About Us Advertise with us Be a Reporter E-Paper

ಅಂಕಣಗಳುಯಾತ್ರಾಯಾತ್ರಾ panel 1

ನೀವೇನಾಗುವಿರಿ Tourist or Traveller ..?

ಕೆಲವರು ವಿದೇಶ ತಿಂಗಳಿರುವಾಗಲೇ ತಯಾರಾಗುತ್ತಾರೆ. ಹಾಗೆಂದು ಇವರೇನು ಮೊದಲ ಬಾರಿಗೆ ವಿದೇಶಕ್ಕೆ ಹೊರಟಿರುವುದಿಲ್ಲ. ಅದು ಅವರ ಐವತ್ತನೆಯದೋ, ಅರವತ್ತನೆಯದೋ ವಿದೇಶ ಪ್ರವಾಸವಾಗಿರುತ್ತದೆ. ಆದರೂ ಹೊರಡುವ ಒಂದು ತಿಂಗಳ ಮೊದಲೇ ಅವರು ಸೂಟ್‌ಕೇಸ್ ಕಟ್ಟಿ ಸಿದ್ಧರಾಗಿರುತ್ತಾರೆ. ಟ್ರಾವೆಲ್ ಏಜೆಂಟ್‌ಗೆ ಹತ್ತು ಸಲ ಫೋನ್ ಮಾಡಿ ಎಲ್ಲವೂ ‘ಪಕ್ಕಾ’ ಆಗಿರುವುದನ್ನು ಪದೇಪದೆ ದೃಢಪಡಿಸಿಕೊಳ್ಳುತ್ತಾರೆ.

ಇನ್ನು ಮನೆಯಿಂದ ಹೊರಟು ವಾಪಸ್ ಬರುವವರೆಗೆ ಎಲ್ಲವೂ ಸುಸೂತ್ರವಾಗಿ ಆಗಬೇಕು. ಸ್ವಲ್ಪ ಏರುಪೇರಾದರೂ ಇವರು ಸಿಡಸಿಡ, ಮೂಡ್‌ಔಟ್, ಇವರ ಪಾಲಿಗೆ ಪ್ರವಾಸ ಎಕ್ಕುಟ್ಟಿ ಹೋದಂತೆ. ವಿದೇಶ ಪ್ರವಾಸವೂ ತಮ್ಮ ಅಂಗಿ ಮೇಲಿನ ಇಸ್ತ್ರಿಯಂತೆ ಸ್ವಲ್ಪವೂ ಸುಕ್ಕಾಗಬಾರದು ಎಂದು ನಿರೀಕ್ಷಿಸುತ್ತಾರೆ. ಇವರಿಗೆ ಎಲ್ಲವೂ ಕರಾರುವಾಕ್ಕಾಗಿ ಆಗಬೇಕು. ವಿಮಾನ ತಡವಾದರೆ ಇವರು ದುಸಮುಸ. ಗುಂಪಿನಲ್ಲಿ ಯಾರೇ ಇಬ್ಬರು ವಿಳಂಬವಾಗಿ ಆಗಮಿಸಿದರೆ ಇವರು ಜಗಳಕ್ಕೆ ನಿಲ್ಲುತ್ತಾರೆ. ಆ ದಿನದ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಯಾದರೂ, ಹವಾಮಾನ ವೈಪರೀತ್ಯವಾದವರಂತೆ ಕ್ರುದ್ಧರಾಗುತ್ತಾರೆ. ಇವರ ‘ಫ್ರೆಶರ್ ಕುಕ್ಕರ್’ ಸದಾ ಸಿಡಿಯಲು ಸಿದ್ಧವಾಗಿರುತ್ತದೆ. ಇಂಥವರಿಗೆ ವಿದೇಶ ಪ್ರವಾಸ ಅಂದ್ರೆ ಮನೆಯಲ್ಲೇ ಕುಳಿತು ಮನೆಯ ಒಂದು ಕೋಣೆಯಿಂದ, ಮತ್ತೊಂದು ಕೋಣೆಗೆ ಹೋದಷ್ಟು ಸಲೀಸಾಗಬೇಕು. ಇಂಥವರು ಎಲ್ಲೂ ರಾಜಿಯಾಗಲು ಬಯಸುವು ದಿಲ್ಲ. ಹಾಗೇನಾದರೂ ಆಯಿತೆನ್ನಿ. ವಾಪಸ್ ಬಂದು ಟ್ರಾವೆಲ್ ಏಜೆಂಟ್ ಜತೆ ಜಗಳ ಕಾಯುತ್ತಾರೆ, ಇಲ್ಲವೇ ಜೀವಮಾನವಿಡೀ ಹಂಗಿಸುತ್ತಾರೆ.

