Breaking Newsಪ್ರಚಲಿತರಾಜ್ಯ
ರಾಜ್ಯದಲ್ಲಿ ಬರ, ಪ್ರವಾಹ: ಸರಳವಾಗಿ ದಸರಾ ಆಚರಿಸಲು ನಿರ್ಧಾರ
ದಸರಾ ಉದ್ಘಾಟನೆಗೆ ಡಾ. ಸುಧಾ ಮೂರ್ತಿಗೆ ಆಹ್ವಾನ

ಮೈಸೂರು: ರಾಜ್ಯದಲ್ಲಿ ಭಾರೀ ಮಳೆ, ಕೆಲವೆಡೆ ಬರ, ಕೊಡಗಿನಲ್ಲಿ ಪ್ರವಾಹ ಉಂಟಾಗಿ ಜನರು ತತ್ತರಿಸಿರುವ ಕಾರಣ ಈ ಬಾರಿ ಸಾಂಪ್ರದಾಯಿಕ ದಸರಾ ಮಹೋತ್ಸವ ಸರಳವಾಗಿ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇನ್ಫೋಸಿಸ್ ಪ್ರತಿಷ್ಠಾನದ ಡಾ. ಸುಧಾಮೂರ್ತಿ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ನಿರ್ಧರಿಸಲಾಗಿದೆ.
ನಜರಬಾದ್ನಲ್ಲಿರುವ ಸರಕಾರಿ ಅತಿಥಿ ಗೃಹದ ಸಭಾಂಗಣದಲ್ಲಿ ಮಂಗಳವಾರ 2018ನೇ ಸಾಲಿನ ಮೈಸೂರು ದಸರಾ ಸಿದ್ಧತೆಗಳ ಕುರಿತು ನಡೆದ ಉನ್ನತಾಧಿಕಾರ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 11ರಂದು ಚಾಮುಂಡಿಬೆಟ್ಟದಲ್ಲಿ 2018ನೇ ಸಾಲಿನ ಮೈಸೂರು ದಸರಾ ಉದ್ಘಾಟನೆಯಾಗಲಿದೆ. 10ನೇ ದಿನ ಅಂದರೆ ಅಕ್ಟೋಬರ್ 20 ರಂದು ಜಂಬೂ ಸವಾರಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.

ದಸರಾ ಆಚರಣೆ ಹಾಗೂ ಮೈಸೂರು ನಗರ ಅಭಿವೃದ್ಧಿ ಮತ್ತು ಸೌಂದರ್ಯಹೆಚ್ಚಿಸಲು ಅಗತ್ಯವಿರುವ ಅನುದಾನವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಲಿದೆ. ಕಳೆದ ಬಾರಿ 15 ಕೋಟಿ ರು.ಗಳನ್ನು ದಸರಾಕ್ಕೆ ನೀಡಲಾಗಿತ್ತು. ಅದರಲ್ಲಿ ಬಾಕಿ ಉಳಿದಿದ್ದ 7.10 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ದಸರಾ ಮಹೋತ್ಸವ ಸಭೆಯಲ್ಲಿ ತೀರ್ಮಾನಿಸಿ ಸಲ್ಲಿಸುವ ಪ್ರಸ್ತಾವನೆಯಂತೆ ಹಣ ಬಿಡುಗಡೆ ಮಾಡಲಾಗುವುದು. ಹಣಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸಿಎಂ ಹೇಳಿದರು.