About Us Advertise with us Be a Reporter E-Paper

ಅಂಕಣಗಳು

ವರ್ಗಾವಣೆಗೆ ಶಿಫಾರಸು ಮಾಡುವುದು ಅವ್ಯವಹಾರವಷ್ಟೇ ಅಲ್ಲ ಅಪರಾಧ…!

-ಉಮಾ ಮಹೇಶ ವೈದ್ಯ, ಧಾರವಾಡ 9449985580

ಇತ್ತೀಚೆಗೆ ಒಬ್ಬ ಪ್ರಭಾವಿ ರಾಜಕಾರಣಿಗಳ ಮನೆಗೆ ಹೋಗುವ ಸಂದರ್ಭ ಬಂದಿತ್ತು. ಸಮಯದಲ್ಲಿಯೇ ಹೋಗಿದ್ದರಿಂದ ಯಾವುದೇ ಸಾರ್ವಜನಿಕರು ಇರಲಿಕ್ಕಿಲ್ಲವೆಂದು ಭಾವಿಸಿದ್ದೆ. ಆದರೆ ಅಚ್ಚರಿ ಎನ್ನುವಂತೆ, ಜಿಲ್ಲಾಧಿಕಾರಿಗಳೊನ್ನೊಳಗೊಂಡು, ಪಿಎಸ್‌ಐ ವರೆಗಿನ ಅನೇಕ ಹುದ್ದೆಯ ಸರಕಾರಿ ಅಧಿಕಾರಿಗಳು ಕೈಯಲ್ಲಿ ಪುಷ್ಪಗುಚ್ಛವನ್ನು ಹಿಡಿದುಕೊಂಡು, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿಂತ ಭಕ್ತರಂತೆ ಸಾಲಾಗಿ ನಿಂತುಕೊಂಡಿದ್ದರು.

ಒಳಗಿನ ಕೋಣೆಯಿಂದ ಬುಲಾವು ಬಂದ ತಕ್ಷಣ, ಸಾಲಾಗಿ ಆಜ್ಞಾಪಾಲಕರಂತೆ ಆ ಪ್ರಭಾವಿ ರಾಜಕಾರಣಿ ಮುಂದೆ ವಿನಮ್ರವಾಗಿ ಕೈಜೋಡಿಸಿ, ಸಲ್ಯೂಟ ಹೊಡೆದು ಕೈಯಲ್ಲಿದ್ದ ಹೂಗುಚ್ಛವನ್ನು ನೀಡಿ, ತಮ್ಮ ವರ್ಗಾವಣೆಗೆ ದಯವಿಟ್ಟು ಶಿಫಾರಸು ಮಾಡಲು ಆಪ್ತ ಕಾರ್ಯದರ್ಶಿಯಿಂದ ಶಿಫಾರಸು ಪತ್ರ (ಮಿನಿಟ್ಸ) ಪಡೆದು, ದೇವರ ಪ್ರಸಾದವೇ ಸಿಕ್ಕಷ್ಟು ಪುನೀತ ಭಾವದಿಂದ ಹೊರ ಬರುತ್ತಿದ್ದರು. ಜೇಬು ಹಗುರವಾದ ವಿಷಾದ ಭಾವ ಒಂದೆಡೆ ಇದ್ದರೆ, ಆಯಕಟ್ಟಿನ ಸ್ಥಳಕ್ಕೆ ವರ್ಗಾವಣೆ ದೊರೆಯುವ ಹುಮಸ್ಸು ಇನ್ನೊಂದೆಡೆ ಅವರ ಮುಖ ಲ್ಲಿ ಕಂಡುಬರುತ್ತಿದ್ದವು. ಇದನ್ನೆಲ್ಲಾ ಗಮನಿಸುತ್ತಿದ್ದಾಗ ಕಂಡ ಬಂದ ಅಂಶವೆಂದರೆ, ವರ್ಗಾವಣೆ ಬಯಸಿ ಬರುವ ಸರಕಾರಿ ಅಧಿಕಾರಿಗಳು ಹಾಗೂ ಸರಕಾರಿ ನೌಕರರು ಈ ಮಿನಿಟ್ಸ ಎನ್ನುವ ವಿಟ್ಯಾಮಿನ್ ಇಲ್ಲದೇ ತಮ್ಮ ಕೆಲಸ ಎಂಬ ಅನಿವಾರ್ಯ ಮನೋಸ್ಥಿತಿ ತಲುಪಿದ್ದಾರೆ ಎಂದು.

