About Us Advertise with us Be a Reporter E-Paper

ಅಂಕಣಗಳು

ಟ್ರಂಪ್ ಆಡಳಿತದ ಆತಂಕವೋ, ವುಡ್‌ವರ್ಡ್‌ನ ವೃತ್ತಿನಿಷ್ಠೆಯೂ!

ವಿಶ್ವೇಶ್ವರ್‌ ಭಟ್‌

ನೀವು ಬಾಬ್ ವುಡ್‌ವುರ್ಡ್‌ನ ಹೆಸರನ್ನು ಕೇಳಿರಬಹುದು. ಅಮೆರಿಕ ಪತ್ರಿಕೋದ್ಯಮದಲ್ಲಿ ಅತ್ಯಂತ ಜನಪ್ರಿಯ ಹೆಸರು. ಇವರು ಬರೆದ ತನಿಖಾ ವರದಿಗಳಿಂದ 1974ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡುವಂತಾಯಿತು. ಇದು ವಿಶ್ವದಾದ್ಯಂತ ತಲ್ಲಣ, ಸಂಚಲನ ಮೂಡಿಸಿದ ಘಟನೆ. ‘ವಾಟರ್‌ಗೇಟ್ ಹಗರಣ’ ಎಂದೇ ಕುಖ್ಯಾತವಾದ ಈ ಪ್ರಕರಣ, ಅಮೆರಿಕವೊಂದೇ ಅಲ್ಲ, ಜಾಗತಿಕ ತನಿಖಾ ಪತ್ರಿಕೋದ್ಯಮದ ಮಹತ್ವದ ಮೈಲಿಗಲ್ಲು. ಅದಾದ ಬಳಿಕ ಯಾವುದೇ ಕರ್ಮಕಾಂಡ ಬಹಿರಂಗವಾದರೂ ಅದಕ್ಕೆ ‘ಗೇಟ್’ ಬಾಲಂಗೋಚಿ ಸೇರಿಸುವ ಸಂಪ್ರದಾಯ ಮುಂದುವರಿದಿದೆ. ಉದಾಹರಣೆಗೆ ಲಾಲೂ ಪ್ರಸಾದ ಯಾದವ್ ಭಾಗಿಯಾದ ‘ಮೇವು ಹಗರಣ’ವನ್ನು ಇಂಗ್ಲಿಷ್ ಪತ್ರಕರ್ತರು ಊಟಛ್ಟಿ ಜಠಿಛಿ ಎಂದೇ ಕರೆಯುತ್ತಿದ್ದರು. ‘ಗೇಟ್’ ಎಂಬುದು ಹಗರಣ, ಕರ್ಮಕಾಂಡ ಅಥವಾ ಭ್ರಷ್ಟಾಚಾರಕ್ಕೆ ಸಮವಾದ ಪದವಾಗಿ ಪರಿವರ್ತಿತವಾಗುವಷ್ಟು ವಾಟರ್‌ಗೇಟ್ ಭದ್ರ ಬುನಾದಿ ಹಾಕಿಕೊಟ್ಟಿದೆ.

