ವಿಶ್ವವಾಣಿ

ಕ್ಷಿಪಣಿ ಮೂಲಕ ಅಂಚೆ ಬಟವಾಡೆ ಯತ್ನ ನಡೆದಿತ್ತು!

ಅವಸರದ ಪ್ರಪಂಚದಲ್ಲಿ ಬದುಕುತ್ತಿರುವ ನಾವೀಗ ನಮ್ಮ ವಾಟ್ಸಾಪ್ ಸಂದೇಶಕ್ಕೆ ವಿಳಾಸದಾರರಿಂದ ನೀಲಿ ಟಿಕ್‌ಮಾರ್ಕ್ ಬಂತಾ ಎಂದು ಕಾತರಿಸುವ, ಬರದಿದ್ದರೆ ಚಡಪಡಿಸುವ, ಹಂತಕ್ಕೆ ತಲುಪಿದವರಾಗಿದ್ದೇವೆ. ತಾಳುವಿಕೆಗಿಂತನ್ಯ ತಪವು  ಎಂದು ವಾದಿರಾಜರು ಹೇಳಿದ್ದು ಹದಿನೈದನೆಯ ಶತಮಾನದಲ್ಲಿ. ಈಗ ನಮಗೆ ತಾಳುವಿಕೆ ಎಂದರೇನೆಂದೇ ಗೊತ್ತಿಲ್ಲ. ಹಾಗಂತ ಇದು ‘ಹಿಂದಿನ ಕಾಲದಲ್ಲಿ ಅಂಚೆ ಪತ್ರಕ್ಕೆ ಕಾಯುವುದರಲ್ಲೂ ಒಂದು ಸಿಹಿತನವಿತ್ತು’ ಎಂದು ಹೇಳಲಿಕ್ಕೆ ಹೊರಟು ಬರೆದ ಪೀಠಿಕೆ ಅಲ್ಲ. ಹಿಂದಿನ ಕಾಲದಲ್ಲಿ ಅಮೆರಿಕವೂ ಸೇರಿದಂತೆ ಬೇರೆಬೇರೆ ದೇಶಗಳಲ್ಲಿ ಅಂಚೆ ರವಾನೆ ಮತ್ತು ಬಟವಾಡೆಯನ್ನು ವೇಗಗೊಳಿಸಲಿಕ್ಕೆ ಏನೆಲ್ಲ ಪ್ರಯತ್ನಗಳು ನಡೆದಿದ್ದುವು ಎನ್ನುವುದರ ಮೇಲೊಂದು ಕುತೂಹಲದ ನೋಟ.

ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದವರಾದರೆ ಬಹುಶಃ ನಿಮ್ಮ  ಅಂಚೆ ಬಟವಾಡೆಯ ಚಿತ್ರಣ ಹೆಚ್ಚೂಕಡಿಮೆ ಹೀಗೆಯೇ ಇರುತ್ತದೆ: ಸುಮಾರು ತೊಂಬತ್ತರ ದಶಕದವರೆಗೂ ಕಾರ್ಕಳ ತಾಲೂಕಿನ ನಮ್ಮ ಮಾಳ ಗ್ರಾಮಕ್ಕೆ ಪ್ರತ್ಯೇಕ ಪಿನ್‌ಕೋಡ್ ಇರಲಿಲ್ಲ. ವಿಳಾಸದಲ್ಲಿ ‘ಪೋಸ್‌ಟ್ ಮಾಳ, ವಯಾ ಮೀಯಾರ್’ ಎಂದು ಬರೆಯಬೇಕಿತ್ತು. ಸುಮಾರು ಹನ್ನೆರಡು ಕಿ.ಮೀ ದೂರದ ಮೀಯಾರ್ ಎಂಬ ಊರಲ್ಲಿನ ಅಂಚೆ ಕಚೇರಿಗೆ ನಮ್ಮೂರಿನಿಂದ ಗೋವಿಂದ ಹೆಗ್ಡೆ ಎಂಬುವರೊಬ್ಬರು ಪ್ರತಿದಿನವೂ ಸೈಕಲ್ ಮೇಲೆ ಹೋಗಿ ಅಂಚೆ ಚೀಲವನ್ನು ತರುತ್ತಿದ್ದರು. ಅವರಿಗೆ ‘ರನ್ನರ್’ (ಓಡಿಕೊಂಡು ಅಂಚೆ ಚೀಲ  ಎಂದು ಹೆಸರು. ನಮ್ಮ ಊರಿನಲ್ಲಿ ಪಂಚಾಯತ್ ಆಫೀಸ್ ಕಟ್ಟಡದಲ್ಲೇ ಮೂಲೆಯ ಒಂದು ಚಿಕ್ಕ ಕೊಠಡಿಯಲ್ಲಿ ಅಂಚೆ ಕಚೇರಿ. ನಮ್ಮ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮೂರ್ತಿ ಮಾಸ್ಟರರೇ ಪೋಸ್‌ಟ್ ಮಾಸ್ಟರ್ ಆಗಿ ಪಾರ್ಟ್‌ಟೈಮ್ ಡ್ಯೂಟಿ ಮಾಡುತ್ತಿದ್ದರು. ಮೀಯಾರ್‌ನಿಂದ ಮಧ್ಯಾಹ್ನದ ಸುಮಾರಿಗೆ ಅಂಚೆ ಚೀಲ ನಮ್ಮೂರಿಗೆ ಬರುತ್ತಿತ್ತು. ಆ ದಿನದ ಪತ್ರಗಳಿಗೆಲ್ಲ ಗೋವಿಂದ ಹೆಗ್ಡೆಯವರೇ ಸೀಲ್ ಒತ್ತುತ್ತಿದ್ದರು. ಅದಾದ ಮೇಲೆ ಪೋಸ್‌ಟ್ಮ್ಯಾನ್ ಕಿಟ್ಟಣ್ಣ ಎಂಬುವವರು ಪತ್ರಗಳನ್ನು ಬಟವಾಡೆ ಮಾಡಲಿಕ್ಕೆ  ಹೆಚ್ಚಾಗಿ ಅವರು ಗುರುಕುಲ ಶಾಲೆಯ ಎಲ್ಲ ತರಗತಿಗಳಿಗೂ ಹೋಗಿ ಅಲ್ಲಿ ಶಾಲಾಮಕ್ಕಳ ಮೂಲಕವೇ ಪತ್ರಗಳನ್ನು ಆಯಾ ವಿಳಾಸದಾರರಿಗೆ ತಲುಪಿಸುತ್ತಿದ್ದರು. ಕೆಲವು ಮಕ್ಕಳಿಗೆ ಹೆಚ್ಚೂಕಡಿಮೆ ಪ್ರತಿದಿನವೂ ಒಂದಾದರೂ ಪತ್ರವನ್ನು ಹೆತ್ತವರಿಗೆ ತಲುಪಿಸಲು ಒಯ್ಯುವುದಕ್ಕಿರುತ್ತಿತ್ತು. ಕೆಲವೊಮ್ಮೆ ಅಕ್ಕಪಕ್ಕದ ಮನೆಗಳವರ ಪತ್ರಗಳೂ. ಕೆಲವು ಮಕ್ಕಳಿಗೆ ಅಪರೂಪಕ್ಕೊಮ್ಮೆಯಷ್ಟೇ ಆ ಕೆಲಸ. ಅಪರೂಪದಲ್ಲಿ ಅಪರೂಪವೆಂದರೆ ಯಾವುದಾದರೂ ವಿದ್ಯಾರ್ಥಿಯ ಹೆಸರಿಗೇ ಪತ್ರ ಬಂದಿರುತ್ತಿದ್ದದ್ದು! ಆವತ್ತು ಆ ವಿದ್ಯಾರ್ಥಿ ಶಾಲೆಯಲ್ಲಿ ಹೀರೊ, ಜಂಬದ ಕೋಳಿ. ಮಳೆಗಾಲದ ದಿನಗಳಲ್ಲಿ ಮೀಯಾರ್  ನಮ್ಮೂರಿನ ನಡುವಿನ ಸ್ವರ್ಣಾ ನದಿ ಉಕ್ಕಿ ಹರಿದರೆ ಆಗಿನ್ನೂ ಸೇತುವೆ ಇರದಿದ್ದ ಕಾರಣ ಒಂದೆರಡು ದಿನ- ಈ ವರ್ಷದ ಮಳೆಗಾಲದಂತಾದರೆ ಒಂದು ವಾರದವರೆಗೂ-  ಅಂಚೆ ಬಟವಾಡೆ ಎಲ್ಲ ಸ್ಥಗಿತ. ಸಂಪರ್ಕಸೇತು ಕಡಿದುಕೊಂಡ ಊರು ಒಂದು ದ್ವೀಪವೇ ಆಗಿಬಿಡುತ್ತಿತ್ತು.

ಇದೆಲ್ಲ ನನಗೆ ನೆನಪಾದದ್ದು, ಅಮೆರಿಕದ ಪೋಸ್ಟಲ್ ಸರ್ವಿಸ್ ಸುಮಾರು 60 ವರ್ಷಗಳ ಹಿಂದೆ, ಕ್ಷಿಪಣಿಗಳ ಮೂಲಕ ಅಂಚೆ ಬಟವಾಡೆಯ ಸಾಹಸವನ್ನು ಮಾಡಿದ್ದರ ಬಗೆಗಿನ ಒಂದು ಕುತೂಹಲಕಾರಿ ಲೇಖನವನ್ನು ಸೈನ್‌ಸ್ ಮ್ಯಾಗಜಿನ್‌ನಲ್ಲಿ  ಇಂಗ್ಲಿಷ್‌ನಲ್ಲಿರುವ ಆ ಲೇಖನದ ಕೆಲವು ಮುಖ್ಯಾಂಶಗಳನ್ನು ಕನ್ನಡೀಕರಿಸಿ ಇಲ್ಲಿ ನಿಮ್ಮ ಓದಿಗೆ ಒದಗಿಸುತ್ತಿದ್ದೇನೆ. ಬಹುಶಃ ನಿಮಗೂ ಇದು ಆಶ್ಚರ್ಯದಿಂದ ಹುಬ್ಬೇರಿಸುವಂತೆ ಮಾಡಬಹುದು ಎನ್ನುವ ಆಶಯ ನನ್ನದು.