ಸರಕಾರದ ಎಲ್ಲ ಇಲಾಖೆಗಳಲ್ಲಿ, ನೇಮಕಾತಿಗೆ ಪ್ರತ್ಯೇಕವಾಗಿರುವ ನಿಯಮಾವಳಿಗಳಂತೆ ವರ್ಗಾವಣೆಗೂ ಕೂಡಾ ಪ್ರತ್ಯೇಕ ನೀತಿ ನಿಯಮಗಳನ್ನು ರೂಪಿಸಲಾಗಿರುತ್ತದೆ. ಪ್ರತಿ ವರ್ಷ ಕೇವಲ ಪ್ರತಿ ಶತ 4-5 ರಷ್ಟು ಮಾತ್ರ ವರ್ಗಾವಣೆ ಮಾಡಲು ಅವಕಾಶವಿದೆ ಎಂದಾಗ, ಇಲಾಖೆ ಮುಖ್ಯಸ್ಥರು, ಸಂಬಂಧಿಸಿದ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಸಚಿವರು ಆ ಸೀಮಿತ ಅವಕಾಶದಲ್ಲಿ ನೌಕರರನ್ನು ವರ್ಗಾವಣೆ ಮಾಡಲು ಮುಂದಾದಾಗ, ಸಹಜವಾಗಿ ಅಧಿಕಾರಿಗಳು ಹಾಗೂ ನೌಕರರ ನಡುವೆ ಪೈಪೋಟಿ ಆಗುತ್ತದೆ. ಪ್ರತಿಯೊಬ್ಬ ನೌಕರರ, ಅಧಿಕಾರಿಗಳ ವರ್ಗಾವಣೆ ಅರ್ಜಿಯನ್ನು ಪರಿಗಣಿಸುವಾಗ, ವರ್ಗಾವಣಾ ಸಮಿತಿ ಮೊದಲು ಪರಿಗಣಿಸುವದೇ ಆ ವರ್ಗಾವಣಾ ಅರ್ಜಿಯೊಂದಿಗೆ ಲಗತ್ತಿಸಿರುವ ರಾಜಕಾರಣಿಗಳ ಟಿಪ್ಪಣಿಗಳನ್ನು. ಹಾಲಿ ಶಾಸಕರು, ಸಚಿವರು ಹಾಗೂ ಮುಖ್ಯವಾಗಿ ವರ್ಗಾವಣೆ ಬಯಸಿದ ಕ್ಷೇತ್ರದ ಜನಪ್ರತಿನಿಧಿಯ ಅದರಲ್ಲೂ ಆಡಳಿತ ಪಕ್ಷದ ಶಾಸಕರ ಟಿಪ್ಪಣಿಗಳು ಆ ವರ್ಗಾವಣೆ ಅರ್ಜಿಯ ತೂಕವನ್ನು ಹೆಚ್ಚಿಸಿ, ವರ್ಗಾವಣಾ ಸಮಿತಿಗೆ ಆ ಅರ್ಜಿಯನ್ನು ಪುರಸ್ಕರಿಸುವ ಅನಿವಾರ್ಯ ಸೃಷ್ಟಿಸುತ್ತವೆ.

