ವಿಶ್ವವಾಣಿ

ಪ್ರಕರಣ ಭೇದಿಸುವಲ್ಲಿ ಖಾಕಿ ಪಡೆಗೆ ಎದುರಾಗುವ ಸವಾಲು ಹಲವು!

ಅಪರಾಧ ನಡೆದ ಘಟನಾ ಸ್ಥಳದಲ್ಲಿ ಅಪರಾಧಿಯೊಬ್ಬನು ತನಗರಿವಿಲ್ಲದೆ ತನ್ನ ಗುರುತನ್ನು ಬಿಟ್ಟು ಹೋಗಿರುತ್ತಾನೆ. ಅಪರಾಧಿ ನ್ಯಾಯಶಾಸ್ತ್ರ ಹೇಳುವ ಮಾತಿದು. ಗೌರಿ  ಹತ್ಯೆಯ ಪ್ರಕರಣದಲ್ಲಿ ಗುಂಡು ಹಾರಿಸಿದ ಅಪರಾಧಿಯು ಮೋಟರ್ ಸೈಕಲ್‌ನಲ್ಲಿ ಆಗಮಿಸಿ ತಾನು ತಂದಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಆಕೆಯ ಹತ್ಯೆಗೈದು ಪರಾರಿಯಾಗಿದ್ದರು. ಅಲ್ಲಿ ಬೇರೆ ಯಾವುದೇ ಸುಳಿವಿರಲಿಲ್ಲ. ಪ್ರಕರಣವನ್ನು ಬೇಧಿಸಲು ತನಿಖೆ ಆರಂಭಿಸಿದ ಪೊಲೀಸರು ಅಪರಾಧಿಗಳು ಬಿಟ್ಟು ಹೋಗಿರಬಹುದಾದ ಗುರುತನ್ನು ಪತ್ತೆ ಹಚ್ಚಲು ಇನ್ನಿಲ್ಲದ ಹರಸಾಹಸಪಟ್ಟರು.

ಗೌರಿ ಲಂಕೇಶ್ ಹತ್ಯೆಗೆ ಮುನ್ನ ಸಂಭವಿಸಿದ್ದ ದಾಬೋಲ್ಕರ ಹತ್ಯೆ ಪ್ರಕರಣ ಹಾಗೂ ಡಾ. ಎಮ್.ಎಮ್.ಕಲ್ಬುರ್ಗಿ ಅವರ ಹತ್ಯೆ ಪ್ರಕರಣಗಳನ್ನು ತಳಕು ಹಾಕಬಹುದೆಂಬ  ಆ ಪ್ರಕರಣಗಳ ತನಿಖಾ ಕಡತಗಳನ್ನು ಹರಡಿಕೊಂಡು ಭೂತ ಕನ್ನಡಿಯಲ್ಲಿ ಅಪರಾಧಿಗಳು ಬಿಟ್ಟು ಹೋಗಿರಬಹುದಾದ ಗುರುತುಗಳ ಪತ್ತೆಗೆ ಕರ್ನಾಟಕ ಪೊಲೀಸರು ಸಾನೆ ಹಿಡಿಯಲು ಪ್ರಯತ್ನಿಸಿದರು. ಮೂರು ಪ್ರಕರಣಗಳಲ್ಲಿ ಹತ್ಯೆಗೈಯುವಾಗ ಅಪರಾಧಿಗಳು ಎಷ್ಟರಮಟ್ಟಿಗೆ ಮುಂಜಾಗೃತೆ ಕೈಗೊಂಡಿದ್ದರೆಂದರೆ ತಾವು ಹತ್ಯೆಗೈದ ಸ್ಥಳದಲ್ಲಿ ಯಾವ ಕುರುಹಗಳೂ ಸಿಗಲಾರದಂತೆ ಎಚ್ಚರಿಕೆ ವಹಿಸಿದ್ದರು. ಅಪರಾಧಿ ನ್ಯಾಯಶಾಸ್ತ್ರ ಹೇಳುವಂತೆ ಎಂಥಹ ಚಾಣಾಕ್ಷ ಅಪರಾಧಿಯಾದರೂ ತನಗರಿವಿಲ್ಲದೆ ತನ್ನ ಗುರುತನ್ನು ಬಿಟ್ಟು ಹೋಗಿರುತ್ತಾನೆ ಎಂಬುದು ಈ ಪ್ರಕರಣಗಳಲ್ಲಿಯೂ ಸಾಬೀತಾಯಿತು.

