About Us Advertise with us Be a Reporter E-Paper

ವಿ +

ಇರಲಿ ನಮ್ಮೊಳಗೊಂದು ಗಡಿಯಾರ

- ಪಿ.ಮಂಜುಳಾ ಕಲ್ಯಾಣ್, ಚಿಂತಾಮಣಿ

‘ಥತ್.. ಈ ಹಾಳು ಅಲಾರಂಗೆ ಏನಾಯ್ತೋ ಏನೋ? ಹೊಡ್ಕೊಳ್ಳೇ ಇಲ್ಲ. ಎಲ್ಲಾ ಕೆಲ್ಸ ಹಾಳು, ಎದ್ದಾಗಿನಿಂದ ಹಿಡಿದು ತಿಂಡಿ, ಅಡುಗೆ ರೆಡಿಯಾಗೋದು ಎಲ್ಲಾ ತಡ ಆಗೋಯ್ತು ಇನ್ನು ಆಫೀಸ್‌ನಲ್ಲೇನು ಕಾದಿದೆಯೋ ದೇವರೇ’ ಅಂತ ಭಾವನಾ ಒಂದೇ ತಳಮಳ ಅನುಭವಿಸ್ತಾ ಇದ್ದಳು. ಇಂತಹ ಹೆಂಗಳೆಯರು ನಮ್ಮಲ್ಲೆಷ್ಟೋ ಜನ!

ಸಾಮಾನ್ಯವಾಗಿ ನಮ್ಮ ಜೀವನ ಅಡಕತ್ತರಿಯಲ್ಲಿ ಸಿಕ್ಕಿ ಇರುತ್ತೆ. ಒತ್ತಡವನ್ನು ಅನುಭವಿಸಲೂ ಆಗದೆ, ನಿಭಾಯಿಸಕ್ಕೂ ಬರದೆ ಬರಿ ಸಂದಿಗ್ಧಗಳನ್ನೇ ಮೈಮೇಲೆ ಎಳೆದುಕೊಳ್ಳುವಂತಿದೆ. ಜೀವನದ ಒಂದೊಂದೇ ಮೈಲುಗಲ್ಲುಗಳಾದ ಬಾಲ್ಯ, ವಿದ್ಯಾರ್ಥಿದೆಸೆ, ಕಾಲೇಜು, ಮದುವೆ, ಮಕ್ಕಳು ಹೀಗೆ ಒಂದಾದ ಮೇಲೆ ಒಂದರಂತೆ ಎಲ್ಲದರ ಜತೆ ಮುಖಾಮುಖಿಯಾಗ್ತಾನೆ ಹೋಗಿರ್ತಿವಿ. ಆಗ ನಮ್ಮ ನಮ್ಮ ಪಾತ್ರಗಳೂ, ಪಾತ್ರಕ್ಕೆ ತಕ್ಕಂತೆ ಹೊಣೆಗಾರಿಕೆ ಎಲ್ಲವೂ ಬದಲಾಗ್ತಾನೆ ಹೋಗುತ್ತದೆ. ಅದನ್ನು ಓಡೋ ಜೀವನದ ಜತೆ ಓಡೋ ನಾವೂ ಅಲ್ಲಲ್ಲಿ ನಿಂತು ಸ್ವಲ್ಪ ವಿಮರ್ಶೆ ಮಾಡಿಕೊಳ್ಳುತ್ತಾ ಹೆಜ್ಜೆಯಿಡುತ್ತಾ ಹೋದರೆ ನೂರಲ್ಲದಿದ್ದರೂ ತೃಪ್ತಿಯೆನಿಸುವ ಮಟ್ಟಿಗಾದರೂ ನಾವಿರುತ್ತೇವೆ. ಇಲ್ಲಾ ಅಂದರೆ ಶೂನ್ಯ ಸಾಧನೆ ನಿಶ್ಚಿತ.