ಇನ್ನುಳಿದಂತೆ ವರ್ಗಾವಣೆ ಅವಧಿಯನ್ನು ಹೊರತು ಪಡಿಸಿ, ಬಯಸಿದಾಗ ಮುಖ್ಯಮಂತ್ರಿಗಳ ಅನುಮೋದನೆ ಕಡ್ಡಾಯ. ಆಗ ಮುಖ್ಯಮಂತ್ರಿಗಳನ್ನು ಮುಖತಃ ಎಂದೂ ನೋಡದ ಅಧಿಕಾರಿಗಳಿಗೆ, ನೌಕರರಿಗೆ ಅವರಿಂದ ಶಿಫಾರಸು, ಅನುಮೋದನೆ ಪಡೆಯುವುದು ಗಗನ ಕುಸುಮವೇ ಸರಿ. ಆಗ ಮತ್ತೆ ಅವರು ಮೊರೆ ಹೋಗುವುದು ರಾಜಕೀಯ ನಾಯಕರನ್ನು. ಅಧಿಕಾರಿಗಳು, ನೌಕರರು ತಮ್ಮ ಹುದ್ದೆಗೆ ಇರುವ ಗೌರವ , ಮಾನ, ಮರ್ಯಾದೆಯನ್ನು ಬದಿಗಿಟ್ಟು ಈ ಮಿನಿಟ್ಸಗಳನ್ನು ಪಡೆಯಲು ಹರಸಾಹಸ ಮಾಡುತ್ತಾರೆ. ಯಾವುದೇ ಬೆಲೆ ಕೊಟ್ಟು ಟಿಪ್ಪಣಿಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತುಕೊಂಡಿರುತ್ತಾರೆ. ಇವರೆಲ್ಲಾ ಸೇರಿ ತಡೆ ಅಧಿನಿಯಮದಡಿ ಅಪರಾಧವೆಸಗುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಏಳುತ್ತದೆ.

ಇತ್ತೀಚೆಗೆ ಭ್ರಷ್ಟಾಚಾರ ತಡೆ ಅಧಿನಿಯಮದ ಎಲ್ಲ ಕಲಂಗಳನ್ನು ಕೇಂದ್ರ ಸರಕಾರ ತಿದ್ದುಪಡಿ ಮಾಡಿ, ಹಿಂದಿನ ಕಾನೂನಿನಲ್ಲಿಯ ಅನೇಕ ಶಬ್ದಗಳನ್ನು ತಗೆದು ಹಾಕಿ, ‘ಅನುಚಿತ ಲಾಭದ ಉದ್ದೇಶದಿಂದ ಅನುಚಿತ ಅಥವಾ ಅಪ್ರಾಮಾಣಿಕ ಸಾರ್ವಜನಿಕ ಕರ್ತವ್ಯ ನಿರ್ವಹಣೆಯನ್ನು ಮಾಡುವ ಅಥವಾ ಸರಿಯಾದ ಕ್ರಮದಲ್ಲಿ ಮಾಡದೇ ಇರುವ ಕೃತ್ಯ’ ಎನ್ನುವ ಹೊಸ ವ್ಯಾಖ್ಯಾನಗಳನ್ನು ಸೇರಿಸಿ ಹೊಸೆದ ಹೊಸ ಅಪರಾಧಿಕ ವ್ಯಾಖ್ಯಾನಗಳು ಇನ್ನು ಮುಂದೆ ರಾಜಕಾರಣಿಯಾಗಲಿ, ಅಧಿಕಾರಿಯಾಗಲಿ ಅಥವಾ ಯಾವುದೇ ಪ್ರಭಾವಿ ವ್ಯಕ್ತಿಯಾಗಲಿ ತಮ್ಮ ವೈಯಕ್ತಿಕ ಲಾಭಗಳಿಗೆ ಸರಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲು, ಅವರಿಗೆ ಮಿನಿಟ್ಸ ನೀಡಿ, ಆ ಮೂಲಕ ವರ್ಗಾವಣೆ ಮಾಡಿಸಿಕೊಂಡು ಬಂದರೆ ಈ ಅಧಿನಿಯಮದಡಿ ಕಾನೂನು ಕ್ರಮಕ್ಕೆ ಪಾತ್ರರಾಗುತ್ತಾರೆ.