ಬಾಣಗಳ ಮೇಲೆ ಬರೆದು (ಕೆಲವೊಮ್ಮೆ ಗುಪ್ತ ಭಾಷೆಯಲ್ಲಿ) ಸಂದೇಶ ಕಳಿಸುವುದು ಶತಮಾನಗಳ ಹಿಂದಿನ ಕಾಲದಿಂದಲೂ ಚರಿತ್ರೆಯಲ್ಲಿ ಆಗಾಗ ದಾಖಲಾಗಿರುವಂಥದೇ. ಯುದ್ಧಕಾಲದಲ್ಲಿ, ಕ್ಷಾಮಡಾಮರಗಳ ಸಂದರ್ಭದಲ್ಲಿ ತುರ್ತಿನ ಸಂದೇಶ ರವಾನೆ ಆಗಬೇಕಾಗುತ್ತಿತ್ತಲ್ಲ? ಕಾಲಾಳುಗಳಿಗೆ ಕ್ಷಿಪ್ರವಾಗಿ ತಲುಪಲು ನದಿ ಅಥವಾ ಇನ್ನಿತರ ಅಡೆತಡೆಗಳಿದ್ದರೆ ಈ ತೀರದಿಂದ  ತೀರಕ್ಕೆ, ಕೋಟೆಯ ಮೇಲಿನಿಂದ ಕೆಳಕ್ಕೆ ಸಂದೇಶ ರವಾನೆಗೆ ಒಂದು ಬಾಣ ಬಿಟ್ಟರಾಯ್ತು. ಅಕ್ಷರಶಃ ‘ಶರವೇಗದಲ್ಲಿ’ ಸಂದೇಶ ತಲುಪುತ್ತಿತ್ತು. ಕ್ರಿ.ಶ 1810ರಲ್ಲಿ ಹೈನ್ರಿಚ್ ವೊನ್ ಕ್ಲೈಸ್‌ಟ್ ಎಂಬ ಲೇಖಕ ಬರೆದ ‘ಉಪಯುಕ್ತ ಸಂಶೋಧನೆಗಳು’ ಎಂಬ ಪುಸ್ತಕದಲ್ಲಿ, ‘ಕೋವಿಯ ಶೆಲ್‌ಗಳಲ್ಲಿ ಅಂಚೆಪತ್ರವನ್ನಿಟ್ಟು ಗುಂಡು ಸಿಡಿಸಬಹುದು. ಜರ್ಮನಿಯಾದ್ಯಂತ ಅಂತಹ ಅಂಚೆ-ಕೋವಿಗಳದೇ ಒಂದು ನೆಟ್‌ವರ್ಕ್ ಸ್ಥಾಪಿಸಿದರೆ ತುರ್ತು ಅಂಚೆ ಸೇವೆಗೆ ಬಹಳ ಪ್ರಶಸ್ತವಾಗಬಹುದು ಎಂಬ ಸಲಹೆ ಕೊಟ್ಟಿದ್ದನಂತೆ. ಅದು ಕಾರ್ಯಗತವಾಗಲಿಲ್ಲ ಎಂಬುದು ಬೇರೆ ಮಾತು.  ಬೇರೆ ಕೆಲವೆಡೆ ಅಂಥದೇ ಪ್ರಯೋಗಗಳು ಯಶಸ್ವಿಯಾದದ್ದೂ ಇದೆ. 19ನೆಯ ಶತಮಾನದ ಕೊನೆಯ ವೇಳೆಗೆ ಟೊಂಗಾ ದ್ವೀಪಸಮೂಹದಲ್ಲಿ ನಿಯುವಾಫೌ ದ್ವೀಪದ ಜನರು ರಾಕೆಟ್ ಮೂಲಕ ಪತ್ರ ರವಾನೆ ಮಾಡುತ್ತಿದ್ದರಂತೆ.

ಟೊಂಗಾ ದ್ವೀಪಸಮೂಹ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್‌ಗಳ ಪೂರ್ವಭಾಗಕ್ಕೆ, ಪೆಸಿಫಿಕ್ ಸಾಗರದ ಮಧ್ಯದಲ್ಲಿ ಇದೆ. ಅದಕ್ಕೆ ಹೊಂದಿಕೊಂಡು ಬೀಚುಗಳಾಗಲೀ ಬಂದರುಗಳಾಗಲೀ ಏನೂ ಇಲ್ಲ. ಸಮುದ್ರವು ತುಂಬಾ ಆಳವಾದ್ದರಿಂದ ಹಡಗುಗಳನ್ನು ಲಂಗರು ಹಾಕುವುದು ಆಗದು. ಹಾಗಾಗಿ, ಚಲಿಸುತ್ತಿರುವ ಹಡಗಿನಿಂದ ಪತ್ರಗಳನ್ನು ಟಿನ್ ಕ್ಯಾನ್‌ಗಳಲ್ಲಿಟ್ಟು (ಈಗಿನ ಕೋಕಾಕೋಲಾ  ಪೆಪ್ಸಿ ಕ್ಯಾನ್‌ಗಳಂತೆ ಅಂದ್ಕೊಳ್ಳೋಣ) ಸಮುದ್ರಕ್ಕೆ ಎಸೆಯುತ್ತಿದ್ದರು. ಹಡಗಿನ ಸೈರನ್ ಮೊಳಗಿತೆಂದರೆ, ಪತ್ರದ ಟಿನ್‌ಗಳು ಸಮುದ್ರಕ್ಕೆ ಎಸೆಯಲ್ಪಟ್ಟಿವೆ ಎಂದರ್ಥ. ಆಗ ದ್ವೀಪವಾಸಿ ಕಟ್ಟುಮಸ್ತಿನ ಈಜುಗಾರರು ನೀರಿಗೆ ಧುಮುಕಿ ಆ ಕ್ಯಾನ್‌ಗಳನ್ನೆಲ್ಲ ಸಂಗ್ರಹಿಸಿ ಅವುಗಳೊಳಗಿನ ಪತ್ರಗಳನ್ನು ವಿಳಾಸದಾರರಿಗೆ ತಲುಪಿಸುವರು. ದ್ವೀಪವಾಸಿಗಳು ಪೋಸ್‌ಟ್ ಮಾಡುವ ಪತ್ರಗಳೂ ಹಾಗೆಯೇ- ಈಜುಗಾರರ ಮೂಲಕ ಹಡಗಿನ ಮಾರ್ಗದತ್ತ ಹೋಗಿ ಅಲ್ಲಿ ಹಡಗಿಗೆ ವರ್ಗಾವಣೆಯಾಗುತ್ತಿದ್ದವು. ಇದರಿಂದಾಗಿಯೇ ನಿಯುವಾಫೌ ದ್ವೀಪಕ್ಕೆ ‘ಟಿನ್ ಕ್ಯಾನ್ ಐಲ್ಯಾಂಡ್’ ಎಂಬ ನಿಕ್‌ನೇಮ್ ಸಹ ಬಂದಿತ್ತಂತೆ.  ಈ ವಿಧಾನ ಬಲು ಕಷ್ಟಕರದ್ದೆಂದು ದ್ವೀಪವಾಸಿಗಳು ರಾಕೆಟ್ ಮೂಲಕ ಅಂಚೆಚೀಲಗಳನ್ನು ಹಡಗಿನಿಂದ ದ್ವೀಪಕ್ಕೆ ಮತ್ತು ದ್ವೀಪದಿಂದ ಹಡಗಿಗೆ ರವಾನಿಸುವ ವ್ಯವಸ್ಥೆ ಮಾಡಿಕೊಂಡಿದ್ದರು.

