About Us Advertise with us Be a Reporter E-Paper

ಸಿನಿಮಾಸ್

ಈ ವಾರ ತೆರೆಗೆ

ಜಗತ್ ಕಿಲಾಡಿ
‘ಜಾಲಿಡೇಸ್’ ಸಿನಿಮಾದ ಟೈಸನ್ ನಿರಂಜನ್ ಶೆಟ್ಟಿ ಅಭಿನಯದ ಜಗತ್ ಕಿಲಾಡಿ ಸಿನಿಮಾ ಇಂದು ತೆರೆಗೆ ಬರುತ್ತಿದ್ದು, ಪ್ರಸ್ತುತ ಸಮಾಜದ ವಾಸ್ತವವನ್ನು ಬಿಂಬಿಸುವ ಚಿತ್ರ ಇದಾಗಿದೆ. ಎಲ್ಲಿಯವರೆಗೂ ಮೋಸ ಹೋಗುವವರಿರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಲಾಜಿಕ್ ಇಟ್ಟುಕೊಂಡು ನಿರ್ದೇಶಕ ಆರವ್ ಧೀರೇಂದ್ರ ಜಗತ್ ಕಿಲಾಡಿಯ ಮೂಲಕ ಕಥೆ ಹೇಳಲಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ಲಯನ್ ಆರ್. ರಮೇಶ್ ಬಾಬು ಅವರ ಗೆಳೆಯರೊಬ್ಬರನ್ನು ಅನೇಕಲ್‌ನಲ್ಲಿ ಬೆಳ್ಳಿ ನಾಣ್ಯದ ಮೂಟೆ ಕೊಡುವುದಾಗಿ ನಂಬಿಸಿ, ದುಷ್ಕರ್ಮಿಗಳು ಹಾಕಿದ್ದು, ಆ ಕುರಿತು ಸಿನಿಮಾದಲ್ಲಿ ಹೇಳಲಾಗಿದೆಯಂತೆ.

ಚಿತ್ರದಲ್ಲಿ ಜನರ ದಡ್ಡತನವನ್ನು ಬಳಸಿ ಲಾಭ ಮಾಡಿಕೊಳ್ಳಲು ನಿರಂಜನ್ ಶೆಟ್ಟಿ ಯಕ್ಷಗಾನ ಕಲಾವಿದ, ಮೌಲ್ವಿ, ಪಾದ್ರಿ, ಕಾರ್ಪೋರೇಟ್ ಕಂಪನಿ ಉದ್ಯೋಗಿ, ಐಟಿ ಕಂಪನಿ ಎಂಡಿ, ಸನ್ಯಾಸಿ, ಪುರೋಹಿತ, ಜ್ಯೋತಿಷಿ ಹೀಗೆ ನಾನಾ ಗೆಟಪ್‌ನಲ್ಲಿ ಮಿಂಚಿದ್ದಾರಂತೆ. ಸಮಾಜದಲ್ಲಿ ಜನರ ಮಾನಸಿಕ ದೌರ್ಬಲ್ಯಗಳೇ ಚಿತ್ರದ ನಾಯಕನ ಬಂಡವಾಳವಂತೆ. ದುಡ್ಡು ಮಾಡಲು ಜನರಿಗೆ ಯಾವುದರಲ್ಲಿ ನಂಬಿಕೆ ಇರುತ್ತದೆಯೋ ಆ ಗೆಟಪ್ ನಾಯಕ ಹಾಕುತ್ತಿರುತ್ತಾನೆ. ಮಿಕ್ಕಂತೆ ನಾಯಕನ ಸಿನಿಮಾ ನೋಡಿಯೇ ತಿಳಿಯಬೇಕಿದೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಜೈ ಜಗದೀಶ್, ರಂಗಾಯಣ ರಘು ಮತ್ತಿತರ ತಾರಾಬಳಗವೇ ಇದೆ. ಈ ಚಿತ್ರವು ತಮಿಳಿನ ‘ಸತುರಂಗ ವೆಟೈ’ ಚಿತ್ರದ ರಿಮೇಕ್ ಆಗಿದ್ದು, ನಿರ್ಮಾಪಕ ರಮೇಶ್ ಬಾಬು ಅವರು ನ್ಯಾಯಾದೀಶರಾಗಿ ಚಿತ್ರದಲ್ಲಿ ಬಣ್ಣಹಚ್ಚಿರುವುದು ವಿಶೇಷ.

