About Us Advertise with us Be a Reporter E-Paper

ಅಂಕಣಗಳು

ತತ್ತರಗೊಂಡ ಜಿಲ್ಲೆಗೆ ತತ್ಪರತೆಯ ಸೇವೆಯೇ ಎಲ್ಲಕ್ಕಿಂತ ಮುಖ್ಯ

ಕೆ.ಬಿ. ರಮೇಶ ನಾಯಕ

ಕಾವೇರಿ, ಕೊಡಗಿನ ಕಾವೇರಿ, ಕನ್ನಡ ಕುಲನಾರಿ ಎನ್ನುವ ಜನಪ್ರಿಯ ಚಿತ್ರಗೀತೆಯನ್ನು ಕೇಳುತ್ತಿದ್ದರೆ, ಪರದೆ ಮುಂದೆ ನೋಡುತ್ತಿದ್ದರೆ ಅರೆಕ್ಷಣ ಮೈ ರೋಮಾಂಚನಗೊಳ್ಳದೆ ಇರಲಾರದು. ಜಿಲ್ಲೆಯ ರಮಣೀಯ ದೃಶ್ಯ, ಕಾವೇರಿ ನದಿಯ ವಿಹಂಗಮ ನೋಟವನ್ನು ಅದರ  ಮೂಲಕ ಜನರಿಗೆ ಉಣಬಡಿಸಿದ್ದ ‘ಶರಪಂಜರ’ ಚಿತ್ರದ ಹಾಡು ಇಂದಿಗೂ ಮನೆಮಾತಾಗಿದೆ. ಅಂತಹ ಪ್ರಕೃತಿಯ ಸೊಬಗು,ಸೌಂದರ್ಯ,ರಮಣೀಯ ನೋಟವನ್ನು ಮೈದುಂಬಿಕೊಂಡಿದ್ದ ಕೊಡಗು ಈಗ ಈಗ ತತ್ತರವಾಗಿದೆ. ದೇಶದ ಗಡಿಯ ಒಳಗೆ-ಹೊರಗೆ ಶತ್ರುಗಳ ವಿರುದ್ಧ ಹೋರಾಟಕ್ಕೆ ತನ್ನ ಪ್ರಾಣವನ್ನೇ ಅರ್ಪಿಸಲು ದಿನದ ೨೪ ಗಂಟೆ ಕಾರ್ಯ ನಿರ್ವಹಿಸುವ ಕೊಡಗಿನ ಜನರನ್ನು ಕಾಪಾಡಲು ಈಗ ಭಾರತದ ಸೈನಿಕರು ಅಲ್ಲದೇ ಇಡೀ ಕರುನಾಡು ಅವರ ನೆರವಿಗೆ ಸಂಕಲ್ಪ ಮಾಡಿದೆ.

ದೇಶದ ಶತ್ರುಗಳ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕಾಲದಿಂದ ಇಲ್ಲಿಯವರೆಗೂ ಅನೇಕ ಕೊಡವರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ವರುಣ ಮುನಿದು ಕನ್ನಂಬಾಡಿ ಕಟ್ಟೆ ಜಲಾಶಯ ಭರ್ತಿಯಾಗದಿದ್ದಾಗ ಎಲ್ಲರ ಚಿತ್ತ ಹರಿಯುವುದು ಕಾವೇರಿಮಾತೆಯ ಕಡೆಗೆ. ಕಳೆದ ಮೂರು ವರ್ಷಗಳ ಕಾಲ ನಿರಂತರವಾಗಿ ಬರಗಾಲ ಕಾಡಿದ್ದ ಸಂದರ್ಭದಲ್ಲಿ ಹಿಂದಿನ ಜಲ ಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರು ಕಾವೇರಿಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಅದೇ ರೀತಿ ಕರ್ನಾಟಕ-ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ವಿವಾದ ಉಂಟಾದ ಸಂದರ್ಭದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಜನರೊಂದಿಗೆ ಕೊಡವ ನಾಡಿನ ಸಹೋದರ-ಸಹೋದರಿಯರು ಕೈ ಜೋಡಿಸುತ್ತಿದ್ದರು.