ಆಗ ಬಾಬ್ ವುಡ್‌ವರ್ಡ್ ಜತೆಗೆ ತನಿಖೆಯಲ್ಲಿ ಕಾರ್ಲ್ ಬರ್ನ್‌ಸ್ಟೀನ್ ಎಂಬಾತನೂ ಇದ್ದ. ಇವರಿಬ್ಬರು ಸೇರಿ ಮಾಡಿದ ಆ ತನಿಖಾ ವರದಿಗಾರಿಕೆಯನ್ನು ಈಗಲೂ May be the single greatest reporting effort of all time ಎಂದೇ ಭಾವಿಸಲಾಗಿದೆ. ನಲವತ್ನಾಲ್ಕು ವರ್ಷಗಳ ಹಿಂದೆ ಮಾಡಿದ ಈ ತನಿಖಾ ವರದಿಯೇ ‘ತನಿಖಾ ಪತ್ರಿಕೋದ್ಯಮ ಶ್ರೇಷ್ಠ’ ಎಂಬ ಗೌರವಕ್ಕೆ ಪಾತ್ರವಾಗಿದೆ. ವುಡ್‌ವರ್ಡ್ ಹಾಗೂ ಬರ್ನ್‌ಸ್ಟೀನ್, ನಿಕ್ಸನ್‌ನ ಕರ್ಮಕಾಂಡ ಬಯಲಿಗೆಳೆದ ರೀತಿ, ತನಿಖೆಯ ಜಾಡನ್ನು ಹಿಡಿದು ಎಳೆಎಳೆಯಾಗಿ ಬಹಿರಂಗಪಡಿಸಿದ ವಿಧಾನ ಹಾಗೂ ಕೊನೆಯಲ್ಲಿ ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು, ಅಮೆರಿಕದ ಅಧ್ಯಕ್ಷನೇ ರಾಜೀನಾಮೆ ನೀಡುವಂತಾಗಿದ್ದು ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು.

ವಾಟರ್‌ಗೇಟ್ ಹಗರಣ ವುಡ್‌ವರ್ಡ್‌ಗೆ ಕೇವಲ ಇಪ್ಪತ್ತೊಂಬತ್ತು ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಂಥ ಅದ್ಭುತ ಸಾಧನೆ ಮಾಡಿದ ಶ್ರೇಯಸ್ಸು ವುಡ್‌ವರ್ಡ್‌ನದು. ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಪತ್ರಕರ್ತರು ಬರೆದ ವರದಿಗಳಿಗೆ ಹೆಸರನ್ನೂ ಹಾಕುವುದಿಲ್ಲ. ಆದರೆ ವುಡ್‌ವರ್ಡ್ ಹಾಗೂ ಬರ್ನ್‌ಸ್ಟೀನ್ ಅಮೆರಿಕದ ಅಧ್ಯಕ್ಷನ ಅಧಿಕಾರಕ್ಕೆ ಕುತ್ತು ತರುವಂಥ ಸ್ಫೋಟಕ ವರದಿಗಳನ್ನುಬರೆದಿದ್ದರು. ಆಗ ವುಡ್‌ವರ್ಡ್ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. (ಅವರಿಬ್ಬರ ತನಿಖಾ ವರದಿಗಳು ಪ್ರಕಟಗೊಂಡಿದ್ದೂ ಇದೇ ಪತ್ರಿಕೆಯಲ್ಲಿ.) ‘ವಾಷಿಂಗ್ಟನ್ ಪೋಸ್ಟ್’ ಜತೆಗೆ ಆರಂಭವಾದ ವುಡ್‌ವರ್ಡ್ ನಂಟು-ಸಂಬಂಧ, ನಲವತ್ತೇಳು ವರ್ಷಗಳ ನಂತರವೂ ಅದೇ ಪತ್ರಿಕೆಯೊಂದಿಗೆ ಮುಂದುವರಿದುಕೊಂಡು ಹೋಗಿರುವುದು ಗಮನಾರ್ಹ. ಸಾಮಾನ್ಯವಾಗಿ ಪತ್ರಕರ್ತರು ಕೀರ್ತಿ, ಮಾನ್ಯತೆ, ಚೂರುಪಾರು ಜನಪ್ರಿಯತೆ ಬಂತೆಂದರೆ ಏನೋ ಮಹಾನ್ ಆದುದನ್ನು ಸಾಧಿಸಿಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲೋ, ಆ ಮೂಲಕ ಸಹಜವಾಗಿ ಒಲಿದು ಬರುವ ಹೆಚ್ಚಿನ ಸಂಬಳದ ಚಿಲ್ಲರೆ ಆಸೆಯಿಂದಲೋ ಪ್ರತಿಸ್ಪರ್ಧಿ ಪತ್ರಿಕೆ ಸೇರುವುದು ಸಹಜ.