ಶಾಸಕರಿಗೆ, ಪ್ರಭಾವಿ ರಾಜಕಾರಿಣಿಗಳಿಗೆ ತಮ್ಮ ಕ್ಷೇತ್ರದಲ್ಲಿ ಸರಕಾರದ ಯೋಜನೆಗಳನ್ನು ಪರಿಣಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂಬ ಹಿರಿದಾಸೆಯಿಂದ, ತಾವೇ ಸ್ವಯಂ ಸ್ಫೂರ್ತಿಯಿಂದ ಇಂಥದೇ ಅಧಿಕಾರಿ ಅಥವಾ ನೌಕರರನ್ನು ತಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡಿ ಎಂದು ವಿನಂತಿಸಿಕೊಳ್ಳುವುದು ಯಾವುದೇ ಶಾಸನಾತ್ಮಕ ಕರ್ತವ್ಯದಡಿ ಬರುವುದಿಲ್ಲ. ಸದ್ಯ ಇರುವ ಯಾವುದೇ ಕಾನೂನಿನಡಿ ಈ ರೀತಿಯಾಗಿ ವರ್ಗಾವಣೆಗೆ ಮಿನಿಟ್ಸ ಕೊಡಲು ಅವರಿಗೆ ಅಧಿಕಾರ ನೀಡಿದ ಯಾವುದೇ ಉಪಬಂಧಗಳಿಲ್ಲ. ಆದರೆ, ಸರಕಾರಿ ನೌಕರರು ತಮ್ಮ ವರ್ಗಾವಣೆಗೆ ಯಾವುದೇ ರಾಜಕೀಯ ಅಥವಾ ರಾಜಕೀಯೇತರ ಶಿಫಾರಸು ತಂದರೆ ಅಥವಾ ಬಳಸಿಕೊಂಡರೆ ಅದನ್ನು ಗಂಭೀರವಾದ ದುರ್ವರ್ತನೆ ಎಂದು ಪರಿಗಣಿಸಲಾಗುವುದು ಎಂದು ಸರಕಾರದ ಸುತ್ತೋಲೆಗಳು ಇವೆ. ಅಂದರೆ ಇವು ಪರೋಕ್ಷವಾಗಿ ರಾಜಕಾರಣಿಗಳ ಮಿನಿಟ್ಸ ನೀಡುವಿಕೆಯನ್ನು ಹಾಗೂ ಪ್ರಭಾವ ಬಳಸುವಿಕೆಯನ್ನು . ಈ ರೀತಿಯ ನಿಷೇಧಿತ ಕೃತ್ಯವನ್ನು ಎಸಗುವುದು ಹಾಗೂ ಎಸಗುವಂತೆ ಪ್ರೇರೇಪಿಸುವುದು ಕಾನೂನಿನಡಿ ಅಪರಾಧಿಕ ಕೃತ್ಯಗಳಾಗುತ್ತವೆ.

ಅಂತಹುದರಲ್ಲಿ ರಾಜಕಾರಣಿಗಳು ಅನುಚಿತ ಲಾಭವನ್ನು ಪಡೆದು ಟಿಪ್ಪಣಿ ನೀಡಿದರೆ, ಅದು ವರ್ಗಾವಣಾ ಸಮಿತಿಯಲ್ಲಿಯ ಅಧಿಕಾರಿಗಳನ್ನು ತಮ್ಮ ಕರ್ತವ್ಯವನ್ನು ವರ್ಗಾವಣಾ ನೀತಿಯಂತೆ ನಿರ್ವಹಿಸಲು ನಿರ್ಬಂಧಿಸಿದರೆ, ಅದು ಭ್ರಷ್ಟಾಚಾರ ತಡೆ ಅಧಿನಿಯಮದ ಕಲಂ 7 (ಎ), ಅಡಿ ನಿಶ್ಚಿತವಾಗಿ ಶಿಕ್ಷಾರ್ಹ ಅಪರಾಧವಾಗುತ್ತದೆ.