ನಾವು ಸ್ವಾಗತಿಸಲಿ, ನಿರ್ಲಕ್ಷಿಸಲಿ ದಿನಗಳು ತಂತಾನೆ ಹುಟ್ಟಿ ಬರುತ್ತಾನೆ ಇರುತ್ತವೆ. ಮುಗಿದು ಹೋಗುತ್ತಾನೆ ಇರುತ್ತವೆ. ನಾವು ನಿಜವಾಗಿಯೂ ಜಾಗೃತರಾಗಬೇಕಿರುವುದು ಇಲ್ಲಿಯೇ. ಎಂದೋ ಏನೋ ಒಂದು ದೊಡ್ಡ ಸಾಧನೆ ಮಾಡಿ ಬಿಡ್ತೀವಿ ಅನ್ನೋ ಮಾತು ಎಷ್ಟು ಉಡಾಫೇನೋ, ಅಷ್ಟೇ ಸಲ್ಲದ ಮಾತು. ‘ಅಯ್ಯೋ, ನನ್ನಿಂದೇನಾಗುತ್ತೆ ಬಿಡು ಅನ್ನೋದು.’

ಸಾಧಕರ್ಯಾರೂ ಹುಟ್ಟೋವಾಗ್ಲೆ ಅಸಮಾನ್ಯರಾಗಿರಲ್ಲ. ಹಾಗಂತ ಅವರಿಗೆ ದಿನಕ್ಕೆ 24 ಹೆಚ್ಚಿನ ಸಮಯವೇನೂ ಇರಲ್ಲ. ಆದರೆ ಅವರು ತಮ್ಮ ಸಮಯವನ್ನು ಅತಿ ಅಮೂಲ್ಯವೆಂದು ಪರಿಗಣಿಸಿ ಬಳಸಿರ್ತಾರೆ. ಅದರಲ್ಲಿ ಸ್ವಲ್ಪವೂ ಸಲ್ಲದ ಚಟುವಟಿಕೆಗಳು ನುಸುಳಲು ಸಾಧ್ಯವಾಗದಂತೆ ಜಾಗೃತರಾಗಿರುತ್ತಾರೆ.

ನಮ್ಮ ಪ್ರತಿದಿನವೂ, ದಿನದ ಅನುಕ್ಷಣವೂ ನಮ್ಮಿಂದ ಸಮರ್ಥವಾಗಿ ಬಳಸಲ್ಪಡಬೇಕು. ಅದು ನಾವು ಏರಬೇಕಾದ ಎತ್ತರಕ್ಕೆ ಬಳಸುವ ಏಣಿಯ ಮೆಟ್ಟಿಲಾಗಬೇಕು. ಒಮ್ಮೆ ನಮ್ಮ ಮನಸ್ಸನ್ನು ಈ ಪ್ರಕಾರದ ಚಿಂತನೆಗೆ ಅಣಿಯಾಗಿಸಿಬಿಟ್ಟರೆ ಸಾಕು ಆಮೇಲೆ ಪಕ್ಕಾ ವ್ಯವಹಾರಸ್ಥರಂತೆ ಸಮಯದ ಲೆಕ್ಕಾಚಾರ ಶುರುವಾಗಿಬಿಡುತ್ತೆ. ಸಮಯ ಎಲ್ಲೆಲ್ಲಿ ವ್ಯರ್ಥವಾಗಿ ಅನ್ನೋದು ನಮಗೆ ಢಾಳಾಗಿ ಗೊತ್ತಾಗಿಬಿಡುತ್ತೆ. ಅಪ್ಪಿ, ತಪ್ಪಿ ಯಾಮಾರಿದರೂ ಮನಸ್ಸೇ ನಮ್ಮನ್ನು ತಿವಿಯೋಕೆ ಶುರು ಮಾಡಿ ಬಿಡುತ್ತೆ. ‘ನಿನ್ನ ಟೈಂ ವೇಸ್‌ಟ್ ಆಗ್ತಿದೆ, ಬೇಡ ಈ ಕೆಲಸ. ನಿನ್ನ ಮುಖ್ಯ ಉದ್ದೇಶಕ್ಕೆ ಸಮಯ ವಿನಿಯೋಗಿಸು ಅಂತ’.

