About Us Advertise with us Be a Reporter E-Paper

ಅಂಕಣಗಳು

ಸುಬ್ರಹ್ಮಣ್ಯದ ಎರಡು ಕ್ಷೇತ್ರಗಳ ನಡುವೆ ಎದ್ದಿರುವ ಕ್ಷುಲ್ಲಕ ವಿವಾದ 

ವಿಮರ್ಶೆ: ವೇಣುಗೋಪಾಲರಾವ್ ಉಡುಪಿ

ರೂಪ್ಯಪೀಠಂ ಕುಮಾರಾದ್ರಿಃ ಕುಂಭಾಶಿಶ್ಚ ಧ್ವಜೇಶ್ವರಃ  ಕ್ರೋಢ ಗೋಕರ್ಣ ಮೂಕಾಂಬಾ ಸಪ್ತೈತಾ ಮೋಕ್ಷದಾಯಿಕಾಃ॥

ಪರಮ ಪಾವನವಾದ ಪರಶುರಾಮ ಸೃಷ್ಟಿಯ ಏಳು ಮೋಕ್ಷ ಕ್ಷೇತ್ರಗಳನ್ನು ನೆನಪಿಸುವ ಈ ಪ್ರಾಚೀನ ಶ್ಲೋಕವು ಈ ಕ್ಷೇತ್ರಗಳ ಪುರಾತನತೆ ಹಾಗೂ ಪಾವಿತ್ರ್ಯತೆಯನ್ನು ಸಾರುತ್ತದೆ. ಕುಮಾರಾದ್ರಿ ಅಥವಾ ಇಂದಿನ ಕುಕ್ಕೆ ಸುಬ್ರಹ್ಮಣ್ಯ ಇತ್ತೀಚಿನ ದಿನಗಳಲ್ಲಿ ಅಪ್ರಸ್ತುತ ವಿಚಾರಕ್ಕೆ ಸುದ್ದಿಯಲ್ಲಿರುವುದು ಕ್ಷೇತ್ರದ ಭಕ್ತರಿಗೆ ಮುಜುಗರವನ್ನು ಉಂಟುಮಾಡಿರುವುದು ಪರಮಸತ್ಯವಾದ ವಿಚಾರ. ‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ಆಶಯದ ನಮ್ಮ ಹಿಂದೂ ಸಂಸ್ಕೃತಿಯ ನಮ್ಮ ದೇಶದಲ್ಲಿ, ನಮ್ಮ  ಶ್ರದ್ಧಾಕೇಂದ್ರಗಳ ಪಕ್ಕದಲ್ಲಿಯೇ ಅನ್ಯ ಧರ್ಮೀಯರ ಶ್ರದ್ಧಾಕೇಂದ್ರಗಳು ಇದ್ದು, ಅವುಗಳಲ್ಲಿ ಪರಸ್ಪರ ಸಹಕಾರ ಅನ್ಯೋನ್ಯತೆಗೆ ಹಲವಾರು ಕ್ಷೇತ್ರಗಳ ಉದಾಹರಣೆ ನಮ್ಮ ಮುಂದೆ ಇದೆ. ಆದರೆ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಮ್ಮದೇ ಎರಡು ಕ್ಷೇತ್ರಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ದೋಷಾರೋಪಣೆ ನಡೆಯುತ್ತಿರುವುದು ನಿಜಕ್ಕೂ ಖೇದನೀಯ. ‘ಧಾರ್ಮಿಕ ದತ್ತಿ ಇಲಾಖೆ’ಯ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠ ಇಂದು ಆಸ್ತಿಕ ವರ್ಗದ ಮನಸ್ಸಿನಲ್ಲಿ ಹಲವಾರು ಗೊಂದಲಗಳನ್ನು ಹುಟ್ಟುಹಾಕಿರುವುದು ಸುಳ್ಳಲ್ಲ.  ದೇವಸ್ಥಾನದ ಆಡಳಿತ ಮಂಡಳಿಯವರು ಮಾಡುವ ಪ್ರಧಾನ ಆಕ್ಷೇಪವನ್ನು ಗಮನಿಸೋಣ.

