About Us Advertise with us Be a Reporter E-Paper

ಅಂಕಣಗಳು

ಅಂದು ಮಾಡಿದ ಪಾಪ ಇಂದು ತೊಳೆಯಿತು!

ಯೋಗೇಶ್ ಮಾಸ್ತರ್

ಉಡುಪಿಯ ಶೀರೂರು ಮಠದಲ್ಲಿ 2011-12ರಲ್ಲಿ ನಮ್ಮ ನಾಟಕವಿತ್ತು. ಕನಕದಾಸರ ಜೀವನದ ರೂಪಕವಾದ ‘ಕೃಷ್ಣ ಪ್ರಿಯ ಕನಕ’ ನಾಟಕದ ಹೆಸರು. ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಕಲಾಕೇಸರಿ ಉದಯ ಕುಮಾರ್ ರಚಿಸಿ, ರೇಣುಕಾಬಾಲಿ ಉದಯಕುಮಾರ್ ನಿರ್ದೇಶಿಸಿದ್ದರು. ಅದಕ್ಕೆ ನನ್ನ ಉದಯ ಕುಮಾರ್ ರಚಿಸಿರುವ ಕೃತಿಯಲ್ಲಿ ಕೆಲವು ವಿಷಯಗಳನ್ನು ಸಕಾರಣವಾಗಿ ಸೇರಿಸಲು ನಾನು ಆಲೋಚಿಸಿದ್ದೆ. ಅದು ಬ್ರಾಹ್ಮಣ್ಯದ ಮಡಿವಂತಿಕೆಯ ಗೀಳಿನ ವಿರುದ್ಧವಾದ ಧ್ವನಿಗಳನ್ನು ಎತ್ತುವುದಾಗಿತ್ತು. ಕನಕದಾಸರನ್ನು ಉಡುಪಿಯ ಮಠದೊಳಗೆ ಬಿಡದಿರುವ ವಿಷಯವನ್ನು ಬಲು ವಿಸ್ತಾರವಾಗಿ, ಶೂದ್ರ ಮತ್ತು ದಲಿತನೊಬ್ಬನನ್ನು ಪ್ರತಿನಿಧಿಸುವ ಪಾತ್ರದಲ್ಲಿ ತೀಕ್ಷ್ಣವಾಗಿ ಪ್ರಶ್ನಿಸುತ್ತಾ, ತೀವ್ರವಾದ ಶಬ್ದಗಳಿಂದ ಖಂಡಿಸುವ ದೃಶ್ಯವಿತ್ತು. ಜೊತೆಗೆ ಬ್ರಾಹ್ಮಣ್ಯದ ಮಡಿವಂತಿಕೆ, ಶ್ರೇಷ್ಟತೆಯ ಗೀಳುಗಳನ್ನು, ಮೇಲರಿಮೆಯ ಮನಸ್ಥಿತಿಯನ್ನು ಗೇಲಿ ಮಾಡಿ, ವಿಡಂಬನೆ ಮಾಡುವ ದೃಶ್ಯವಿತ್ತು. ಇಂಥಾ ವಿಷಯವುಳ್ಳ ನಾಟಕವನ್ನು ಉಡುಪಿಯ ಮಠದಲ್ಲಿಯೇ ಮಾಡುವುದರ ಜೊತೆಗೆ, ಶೀರೂರು ಮಠದ ಆವರಣದಲ್ಲಿ ಮತ್ತು ಸ್ವಾಮೀಜಿಯ ಸಾಕ್ಷಿಯಲ್ಲಿ ಮಾಡುವುದು ಸಾಧ್ಯವೇ? ಅದಕ್ಕೆ ಅವರು ಒಪ್ಪುವರೇ? ಒಂದು ವೇಳೆ ಮಾಡಿದ ನಂತರ ಅವರ ಮತ್ತು ಮಠದ ಭಕ್ತರ ಪ್ರತಿಕ್ರಿಯೆ ಏನಾಗಿರಬಹುದು? ಏನಾದರೂ ಆಗಿರಲಿ, ಪ್ರದರ್ಶಿಸುವ ಮತ್ತು ಎದುರಿಸುವ ಎಂಬ ಗಟ್ಟಿ ಮನಸ್ಸಂತೂ ನನಗಿತ್ತು. ಏಕೆಂದರೆ ನಾಟಕದ ಬಗೆಗಿನ ತಾತ್ವಿಕ ಮತ್ತು ಸಾಹಿತ್ಯಕವಾದ ಹೊಣೆಗಾರಿಕೆಯನ್ನು ನಾನೇ ಹೊತ್ತುಕೊಂಡಿದ್ದೆ. ಆಗಿದ್ದಾಗಲಿ, ಬ್ರಾಹ್ಮಣ್ಯದ ಪ್ರತಿನಿಧಿಗಳು ಮಾಡಿರುವ ಶೋಷಣೆ ಅನ್ಯಾಯವನ್ನು ಉಡುಪಿಯ ಮಠದಲ್ಲಿಯೇ ಹೇಳುವ ನಿರ್ಧಾರವನ್ನಂತೂ ನಾನು ಮಾಡಿದ್ದೆ.