ಕಾವೇರಿ, ಕೊಡಗಿನಲ್ಲಿ ಉಗಮವಾದರೂ ಮಡಿಕೇರಿ, ಕೆ.ಆರ್. ನಗರ, ಶ್ರೀರಂಗಪಟ್ಟಣ, ನರಸೀಪುರ, ಕೊಳ್ಳೇಗಾಲ, ಹನೂರು ಮಾರ್ಗವಾಗಿ ಮೆಟ್ಟೂರು ಡ್ಯಾಂಗೆ ಸೇರುತ್ತಿದ್ದಳು. ಮೆಟ್ಟೂರು ಡ್ಯಾಂ ಭರ್ತಿಯಾದ ಬಳಿಕ ನದೀನೀರು ಅಲ್ಲಿರಲೂ ಸಾಧ್ಯವಾಗದೆ ಸಮುದ್ರದ ಪಾಲಾಗುವುದು ಮಾಮೂಲಿ. ರಾಜ್ಯದ ರಾಜಧಾನಿ ಬೆಂಗಳೂರು, ಅರಮನೆ ನಗರಿ ಮೈಸೂರಿಗೆ ಕುಡಿಯುವ ನೀರು ಹಾಗೂ ಹಳೇ ಮೈಸೂರು ಪ್ರಾಂತ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುತ್ತಿದ್ದ ಕೊಡಗು ಈಗ ಜಲಪ್ರಳಯಕ್ಕೆ ಸಿಲುಕಿದೆ.  ಕಳೆದ ಒಂದು ವಾರದಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ  ಈಗ ಜಿಲ್ಲೆ ಸಂಪೂರ್ಣ ಜಲಾವೃತವಾಗಿದೆ.

 ಕೊಡಗಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಜನರು ಸಂಕಷ್ಟಕ್ಕೆ ಸಿಲುಕಿರುವ ಜತೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ರಾಜ್ಯಸರಕಾರ ನಡೆಸಿರುವ ಅಂದಾಜು ನಷ್ಟದ ಸಮೀಕ್ಷೆ ಪ್ರಕಾರ ಇದುವರೆಗೂ ೧೦ಸಾವಿರ ಕೋಟಿ ರು. ಅಷ್ಟು ನಷ್ಟವಾಗಿದೆ. ಒಂದು  ಕಾಲದಲ್ಲೇ ಇಡೀ ಕರ್ನಾಟಕದಲ್ಲಿಯೇ ಶ್ರೀಮಂತ ಜಿಲ್ಲೆ ಎನ್ನಿಸಿಕೊಂಡಿದ್ದ ಕೊಡಗು ಈಗ ಬಡವರ ನಾಡಾಗಿದೆ. ಏಕೆಂದರೆ ಅಲ್ಲಿ ಬೆಟ್ಟಗುಡ್ಡಗಳು ಮಾತ್ರ ಕುಸಿದಿರುವುದು, ರಸ್ತೆ ಸಂಚಾರ ಬಂದ್ ಆಗಿರುವುದು ಮಾತ್ರವಲ್ಲ, ಹಲವಾರು ವರ್ಷಗಳ ಕಾಲದಿಂದ ಆದಾಯ ಮೂಲವಾಗಿದ್ದ ಎಲ್ಲ  ವಾಣಿಜ್ಯ ಬೆಳೆಗಳು ಹಾಳಾಗಿವೆ. ಕಾಫಿ, ಮೆಣಸು, ಶುಂಠಿ, ಏಲಕ್ಕಿ, ಕಿತ್ತಳೆ… ಹೀಗೆ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ -ಸಲು ಜಲಾವೃತಗೊಂಡಿದ್ದು,ಅದನ್ನು ಮತ್ತೆ ರಿಪೇರಿ ಮಾಡುವ ತನಕ ವರ್ಷಗಳೇ ಉರುಳಿದರೂ ಅಚ್ಚರಿಯಿಲ್ಲ.ಸರಕಾರದಿಂದ ರಕ್ಷಣಾ ಕಾರ್ಯಾಚರಣೆ ಸ್ವಲ್ಪ ತಡವಾದರೂ ಈಗ ಚುರುಕುಗೊಂಡಿದೆ. ಅದೇನೇ ಇರಲಿ,  ಈಗ ಆರೋಪ,ಪ್ರತ್ಯಾರೋಪ, ಟೀಕೆ ಮಾಡುತ್ತ ಕೂರುವ ಕಾಲವಲ್ಲ. ಈ ಹಿಂದೆ ನಾವು ಕಂಡು-ಕೇಳದ  ಒಂದು ಜಲಪ್ರಳಯವನ್ನು ಎದುರಿಸಬೇಕಿದೆ. ಬರಗಾಲವೇ ಇರಲಿ, ಮಳೆಗಾಲವೇ ಇರಲೀ ಪ್ರಕೃತಿಯ ಮುಂದೆ ಮಾನವರು ನೆಪಮಾತ್ರ. ಈ ವೇಳೆ ನಾವು ದೇವರ ಮೊರೆ ಹೋಗುವ ಜತೆಗೆ ಮಾನವೀಯ ನೆಲೆಗಟ್ಟಿನಲ್ಲಿ ಕೊಡಗಿನ ಜನರ ನೆರವಿಗೆ ನಿಲ್ಲಬೇಕಾಗಿದೆ. ಅದಕ್ಕೆ ಬೇಕಾದ ಸಂಕಲ್ಪ ತೊಡಬೇಕಾಗಿದೆ.

