About Us Advertise with us Be a Reporter E-Paper

ಅಂಕಣಗಳು

ಪರಿಹಾರ ಕಾರ್ಯ ಚುರುಕಾಗಲಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ 13 ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಇದೀಗ ವರುಣಾರ್ಭಟದಿಂದ 11 ಜಿಲ್ಲೆಯಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿದೆ. ಎರಡೂ ಕಾರ್ಯಗಳಿಗೆ ಸರಕಾರ ಸಮರೋಪಾದಿಯಲ್ಲಿ ಕಾರ್ಯ ಕೈಗೊಳ್ಳಬೇಕಿದೆ. ಜನಜಾನುವಾರು ಜೀವಹಾನಿಯಾಗಿದ್ದು ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ಮಳೆಯಿಂದಾಗಿ ಸಾಕಷ್ಟು ಬೆಳೆ ನಾಶವಾಗಿದೆ. ಕೆಲ ಹಳ್ಳಿಗಳ ರಸ್ತೆಗಳಂತೂ ಹಾಳಾಗಿದ್ದು ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ಮನೆಗಳಿಗೆ ಹಾನಿಯಾಗಿದೆ. ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 5 ಕೋಟಿ ರುಪಾಯಿ ಇರುವಂತೆ ಸರಕಾರವೇನೋ ಹಣ ಬಿಡುಗಡೆ ಮಾಡಿದೆ. ಆದರೆ ಇದು ಸಂತ್ರಸ್ತರಿಗೆ ಸಕಾಲದಲ್ಲಿ ತಲುಪಬೇಕು. ನದಿಗಳು ಉಕ್ಕಿ ಹರಿಯುತ್ತಿದ್ದು ಅಣೆಕಟ್ಟೆಗಳ ಸುರಕ್ಷತೆ ದೃಷ್ಟಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡುತ್ತಿದ್ದು ಇದರಿಂದಲೂ ಎಕರೆಯಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿದೆ. ರೈತರಿಗೂ ಪರಿಹಾರ ನೀಡಬೇಕು. ಕಳೆದ ವರ್ಷ ಸರಿಯಾಗಿ ಮಳೆಯಾಗದೇ ಅಪಾರ ಬೆಳೆ ನಷ್ಟ ಉಂಟಾಗಿತ್ತು. ಅಂತಹ ಪರಿಸ್ಥಿತಿಯಲ್ಲೂ ರೈತರು ಸಾಲ ಮಾಡಿ ಬೆಳೆ ವಿಮೆ ಪಾವತಿಸಿದ್ದರು. ಆದರೆ ಇಲ್ಲಿಯವರೆಗೂ ಹಲವು ಜಿಲ್ಲೆಗಳ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗಲೇ ಈಗ ಪುನಃ ಬೆಳೆ ವಿಮೆ ಪಾವತಿಸಬೇಕಿದೆ. ಸರಕಾರ ಬಗ್ಗೆಯೂ ಅಗತ್ಯ ಗಮನ ನೀಡಬೇಕು. ಕಳೆದ ವರ್ಷದ ಬೆಳೆ ಹಾನಿ ಸಿಕ್ಕರೆ ಅನ್ನದಾತರು ಒಂದಷ್ಟು ನಿರಾಳರಾಗುತ್ತಾರೆ.

ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದಿರುವುದು, ನಿಗಮಮಂಡಳಿಗೆ ನೇಮಕ ಮಾಡದಿರುವುದು ರಕ್ಷಣಾ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಆಯಾ ಕ್ಷೇತ್ರಗಳ ಶಾಸಕರು ಇತ್ತ ತಕ್ಷಣ ಗಮನ ಹರಿಸಬೇಕು. ಮಳೆಯಿಂದ ಕಂಗಾಲಾಗಿರುವ ಜನರ ನೆರವಿಗೆ ಮುಂದಾಗಬೇಕು. ಮಳೆ ಹಾನಿ ಪ್ರದೇಶದಲ್ಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಮೊಕ್ಕಾಂ ಹೂಡಿ ವಸ್ತುಸ್ಥಿತಿ ಅರಿತು ಕಾರ್ಯನಿರ್ವಹಿಸಬೇಕು. ಎಲ್ಲೋ ಕುಳಿತು ಕೆಲಸ ಮಾಡಿದರೆ ಸಮಸ್ಯೆಯ ಆಳ ಅರ್ಥವಾಗುವುದಿಲ್ಲ. ಕರಾವಳಿ ಭಾಗದಲ್ಲಂತೂ ಮಳೆಯಿಂದಾಗಿ ಗುಡ್ಡಗಳೇ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮತ್ತೊಂದೆಡೆ ಮಳೆಯಿಂದಾಗಿ ಜನತೆ ಮನೆಯಿಂದ ಹೊರಬರುವುದಕ್ಕೂ ಸಾಧ್ಯವಾಗುತ್ತಿಲ್ಲ. ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ಹಾಳಾಗಿವೆ. ತಗ್ಗು ಪ್ರದೇಶದ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಬೇಕಿದೆ. ಜನರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕಿದೆ. ಸಾಕಷ್ಟು ಸಂಖ್ಯೆಯಲ್ಲಿ ಗಂಜಿ ಕೇಂದ್ರಗಳನ್ನೂ ಆರಂಭಿಸಬೇಕು. ಒಟ್ಟಾರೆ ಹೇಳುವುದಾದರೆ, ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು.

Tags

Related Articles

Leave a Reply

Your email address will not be published. Required fields are marked *

Language
Close