ಟೊಂಗಾ ದ್ವೀಪಸಮೂಹದ ಅನಂತರ ಆ ರೀತಿ ರಾಕೆಟ್ ಮೂಲಕ ಅಂಚೆ ರವಾನೆಗೆ ಕೈಹಾಕಿದ್ದು ಆಸ್ಟ್ರಿಯಾ ದೇಶ ಮತ್ತು ನಮ್ಮ ಭಾರತ ದೇಶ ಅಂತೆ! ಇದು ಸುಮಾರು 1900ರಿಂದ 1940ರ ನಡುವಿನ ಅವಧಿಯ ಮಾತು. ಆಸ್ಟ್ರಿಯಾ ದೇಶದಲ್ಲಿ ಫ್ರೆಡ್ರಿಚ್ ಸ್ಕಿಮೆಡಿಲ್ ಎಂಬಾತ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ  ರವಾನೆಗೆಂದೇ ರಾಕೆಟ್‌ಗಳ ಉಡ್ಡಯನ ಮಾಡುತ್ತಿದ್ದ. ಸೈಂಟ್ ರೇಡ್ಗಂಡ್ ಮತ್ತು ಕುಂಬರ್ಗ್ ಪಟ್ಟಣಗಳು ಸುಮಾರು ಆರು ಕಿ.ಮೀ ಅಂತರದವು, ರಾಕೆಟ್ ಮೂಲಕ ಅಂಚೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದವು. ಇನ್ನೂರರಿಂದ ಮುನ್ನೂರು ಪತ್ರಗಳು ಒಮ್ಮೆಗೆ ರವಾನೆಯಾಗುತ್ತಿದ್ದವು. ಒಂದೊಂದರ ಮೇಲೂ ‘ರಾಕೆಟ್ ಮೈಲ್’ ಎಂಬ ವಿಶೇಷ ಅಂಚೆಮೊಹರು ಇರುತ್ತಿತ್ತು. ಒಂದೇಒಂದು ಪತ್ರವೂ ಕಳೆದುಹೋಯ್ತು ಅಂತೆಲ್ಲ ಆಗುತ್ತಿರಲಿಲ್ಲವಂತೆ. ಆದರೆ ಆಸ್ಟ್ರಿಯಾ ಪೋಸ್ಟಲ್ ಇಲಾಖೆಯು ಈ ರಾಕೆಟ್ ತಂತ್ರಜ್ಞಾನಕ್ಕೆ ಆರ್ಥಿಕ ನೆರವನ್ನು ನಿಲ್ಲಿಸಿಬಿಟ್ಟಿತು. ಅಲ್ಲದೆ ಅದೇ ಕಾಲಕ್ಕೆ  ಪ್ರಪಂಚ ಯುದ್ಧದ ಕರಿಛಾಯೆ ಕವಿಯತೊಡಗಿದ್ದರಿಂದ ಸ್ಕಿಮೆಡಿಲ್‌ಗೆ ತನ್ನ ರಾಕೆಟ್‌ಗಳು ಪತ್ರ ಬಟವಾಡೆಯ ಬದಲಿಗೆ ಅಣ್ವಸ್ತ್ರಗಳನ್ನು ಪ್ರಯೋಗಿಸಲಿಕ್ಕೆ ಬಳಕೆಯಾಗಬಹುದೆಂಬ ಭೀತಿ ಹುಟ್ಟಿತು. ಆತನಿಗದು ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕೋಸ್ಕರ ರಾಕೆಟ್‌ಗಳ ವಿನ್ಯಾಸ ನಕ್ಷೆಗಳು, ಉತ್ಪಾದನೆಯ ಯಂತ್ರಗಳು, ಸಂಬಂಧಿಸಿದ ಕಾಗದಪತ್ರಗಳು ಎಲ್ಲವನ್ನೂ ನಾಶಮಾಡಿ ಆ ಉಸಾಬರಿಯೇ ತನಗೆ ಬೇಡ ಎಂದು ಕೈತೊಳೆದುಕೊಂಡನಂತೆ. ಆಮೇಲೆ ಆ ರೀತಿಯ ರಾಕೆಟ್‌ಗಳ ಉತ್ಪಾದನೆಗೆ ಅಮೆರಿಕದಿಂದ ಬೇಡಿಕೆ ಬಂದಾಗಲೂ ಆತ ನಯವಾಗಿ ಅದನ್ನು ತಿರಸ್ಕರಿಸಿಬಿಟ್ಟನಂತೆ.