ಆದರೆ ವುಡ್‌ವರ್ಡ್ ಹಾಗಲ್ಲ. ಅಂದಿನಿಂದ ಇಲ್ಲಿಯವರೆಗೂ ‘ಪೋಸ್ಟ್’ ಜತೆಗೆ ಇದ್ದಾರೆ. ಹಾಗಂತ ಅವನಿಗೆ ಬೇರೆ ಪತ್ರಿಕೆಗಳಿಂದ ಆಮಿಷ ಬಂದಿಲ್ಲ ಎಂದಿದೆ. ಆದರೆ ಅವೆಲ್ಲವನ್ನೂ ಮೆಟ್ಟಿ, ಒಂದೇ ಪತ್ರಿಕೆಗೆ ತಮ್ಮ ನಿಷ್ಠೆ ಮೆರೆಯುತ್ತಾ ಬಂದಿರುವುದು ಅವನ ವೃತ್ತಿ ಬದ್ಧತೆ, ನಿಷ್ಠೆಗೆ ನಿದರ್ಶನ. ಈಗ ಆತ ಅದೇ ಪತ್ರಿಕೆಯ ಅಸೋಸಿಯೇಟ್ ಎಡಿಟರ್.
ಆದರೆ ಬರ್ನ್‌ಸ್ಟೀನ್ ಹಾಗಲ್ಲ. ಆಗಾಗ ಪತ್ರಿಕೆಗಳನ್ನು ಬದಲಿಸುತ್ತಾ ಬಂದವ. ವಾಟರ್‌ಗೇಟ್ ಖ್ಯಾತಿಯಿಂದ ಆತ ‘ಪೋಸ್ಟ್’ ಬಿಟ್ಟು ಎಬಿಸಿ ನ್ಯೂಸ್ ಸೇರಿದ. ಅದಾದ ನಂತರ ‘ಟೈಮ್’ ಮ್ಯಾಗಜಿನ್ ಸೇರಿದ. ‘ದಿ ನ್ಯೂ ರಿಪಬ್ಲಿಕ್’ ಮ್ಯಾಗಜಿನ್‌ನಲ್ಲೂ ಕೆಲಕಾಲ ಇದ್ದ. ಸಮಯ ‘ನ್ಯೂಸ್‌ವೀಕ್’ ನಿಯತಕಾಲಿಕಕ್ಕೂ ಬರೆದ. ಈಗ ‘ವ್ಯಾನಿಟಿ ಫೇರ್’ ಮ್ಯಾಗಜಿನ್‌ಗೆ ಕೆಲಸ ಮಾಡುತ್ತಿದ್ದಾನೆ.

ವಾಟರ್‌ಗೇಟ್ ಕರ್ಮಕಾಂಡ ಬಯಲಿಗೆಳೆದಿದ್ದಕ್ಕೆ ವುಡ್‌ವುರ್ಡ್ ಹಾಗೂ ಬರ್ನ್‌ಸ್ಟೀನ್ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾದರು. 9/11 ರ ಉಗ್ರರ ದಾಳಿಯಾದಾಗ ವುಡ್‌ವರ್ಡ್ ಬರೆದ ಸರಣಿವರದಿ, ವಿಶ್ಲೇಷಣೆ, ಆಳ ವರದಿ ಅವರಿಗೆ ಎರಡನೆಯ ಪುಲಿಟ್ಜರ್ ಪ್ರಶಸ್ತಿ ತಂದುಕೊಟ್ಟಿತು.

