ವಿಶ್ವವಾಣಿ

ರಮೇಶ್ ಪಂಡಿತ್ ಗೋಕರ್ಣ ಸಾನಿ ಹುಟ್ಟೂರಿನ ಕಥಾಪ್ರಪಂಚ

ನನ್ನಂಥ ಬರಹಗಾರನಿಗೆ, ಸಂವೇದನಾಶೀಲನಿಗೆ ನನ್ನೂರು ನನ್ನ ಒಟ್ಟೂ ಬೆಳವಣಿಗೆಯ ರಂಗಸ್ಥಳವೇ. ರಂಗ, ಸ್ಥಳ, ಪಾತ್ರ, ಅಭಿನಯ, ಅನುಭೂತಿ, ಅವುಗಳಿಲ್ಲದೇ ನಾನುಅನ್ನುವ ಒಂದು ಜೀವ, ಅಸ್ತಿತ್ವ, ಆಕೃತಿ ಸಂಪೂರ್ಣವಾಗಲು ಸಾಧ್ಯವೇ ಇಲ್ಲ. ಬೇರುಗಳಿಲ್ಲದ ಮರ ಬೆಳೆಯಲು, ಬಲಿಯಲು ಉಂಟೆ? ಅದರಲ್ಲೂ ತಾಯಬೇರು. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ಘನಿಕಟ್ಟುವ ಪ್ರಕ್ರಿಯೆಯ ನೆಲೆ, ಧಾತು, ಯಾವುದು ಅಂದರೆ ಅದು ಅವನ ಹುಟ್ಟೂರು. ಹುಟ್ಟಿದ ಊರೆಂಬ ಒಂದು ಅಸ್ಮಿತೆಯೇ, ಅವನ ಗುಣ, ಭಾವ, ಸ್ವಭಾವ ಮತ್ತು ಚಿಂತನಶೀಲತೆಯ ನಿರ್ಣಾಯಕ ಭೂಮಿಕೆ.

ನ್ನ ತಾಯಿಯವರಿಗೆ ಅನಾರೋಗ್ಯ ಅನ್ನುವ ಕಾರಣಕ್ಕೆ ಕಳೆದ ವಾರ ಊರಿಗೆ ಹೋಗಿದ್ದೆ. ಹುಟ್ಟೂರು, ಪ್ರತಿಯೊಬ್ಬರ ಬೆನ್ನಿಗೂ ಅಂಟಿಕೊಂಡಿರುವ ರೋಚಕ ಅನುಭವಗಳ ಬುತ್ತಿ. ಅದು ನೋವು, ಬಡತನ, ಹಿಂಸೆ, ಹತಾಶೆ, ಹೋರಾಟ, ಕಾದಾಟ ಯಾವ ಬಗೆಯ ಭಾವಬಾಂಧವ್ಯದ, ಬಂದೂರತೆಯ ಬಾಲ್ಯ, ಬೆಳವಣಿಗೆಯ ಹಿನ್ನೆಲೆ ಹೊಂದಿದ್ದರೂ ಒಂದು ನೆಲೆ, ಗಮ್ಯವನ್ನ ಮುಟ್ಟಿ ನಿಂತು ಹಿಂದಿರುಗಿ ನೋಡಿದಾಗ, ಯಾ ಹೋಗುವಾಗ ಅದು ಆರ್ದ್ರತೆ, ಸಾರ್ಥಕ್ಯ, ಸಾಮಿಪ್ಯ, ಸ್ವಅವಲೋಕನದ ರಸಭಾವಗಳ ಅನನ್ಯ ಬೋಗುಣಿ. ಊರಿನ ಪ್ರತೀ ಕಲ್ಲು, ಮರ, ಬೋಳೆ, ಗುಡ್ಡ, ಕಾಡು, ಕೆರೆ, ಜನ, ರಸ್ತೆ, ಶಾಲೆ, ಕೇರಿ, ತೋಟ, ದಣಪೆ, ಹಕ್ಕೆಹೊಳ್ಳಿ, ಸೋಗೆ ಅಟ್ಟಣಗಿ, ಕೊಟ್ಟಿಗೆ, ಸಂಕ, ಹೊಳೆ, ಬಾವಿ, ಗೇರುಹಕ್ಕಲು, ದೇವಸ್ಥಾನ, ಹೀಗೆ ಪ್ರತೀ ಒಂದೂ ನಮ್ಮ ಪಯಣದ ನಿಲುವು, ನಿಲ್ದಾಣ. ಮತ್ತು ಕಥೆ ಕಥಾನಕಗಳ ಗುರುತು ಗುಲ್ಮೊಹರ್‌ಗಳು. ಅದರಲ್ಲೂ ನನ್ನಂಥ ಬರಹಗಾರನಿಗೆ, ಸಂವೇದನಾಶೀಲನಿಗೆ ನನ್ನೂರು ನನ್ನ ಒಟ್ಟೂ ಬೆಳವಣಿಗೆಯ ರಂಗಸ್ಥಳವೇ. ರಂಗ, ಸ್ಥಳ, ಪಾತ್ರ, ಅಭಿನಯ, ಅನುಭೂತಿ, ಅವುಗಳಿಲ್ಲದೇ ನಾನುಅನ್ನುವ ಒಂದು ಜೀವ, ಅಸ್ತಿತ್ವ, ಆಕೃತಿ ಸಂಪೂರ್ಣವಾಗಲು ಸಾಧ್ಯವೇ ಇಲ್ಲ. ಬೇರುಗಳಿಲ್ಲದ

ಮರ ಬೆಳೆಯಲು, ಬಲಿಯಲು ಉಂಟೆ? ಅದರಲ್ಲೂ ತಾಯಬೇರು. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ಘನಿಕಟ್ಟುವ ಪ್ರಕ್ರಿಯೆಯ ನೆಲೆ, ಧಾತು, ಸೆಲೆ ಯಾವುದು ಅಂದರೆ ಅವನ ಹುಟ್ಟೂರು. ಹುಟ್ಟಿದ ಊರೆಂಬ ಒಂದು ಅಸ್ಮಿತೆಯೇ, ಅವನ ಗುಣ, ಭಾವ, ಸ್ವಭಾವ ಮತ್ತು ಚಿಂತನಶೀಲತೆಯ ನಿರ್ಣಾಯಕ ಭೂಮಿಕೆ.

