ವಿಶ್ವವಾಣಿ

ಮೈಯ್ಯ ಕಣಕಣದಲ್ಲೂ ಹುಟ್ಟಿದ ಊರಿನ ಋಣ

ಹೋದವಾರ ಸಮ್ಮೇಳನದ ಧನ್ಯತೆ, ನನ್ನನ್ನು ಮೆರೆಸಲು ಕಾದಿದ್ದವರ ಆಸೆ, ಕನಸುಗಳ ಬಗ್ಗೆ ಬರೆದು ಅವರ ಕಿಂಚಿತ್ ಋಣ ತೀರಿಸಿದ್ದೆ. ಈ ವಾರ ನನಗಾಗಿ ಅವರು ಅನುಭವಿಸಿದ ಹಿಂಸೆ, ಕಿರಿಕಿರಿ, ಮಾನಸಿಕ ಹೊಯ್ದಾಟಗಳ ಬಗ್ಗೆ ಬರೆಯಬೇಕೆನಿಸಿದೆ. ಪಾಪ ನನಗಾಗಿ ಅವರು ಸ್ಮರಿಸದಿದ್ದರೆ ನಾನು ಸ್ವಾರ್ಥಿಯಾಗುತ್ತೇನೆ.

ನಮ್ಮ ಗುರುಗಳಾದ ಬೀಚಿಯವರ ಉಕ್ತಿಗಳು ನನಗೆ ಸರ್ವಕಾಲಕ್ಕೂ ನೆನಪಾಗುವಂಥಹವು. ಅವರು ಹೇಳುತ್ತಿದ್ದ ಮಾತು, ಬರಹಗಳು ಹಾಸ್ಯದ ಹೊದಿಕೆಯಲ್ಲಿ ಮಲಗಿರುವಂಥಹವುಗಳಾದರೂ, ಸ್ವಲ್ಪ ಶಬ್ದವಾದರೂ ಬುದುಗ್ಗನೆ ಎದ್ದು ಕೂರುವಂಥಹವುಗಳಾದರೂ ಕಂಡವರ ಬಗ್ಗೆ ಮಾತಾಡಿಕೊಳ್ಳುವವರು ಎಲ್ಲ ಊರುಗಳಲ್ಲಿ ಎಲ್ಲ ಕಾಲಕ್ಕೂ ಇರುತ್ತಾರೆ, ಇದ್ದಾರೆ, ಇರಬೇಕು ಕೂಡಾ. ಆದರೆ, ಮಾತಾಡಿೊಳ್ಳುವವರಿಗೆ ಹಳ್ಳಿಗಳಲ್ಲಿ ವಿಷಯ ಸಾಲದು, ನಗರಗಳಲ್ಲಿ ಸಮಯ ಸಾಲದು ಎನ್ನುವಂತಿರುತ್ತದೆ ಅಷ್ಟೆ ಎಷ್ಟು ಸತ್ಯಮಾತಲ್ಲವೇ?