ಇತ್ತೀಚೆಗೆ, ದೇವಸ್ಥಾನದ ಆಡಳಿತ ಮಂಡಳಿಯವರು ಪತ್ರಿಕಾ ಹೇಳಿಕೆಗಳ ಮೂಲಕ ‘ದೇವಸ್ಥಾನದಲ್ಲಿ ರಶೀದಿ ಪಡೆಯದೆ, ದೇವಸ್ಥಾನದ ವತಿಯಿಂದ ನಡೆಸದೆ, ಇತರೆ ಖಾಸಗಿ ಮಠ ಮಂದಿರಗಳಲ್ಲಿ, ಅಥವಾ ನದಿತೀರದಲ್ಲಿ ನಡೆಸುವ ಸರ್ಪ ಸಂಸ್ಕಾರ, ಆಶ್ಲೇಷಾಬಲಿ ಸೇವೆಗಳು, ಸುಬ್ರಹ್ಮಣ್ಯ ದೇವರಿಗೆ ಸಲ್ಲುವುದಿಲ್ಲ. ಭಕ್ತರು ಇಂತಹವರನ್ನು ಆಶ್ರಯಿಸಿ ಮೋಸಹೋಗಬಾರದು’ ಎಂಬ ಅರ್ಥ ಬರುವ ರೀತಿಯಲ್ಲಿ ತಿಳಿಸಿರುತ್ತಾರೆ. ಇದನ್ನು ಓದಿದ ಯಾವುದೇ ಸ್ಥಿತಪ್ರಜ್ಞ ಭಕ್ತನಿಗೂ ಸುಬ್ರಹ್ಮಣ್ಯ  ದೇವಸ್ಥಾನದ ಆಡಳಿತ ಮಂಡಳಿಯ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆಯೇ ಅಥವಾ ದೇವಸ್ಥಾನದ ವತಿಯಿಂದ ನಡೆಸದ ಸೇವೆಗಳನ್ನು ತಾನು ಸ್ವೀಕರಿಸುವುದಿಲ್ಲ ಎಂದು ದೇವರೇ ಆಡಳಿತ ಮಂಡಳಿಯವರಿಗೆ ತಿಳಿಸಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಉತ್ತರವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಬಂದಿರುವ ನಮ್ಮ ಪ್ರಾಚೀನ ನಂಬಿಕೆಗಳನ್ನು ನೋಡೋಣ. ಹಿಂದೂ ಸಮಾಜಕ್ಕೆ ಶ್ರೇಷ್ಠ ಪುಣ್ಯಕ್ಷೇತ್ರವೆಂದರೆ ಕಾಶಿ ಕ್ಷೇತ್ರ. ಇಲ್ಲಿ ಯಾರಾದರೂ ಮರಣ ಹೊಂದಿದರೆ ಅಂತಹವರಿಗೆ ಪುನರ್ಜನ್ಮ ಇಲ್ಲ. ಅವರು ನೇರವಾಗಿ ಮೋಕ್ಷಕ್ಕೆ ಹೋಗುತ್ತಾರೆ ಎನ್ನುವುದು  ಪೂರ್ವಿಕರ ನಂಬಿಕೆ. ಇದರ ಅರ್ಥ, ಕಾಶೀ ವಿಶ್ವನಾಥನ ದೇವಸ್ಥಾನದಲ್ಲಿ ಮರಣಹೊಂದಿದವರಿಗೆ ಮಾತ್ರ ಮೋಕ್ಷ, ದೇವಸ್ಥಾನದ ಹೊರಗೆ, ಕಾಶೀ ಕ್ಷೆತ್ರದಲ್ಲಿ ಮರಣಹೊಂದಿದವರಿಗೆ ಮೋಕ್ಷ ಇಲ್ಲ ಎಂಬ ಅರ್ಥ ಅಲ್ಲವಲ್ಲ? ಅಷ್ಟೇಅಲ್ಲದೆ, ಪಿತೃಕಾರ್ಯಗಳಿಗೆ ಪ್ರಸಿದ್ಧವಾದ ಗೋಕರ್ಣ, ರಾಮೇಶ್ವರ ಕ್ಷೇತ್ರಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ನಮ್ಮ ದೇವಸ್ಥಾನದಲ್ಲಿ ರಶೀದಿ ಮಾಡಿಸಿ, ನಮ್ಮ ಕಡೆಯ ಅರ್ಚಕರಿಂದ ಪಿತೃಕಾರ್ಯ ಮಾಡಿಸಿದರೆ ಮಾತ್ರ ನಿಮ್ಮ ಪಿತೃಗಳಿಗೆ ಮೋಕ್ಷ. ಇದನ್ನು ಬಿಟ್ಟು ಖಾಸಗಿಯಾಗಿ ಬೇರೆಯವರಲ್ಲಿ ಮಾಡಿಸಿದರೆ ಕ್ಷೇತ್ರಸ್ವಾಮಿ ಸ್ವೀಕಾರಮಾಡುವುದಿಲ್ಲ.  ನಿಮ್ಮ ಪಿತೃಗಳಿಗೆ ಮೋಕ್ಷವಾಗುವುದಿಲ್ಲ ಎಂಬಂತಹ ಬಾಲಿಶ ಹೇಳಿಕೆಗಳನ್ನು ಇವತ್ತಿನವರೆಗೂ ನೀಡಿದ ಉದಾಹರಣೆಗಳು ಇಲ್ಲ. ಕ್ಷೇತ್ರದ ವ್ಯಾಪ್ತಿ, ಕೇವಲ ದೇವಸ್ಥಾನದ ಗರ್ಭಗುಡಿ, ಪೌಳಿಗಷ್ಟೇ ಸೀಮಿತವಾಗಿಲ್ಲ, ದೇವರ ಅನುಗ್ರಹ ಕ್ಷೇತ್ರಪುರೋಹಿತರ ಮೂಲಕ ಪ್ರಾರ್ಥಿಸಿದರೆ ಮಾತ್ರ ಸಿಗುವುದಲ್ಲ. ನಾವು ಮಾಡುವ ಧಾರ್ಮಿಕ ಪ್ರಕ್ರಿಯೆಯಲ್ಲಿ ನಮಗೆ ಇರುವ ನಂಬಿಕೆ ಹಾಗೂ ಶ್ರದ್ಧೆಯೇ ಪ್ರಧಾನ ಎನ್ನುವುದು ಅಯಾಚಿತವಾಗಿ ಸಿದ್ದವಾಗುತ್ತದೆ. ನಮ್ಮ ಪರಶುರಾಮ ಸೃಷ್ಟಿಯಲ್ಲಿ, ವಿಶೇಷವಾಗಿ ನಾಗಾರಾಧನೆಯನ್ನು ಮಾಡುತ್ತ ಬಂದಿರುವುದು ನಾವು ಕಾಣಬಹುದು. ತುಳುನಾಡಿನ ಜನರು, ತಮ್ಮ  ಸ್ಥಳಗಳಲ್ಲೇ ನಾಗನನ್ನು ಆರಾಧಿಸಿಕೊಂಡು ಬಂದಿದ್ದು, ಸರ್ಪಸಂಸ್ಕಾರಾದಿ ಪ್ರಕ್ರಿಯೆಗಳನ್ನು ತಮ್ಮ ತಮ್ಮ ಊರಿನ ಅರ್ಚಕರ