ಆದರೆ ನಿಜವಾದ ಪಯಣಿಗನಿಗೆ ತಾನು ಹೊರಡುವುದು ಯಾವಾಗ ಎಂಬುದು ಮಾತ್ರ ಗೊತ್ತಿರುತ್ತದೆ. ತಿರುಗಿ ಬರುವುದು ಗೊತ್ತಿರುವುದಿಲ್ಲ. ಅದು ಗೊತ್ತಿದ್ದರೆ ಆತ ಪಯಣಿಗನೆನಿಸಿಕೊಳ್ಳು ವುದಿಲ್ಲ, ಪ್ರವಾಸಿಗ ಎಂದೆನಿಸಿಕೊಳ್ಳುತ್ತಾನೆ. ಪಯಣಿಗನೇ ಬೇರೆ ಪ್ರವಾಸಿಗನೇ ಬೇರೆ. ಪಯಣಿಗ ತನ್ನ ಹೋಗುತ್ತಿರುತ್ತಾನೆ. ಆತನಿಗೆ ತಾನು ಎಲ್ಲಿ ಹೋಗುತ್ತೇನೆ, ಎಷ್ಟು ಹೊತ್ತಿಗೆ ಹೊರಡುತ್ತೇನೆ, ಎಲ್ಲಿ ತಲುಪುತ್ತೇನೆ, ಎಷ್ಟು ಹೊತ್ತಿಗೆ ತಲುಪುತ್ತೇನೆಯಾವವೂ ಗೊತ್ತಿರುವುದಿಲ್ಲ. ಆತ ಗೊತ್ತು, ಗುರಿ, ದಿಕ್ಕು, ದೆಸೆಯಿಲ್ಲದೇ ಹೋಗುತ್ತಿರುತ್ತಾನೆ. ಹೊರಡುವಾಗಲೇ ಆತ ದಾರಿ ತಪ್ಪಿರುತ್ತಾನೆ ಅಥವಾ ಎಲ್ಲ ದಾರಿಗಳೂ ಆತನಿಗೆ ಆಪ್ತ. ಆತನಿಗೆ ತಲುಪುವ ಗುರಿ ಗಿಂತ ದಾರಿಯಲ್ಲಿ ಕಾಣುವ ದೃಶ್ಯಗಳು, ಅನುಭವಗಳೇ ಮುಖ್ಯ ವಾಗುತ್ತವೆ. ಆತ ಪಥಿಕನಷ್ಟೇ ಅಲ್ಲ, ಆತ ಅನ್ವೇಷಕ. ಅಷ್ಟಕ್ಕೂ ಆತನಿಗೆ ದಾರಿಗಳೇ ಇರಬೇಕಿಂದಿಲ್ಲ. ಮುಂದೆ ಆ ದಿನದ ಕಾರ್ಯಕ್ರಮದ ಪಟ್ಟಿಯೇ ಇರುವುದಿಲ್ಲ. ಅಸಲಿಗೆ ಅವನ ಬಳಿ ‘ರಿಟರ್ನ್ ಟಿಕೆಟ್’ ಸಹ ಇರುವುದಿಲ್ಲ. ತಾನು ವಾಪಸ್ ಯಾವಾಗ ಬರುತ್ತೇನೆಂಬುದನ್ನು ಹೇಳಿರುವುದಿಲ್ಲ.