ಆಗ ಎಚ್ಚೆತ್ತುಕೊಂಡೆವೋ ಸರಿ, ಇಲ್ಲಾಂದ್ರೆ ಎಚ್ಚರಗೊಳಿಸೋ ಮನಸ್ಸಿನ ಮೇಲೆ ಸೋಮಾರಿತನಕ್ಕೆ, ಕಾಲಹರಣಕ್ಕೆ ಪಕ್ಕಾಗಿರೋ ದೇಹ ಮೇಲುಗೈ ಸಾಧಿಸಿ ಬಿಡುತ್ತದೆ. ಬಹುತೇಕ ಅವಾಂತರಗಳಿಗೆ ಮುಖ್ಯ ಕಾರಣ ಏನಂದ್ರೆ ಕೆಲಸಗಳನ್ನು ಪ್ರಾಮುಖ್ಯತೆ ಆಧಾರದ ಮೇಲೆ ಇರುವುದು, ಆಗ ಏನೋ ಆ ಕ್ಷಣಕ್ಕೆ ತೋಚಿದ್ದನ್ನು ಮಾಡೋದು.

ಮಿಕ್ಕಿದ್ದು ಆ ಮೇಲೆ ಮಾಡಿದ್ರಾಯ್ತು ಬಿಡು ಎಂದು ಮುಂದೂಡ್ತಾ ಹೋಗೋದು ಹಾಗೆ ಮಾಡ್ತಾ ಮಾಡ್ತಾ ನಮಗೆ ನಾವೇ ಜಟಿಲವಾಗುತ್ತಾ ಹೋಗುತ್ತೇವೆ. ಇಡೋ ಪ್ರತಿ ಹೆಜ್ಜೇನೂ ಕಗ್ಗಂಟಾಗ್ತಾ ಹೋಗುತ್ತೆ. ಕೊನೆಗೆ ಇದರ ಫಲಾನುಭವಿಗಳು ಎಲ್ಲರಿಗಿಂತ ಹೆಚ್ಚು ನಾವೆ.

ಅನುಭವಗಳಿಂದ ಪಾಠ ಕಲಿಯೋ ಹಾಗಾಗದೆ ಜಾಣತನದಿಂದ ನನ್ನ ಜೀವನ ಎಲ್ಲರಿಗಿಂತ ಹೆಚ್ಚು ನನಗೇ ಮುಖ್ಯ. ಅದನ್ನು ಎತ್ತರಕ್ಕೆ ಕೊಂಡೊಯ್ಯೋದಕ್ಕೆ ನನಗೆ ಖಂಡಿತ ಹಾಗೂ ನಾನದನ್ನು ಸಾಧಿಸಿಯೇ ತೀರುತ್ತೇನೆ ಎಂದು ಪಣತೊಟ್ಟರೆ ಖಂಡಿತ ಸುತ್ತಲಿನ ಸಮಾಜದಲ್ಲಿ ನಮಗೆ ಅನುಕೂಲಸಿಂಧುವಾದ ಅನೇಕ ಅಂಶಗಳು ದೊರಕುತ್ತವೆ. ಉನ್ನತ ಧ್ಯೇಯವೊಂದರ ಈಡೇರಿಕೆಗೆ ನಮ್ಮ ಸಾಮರ್ಥ್ಯದ ಮೇಲೆ ಹೆಚ್ಚಾಗಿ ಅವಲಂಬಿತರಾಗಬೇಕು. ಆಗ ಗುರಿಯಿಟ್ಟು ಹೊಡೆದ ಬಾಣದಂತೆ ಯೋಜಿತ. ಉದ್ದೇಶವನ್ನು ನಿಸ್ಸಂಶಯವಾಗಿ ಈಡೇರಿಸಬಹುದು.

ನಮ್ಮೊಳಗಿನ ಕತ್ತಲನ್ನು ಹೊಡೆದೋಡಿಸಲು ದೀಪವನ್ನು ಅಲ್ಲಿಯೇ ಹಚ್ಚಬೇಕು. ಅದಿಲ್ಲದೇ ಹೋದಲ್ಲಿ ಹೊರಗಿನ ಅಲಾರಂ ಏನು ತಾನೇ ಮಾಡೀತು? ಒಳಗುಡಿಗೆ ದೀಪ ಹಿಡಿಯುವುದಾ? ಹೊರ ಸದ್ದಿಗೆ ಕಿವಿಯಾಗುವುದಾ? ನಮ್ಮ ಕೈಯಲ್ಲೇ ಇದೆ. ನೆನಪಿರಲಿ, ನಮ್ಮ ಆಯ್ಕೆ ನಮ್ಮನ್ನು ಪ್ರತಿನಿಧಿಸುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close