ಮೂಲಕ ಮಾಡಿಸುತ್ತಿದ್ದು ಅವರ ಸೇವೆಗಳು ದೇವರಿಗೆ ತಲುಪುತ್ತಿಲ್ಲವೇ? ಸುಬ್ರಹ್ಮಣ್ಯವನ್ನು ಹೊರತಾಗಿ ಅನ್ಯ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರಾದಿಗಳನ್ನು ಮಾಡಿದ ಜನರಿಗೆ ಯಾವತ್ತೂ ಶ್ರೇಯಸ್ಸು ಆಗಿಲ್ಲವೇ? ಇಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ನಾವು ತಿಳಿದುಕೊಳ್ಳಬೇಕು ಅದೇನೆಂದರೆ, ನೇರವಾಗಿ ಕುಕ್ಕೆ ಕ್ಷೇತ್ರದ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸಬೇಕಾದ ಸೇವೆಗಳು ಉದಾಹರಣೆಗೆ, ರಥೋತ್ಸವ, ಡೋಲೋತ್ಸವ, ತುಲಾಭಾರ ಇತ್ಯಾದಿಗಳನ್ನು ದೇವಸ್ಥಾನದ ಮೂಲಕವೇ ಮಾಡಿಸುವುದು  ಆದರೆ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಮುಂತಾದ ವೈಯಕ್ತಿಕ ನೆಲೆಯ ಸೇವೆಗಳನ್ನು ಯಾರೂ ಎಲ್ಲೂ ಮಾಡಿಸಬಹುದು. ಸುಬ್ರಹ್ಮಣ್ಯಕ್ಕೆ ಬಂದು ಸೇವೆಯನ್ನು ಮಾಡಿಸುವ ಭಕ್ತಾದಿಗಳು, ಸಾಮಾನ್ಯವಾಗಿ ಜ್ಯೋತಿಷ್ಕರ ಸಲಹೆಯಂತೆ ಕ್ಷೇತ್ರಕ್ಕೆ ಬಂದು ಸೇವೆಗಳನ್ನು ಮಾಡಿಸುತ್ತಾರೆ. ಜ್ಯೋತಿಷ್ಕರು ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ/ಆಶ್ಲೇಷಾ ಬಲಿ ಮಾಡಿಸಿ ದೇವರಿಗೆ ಏನಾದರೂ ಸೇವೆ ಕೊಡಿ ಎಂದು ಹೇಳುತ್ತಾರೆಯೇ ವಿನಃ ದೇವಸ್ಥಾನದ ಮೂಲಕವೇ ಮಾಡಿಸಿ ಎಂದು ಹೇಳುವುದು ಬಹಳ ಕಡಿಮೆ. ಇದರ ಅರ್ಥ ಸುಬ್ರಹ್ಮಣ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ  ವೈಯಕ್ತಿಕ ನೆಲೆಗಟ್ಟಿನ ಸೇವೆಗಳಾದ ಸರ್ಪ ಸಂಸ್ಕಾರ/ಆಶ್ಲೇಷಾ ಬಲಿ ಇವುಗಳನ್ನು ಮಾಡಿಸಿ, ಬಳಿಕ ಕ್ಷೇತ್ರ ಸ್ವಾಮಿಯಾದ ಸುಬ್ರಹ್ಮಣ್ಯ ದೇವರ ಪ್ರೀತ್ಯರ್ಥವಾಗಿ, ದೇವರಿಗೆ ಸೇವೆಯನ್ನು ಮಾಡಿಸುವುದು ವಿಹಿತ ಎಂಬುದಾಗಿದೆ.  ಈ ಧರ್ಮ ಸೂಕ್ಷ್ಮದ ವಿಚಾರವನ್ನು ಬದಿಗಿಟ್ಟು ವ್ಯಾವಹಾರಿಕವಾಗಿ ನೋಡುವುದಾದರೂ, ಯಾವುದೇ ಸೇವೆ ಮಾಡಿಸಲು, ನಿಗದಿತ ಮೊತ್ತವನ್ನು ಪಾವತಿಸಿದ ಭಕ್ತನೊಬ್ಬ ತನ್ನ ಮನಸ್ಸಿಗೆ ಹಿತವಾದ ರೀತಿಯಲ್ಲಿ ಎಲ್ಲಿ ಕಾರ್ಯಕ್ರಮಗಳು ನಡೆಯುತ್ತದೆಯೋ ಅಲ್ಲಿ ಹೋಗಿ ಸೇವೆಯನ್ನು ಮಾಡಿಸುವುದು ಸಹಜ. ದೇವಸ್ಥಾನದ ವತಿಯಿಂದ ಉತ್ತಮ ರೀತಿಯ  ರೀತಿಯಲ್ಲಿ ಹಾಗೂ ಶಾಸ್ತ್ರೀಯವಾಗಿ ಸೇವಾಕಾರ್ಯಗಳನ್ನು ಮಾಡಿಸಿಕೊಟ್ಟರೆ, ಜನರು ಖಂಡಿವಾಗಿಯೂ ದೇವಸ್ಥಾನದಲ್ಲೇ ನಿಗದಿತ ಶುಲ್ಕವನ್ನು ಪಾವತಿಸಿ, ದೇವಸ್ಥಾನದ ಮೂಲಕವೇ ಸರ್ಪ ಸಂಸ್ಕಾರಾದಿ ವೈಯಕ್ತಿಕ ನೆಲೆಯ ಸೇವೆಯನ್ನು ಮಾಡಿಸಲು ಮುಂದಾಗಬಹುದು. ಈ ಎಲ್ಲಾ ವಿಚಾರಗಳು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಿಗೆ ತಿಳಿಯದ್ದೇನಲ್ಲ. ಆದರೂ, ಅಕ್ಕಪಕ್ಕದ ಧಾರ್ಮಿಕ ಕೇಂದ್ರಗಳೊಂದಿಗೆ ಸೌಹಾರ್ದತೆಯನ್ನು ಬಯಸದೆ, ಸದಾ ಕಾಲುಕೆರೆದು ಜಗಳಕ್ಕೆ ಬರುವ ಪ್ರವೃತ್ತಿ ಇವರಿಗೆ ಇದೆಯೋ ಎನ್ನುವ ರೀತಿಯ ವರ್ನೆ ಖಂಡಿತವಾಗಿಯೂ ಇವರು ಸದಸ್ಯರಾಗಿರುವ ಸಮಿತಿಗೂ ಹಾಗೂ  ಕೆಟ್ಟ ಹೆಸರನ್ನು ತರುವುದು ನಿಶ್ಚಿತ.