ಇತ್ತ ಭಾರತದಲ್ಲಿ ಆಗಿನ್ನೂ  ಆಡಳಿತವೇ ಮುಂದುವರಿದಿತ್ತು. ಒಬ್ಬ ಮಾಜಿ ದಂತವೈದ್ಯನೂ, ಆಮೇಲೆ ಇಂಡಿಯನ್ ಏರ್‌ಮೈಲ್ ಸೊಸೈಟಿಯ ಕಾರ್ಯದರ್ಶಿಯೂ ಆಗಿದ್ದ ಸ್ಟೀಫನ್ ಸ್ಮಿತ್ ಎಂಬಾತ 1934ರಿಂದ 1944ರ ಅವಧಿಯಲ್ಲಿ ಸುಮಾರು 80 ರಾಕೆಟ್‌ಗಳ ಉಡ್ಡಯನ ಮಾಡಿದ್ದನಂತೆ. ಅಂಚೆ ಪತ್ರಗಳ ರವಾನೆಯಷ್ಟೇ ಅಲ್ಲದೆ, ಒಮ್ಮೆ ಭೂಕಂಪ ಪೀಡಿತರಿಗೆ ನೆರವಿನ ಸಾಮಗ್ರಿಗಳು ಮತ್ತು ಆಹಾರದ ಪೊಟ್ಟಣಗಳನ್ನು ಒದಗಿಸುವುದಕ್ಕೂ ಆತನ ರಾಕೆಟ್‌ಗಳು ಬಳಕೆಯಾದವು. ಸ್ಟೀಫನ್ ಸ್ಮಿತ್ 1935ರ ಜೂನ್ 29ರಂದು ದಾಮೋದರ ನದಿಯ ಒಂದು ತೀರದಿಂದ ಇನ್ನೊಂದು ತೀರಕ್ಕೆ  ಪ್ರಾಯೋಗಿಕವಾಗಿ ರಾಕೆಟ್ ಹಾರಿಸಿದ್ದನಂತೆ. ಆಗ ಅದರಲ್ಲಿದ್ದದ್ದು ಅಂಚೆ ಪತ್ರಗಳೂ ಅಲ್ಲ, ಆಹಾರದ ಪೊಟ್ಟಣಗಳೂ ಅಲ್ಲ, ಆಡಮ್ ಮತ್ತು ಈವ್ ಎಂಬ ಹೆಸರಿನ ಗಂಡು-ಹೆಣ್ಣು ಕೋಳಿಗಳು! ಅವು ದಾಮೋದರ ನದಿ ಯನ್ನು ರಾಕೆಟ್ ಮೂಲಕ ದಾಟಿದ ಮೊತ್ತಮೊದಲ ಜೀವಿಗಳೆಂಬ ದಾಖಲೆಗೆ ಹೆಸರಾದವು. ಆಮೇಲೆ ಅವುಗಳನ್ನು ಒಂದು ಪ್ರಾಣಿಸಂಗ್ರಹಾಲಯದಲ್ಲಿ ಇಡಲಾಗಿತ್ತಂತೆ. ಆಸ್ಟ್ರಿಯಾದ ಸ್ಕಿಮೆಡಿಲ್‌ನಂತೆಯೇ ಭಾರತದಲ್ಲಿ ಸ್ಟೀಫನ್ ಸ್ಮಿತ್‌ನ ರಾಕೆಟ್ ಪ್ರಯೋಗಗಳಿಗೆ ಎರಡನೆಯ ಪ್ರಪಂಚ ಯುದ್ಧ ಮುಳುವಾಯಿತು. ಮಾತ್ರವಲ್ಲ, ಯುದ್ಧಾನಂತರ ಒಂದೆರಡು ವರ್ಷಗಳಲ್ಲೇ  ಸತ್ತುಹೋದ. ಅಲ್ಲಿಗೆ ಭಾರತದಲ್ಲಿ ರಾಕೆಟ್‌ಮೈಲ್‌ನ ಅಧ್ಯಾಯ ಮುಗಿಯಿತು.