ಹಣವಿದ್ದರೆ ನಾವೇ ಕೆಡುತ್ತೇವೆ, ಖಾಲಿ ಇದ್ದರೆ ಇನ್ನೊಬ್ಬರನ್ನು ಆಡಿಕೊಳ್ಳುತ್ತಾ ಅವರನ್ನೂ ಕೆಡಿಸುತ್ತೇವೆ. ಅದಕ್ಕೆ ಹಣ-ಸಮಯ ಎರಡೂ ಒಂದೇ, ಮಂಗಗಳ ಕೈಗೆ ಸಿಗಬಾರದಷ್ಟೆ ಎನ್ನುತ್ತಿದ್ದರು. ನನ್ನನ್ನೇ ತಾಲೂಕಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಮಾಡಬೇಕೆಂಬುದು ಎಸ್.ಬಿ.ಗೊಂಡಬಾಳ್, ಲಿಂಗಾರೆಡ್ಡಿ ಆಲೂರ್, ಪವನ್‌ಕುಮಾರ್ ಎಂಬುವರ ಐದಾರು ವರ್ಷಗಳ ಬಲವಂತ, ಹಂಬಲಿಕೆ, ಪ್ರತಿವರ್ಷ ಅವರು ಮಾರ್ಚ್, ಏಪ್ರಿಲ್ ನಲ್ಲಿ ಬಂದು ಆಗುತ್ತೀರಾ? ಆಗುತ್ತೀರಾ? ಎಂದೇ ಕೇಳುತ್ತಿದ್ದರು. ಕಾರ್ಯಕ್ರಮಗಳಿವೆ, ಮನೆಯಲ್ಲಿ ಮದುವೆಗಳಿವೆ, ಫಾರಿನ್‌ಟ್ರಿಪ್ ಇದೆ ಎಂದೆಲ್ಲಾ ಮುಂದೆ ಹಾಕುತ್ತಲೇ ಇದ್ದೆ. ನನಗಿಂತ ಸಣ್ಣವರು, ಮುಂದಿನ ಹುಡುಗರು, ನನ್ನನ್ನು ಕಾರ್ಯಕ್ರಮಕ್ಕೆ ಕರೆಸಿದವರು ಅಧ್ಯಕ್ಷರಾದರು ನೀವು ಬಿಟ್ಟದ್ದರಿಂದಲೇ ನಮಗೀ ಭಾಗ್ಯ ಸಿಕ್ಕಿತು ಎಂದು ನನ್ನನ್ನು ಸ್ಮರಿಸಿದರು, ಇದರಲ್ಲೇನಿದೆ ಮಹಾ? ಇಷ್ಟು ಸಣ್ಣ ಒಂದು ಕಾರ್ಯಕ್ರಮ, ಮೆರವಣಿಗೆ, ಒಂದೋ, ಎರಡು ದಿನದ ಸಂಭ್ರಮಕ್ಕೆ ಯಾಕೆ ಹೀಗಾಡುತ್ತಾರೆ, ಇಷ್ಟಕ್ಕೇ ಧನ್ಯತೆ ಏಕೆ ಅನುಭವಿಸುತ್ತಾರೋ ಎಂದು ತಿಳಿಯದಂತಾಗುತ್ತಿತ್ತು.

ಹೀಗೆ ಆರು ವರ್ಷ ದಾಟಿಸಿ ನನ್ನ ಪಾಡಿಗೆ ನಾನು ಹಾಸ್ಯಸಂಜೆ ಮಾಡುತ್ತಾ ಕಾಲ ಕಳೆದು ಬಿಟ್ಟೆ. ಊರೂರು, ಬೇರೆ ರಾಜ್ಯಗಳು, ದೇಶಗಳನ್ನು ಗಂಗಾವತಿಯೆಂಬ ನನ್ನ ಹುಟ್ಟೂರು ನನ್ನ ಹೆಸರಿನ ಮುಂದೆ ಮಾತ್ರ ಉಳಿಯಿತು. ಊರಿನ ಹಬ್ಬ, ಊರಿನ ಜಾತ್ರೆ, ಊರಿನ ಸಮಸ್ಯೆ, ಇಲ್ಲಿ ಆಗುತ್ತಿದ್ದ ಬೆಳವಣಿಗೆಗಳು ನನಗೆ ತಿಳಿಯದಂತೆ ನಾನು ಯಾವುದೋ ಊರಲ್ಲೋ, ದೇಶದಲ್ಲೋ, ಕಡೆಗೆ ಬೆಂಗಳೂರುಲ್ಲೋ ಇದ್ದಾಗ ನಡೆದು ಹೋಗುತ್ತಿದ್ದವು. ಹಾಗೆಯೇ ಕೆಲವರು ಸದ್ದಿಲ್ಲದೇ ಈ ಊರಿಗೆ ದುಡಿಯಲು ಬಂದು ಸೇರಿಕೊಂಡವರು ಸಣ್ಣಗೆ ಬಲೀತು ಬಿಟ್ಟಿದ್ದರು. ನಾವು ಸಂಡಾಸಿಗೆ ಕೂರುತ್ತಿದ್ದ ಜಾಗಗಳಲ್ಲಿ ಎದ್ದು ನಿಂತಿದ್ದ ಹೋಟಲ್, ಥೇಟರ್, ಕಾಂಪ್ಲೆಕ್‌ಸ್ಗಳಲ್ಲಿ ಕೆಲಸ ದನ ಮೇಯುತ್ತಿದ್ದ, ಹಂದಿಗಳು ಮಲಗುತ್ತಿದ್ದ ಸ್ಥಳಗಳಲ್ಲಿ ಎದ್ದಿದ್ದ ಫ್ಲಾಟ್‌ಗಳಲ್ಲಿ ಮನೆ ಹೂಡಿದ್ದರು.