ಅದೇ ರೀತಿ ಒಂದು ವೇಳೆ, ಆ ಪ್ರಭಾವಿ ರಾಜಕಾರಣಿ, ಶಾಸಕರು, ಸಚಿವರು ಅಧಿಕಾರಿಗಳಿಂದ/ನೌಕರರಿಂದ ಯಾವುದೇ ಪ್ರತಿಫಲ ಪಡೆಯದೇ, ವರ್ಗಾವಣೆಗೆ ಮಿನಿಟ್ಸ ನೀಡಿ, ಮುಂದೆ ವರ್ಗಾವಣೆ ಆದ ನಂತರ ಆ ಅಧಿಕಾರಿಗಳಿಂದ ಅಥವಾ ನೌಕರರಿಂದ ಅದನ್ನು ನಿರೀಕ್ಷಿಸುವುದೂ ತಪ್ಪು. ಹಾಗೆ ಮುಂದೆ ತಮಗೆ ಅನುಕೂಲವಾಗಲೆಂದು, ಅವರಿಂದ ಅನುಚಿತ ಕರ್ತವ್ಯ ಅಥವಾ ಕರ್ತವ್ಯದ ಲೋಪದ ಮೂಲಕ ಅಕ್ರಮ ಲಾಭವನ್ನು ಪಡೆಯುವ ದುರುದ್ದೇಶದಿಂದ ನೀಡುವ ಮಿನಿಟ್ಸ, ಆ ರಾಜಕಾರಣಿಗೆ ಬಂದೀಖಾನೆಯ ದಾರಿಯನ್ನು ತೋರಿಸುತ್ತದೆ. ಏಕೆಂದರೆ ಈಗ ತಿದ್ದುಪಡಿಗೊಂಡ ಭ್ರಷ್ಟಾಚಾರ ತಡೆ ಅಧಿನಿಯಮದ ಕಲಂ 7(ಸಿ) ಸ್ಪಷ್ಟವಾಗಿ ಮುಂದೊಂದು ದಿನ ಅನುಚಿತ ಸೇವೆ ಅಥವಾ ಅಕ್ರಮ ಲಾಭ ಪಡೆಯಬೇಕೆಂಬ ದುರುದ್ದೇಶದಿಂದ ಶಿಫಾರಸು ಪತ್ರಗಳನ್ನು ನೀಡುವುದು ಕೂಡಾ ಅಪರಾಧಿಕ ಕೃತ್ಯವಾಗುತ್ತದೆ.

ಇದನ್ನು ಉದಾಹರಣೆ ಸಮೇತ ಅರ್ಥ ಮಾಡಿಕೊಳ್ಳಬೇಕೆಂದರೆ, ಒಬ್ಬ ಶಾಸಕರು ತಮ್ಮೂರಿನ ಪೊಲೀಸ ಠಾಣೆಗೆ ಒಬ್ಬ ಸಬ್ ಇನ್ಸಪೆಕ್ಟರರನ್ನು ಮಿನಿಟ್ಸ ನೀಡಿ ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ ಎಂದುಕೊಳ್ಳೋಣ. ಕೆಲ ದಿನಗಳ ನಂತರ ಆ ಸಬ್ ಇನ್ಸಪೆಕ್ಟರ, ಆ ಶಾಸಕರ ಅಥವಾ ಅವರ ಹಿಂಬಾಲಕರು ತೊಡಗಿಕೊಂಡಿರುವ ಕೆಲವು ಅಕ್ರಮ ಕೃತ್ಯಗಳಿಗೆ ನೀಡಿದರೆ, ತಕ್ಷಣವೇ ಶಾಸಕರೂ, ಸಬ್ ಇನ್ಸಪೆಕ್ಟರ ಕೂಡಾ ಈ ಕಲಂ 7(ಸಿ) ಅಡಿ ಅಪರಾಧವೆಸಗಿ ಶಿಕ್ಷೆಗೆ ಅರ್ಹರಾಗುತ್ತಾರೆ. ಒಂದು ವೇಳೆ ಸುದ್ದಿ ವಾಹಿನಿಗಳು ನಡೆಸುವ ‘ಸ್ಟಿಂಗ ಆಪರೇಷನ್’ನಲ್ಲಿ, ನೌಕರರು, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅಥವಾ ಅವರ ಹಿಂಬಾಲಕರು ಕೂಡಿ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಕೈಗೂಡಿಸಿದ್ದರೆ, ಈ ನೌಕರರು, ಅಧಿಕಾರಿಗಳ ವರ್ಗಾವಣೆಯಲ್ಲಿ ಈ ಮಿನಿಟ್ಸಗಳ ಮೇಲಾಟ ಏನಾದರೂ ಕಂಡುಬಂದರೆ ತಕ್ಷಣ ಇವರ ವಿರುದ್ಧ ಭ್ರಷ್ಟಾಚಾರ ಅಧಿನಿಯಮದಡಿ ಪ್ರಕರಣ ದಾಖಲಿಸಬಹುದು. ಈ ಅಪರಾಧಗಳನ್ನು ಸಾಬೀತುಪಡಿಸಲು ಈ ರಾಜಕಾರಣಿಗಳು ನೀಡುವ ಮಿನಿಟ್ಸಗಳೇ ಪ್ರಮುಖ ದಾಖಲು ಸಾಕ್ಷ್ಯಗಳಾಗಿ ಮಾರ್ಪಾಡಾಗುತ್ತವೆ ಎನ್ನುವುದೇ ಸಂದರ್ಭದ ವ್ಯಂಗ್ಯ.

