About Us Advertise with us Be a Reporter E-Paper

ಅಂಕಣಗಳು

ವಿದೇಶಗಳಲ್ಲೂ ಇದೆ, ಆದರೆ…

- ಮೋಹನದಾಸ ಕಿಣಿ, ಕಾಪು

ಜಾತಿ ಆಧರಿತ ಮೀಸಲಾತಿ ಭಾರತವನ್ನು ಹೊರತು ಪಡಿಸಿ ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಇಲ್ಲ. ಸ್ವಾತಂತ್ರ್ಯಾನಂತರ ನಮ್ಮನ್ನಾಳುವವರು ಕೈಗೊಂಡ ಎರಡು ನಿರ್ಧಾರಗಳು ಎಷ್ಟೊಂದು ದೊಡ್ಡ ತಪ್ಪು ನಿರ್ಧಾರಗಳಾಗಿ ಪರಿವರ್ತನೆಗೊಂಡಿವೆ ಎಂಬುದು ಈಗ ಅರ್ಥವಾಗುತ್ತದೆ. ಅವುಗಳೇ ಜಾತಿ ಆಧಾರದ ಮೀಸಲಾತಿ ಮತ್ತು ಭಾಷಾವಾರು ರಾಜ್ಯ ರಚನೆ.

ಸಂವಿಧಾನ ರಚನೆಯ ಸಂದರ್ಭದಲ್ಲಿ ಪ್ರಸ್ತುತವಾಗಿದ್ದ, ಕೆಲವೊಂದು ದಮನಿತ ವರ್ಗದವರಿಗೆ ’ಮೀಸಲಾತಿ’ಯನ್ನು ಮೂಲತಃ ಕೇವಲ 10 ವರ್ಷಗಳ ಅವಧಿಗೆ ಅಳವಡಿಸಲಾಗಿತ್ತು. ಬಹುಶಃ ಇದನ್ನು ಸಂವಿಧಾನದಲ್ಲಿ ಅಳವಡಿಸುವಾಗ ದಿನ ಇದು ಹುಲಿ ಸವಾರಿಯಾದೀತೆಂಬ ಕಲ್ಪನೆ ಕೂಡಾ ಇದ್ದಿರಲಿಕ್ಕಿಲ್ಲ. ಆದರೆ ಈ ಮೀಸಲಾತಿ ಪ್ರತೀ ಹತ್ತು ವರ್ಷಗಳಿಗೊಮ್ಮೆ ಮುಂದುವರಿಯುತ್ತಾ, ಏಳು ದಶಕಗಳ ನಂತರವೂ ಮೂಲ ಉದ್ದೇಶ ಹಾಗೆಯೇ ಉಳಿದು, ನಿಜವಾದ ದಮನಿತರಿಗೆ ಇದರ ಲಾಭ ನಿರೀಕ್ಷಿತ ಮಟ್ಟದಲ್ಲಿ ಆಗದೆ, ಬದಲಿಗೆ ವರ್ಗ ಸಂಘರ್ಷ, ರಾಜಕೀಯ ಚದುರಂಗದಾಟಕ್ಕೆ ದಾರಿ ಮಾಡಿ ಕೊಟ್ಟಿರುವುದಂತೂ ಸತ್ಯ.

ವಿದ್ಯಾರ್ಜನೆ, ಉದ್ಯೋಗಗಳಿಗೆ ಆರಂಭಿಸಿ, ಮುಂದೆ ಪದೋನ್ನತಿ, ವಾಹನದಲ್ಲಿ ಸ್ಥಾನ…ಇದರ ವ್ಯಾಪ್ತಿ ವಿಸ್ತಾರವಾಗುತ್ತಾ, ರಾಜಕೀಯ ಲಾಭದ ಉದ್ದೇಶದಿಂದ ಪಾಸ್, ಮೊಟ್ಟೆ, ಲ್ಯಾಪ್ಟಾಪ್, ವಿವಿಧ ರೀತಿಯ ಸಾಲ, ಹೀಗೆ ಪ್ರತಿಯೊಂದನ್ನೂ ಮೀಸಲಾತಿ ವ್ಯಾಪ್ತಿಯಲ್ಲಿ ತಂದದು ದುರಂತವೇ ಸರಿ.