ನನ್ನ ಬಾಲ್ಯ, ನನ್ನ ಊರಿನಲ್ಲಿ ನಾನು ಶುರು ಮಾಡಿದ್ದ ಚಟುವಟಿಕೆಗಳ ಅರಿವಿಲ್ಲದ ಕೆಲವು ಜನರು ಈಗ ನಾನು ಸುತ್ತುತ್ತಿರುವವ ಊರುಗಳು, ಕಾಣಿಸಿಕೊಳ್ಳುವ ಟಿ.ವಿ. ಚಾನೆಲ್‌ಗಳು, ಬರೆಯುತ್ತಿರುವ ರಾಜ್ಯಮಟ್ಟದ ಪತ್ರಿಕೆಗಳ ಲೇಖನಗಳ ಆಧಾರದ ಮೇಲೆ ಆತ ಗಂಗಾವತಿಗೆ ಏನು ಮಾಡಿದ್ದಾನೆ? ಎಂಬ ಪ್ರಶ್ನೆಯನ್ನು ಎಲ್ಲರಿಗೂ ಕೇಳುತ್ತಿದ್ದರು. ಊರಿಗೆ ಏನಾದರೂ ಮಾಡಲು ನಾನೇನಾದರೂ ಆರಿಸಿ ಬಂದ ಶಾಸಕನೆ? ಮಂತ್ರಿಗಿರಿ ಹೋಗಲಿ, ಹೊರಹೋಗಿ ಉದ್ದಿಮೆಗಳನ್ನು ಸ್ಥಾಪಿಸಿದ ಇನ್ಪೋಸಿಸ್ ಮುಖ್ಯಸ್ಥರೋ? ವಿಜಯ ಮಲ್ಯನೇ ಅಂಬಾನಿಯೇ? ಹರದನಹಳ್ಳಿ ಬಿಟ್ಟು ಪ್ರಧಾನಿಯಾದ ದೇವೇಗೌಡರೆ? ಕೇವಲ ಪುಡಿಗಾಸು ಸಂಪಾದಿಸಲು ಊರೂರು ತಿರುಗುತ್ತಿದ್ದ ಯಕಶ್ಚಿತ ಪ್ರಾಣಿ ನಾನು!