ಶೀರೂರು ಮಠದ ಸಭಾಂಗಣದಲ್ಲಿ ನಾಟಕ ಪ್ರದರ್ಶಿಸಿದೆವು. ನಾಟಕ ಮುಗಿಯಿತು. ಮೊದಲಿನಿಂದ ಕೊನೆಯವರೆಗೂ ಶೀರೂರು ಸ್ವಾಮಿ ವೀಕ್ಷಿಸಿದರು. ಅವರು ಮಾತಾಡುವ ಸಂದರ್ಭ ಬಂದಿತು. ಭಗವಂತನ ಸೃಷ್ಟಿಯಲ್ಲಿ ಹೆಚ್ಚುಗಾರಿಕೆ ಮತ್ತು ಕೀಳುತನಗಳಿಲ್ಲ ಮತ್ತು ಎಲ್ಲಕ್ಕೂ ತನ್ನದೇ ಆದ ಮಾನ್ಯತೆ ಮತ್ತು ಘನತೆ ಇದೆ. ಭಗವಂತನನ್ನು ಹೊಂದಲು ಯಾವ ದೊಣೆನಾಯಕನ ಅಪ್ಪಣೆ ಮತ್ತು ಮಧ್ಯಸ್ತಿಕೆ ಬೇಕಿಲ್ಲ ಎಂಬರ್ಥದಲ್ಲಿ ಮಾತಾಡುತ್ತಾ ಅಂದು ಉಡುಪಿಯ ಮಠದಲ್ಲಿ ದಾಸಶ್ರೇಷ್ಟರಿಗೆ ಆದ ಅಪಮಾನದಿಂದ ಕಳಂಕಿತವಾಗಿದ್ದ ಈ ಸ್ಥಳ ಇಂದು ಈ ನಾಟಕವು ಈ ವೇದಿಕೆಯಲ್ಲಿ ಪ್ರದರ್ಶನ ಕಂಡು, ಪಾಪವನ್ನು ಕಳೆದುಕೊಂಡಿದೆ ಎಂದು ನಾಟಕವನ್ನು ಮುಕ್ತ ಕಂಠದಿಂದ ಹಾಡಿ ಕೊಂಡಾಡಿದರು. ಬ್ರಾಹ್ಮಣ್ಯದ ಕೆಲವು ಜನವಿರೋಧಿ ಅಂಶಗಳನ್ನು ಅವರೂ ಒಪ್ಪಿದ್ದಲ್ಲದೇ, ನಾಟವನ್ನು ಮನಸಾರೆ ಹೊಗಳಿದರು. ನಮಗೆಲ್ಲ ಉಡುಪಿಯ ಕೃಷ್ಣ ವಿಗ್ರವಿರುವ ಜರತಾರಿ ರೇಷ್ಮೆ ಶಲ್ಯವನ್ನು ಹೊದಿಸಿ, ಕೃಷ್ಣನ ವಿಗ್ರಹವನ್ನು ಕೊಟ್ಟು ಗೌರವಿಸಿದ್ದರು. ಅವರೂ ಒಬ್ಬ ಕಲಾವಿದರಾಗಿ, ಕಲೆಯ ನಾನಾ ಪ್ರಕಾರಗಳು ಮನುಷ್ಯನ ಅರಳುವಿಕೆಗೆ ಮತ್ತು ಮುಕ್ತತೆಗೆ ನೆರವಾಗುತ್ತವೆ ಎಂದು ಹೇಳಿಕೊಂಡರು.