ಸಾಮನ್ಯ ಜನರು ತಮ್ಮ ಕಷ್ಟ-ಕಾರ್ಪಣ್ಯಗಳ ಪರಿಹಾರಕ್ಕಾಗಿ, ತಾವು ಕಷ್ಟಪಟ್ಟು ದುಡಿದ ದುಡಿಮೆಯ ಅಲ್ಪಾಂಶವನ್ನು ದೇವತಾ ಕಾರ್ಯಗಳಿಗೆ ವಿನಿಯೋಗಿಸುವಾಗ, ತಾವು ದೇವರಿಗೆ ಅರ್ಪಿಸಿದ ಕಾಣಿಕೆಯು ಯಾವ ರೀತಿಯಲ್ಲಿ ಉಪಯೋಗ ಆಗುತ್ತಿದೆ ಎಂದು ತಿಳಿದುಕೊಳ್ಳುವ ಸಹಜ ಕುತೂಹಲ ಇದ್ದೇ ಇರುತ್ತದೆ. ವಾರ್ಷಿಕ 40ಕೋಟಿ ರುಪಾಯಿ ಆದಾಯ ಇರುವ ಈ ದೇವಸ್ಥಾನದ ಹುಂಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಗ್ರಹವಾದ ಹಣ ಎಷ್ಟು ಮತ್ತು ಅದರಲ್ಲಿ  ಕ್ಷೇತ್ರದ ಅಭಿವೃದ್ದಿಗೆ  ಹಣವೆಷ್ಟು, ಸರಕಾರಕ್ಕೆ ಹೋದ ಹಣವೆಷ್ಟು ಎಂಬ ಬಗ್ಗೆ ವ್ಯವಸ್ಥಾಪಕ ಮಂಡಳಿಯವರು ಬಹಿರಂಗವಾಗಿ ಘೋಷಿಸಿದರೆ ಜನರ ದುಡ್ಡು ಎಲ್ಲಿಗೆ ಹೋಗುತ್ತದೆ ಎಂಬ ಸ್ಪಷ್ಟ ಅರಿವು ಭಕ್ತರಿಗೂ ಇರುತ್ತದೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪಕ ಮಂಡಳಿಯವರು ಯೋಚಿಸಿ, ಈ ವಿಚಾರಗಳನ್ನು ಕಾಲಕಾಲಕ್ಕೆ ಜನರ ಮುಂದೆ ಇಟ್ಟಾಗ,  ಭಕ್ತರು ಕೊಟ್ಟ ಹಣವು ಕ್ಷೇತ್ರದ ಅಭಿವೃದ್ಧಿಗೆ ಹೇಗೆ ಬಳಕೆಯಾಗುತ್ತದೆ ಎಂಬ ಅರಿವು ಮೂಡಿ, ಆರ್ಥಿಕ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ.