Tourist don’t know where they have been and Travelers dont know where they are going ಎಂದು ಹೇಳುವುದು ಈ ಕಾರಣಕ್ಕೆ. ಪ್ರವಾಸಿಯಾದವನು ಬೇರೆಯ ವರು (ಗೈಡ್) ತೋರಿಸಿದ್ದನ್ನು ನೋಡುತ್ತಾನೆ. ಆದರೆ ಪಯಣಿಗನಾ ದವನು ತನಗೆ ಬೇಕಾಗಿದ್ದನ್ನು ನೋಡುತ್ತಾನೆ. ದೃಷ್ಟಿಕೋನ ಸೀಮಿತವಾದುದು. ಪಯಣಿಗನಿಗೆ ಹೆಜ್ಜೆ ಹೆಜ್ಜೆಗೂ ಹೊಸಲೋಕ.

ಮ್ಯಾಥ್ಯೂ ಕರ್‌ಸ್ಟೆನ್ ಎಂಬ ಮಹಾಪರ್ಥಿ ಮಿಮಾಮಿ ನಗರ ದಿಂದ ಹೊರಟ. ಆತನಿಗೆ ಎಲ್ಲಿಗೆ ಹೋಗುತ್ತೇನೆಂಬುದೇ ಗೊತ್ತಿರ ಲಿಲ್ಲ. ಆತ ನಡೆದಿದ್ದೇ ದಾರಿ, ಹೋದದ್ದೇ ಊರು, ಯಾವಾಗ ತಿರುಗಿ ಬರುವುದು ಎಂಬ ಕಲ್ಪನೆಯೂ ಇರಲಿಲ್ಲ. ಕರ್‌ಸ್ಟೆನ್ ಅಲ್ಲಿಂದ ಗ್ವಾಟೆಮಾಲ ನಗರಕ್ಕೆ ಬಂದ. ಮನಸೋಇಚ್ಛೆ ಅಲೆ ದಾಡಿದ. ವಾಪಸ್ ಮನೆಗೆ ಹೋಗುವ ಬಗ್ಗೆ ಆತನ ಮುಂದೆ ಯೋಜನೆಗಳೇ ಇರಲಿಲ್ಲ. ಸುಮಾರು ಒಂದೂ ಮುಕ್ಕಾಲು ನಂತರ ಆತ ತಿರುಗಿ ಊರಿಗೆ ಹೋದ.

ಆತನ ಪ್ರಸಿದ್ಧ ಉಪದೇಶವೇನೆಂದರೆ please get lost ಅಂದರೆ, ಪ್ರವಾಸದ ನಿಜವಾದ ಅನುಭವ ಪಡೆದುಕೊಳ್ಳಬೇಕೆಂದರೆ, ವಿದೇಶಗಳಿಗೆ ಹೋದಾಗ ಕಳೆದುಹೋಗಬೇಕು. ಆಗಲೇ ನಿಮಗೆ ಹೊಸ ಅನುಭವವಾಗಲು ಸಾಧ್ಯ. ‘ಗೈಡ್ ಜತೆಗೆ ಪ್ರಯಾಣಿಸುವುದೆಂದರೆ, ಮದುವೆಗೆ ಮುಂಚೆ ಮಧುಚಂದ್ರ ಮುಗಿಸಿದಂತೆ’ ಎಂಬುದು ಕರ್‌ಸ್ಟೆನ್ ಪ್ರಸಿದ್ಧ ಮಾತು.