ರಿಚರ್ಡ್ ನಿಕ್ಸನ್ ಅವರಿಂದ ಒಬಾಮ ಹಾಗೂ ಈಗ ಡೊನಾಲ್‌ಡ್ ಟ್ರಂಪ್, ಒಟ್ಟು ಒಂಬತ್ತು ಅಧ್ಯಕ್ಷರನ್ನು ತೀರಾ ಹತ್ತಿರದಿಂದ ಕಂಡಿರುವ ಇವರೆಲ್ಲರ ಆಡಳಿತ, ಕಾರ್ಯವೈಖರಿ ಬಗ್ಗೆ ತಲಸ್ಪರ್ಶಿಯಾಗಿ ಬರೆದಿದ್ದಾರೆ. ಕಳೆದ ನಾಲ್ಕೂವರೆ ದಶಕಗಳ ವೈಟ್‌ಹೌಸ್ ಆಗು-ಹೋಗುಗಳ ಬಗ್ಗೆ ವುಡ್‌ವರ್ಡ್ ಅಥಾರಿಟಿಯಾಗಿ ಬರೆಯುತ್ತಾರೆ, ಮಾತಾಡುತ್ತಾರೆ. ಅಧ್ಯಕ್ಷರ ಸುತ್ತಮುತ್ತ ನಡೆಯುವ ವಿದ್ಯಮಾನಗಳೆಲ್ಲ ವುಡ್‌ವರ್ಡ್‌ಗೆ ತಕ್ಷಣ ಗೊತ್ತಾಗುತ್ತದೆ. ಅಧಿಕಾರಿಗಳು ರಹಸ್ಯ ಮಾಹಿತಿಯನ್ನು ವುಡ್‌ವರ್ಡ್‌ಗೆ ನೀಡುತ್ತಾರೆ ಅಥವಾ ಹಂಚಿಕೊಳ್ಳಲು ಬಯಸುತ್ತಾರೆ. ವುಡ್‌ವರ್ಡ್ ಜತೆಗೆ ಮಾಹಿತಿ ಹಂಚಿಕೊಂಡರೆ ಮಾಹಿತಿ ನೀಡಿದವರ ಹೆಸರನ್ನು ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂಬ ವಿಶ್ವಾಸಾರ್ಹತೆಯನ್ನು ಆತ ಸಂಪಾದಿಸಿದ್ದಾನೆ. ಇಂಥ ಮಾಹಿತಿಯನ್ನು ಈಛಿಛಿ ಠ್ಟಿಟಠಿ ಹೆಸರಿನಲ್ಲಿ ಆತ ಬರೆಯುತ್ತಿದ್ದ. ಅದಾದ ಬಳಿಕ ಎಷ್ಟೋ ವರದಿಗಳಲ್ಲಿ ಮೂಲಗಳು ತಿಳಿಸುವ ಮಾಹಿತಿಗೆ Deep background ಎಂದೂ ಬರೆಯುತ್ತಿದ್ದ.

ವುಡ್‌ವರ್ಡ್ ಬಗ್ಗೆ ನಾನು ಈಗ ಇಷ್ಟೆಲ್ಲ ಪೀಠಿಕೆ ಹಾಕಿ ಬರೆದಿದ್ದೇಕೆ ಅಂದರೆ, ಆತ ಪುನಃ ಸುದ್ದಿಯಲ್ಲಿದ್ದಾನೆ. ಟ್ರಂಪ್ ಅವರ ಒಂದೂ ಮುಕ್ಕಾಲು ವರ್ಷಗಳ ಆಡಳಿತ ಕುರಿತು ಬರೆದ ಕೃತಿ, Fear: Trump in the White House ಸಾಕಷ್ಟು ಸುದ್ದಿ, ವಿವಾದವನ್ನುಂಟು ಮಾಡಿದೆ. 2016ರ ಮಾರ್ಚ್ 31ರಂದು ಟ್ರಂಪ್, ಚುನಾವಣೆಯ ಪ್ರಚಾರ ಸಂದರ್ಭದಲ್ಲಿ “Real Power is- I dont even want to use the word- Fear’ ಎಂದು ಹೇಳಿದ್ದರು. ಆದರೆ ಅದಕ್ಕೆ ಸರಿ ವ್ಯತಿರಿಕ್ತವಾಗಿ ಅವರು ನಡೆದುಕೊಳ್ಳುತ್ತಿರುವುದರಿಂದ ಈ ಕೃತಿಗೆ ಈ ಹೆಸರು. ಈ ಪುಸ್ತಕದಲ್ಲಿ ಟ್ರಂಪ್ ಕಾರ್ಯವಿಧಾನದ ಬಗ್ಗೆ ಯಾರಿಗೂ ಗೊತ್ತಿರದ ಅನೇಕ ಕುತೂಹಲ ಮಾಹಿತಿ, ವಿಷಯಗಳನ್ನು ವುಡ್‌ವರ್ಡ್ ಕಟ್ಟಿಕೊಟ್ಟಿದ್ದಾನೆ. ಈಗಾಗಲೇ ವಿವಾದವೆಬ್ಬಿಸಿರುವ ಈ ಕೃತಿ ಬಗ್ಗೆ ಮುಂದೆ ಬರೆಯುತ್ತೇನೆ.

