About Us Advertise with us Be a Reporter E-Paper

ಅಂಕಣಗಳು

ವ್ಯಭಿಚಾರ ಕುರಿತ ತೀರ್ಪು ಪುರುಷರ ಪಾಲಿನ ವಿಜಯ

- ಸುರೇಶ್ ಪಟ್ಟಾಲಿ

ಆಕೆ ಐಸ್‌ಕ್ರೀಂ ತೆಗೆದುಕೊಂಡಳು ನಾನು ಒಂದು ಗ್ಲಾಸ್ ‘ಫಲೂದಾ’. ಡಯಾಬಿಟೀಸ್, ಇನ್ನಿತರ ಆರೋಗ್ಯ ಸಮಸ್ಯೆಗಳು ನಮ್ಮ ಮನ ಅಥವಾ ಹೃದಯದಲ್ಲಿ ಹಾಯಲೇ ಇಲ್ಲ. ನಮ್ಮ ಸುತ್ತ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಇದ್ದ ಶಾಲಾ ಸಹಪಾಠಿಗಳ ಗುಂಪು ನಮ್ಮತ್ತಲೇ ಬಾಯ್ತೆರೆದು ನೋಡದಷ್ಟು ನಾಗರಿಕವಾಗಿತ್ತು. ಸಿಹಿ ಸೇವನೆ, ಆ ವಾತಾವರಣದಲ್ಲಿ ಎದ್ದುಬಂದ ಸಿಹಿ ಇಬ್ಬರಲ್ಲೂ ಪ್ರಸನ್ನತೆ ಮೂಡಿಸಿತ್ತು. ಕೊನೆಗೆ ಮೇಲೆದ್ದು ‘ಈಗೊಂದು ಡ್ರೈವ್ ಹೋಗೋಣ’ ಎಂದಳು.

ಆಕೆ ಮತ್ತೊಬ್ಬನ ಪತ್ನಿ. ಅವಳ ಮಗನಿಗೆ ನಾನು ‘ತಾಯಿಯ ಬಾಯ್‌ಫ್ರೆಂಡ್’. ಪತಿ ಏನೆಂದು ಪರಿಗಣಿಸುತ್ತಾನೋ ಗೊತ್ತಿಲ್ಲ. ಉದ್ದೇಶವಿಲ್ಲದೆ ನಾವು ಹಾಯುತ್ತಿದ್ದ ಆ ಹಳ್ಳಿಯ ಗೋಜಲು ರಸ್ತೆಗಳಷ್ಟೇ ಸಂಕೀರ್ಣ ಮನುಷ್ಯ ಸಂಬಂಧಗಳು ಕೂಡ. ‘ಹುಷಾರ್, ಯಾರಾದರೂ ನೈತಿಕ ಪೊಲೀಸರು ಇದ್ದಾರು’ ಎಂದು ನುಡಿಯುತ್ತಾ, ಆಕೆ ಎಲ್ಲವೂ ಸಾಮಾನ್ಯವಾಗಿ ಕಾಣಿಸಲಿ ಎಂಬಂತೆ ಕಾರಿನ ಕಿಟಕಿ ರೋಲ್ ಡೌನ್ ಮಾಡಿದಳು.