ಚುನಾವಣಾ ಸಮಯದಲ್ಲಿ , ಕೃಪಾಪೋಷಿತ ನೌಕರರ ವರ್ಗ ತಮ್ಮ ಋಣ ತೀರಿಸಲು ಮಿನಿಟ್‌ಸ್ ನೀಡಿದ ಶಾಸಕರು ಅಥವಾ ರಾಜಕಾರಣಿಯ ಪರವಾಗಿ ಪಕ್ಷಪಾತದಿಂದ ಕೆಲಸ ನಿರ್ವಹಿಸಿದರೆ ಅದು ಸಹ, ಈ ಭ್ರಷ್ಟಾಚಾರ ತಡೆ ಅಧಿನಿಯಮದ ಅಡಿ ಅಪರಾಧವಾಗುತ್ತದೆ ಎಂಬುದನ್ನು ಮರೆಯಬಾರದು.

ಇನ್ನೊಂದು ಮುಖ್ಯ ಅಂಶವೆಂದರೆ, ತಿದ್ದುಪಡಿಯಾದ ಭ್ರಷ್ಟಾಚಾರ ಅಧಿನಿಯಮದಡಿ ಕಲಂ 8 ಈ ವರ್ಗಾವಣೆ ದಂಧೆಯನ್ನೇ ತಮ್ಮ ಎಲ್ಲ ವೈಭೋಗಗಳಿಗೆ ದಾರಿ ಮಾಡಿಕೊಂಡಿರುವ ಏಜಂಟರುಗಳಿಗೆ ಸಿಂಹಸ್ವಪ್ನವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ: ‘ಯಾವುದೇ ವ್ಯಕ್ತಿ ಅಥವಾ ಸಾರ್ವಜನಿಕ ನೌಕರ, ತನಗೆ ಯಾವುದೋ ಒಂದು ಅನುಚಿತ ಲಾಭ ನೀಡುವ ಅಥವಾ ನೀಡುವಿಕೆ ಬಗ್ಗೆ ವಚನದ ಮೂಲಕ ಇನ್ನೊಬ್ಬ ಸಾರ್ವಜನಿಕ ನೌಕರನಿಗೆ ಆತನ ಸಾರ್ವಜನಿಕ ಕರ್ತವ್ಯವನ್ನು ಅನುಚಿತವಾಗಿ ನಿರ್ವಹಿಸುವಂತೆ ಒತ್ತಾಯ, ಪ್ರಲೋಭನೆ ಇತ್ಯಾದಿ ನೀಡುವುದು ಶಿಕ್ಷಾರ್ಹ ಅಪರಾಧ’. ಇದರಿಂದ ತನಗೆ , ಸಚಿವರು ಗೊತ್ತು, ವಿಧಾನ ಸೌಧದಲ್ಲಿ ಅಧಿಕಾರಿಗಳು ಗೊತ್ತು, ಇಷ್ಟು ಹಣ ಕೊಟ್ಟರೆ ಆ ಸಚಿವರು, ಶಾಸಕರಿಗೆ ಅಥವಾ ಅಧಿಕಾರಿಗಳಿಗೆ ಹೇಳಿ ಅಥವಾ ಕೊಟ್ಟು ನಿಮ್ಮ ವರ್ಗಾವಣೆ ಮಾಡಿಸಿಕೊಡುತ್ತೇನೆಂದು ಹೇಳುವುದು ಇನ್ನು ಕೇವಲ ಮೋಸದ ಅಪರಾಧಗಳಲ್ಲ, ಭ್ರಷ್ಟಾಚಾರ ತಡೆ ನಿಯಮದಡಿ ದಾಖಲಾಗುವ ಅಪರಾಧಗಳಾಗುತ್ತದೆ.