* ಇದು ವುಡ್‌ವರ್ಡ್ ಸ್ಟೈಲ್!

‘ಫಿಯರ್’ ಕೃತಿಯಲ್ಲಿ ವುಡ್‌ವರ್ಡ್ ಓದುಗರಿಗಾಗಿ ಚಿಕ್ಕ ಟಿಪ್ಪಣಿ ಬರೆದಿದ್ದಾನೆ- ‘ಈ ಪುಸ್ತಕಕ್ಕಾಗಿ ಅನೇಕರನ್ನು ಸಂದರ್ಶಿಸಿದ್ದೇನೆ. ಅವನ್ನು Deep Background ಎಂದು ಕರೆದಿದ್ದೇನೆ. ಇಲ್ಲಿ ನೀಡಿರುವ ಯಾವ ಮಾಹಿತಿಯನ್ನಾದರೂ ಪ್ರಸ್ತಾಪಿಸಬಹುದು. ಆದರೆ ಅವನ್ನು ನೀಡಿದವರು ಯಾರು ಎಂಬುದನ್ನು ಹೇಳುವುದಿಲ್ಲ. ಈ ಕೃತಿಯಲ್ಲಿ ಪ್ರಸ್ತಾಪಿಸುವ ನೂರಾರು ಪ್ರಸಂಗ ಹಾಗೂ ವಿದ್ಯಮಾನಗಳಿಗೆ ಸಾಕ್ಷಿಯಾದವರು, ಪ್ರತ್ಯಕ್ಷದರ್ಶಿಗಳ ಜತೆಗೆ ನಾನು ನೂರಾರು ತಾಸುಗಳ ಸಂದರ್ಶನ ಮಾಡಿದ್ದೇನೆ. ಬಹುತೇಕ ಎಲ್ಲರೂ ನಮ್ಮ ಮಾತುಕತೆಯನ್ನು ಟೇಪ್‌ರೆಕಾರ್ಡ್ ಮೂಲಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಹೀಗಾಗಿ ನಾನು ಪ್ರಸ್ತಾಪಿಸಿದ ಎಲ್ಲ ಸಂಗತಿಗಳು ನಿಖರವಾಗಿವೆ. ವೈಯಕ್ತಿಕ ಡೈರಿ, ಫೈಲ್, ಸರಕಾರಿ ದಾಖಲೆ, ವೈಯಕ್ತಿಕ ಅಭಿಪ್ರಾಯ, ಅನಿಸಿಕೆಗಳನ್ನು ಅವುಗಳನ್ನು ನೀಡಿದವರ ಅನುಮತಿಯಿಂದ ಅವರ ಹೆಸರಿನಲ್ಲಿಯೇ ಹೇಳಿದ್ದೇನೆ. ಈ ಪುಸ್ತಕಕ್ಕಾಗಿ ಅಧ್ಯಕ್ಷ ಟ್ರಂಪ್ ಅವರ ಸಂದರ್ಶನಕ್ಕೆ ಕೋರಿಕೆ ಸಲ್ಲಿಸಿದ್ದೆ. ಆದರೆ ಅದನ್ನು ನಿರಾಕರಿಸಲಾಯಿತು’ ವುಡ್‌ವರ್ಡ್ ಪ್ರಸ್ತಾಪಿಸಿರುವ ಕೆಲವು ಪ್ರಸಂಗಗಳನ್ನು ಓದಿದರೆ, ಈ ವಿಷಯ ಈತನಿಗೆ ಹೇಗೆ ಗೊತ್ತಾಯಿತು ಎಂದು ನಿಜಕ್ಕೂ ಅಚ್ಚರಿಯಾಗುತ್ತದೆ.