ಮಹಿಳೆಯೊಂದಿಗೆ ಡ್ರೈವ್ ಹೋಗುವುದು ವ್ಯಭಿಚಾರವೇನಲ್ಲ’ ಎಂದೆ ನಾನು. ‘ಈ ಹಳ್ಳಿಯಲ್ಲಿ ಎಲ್ಲರೂ ಎಲ್ಲರಿಗೂ ಗೊತ್ತು. ಹೀಗೆ ತಿರುಗಾಡುವುದೆಂದರೆ ಅನೈತಿಕ ಸಂಬಂಧ ಬೆಳೆಸಿದ್ದಕ್ಕಿಂತ ಹೆಚ್ಚು, ಅವರ ಪಾಲಿಗೆ. ಒಂದೊಮ್ಮೆ ನಮ್ಮನ್ನು ತಡೆದು ಅವರು ಪ್ರಶ್ನಿಸಿದರೆ, ನಾನು ನಿನ್ನ ಸ್ನೇಹಕ್ಕೆ ವಂಚನೆ ಮಾಡಿ ‘ಕಾಪಾಡಿ’ ಎಂದು ಕೂಗಿದರೆ ನೀನು ಒಂದು ಆಸ್ಪತ್ರೆಯಲ್ಲೋ ಅಥವಾ ಪೊಲೀಸ್ ಠಾಣೆಯಲ್ಲೋ ನಾಳೆ ಬೆಳಗು ಕಾಣುತ್ತೀ. ವ್ಯಭಿಚಾರವಲ್ಲ, ಬಲಾತ್ಕಾರದಿಂದ ಅಪಹರಣ ಹಾಗೂ ಅತ್ಯಾಚಾರ ಆರೋಪವನ್ನು ಎದುರಿಸುತ್ತೀ’ ಎಂದಾಕೆ ಮಾಡಿದಳು.

ಕಳೆದ ಸೆ.28ರಂದು ದೇಶದ ಸರ್ವೋಚ್ಚ ನ್ಯಾಯಾಲಯ ಕಿತ್ತುಹಾಕಿದ 158 ವರ್ಷ ಪುರಾತನ ಲಿಂಗತಾರತಮ್ಯದಿಂದ ಕೂಡಿದ ‘ ಅಡಲ್ಟರಿ ವರ್ಡಿಕ್ಟ್’ ಕುರಿತು ಉಲ್ಲೇಖ ಇದು ಎಂದು ಬೇರೆ ಹೇಳಬೇಕಿಲ್ಲ. ನಕ್ಕು ಗೇಲಿ ಮಾಡಿದರೂ ಅದರ ಹಿಂದೆ ಆಕೆಯಲ್ಲಿ ಪ್ರತಿಫಲಿಸುತ್ತಿದ್ದ ಪ್ರೀತಿ, ಸ್ನೇಹ ಹಾಗೂ ಮುಗ್ಧತೆಗೆ ನಾನು ಮನಸೋತಂತೆ ನನ್ನ ರಕ್ತದೊತ್ತಡ ಕಡಿಮೆಯಾಗಿ ಕಾರ್ ನಿಲ್ಲಿಸಿ, ಆಕೆ ಕೆಳಗಿಳಿಯಲೆಂದು ಬಾಗಿಲು ತೆರೆದು ಕಾದೆ.

ಈಗೆಲ್ಲ ಮೆಘಾನ್ ಮಾರ್ಕೆಲ್‌ನಂತಹ ಯುವರಾಣಿ ಕೂಡ ಕಾರಿನ ಬಾಗಿಲು ತೆಗೆಯುವುದು, ಹಾಕಿಕೊಳ್ಳುವುದು ಮಾಮೂಲಿ. ಆದರೆ ನಾನು ಮಹಿಳೆಯರೊಂದಿಗೆ ತುಂಬ ಸೌಜನ್ಯಪೂರ್ವಕವಾಗಿ ನಡೆದುಕೊಳ್ಳಬಯಸುವೆ. ಆದರೆ ಇದನ್ನು ‘ಮಾಡಬೇಕಾದ್ದೇ ಹೀಗೆ’ ಎಂದು ಯಾರಾದರೂ ಮಹಿಳೆ ಅಥವಾ ಭಾರತೀಯ ಸಂವಿಧಾನ ಜುಲುಮೆ ಮಾಡಿದರೆ ಅದಕ್ಕೆ ಅವಕಾಶ ಕೊಡುವುದಿಲ್ಲ. ಹೌದು, ಇಂಡಿಯನ್ ಪೀನಲ್ ಕೋಡ್‌ನ ಸೆಕ್ಷನ್ 497 ಖಂಡಿತ ಲಿಂಗತಾರತಮ್ಯದಿಂದ ಕೂಡಿದೆ. ಮಹಿಳೆಯರಿಗೆ ಪಕ್ಷಪಾತ ತೋರಿದೆ ಎಂಬುದು ನನ್ನ ಖಚಿತ ಅಭಿಪ್ರಾಯ.

