About Us Advertise with us Be a Reporter E-Paper

ಅಂಕಣಗಳು

ಇದು ಸಂಭ್ರಮದ ಸಮಯವಲ್ಲ

ರಾಜ್ಯ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ನೂರು ದಿನಗಳು ಪೂರೈಸುತ್ತಿದೆ. ಆದರೆ, ಸಂಭ್ರಮಪಡುವ ಕಾಲ ಇದಲ್ಲ. ಏಕೆಂದರೆ, ಸರಕಾರ ಸುಲಲಿತವಾಗಿ ನಡೆಯುತ್ತಿಲ್ಲ ಎಂಬುದು ಸ್ವತಃ ಸರಕಾರದಲ್ಲಿ  ಎರಡೂ ಪಕ್ಷಗಳಿಗೆ ಗೊತ್ತು. ಒಂದಲ್ಲಾ ಒಂದು ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಗೊಂದಲ, ಭಿನ್ನಾಭಿಪ್ರಾಯ ಮೂಡುತ್ತಾ ಬಂದಿರುವುದು, ಸಚಿವ ಸಂಪುಟ ರಚನೆ, ವಿಸ್ತರಣೆ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ತಾರಕ್ಕೇರಿದ ಭಿನ್ನಮತ, ಆಂತರಿಕ ಕಿತ್ತಾಟಗಳಿಂದ ಸರಕಾರ ಈ ನೂರು ದಿನಗಳಲ್ಲಿ ನಲುಗಿಹೋಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯಾದಿಯಾಗಿ ಮಂತ್ರಿ ಮಂಡಲದ ಎಲ್ಲರೂ ಸರಕಾರ ಸುಭದ್ರವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರಾದರೂ, ಇದರ ಭವಿಷ್ಯ ಎಷ್ಟು ದಿನವೋ ಗೊತ್ತಿಲ್ಲ ಎಂಬುದನ್ನು ಒಪ್ಪದೇ ಇರಲಾರರು. ಹೀಗಾಗಿ ಸಮ್ಮಿಶ್ರ ಸರಕಾರ  ಬಂದು ನೂರು ದಿನಗಳು ತುಂಬಿದರೂ ಸಂತಸ ಪಡಲು ಸಾಧ್ಯವಾಗುತ್ತಿಲ್ಲ. ಕುಮಾರಸ್ವಾಮಿ ಅವರಿಗೆ 2006 ರಲ್ಲಿ ಆಡಳಿತದ ಮೇಲಿದ್ದ ಹಿಡಿತ ಈ ಬಾರಿ ಇಲ್ಲದಂತಾಗಿದೆ. ತಾವು ಕಾಂಗ್ರೆಸ್ ಮರ್ಜಿಯಲ್ಲಿಲ್ಲ ಎಂದು ಹೇಳಿಕೊಂಡರೂ ಆ ಪಕ್ಷದ ನಾಯಕರು ಹಾಕುವ ಗುಟುರಿಗೆ ತಬ್ಬಿಬ್ಬಾಗುವುದನ್ನು ಹಲವು ಬಾರಿ ತಮ್ಮದೇ ಹೇಳಿಕೆಗಳ ಮೂಲಕ ತೋರ್ಪಡಿಸಿಕೊಂಡಿದ್ದಾರೆ. ಈ ಸರಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಇರುವಷ್ಟು ದಿನ ಉತ್ತಮ ಆಡಳಿತ ನೀಡುವುದೇ ತಮ್ಮ ಗುರಿ ಎಂದು ಹೇಳಿಕೊಳ್ಳುವ  ಸರಕಾರದ ಮುಖ್ಯಸ್ಥರೇ ಸರಕಾರದ ಅಸ್ತಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಡಳಿತದಲ್ಲಿನ ಹಿಡಿತವನ್ನು ಸಡಿಲವಾಗುವಂತೆ ಮಾಡಿಕೊಳ್ಳುತ್ತಿದ್ದಾರೆ. ಇದ್ದುದರಲ್ಲಿ ಒಂದು ಸಂತಸದ ವಿಚಾರವೆಂದರೆ ಸಾಲದ ಸುಳಿಯಿಂದ ಸುಮಾರು 23 ಲಕ್ಷಕ್ಕೂ ಅಧಿಕ ರೈತರನ್ನು ಪಾರು ಮಾಡಿರುವುದು. 47 ಸಾವಿರ ಕೋಟಿ ರುಪಾಯಿಗೂ ಅಧಿಕ ಸಾಲವನ್ನು ಮನ್ನಾ ಮಾಡುವ ಮೂಲಕ ಕುಮಾರಸ್ವಾಮಿ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅದೇರೀತಿ ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮನ್ನಾ ಮಾಡುವ ನಿರ್ಧಾರಕ್ಕೆ ಬಂದಿರುವುದು ಈ ನೂರು  ಸಾಧನೆ ಎಂದೇ ಹೇಳಬಹುದು. ಇದರ ನಡುವೆ ಕೊಡಗು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸುರಿದ ಮಳೆ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಸವಾಲುಗಳು ಎದುರಾಗಲಿವೆ. ಆದರೆ, ಇನ್ನೂ ಅಂಬೆಗಾಲಿಡುತ್ತಲೇ ಇರುವ ಸರಕಾರಕ್ಕೆ ಎದುರಾಗಲಿರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬರಲಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ನಡೆಸುವವರು ನೂರು ದಿನಗಳನ್ನು ಪೂರೈಸಿದ ಈ ಸಂದರ್ಭದಲ್ಲಾದರೂ ಅಂಬೆಗಾಲಿನಿಂದ  ಬದಲು ಓಡಾಡುವುದನ್ನು ಕಲಿಯಬೇಕಿದೆ. ಕಲಿತು ಆಡಳಿತಕ್ಕೆ ಚುರುಕು ಮುಟ್ಟಿಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close