ಇದರ ಅರಿವಿಲ್ಲದ ಕೆಲವರು ಸಾಹಿತ್ಯ ಪರಿಷತ್ತು ಕರೆದ ಸಭೆಯಲ್ಲಿ ನನ್ನನ್ನು ಸಮ್ಮೇಳನದ ಸರ್ವಾಧ್ಯಕ್ಷನನ್ನು ಮಾಡಲು ಗೊಂಡಬಾಳ್, ಲಿಂಗಾರೆಡ್ಡಿ, ಪವನ್, ಟಿ.ಆಂಜಿನೇಯ, ಕೃಷ್ಣಸಿಂಗ್ ಮುಂತಾದವರು ನನ್ನ ಹೆಸರು ಸೂಚಿಸಿದರೆ ನನ್ನ ಪೂರ್ವಾಪರ ಗೊತ್ತಿರದವರು ಪ್ರಾಣೇಶರಿಗೆ ಅಧ್ಯಕ್ಷಗಿರಿ ಬೇಡ? ಎನ್ನುವ ಹಿನ್ನೆಲೆಯಲ್ಲಿ ಅಂಶಗಳನ್ನು ಮುಂದಿಟ್ಟಿದ್ದರು. ಅವು ನನಗೂ ಸರಿ ಎನಿಸಿದವು. ಅವು ಯಾವೆಂದರೆ ಪ್ರಾಣೇಶ್‌ರು ಯಾವುದೇ ಸ್ನಾತಕೋತ್ತರ ಪದವಿ ಪಡೆದಿಲ್ಲ, ಸಂಶೋಧನೆಗಳನ್ನು ಮಾಡಿಲ್ಲ, ಸಾಹಿತ್ಯವೆಂದರೇನೆಂಬುದೇ ಅವರಿಗೆ ಗೊತ್ತಿಲ್ಲ, ಉತ್ತರ ಕರ್ನಾಟಕವನ್ನು, ಭಾಷೆಯನ್ನು ಹೀಯಾಳಿಸಿದ್ದಾರೆ, ಸೂಳೆಮಗ ಎಂಬ ಬೈಯ್ಗಳನ್ನು ಜಾಗತೀಕರಣಗೊಳಿಸಿದ್ದಾರೆ, ಅವರು ಪುಸ್ತಕಗಳನ್ನು ಬರೆದಿಲ್ಲ, ತಮ್ಮ ಕಾರ್ಯಕ್ರಮಗಳಿಗೆ ಹಣತೆಗೆದುಕೊಂಡು ಜನರನ್ನು ನಗಿಸಿದ್ದಾರೆ (ಹಣಕೊಟ್ಟು ನಗಿಸುವವರೂ ಇದ್ದಾರೆಯೆ?) ಎಂಬ ಪ್ರಶ್ನೆಗಳಿಂದ ಹಿಡಿದು, ಅವರು ಬ್ರಾಹ್ಮಣ ಅದಕ್ಕೆ ಬೇಡ, ಅವರಿಗೆ ಸರಕಾರಿ ನೌಕರಿ ಇಲ್ಲ ಅದಕ್ಕೆ ಎಂದಿದ್ದಾರೆ ಬ್ರಾಹ್ಮಣನಾದದ್ದರಿಂದ ಸರಕಾರಿ ನೌಕರಿ ಇಲ್ಲ ಎಂಬ ಅವರ ಪ್ರಶ್ನೆಗೆ ಅವರೇ ಉತ್ತರ ಕೊಟ್ಟುಕೊಂಡಿದ್ದಾರೆ.

ಹೀಗೆ ತಾಸುಗಳ ಕಾಲ ನಡೆದ ಸಭೆ ವಾಗ್ವಾದಕ್ಕೆ ಕ.ಸಾಪ. ಅಧ್ಯಕ್ಷ ಗೊಂಡಬಾಳರು ತೋಬಾ ತೋಬಾ ಆಗಿ ನಲುಗಿ ಹೋಗಿದ್ದಾರೆ. ಕೆಲವರಂತೂ ನನ್ನನ್ನೇಕೆ ನೀವು ಮಾಡುವುದಿಲ್ಲ ಎಂದು ನೇರವಾಗಿ ಕೇಳಿ ಅಹಮಿಕೆಯ ಪರಾಕಾಷ್ಠೆ ತೋರಿಸಿದ್ದಾರೆ, ನನ್ನನ್ನು ಮಾಡಿ ಎಲ್ಲ ಖರ್ಚು ನಾನೇ ಕೊಡುತ್ತೇನೆ ಎಂದಿದ್ದಾರೆ ಇನ್ನೂ ಕೆಲವರು ಪೋನ್ ಮಾಡಿ

‘ನೀವು ಒಲ್ಲೆ ಎನ್ನಿಸಾರ್, ಮಾಡಿ ಎಂದು ಹೇಳಿ ಸಾರ್’ ಎಂದು ಹತಾಶರಾಗಿ ಗೋಗರೆದಿದ್ದಾರೆ. ಕಡೆಗೆ ಸಾಕಾಗಿ, ಹಣಕೊಟ್ಟು ಪ್ರಾಣೇಶರೇ ಅಧ್ಯಕ್ಷರಾಗಿದ್ದಾರೆ ಎಂದು ತಮ್ಮ ಬುದ್ದಿಯನ್ನು ನನಗೆ ವರ್ಗಾಯಿಸಿದ್ದಾರೆ. ಇದನ್ನೆಲ್ಲ ಕೇಳಿ ಹಾಸ್ಯಸಂಜೆ ಯನ್ನು ಕೇಳಿದಷ್ಟೆ ನಾನು ನಕ್ಕು ನಕ್ಕು ಸುಸ್ತಾದೆ.