ಬೇರೆಲ್ಲ ದೇಶಗಳಲ್ಲಿ ರಾಕೆಟ್ ಮೈಲ್ ಪ್ರಯೋಗಗಳಾ ಗುತ್ತಿದ್ದುವೆಂದರೆ ಅಮೆರಿಕ ಹೇಗೆ ಕೈಕಟ್ಟಿಕೊಂಡು ಸುಮ್ಮನೆ ಕುಳಿತುಕೊಂಡೀತು? 1936ರ ಫೆಬ್ರವರಿ 23ರಂದು ನ್ಯೂಯಾರ್ಕ್ ರಾಜ್ಯದ ಗ್ರೀನ್‌ವುಡ್ ಲೇಕ್ ಎಂಬಲ್ಲಿಂದ ನ್ಯೂಜೆರ್ಸಿ ರಾಜ್ಯದ ಹ್ಯೂವಿಟ್ ಎಂಬಲ್ಲಿಗೆ ಅಂಚೆಪತ್ರಗಳಿದ್ದ ರಾಕೆಟ್‌ಗಳ ಉಡ್ಡಯನವಾಯಿತು. ಮಧ್ಯದಲ್ಲಿ ಹಡ್ಸನ್ ನದಿಯ ನೀರು, ಕೊರೆಯುವ ಚಳಿಗಾಲದಲ್ಲಿ ಹಿಮಗಟ್ಟಿಹೋಗಿತ್ತು. ರಾಕೆಟ್‌ಗಳಲ್ಲಿ ನೂರಾರು ಪತ್ರಗಳು ಇದ್ದವು. ಅರ್ಧ ಮೈಲು ದೂರ ಕ್ರಮಿಸಿದ ಬಳಿಕ ರಾಕೆಟ್‌ಗಳು  ಒಳಗಿದ್ದ ಪತ್ರಗಳು ಹೆಪ್ಪುಗಟ್ಟಿದ ಹಡ್ಸನ್ ನದಿಯ ಮೇಲೆ ಬಿದ್ದವು. ಹ್ಯೂವಿಟ್ ಪಟ್ಟಣದ ಅಂಚೆಯಾಳುವೊಬ್ಬ ಅವುಗಳನ್ನೆಲ್ಲ ಹೆಕ್ಕಿ ಅಂಚೆಕಚೇರಿ ಗೊಯ್ದು ಆಮೇಲೆ ವಿಳಾಸದಾರರಿಗೆ ತಲುಪಿಸಿದನಂತೆ. ಹಡ್ಸನ್ ನದಿಯಲ್ಲಿ ರಾಕೆಟ್‌ಗಳು ಉರುಳಿದವು ಎಂದಾಗ ಇಲ್ಲೊಂದು ಚಿಕ್ಕ ಉಪಕತೆಯನ್ನು ನೆನಪಿಸಿಕೊಳ್ಳಬೇಕು. ಇದು ಅಂಚೆಗೆ ಸಂಬಂಧಿಸಿದ್ದಲ್ಲ. ವಿಮಾನವೊಂದು ಹಡ್ಸನ್ ನದಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಮ್ಯಾಜಿಕಲ್ ಘಟನೆ. 2009ರ ಜನವರಿ 15ರಂದು ಯುಎಸ್ ಏರ್‌ವೇಸ್‌ನ ವಿಮಾನವು ನ್ಯೂಯಾರ್ಕ್‌ನ ಲಗ್ವಾರ್ಡಿಯಾ ವಿಮಾನನಿಲ್ದಾಣದಿಂದ ಹೊರ ಟದ್ದು ಟೇಕ್‌ಆಫ್  ಕೆಲ ಕ್ಷಣಗಳಲ್ಲೇ ಹಕ್ಕಿಗಳ ಗುಂಪೊಂದಕ್ಕೆ ಡಿಕ್ಕಿ ಹೊಡೆದಿದ್ದರ ಪರಿಣಾಮ ಎಂಜಿನ್‌ಗಳ ಪವರ್ ಕಳಕೊಂಡಿತು. ಹತ್ತಿರದ ಏರ್‌ಪೋರ್ಟ್‌ಗೆ ಹೋಗುವಷ್ಟೂ ತ್ರಾಣವಿಲ್ಲ. ಪೈಲಟ್‌ಗಳಾದ ಚೆಸ್ಲಿ ಸಲ್ಲೆನ್‌ಬರ್ಗರ್ ಮತ್ತು ಜೆಫ್ರಿ ಸ್ಕೈಲ್‌ಸ್ ಇಬ್ಬರೂ ವಿಮಾನವನ್ನು ಹಡ್ಸನ್‌ನಲ್ಲಿ ಮುಳುಗಿಸುವುದೊಂದೇ ಉಳಿದ ದಾರಿ ಎಂದು ಕೈಚೆಲ್ಲಿ ಆಗಿತ್ತು. ಅದೇನು ಪವಾಡ ಸಂಭವಿಸಿತೋ, ಹಡ್ಸನ್ ನದಿಯು ಒಂದು ರನ್‌ವೇಯೋ ಎಂಬಂತೆ ವಿಮಾನವು ನದಿಯ ನೀರಿನ ಮೇಲೆ ಲ್ಯಾಂಡ್ ಆಗಿ ದೋಣಿಯಂತೆ ತೇಲುತ್ತ ಸ್ವಲ್ಪ ದೂರದಲ್ಲಿ ನಿಂತುಬಿಟ್ಟಿತು. ಎಲ್ಲ  ಪ್ರಯಾಣಿಕರನ್ನು ಸಜೀವ ಪಾರುಗೊಳಿಸಲಾಯ್ತು!

ಇರಲಿ, ರಾಕೆಟ್‌ಮೈಲ್‌ನ ಸಣ್ಣಪುಟ್ಟ ಪ್ರಯೋಗಗಳು ಮತ್ತು ಅವಘಡಗಳಾದ ಮೇಲೆ 1959ರ ಜೂನ್ 8ರಂದು ಅಮೆರಿಕದ ಪೋಸ್ಟಲ್ ಸರ್ವೀಸ್ ಒಂದು ಅತಿ ಘನತರವಾದ ಪ್ರಯೋಗದಲ್ಲಿ ಯಶಸ್ವಿಯಾಯ್ತು. ಆಗಿನ ಪೋಸ್‌ಟ್ಮಾಸ್ಟರ್ ಜನರಲ್ ಆರ್ಥರ್ ಇ ಸಮ್ಮರ್‌ಫೀಲ್‌ಡ್ ಎಂಬ ಅಧಿಕಾರಿಯ ಮುಂದಾಳುತ್ವದಲ್ಲಿ ನಡೆದ ಕ್ಷಿಪಣಿಯ ಮೂಲಕ ಅಂಚೆ ರವಾನೆ ಪ್ರಯೋಗ ಅದು. ಅಲ್ಲಿ, ಪತ್ರಗಳ ರವಾನೆಗಿಂತಲೂ ಸೋವಿಯತ್