ಇನ್ನೊಂದೆಡೆ ದಮನಿತರಿಗೆ ಆಡಳಿತದಲ್ಲಿ ಅವಕಾಶ ನೀಡುವ ಉದ್ದೇಶದಿಂದ ಮೀಸಲಾತಿ ವಿಸ್ತರಣೆ ಮಾಡಿದರೂ ಇದನ್ನು ಬಹುಮತ ಇಲ್ಲದಿದ್ದರೂ ಮೀಸಲಾತಿ ಮೂಲಕ ಅಧಿಕಾರ ಪಡೆಯಲು, ತನ್ಮೂಲಕ ಜನಾದೇಶದ ಉಲ್ಲಂಘನೆಯಾದರೂ ಲೆಕ್ಕಿಸದೆ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಉಪಯೋಗಿಸಲಾಗುತ್ತಿರುವುದು ವಿಪರ್ಯಾಸ.
ಮೀಸಲಾತಿಗೆ ಆರ್ಥಿಕ ಮಾನದಂಡ ಇರಬೇಕೆಂಬ ಬೇಡಿಕೆಗೆ ತಡವಾಗಿಯಾದರೂ ಚಾಲನೆ ಸಿಕ್ಕಿದೆ. ಇದು ಸಾಮಾಜಿಕ ನ್ಯಾಯ ದಿಕ್ಕಿನಲ್ಲಿ ಇರಿಸಿದ ಹೆಜ್ಜೆಯೋ, ಅಥವಾ ಜಾತಿ ಆಧಾರಿತ ಮೀಸಲಾತಿಯ ಕಬಂಧ ಬಾಹುಗಳಿಂದ ಕ್ರಮೇಣ ಹೊರಬರಲು ಇರಿಸಿದ ಹೆಜ್ಜೆಯೋ ಕಾಲವೇ ನಿರ್ಧರಿಸಬೇಕು.

ಪ್ರತಿಯೊಂದರಲ್ಲೂ ಪಾಶ್ಚಾತ್ಯ, ಮುಂದುವರಿದ ರಾಷ್ಟ್ರಗಳತ್ತ ನೋಡುವ ನಮಗೆ, ವಿದೇಶಗಳಲ್ಲಿ ಇರುವ ಮೀಸಲಾತಿ ಬಗ್ಗೆ ಒಂದಿಷ್ಟು ಬರೆಯುವುದು ಪ್ರಸ್ತುತವೆನಿಸುತ್ತದೆ. ನನ್ನ ಅನುಭವದಂತೆ, ಕೆನಡಾ ಮತ್ತು ಅಮೇರಿಕಾಗಳಲ್ಲಿ ವಾಹನಗಳಲ್ಲಿ ಮಾತ್ರವಲ್ಲದೆ ವಾಹನ ನಿಲುಗಡೆಗೂ ಮೀಸಲಾತಿ ಇದೆ; ಆದರೆ ಈ ಮೀಸಲಾತಿ ಕೇವಲ ವಿಕಲ ಚೇತನರಿಗೆ ಮತ್ತು ಗರ್ಭಿಣಿಯರಿಗೆ ಹಾಗೂ ಪುಟ್ಟ ಮಹಿಳೆಯರಿಗೆ ಮಾತ್ರ. ಇದು ಎಷ್ಟು ಕಡ್ಡಾಯವಾಗಿ ಪಾಲಿಸಲ್ಪಡುತ್ತದೆಯೆಂದರೆ, ಇದರ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ! ಇದನ್ನು ಎಲ್ಲಾ ಹೋಟೆಲ್, ವಾಣಿಜ್ಯ ಮಳಿಗೆಗಳಲ್ಲಿ ಮಾತ್ರವಲ್ಲ, ವಸತಿ ಸಮುಚ್ಚಯಗಳಲ್ಲೂ ಪಾಲಿಸಲಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close