ಇನ್ನು ಸುಬ್ರಹ್ಮಣ್ಯ ಮಠ  ದೇವಸ್ಥಾನಕ್ಕೆ ಇರುವ ಅವಿನಾಭಾವ ಸಂಬಂಧ ಇಂದು ನೆನ್ನೆಯದಲ್ಲ. ದೇವಸ್ಥಾನ ಅಂತರ್ಜಾಲ ಪುಟದಲ್ಲಿ ಕ್ಷೇತ್ರದ ಇತಿಹಾಸದ ಬಗ್ಗೆ ಬರೆಯುವಾಗ, ಶ್ರೀ ಶಂಕರಾಚಾರ್ಯರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದ ಉಲ್ಲೇಖ ಮಾಡುತ್ತಾರೆ. ಅದರೆ, ಅವರಂತೆಯೇ, ಸನಾತನ ವೈದಿಕ ಪರಂಪರೆಯಲ್ಲಿ ಬಂದು ದ್ವೈತ ಮತವನ್ನು ಪ್ರವರ್ತಿಸಿದ ಶ್ರೀ ಮಧ್ವಾಚಾರ್ಯರು ಸುಬ್ರಹ್ಮಣ್ಯಕ್ಕೆ ಬಂದ ವಿಚಾರವಾಗಲೀ, ದೇವಸ್ಥಾನದ ನಿರ್ವಹಣೆಯನ್ನು ತನ್ನ ಸುಪರ್ದಿಗೆ ವಹಿಸಿಕೊಂಡು ನಿತ್ಯ ನೈಮಿತ್ತಿಕ ಕರ್ಮಾಚರಣೆಗಳನ್ನು ಮಾಧ್ವ ಸಂಪ್ರದಾಯ ರೀತ್ಯಾ ಪುನಃ ಸ್ಥಾಪಿಸಿ ಸುಲಲಿತವಾಗಿ ನಿತ್ಯ  ನಡೆಸಿಕೊಂಡು ಹೋಗಲು ವ್ಯವಸ್ಥೆಯನ್ನು ಮಾಡಿದ ಬಗ್ಗೆ ದಾಖಲೆಗಳು ಇದ್ದರೂ ಸಹ ಅದನ್ನು ಉಲ್ಲೇಖವೇ ಮಾಡದೆ ಇತಿಹಾಸವನ್ನು ಜನಮಾಸದಿಂದ ದೂರಮಾಡುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ನಮ್ಮ ತುಳುನಾಡಿನಲ್ಲಿ ಜನಿಸಿದ ದೊಡ್ಡ ಜ್ಞಾನಿಗಳಿಗೆ ಮಾಡುವ ಅಪಚಾರವಾಗಿದೆ.