ಈ ತಾರತಮ್ಯವೇ ಇಟಲಿಯಲ್ಲಿ ನೆಲೆಸಿದ್ದ ಭಾರತ ಮೂಲದ ಹೋಟೆಲ್ ಜೋಸೆಫ್ ಶೈನ್ ಅವರನ್ನು 497ನೇ ಕಲಮಿನ ವಿರುದ್ಧ ಸಮರ ಸಾರಲು ಪ್ರೇರೇಪಿಸಿದ್ದು. ‘ಪರ ಸಂಬಂಧದಲ್ಲಿ ತೊಡಗಿದ ಮಹಿಳೆಯನ್ನು ಅಪರಾಧಿ ಎಂದು ಪರಿಗಣಿಸುವುದಿಲ್ಲ. ಆಕೆಗೆ ಯಾವುದೇ ಶಿಕ್ಷೆಯಿಲ್ಲ; ಆದರೆ ಪುರುಷನಿಗೆ ಇದಕ್ಕಾಗಿ ಐದು ವರ್ಷ ಕಾರಾಗೃಹವಾಸ ಶಿಕ್ಷೆ ವಿಧಿಸಿ ತಪ್ಪನ್ನು ಅವನ ತಲೆಗೆ ಮಾತ್ರ ಕಟ್ಟಲಾಗುವ ಅನ್ಯಾಯದ ಸೆಕ್ಷನ್ ವಿರುದ್ಧ 41ರ ಹರೆಯದ ಶೈನ್ ಬಂಡೇಳಲು ನಿಜ ಜೀವನದ ಒಂದು ಘಟನೆ ಕಾರಣವಾಯಿತು. ಸಹೋದ್ಯೋಗಿ ಮಹಿಳೆ ‘ಅತ್ಯಾಚಾರಕ್ಕೊಳಪಡಿಸಿದ’ ಎಂದು ಸುಳ್ಳು ನೀಡಿದ್ದಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನ ಪ್ರಕರಣ ಅವರನ್ನು ತೀರ ನೋಯಿಸಿತು. ಪ್ರತಿಕಾರ ಮನೋಭಾವದ ಮಹಿಳೆಯರು ಅಥವಾ ಅವರ ಗಂಡಂದಿರು ಇತರ ಪುರುಷರನ್ನು ಬಲಿಪಶುವಾಗಿಸಲು ಬಿಡಕೂಡದು ಎಂದು ನಿರ್ಧರಿಸಿದ ಜೋಸೆಫ್ ಈ ತಾರತಮ್ಯದಿಂದ ಕೂಡಿದ ಸೆಕ್ಷನ್ ವಿರುದ್ಧ ಕಾನೂನು ಹೋರಾಟಕ್ಕೆ ತಯಾರಾದರು.

ಮಹಿಳೆಯರಿಗೆ ನೀಡಿದ್ದ ವಿನಾಯಿತಿ ಕಿತ್ತುಹಾಕಿದ ತೀರ್ಪನ್ನು ದೇಶ ಸ್ವಾಗತಿಸಿದೆ; ಆದರೆ ಇದರಲ್ಲೂ ಲಿಂಗಾಧಾರಿತ ವಿಭಾಗೀಕರಣ ಇದೆ. ಮಹಿಳಾ ಸಮಾನತೆ ಎತ್ತಿ ಹಿಡಿಯುವುದಕ್ಕಿಂತ ಹೆಚ್ಚಾಗಿ, ಇಬ್ಬರು ವಯಸ್ಕರ ಪರಸ್ಪರ ಸಮ್ಮತಿಯಿಂದ ನಡೆಯುವ ಲೈಂಗಿಕ ಸಂಬಂಧ ಯಾವುದೇ ಕಾನೂನು ಅಥವಾ ತನಿಖೆಯ ವಿಷಯವಾಗಬಾರದು ಎಂಬ ವಿಚಾರ ಹೊಂದಿರುವ ನನ್ನಂಥ ಅನೇಕರಿಗೆ ಇದು ಪುರುಷರ ಪರವಾಗಿ ಹೊರಬಿದ್ದ ಮಹತ್ವದ ನಿರ್ಣಯವಾಗಿ ಕಂಡಿದೆ.