ದಾಬೋಲ್ಕರ ಹತ್ಯೆ,  ಕಲ್ಬುರ್ಗಿಯವರ ಕೊಲೆ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಯಾವ ಗುರುತೂ ಸಹ ಸಿಗಲಾರದಂತೆ ಮುನ್ನೆಚ್ಚರಿಕೆಯನ್ನು ವಹಿಸಿದ್ದರೂ ಸಹ ಕರ್ನಾಟಕ ಪೊಲೀಸರು ಗುರುತನ್ನು ಪತ್ತೆಹಚ್ಚುವಿಕೆಯಲ್ಲಿ ಯಶಸ್ವಿಯಾದರು. ಅದೇನೆಂದರೆ ಅಪರಾಧ ಸ್ಥಳದಲ್ಲಿ ಯಾವ ರೀತಿಯ ಗುರುತನ್ನು ಬಿಟ್ಟು ಹೋಗದಂತೆ ವಹಿಸಿದ್ದ ಮುನ್ನೆಚ್ಚರಿಕೆಯೇ ಅವರು ಬಿಟ್ಟು ಹೋದ ಹೆಗ್ಗುರುತಾಯಿತು. ಹೀಗೆ ಹತ್ಯೆಗೈದ ಎಲ್ಲಾ ಸ್ಥಳಗಳಲ್ಲಿ ಅಪರಾಧಿಗಳು ಸಂಪೂರ್ಣವಾಗಿ ಮುನ್ನೆಚ್ಚರಿಯನ್ನು ಕೈಗೊಂಡಿದ್ದಾರೆಂದರೆ ಮೇಲ್ಕಂಡ ಮೂರು ಹತ್ಯೆಗಳನ್ನು ಒಂದೇ ಗುಂಪಿನ ಅಪರಾಧಿಗಳೇ ಎಸಗಿರಬಹುದೆಂಬ ತೀರ್ಮಾನಕ್ಕೆ  ಪೊಲೀಸರು ಬಂದು ನಿಂತಿದ್ದರು. ಗೌರಿ ಹತ್ಯೆ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ಸಿಕ್ಕ ಸಣ್ಣ ಗುರುತು ಏನಾಗಿತ್ತೆಂದರೆ ಒಂದಿಷ್ಟೂ ಕುರುಹನ್ನು ಬಿಟ್ಟ ಹೋಗಲಾರದ ವ್ಯಕ್ತಿ ಈ ಮೂರು ಹತ್ಯೆಗಳಲ್ಲಿ ಭಾಗಿಯಾಗಿರಬಹುದೆಂದು! ಹೀಗೆ ತೀರ್ಮಾನಕ್ಕೆ ಬಂದ ಪೊಲೀಸರು ಅಂತಹ ವ್ಯಕ್ತಿಯ ಪತ್ತೆ ಹಚ್ಚುವಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಪ್ರಗತಿಪರ ಚಿಂತನೆಗೆ, ಎಡಪಂಥಿಯ ಆಲೋಚನೆಗಳಿಗೆ ಒಗ್ಗಿಕೊಂಡವರನ್ನು ಹತ್ಯೆ ಮಾಡುವ ಇರಾದೆ ಇಟ್ಟುಕೊಂಡ ಗುಂಪೊಂದು ಇಂತಹ ಕೃತ್ಯಗಳನ್ನು ಎಸಗುತ್ತಿರಬಹುದೆಂದು ಕರ್ನಾಟಕ ಪೊಲೀಸರು ಆಲೋಚಿಸಿದ್ದರು. ಗೌರಿ ಲಂಕೇಶ್  ಹತ್ಯೆಯ ನಂತರದಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯ ಮುಂಚೂಣಿಯಲ್ಲಿದ್ದ ಎಮ್.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಅವರಿಗೆ ಸುರಕ್ಷತೆಯ ದೃಷ್ಟಿಯಿಂದ ಭದ್ರತೆಯನ್ನು ಒದಗಿಸಲಾಗಿತ್ತು. ಇವರಿಗೂ ಸಹ ಪ್ರಾಣಾಪಾಯದ ತೊಂದರೆಯಿದೆ ಎಂದು ಶಂಕಿಸಲಾಗಿತ್ತು.