ಅದೇ ಅವರೊಂದಿಗೆ ನನ್ನ ಮೊದಲ ಮತ್ತು ಕೊನೆಯ ಭೇಟಿ. ಭೇಟಿಯ ಕ್ಷಣದಿಂದಲೇ ಶೀರೂರು ಶ್ರೀಗಳು ನನ್ನ ಮನಸ್ಸಿನಲ್ಲಿ ಒಂದು ಗೌರವಯುತವಾದ ಸ್ಥಾನವನ್ನು ಹೊಂದಿದ್ದರು. ಅವರ ಮುಕ್ತ ಮತ್ತು ನೇರ ಮಾತುಗಳಿಗೆ ನನ್ನ ಬೆಂಬಲವೂ ಮತ್ತು ಅನುಮೋದನೆಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಇತ್ತು. ಅವರು ಸಂಶಯಾಸ್ಪದವಾಗಿ ಮಠದಲ್ಲಿ ಬೃಂದಾವನಸ್ಥರಾದದ್ದು ನಿಜಕ್ಕೂ ಆಘಾತಕಾರಿಯಾದ ಸುದ್ದಿ. ಅವರ ಅಗಲಿಕೆ ನನಗಂತೂ ಅಪಾರ ನೋವು, ತಂದಿತು.

ನಾಡಿನ ಶ್ರದ್ಧಾ ಭಕ್ತಿಯ ಕೇಂದ್ರಗಳಾದ ಶ್ರೀಮಠಗಳಲ್ಲಿ ಇಂತಹ ಸಂಶಯಾಸ್ಪದ ಸಾವು ಮತ್ತು ವಿಷಪ್ರಾಶನದಂತಹ ವಿಷಯಗಳು ಹೊಸತೇನೂ ಅಲ್ಲ. ಮಠಗಳ ಕಪ್ಪು ಇತಿಹಾಸದಲ್ಲಿ ಹಲವು ದಾಖಲೆಗಳಿವೆ. ಹುಬ್ಬಳ್ಳಿಯ ಸಿದ್ಧಾರೂಢರು, ಶ್ರೀಧರ ಸ್ವಾಮಿಗಳೂ ಸೇರಿದಂತೆ ಅನೇಕಾನೇಕ ಸ್ವಾಮಿಗಳ ಮೇಲೆ ವಿಷ ಪ್ರಯೋಗಗಳಾಗಿರುವ ಉದಾಹರಣೆಗಳಿವೆ. ಕಂಚಿ ಮಠದ ಪ್ರಕರಣದಂತೆ ಮಠಗಳಲ್ಲಿ ಕೊಲೆಗಳೇ ಆಗಿರುವಂತಹ ಉದಾಹರಣೆಗಳೂ ಕೂಡ ನಮ್ಮ ಮುಂದಿವೆ. ಮಠಗಳು ವ್ಯವಹಾರ ಮತ್ತು ರಾಜಕೀಯ ಕೇಂದ್ರಗಳಾಗುತ್ತಿದ್ದಂತೆ, ತಮಗಿರುವ ಧಾರ್ಮಿಕತೆಯ ಸ್ವಾತಂತ್ರ್ಯ ಮತ್ತು ದುರುಪಯೋಗ ಪಡಿಸಿಕೊಳ್ಳುವ ಮನಸ್ಥಿತಿ ಕಾರ್ಯಪ್ರವೃತ್ತವಾಗುತ್ತದೆ.