ಹುಟ್ಟಿದ ಊರಿನ ಬಗ್ಗೆ ಪ್ರಶ್ನೆಗಳಿರಬಹುದು. ಆದರೆ ನಿರಾಕರಣೆ ಇರಲು ಅಸಾಧ್ಯ. ಅಸಹನೆ ಇರಲೂ ಬಹುದು, ಆದರೆ ಸಂಬಂಧಗಳ ಅನನ್ಯತೆಯಲ್ಲಿ ತಕರಾರು ಇರಲು ಸಾಧ್ಯವಿಲ್ಲ. ಅದೊಂದು ಅನುಭವ, ಅನುಭೂತಿ, ದರ್ಶನ, ಒರೆಗಲ್ಲು. ಅದೊಂದು ಟಂಕಸಾಲೆ. ಮಣ್ಣಿನ ಮುದ್ದೆಯೊಂದು ಮೂರುತಿಯಾಗುವ ಕಾಲಕಲರವ. ಆದರೆ ಹುಟ್ಟೂರಿಗೆ ವಿಶೇಷ ಅರ್ಥ, ವ್ಯಾಪ್ತಿ, ಆದರಣೆ, ಬರುವುದು ಅಲ್ಲಿಂದ ಹೊರಟು ಹೊಸೂರು ಸೇರಿ, ನಿಂತು ಒಂದು ಅಗಾಧ ಬಿಡುವಿನ ನಂತರ ಮತ್ತೆ ಹಿಂದೆ ತಿರುಗಿಕೊಂಡಾಗ. ಹೆತ್ತವರಿಗೆ ಹೆಗ್ಗಣವೂ ಮುದ್ದು ಅನ್ನುವಷ್ಟು ಹುಟ್ಟೂರಿನ ಮೋಹ ಕಾಡುವುದೂ ಪ್ರಾಯಶಃ ಆವಾಗಲೇ ಇರಬೇಕೇನೋ. ಭಾವಜೀವಿಯೊಬ್ಬನ ಅಂತರಂಗದ ಕ್ಯಾನ್‌ವಾಸಿನಲ್ಲಿ ಅವನ ಹುಟ್ಟೂರು ಒಂದು ಅಪರೂಪದ, ಅನ್ಯಾದೃಶವಾದ ಚಿತ್ರವನ್ನ, ನೆನಪಿನ ಕುಂಚ ಕೆತ್ತಬಹುದೇನೊ. ಊರಿನ ಬೆಲೆ, ಮಹತ್ವ, ಮರ್ಮ, ಊರಿನಿಂದ ಹೊರನಿಂತಾಗಲೇ ಅರಿವಿಗೆ ಬರುವುದು. ‘ಮರಳಿ ಮಣ್ಣಿಗೆಬೆಳೆಸುವ ಹಿಂಪಯಣದ, ಮರುಪಯಣದ ಸುಖಾನುಭವ, ದಿವ್ಯತೆ, ಭವ್ಯತೆ ಅನಾವರಣಗೊಳ್ಳುವುದೂ ಆವಾಗಲೇ. ಹಿತ್ತಲ ಗಿಡ ಮದ್ದೇ ಆಗದಿರುವುದು ಊರಿನಲ್ಲೇ ಟಿಕಾಣಿ ಹೂಡಿದವರಿಗೆ. ಅಲ್ಲೇ ಬದುಕಿನ ಭದ್ರ ಗೂಟ ಜಡಿದು ಕುಳಿತವರಿಗೆ. ಆದರೂ ಕುವೆಂಪು, ಬೇಂದ್ರೆ, ಕಾರಂತರು, ಸುಬ್ರಾಯ ಚೊಕ್ಕಾಡಿ ಅವರಂಥ ಕವಿ, ಡಾ ಮೊಗಸಾಲೆ ಅಂಥ ಬಹುಶ್ರುತರಿಗೆ, ಗೌರೀಶ ಕಾಯ್ಕಿಣಿ ಅಂಥ ಅವಧೂತ ಚಿಂತಕರಿಗೆ, ಡಾ ಆರ್.ವಿ.ಭಂಡಾರಿಯಂಥ ಹೋರಾಟಗಾರರಿಗೆ, ಸಿದ್ದೇಶ್ವರ ಸ್ವಾಮೀಜಿಗಳಂಥ ದೇವಪುರುಷರಿಗೆ, ಹುಟ್ಟೂರು ಹುಟ್ಟಿದಲ್ಲೇ ಇದ್ದೂ, ಅದೊಂದು ದಿವ್ಯಕ್ಷೇತ್ರವಾಯಿತು. ಸ್ಪರ್ಶಮಣಿ ಅನಿಸಿತು. ಅದು ಅವರವರ ಸಾಮರ್ಥ್ಯ, ಅರಿವಿನ ಮೇಲೆ ನಿಂತ ಪ್ರಶ್ನೆ.

.. ಎಂಬ ಜಿಡ್ಡು!