ದೇವಸ್ಥಾನದ ಯಾವತ್ತೂ ಆಚರಣೆಗಳು ಮಾಧ್ವ ಸಂಪ್ರದಾಯ ರೀತ್ಯಾ ನಡೆಯುತ್ತಿವೆ ಎನ್ನುವುದಕ್ಕೆ ಇಂದಿಗೂ ಸಹ ಮಾಧ್ವರ ಮಹಾ ವ್ರತವಾದ ಏಕಾದಶಿಯಂದು ಸುಬ್ರಹ್ಮಣ್ಯದೇವಳದಲ್ಲಿ ಸರ್ಪಸಂಸ್ಕಾರಾದಿಗಳು ನಡೆಯದೇ ಇರುವುದೇ ಸಾಕ್ಷಿಯಾಗಿದೆ. ಅಂತಹ ಆಚಾರ್ಯ ಮಧ್ವರ ಪೂರ್ವಾಶ್ರಮದ ತಮ್ಮನಾದ, ಶ್ರೀವಿಷ್ಣು  ಬೆಳಗಿದ ಮಠವೇ ಸುಬ್ರಹ್ಮಣ್ಯ ಮಠ. ಪ್ರಾಚೀನ ಕಾಲದಲ್ಲಿ ದೇವಳದ ಸಮಗ್ರ ಉಸ್ತುವಾರಿಯು ಶ್ರೀಮಠದ ಸ್ವಾಮಿಜಿಗಳೇ ನಿರ್ವಹಿಸುತ್ತಿದ್ದು, ಕಾಲಾಂತರದಲ್ಲಿ ದೇವಸ್ಥಾನವನ್ನು ಸರಕಾರಗಳು ಸ್ವಾಧೀನ ಪಡಿಸಿಕೊಂಡು ವ್ಯವಸ್ಥಾಪನಾ ಸಮಿತಿಗಳು ಕಾರ್ಯಾಚರಣೆ ನಡೆಸಲು ಪ್ರಾರಂಭವಾದ ಬಳಿಕ ಶ್ರೀ ಮಠದ ಸ್ವಾಮೀಜಿಗಳಿಗೆ ದೇವಸ್ಥಾನದ ಆಡಳಿತದಲ್ಲಿ ಇದ್ದ ಹಿಡಿತವೂ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಇಷ್ಟೆಲ್ಲಾ ಬದಲಾವಣೆಗಳು ಆದರೂ, ಇಂದಿಗೂ ಸಹ ದೇವಸ್ಥಾನದಲ್ಲಿ ಪೂಜೆ ಮಾಡುವ ಅಧಿಕಾರ ಹೊಂದಿರುವ ಎಡಪಡಿತ್ತಾಯ ಮತ್ತು ನೂರಿತ್ತಾಯ ಕುಟುಂಬಿಕರು ನೂತನವಾಗಿ ಪೂಜೆಗೆ  ಸಂರ್ಭದಲ್ಲಿ ಸುಬ್ರಹ್ಮಣ್ಯ ಮಠದ ಸ್ವಾಮಿಗಳಿಂದ ಫಲ ಮಂತ್ರಾಕ್ಷತೆಯನ್ನು ಪಡೆದು ಅವರಿಂದ ಮಂತ್ರೋಪದೇಶ  ಪಡೆದು ಪೂಜೆಯನ್ನು ಪ್ರಾರಂಭಿಸುವ ಪದ್ದತಿಯು ದೇವಸ್ಥಾನದಲ್ಲಿ ಇಂದಿಗೂ ಸಹ ಆಚರಣೆಯಲ್ಲಿ ಇದೆ. ಅಲ್ಲದೆ, ಪೂಜೆಗೆ ನಿಯುಕ್ತರಾದ ಅರ್ಚಕ ವರ್ಗದವರಿಗೆ ಯಾವುದೇ ರೀತಿಯ ಮೈಲಿಗೆಗಳು ಬಂದಾಗ, ಶ್ರೀಸುಬ್ರಹ್ಮಣ್ಯ ದೇವರ ಪೂಜೆಯನ್ನು ಸಹ ಶ್ರೀ ಮಠದ ಸ್ವಾಮಿಗಳೇ ನೆರವೇರಿಸುವುದು, ದೇವಸ್ಥಾನದಲ್ಲಿ ಮಠದ ಪ್ರಧಾನ ಪಾತ್ರವನ್ನು ಇಂದಿಗೂ ಸಹ ಎತ್ತಿಹಿಡಿಯುವ ಆಚರಣೆಗಳಾಗಿವೆ.

