ವಿಶ್ವವಾಣಿ

ಮಹಾರಾಜರೇ ಒರೆಸಿ ತೆಗೆದ ಜೇಡರ ಬಲೆ !

ಜೇಡರ ಬಲೆಯನ್ನು ಮಹಾರಾಜರು ಏಕೆ ಒರೆಸಿ ತೆಗೆದರು? ಆ ಕೆಲಸವನ್ನು ಮಾಡಲು ಬೇರೆ ಕೆಲಸಗಾರರು, ಆಳುಗಳು ಇರಲಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ! ಆ ಪ್ರಶ್ನೆಗೆ ಉತ್ತರವು ಈ ಪ್ರಸಂಗದಲ್ಲಿದೆ!

ಹತ್ತೊಂಬತ್ತನೆಯ ಶತಮಾನದಲ್ಲಿ ಮೈಸೂರು ರಾಜ್ಯವನ್ನಾಳುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಉತ್ತಮ ಆಡಳಿತಗಾರರಾಗಿದ್ದರು. ಸಂಗೀತ, ಸಾಹಿತ್ಯ ಮುಂತಾದ ಕಲೆಗಳ ಪೋಷಕರಾಗಿದ್ದರು. ಅರಮನೆಯ ಹತ್ತಿರದ ಉದ್ಯಾನವನದಲ್ಲಿ ಬ್ಯಾಂಡ್ ಸ್ಟ್ಯಾಂಡ್ ಇತ್ತು.  ಅಚ್ಚುಕಟ್ಟಾದ ಪುಟ್ಟ ಕಟ್ಟಡ.  ಸಂಜೆಯ ಹೊತ್ತು ಸಂಗೀತ ಕಚೇರಿಗಳು ನಡೆಯುತ್ತಿದ್ದವು. ಆಸ್ಥಾನದ ಅನೇಕ ಹಿರಿಯ ಸಂಗೀತಗಾರರು ಅಲ್ಲಿ ಪ್ರತಿದಿನ ಬೆಳಿಗ್ಗೆ ಸಂಗೀತದ ಅಭ್ಯಾಸ ಮಾಡುತ್ತಿದ್ದರು. ಅದರ ತುಂಬ ಪಾಶ್ಚಾತ್ಯ ಸಂಗೀತದ ವಾದ್ಯಗಳು ಇರುತ್ತಿದ್ದವು.

ಒಮ್ಮೊಮ್ಮೆ ಮಹಾರಾಜರು ಅಲ್ಲಿಗೆ ತಮ್ಮ ರೋಲ್ಸ್ ರಾಯ್ಸ್ ಕಾರಿನಲ್ಲಿ ಬರುತ್ತಿದ್ದರು. ಬ್ಯಾಂಡ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ವಿಶಾಲವಾದ ಮರದಡಿಯಲ್ಲಿ ನಿಲ್ಲುತ್ತಿದ್ದ ಕಾರಿನಲ್ಲೇ ಕುಳಿತು ಸಂಗೀತಗಾರರು ಮಾಡುತ್ತಿದ್ದ ಅಭ್ಯಾಸವನ್ನು ಗಮನಿಸುತ್ತಿದರು. ಅಲ್ಲಿಂದಲೇ ಸಂಗೀತವನ್ನೂ ಆಲಿಸಿ ಹೋಗುತಿದ್ದರು.

ಒಂದು ದಿನ ಮಹಾರಾಜರು ಕಾರಿನಿಂದಿಳಿದು  ಅಭ್ಯಾಸ ನಡೆಯುತ್ತಿದ್ದ ಬ್ಯಾಂಡ್ ಸ್ಟ್ಯಾಂಡಿಗೆ ಬಂದರು. ಅದು ಅನಿರೀಕ್ಷಿತವಾದ ಭೇಟಿ, ಸಂಗೀತಗಾರರೆಲ್ಲ ಅಭ್ಯಾಸವನ್ನು ನಿಲ್ಲಿಸಿ, ಎದ್ದುನಿಂತು ಮಹಾರಾಜರಿಗೆ ನಮಸ್ಕರಿಸಿದರು.

ಮಹಾರಾಜರು ರಾಜಗಾಂಭೀರ್ಯದಿಂದ ಕುಳಿತುಕೊಳ್ಳಿ, ನಿಮ್ಮ ಅಭ್ಯಾಸವನ್ನು ಮುಂದುವರೆಸಿ ಎಂದರು. ರಾಜಾಜ್ಞೆಯನ್ನು ಮೀರಲಾಗದೆ ಸಂಗೀತಗಾರರೆಲ್ಲ ಮತ್ತೆ ಅಭ್ಯಾಸವನ್ನು ಮುಂದುವರೆಸಿದರು. ಮಹಾರಾಜರು ಅಲ್ಲೇ ಸ್ವಲ್ಪ ಹೊತ್ತು ಸುತ್ತಾಡಿದರು. ಆನಂತರ ಕಿಟಕಿಯ ಬಳಿ ಹೋಗಿ ಹೊರಗಿದ್ದವರಿಗೆ ಏನೋ ಸಂಜ್ಞೆ ಮಾಡಿದರು. ಆಗ ಪರಿಚಾರಕರೊಬ್ಬರು ಒಳಗೆ ಬಂದರು. ಅವರ ಕೈಯಲ್ಲಿ ಮೇಲ್ತುದಿಯಲ್ಲಿ ಪೊರಕೆಯನ್ನು ಸಿಕ್ಕಿಸಲಾಗಿದ್ದ  ಕೋಲಿತ್ತು. ಮಹಾರಾಜರು ಕೋಲನ್ನು ತೆಗೆದುಕೊಂಡು ಕಟ್ಟಡದ ಹೆಂಚಿನ ಛಾವಣಿಯಲ್ಲಿ ಕಟ್ಟಿದ್ದ ಜೇಡರ ಬಲೆ ಮುಂತಾದ ಕೊಳೆಯನ್ನು ಸ್ವಚಃ ತೆಗೆಯತೊಡಗಿದರು.