ಊರು ಬಿಟ್ಟವರೆಲ್ಲ ಉದ್ಧಾರ ಆಗಿದ್ದಾರೆ. ಊರಲ್ಲಿದ್ದವರೆಲ್ಲ ಗಬ್ಬೆದ್ದು ಹೋಗಿದ್ದಾರೆ ಅನ್ನುವ ಸರಳ ಸೂತ್ರಸಿದ್ಧಾಂತ ಯಾವ ಊರಿಗೂ ಹೊಂದದು. ಆದರೆ ನನ್ನ ಊರು ಉತ್ತರ ಕನ್ನಡಕ್ಕೆ (ಕಾರವಾರ ಜಿಲ್ಲೆ) ಶಾಬ್ದಿಕವಾಗಿ ಮಟ್ಟದ್ದಲ್ಲದಿದ್ದರೂ ಊರಿನಿಂದ ಕಾಲ್ಕಿತ್ತು ಹೊರ ಊರಿಗೆ ಹೋಗಿ ನಿಂತವರೆಲ್ಲ ಬೆಳೆದಿದ್ದಾರೆ. ನಾಮಾಂಕಿತರಾಗಿದ್ದಾರೆ. ವಿಸ್ತ್ರತವಾಗಿ ಚಾಚಿಕೊಂಡಿದ್ದಾರೆ. ಅವರೆಲ್ಲ ಇದೇ ಊರಿನಲ್ಲಿ ಇದ್ದಿದ್ದರೆ ಅದೇ ಹಕ್ಕೆ ಹೊಳ್ಳಿ ಭಾಗವತಿಗೆ, ಮನೆಯವರ ಚಾಡಿ, ಒಬ್ಬರಿಗೆ ಒಬ್ಬರು ಹಚ್ಚಿಹಾಕುವ, ಒಬ್ಬರ ಕಂಡ್ರೆ ಒಬ್ಬರಿಗೆ ಆಗದಿರುವಂತಹ ಸಂಕುಚಿತತೆಯಲ್ಲೇ ಮುಳುಗಿ ಏಳುತ್ತಿರುತ್ತಿದ್ದರು, ಅನ್ನುವ ಭಾವ, ತೀರ್ಮಾನ ಒಂದು ಒಂದೂವರೆ ದಶಕಗಳ ಹಿಂದೆ ತಥಾಖಚಿತವಾಗಿತ್ತು. ಈಗ ಶೇ.70 ಬದಲಾದರೂ ಶೇ.30ರಷ್ಟು ದಟ್ಟವಾಗಿದೆ. ಮಾತಿಗೆ ಊರಿನಲ್ಲಿದ್ದವರೇ ಕೈಯಲ್ಲೊಂದು ಚಹ ಲೋಟವನ್ನೋ, ಕವಳ ಚೊಬ್ಬೆಯನ್ನೋ ಹಿಡಿದು ಉದಾಹರಣೆ ಸಮೇತ ವಿವರಗಳನ್ನೂ ಕೊಡುತ್ತಾರೆ. ಇಂಥ ವಾತಾವರಣದ ಮಧ್ಯೆ ನನಗೆ ಅಚ್ಚರಿ, ನಿಬ್ಬೆರಗು ಮೂಡಿಸುವ ವ್ಯಕ್ತಿ, ಗೆಳೆಯ, ಬಂಧು ಗೋಕರ್ಣದ ಪೂರ್ವದ ಅಂಚಿಗೆ ತಾಗಿಕೊಂಡು ವಾಸಿಸುವ ರಮೇಶ್ ಗಣಪತಿ ಪಂಡಿತ್.

ಕುಳ್ಳನೆಯ ಶರೀರ, ಬೆಳ್ಳನೆಯ ರೂಪ. ಮಾತು ಮಾತಿನಲ್ಲಿ ಮಹಾ ಗಣಪತೀ..’ ಎಂದೇ ಉದ್ಗರಿಸುವ, ಸೀದಾ, ಸಾದಾ, ಸರಳ ವ್ಯಕ್ತಿ. ಆಪ್ತತೆ, ಸ್ನೇಹ, ಸಹವಾಸಗಳಲ್ಲಿ ನಂಬಿಕೆ, ಪ್ರಾಮಾಣಿಕತೆ, ಪರೋಪಕಾರ ಇವರ ಜಾಯಮಾನ. ಎಲ್ಲಾ ಗುಣವಿಶೇಷಗಳು ನಿಜಕ್ಕಾದರೆ ಗೋಕರ್ಣದ ನೆಲಸಂಸ್ಕೃತಿಗೆ ತೀರಾ ವಿರುದ್ಧ. ಸೊಕ್ಕಿದ್ದರೆ ಯಾಣ, ರೊಕ್ಕವಿದ್ದರೆ ಗೋಕರ್ಣ. ವ್ಯವಹಾರ, ಬೆಣ್ಣೆಯಂತಹ ನಗು, ಮಲ್ಲಿಗೆಯಂತಹ ಮುಖ, ತುಪ್ಪದಂತಹ ಮಾತು. ಮೂರರಿಂದಲೇ ಇಲ್ಲಿಗೆ ಬಂದವರಿಗೆಲ್ಲ ಮೂರ್ನಾಮ ಹಾಕಿ ಕಳುಹಿಸುತ್ತಾರೆ ಅನ್ನುವುದು ಇತಿಹಾಸ. ಇದಕ್ಕೆ ಕೋಟಿತೀರ್ಥದಲ್ಲಿ ಕೋಟಿ ಕೋಟಿ ಸಾಕ್ಷೀಕೃತ ಕಥೆಗಳಿವೆ. ಇಂಥ ಭಾವಶೂನ್ಯ ವಾತಾವರಣದಲ್ಲಿಯೂ ಗೋಕರ್ಣ ಅಂದಾಗ ನೆನಪಾಗುವುದು ಚಾರಿತ್ರಿಕವಾಗಿ, ಒಂದು ಮಹಾಬಲೇಶ್ವರ, ಎರಡು ಗೌರೀಶ ಕಾಯ್ಕಿಣಿ, ಮೂರನೆಯದ್ದು ನಮ್ಮ ಶಾಸ್ತ್ರ, ಪರಂಪರೆ, ವೇದ, ಉಪನಿಷತ್ತು, ಮಹಾಕಾವ್ಯ, ಕಾಲಗಣನೆ, ಜ್ಯೋತಿಷ್ಯ ಮುಂತಾದ ನಮ್ಮ ಸಂಸ್ಕೃತಿಯ ಜ್ಞಾನಸಂಪನ್ನ ಪಂಡಿತ ಪರಂಪರೆ. ಇಲ್ಲಿನ ಬೀದಿಗಳ ಓಣಿಗಳನ್ನು ಆವರಿಸಿರುವ ಪುಟ್ಟ ಪುಟ್ಟ ಗೂಡಿನಂಥ ಪ್ರತೀ ಮಾಡಿನ ಒಳಗಡೆಯೂ ಭರತ ಸಂಸ್ಕೃತಿಯ ಜ್ಞಾನ ಪರಂಪರೆಯ ಸಿಂಧು ಬಿಂದುವಿನ ರೂಪದಲ್ಲಿ ಅಡಕಗೊಂಡಿವೆ. ವರ್ತಮಾನದಲ್ಲಿ ಗೋಕರ್ಣ ಅಂದರೆ ಅಧ್ಯಾತ್ಮ ಮತ್ತು ಅರಿವಿನ ಛಾಪು ಮಾಸಿ ಕೇವಲ ಪ್ರವಾಸೀ ತಾಣ, ಹಿಪ್ಪಿಗಳು, ಗಾಂಜಾ, ಡ್ರಗ್‌ಸ್, ಮಜಾ, ಮೋಜು, ಮಸ್ತಿ ಅಷ್ಟೇ ದಾಖಲಾಗುತ್ತದೆ. ಇಂಥ ಸಮ್ಮಿಶ್ರಿತ ವಾತಾವರಣದಲ್ಲಿ ರಮೇಶ್ ಗಣಪತಿ ಪಂಡಿತ ಹುಟ್ಟೂರಿಗೆ ಹರಳಿಟ್ಟಂತೆ, ಹವಳದಂತೆ, ಸಾಧನೆ ಮತ್ತು ಸಾಧ್ಯತೆಗಳಿಗೆ ಮಾದರಿಅನ್ನುವಂತೆ ನಿಂತಲ್ಲೇ ಸ್ವರ್ಗಸೃಜಿಸಿದ್ದು, ಸೃಷ್ಟಿಸಿದ್ದು ಸೋಜಿಗ.