ಆದರೆ ಈ ಹಿಂದಿನ ಸ್ವಾಮಿಗಳ ಅನುಭವದ ಕೊರತೆಯಿಂದ  ಮಠದ ಕೈತಪ್ಪಿ ಹೋಗಿದ್ದು, ಮತ್ತೆ ಪ್ರಾಚೀನಕಾಲದಂತೆ, ಶ್ರೀ ಮಠವೇ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಳ್ಳುವಂತಾದರೆ, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಇನ್ನಷ್ಟು ಅನುಕೂಲತೆಗಳನ್ನು ಒದಗಿಸಲು  ಪೂರಕವಾದೀತು. ಅಥವಾ ಶ್ರೀಮಠದ ಮೂಲಕ ವಿದ್ಯಾದಾನ, ಬಂದ ಭಕ್ತರಿಗೆ ಅನ್ನದಾನ, ಪ್ರಾಚೀನ ತಾಳೆಗರಿ ಗ್ರಂಥಗಳ ಸಂರಕ್ಷಣಾ ಕಾರ್ಯ, ಹಲವಾರು ಧಾರ್ಮಿಕ ಪುಸ್ತಕಗಳ ಪ್ರಕಟಣೆಯೇ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳಿಗೆ ದೇವಸ್ಥಾನವು ಹೇಗೆ ಸಹಕಾರಿಯಾಗಬಲ್ಲುದು ಎಂಬ ಬಗ್ಗೆ ವ್ಯವಸ್ಥಾಪನ ಮಂಡಳಿಯವರು ಯೋಚಿಸಿ, ಶ್ರೀ ಸುಬ್ರಹ್ಮಣ್ಯ ಮಠದ ಸ್ವಾಮೀಜಿಗಳಿಗೆ  ಸಹಕಾರವನ್ನು ನೀಡುವ ಮೂಲಕ ಸೌಹಾರ್ದ ಮೆರೆದು ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾಗಲಿ ಎಂದು ಆಶಿಸೋಣ.

Tags

Related Articles

Leave a Reply

Your email address will not be published. Required fields are marked *

Language
Close