ಕೇವಲ ಒಂದು ತಾಲೂಕಿನ ಲಾಭವೇ ಇಲ್ಲದ ಸಾಹಿತ್ಯ ಸಮ್ಮೇಳನ ಅಧ್ಯಕ್ಷಗಿರಿಗೆ ಹಿನ್ನೆಲೆಯಲ್ಲಿ ಇಷ್ಟು ರಾದ್ಧಾಂತಗಳಿರಬೇಕಾದರೆ ಇನ್ನು ಅಖಿಲಭಾರತ ಮಟ್ಟದಲ್ಲಿ ಎಷ್ಟಿರಬೇಡ? ಇದು ಬಿಡಿ, ಎಂ.ಎಲ್.ಎ. ಎಂಪಿ. ಪ್ರಧಾನಿ ಪಟ್ಟಗಳ ಹಿಂದೆ ಎಷ್ಟಿಬೇಡ ಅರ್ಹತೆ ಇಲ್ಲದವರ ಅಧಿಕಾರದ ಅಪೇೆಯೇ ಆ ನಾಡಿನ ಸರ್ವ ಅವನತಿಯ ಮೊದಲು ಮೆಟ್ಟಿಲು ಎನಿಸಿತು. ಅಂತೂ ಯಾರ್ಯಾರು ಎಷ್ಟೆಷ್ಟು ಕಷ್ಟಪಟ್ಟರೋ, ನನಗಾಗಿ ವಿರೋಧ ಎದುರಿಸಿದರೋ, ಅಂತೂ ಅವಿರೋಧವಾಗಿ ನೀವು ಆಯ್ಕೆ ಆದಿರಿ ಸರ್ ಎಂದೇ ನನ್ನ ಒಪ್ಪಿಸಿದರು. ಆ ಮೇಲೆ ಎರಡು ದಿನ ನಡೆದದ್ದು ಇತಿಹಾಸ. ಸಮ್ಮೇಳನ ಅಧ್ಯಕ್ಷರಾಗದಿದ್ದವರು ಎಡನೇ ಸುತ್ತಿಗೆ ಗೋಷ್ಠಿಯ ಅಧ್ಯಕ್ಷತೆಗೆ ಬಡಿದಾಡಿ, ಬೈದಾಡಿದರು.

ಕವಿಗೋಷ್ಠಿಯಿಂದ ಹಿಡಿದು ಎಲ್ಲ ಗೋಷ್ಠಿಗಳು ಎರಡೆರೆಡು ತಾಸು ಮುಂದೆ ಹೋಗಿ ಕೂರಬೇಕಾದ ಈ ನನ್ನ ಅಧ್ಯಕ್ಷಗಿರಿ-ಅಂಡುರಿ ತರಲಾರಂಭಿಸಿತು. ಪ್ರತಿ ಹೊಸ ಗೋಷ್ಠಿಗೂ ಹೊಸಬರು ಸಮಯಾನುಸಾರ ಫ್ರೆಷ್ ಆಗಿ ಉಂಡು, ಮಲಗಿ ಬರುತ್ತಿದ್ದರೂ ನಾನು ಮಾತ್ರ ಅಲ್ಲೇ ಫಿಕ್‌ಸ್ ಆಗಿಬಿಟ್ಟಿದ್ದೆ, ಸ್ವಲ್ಪ ಎದ್ದರೆ ಸಾಕು ‘‘ ಮಾನ್ಯ ಅಧ್ಯಕ್ಷರು ನಮ್ಮ ವಿಚಾರಗಳನ್ನಿಷ್ಟು ಕೇಳಬೇಕು ಎಂಬ ಕೆಂಡಗಣ್ಣಿನ ವಿನಂತಿ, ದೃಷ್ಟಿಯಲ್ಲೇ ಆಜ್ಞೆ. ಹೀಗೆ ಎರಡು ದಿನ ತಲಾ ಹದಿನೆಂಟು ತಾಸಿನಂತೆ ಮೂವತ್ತಾರು ತಾಸು ಕುಳಿತ ದಾಖಲೆ ನನ್ನದಾಯಿತು. ಹಸಿವು, ನೀರಡಿಕೆಗಳೇ ಮರೆತು ಹೋದವು, ಮರೆತ ಮೇಲೆ ಮಲ-ಮೂತ್ರಗಳಿಗಂತೂ ಕೆಲಸವೇ ಇಲ್ಲ.