ಊರಿಗೆ (ಬೋಳ್ಗೆರೆ ಹೊನ್ನಾವರ ತಾಲೂಕು) ಹೋದವನು ಬಾರಿ ಗೋಕರ್ಣಕ್ಕೆ ಹೊರಟೆ. ಬಹಳ ವರ್ಷಗಳೇ ಆಗಿದ್ದವು ನಾನಲ್ಲಿಗೆ ಹೋಗದೆ. ‘ಲೈಫ್ 360’ ಸಂಪಾದಕನಾಗಿದ್ದಾಗ ಹೋದದ್ದು. ಗೋಕರ್ಣ, ಕಡಲು ಮತ್ತು ಪಶ್ಚಿಮ ಘಟ್ಟಗಳ ಅಪೂರ್ವ ಸಂಗಮ. ರಾಮ, ರಾವಣ, ಈಶ್ವರ, ಗಣಪತಿಯನ್ನೊಳಗೊಂಡ ಅಧ್ಯಾತ್ಮದ, ಕಾವ್ಯಕಾಲದ ಕತೆಗಳ ನೆಲ. ಹರವಾಗಿ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಹಾಸಿಕೊಂಡರೆ, ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಸಾಲುಸಾಲು. ಮಧ್ಯೆ ತೆಂಗು, ಕಂಗುಗಳ ಫಲಭರಿತ ತೋಟಗಳ ತೋರಣ. ಹಾಲಕ್ಕಿಗಳ ಹುಲುಸಾದ ಸಾಂಸ್ಕೃತಿಕ ಬದುಕು ಪರ್ಯಾಯ ಆಕರ್ಷಣೆ. ಇವರ ಕೈಯಲ್ಲಿ ಸಾವಯವ ಕೃಷಿ ಮೂಲಕ ಬೆಳೆಯುವ ಗೋಕರ್ಣದ ತರಕಾರಿಜಗತ್ಪ್ರಸಿದ್ಧ. ಸುಮಾರು ಎರಡು ದಶಕಗಳ ಹಿಂದೆ, ಗೋಕರ್ಣ ಹಿಪ್ಪಿಗಳ ಆಗಮನದ, ನಿರ್ಗಮನದಲ್ಲಿ ವಿಕೃತಿಗೆ ಒಳಗಾಗುತ್ತಿರುವುದನ್ನ ಹಿಪ್ಪಿಗಳ ಹಿಂಡಿನಲ್ಲಿ ಗೋಕರ್ಣಅಂತ ಸಚಿತ್ರ ತನಿಖಾ ಲೇಖನವನ್ನ ಬರೆದು ಸ್ಥಳೀಯರ ಆಕ್ರೋಶಕ್ಕೂ, ನಾಡಿಗರ ಆದರಕ್ಕೂ ಒಳಗಾಗಿದ್ದೆ. ರಾಮಚಂದ್ರಾಪುರ ಮಠಕ್ಕೂ, ಗೋಕರ್ಣದ ಸ್ಥಾಪಿತ ಹಿತಾಸಕ್ತಿಯ ಬಣಕ್ಕೂ ಏರ್ಪಟ್ಟ ಶೀತಲ ಸಮರಕ್ಕೂ ನನ್ನ ಬರಹ ಆಗಿತ್ತು. ಗೋಕರ್ಣ ನನ್ನ ಪತ್ರಿಕೋದ್ಯಮದ ಪರ್ವಕಾಲದಲ್ಲಿ ಹಲವು ಹತ್ತು ಬರಹಗಳಿಗೆ ಆಕರವಾದ ಭೂಮಿ. ಗೋಕರ್ಣ ಮೊದಲಿನಂತಿಲ್ಲ. ಅಧ್ಯಾತ್ಮ, ಪರಿಸರ, ಹಳ್ಳಿ, ಉಪ್ಪು ತಯಾರಿಕೆ, ಮೀನುಗಾರಿಕೆ ಮುಂತಾದ ಪಾರಂಪರಿಕ ನೋಟ, ಚಿತ್ರದಿಂದ ಬದಲಾಗಿದೆ. ಈಗ ಉದ್ಯಮ, ಪ್ರವಾಸೋದ್ಯಮ, ವಿದೇಶಿಗರು ಇತ್ಯಾದಿ.