ಈಗ ಕೊಡಗು ಸುನಾಮಿಯನ್ನು ಮೀರಿಸುವಂತೆ ಜಲಪ್ರಳಯಕ್ಕೆ ಸಿಲುಕಿದೆ. ಈ ಜನರನ್ನು ಕಾಪಾಡಲು ರಾಜ್ಯಸರಕಾರ ಬೇಕಾದ ಕ್ರಮ ಕೈಗೊಂಡಿದೆ. ಭಾರತೀಯ ಸೇನಾಪಡೆಯ ಯೋಧರು ಹಗಲಿರುಳೆನ್ನದೇ ರಕ್ಷಣೆ ಕಾರ್ಯ ಮಾಡುತ್ತಿದ್ದಾರೆ. ಇದುವರೆಗೂ ೨೨೫೦ ಮಂದಿಯನ್ನು  ಕಾಪಾಡಿರುವ ಜತೆಗೆ ಬೆಟ್ಟಗುಡ್ಡಗಳಲ್ಲಿ ಇರುವ ನಿರಾಶ್ರಿತರು, ಸಂಕಷ್ಟಕ್ಕೆ ಸಿಲುಕಿದವರನ್ನು ಜೋಪಾನವಾಗಿ ಕರೆತಂದು ಬಿಡಲಾಗುತ್ತಿದೆ. ಇದೆಲ್ಲದರ ನಡುವೆ ಕೊಡಗಿನ ಜನರಿಗೆ ಇಡೀ ಕರುನಾಡು ಸ್ಪಂದಿಸಿ ಅವರಿಗೆ ಬೇಕಾದ ಎಲ್ಲ ರೀತಿಯ ಬೇಕಾದ ಸೌಲಭ್ಯ ಒದಗಿಸುವ ಕಾರ್ಯಾಚರಣೆ ನಡೆಯುತ್ತಿದೆ. ಕೂಲಿ ಮಾಡುವ ಗಾರೆ ಕೆಲಸದವನಿಂದ  ಹಿಡಿದು ಲಕ್ಷಗಟ್ಟಲೆ ರು. ಆದಾಯ ಬರುವ ಜನರು ತಮ್ಮ ಕೈಲಾದಷ್ಟು ನೆರವು ಕೊಡುತ್ತಿದ್ದಾರೆ. ಜನರ ಅಂತಃಕರಣ ಹೇಗಿದೆ ಎನ್ನುವುದಕ್ಕೆ ಮೈಸೂರು ಜಿಲ್ಲಾಡಳಿತ, ರಾಜ್ಯಸರಕಾರ ಕೊಟ್ಟ ಕರೆಗೆ ಓಗೊಟ್ಟು ವಸ್ತುಗಳನ್ನು ತಲುಪಿಸಿರುವುದೇ ಸಾಕ್ಷಿಯಾಗಿದೆ.