ಹವಾಮಾನ ವೈಪರೀತ್ಯದಿಂದ ಇಲ್ಲಿ ಇಳಿಯಬೇಕಾದ ವಿಮಾನ ಬೇರೆ ಯಾವುದೋ ಊರಿನಲ್ಲಿ ಇಳಿಯಬೇಕು, ನಿಮ್ಮ ಲಗೇಜ್ ಬೇರೆ ಊರಿಗೆ ಹೋಗಬೇಕು, ಹೊಟೇಲ್ ಬುಕಿಂಗ್ ಕೊನೇ ಕ್ಷಣದಲ್ಲಿ ರದ್ದಾಗಬೇಕು. ಎಟಿಎಂನಲ್ಲಿ ಹಣ ತೆಗೆಯಲು ಆಗಬಾರದು, ..ಇತ್ಯಾದಿ. ಅಂಥ ಸಂದರ್ಭದಲ್ಲಿ, ಅದೂ ವಿದೇಶಿ ನೆಲದಲ್ಲಿ, ಅಪರಿಚಿತರ ಮಧ್ಯದಲ್ಲಿ ಹೇಗೆ ವರ್ತಿಸುತ್ತೀರಿ, ಜೀವಿಸುತ್ತೀರಿ ಎಂಬುದು ಬಹಳ ಮುಖ್ಯ. ಕರ್‌ಸ್ಟೆನ್ ಹೇಳುತ್ತಾನೆ-‘Just take a deep breath and remind yourself that it could be worse’

ಇಷ್ಟೆಲ್ಲ ಆದರೂ ನಿಮಗೆ ಏನೂ ಆಗುವುದಿಲ್ಲ. ನಿಮ್ಮ ಜೀವಕ್ಕೇನೂ ಹಾನಿಯಾಗಿರುವುದಿಲ್ಲ. ಆದರೆ ನೀವು ಮಾತ್ರ ವ್ಯಕ್ತಿಯಾಗಿರುತ್ತೀರಿ. ಎಲ್ಲಿ ಬಿಟ್ಟರೂ ಜಯಿಸಿಕೊಂಡು ಬರುತ್ತೀರಿ. ಆಗ ನಿಮಗೆ ಎಲ್ಲಾ ದೇಶವೂ ಒಂದೇ. ಎಲ್ಲರೂ ಅಪರಿಚಿತರಾದರೇನು, ಕ್ರಮೇಣ ಪರಿಚಿತರಾಗುತ್ತಾ ಹೋಗುತ್ತಾರೆ.

ಅದು ನಿಜವಾದ ಪ್ರವಾಸ. ಎಲ್ಲ ಪೂರ್ವನಿರ್ಧರಿತ ಕಾರ್ಯಕ್ರಮಗಳಂತೆ ಹೋಗಿಬಂದರೆ, ಮದುವೆ ಮನೆಗೆ ಹೋಗಿ ಬಂದಂತಾಗಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಅನುಭವ ಆಗಲಿಕ್ಕಿಲ್ಲ.

ಈ ಮಾತು ಎಲ್ಲ ಸಂದರ್ಭಕ್ಕೂ ಅನ್ವಯ ಆಗಲಿಕ್ಕಿಲ್ಲ. ಆದರೆ ಪ್ರವಾಸಿಗನಾಗುವುದರ ಬದಲು ಪಯಣಿಗನಾಗುವುದರಿಂದ ಕ್ಷಣಕ್ಷಣಕ್ಕೂ ಅನಿರೀಕ್ಷಿತ ಅನುಭವಗಳಿಗೆ ಮುಖಾಮುಖಿಯಾಗ ಬಹುದು. ನಿಮಗೆ ವಯಸ್ಸಾದ ನಂತರ, ಎರಡು ತಿಂಗಳ ಮುನ್ನವೇ ಎಲ್ಲವನ್ನೂ ನಿರ್ಧರಿಸಿ ತೆರಳಬಹುದು. ವಿದೇಶಿ ನೆಲದಲ್ಲಿ, ನೀವು ಯಾವುದಾದರೂ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದರೆ, ಅದರ ಅನುಭವವೇ ಬೇರೆ. ಎಲ್ಲವೂ ಸರಳರೇಖೆ ಎಳೆದಷ್ಟು ಸುಲಭ ಹಾಗೂ ಸಲೀಸಾಗಿ ನಡೆದರೆ, ಅದಕ್ಕೆ ಚಮಕ್ ಇರುವುದಿಲ್ಲ. ಧರಿಸಲು ಎರಡು ಜತೆ ಬಟ್ಟೆ. ಕ್ರೆಡಿಟ್ ಕಾರ್ಡ್, ಕೆಮರಾ, ಮೊಬೈಲ್, ಸ್ಫೋರ್ಟ್ ಷೂ ಒಳಗೊಂಡ ಬ್ಯಾಕ್‌ಪ್ಯಾಕ್ ಇಟ್ಟುಕೊಂಡು ಒಂದು ತಿಂಗಳ ವಿದೇಶಪ್ರವಾಸಕ್ಕೆ ಹೊರಟರೆ ಹೇಗಿರುತ್ತದೆ?