ಗೋಕರ್ಣ ಅಂದರೆ

ಗೋಕರ್ಣ ಅಂದಾಗ ನನ್ನ ನೆನಪು, ವರ್ತಮಾನ, ವಾಸ್ತವ್ಯ, ಗೆಳೆತನ ಎಲ್ಲವೂ ರಮೇಶ್‌ರ ಮೇಲೇ ಕೇಂದ್ರೀಕೃತವಾಗುತ್ತದೆ. ನನ್ನ ಪರಿಭಾಷೆಯಲ್ಲಿ ಗೋಕರ್ಣ ಪಂಡಿತರು. ಬಾರಿಯೂ ಅವರ ಒತ್ತಾಯಕ್ಕೆ ಹೋಗಿದ್ದೆ. ಬೀಚಿನ ತಟದಲ್ಲಿ ಒಂದು ಅಪರೂಪದ ಸಸ್ಯಾಹಾರಿ ಹೋಟೆಲ್ ಇದೆ. ಇಲ್ಲಿನ ಮೊಸರನ್ನದಿಂದ, ಪ್ರತಿಯೊಂದು ತಿಂಡಿ, ತಿನಿಸು ಊಟ ವರ್ಲ್‌ಡ್ ಫೇಮಸ್. ‘ಜೋಸ್ಟಲ್ಅನ್ನುವ ಒಂದು ರೆಸಾರ್ಟ್, ಗುಡ್ಡದ ನೆತ್ತಿಯಲ್ಲಿ ತಲೆ ಎತ್ತಿದೆ. ಕೆಂಪುಕಲ್ಲಿನ ಕಾಟೇಜ್‌ಗಳು (ಆರು) ಜತೆಗೆ ದಕ್ಷಿಣ ಭಾರತದ ಪ್ರವಾಸೋದ್ಯಮದಲ್ಲಿಯೇ ಪ್ರಥಮ ಪ್ರಯೋಗ ಅನ್ನಿಸಿಕೊಂಡ ಹವಾನಿಯಂತ್ರಿತ ಡಾರ್ಮೆಟರಿ. ತಲಾ ದಿನಕ್ಕೆ 500 ರಿಂದ 600 ರು.ಗಳಲ್ಲಿ ಏಕಕಾಲದಲ್ಲಿ 30ಕ್ಕೂ ಹೆಚ್ಚು ಜನ ಉಳಿದುಕೊಳ್ಳಬಹುದು. ಪುರುಷರಿಗೆ, ಸ್ತ್ರೀಯರಿಗೆ ಇದರ ಪಕ್ಕದಲ್ಲೇ ಎಂ.ಜಿ.ರೂಮ್‌ಸ್. ಹದಿನೈದರಿಂದ ಇಪ್ಪತ್ತು ರೂಮುಗಳು. ಇವೆರಡರ ಮಧ್ಯೆಯ ಒಂದು ಕಾರ್ನರಿನಲ್ಲಿ, ನಾಲ್ಕು ದಿಕ್ಕುಗಳಿಂದಲೂ ಸಮುದ್ರದ ಅತ್ಯಪೂರ್ವ ದೃಶ್ಯಾವಳಿಗಳು. ಅಂಥ ಜಾಗದಲ್ಲಿ ಎಂ.ಜಿ.ರೂಮ್‌ಸ್ನ ಹೊಸ ರೆಸಾರ್ಟ್‌ಸ್ನ ಆರಂಭಿಕ ಹಂತ. ಯೋಜನೆಗಳ ಮೊದಲು ಕಪಿಲಾತೀರ್ಥಬಡಾವಣೆ! ನಾಲ್ಕು ಎಕರೆ ಜಾಗದಲ್ಲಿ ಗೋಕರ್ಣದ ಮೊದಲ ವಸತಿ ಸಮುಚ್ಛಯ. ಒಂದೂವರೆ ಕೋಟಿಗೆ ನೆಲ ಖರೀದಿ. 35ರಿಂದ 40 ಜನರಿಗೆ ಮಾರಾಟ. 13 ವರ್ಷಗಳ ಹಿಂದೆ ಗೋಕರ್ಣದಲ್ಲಿ ಶೇರ್ ಮಾರುಕಟ್ಟೆ ಕಚೇರಿ ಸಾಹಸ. ರಿಯಲ್ ಎಸ್ಟೇಟ್ ಬಿಜಿನೆಸ್. ಹೊತ್ತಿನ ಒಟ್ಟೂ ಟರ್ನ್ ಓವರ್ ನಾಲ್ಕರಿಂದ ಆರು ಕೋಟಿ. ಆದರೆ ರಮೇಶ್ ಪಂಡಿತ್ ಇಂಥ ಒಂದು ಅಪರೂಪದ, ಅದ್ಭುತ ವ್ಯಾವಹಾರಿಕ ಸಾಧನೆ ಮಾಡಿದ್ದು ಹತ್ತಾರು ವರ್ಷಗಳಿಂದ ಸನಿಹದಿಂದ ನೋಡಿದ ನನಗೇ ನಿಬ್ಬೆರಗು ಹುಟ್ಟಿಸಿತು. ಬಡತನವನ್ನೇ ಹಾಸು, ಹೊದ್ದು ಮಲಗಿದ ಹುಡುಗ ಕೇವಲ ಹತ್ತು ಸಾವಿರ ಬಂಡವಾಳದಿಂದ ಆರಂಭಿಸಿದ ವ್ಯಾವಹಾರಿಕ ಪರಿಕ್ರಮ. ಬರಿಗಾಲಿನ ಪಯಣದಲ್ಲಿ ಸಾಧಿಸಿದ ವಿಕ್ರಮ. ರಕ್ತಸಂಬಂಧಿಗಳೋ, ದೂರದ ಹಿತೈಷಿಗಳೋ ಯಾರೂ ನೋಡದಂತಹ ಪರಿಸ್ಥಿತಿ, ಪರಿಸರದಲ್ಲಿ ರಮೇಶ್ ಪಂಡಿತ್ ಇಂಥ ಒಂದು ಎತ್ತರದ ಸಾಧನೆಯನ್ನು ಎರಡೂ ಕಾಲು ದಶಕಗಳಲ್ಲಿ ಕೈಗತ ಮಾಡಿಕೊಂಡದ್ದಾದರೂ ಹೇಗೆ?