ಕುಳಿತಲ್ಲಿಯೇ ನನಗೆ ಚೀಟಿಗಳು. ನಮಗೆ ಸನ್ಮಾನ ಮಾಡಿಸಿ, ನಮ್ಮ ಹೆಸರು ಹೇಳಿ, ನಿಮ್ಮನ್ನು ಬೆಳೆಸಿದವರು ನಾವು, ಮೊದಲು ಕರೆಸಿದವರು ನಾವು, ನಿಮ್ಮ ಬಗ್ಗೆ ಮಾತಾಡುತ್ತೇನೆ, ನಿಮ್ಮದೇ ಜೋಕ್ ಹೇಳುತ್ತೇನೆ, ನನಗೊಂದು ಮೊಮೆಂಟೋ ಕೊಡಿಸಿ ಇತ್ಯಾದಿ ಬರಲಾರಂಭಿಸಿದವು. ಇಂಥಹವುಗಳನ್ನು ಎಂದೂ ಕೇಳದ, ಎಂದು ಮಾಡದ ನನಗೆ ಇಂಥಹವುಕ್ಕೆಲ್ಲ ಹಪಹಪಿಸುವವರೂ ಇದ್ದಾರೆಯೆ? ಎನಿಸಿಬಿಟ್ಟಿತು.

ಕ್ರಿಯಾಸಿದ್ದಿ ಸತ್ವೇ ಭವತಿ ಮಹತಾಂ ನೋಪಕರಣೆ ನಮ್ಮಲ್ಲಿ ಸತ್ವವಿದ್ದರೆ, ಜನರು ಹುಡುಕಿಬರುತ್ತಾರೆ. ಕೀರ್ತಿ ಕಾಲಿಗೆ ತೊಡರುತ್ತದೆ. ಯಶಸ್ಸು ಬಾಗಿಲಿಗೆ ಬರುತ್ತದೆ ಎಂಬ ಸತ್ಯದ ಅರಿವೇ ಇಲ್ಲದ ಜನ ಮಾತ್ರ ಇಂಥ ಸಣ್ಣ ಸಣ್ಣ ಆಮಿಷಗಳಿಗೆ ಬಲಿಯಾಗುತ್ತಾರೆ ಎನಿಸಿ ಕನಿಕರವಾಗುತ್ತಿತ್ತು.