ಪರ ಸಂಬಂಧದ ಆರೋಪ ಪುರುಷನ ಮೇಲೆ ಹೊರಿಸಲ್ಪಟ್ಟಾಗ, ಪಾರಾಗುವ ಯಾವುದೇ ಅವಕಾಶ ಆತನಿಗೆ ಇರಲಿಲ್ಲ. ಕಾನೂನು ಈ ಕುರಿತು ಮೌನ ವಹಿಸಿತ್ತು. ಯಾವಾಗಲೂ ಪುರುಷನೇ ಮೊದಲ ಹೆಜ್ಜೆ ಇಟ್ಟಿರುತ್ತಾನೆ (ಸೆಡ್ಯೂಸರ್) ಎಂಬ ಊಹೆಯ ಮೇಲೆ ಮಹಿಳೆಯರನ್ನು ‘ಬಲಿಪಶು’ ಎಂದು ನಂಬಿದ್ದಷ್ಟೇ ಅಲ್ಲ ಅವರಿಗೆ ಕಾನೂನಿನ ರಕ್ಷಣೆಯನ್ನು ನೀಡಿತ್ತು. ಸುಪ್ರೀಂ ನ್ಯಾಯಮೂರ್ತಿಗಳು ಇದೀಗ ಈ ಊಹೆಯನ್ನು ‘ಆಧಾರ ರಹಿತ’ ಎಂದಿದ್ದಾರೆ. ಈ ಯುಗದಲ್ಲಿ ಸಂಭವಿಸುತ್ತಿರುವ ಪರ ಸಂಬಂಧ ಪ್ರಕರಣಗಳಲ್ಲಿ ಯಾವಾಗಲೂ ಪುರುಷ ಅಪರಾಧ ಮಾಡುವವ ಹಾಗೂ ಮಹಿಳೆ ಅದನ್ನು ಅಸಹಾಯಕಳಾಗಿ ಒಪ್ಪಿಕೊಳ್ಳುವವಳು ಎನ್ನುವಂತಿಲ್ಲ ಎಂದು ಘೋಷಿಸಿದ್ದಾರೆ.

ಮಹಿಳೆಯರನ್ನು ಕಾಪಾಡುವಂತೆ ತೋರುವ ಸೆಕ್ಷನ್ 497ನಲ್ಲಿ ಕೆಲ ಮಹಿಳಾ ವಿರೋಧಿ ಅಂಶಗಳು ಇರುವುದನ್ನೂ ಕೋರ್ಟ್ ಈ ವೇಳೆ ಉಲ್ಲೇಖಿಸಿ ಒಪ್ಪಿಕೊಂಡಿದೆ. ಒಬ್ಬ ಮಹಿಳೆಯ ಜತೆ, ಆಕೆಯ ಪತಿಯ ಒಪ್ಪಿಗೆ ಇಲ್ಲದೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವ ಪುರುಷನಿಗೆ ಶಿಕ್ಷೆ ಆದರೆ ಮಹಿಳೆಗೆ ಇಲ್ಲ ಎಂದಿರುವಂತೆಯೇ, ತನ್ನ ಪತಿ ಪರ ಸಂಬಂಧದಲ್ಲಿ ತೊಡಗಿದಾಗ ಪತಿಯ ವಿರುದ್ಧ ಅಥವಾ ಆತನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡ ಮಹಿಳೆಯ ವಿರುದ್ಧ ಯಾವುದೇ ದೂರು ಸಲ್ಲಿಸಲು, ಅವರನ್ನು ಶಿಕ್ಷೆಗೆ ಒಳಪಡಿಸಲು ಈ ಕಲಮಿನಲ್ಲಿ ಅವಕಾಶ ಇಲ್ಲದಿರುವುದು ಮಹಿಳಾಪರವಾಗಿಲ್ಲ ಎನ್ನುವುದನ್ನು ಎತ್ತಿ ತೋರಿದೆ.