ರಮೇಶ್ ಪಂಡಿತರು ಹುಟ್ಟುವ ಒಂದು ತಿಂಗಳ ಮೊದಲು ಅವರ ತಂದೆ ಸುಬ್ರಾಯ ಪಂಡಿತರು ತೀರಿಕೊಳ್ಳುತ್ತಾರೆ. ಸುಬ್ರಾಯ ಪಂಡಿತರು ಆಯುರ್ವೇದ ವೈದ್ಯರು. ಉತ್ತರ ಕನ್ನಡದ ಮಂಕಿ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಇವರು ದವಾಖಾನೆ ನಡೆಸುತ್ತಿದ್ದರು. ತಾಯಿ ಸರಸ್ವತಿ. ಸುಬ್ರಾಯ ಪಂಡಿತರಿಗೆ ಎರಡು ಪತ್ನಿಯವರು. ಮೊದಲ ಪತ್ನಿಗೆ ಮೂರು ಹೆಣ್ಣು ಗಂಡು. ಪಂಡಿತರ ಅಮ್ಮ ಸರಸ್ವತಿ, ಸುಬ್ರಾಯ ಪಂಡಿತರ ಎರಡನೇ ಪತ್ನಿ. ಇವರಿಗೆ ಮೂರು ಹೆಣ್ಣು ಮಕ್ಕಳು, ಎರಡು ಗಂಡು. ರಮೇಶ್ ಪಂಡಿತ್ ಕಟ್ಟಕಡೆಯ ಮಗು. ಹುಟ್ಟುವಾಗಲೇ ಕಷ್ಟ, ನಷ್ಟ, ಬಡತನ, ನಿರಾಶ್ರಿತತೆಯನ್ನ ಹೊತ್ತುತಂದ ಬಾಲಕ. ಭಯಾನಕ ಬಾಲ್ಯ. ಹಸಿವು ಹರಿದು ತಿನ್ನುವ ಹೊತ್ತು. ಅಕ್ಕಂದಿರು ಸಂಬಂಧಿಗಳ ಮನೆಯಲ್ಲಿ ಓದುತ್ತಾರೆ. ಅಣ್ಣ ಉಡುಪಿಯ ಅಷ್ಠಮಠದಲ್ಲಿ ವಿದ್ಯಾಭ್ಯಾಸ ಮಾಡಿದರು. ರಮೇಶ್ ಪಂಡಿತ್ ಮಾತ್ರ ತಾಯಿಯೊಂದಿಗೆ ನಿಂತು, ಸೋದರತ್ತೆ ಅವರ ಅಕ್ಕರೆ, ಮಾರ್ಗದರ್ಶನದಲ್ಲಿ ಕುಮಟಾ ಅಂತ ಓದಿನ ಹಾದಿ ತುಳಿದರು. ಎಂ.. ಪರೀಕ್ಷೆ ಕಟ್ಟಿದವರು ಜೀವನ ನಿರ್ವಹಣೆಯ ಕಾರಣಕ್ಕೆ ಪರೀಕ್ಷೆ ಬರೆಯಲಿಲ್ಲ. ಕಷ್ಟದಲ್ಲೇ ಕೈತೊಳೆದ ಮಾಣಿ, ತನ್ನ ಕಾಲೇಜು ವಿದ್ಯಾಭ್ಯಾಸದ ದಿನಗಳಿಂದಲೇ ಬದುಕಿಗೆ ಮುಖಮಾಡಿದವರು. ಗುಟ್ಕಾ ಪಾನ್ ಮತ್ತು ಪಾನ್‌ಬೀಡಾಗಳಿಗೆ ಸಂಬಂಧಿಸಿದ ಪ್ರತಿಯೊಂದು ಐಟಂಗಳನ್ನೂ ಸೈಕಲ್ಲಿಗೆ ತೂಗಿಕೊಂಡು ಪೇಟೆ, ಊರು, ಕೇರಿ ಅಂತ ತಿರುಗಿ ಮಾರಾಟ ಮಾಡಲು ಆರಂಭಿಸಿದವರು, ನಂತರ ಮಹಾಗಣಪತಿ ಕೇಬಲ್ಚಾನೆಲ್‌ನ್ನು ಗೋಕರ್ಣದಂತಹ ಹಳ್ಳಿ ಪ್ರದೇಶದಲ್ಲಿ ಆರಂಭಿಸಿ 13 ನಡೆಸಿದರಲ್ಲದೆ ಲೈವ್‌ಗಳನ್ನೂ ಕಾಲದಲ್ಲಿಯೇ (1993) ಮಾಡಿ ಸೈ ಅನ್ನಿಸಿಕೊಂಡವರು. ಮಧ್ಯೆ ಕನ್ನಡ ಪ್ರಭ ಸ್ಥಳೀಯ ವರದಿಗಾರಿಕೆ. ಊರಲ್ಲದ ಊರಲ್ಲಿ ಶೇರ್ ಮಾರುಕಟ್ಟೆ, ರಿಯಲ್ ಎಸ್ಟೇಟ್, ಬಡಾವಣೆ ನಿರ್ಮಾಣ. ಒಂದೇ, ಎರಡೆಎಲ್ಲವೂ ಶೂನ್ಯ ಬಂಡವಾಳದ ಫಲವೇ! ಅಚ್ಚರಿ ಅಲ್ವಾ? ಅದೇ ಪಂಡಿತರ ಮ್ಯಾಜಿಕ್ಕು.

ನೋ ಮ್ಯಾಜಿಕ್ ಓನ್ಲಿ ಲಾಜಿಕ್

ಇಂದು ಗೋಕರ್ಣದ ಪರಿಸರದಲ್ಲಿ ರಮೇಶ್ ಪಂಡಿತ್ ಒಬ್ಬ ಅಘೋಷಿತ ಗಟ್ಟಿ, ಊರ್ದ್ವಮುಖೀ ಉದ್ಯಮಿ. ಕೋಟಿಗಳ ವ್ಯವಹಾರವನ್ನು ಗೌಜಿ, ಗದ್ದಲ, ಆಡಂಬರ ಇಲ್ಲದೆ ಮೌನದಲ್ಲಿ ಕಾರ್ಯರೂಪಕ್ಕೆ ತರಬಲ್ಲ ನಿಸ್ಸೀಮ. ದಗಾ, ಮೋಸ, ವಂಚನೆ ಮಾತೇ ಇಲ್ಲ. ಎಲ್ಲವೂ ಸ್ನೇಹ, ಪ್ರಾಮಾಣಿಕ ವ್ಯವಹಾರ, ಒಡನಾಟ, ನಂಬಿಕೆ, ಸಾಧಿಸಬೇಕೆಂಬ ಹಟ, ಛಲದಿಂದ. ನಾಲಿಗೆ ವ್ಯವಹಾರ. ಕೊಟ್ಟ ಮಾತು, ಇಟ್ಟ ಮುಹೂರ್ತ. ಎಲ್ಲವೂ ಮಹಾಗಣಪತೀ…, ಅವನದ್ದೇ ಕೃಪೆ.

