About Us Advertise with us Be a Reporter E-Paper

ಅಂಕಣಗಳು

ನ್ಯಾಯಾಲಯದಲ್ಲಿ ದೇವಾಲಯದ ದಾವೆ!

- ಎಸ್. ಷಡಕ್ಷರಿ

ಇದು ವಿಚಿತ್ರ ಎನಿಸುವುದಿಲ್ಲವೇ? ಸರ್ವಶಕ್ತನೂ, ಸರ್ವವ್ಯಾಪಿಯೂ ಅದ ದೇವರು ಆಲಯದ ವಿಷಯವಾಗಿ ನ್ಯಾಯಾಲಯದ ಅಂಗಳಗಳಲ್ಲಿ ಅಲೆದಾಡಬೇಕಾದ ಪ್ರಸಂಗ ಬಂದೊದಗುವುದು ವಿಚಿತ್ರ ಅಲ್ಲವೇ? ಅಂತಹದ್ದೊಂದು ಪ್ರಸಂಗ ಇಲ್ಲಿದೆ.

ಬಹಳ ಹಿಂದೆ ಮಧ್ಯಪ್ರದೇಶದ ರಾಜ್ಯದ ಒಂದೂರಿನಲ್ಲಿ ಒಂದು ದೇವಾಲಯವಿತ್ತು. ದೇವಾಲಯದ ಪಕ್ಕದಲ್ಲಿ ಒಂದು ಸಣ್ಣ ಖಾಲಿ ಜಾಗ ಇತ್ತು. ಅದರ ಪಕ್ಕದಲ್ಲೊಂದು ಮನೆ. ಮನೆಯ ಮಾಲೀಕರು ಖಾಲಿ ಜಾಗ ತಮಗೆ ಸೇರಿದ್ದೆಂದು ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಮೊಕದ್ದಮೆಯು ನಡೆಯುತ್ತಿತ್ತು. ವಾದ ವಿವಾದಗಳೆಲ್ಲಾ ಮುಗಿದಿದ್ದವು. ತೀರ್ಪು ಮನೆಯ ಮಾಲೀಕರ ಪರವಾಗಿಯೇ ಬರುವುದು ಶತಃಸಿದ್ಧವಾಗಿತ್ತು. ದೇವಾಲಯದ ಅರ್ಚಕರ ನಿರ್ಲಕ್ಷ್ಯದಿಂದಾಗಿ ಖಾಲಿ ಜಾಗದ ದಾಖಲೆಗಳು ಮನೆಯ ಮಾಲೀಕರ ವಶದಲ್ಲಿತ್ತು. ಆದರೆ ಜಾಗ ದೇವಸ್ಥಾನಕ್ಕೇ ಸೇರಿದ್ದುದು ಎಂಬ ಸತ್ಯ ಊರಿನವರಿಗೆಲ್ಲಾ ಗೊತ್ತಿದ್ದ ವಿಷಯವಾಗಿತ್ತು.

ಈ ಸತ್ಯ ಸಂಗತಿಯು ಆ ಮನೆಯ ಹದಿಮೂರರ ಹರೆಯದ ಹುಡುಗನಿಗೂ ಗೊತ್ತಿತ್ತು. ದಾವೆಯ ವಿಷಯ ತಿಳಿದುಕೊಂಡ ಹುಡುಗ ನೇರ ತಂದೆಯ ಬಳಿ ಹೋದ. ಅಪ್ಪಾ! ದಾಖಲೆಗಳು ನಿಮ್ಮ ಬಳಿಯಿದ್ದರೂ ಜಾಗ ದೇವಸ್ಥಾನಕ್ಕೇ ಸೇರಿದ್ದೆಂದು ನನಗೂ ಚೆನ್ನಾಗಿ ಗೊತ್ತು. ನಿಮಗೂ ಚೆನ್ನಾಗಿ ಗೊತ್ತು. ನೀವು ಸರಿಯಲ್ಲ. ನಾನು ನ್ಯಾಯಾಲಯಕ್ಕೆ ಬಂದು ಸತ್ಯ ಸಂಗತಿಯನ್ನು ಅಲ್ಲಿ ತಿಳಿಸುತ್ತೇನೆ. ನಾನಿನ್ನೂ ವಯಸ್ಕನಾಗಿಲ್ಲದೇ ಇರುವುದರಿಂದ ನನ್ನ ಮಾತನ್ನು ನ್ಯಾಯಾಲಯ ಮಾನ್ಯ ಮಾಡುವುದಿಲ್ಲ. ಅದಕ್ಕಾಗಿ ನಾನು ಅಜ್ಜನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರುತ್ತೇನೆ. ನೀವು ದಾವೆಯನ್ನು ಇಲ್ಲಿಗೇ ಬಿಡುವುದು ಒಳ್ಳೆಯದು ಎಂದ.