ಸರಕಾರಿ ಕಾಮಗಾರಿಗಳನ್ನು ಇಂಥದೇ ಗುತ್ತಿಗೆದಾರನಿಗೆ ನೀಡಬೇಕು ಎಂದು ಶಿಫಾರಸು ಮಾಡಿ ಕಳಪೆ ಕಾಮಗಾರಿ ಮಾಡಲು ಅವಕಾಶ ನೀಡಿದ ರಾಜಕಾರಣಿಗಳು, ಗುತ್ತಿಗೆದಾರರು ಕೂಡಾ ಈಗ ಈ ಕಾಯಿದೆ ಅಡಿ ಅಪರಾಧಿಗಳಾಗುತ್ತಾರೆ. ಇನ್ನೂ ಸ್ಪಷ್ಟವಾಗಿ ನಿಮ್ಮ ಮನೆಯ ಮುಂದಿನ ರಸ್ತೆ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಕಳಪೆಯಾಗಿ ಅದನ್ನು ಮಾಡಿದ್ದರೂ, ಅದು ಸರಿಯಾಗಿದೆ ಎಂದು ನಿಮ್ಮ ಭಾಗದ ಜನಪ್ರತಿನಿಧಿಗಳು ಹೇಳಿದರೆ ಅಥವಾ ಆತನ ಗುತ್ತಿಗೆ ಹಣವನ್ನು ಕೊಡಿಸುವಲ್ಲಿ ಪಾತ್ರವಹಿಸಿದ್ದು ಕಂಡು ಬಂದರೆ, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು.

ಈ ಜನಪ್ರತಿನಿಧಿಗಳ, ರಾಜಕಾರಣಿಗಳ ಮಿನಿಟ್ಸಗಾಗಿ ಕಾಯ್ದು ನಿಲ್ಲುವ ಅಧಿಕಾರಿಗಳು ಹಾಗೂ ನೌಕರರು, ಜಾಣ್ಮೆಯಲ್ಲಿ, ಆಡಳಿತ ನಡೆಸುವ ಕೌಶಲದಲ್ಲಿ ಎಷ್ಟೋ ಪಾಲು ಅವರಿಗಿಂತ ಸಿದ್ಧಹಸ್ತರು, ಕಾನೂನು ಬಲ್ಲವರು. ಆದರೆ ತಾವು ಬಯಸಿದ ಹುದ್ದೆ ಗಿಟ್ಟಿಸಿಕೊಳ್ಳಲು, ಆಯಕಟ್ಟಿನ ಸ್ಥಳಕ್ಕೆ ಹೋಗಿ ಲೂಟಿಮಾಡುವ ಹುನ್ನಾರದಲ್ಲಿ, ತಮ್ಮ ಎಲ್ಲ ಸ್ವಾಭಿಮಾನ, ಸಮಾಜ ಸೇವೆ ಬಲಿ ಕೊಟ್ಟು, ವಚನಭ್ರಷ್ಟರಾಗುತ್ತಿದ್ದಾರೆ. ಅಧಿಕಾರಶಾಹಿ ಈಗ ಖಂಡಿತ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ತಮ್ಮ ವೈಯಕ್ತಿಕ ಅನಾನುಕೂಲತೆಗೆ ಅಥವಾ ಲಾಭಕ್ಕೆ ಅಥವಾ ಪ್ರತಿಷ್ಠೆಗೆೆ ವರ್ಗಾವಣೆ ಬಯಸಿ ಅರ್ಜಿಯನ್ನು ಸಲ್ಲಿಸಿದಾಗ, ಅದನ್ನು ಸರಕಾರ ರೂಪಿಸಿರುವ ನೀತಿ ನಿಯಮಗಳನುಸಾರ ಇರುವಂತೆ ನೋಡಿಕೊಂಡು, ಯಾವುದೇ ರಾಜಕೀಯ ಪ್ರಭಾವವನ್ನು ಬಳಸಿಕೊಳ್ಳದೇ ಕಾನೂನು ಬದ್ಧವಾಗಿ ಪಡೆದುಕೊಳ್ಳುವುದು ಸೂಕ್ತ. ಇಲ್ಲದಿದ್ದಲ್ಲಿ, ಇಲಾಖಾ ವಿಚಾರಣೆ ಜೊತೆ, ನ್ಯಾಯಾಲಯಗಳಲ್ಲಿ ಈ ಭ್ರಷ್ಟಾಚಾರ ತಡೆ ಅಧಿನಿಯಮದಡಿ ಅಪರಾಧವೆಸಗಿದ ಬಗ್ಗೆ ಆರೋಪಿಯಾಗಿ ನಿಲ್ಲಬೇಕಾಗುತ್ತದೆ.