ಆದರೆ ಇನ್ನಿತರ ಸಂಬಂಧಿತ ಶಾಸನಗಳಡಿಯಲ್ಲಿ ಈ ಸರಿಪಡಿಸಬಹುದಾಗಿದೆ ಎನ್ನುವುದು ಪುರುಷಪರ ಕಾರ್ಯಕರ್ತರ ವಾದ. ಉದಾಹರಣೆಗೆ ಸೆಕ್ಷನ್ 497ಎ ಅನ್ವಯ ಪತಿ ಅಥವಾ ಯಾವುದೇ ಸಂಬಂಧಿಕರು ತನ್ನೊಂದಿಗೆ ಕ್ರೂರವಾಗಿ ನಡೆದುಕೊಂಡರೆ ಮಹಿಳೆಗೆ ಅವರನ್ನು ಶಿಕ್ಷಿಸಲು ಅವಕಾಶವಿದೆ. ಪರ ಸಂಬಂಧವನ್ನೂ ಒಂದು ಬಗೆಯ ಕ್ರೌರ್ಯ ಎಂದು ಆರೋಪಿಸಬಹುದು.

ಸೆಕ್ಷನ್ 497 ಸಾಕಷ್ಟು ಮಹಿಳಾ ವಿರೋಧಿ ಹಾಗೂ ಪಿತೃಪ್ರಧಾನ ಸಮಾಜದ ಪ್ರತಿಫಲನವಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಲಿಲ್ಲವೆಂದರೆ, ಈ ಕುರಿತು ನ್ಯಾಯವಾದಿ ರೆಬೆಕಾ ಜಾನ್ ಹೇಳಿಕೆ ಪರಿಶೀಲಿಸಬಹುದು: ‘ಆತನ ಆಸ್ತಿ ಎಂದು ಒಬ್ಬಾತನ ಹೆಂಡತಿಯನ್ನು ಪರ ಪುರುಷ ಅಕ್ರಮ ಸಂಬಂಧಕ್ಕೆ ಬಳಸಿದ ಅಪರಾಧಕ್ಕಾಗಿ ಕಾನೂನು ಪುರುಷರನ್ನು ಶಿಕ್ಷಿಸುತ್ತಿತ್ತು ಅಂದರೆ ಏನರ್ಥ? ಇದರಲ್ಲಿ ಮಹಿಳೆಯ ಸಮ್ಮತಿ ಇಲ್ಲವೇ ಅಸಮ್ಮತಿಗೆ ಯಾವುದೇ ಮಹತ್ವ ಇಲ್ಲ ಎಂದಲ್ಲವೇ?’

ಆದರೆ ಇಂತಹ ಕಾಳಜಿಗಳೆಲ್ಲ ಕೇವಲ ವಿಷಯ ಪರಿಭಾವಿಸುವುದಕ್ಕೆ ಸಂಬಂಧಪಟ್ಟಂಥವೇ ಹೊರತು ಪ್ರಾಯೋಗಿಕವಲ್ಲ ಅಲ್ಲವೇ ಎಂಬ ಸಂದೇಹವೂ ಮೂಡುತ್ತದೆ.