ಮೈಸೂರಿನ ಕೇಂದ್ರೀಯ ರಕ್ಷಣಾ ಆಹಾರ ಸಂಶೋಧನಾಲಯದಿಂದ (ಸಿಎ-ಟಿಆರ್‌ಐ) ಹದಿನೈದು ದಿನಗಳ ಕಾಲ ಕೆಡದ ರೀತಿಯಲ್ಲಿ ಆಹಾರ ಸರಬರಾಜು ಮಾಡಿದ್ದರೆ, ಅನೇಕ ಸಂಘಟನೆಗಳು ಅವಶ್ಯಕವಿರುವ ಬ್ಲಾಂಕೆಟ್, ಕಂಬಳಿ, ಆಹಾರ ಪದಾರ್ಥಗಳು, ಮೇಣದ ಬತ್ತಿ, ಕುಡಿಯುವ ನೀರು, ಟಾರ್ಚ್, ಸ್ವೆಟರ್, ಬಿಸ್ಕೆಟ್, ಮಾತ್ರೆಗಳು ಸೇರಿದಂತೆ ಬಹಳಷ್ಟು ಜೀವನಾವಶ್ಯಕ ವಸ್ತುಗಳನ್ನು ತಂದುಕೊಟ್ಟಿದ್ದಾರೆ. ಕೆಲವರು ಎಷ್ಟು ಉದಾರಿಗಳು ಹಾಗೂ ನೆರವಾಗಬಲ್ಲ ಮನಸ್ಸುಳ್ಳವರು ಎನ್ನುವುದಕ್ಕೆ ಕೆಲವು ವಸ್ತುಗಳನ್ನು ಖರೀದಿಸಿ ತಂದುಕೊಟ್ಟು ಮಾನವೀಯತೆ ಪ್ರದರ್ಶಿಸುತ್ತಿರುವುದೇ ಸಾಕ್ಷಿ.

 ಉಂಡ ಮನೆಯಲ್ಲಿ  ಗಳ ಹಿರಿದಂತೆ ಮಾಡದೆ ಜನರ ನೆರವಿಗೆ ಸ್ಪಂದಿಸುವ ವಿಚಾರದಲ್ಲಿ ಸ್ವಾರ್ಥದ ಆಲೋಚನೆ ಬಿಟ್ಟು ಉದಾರತೆಯನ್ನು ಇನ್ನೂ ಪ್ರದರ್ಶಿಸಬೇಕಾಗಿದೆ. ಹಿರಿಯರು ಹೇಳಿದ ಮಾತಿನಂತೆ ಎಡಕೈಯಲ್ಲಿ ಮಾಡಿದ್ದು ಬಲಗೈಗೆ ಗೊತ್ತಾಗದಂತೆ ನೆರವಾಗಬೇಕಾಗಿದೆ. ಜಲಪ್ರಳಯಕ್ಕೆ ತತ್ತರವಾಗಿರುವ ಜನರ ನೆರವಿಗೆ ಧಾವಿಸುವಾಗ ಮಾನವೀಯ ನೆಲೆಗಟ್ಟಿನಲ್ಲಿ ಯೋಚಿಸಬೇಕು. ತಮ್ಮವರು, ಪರರು ಎಂದು ಭೇದ ಮಾಡಬಾರದು. ಸಂಕಷ್ಟದಲ್ಲಿ ಸಿಲುಕಿರುವ ಜನರೆಲ್ಲರೂ ನಮ್ಮವರೇ-ತಮ್ಮವರೇ ಎನ್ನುವ ಮಾತು ಬರಬೇಕು. ಹಾಗೆಯೇ ನಾವು ಮಾಡುವ ಸಹಾಯದಲ್ಲೂ ಹೆಚ್ಚುಗಾರಿಕೆ ತೋರುವ ಪೈಪೋಟಿ ಬದಿಗೊತ್ತಿ ಸಮಸ್ಯೆ ಹೇಗಾದರೂ ಸರಿ ಪರಿಹಾರವಾಗಬೇಕು ಎಂಬ ಕಡೆ  ಗಮನ ಕೇಂದ್ರೀಕರಿಸಬೇಕಿದೆ. ಈ ತನಕ ನಿರ್ವಂಚನೆಯಿಂದ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡ ಕನ್ನಡಪರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ದಾನಿಗಳು, ಉದ್ಯಮಿಗಳು.. ಹೀಗೆ ಯಾರೇ ಆಗಿದ್ದರೂ ಅವರಿಗೆ ಮರೆಯದೆ ಒಂದು ಕೃತಜ್ಞತೆ ಸಲ್ಲಿಕೆಯಾಗಲಿ.

Tags

Related Articles

Leave a Reply

Your email address will not be published. Required fields are marked *

Language
Close