ಸರ್, ನನ್ನಲ್ಲಿ ಯಾವುದೂ ಮ್ಯಾಜಿಕ್ ಇಲ್ಲ. ನನ್ನಲ್ಲಿ ಇರುವುದು ಕೇವಲ ಆತ್ಮವಿಶ್ವಾಸ. ಮಹಾಗಣಪತಿ ಕೃಪೆ. ಇವೆರಡನ್ನ ಬಿಟ್ಟರೆ ಸ್ನೇಹಿತರು, ಊರಿನ ನನ್ನ ನಾನು ಇಂದು ಇಷ್ಟು ದೊಡ್ಡ ಮಟ್ಟದ ವ್ಯವಹಾರಕ್ಕೆ ಕೈಹಾಕಿ, ಏನೋ ಒಂದು ಹಂತದ ಯಶಸ್ಸನ್ನು ಕಂಡಿದ್ದೇನೆ ಅಂತ ಆದರೆ ಅದು ಏನಕೇನ ಋಜುಮಾರ್ಗದಲ್ಲಿ ಬದುಕನ್ನ ಗೆಲ್ಲಬೇಕು. ನಾನು ನಾಲ್ಕು ಜನರಂತೆ ಬಾಳಿ ಬದುಕಬೇಕು. ಒಂದು ಹತ್ತಾರು ಜನರಿಗೆ ಉದ್ಯೋಗವಾಗುವಂತಹ ಸಾಂಸ್ಥಿಕ ಸ್ವರೂಪ ಕಟ್ಟಬೇಕೆಂಬ ಕನಸು. 14 ಎಕ್ರೆ ಜಮೀನನ್ನು ಒಂದೂವರೆ ಕೋಟಿಗೆ ಖರೀದಿಸಲು ಯೋಚಿಸಿದಾಗ ನನ್ನಲ್ಲಿ ಇದ್ದದ್ದು ಹತ್ತೋ ಇಪ್ಪತ್ತೋ ಸಾವಿರ ರೂಪಾಯಿ ಅಷ್ಟೆ. ಹೆಂಡತಿಯ ಬಂಗಾರ ಮಾರಿ, ಧುಮುಕಿದವ. ಜಾಗಕ್ಕೆ ಅಡ್ವಾನ್‌ಸ್ ತೆಗೆದುಕೊಂಡು ಮೂಲ ಜಾಗದವರಿಗೆ ಟೆಂಪರವರಿ ರಿಜಿಸ್ಟರ್‌ಡ್ ಮಾಡಿಸಿಕೊಂಡು ಮಾಡಿದ ಸಾಹಸ. ನಂತರ ನನಗೆ ಆರ್ಥಿಕ ಬೆಂಬಲವನ್ನ ಕೊಟ್ಟವರು ಅಂಕೋಲಾದ ಆರ್.ಎನ್. ನಾಯ್ಕ, ರಾಮದಾಸ ಭಟ್ಟ, ಅನಂತ ಧಾರೇಶ್ವರ, ಮಹಾಬಲ ಉಪಾದ್ಯ, ನರಸಿಂಹ ಉಪಾದ್ಯ, ಹೀಗೆ ಬಹಳಷ್ಟು ಸ್ನೇಹಿತರು ಯಾಕೆ, ಏನು ಏನೊಂದೂ ಕೇಳದೆ ನಾನೊಂದು ಕಾಲ್ ಮಾಡಿದಾಕ್ಷಣ ಹಣವನ್ನ ನೀಡಿದ್ದಾರೆ. ಸ್ಥಳ ನೀಡಿದ್ದಾರೆ. 1994ರಲ್ಲಿ ಗುಟ್ಕಾ ಮಾರಾಟಕ್ಕೆ ಸೈಕಲ್ ತುಳಿಯಲು ಆರಂಭಿಸಿದವನು ನಾನು. ನಿರಂತರ ನನ್ನ ಪತ್ನಿ ಅನಿತಾಳ ಬೆಂಬಲ. ಊರವರ ಪ್ರೀತಿ, ಸಹಕಾರ. ನನ್ನನ್ನ ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ‘ಕೆರೆಯ ನೀರನು ಕೆರೆಗೆ ಚೆಲ್ಲುಜನರಿಂದ ಹಣ ಎತ್ತಿ, ಜನರಿಗೇ ಹಿಂದಿರುಗಿಸುವ ಕೆಲಸ ಮಾಡಿದ್ದೇನೆ. ಗುರುಗಳ ಆಶೀರ್ವಾದ. ಹಿರಿಯರ ಹಾರೈಕೆ. ಅಹೋರಾತ್ರಿಯ ದುಡಿಮೆ. ನಿರ್ದಿಷ್ಟ ಗುರಿಛಲ. ನನಗೆ ಇವೆಲ್ಲವೂ ಬಂದಿರೋದು ನನ್ನ ಬಾಲ್ಯದ ಬಡತನದ ಬೇಗೆ, ಬೇನೆಯಿಂದ. ನನ್ನ ಸೋದರತ್ತೆ ನನಗೆ ಬದುಕಿನ ಪಾಠ ಕಲಿಸಿದರು. ಹೆತ್ತಮ್ಮ ಅವರು ಕೊರಡಿನಂತೆ ತೇದುಕೊಂಡು ನಮ್ಮನ್ನ ಬೆಳೆಸುವ ಪ್ರಯತ್ನ ಮಾಡಿದರು. ಮನುಷ್ಯ ಪ್ರಾಮಾಣಿಕವಾಗಿ ದುಡಿದರೆ, ಒಂದಿಷ್ಟು ಬುದ್ಧಿ ಉಪಯೋಗಿಸಿ ಶ್ರಮಪಟ್ಟರೆ ಬದುಕನ್ನು ಗೆಲ್ಲೋದು ಅಸಾಧ್ಯವೇನಲ್ಲ. ಇಂದಿಗೂ ನನ್ನ ಹೋರಾಟ ಮುಂದುವರಿದಿದೆ. ನನ್ನ ಕನಸು, ನಿರೀಕ್ಷೆಯ ಅರ್ಧದಾರಿಯಲ್ಲಿದ್ದೇನೆ.’

ರಮೇಶ್ ಪಂಡಿತ್ ನಗುಮೊಗದ ತರುಣ. ಅವರನ್ನ ಕಂಡರೆ ಇಂಥ ಒಂದು ಹೋರಾಟದ ಹಾದಿ ತುಳಿದ ಜೀವ ಇದೆಂದು ಯಾರಿಗೂ ಅರಿವಾಗದು. ಹುಟ್ಟಿನಿಂದ ಬ್ರಾಹ್ಮಣನಾದರೂ ಸಮೂಹಜೀವಿ. ಜಾತ್ಯತೀತ ಮನೋಭಾವ. ಆಳದಲ್ಲಿ ಅಪ್ಪಟ ಅಧ್ಯಾತ್ಮಿ. ಗೆಲ್ಲುವ ಹಟವಿದ್ದವನಿಗೆ ಊರೇನು, ಪರ ಊರೇನು. ಕಾರ್ಗಿಲ್ ಆದರೇನು, ಅಸ್ಸಾಂ ಆದರೇನು? ಸಂಕಲ್ಪಶಕ್ತಿ. ಆತ್ಮಪೂರ್ವಕ ತೊಡಗಿಕೊಳ್ಳುವಿಕೆ. ವ್ಯಕ್ತಿಗತ ಶುದ್ಧತೆ. ನಿಂತಲ್ಲೇ ನಿಂತು ಅಂದುಕೊಂಡ ಗುರಿಮುಟ್ಟುವ ಮನೋಧರ್ಮ ಇದ್ದರೆ ಬರಿಗೈ ಬಸವನೂ ಬೆಲೆಬಾಳುವ ಬದುಕನ್ನು ಕಟ್ಟಬಹುದು ಅನ್ನುವುದಕ್ಕೆ ರಮೇಶ್ ಪಂಡಿತ್ ಕಣ್ಣೆದುರಿನ ಸಾಕ್ಷಿ.