ಒಟ್ಟಿನಲ್ಲಿ ಧರ್ಮ, ದೇವರು, ಶ್ರದ್ಧೆ, ನಂಬಿಕೆ, ಪ್ರೀತಿ, ರಾಜಕೀಯಗಳೆಲ್ಲಾ ಅಪವ್ಯಾಖ್ಯಾನಗಳಿಗೆ ಒಳಗಾಗಿ ಭಾರತದ ಪ್ರಗತಿ, ಅಭಿವೃದ್ಧಿ ಮತ್ತು ಜನತೆಯ ಸಮಗ್ರ ಮಾನಸಿಕ ಸ್ಥಿತಿ ಹಾಗೂ ಆರೋಗ್ಯಕರ ಧೋರಣೆಗಳೆಲ್ಲಾ ಕ್ಷೀಣಿಸುತ್ತಿವೆ ಮತ್ತು ಭರವಸೆಯ ಬೆಳಕಂತೂ ಮಂಕಾಗುತ್ತಿದೆ ಎಂಬುದು ಸದ್ಯ ನನ್ನ ಮನಸಿನಲ್ಲಿ ಮೂಡುತ್ತಿರುವ ಗೊಂದಲ ಮತ್ತು ತಳಮಳ. ವಿಷಪೂರಿತವಾದ ಮನಸ್ಥಿತಿಯಿಂದಾಗಿ ದೇಶದ ನೈಸರ್ಗಿಕ ಸಂಪನ್ಮೂಲಗಳು, ಮಾನವ ಸಂಪನ್ಮೂಲಗಳು, ಪ್ರತಿಭೆ ಮತ್ತು ಕೌಶಲಗಳೆಲ್ಲವೂ ವ್ಯರ್ಥವಾದ ವಿಷಯಗಳಿಗೆ ಬಲಿಯಾಗುತ್ತಿವೆ.

ನನಗಂತೂ ಶೀರೂರು ಶ್ರೀಗಳಲ್ಲಿದ್ದ ಪ್ರಾಮಾಣಿಕತೆಯೇ ಹೆಚ್ಚು ಇಷ್ಟ ಮತ್ತು ಮಿಗಿಲು ಎನಿಸಿತು. ಹೀಗಾಗಿ ನನ್ನ ಅಭಿಪ್ರಾಯದಲ್ಲಿ ಪ್ರಾಮಾಣಿಕತೆಯ ಪಾವಿತ್ರ್ಯದಲ್ಲಿ ಶೀರೂರು ಶ್ರೀಗಳೇ ಶ್ರೇಷ್ಠರು, ಪೇಜಾವರ ಶ್ರೀಗಳು ಅಪ್ರಾಮಾಣಿಕರು ಹೀಗಾಗಿ ಅಪವಿತ್ರರು ಎಂದೇ ನನ್ನ ಭಾವನೆ.

Tags

Related Articles

3 Comments

  1. ಅಲ್ಲಾರೀ ಯೋಗೇಶ ಮಾಸ್ತರರೇ, ವಿಷಯ ಇರೋದು ‘ಬಾಲ ಸನ್ಯಾಸತ್ವ’ ಸಾಧುವೇ ಅಸಾಧುವೇ ಅಂತ. ಅದರ ಬಗ್ಗೆ ಒಂದೇ ಒಂದು ವಾಕ್ಯದ ಅಭಿಪ್ರಾಯವನ್ನೂ ಬರೆಯದ ನೀವು ಕೊನೆಗೆ ಒಂದೂ ಪ್ರಮಾಣವನ್ನು ಉಲ್ಲೇಖಿಸದೇ ಪೇಜಾವರ ಶ್ರೀಗಳು ಅಪ್ರಾಮಾಣಿಕರು ಎಂದು ಮಾತು ಒಗೆದು ಬಿಟ್ಟಿರಲ್ಲ ! ಮೇಲಾಗಿ ನಿಮ್ಮನ್ನು ಹಾಡಿ ಹೊಗಳಿದ್ದನ್ನೇ ಇಷ್ಟುದ್ದ ಕೊಚ್ಚಿ ಕೊಂಡಿದ್ದೀರಿ. ಇಂಥ ಲೇಖನವನ್ನು ಅದಾರು ಪ್ರಕಟಿಸಿ ದರೋ ನಮ್ಮ ಕರ್ಮ ಓದಬೇಕಾಯಿತು !

Leave a Reply

Your email address will not be published. Required fields are marked *

Language
Close