* ಇದು ಪಕ್ಕಾ ವುಡ್‌ವರ್ಡ್ ಸ್ಟೈಲ್!

ನ್ಯೂಯಾರ್ಕ್ ಟೈಮ್ಸ್ ಪತ್ರಿಕಾಲಯದಲ್ಲಿ ಮೊನ್ನೆ ನಾನು ನ್ಯೂಯಾರ್ಕಿನ ಮ್ಯಾನ್ಹಟನ್ ಪ್ರದೇಶದಲ್ಲಿರುವ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕಾ ಕಚೇರಿಗೆ ಹೋಗಿದ್ದೆ. ಕಾಲಿಡುತ್ತಿದ್ದಂತೆ ಯಾವುದೋ ಪಂಚತಾರಾ ಹೋಟೆಲ್‌ನ್ನು ಪ್ರವೇಶಿಸುತ್ತಿದ್ದೇನಾ ಎಂಬ ಅನುಭವವಾಯಿತು. ಇತ್ತೀಚೆಗೆ ಲಂಡನ್‌ಗೆ ಹೋದಾಗ ಅಲ್ಲಿ ‘ದಿ ಗಾರ್ಡಿಯನ್’ ಪತ್ರಿಕಾ ಕಚೇರಿಗೆ ಹೋಗಿದ್ದೆ. ಅದನ್ನು ನೋಡಿಯೇ, ಪತ್ರಿಕಾ ಕಚೇರಿಯೆಂದರೆ ಹೀಗಿರಬೇಕು ಎಂದೆನಿಸಿತ್ತು. ‘ನ್ಯೂಯಾರ್ಕ್ ಟೈಮ್ಸ್’ ಅದನ್ನೂ ಮೀರಿಸುವಂತಿದೆ.

ನ್ಯೂಯಾರ್ಕಿನ ಹೃದಯ ಭಾಗದಲ್ಲಿರುವ ಈ ಪತ್ರಿಕಾ ಕಚೇರಿಯಿಂದಾಗಿ, ಮ್ಯಾನ್ಹಟನ್‌ನ ಸ್ಕ್ವೇರ್’ಗೆ ಆ ಹೆಸರು ಬಂದಿರುವುದು. ನ್ಯೂಯಾರ್ಕ್ ನಗರದೊಂದಿಗೆ ಈ ಪತ್ರಿಕೆ ಹೊಂದಿರುವ ಸಂಬಂಧವೇ ಬೇರೆ ಕತೆ.