ಅದರಲ್ಲೂ ನೀವು ಕಂಡಿದ್ದೆಲ್ಲವನ್ನೂ ದಾಖಲಿಸಿಕೊಳ್ಳುವ, ನೋಟ್‌ಸ್ ಹಾಗೂ ಕೆಮರಾದಲ್ಲಿ ಕ್ಲಿಕ್ಕಿಸಿಕೊಳ್ಳುವ ಮನೋಭಾವದವರಾದರೆ, ವಾಪಸ್ ಬರುವುದರೊಳಗೆ ಒಂದು ಸುಂದರ ಪುಸ್ತಕಕ್ಕಾಗುವಷ್ಟು ವಸ್ತು, ಸಾಮಗ್ರಿಯನ್ನು ಕೈಗಿಡ ಬಹುದು. ಇದಕ್ಕೆ ನೀವು ಲೇಖಕರೇ ಆಗಬೇಕೆಂದಿಲ್ಲ. ಬೇರೆ ದೇಶ ಗಳಿಗೆ ಹೋದಾಗ ಕಂಡಿದ್ದೆಲ್ಲವನ್ನೂ ನೋಟ್‌ಸ್ ಮಾಡಿಕೊಳ್ಳುವುದು ಒಳ್ಳೆಯ ಅಭ್ಯಾಸ. ಹಾಗೆಯೇ ಕಂಡಿದ್ದೆಲ್ಲವನ್ನೂ ಕೆಮರಾದಲ್ಲಿ ಸೆರೆ ಹಿಡಿದುಕೊಳ್ಳುವುದು ಸಹ. ವಿದೇಶದಿಂದ ವಾಪಸ್ ಬಂದ ನಂತರ ನಮ್ಮದಾಗಿ ಉಳಿಯುವುದು ಅವಷ್ಟೇ.

ನನ್ನ ಸ್ನೇಹಿತರೊಬ್ಬರಿದ್ದಾರೆ, ಅವರು ಕನಿಷ್ಠ ಐವತ್ತು ದೇಶಗಳಿಗೆ ಹೋಗಿರಬಹುದು, ಪ್ರತಿ ದೇಶದಿಂದ ವಾಪಸ್ ಏನಿಲ್ಲವೆಂದರೂ ಮೂರುನಾಲ್ಕು ಸಾವಿರ ಫೋಟೋಗಳನ್ನು ಕೆಮರಾದಲ್ಲಿ ಸೆರೆ ಹಿಡಿದು ತರುತ್ತಾರೆ. ಅವುಗಳಲ್ಲಿ ಸುಮಾರು ಐನೂರು ಫೋಟೋಗಳನ್ನು ಆಯ್ದು ಚೆಂದವಾದ ಅಡಿ ಟಿಪ್ಪಣಿ ಬರೆದು ಫೋಟೋ ಪ್ರಿಂಟ್ ಹಾಕಿಸುವಂತೆ ಹಾಕಿಸಿ ಪುಸ್ತಕ ಮಾಡುತ್ತಾರೆ. ಅದನ್ನು ಯಾರೇ ನೋಡಿದರೂ ಗಮನಿಸದೇ ಹೋಗುವುದಿಲ್ಲ.