‘ಪಕ್ಕದಲ್ಲೇ ಹಾಲುಹಳ್ಳ ಹರಿಯುತಿರಲು, ತೊರೆಯ ನೀರಿಗೆ ಹಾತೊರೆವರು’ ಎಂಬ ನುಡಿಯೇ ನೆನಪಾಗುತ್ತದೆ. ಅಧ್ಯಯನ, ಚಿಂತನ, ಸಮಾಲೋಚನ ವೆಂಬ ಮೂರು ತತ್ವಗಳನ್ನು ಆಧರಿಸಿ ನಡೆಸಿದರೆ ಜಗತ್ತಿನ ಸಕಲಸಂಪತ್ತು ನಿನ್ನ ಬಳಿಗೆ ಕೈ ಬೀಸುತ್ತಾ ಬರುತ್ತದೆ. ಅದನ್ನು ಬಿಟ್ಟು ರಾಜಕೀಯ ಮಾಡಿದರೆ ಇದ್ದ ಮಾನವೇ ಹೋಗುತ್ತದೆ ಎಂಬುದಕ್ಕೆ ನನ್ನೂರಿನ ಸಾಹಿತ್ಯ ಸಮ್ಮೇಳನವೇ ದೊಡ್ಡ ಪಾಠವಾಯಿತು. ಹೆಸರಿಗೆ ಎರಡು ದಿನಗಳಾದರೂ ಕಲಿಯಬೇಕು, ತಿಳಿಯಬೇಕು, ಬೆರೆಯಬೇಕು ಎಂಬುವವನಿಗೆ ಇಂಥ ಸಮ್ಮೇಳನಗಳು ಬಹಳಷ್ಟು ಕಲಿಸುತ್ತದೆ. ಊಟ ಉಪಚಾಗಳು ಯಥೇಚ್ಛವಾಗಿದ್ದವು. ವೇದಿಕೆಯ ಅಲಂಕಾರಗಳು ಕಣ್ಮನ ಸೆಳೆಯುತ್ತಿದ್ದವು. ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ದುಡಿದರು, ಭಾಗವಹಿಸಿ ನಲಿದರು. ಸಮಸ್ಯೆ ಎನಿಸಿದ್ದ ಅಧ್ಯಕ್ಷಗಿರಿ ಪಟ್ಟ ಸುಂದರ ಕನಸಿನಂತೆ ನಡೆದು ಹೋಯಿತು.

ಕೊನೆಯಲ್ಲಿ, ನನ್ನ ಒಂದೇ ವಿನಂತಿಯ ಮೇರೆಗೆ ಖ್ಯಾತ ನಟ ದೊಡ್ಡಣ್ಣ ದೊಡ್ಡತನವನ್ನೆ ತೋರಿದರು. ಗೆಳೆಯ ಟೆನ್ನಿಸ್ ಕೃಷ್ಣ ನಮ್ಮೊಡನೇ ಬೆರೆತು ಹರ್ಷಿಸಿದರು. ಬಿಡುವಿಲ್ಲದ ಬರಹಗಾರ ಶ್ರೀ ವಿಶ್ವೇಶ್ವರ ಭಟ್ಟರು ಉದ್ಘಾಟನೆ ಮಾಡಿ ‘ಇದು ತಾಲ್ಲೂಕು ಸಮ್ಮೇಳನವಲ್ಲ ರಾಜ್ಯ ಮಟ್ಟದ ಸಮ್ಮೇಳನ, ಪ್ರಾಣೇಶ್, ಇಂಥ ಪ್ರೀತಿಯುಳ್ಳ ಜನರ ಮಧ್ಯದಲ್ಲಿ ನೀವು ಈ ಊರಲ್ಲಿ ಹುಟ್ಟಿರುವುದೇ ನಿಮ್ಮ ಪುಣ್ಯ, ಇವರು ಜನರಲ್ಲ ದೇವರುಗಳು, ಸಮ್ಮೇಳನ ಕಾಟಾಚಾರಕ್ಕೆ ನಡೆಯುತ್ತಿಲ್ಲ, ವೈಭೋಗದಿಂದ ನಡೆಯುತ್ತಿದೆ’ ಎಂದು ಮನದುಂಬಿ ನುಡಿದರು. ನಟ ದೊಡ್ಡಣ್ಣನವರಂತೂ ಊರಿನ ಋಣ ತೀರಿಸಿಬಿಟ್ಟಿರಿ ಪ್ರಾಣೇಶ್ ಊರಿನ ಋಣ ತೀರಿಲ್ಲ ಮತ್ತೆ ಮತ್ತೆ ಹುಟ್ಟಿ ಬಂದು ತೀರಿಸಬೇಕಿದೆ ಎಂದು ನುಡಿಯಿತು ಎನ್ನ ಮನ ಮೈಯ್ಯ ಕಣಕಣದಲ್ಲೂ ಹುಟ್ಟಿದ ಊರಿನ ಋಣ ಮತ್ತಷ್ಟು ಹೆಚ್ಚಾಯಿತು.