ವರ್ಗಾವಣೆ ದಂಧೆಯನ್ನು ಕೇವಲ ಒಂದು ಆಡಳಿತ ಯಂತ್ರದ ದುರುಪಯೋಗ ಎನ್ನುವುದಾದರೆ, ಈ ವ್ಯವಸ್ಥಿತ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲ ವ್ಯಕ್ತಿಗಳು ಮುಂದೆ ವ್ಯವಸ್ಥಿತ ಅಪರಾಧಿಕ ಚಟುವಟಿಕೆಗಳ ಅಕ್ರಮ ಕೂಟದ ಭಾಗಿಗಳೆಂದು ಪರಿಗಣಿಸಲು ಬರುತ್ತದೆ. ಹಾಗಾಗಿ, ಈ ಎಲ್ಲ ವ್ಯಕ್ತಿಗಳ ವಿರುದ್ಧ ಮೊದಲು ಕನಿಷ್ಠ ಎರಡು ಈ ಭ್ರಷ್ಟಾಚಾರ ಕಾಯಿದೆ ಪ್ರಕರಣಗಳು ದಾಖಲಾದರೆ ಮುಂದಿನ ಕ್ರಮವಾಗಿ ‘ಕೋಕಾ’ ಕಾಯಿದೆಯನ್ನು ಈ ಎಲ್ಲ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿರುವರ ಮೇಲೆ ದಾಖಲಿಸಬಹುದು. ಇಷ್ಟು ಗಂಭೀರವಾಗಿರುವ ವರ್ಗಾವಣೆ ದಂಧೆಗಳು ನಮ್ಮ ಶಕ್ತಿ ಸೌಧದಲ್ಲಿಯೇ ಬೇರೂರಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನಾದರೂ ನಮ್ಮ ಜನ ಪ್ರತಿನಿಧಿಗಳು, ಯಾವುದೇ ಶಿಫಾರಸು, ಮಿನಿಟ್ಸಗಳನ್ನು ಕೊಡುವ ಮೊದಲು ಈ ಭ್ರಷ್ಟಾಚಾರ ತಡೆ ಅಧಿನಿಯಮದ ತಿದ್ದುಪಡಿ ಕಲಂಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ. ಇಲ್ಲದಿದ್ದಲ್ಲಿ ಸಂಕಷ್ಟಗಳ ಸಂಕೋಲೆಗೆ ತಮ್ಮನ್ನು ತಾವೇ ತೆರೆದುಕೊಳ್ಳುತ್ತಾರೆಂಬುದನ್ನು ಮರೆಯಬಾರದು. ಈ ವರ್ಗಾವಣೆಯ ಕರಾಳ ದಂಧೆಯ ಎಲ್ಲ ದಾರಿಗಳು ಮುಚ್ಚಲಿ ಎಂಬುದೇ ಜಾಗೃತ ಪ್ರಜೆಗಳ ಆಶಯ.

Tags

Related Articles

Leave a Reply

Your email address will not be published. Required fields are marked *

Language
Close