ಸುಪ್ರೀಂ ತೀರ್ಪಿಗೆ ಸಂಬಂಧಿಸಿದಂತೆ ಮಹಿಳೆಯರಲ್ಲೇ ಭಿನ್ನಮತ ತರಿಸಿರುವ ಕೆಲ ವಿಷಯಗಳೂ ಇವೆ. ವಿವಾಹ ಬಂಧಕ್ಕೆ ಬದ್ಧರಾಗಿರುವ ಸ್ತ್ರೀ-ಪುರುಷರಿಬ್ಬರೂ ಅಕ್ರಮ ತೊಡಗಿಕೊಳ್ಳಲು ತೀರ್ಪು ಪರವಾನಗಿ ನೀಡುತ್ತಿದೆಯಲ್ಲವೆ ಎಂದು ವಾದಿಸುವ ಅವರು, ಸೆಕ್ಷನ್497 ಲಿಂಗಾತೀತವಾಗಬೇಕು ಎಂದು ನಿರೀಕ್ಷಿಸಿದ್ದರು. ಅಂದರೆ, ಪರ ಸಂಬಂಧದಲ್ಲಿ ತೊಡಗುವ ಗಂಡು ಮತ್ತು ಹೆಣ್ಣು ಇಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆಗೆ ಒಳಪಡಿಸಬೇಕು. ಬದಲಾಗಿ ಹೀಗೆ ಪುರುಷನೂ ಅಪರಾಧಿಯಲ್ಲ, ಮಹಿಳೆಯೂ ಅಲ್ಲ ಎಂದರೆ ಬಹುಪತ್ನಿತ್ವಕ್ಕೆ ದಾರಿ ಮಾಡಿಕೊಟ್ಟಂತಷ್ಟೇ. ‘ಈಗ ಹಲವು ವಿವಾಹ ಬಾಹಿರ ಸಂಬಂಧ ಬೆಳೆಸಿಕೊಂಡ ಪತಿಯನ್ನು ಪತ್ನಿ ಕಾನೂನಿನ ಕ್ರಮಕ್ಕೂ ಒಳಪಡಿಸುವಂತಿಲ್ಲ ಎಂದರೆ ಪುರುಷರ ಸ್ವೇಚ್ಛಾಚಾರಕ್ಕೆ ಕೊನೆಯೇ ಇಲ್ಲದೆ ಬದುಕನ್ನು ಅವರ ಹೆಂಡತಿಯರು ಬಾಳಬೇಕು’ ಎಂದು ತಮ್ಮ ಆತಂಕ ಹೊರಗೆಡಹುತ್ತಾರೆ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ.

ಆದರೆ ಪರ ಸಂಬಂಧ ಇಟ್ಟುಕೊಂಡ ಗಂಡಸಿಗೆ ಶಿಕ್ಷೆಯಾಗಬೇಕು ಹಾಗೂ ಹೆಂಗಸಿಗೆ ಕೂಡದು ಎಂಬಂತಹ (ಕೇಕ್ ಇಟ್ಟುಕೊಳ್ಳಬೇಕು ಹಾಗೂ ಅದನ್ನು ತಿನ್ನಲೂ ಬೇಕು) ಪರಸ್ಪರ ವಿರೋಧಿ ಬೇಡಿಕೆ ಪೂರೈಸುವುದು ಸಾಧ್ಯವೇ ಎಂದು ಅವರ ಹಾಗೆ ಯೋಚಿಸುವ ಮಹಿಳೆಯರು ಚಿಂತಿಸಬೇಕು ಹಾಗೂ ಕೂಡಲೇ ಒಂದು ನಿರ್ಣಯ ತೆಗೆದುಕೊಳ್ಳಬೇಕು. ಮತ್ತೆ ಕೋರ್ಟ್ ಮೆಟ್ಟಿಲೇರಿ, ಪರ ಸಂಬಂಧದಲ್ಲಿ ಗಂಡಸರನ್ನು ಶಿಕ್ಷಿಸಿ ಎಂದು ಬೇಡಿಕೆ ಇಡಲು ನಾವು (ಗಿನಿ ಪಿಗ್) ಪ್ರಯೋಗ ಪಶುಗಳಲ್ಲ.