‘ಎಂಎಲ್‌ಎ’
ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್ ಅಲಿಯಾಸ್ ಒಳ್ಳೆ ಹುಡ್ಗ ಪ್ರಥಮ್ ದೇವ್ರಂಥ ಮನುಷ್ಯ ಬಳಿಕ ಅಭಿನಯಿಸುತ್ತಿರುವ ಎಂಎಲ್‌ಎ ಚಿತ್ರವು ಬಿಡುಗಡೆಯಾಗುತ್ತಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನು ಕೂಡಾ ರಾಜಕೀಯ ಪ್ರವೇಶಿಸಬಹುದು ಎಂಬ ಎಳೆಯಿಟ್ಟುಕೊಂಡು ತಯಾರಾದ ಚಿತ್ರ ಎಂಎಲ್‌ಎ. ಈ ಚಿತ್ರದಲ್ಲಿ ಪ್ರಥಮ್ ತಮ್ಮ ಒರಿಜಿನಲ್ ವ್ಯಕ್ತಿತ್ವದಲ್ಲಿಯೇ ನಟಿಸಿದ್ದಾರಂತೆ. ಇನ್ನು ಸ್ಪರ್ಶ ಖ್ಯಾತಿಯ ರೇಖಾ ಮೊದಲ ಬಾರಿಗೆ ಪೊಲಿಟಿಕಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಥಮ್‌ಗೆ ಜೋಡಿಯಾಗಿ ಸೋನಾಲ್ ಮಾಂಟೆರೋ ನಟಿಸಿದ್ದು, ಮಾಜಿ ಸಚಿವ ಎಚ್. ಎಂ. ರೇವಣ್ಣ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರ ನಿರ್ವಹಿಸಿರುವುದು ಚಿತ್ರದ ಹೈಲೈಟ್. ಇನ್ನುಳಿದಂತೆ ಕುರಿಪ್ರತಾಪ್, ತುಳು ನಟ ಪಡೀಲ್, ಚಂದ್ರಕಲಾ ಮೋಹನ್, ರಾಜಶೇಖರ್ ಮತ್ತಿತರರ ತಾರಾಬಳಗವಿದೆ. ಈಗಾಗಲೇ ಪಿಆರ್‌ಕೆ ಆಡಿಯೋ ಮೂಲಕ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಕೇಳುಗರ ಮನಗೆದ್ದಿವೆ. ಮೌರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ವೆಂಕಿ ಪಾಲುಗುಳ್ಳ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಲೈ ಮಾಸ್ಟರ್ ಎಂಎಲ್‌ಎಗೆ ನೃತ್ಯ ಸಂಯೋಜನೆ ಮಾಡಿದ್ದು, ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಕಿರುತೆರೆಯ ಮೂಲಕ ತನ್ನದೇ ವಿಭಿನ್ನ ಮ್ಯಾನರಿಜಂನಲ್ಲಿ ಜನಮನವನ್ನು ಗೆದ್ದಿರುವ ಪ್ರಥಮ್ ಎಂಎಲ್‌ಎ ಆಗಿ ಮತ್ತೇನೂ ಮಾಡುತ್ತಾರೋ ನೋಡಬೇಕು.

ಮನಸಿನ ಮರೆಯಲಿ
ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜ್- ಶಬೀನ ಅರಾ ಜೊತೆಯಾಗಿ ನಿರ್ಮಿಸಿರುವ ಮನಸಿನ ಮರೆಯಲಿ ಚಿತ್ರವು ನವೆಂಬರ್ 9ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈವರೆಗೆ ಥ್ರಿಲ್ಲರ್, ರೊಮ್ಯಾಂಟಿಕ್ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಮಧುರವಾದ ಹಾಡುಗಳ ಮೂಲಕ ಸಿನಿ ಪ್ರೇಕ್ಷಕರ ಮನಸೂರೆಗೊಂಡಿರುವ ಈ ಚಿತ್ರ ಸೋಶಿಯಲ್ ಸದ್ದು ಮಾಡಿದೆ.

ಬಹಳ ವರ್ಷಗಳ ನಂತರ ಸ್ಯಾಂಡಲ್ ವುಡ್‌ನಲ್ಲಿ ಮತ್ತೊಂದು ದೃಶ್ಯಕಾವ್ಯವಾಗುವ ಸಾಧ್ಯತೆ ಹೆಚ್ಚಾಗಿಯೇ ಇದೆ. ನಾಯಕನಾಗಿ ಕಿಶೋರ್ ಯಾದವ್ ಹಾಗೂ ನಾಯಕಿಯಾಗಿ ದಿವ್ಯಾ ಗೌಡ ಮನಸಿನ ಮರೆಯಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪವನ್ ಕುಮಾರ್ ಛಾಯಾಗ್ರಹಣ ಮಾಡಿದ್ದು, ಎ. ತ್ಯಾಗರಾಜ್ ಅವರು ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎ.ಆರ್. ಸಾಯಿರಾಮ್ ಅವರು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ವೈಲೆಂಟ್ ವೇಲು ಸಾಹಸ ಸಂಯೋಜನೆ ಮಾಡಿದ್ದು, ನಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಗುರುರಾಜ್ ಭೂಪಾಲ್, ಶುಕ್ಲ ಭಗವತ್, ವರ್ದನ್ ತೀರ್ಥಹಳ್ಳಿ, ಸಂದೀಪ್ ಮಲಾನಿ, ವಠಾರ ಮಲ್ಲೇಶ್ ಇನ್ನಿತರರು ಅಭಿನಯಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close