಾದಂಬರಿಕಾರ ಪ್ರಶಸ್ತಿಯನ್ನೂ ಗಳಿಸಿದರು! ಇಷ್ಟು ಹೊತ್ತಿಗೆ ನಿಮಗೆ ಅವರು ಯಾರೆಂದು ಗೊತ್ತಾಗಿರಬಹುದು! ಹೌದು! ಅವರು ಪ್ರಖ್ಯಾತ ಕಾದಂಬರಿಕಾರ ತರಾಸು ರವರು!

ಇಲ್ಲಿ ಮತ್ತೊಂದು ವಿಶೇಷ ಪ್ರಸಂಗವಿದೆ. ಎಷ್ಟೋ ವರ್ಷಗಳ ನಂತರ, ತರಾಸು ಉತ್ತಮ ಸಾಹಿತಿಯೆಂದು ಖ್ಯಾತಿ ಗಳಿಸಿದ ನಂತರ, ಒಮ್ಮೆ ಅವರ ತಂದೆಯವರು ತಮ್ಮ ಹಳೆಯ ಡೈರಿಯನ್ನು ತೆಗೆದು ಮಗನಿಗೆ ತೋರಿಸಿ ‘ನೀನು ಆವತ್ತು ನನ್ನ ಡೈರಿಯಲ್ಲಿ ಬರೆದುದನ್ನು ಈವತ್ತೂ ನಾನು ಇಟ್ಟುಕೊಂಡಿದ್ದೇನೆ. ನಿನ್ನ ಮಾತನ್ನು ನೀನು ಉಳಿಸಿಕೊಂಡಿದ್ದೀಯ. ಬಹಳ ಸಂತೋಷ. ನನಗೆ ನಿನ್ನ ಬಗ್ಗೆ ಹೆಮ್ಮೆ!’ ಎಂದರಂತೆ. ತರಾಸು ಸಹ ಅಷ್ಟೇ ಹೆಮ್ಮೆಯಿಂದ ಈ ಘಟನೆಯನ್ನು ತಮ್ಮ ‘ಮಂಥನ’ ಎಂಬ ಗ್ರಂಥದಲ್ಲಿ ನೆನೆಸಿಕೊಂಡಿzರೆ.

ನಮಗೂ ಬದುಕಿನಲ್ಲಿ ಏನಾದರೂ ಉದ್ದೇಶವಿದೆಯೇ? ಸಂಕಲ್ಪವಿದೆಯೇ? ಬನ್ನಿ, ಅದನ್ನು ನಮ್ಮ ಡೈರಿಯ, ಲೆಡ್ಜರಿನಲ್ಲಿಯೋ ಬರೆದುಕೊಳ್ಳೋಣ! ಮುಂದೆ ಯಾವುದಾದರೊಂದು ದಿನ, ನಮ್ಮ ಉದ್ದೇಶ ಈಡೇರಿದಾಗ, ನಾವೂ ಅದನ್ನು ಹೆಮ್ಮೆಯಿಂದ ಓದಿಕೊಳ್ಳಬಹುದು! ಆದರೆ ಉದ್ದೇಶವನ್ನು ಈಡೇರಿಸಿಕೊಳ್ಳಲು ಬೆನ್ನು ಮುರಿಸಿಕೊಳ್ಳಲು, ಕೈಮುರಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆಯೇ?

Tags

Related Articles

Leave a Reply

Your email address will not be published. Required fields are marked *

Language
Close