ಅಥವಾ ನ್ಯಾಯಮೂರ್ತಿಗಳ ವಿಷಯವನ್ನು ಇನ್ನೂ ಉತ್ತಮವಾಗಿ ವಿವೇಚಿಸಿದ್ದಾರೆ ಎನ್ನಬಹುದು. ‘ಮದುವೆ ಮುರಿದುಬಿದ್ದು ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿರುವಾಗಲೇ ಬಹುತೇಕ ಪರ ಸಂಬಂಧಗಳು ಏರ್ಪಡುತ್ತವೆ. ಹಾಗೆಂದು ಜೋಡಿಯಲ್ಲಿ ಒಬ್ಬರು ಅದನ್ನು ಆರಂಭಿಸಿದ್ದರೆ ಅವರನ್ನು ಈ ಸೆಕ್ಷನ್ ಅನ್ವಯ ಶಿಕ್ಷಿಸಬೇಕೇ?’ ಎಂದು ನ್ಯಾ. ಡಿ ವೈ ಚಂದ್ರಚೂಡ್ ಪ್ರಶ್ನಿಸಿದ್ದರು.

‘ಪರ ಸಂಬಂಧ ಅಥವಾ ವ್ಯಭಿಚಾರ ಒಂದು ಅಸಂತುಷ್ಟ ಮದುವೆಯ ಹೊರತು ಅದಕ್ಕೆ ಕಾರಣವಾಗಿರುವುದಿಲ್ಲ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಪರಸ್ಪರ ನಿಷ್ಠೆ ಇರುವ ಸುಂದರ ಸಂಬಂಧ ಕಟ್ಟಿಕೊಳ್ಳುವುದು ಪತಿ-ಪತ್ನಿಯ ಕೈಯಲ್ಲೇ ಇದೆ ಎಂಬ ಇಂಗಿತ ವ್ಯಕ್ತಪಡಿಸಿದ್ದರು. ವ್ಯಭಿಚಾರದಂತಹ ಸಮಸ್ಯೆ ದಾಂಪತ್ಯದಲ್ಲಿ ತಲೆದೋರಿದಾಗ ಗಂಡ-ಹೆಂಡಿರೇ ಕೂತು, ಚರ್ಚಿಸಿ ಅದನ್ನು ಬಗೆಹರಿಸಿಕೊಳ್ಳಬೇಕು. ಲೈಂಗಿಕ ಸಂಬಂಧದ ಅವಲಂಬನೆ ಇಬ್ಬರಿಗೂ ಇರಬಾರದು’ ಎಂದ ನ್ಯಾಯಮೂರ್ತಿಗಳಿಗೆ ನನ್ನ ನಮನ.

ಮುಂದಿನ ಸಾರಿ ನನ್ನ ಗೆಳತಿ ಒಂದು ಡ್ರೈವ್ ಹೋಗೋಣವೇ ಎಂದು ಬೇಡಿಕೆ ಇಟ್ಟರೆ ಹೃದಯ ಕುಸಿಯುವುದಿಲ್ಲ. ಐವರು ಮೇಧಾವಿಗಳು ತೆರೆದುಕೊಟ್ಟ ಮುಕ್ತ ಹಾದಿಯಲ್ಲಿ ನಾನೀಗ ಜೋರಾಗಿ ಸವಾರಿ ಹೋಗಬಲ್ಲೆ. ಭಾವನಾತ್ಮಕ ಅವಲಂಬನೆಯಿಂದಲೂ ಸ್ತ್ರೀ ಪುರುಷರಿಬ್ಬರನ್ನೂ ಅವರು ಮುಕ್ತಿಗೊಳಿಸಿದ್ದಾರೆ. ಭಾರತೀಯ ಪುರುಷನೀಗ ಮರಳಲಾರದ ಬಿಂದುವಿನಲ್ಲಿ ನಿಂತಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close