ಹೀಗೆ ಹತ್ಯೆಯನ್ನು ಮುಂದುವರೆಸಿದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗುಜರಾತ್ ಪೊಲೀಸರು ನಿರೀಕ್ಷಿತ ಯಶಸ್ಸನ್ನು ಮುಟ್ಟುವಲ್ಲಿ ವಿಫಲವಾಗಿದ್ದರ ಫಲವಾಗಿ ಕರ್ನಾಟಕ ಭದ್ರತಾ ಇಲಾಖೆಯು ಬೇರೆ ಮಾರ್ಗವಿಲ್ಲದೆ ಇವರಿಬ್ಬರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಗೌರಿ ಲಂಕೇಶ್  ಹತ್ಯೆ ಪ್ರಕರಣದಲ್ಲಿ ಪ್ರಗತಿಪರರು, ಚಿಂತಕರು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯನ್ನು ಕೈಗೊಂಡಿದ್ದರು. ಅಂದಿನ ಸರಕಾರವು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಹಚ್ಚುವುದಾಗಿ ಹೇಳಿಕೆಯನ್ನು ನೀಡಿ ತನಿಖೆ ಕೈಗೊಳ್ಳುವಂತೆ ಸಿ.ಐ.ಡಿಗೆ ವಹಿಸಿತ್ತು. ಯಾವುದೇ ಘಟನೆಗಳು ಸಂಭವಿಸಿದ್ದಲ್ಲಿ ಸರಕಾರದ ಪರವಾಗಿ ಆಯಾ ಇಲಾಖೆಯ ಸಚಿವರು ಹೇಳಿಕೆ ಮತ್ತು ಸ್ಪಷ್ಠೀಕರಣ ನೀಡುವುದು ಸಾಮಾನ್ಯ. ಅದರಂತೆಯೆ ಗೃಹ ಸಚಿವರು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಶೀಘ್ರದಲ್ಲಿಯೇ ಭೇದಿಸುವುದಾಗಿ ಹೇಳಿಕೆಯನ್ನು ನೀಡಿದ್ದರು ಹಾಗೂ ಸಿ.ಐ.ಡಿಗೆ ತನಿಖೆ ಕೈಗೊಳ್ಳುವಂತೆ  ಅದರಂತೆ ಪ್ರಕರಣವನ್ನು ಭೇದಿಸಲು ರಚನೆಯಾದ ಸಿ.ಐ.ಡಿ. ತಂಡ ಬೆಟ್ಟದಷ್ಟು ಸಂಶಯಗಳನ್ನು ತಲೆಯ ಮೇಲೆ ಹೊತ್ತು ಹೊಸ ಸಾಹಸಕ್ಕೆ ಸನ್ನದ್ಧವಾಗಬೇಕಾಗಿತ್ತು.