ಅದನ್ನು ಕಂಡು ಸಂಗೀತಗಾರರು, ಉಸ್ತುವಾರಿಯವರು ಎಲ್ಲರೂ ಗಾಬರಿಗೊಂಡರು. ಎಲ್ಲರ ಬಾಯಿ ಒಣಗಿತ್ತು. ಜನರೆಲ್ಲ ಮೂರಾದರು. ವಾದ್ಯಗಳು ನಿಶ್ಯಬ್ದವಾದವು. ಅವರೆಲ್ಲ ತೊದಲುತ್ತ ಮಹಾಸ್ವಾಮಿ! ಇದು ನಮ್ಮ ಕೆಲಸ. ನಾವು ಮಾಡುತ್ತೇವೆ. ತಾವು ಬಿಡಿ ಎಂದು ಒದರತೊಡಗಿದಾಗ. ಮಹಾರಾಜರು ಅರ್ಥಗರ್ಭಿತ ಮುಗುಳ್ನಗೆಯನ್ನು ಬೀರಿ ಏನೂ ಚಿಂತೆಯಿಲ್ಲ. ನಿಮ್ಮನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ.  ಈ ಸಣ್ಣಪುಟ್ಟ ವಿಷಯಕ್ಕೆಲ್ಲ ನಿಮಗೆಲ್ಲಿ ಪುರುಸೊತ್ತಿದೆ? ನಮಗೆ ಬೇರೇನೂ ಕೆಲಸವಿಲ್ಲ. ಈ ಜೇಡರ ಬಲೆ ಮುಂತಾದ ಕೊಳೆ ನಮ್ಮ ಕಣ್ಣಿಗೆ ಬಿತ್ತು. ಹೇಗಿದ್ದರೂ ದಿನಾ ಬೆಳಿಗ್ಗೆ ನಾವಿಲ್ಲಿಗೆ ಬರುತ್ತೇವೆ.

ಹಾಗೆಯೇ ಒಂದು ಸುತ್ತು ಈ ಕೆಲಸವನ್ನೂ ಮಾಡಿಹೋಗುತ್ತೇವೆ ಎಂದು ಹೇಳಿದಾಗ, ಅಲ್ಲಿದ್ದವರೆಲ್ಲ ನಾಚಿ ತಲೆತಗ್ಗಿಸಿ,

ಮಹಾರಾಜರ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳುವುದೊಂದು ಬಾಕಿಯಿತ್ತು.

ಆದರೆ ಅಲ್ಲಿಂದಾಚೆಗೆ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಔಷಧಕ್ಕೆ ಬೇಕು ಎಂದರೂ ಒಂದು ಚೂರೂ ಧೂಳು ಸಿಕ್ಕುತ್ತಿರಲಿಲ್ಲವಂತೆ!  ನೆಲ, ಗೋಡೆ, ಕುರ್ಚಿ, ಮೇಜುಗಳು, ವಾದ್ಯಗಳು ಎಲ್ಲವೂ ಕನ್ನಡಿಯಂತೆ ನಳಿನಳಿಸುತ್ತಿದ್ದವಂತೆ!

ಈ ಮನೋಜ್ಞ ಪ್ರಸಂಗವನ್ನು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಕೃಷ್ಣಮೂರ್ತಿಯವರು ತಮ್ಮ ‘ಸಂಗೀತ ಸಮಯ’ ಗ್ರಂಥದಲ್ಲಿ ವಿವರಿಸಿದ್ದಾರೆ. ಆ ಗ್ರಂಥದಲ್ಲಿ ಇಂತಹ ಹಲವಾರು ಪ್ರಸಂಗಗಳನ್ನು ದಾಖಲಿಸಿದ್ದಾರೆ. ಆ ಹಿರಿಯ ವಿದ್ವಾಂಸರ ಪುಣ್ಯ ಸ್ಮರಣೆಗೆ ಪ್ರಣಾಮಗಳು.

ನಾವು ಕೆಲಸ ಮಾಡುವ ಸಂಸ್ಥೆಯಲ್ಲೋ ಅಥವಾ ನಮ್ಮ ಮನೆಯಲ್ಲೋ ಇಂತಹ ಪರಿಸ್ಥಿತಿ ಎದುರಾದರೆ, ನಾವೂ ಆ ಮಹಾರಾಜರು ಮಾಡಿದಂತೆ ಮಾಡಬಹುದಲ್ಲವೇ? ಈ  ಉತ್ತಮವಾದ ಪ್ರಯೋಜನ ಸಿಗಬಹುದು!