ಯೂನಿಯನ್‌ನ ಎದುರು ತನ್ನ ಬಲಪ್ರದರ್ಶನ ಮಾಡುವುದು ಅಮೆರಿಕದ ಉದ್ದೇಶವಾಗಿತ್ತು. ಶೀತಲಸಮರ  ಆರಂಭವಾಗಿದ್ದದ್ದು, ಎರಡೂ ರಾಷ್ಟ್ರಗಳು ಬಲಾಬಲ ಪ್ರದರ್ಶನ ಪೈಪೋಟಿಯಲ್ಲಿ ತೊಡಗಿದ್ದವು. ಅಂಚೆ

ರವಾನೆಗಾಗಿ ನೂರಾರು ಮೈಲು ದೂರಕ್ಕೆ ನಾವು ಕ್ಷಿಪಣಿಗಳನ್ನು ಅತ್ಯಂತ ಕರಾರುವಾಕ್ಕಾಗಿ ಉಡಾಯಿಸಬಲ್ಲೆವು ಎಂದು ತೊಡೆತಟ್ಟಿ ಹೇಳುವುದು ಅಮೆರಿಕಕ್ಕೆ ಅಗತ್ಯವಿತ್ತು. ಆ ಪ್ರಯೋಗಕ್ಕೆ ಆಯ್ದುಕೊಂಡ ಕ್ಷಿಪಣಿಯ ಹೆಸರು ರೆಗ್ಯುಲಸ್

ಎಂದು. ಅದು ನಿಜವಾಗಿಯೂ ನ್ಯೂಕ್ಲಿಯರ್ ಕ್ರೂಸ್ ಕ್ಷಿಪಣಿಯೇ, ಆದರೆ ಅದಕ್ಕೆ ಅಣ್ವಸ್ತ್ರಗಳ ಬದಲಿಗೆ ಅಂಚೆಚೀಲಗಳನ್ನು ಕಟ್ಟಲಾಗಿತ್ತು ಅಷ್ಟೇ. ಆ ಅಂಚೆಚೀಲಗಳನ್ನು ಕ್ಷಿಪಣಿಗೆ ಕಟ್ಟಿದ್ದು ಸ್ವತಃ ಸಮ್ಮರ್‌ಫೀಲ್ಡನೇ. ಮಾತ್ರವಲ್ಲ ಕ್ಷಿಪಣಿ  ಹೊತ್ತಿಗೆ ಆತ ಉದ್ದೇಶಿತ ಗುರಿಯ ಸ್ಥಳಕ್ಕೆ ಹೋಗಿ ಕಾಯುತ್ತ ನಿಂತಿದ್ದನಂತೆ.

ಕ್ಷಿಪಣಿಗೆ ಕಟ್ಟಿದ್ದ ಅಂಚೆಚೀಲಗಳಲ್ಲಿದ್ದದ್ದು ಸಮ್ಮರ್‌ಫೀಲ್‌ಡ್ನ ಸಹಿಯಿದ್ದ, ಟೈಪ್ ಮಾಡಿದ್ದ ಒಂದು ಪತ್ರದ ಸುಮಾರು 3000 ಪ್ರತಿಗಳು. ಅಮೆರಿಕದ ಮಿತ್ರರಾಷ್ಟ್ರಗಳ ಪೋಸ್‌ಟ್ಮಾಸ್ಟರುಗಳೂ ಸೇರಿದಂತೆ ಬೇರೆಬೇರೆ ವಿಐಪಿಗಳ ಮತ್ತು ಅಮೆರಿಕದ ಆಗಿನ ಅಧ್ಯಕ್ಷ ಡ್ವೈಟ್ ಐಸನ್‌ಹವರ್‌ನ ವಿಳಾಸ ಅವುಗಳ ಮೇಲೆ ಇತ್ತು. ಆ ಕ್ಷಿಪಣಿಯನ್ನು ಉಡ್ಡಯನಕ್ಕೆ ಒಯ್ದಿದ್ದ ಜಲಾಂತರ್ಗಾಮಿ ನೌಕೆ ‘ಯುಎಸ್‌ಎಸ್ ಬಾರ್ಬೆರೊ’ದ ಸಿಬ್ಬಂದಿಯೆಲ್ಲರಿಗೂ ಒಂದೊಂದು ಪ್ರತಿಯನ್ನು ಸ್ಮರಣಿಕೆ ಎಂಬಂತೆ  ಅಟ್ಲಾಂಟಿಕ್ ಸಮುದ್ರದಲ್ಲಿ ತೀರದಿಂದ ಸುಮಾರು 200ಮೈಲು ದೂರದಲ್ಲಿ, ಜಲಾಂತರ್ಗಾಮಿ ನೌಕೆಯ ಮೇಲಿನಿಂದ ಹೊರಟ ಕ್ಷಿಪಣಿಯು ಫ್ರೋರಿಡಾ ರಾಜ್ಯದ ಜಾಕ್ಸನ್‌ವಿಲ್ ಪಟ್ಟಣದತ್ತ ಹಾರಿತ್ತು. ಶಬ್ದದ ವೇಗದಷ್ಟೇ ವೇಗದಲ್ಲಿ ಚಲಿಸಿದ ಕ್ಷಿಪಣಿಯು ಜಾಕ್ಸನ್‌ವಿಲ್ ತಲುಪಲಿಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ 22 ನಿಮಿಷಗಳು. ಅಲ್ಲಿ ಸಮ್ಮರ್‌ಫೀಲ್ಡನೇ ಎಲ್ಲ ಪತ್ರಗಳನ್ನೂ ಸ್ವೀಕರಿಸಿ, ಜಾಕ್ಸನ್‌ವಿಲ್ ಪೋಸ್ಟಾಫೀಸಿಗೆ ಒಯ್ದು, ಆಮೇಲೆ ವಿಳಾಸದಾರರಿಗೆ ಮಾಮೂಲಿ ಅಂಚೆಯ ಮೂಲಕ ಅವುಗಳನ್ನು ಕಳಿಸಲಾಯ್ತು.