ಇಂತಹ ಸಂವೇದನಾಶೀಲ ಪ್ರಕರಣವನ್ನು ಭೇದಿಸುವಲ್ಲಿ ಇಲಾಖೆಯು ಅನುಸರಿಸಿದ ಮಾರ್ಗ ಸಮಯೋಚಿತವಾಗಿತ್ತು. ಐ.ಜಿ.ಪಿ ಹುದ್ದೆಯ ಪೊಲೀಸ್ ಅಧಿಕಾರಿಯ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ಹಿಂದೆ ಇಂತಹ ಪ್ರಕರಣಗಳು ಸಂವಿಸಿದಾಗ ಸಾಮಾನ್ಯವಾಗಿ ಸಿ.ಐ.ಡಿ ಅಥವಾ ನಿರ್ಧಿಷ್ಟ ಹುದ್ದೆಯ ಅಧಿಕಾರಿಗಳಿಗೆ ತನಿಖೆಯನ್ನು ಕೈಗೊಳ್ಳುವ ಜವಾಬ್ದಾರಿಯನ್ನು ವಹಿಸಲಾಗುತ್ತಿತ್ತು. ಆದರೆ ಗೌರಿ ಲಂಕೇಶ್ ಹತ್ಯೆ  ಪೊಲೀಸ್ ಇಲಾಖೆಯು ಅನುಸರಿಸಿದ ಕ್ರಮ ಸ್ವಲ್ಪ ಮಟ್ಟಿಗೆ ಭಿನ್ನವಾಗಿತ್ತು. ಒಂದು ನಿರ್ಧಿಷ್ಟ ತನಿಖಾ ತಂಡವನ್ನು ರಚಿಸಿ ಬೇರೆ ಯಾವ ಜವಾಬ್ದಾರಿಯನ್ನು ವಹಿಸದೆ ಕೇವಲ ಗೌರಿ ಲಂಕೇಶ್ ಅವರ ಹತ್ಯೆಯ ಪ್ರಕರಣದ ತನಿಖೆಯನ್ನು ಮಾತ್ರ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ತನಿಖೆ ಪೂರ್ಣಗೊಳ್ಳುವವರೆಗೆ ಎಷ್ಟು ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೇಕಿದ್ದರೂ ಪಡೆದುಕೊಳ್ಳುವ ಮುಕ್ತ ಅವಕಾಶವನ್ನು ತನಿಖೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳಿಗೆ ನೀಡಲಾಗಿತ್ತು. ಆದುದರಿಂದಾಗಿಯೆ ಯಾವ ಸಾಕ್ಷಾಧಾರಗಳು ಇಲ್ಲದಿದ್ದರೂ ಸಹ ಪ್ರಕರಣವನ್ನು ಭೇದಿಸುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಈ ಯಶಸ್ಸಿನ ಹಿಂದೆ ಪೊಲೀಸ್ ತನಿಖಾ ತಂಡವು ಅನುಭವಿಸಿದ ಯಾತನೆಗಳು, ಸಂಕಷ್ಟಗಳು ಹಾಗೂ ಅಸಹನೆಗಳು ಅಷ್ಟಿಷ್ಟಲ್ಲ.