ರಮೇಶ್ ಪಂಡಿತರು, ಗೋಕರ್ಣದ ಬೋಳುಗುಡ್ಡೆಯಲ್ಲಿ ರೆಸಾರ್ಟ್ ಕಟ್ಟಿ ಪ್ರವಾಸೋದ್ಯಮದ ಭಾಗವಾಗಿ ವ್ಯಾವಹಾರಿಕವಾಗಿ ಬೆಳೆಯಬಹುದು ಅಂತ ಯೋಚಿಸಿದಾಗಲೇ ಹಾಳುಬಿದ್ದು ಕರಡ, ಸೊಪ್ಪಿಗೆ ಬೇಣವಾಗಿದ್ದ ಜಾಗಕ್ಕೂ ಬೆಲೆ ಬಂತು. ಇಂದು ಬೋಳುಗುಡ್ಡೆಗೆ ಚಿನ್ನದ ರಮೇಶ್ ಪಂಡಿತ್ ಎಂ.ಜಿ.ರೂಮ್‌ಸ್ಆರಂಭಿಸಿದ ನಂತರ ಸಾಲು ಸಾಲು ಕಾಟೇಜ್‌ಸ್,

ರೆಸಾರ್ಟ್‌ಸ್ಗಳು ತಲೆ ಎತ್ತಿವೆ. ಅಂದರೆ ಇವರ ಯೋಚನೆ, ಯೋಜನೆ ಅದೆಷ್ಟು ಅಪ್‌ಡೇಟೆಡ್ ಅನ್ನುವುದು ಗ್ರಾಹ್ಯ.

ಇಷ್ಟು ಹೇಳುತ್ತಲೂ ಒಂದು ಮಾತನ್ನು ನನ್ನ ಜಿಲ್ಲೆ, ನನ್ನ ಊರಿನ ಬಗ್ಗೆ ಹೇಳಲೇ ಬೇಕು. ನನ್ನೂರು, ನನ್ನ ಜಿಲ್ಲೆ ಮೊದಲಿನಿಂದಲೂ ಒಂದು ರೀತಿಯ ಜಿಡ್ಡುಗಟ್ಟಿದ ಮನಸು, ಮನುಷ್ಯರು, ಪರಿಸರದಿಂದ ಕೂಡಿದೆ. ಆದರೆ ಮಾನವತೆ, ಸಂಬಂಧಗಳ ಆರ್ದ್ರತೆ, ಉಪಚಾರ ಇವುಗಳಲ್ಲಿ ಎತ್ತಿದ ಕೈ. ಘಟ್ಟದ ಮೇಲಿನವರಂತೆ ಪ್ರಗತಿ, ಆಧುನಿಕ, ಹೊಸ ಮಾದರಿ ಘಟ್ಟದ ಕೆಳಗಿಲ್ಲ. ಆರಕ್ಕೇರದೆ ಮೂರಕ್ಕಿಳಿಯದೆ ಬದುಕಲ್ಲದ ಬದುಕೇ ನಮ್ಮ ಪ್ರಾರಬ್ಧ, ಲಭ್ಯ, ಹಣೆಬರಹ ಅಂದುಕೊಂಡೇ ನಡೆದು ಬಂದವರು. ಒಬ್ಬ ಬೆಳೆಯುವ ಹಟ ತೊಟ್ಟರೆ ಹತ್ತು ಜನ ಕಾಲೆಳೆಯುವ ಚಟ ಹೊಂದಿದ್ದಾರೆ. ಊರಲ್ಲೇನಿದೆ ಮಣ್ಣು. ಬದುಕೆಂದರೆ ಬೆಂಗಳೂರು, ಅಂತಲೇ ನಂಬಿದ ಸಾರ್ವತ್ರಿಕ ಪ್ರಜ್ಞೆ, ನಂಬಿಕೆ. ಇಂಥ ಪ್ರತಿಕೂಲ ವಾತಾವರಣದ ಮಧ್ಯೆ ರಮೇಶ್ ಪಂಡಿತ್ ತನ್ನ ಬದುಕಿನ ಯಾನದ ಎರಡೂಕಾಲು ದಶಕದಲ್ಲಿ ಬೆಳೆದ, ರೀತಿ, ನೀತಿ, ಎತ್ತರ ನಿಜಕ್ಕೂ ಅಪರೂಪ, ಅನನ್ಯ. ಅನ್ಯಾದೃಶ. ಹೆಚ್ಚು ಕಮ್ಮಿ ಮೂವತ್ತೇಳು ವರ್ಷಗಳ ಹಿಂದೆ 180 ರುಪಾಯಿ ಹಿಡಿದುಕೊಂಡು, ಯಾರೋ ಉಟ್ಟುಬಿಟ್ಟ ಬಟ್ಟೆ ಹಾಕಿಕೊಂಡು, ಬರಿಗಾಲಿನಲ್ಲಿ ಊರುಬಿಟ್ಟು ಬಂದು ಬದುಕು ಕಟ್ಟಿದ ನನಗಿಂತ ಊರಿನಲ್ಲೇ ಇದ್ದು, ಊರಿನ ಎಲ್ಲಾ ಹಳಸು, ಹಳಹಳಿಕೆ, ಹಿಂದೆಳೆಯುವಿಕೆ, ಮೂದಲಿಕೆ, ಆತ್ಮವಿಶ್ವಾಸ ಕುಂದಿಸುವಿಕೆ ಎಲ್ಲವುಗಳನ್ನೂ ನುಂಗಿ, ಮೀರಿ ಒಬ್ಬ ಯುವ ಉದ್ಯಮಿಯಾಗಿ ನಿರೀಕ್ಷೆ ಮೀರಿ ಬೆಳೆದು ನಿಂತ ರಮೇಶ್ ಪಂಡಿತ್ ಮಿಗಿಲಾಗಿ, ನಿಲ್ಲುತ್ತಾರೆ. ರಮೇಶ್ ಪಂಡಿತ್ ನನಗೇ ಒಬ್ಬ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ಅಭಿನಂದನೆ.

ರಮೇಶ್ ಪಂಡಿತ್ : 9611566273