ಪ್ರಯೋಗದ ಯಶಸ್ಸಿನಿಂದ ಹರ್ಷಿತನಾದ ಸಮ್ಮರ್‌ಫೀಲ್‌ಡ್ ‘ಅಂಚೆ ರವಾನೆಯಂತಹ  ಪೌರ ಉದ್ದೇಶಕ್ಕೆ ಕ್ಷಿಪಣಿ ಬಳಕೆ ಒಂದು ಮಹತ್ವದ ಹೆಜ್ಜೆ. ಮನುಷ್ಯನು ಚಂದ್ರಲೋಕಕ್ಕೆ ಪದಾರ್ಪಣ ಮಾಡುವುದಕ್ಕಿಂತ ಬಹಳ ಮೊದಲೇ, ಗಂಟೆಗಳೊಳಗೇ ಅಂಚೆ ರವಾನೆಯು ಇನ್ನು ಅಮೆರಿಕದಲ್ಲಿ ಸರ್ವೇಸಾಮಾನ್ಯ ವಿಷಯವಾಗಲಿದೆ. ನ್ಯೂಯಾರ್ಕ್‌ನಿಂದ ಕ್ಯಾಲಿಫೋರ್ನಿಯಾಕ್ಕೆ, ಗ್ರೇಟ್ ಬ್ರಿಟನ್, ಭಾರತ, ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಖಂಡಾಂತರ ಕ್ಷಿಪಣಿಗಳ ಮೂಲಕ ಅಂಚೆ ರವಾನೆ ಆಗಲಿದೆ. ಅಂಚೆ ಇಲಾಖೆ ಮತ್ತು ರಕ್ಷಣಾ ಇಲಾಖೆಗಳು ಜತೆಜತೆಯಾಗಿ ಕೆಲಸ ಮಾಡಿ ಇದನ್ನು ಸಾಧ್ಯವಾಗಿಸಲಿವೆ’ ಎಂದು ಬರೆದುಕೊಂಡಿದ್ದನು. ಸೋವಿಯತ್ ಯೂನಿಯನ್‌ನ ಎದುರಿಗೆ  ತನ್ನ ಪಾತ್ರವೂ ಇದೆ ಎಂದು ಹೇಳಿಕೊಳ್ಳುವ ಅವಕಾಶವನ್ನು ಬಿಟ್ಟಾನೆಯೇ?

ಸಮ್ಮರ್‌ಫೀಲ್‌ಡ್ ಅಷ್ಟೆಲ್ಲ ಕೊಚ್ಚಿಕೊಂಡರೂ, ರಾಕೆಟ್ ಮೈಲ್‌ನ ಐಡಿಯಾ ಅಮೆರಿಕ ದೇಶದಲ್ಲಿ ಆಮೇಲೇನೂ ಮುಂದುವರೆಯಲಿಲ್ಲ. ಒಂದುವೇಳೆ ಮುಂದುವರೆದಿದ್ದರೆ ಈಗ ಅಮೆಜಾನ್‌ನ ‘ಡ್ರೋನ್ ಮೂಲಕ ಅದೇ ದಿನ ವಿತರಣೆ’ ಪ್ರಚಾರ ಪೇಲವ ಎನಿಸುತ್ತಿತ್ತು. ಅಮೆಜಾನ್ ಕಂಪನಿಯ ಮತ್ತು ವಾಷಿಂಗ್ಟನ್ ಪೋಸ್‌ಟ್ ಪತ್ರಿಕೆಯ ಒಡೆಯನಾಗಿರುವ ಶ್ರೀಮಂತ ಉದ್ಯಮಿ ಜೆಫ್ ಬೆೋಸ್‌ನ ಬಳಿ ರಾಕೆಟ್ ತಯಾರಿಕೆಯ ಒಂದು ಕಂಪನಿಯೂ ಇದೆ. ಮನಸ್ಸು ಮಾಡಿದರೆ ರಾಕೆಟ್‌ಮೈಲ್  ಅದರ ಮೇಲಿಂದ ಹಾರುವ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಿ ಅಭಿವೃದ್ಧಿಪಡಿಸುವುದು ಆತನಿಗೆ ಕಷ್ಟವೇನಲ್ಲ. ಒಂದುವೇಳೆ ಹಾಗೆ ಆದಲ್ಲಿ ಅಮೆಜಾನ್ ‘ಫೈರ್ ಸ್ಟಿಕ್’ ಗಳನ್ನು ಆರ್ಡರ್ ಮಾಡಿದರೆ ಅದೇ ದಿನ ಅಲ್ಲ, ಕೆಲವೇ ನಿಮಿಷಗಳಲ್ಲಿ ಡೆಲಿವರಿ ಪಡೆಯುವ- ಅದೂ ಅಕ್ಷರಶಃ ಅಮೆಜಾನ್ ಫೈರ್ ಸ್ಟಿಕ್ (ರಾಕೆಟ್)ಗಳ ಮೂಲಕವೇ- ಹಂತಕ್ಕೆ ಬಂದು ನಿಲ್ಲಬಹುದು ತಂತ್ರಜ್ಞಾನದ ದಾಪುಗಾಲು!