ಪ್ರಕಣರವನ್ನು ಭೇದಿಸ ಹೊರಟ ಪೊಲೀಸರು ಮಹಾರಾಷ್ಟ್ರ, ಕರ್ನಾಟಕ ಗೋವಾ, ಆಂಧ್ರಪ್ರದೇಶ ರಾಜ್ಯಗಳಿಗೆ ಹಲವಾರು ಬಾರಿ ಭೇಟಿ ನೀಡಬೇಕಾಯಿತು. ಮೊದಲನೇ ಹಂತದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಜನರ ಮೇಲೆ ಸಂಶಯವನ್ನು ವ್ಯಕ್ತಪಡಿಸಿ ತಿಂಗಳುಗಟ್ಟಲೆ ಅವರ ಚಲನವಲನಗಳನ್ನು ಗಮನಿಸುತ್ತಾ ಬೇಹುಗಾರಿಕೆಯನ್ನು ನಡೆಸಬೇಕಾಯಿತು. ಈ ರೀತಿ ಗುರುತಿಸಲಾದ ವ್ಯಕ್ತಿಗಳು ಅವರ ವೈಯಕ್ತಿಕ  ಬೇರಾವ ರಾಜ್ಯಗಳಿಗೆ ತೆರಳಿದರೂ ಸಹ ಅವರ ಗಮನಕ್ಕೆ ಬಾರದಂತೆ ಅಂತಹ ಹತ್ತಾರು ಜನರನ್ನು ಪೊಲೀಸರು ನೆರಳಿನಂತೆ ಹಿಂಬಾಲಿಸಿದ್ದರು. ನಿರಂತರ ಪರಿವೀಕ್ಷಣೆ ಮತ್ತು ಘಟನೆಗಳ ಹೊಂದಾಣಿಕೆ ಮತ್ತು ದೈನಂದಿನ ಚಟುವಟಿಕೆಗಳ ತಾಳೆಯೊಂದಿಗೆ ಹಲವರನ್ನು ಕೈಬಿಡಬೇಕಾಯಿತು. ಹೀಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಥವರು ಪಾತ್ರಧಾರಿಗಳಲ್ಲ ಎಂಬ ತೀರ್ಮಾನಕ್ಕೆ ಬರುವುದಕ್ಕೆ ಮುಂಚೆ ಅಂತವರನ್ನು ತಿಂಗಳು ಗಟ್ಟಲೆ ಹಿಂಬಾಲಿಸಿಯಾಗಿತ್ತು.

ಸೂಕ್ತ ಸಾಕ್ಷಾಧಾರ ಹಾಗೂ ಮಾಹಿತಿಯನ್ನು ಕಲೆ ಹಾಕುವುದಕ್ಕಾಗಿ ಹೊರ ರಾಜ್ಯಗಳಿಗೆ ನಿರಂತರ ಪ್ರಯಾಣ ಬೆಳೆಸಬೇಕಾಯಿತು.  ದಿನದಲ್ಲಿ ಕೆಲಸವನ್ನು ಪೂರೈಸಬಹುದೆಂಬ ಸಿದ್ಧತೆಯೊಂದಿಗೆ ತೆರಳಿದ ಅಧಿಕಾರಿಗಳು ವಾರಗಟ್ಟಲೆ ಅಲ್ಲಿಯೇ ತಂಗಬೇಕಾಯಿತು ಹಾಗೂ ಅಲ್ಲಿಂದಲೆ ಬೇರೆಡೆಗೆ ಪ್ರಯಾಣ ಕೈಗೊಳ್ಳಬೇಕಾಗುತ್ತಿತ್ತು.

ಆಟೋರಿಕ್ಷಾ, ಬಸ್ ಪ್ರಯಾಣ, ಬಾಡಿಗೆ ಕಾರುಗಳನ್ನು ಪಡೆದುಕೊಂಡಿರುವುದೂ ಸೇರಿದಂತೆ ವಿಮಾನದಲ್ಲಿ ಸಹ ಅದೆಷ್ಟೋ ತನಿಖಾಧಿಕಾರಿಗಳು ಪ್ರಯಾಣಿಸಿದ್ದಾರೆ ಹೊಟೇಲ್‌ಗಳಲ್ಲಿ ತಂಗಿದ್ದಾರೆ. ಆದರೆ ತನಿಖೆಯ ಸಂದರ್ಭದಲ್ಲಿ ಸರಕಾರವು ತನಿಖಾ ತಂಡಕ್ಕೆ ವಾಹನ ಪೂರೈಕೆ ಪ್ರಯಾಣ ಮತ್ತು ವಾಸ್ತವ್ಯದ ಖರ್ಚು ವೆಚ್ಚಗಳನ್ನು ನೀಡಿದಂತೆ ಕಂಡು ಬಂದಿರುವುದಿಲ್ಲ. ನನಗೆ ಲಭ್ಯವಾದ ಮಾಹಿತಿಯ ಪ್ರಕಾರ ಸುಮಾರು  ಹೆಚ್ಚು ಅಧಿಕಾರಿಗಳು ತನಿಖೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರತಿಯೊಬ್ಬರೂ ಕನಿಷ್ಠ ಐವತ್ತು ಸಾವಿರದಿಂದ ಮೂರ್ನಾಲ್ಕು ಲಕ್ಷ ರುಪಾಯಿಗಳಷ್ಟು ವ್ಯಯಿಸಿಕೊಂಡಿದ್ದಾರೆ.