ಮಗನದ್ದು ಉದ್ಧಟತನವೆಂದು ಭಾವಿಸಿದ ತಂದೆ ಸಿಟ್ಟಿಗೆದ್ದರು. ನೀನಿನ್ನೂ ಚಿಕ್ಕವನು. ದೊಡ್ಡ ವಿಷಯಗಳಿಗೆ ತಲೆ ಹಾಕಬೇಡ. ನಿನ್ನ ಪಾಡಿಗೆ ನೀನು ಶಾಲೆ, ಓದುಗಳಲ್ಲಿ ತೊಡಗಿಸಿಕೋ ಎಂದು ಬೈದರು. ಆ ಹುಡುಗ ಅಪ್ಪಾ! ನನ್ನ ಶಾಲೆ, ಓದು ಎರಡೂ ಚೆನ್ನಾಗಿಯೇ ನಡೆಯುತ್ತಿದೆ. ಆದರೆ ಸತ್ಯವನ್ನೇ ನುಡಿಯಬೇಕು. ಧರ್ಮವನ್ನೇ ಆಚರಿಸಬೇಕೆಂದು ನೀವೇ ಹೇಳಿಕೊಡುತ್ತಿದ್ದಿರಿ. ಈಗ ಸುಳ್ಳು ಕೇಸು ನಡೆಸುತ್ತಿದ್ದೀರಿ. ನನ್ನ ಕಣ್ಣ ಮುಂದೆಯೇ ಅಧರ್ಮ ನಡೆಯಲು ನಾನು ಬಿಡುವುದಿಲ್ಲ ಎಂದ.

ಅದೇ ಸಮಯಕ್ಕೆ ಆ ಹುಡುಗನ ಅಜ್ಜ ಅಂದರೆ ಮನೆ ಯಜಮಾನನ ತಂದೆ ಅಲ್ಲಿಗೆ ಬಂದಿದ್ದರು. ಅವರು ನಿನ್ನ ಮಗ ಹೇಳುತ್ತಿರುವುದು ಸರಿ. ನೀನು ದಾವೆ ಹಿಂತೆಗೆದುಕೊಳ್ಳುವುದು ಒಳ್ಳೆಯದು. ಏಕೆಂದರೆ ನಿನ್ನ ಮಗ ನಿನ್ನ ತಂದೆಯಾದ ನಾನು ಇಬ್ಬರೂ ನ್ಯಾಯಾಲಯಕ್ಕೆ ಬಂದು ನಿನ್ನ ವಿರುದ್ಧ ಹೇಳಿಕೆ ಕೊಡುತ್ತೇವೆ. ನೀನು ಮೊಕದ್ದಮೆಯಲ್ಲಿ ಸೋಲನ್ನು ಎದುರಿಸುತ್ತೀಯೆ ಮತ್ತು ಮುಖಭಂಗವನ್ನು ಅನುಭವಿಸುತ್ತೀಯೆ ಎಂದು ಹೇಳಿದರು.

ಅನ್ಯ ಮಾರ್ಗವೇ ಇಲ್ಲದೆ ಮನೆಯ ಯಜಮಾನರು ಕೇಸನ್ನು ವಾಪಸ್ ಪಡೆದರು. ಆ ಜಾಗವನ್ನು ದೇವಾಲಯಕ್ಕೇ ಹಿಂತಿರುಗಿ ಕೊಟ್ಟರು. ಆದರೆ ತನ್ನ ಮಗ ಅಧಿಕಪ್ರಸಂಗತನ ಮಾಡಿದನೆಂದು ಅವನ ಮೇಲೆ ಮುನಿಸಿಕೊಂಡಿದ್ದರು. ಕೊನೆಗೆ ಮಗನೇ ಅಪ್ಪಾ! ನಿಮ್ಮ ಮುನಿಸಿಗೆ ಅರ್ಥವೇ ಇಲ್ಲ. ನಿಮ್ಮ ಮಗ ಸುಳ್ಳು ಹೇಳುವುದನ್ನು ತಪ್ಪಿಸಿದ. ಮತ್ತು ಅಧರ್ಮ ಆಚರಣೆಯಿಂದ ನಿಮ್ಮನ್ನು ಪಾರು ಮಾಡಿದ ಎಂದು ಸಂತಸಪಡಬೇಕೇ ಹೊರತು, ಮುನಿಸಿಕೊಳ್ಳಬಾರದು ಎಂದು ಸಮಾಧಾನ ಪಡಿಸಿದ.

ಈ ಘಟನೆಯಲ್ಲಿನ ಆ ಧೈರ್ಯವಂತ ಹುಡುಗ ಯಾರು ಗೊತ್ತೆ? ಅವರು ಮುಂದೆ ಓಶೋ ಎಂದೇ ಪ್ರಖ್ಯಾತರಾದ ಭಗವಾನ್ ಶ್ರೀ ರಜನೀಶರು! ಅವರ ಪುಣ್ಯಸ್ಮರಣೆಗೆ ಪ್ರಣಾಮಗಳು!

ನಮಗೂ, ನಮ್ಮ ಮನೆಯ ಮಕ್ಕಳಿಗೂ ಈ ರೀತಿಯ ಸತ್ಯನಿಷ್ಠೆ ಮತ್ತು ಧೈರ್ಯ ಬರುವುದಾದರೆ ಭಾರತದ ಅಸಂಖ್ಯ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ಲಕ್ಷಾಂತರ ಕೇಸುಗಳು ಕಡಿಮೆಯಾಗಬಹುದೇನೋ?

Tags

Related Articles

Leave a Reply

Your email address will not be published. Required fields are marked *

Language
Close