ವಿದೇಶ ಪ್ರವಾಸ ಹೋದಾಗ ಬಹಳ ಜನ ಮಾಡುವ ತಪ್ಪೇನೆಂದರೆ, ಬೇರೆಯವರೊಂದಿಗೆ ಮಾತಾಡದಿರುವುದು. ಅಲ್ಲಿನ ವರ ಜತೆ ಮಾತಾಡಲು ಕನಿಷ್ಠ ಇಂಗ್ಲಿಷ್ ಬರಬೇಕು. ಅಲ್ಲದೆ ಅವ ರೊಂದಿಗೆ ಮಾತಾಡುವ ವಿಶ್ವಾಸ ಬೇಕು. ಒಬ್ಬರ ಜತೆ ಒಂದು ತಾಸು ಮಾತಾಡಿದರೆ ಒಂದು ಪುಸ್ತಕವನ್ನು ಓದಿದಂತೆ. ಅನಾಯಾಸ ವಾಗಿ ಅವರಲ್ಲಿರುವ ಜ್ಞಾನ, ಮಾಹಿತಿಯನ್ನು ನಾವು ಎತ್ತಿ ತೆಗೆದುಕೊಳ್ಳಬಹುದು. ಹೀಗಾಗಿ ಬೇರೆಯವರೊಂದಿಗೆ ಮುಕ್ತವಾಗಿ ಬೆರೆಯಬೇಕು. ನಮ್ಮ ಪಾಡಿಗೆ ನಾವು ಸುಮ್ಮನಿದ್ದರೆ ಯಾರೂ ನಮ್ಮ ಬಳಿ ಬಂದು ಮಾತಾಡುವುದಿಲ್ಲ. ನಾವೇ ಮುಂದಾಗಿ ಮಾತಾಡಿಸಿ ದರೆ ಮಾತ್ರ ಬೇರೆಯವರು ತೆರೆದುಕೊಳ್ಳುತ್ತಾರೆ.

ಅಲ್ಲದೆ ನೀವು ಮುಕ್ತವಾಗಿ ಮಾತಾಡುವುದನ್ನು ಯಾರಾದರೂ ಇಷ್ಟಪಡುತ್ತಾರೆ. ಪರಿಚಯ ಆಗುವವರೆಗೆ ಎಲ್ಲರೂ ಅಪರಿಚಿತರೇ. ಪರಿಚಯವನ್ನು ತಿರುಗಿಸುವ ಕಲೆ ನಿಮ್ಮಲ್ಲಿದ್ದರೆ, ನೀವೊಬ್ಬ ಅದ್ಭುತ ಪಯಣಿಗನೆನಿಸಿಕೊಳ್ಳುತ್ತೀರಿ.

ಅಷ್ಟಕ್ಕೂ ಮಾತಿಗೆ ಸೋಲದವರು, ಮರುಳಾಗದವರು ಯಾರೂ ಇಲ್ಲ. ಬೇರೆಯವರ ಅಂತರಂಗ ಪ್ರವೇಶಿಸಲು ಮಾತಿಗಿಂತ ಹತ್ತಿರದ ದಾರಿ ಮತ್ತೊಂದಿಲ್ಲ.

ಒಂದು ಪ್ರವಾಸವನ್ನು ಅದ್ಭುತ ಅನುಭವವಾಗಿಸುವುದು ಹೇಗೆ ಎಂಬ ಬಗ್ಗೆ ಸಿದ್ಧ ಸೂತ್ರಗಳಿಲ್ಲ. ಅದನ್ನು ನೀವೇ ಕಂಡುಕೊಳ್ಳಬೇಕು. ಒಬ್ಬರಿಗೆ ಅನ್ವಯವಾಗುವುದು ಮತ್ತೊಬ್ಬರಿಗೆ ಅನ್ವಯಿಸದೇ ಹೋಗಬಹುದು. ನಿಮಗೆ ಯಾವುದು ಸೂಕ್ತ ಎಂಬುದು ನಿಮಗೆ ಗೊತ್ತಿರುವಷ್ಟು ಚೆನ್ನಾಗಿ ಬೇರೆಯವರಿಗೆ ಗೊತ್ತಿರಲು ಸಾಧ್ಯವಿಲ್ಲ.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close