ಸರಕಾರದ ನೀತಿ ನಿಯಮಾವಳಿಗಳೇ ಹೀಗೆ. ನೇರ ತಿರ್ಮಾನಳನ್ನು ಕೈಗೊಳ್ಳಲು ಅದರಲ್ಲಿಯೂ ವಿಶೇಷವಾಗಿ ಹಣಕಾಸಿನ ವಿಯಕ್ಕೆ ಸಂಬಂಧಿಸಿದಂತೆ ಮುಕ್ತ ಅವಕಾಶಗಳು ಇರುವುದಿಲ್ಲ. ಹಾಗಾಗಿ ಸರಕಾರದಿಂದ ನೂರು ರುಪಾಯಿಗಳಷ್ಟು ಹಣ ಪಡೆಯುವುದಕ್ಕಾಗಿ ಇನ್ನೂರು ರುಪಾಯಿಗಳನ್ನು ವ್ಯಯಿಸಬೇಕಾದ ದಾರುಣ ಲಕ್ಷಣಗಳು ನಮ್ಮ ಮುಂದಿವೆ. ಅವಕಾಶಕ್ಕೆ ತಕ್ಕಂತೆ ಪಾರದರ್ಶಕ ಅಧಿ ನಿಯಮವನ್ನು ಎತ್ತಿ ತೋರಿಸುವ ಬಹಳಷ್ಟು  ಇವೆ.

ರಾಷ್ಟ್ರೀಯ ಮಟ್ಟದ ಗಮನ ಸೆಳೆದ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ಪೊಲೀಸರನ್ನು ನಾವೆಲ್ಲರೂ ಅಭಿನಂದಿಸಬೇಕಾಗಿದೆ. ಆದರೆ ಗೃಹಸಚಿವರು ಇಲ್ಲಿಯವೆಗೂ ತನಿಖಾ ತಂಡವನ್ನು ಆಮಂತ್ರಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸುವುದರೊಂದಿಗೆ ಅವರೆದುರಿಸಿರುವ ಸವಾಲುಗಳನ್ನು ಆಲಿಸುವ ಪ್ರಯತ್ನಕ್ಕೆ ಕೈಹಾಕದಿರುವುದು ವಿಷಾಧನೀಯ. ಗೌರಿ ಹತ್ಯೆ ಪ್ರಕರಣವನ್ನು ಭೇದಿಸಿದ ತನಿಖಾ ತಂಡವು ಡಾ.ಎಮ್.ಎಮ್.ಕಲ್ಬುರ್ಗಿ ಅವರ ಪ್ರಕಣದ ತನಿಖೆಯನ್ನು ಕೈಗೊಳ್ಳಲು ಹಿಂದೆಟು ಹಾಕುತ್ತಿದೆ. ಇದಕ್ಕೆ ಕಾರಣ ಏನಿರಬಹುದೆಂಬುದನ್ನು ಸಂಬಂಧಿಸಿದವರು ಆಲೋಚಿಸಿದ್ದರೆ ಸಮರ್ಥರು ಜವಾಬ್ದಾರಿಯಿಂದ ಹಿಂದೆ ಸರಿಯುವುದನ್ನು ಅಲ್ಲಗಳೆಯಲಾಗುವುದಿಲ್ಲ.