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ 52 ಮಹಡಿಗಳುಳ್ಳ ಗಗನಚುಂಬಿ ಕಟ್ಟಡದಲ್ಲಿದೆ. ಈ ಪೈಕಿ ನೆಲಮಹಡಿಯಿಂದ 27 ಮಹಡಿ ತನಕ ಪತ್ರಿಕಾ ಕಚೇರಿಗೆ ಮೀಸಲು. ಸುಮಾರು ಏಳು ಲಕ್ಷದ ಮೂವತ್ತಾರು ಸಾವಿರ ಚದರ ಅಡಿಗಳಲ್ಲಿ ಪತ್ರಿಕೆಯ ಸುದ್ದಿಮನೆ ಸೇರಿದಂತೆ ಬೇರೆ ಬೇರೆ ವಿಭಾಗಗಳು ಹರಡಿಕೊಂಡಿವೆ. ಇಡೀ ಕಟ್ಟಡದಲ್ಲಿ ಸುಮಾರು ಹದಿನೈದು ಲಕ್ಷ ಚದರ ಅಡಿಗಳಷ್ಟು ಇಷ್ಟು ದೊಡ್ಡ ಪತ್ರಿಕಾ ಕಚೇರಿಯನ್ನು ಹೊಂದಿರುವುದೇ ಒಂದು ಅಗ್ಗಳಿಕೆ. ಮೇಲ್ನೋಟಕ್ಕೆ ಈ ಕಚೇರಿ ಯಾವುದೋ ಸಾಫ್‌ಟ್ವೇರ್ ಕಂಪನಿಯ ಗೆಟಪ್‌ನ್ನು ಹೊಂದಿದೆ. ಸಣ್ಣ ಫುಟ್ಬಾಲ್ ಮೈದಾನದಲ್ಲಿ ಪತ್ರಿಕಾ ಕಚೇರಿ ತೆರೆದರೆ ಹೇಗೆ ಕಾಣಬಹುದು, ಅದೇ ರೀತಿಯ ಭಾವನೆ ಬರುತ್ತದೆ.

1851ರಲ್ಲಿ ಆರಂಭವಾದ ಈ ಪತ್ರಿಕೆ, ಯಾವುದೇ ಪತ್ರಕರ್ತನ ‘ಕನಸಿನ ಸೌಧ’ವೇ ಸರಿ. ಕೆಲಸ ಮಾಡಿದರೆ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಮಾಡಬೇಕು ಎಂಬ ಆಸೆ ಎಂಥ ಪತ್ರಕರ್ತನ ಮನಸ್ಸಿನಲ್ಲಿಯೂ ಹಾದುಹೋಗಬೇಕು, ಅಷ್ಟು ಇಡೀ ಪತ್ರಿಕಾಲಯವನ್ನು ರೂಪಿಸಿದ್ದಾರೆ. ಈ ಪತ್ರಿಕಾಲಯವನ್ನು ‘ಜಗತ್ತಿನ ವಿದ್ಯಮಾನಗಳ ಪ್ರತಿರೂಪ’ ಎಂದು ಕರೆಯುವುದುಂಟು. ಕಳೆದ 167 ವರ್ಷಗಳ ಜಗತ್ತಿನ ಎಲ್ಲ ಘಟನೆಗಳ ವಿವರ, ಫೋಟೊ ಸಂಗ್ರಹ ಈ ಪತ್ರಿಕಾಲಯದಲ್ಲಿದೆ. ಇವೆಲ್ಲವುಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗಿದೆ. ನಿಮಗೆ ಬೇಕಾದ ಯಾವುದೇ ಫೋಟೊ, ಮಾಹಿತಿಯನ್ನು ಮೂವತ್ತು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಪಡೆದುಕೊಳ್ಳಬಹುದು. ಈ ಪತ್ರಿಕೆಯ ಪ್ರತಿಯೊಂದು ಹಳೆಯ ಸಂಚಿಕೆಯನ್ನು ‘ಇತಿಹಾಸದ ತುಣುಕು’ ಎಂದು ನ್ಯೂಯಾರ್ಕ್ ಟೈಮ್‌ಸ್ ಭಾವಿಸುತ್ತದೆ. ಹೀಗಾಗಿ ಈ ಪತ್ರಿಕೆಯ ಸಂಚಿಕೆ, ಫೋಟೊಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ‘ನ್ಯೂಯಾಕ್ ಟೈಮ್ಸ್’ ಪತ್ರಿಕಾಲಯ ಪತ್ರಕರ್ತನಿಗೆ ಧನ್ಯತೆ, ಹೆಮ್ಮೆ, ಅಭಿಮಾನ ಮೂಡಿಸುವ ಭಾವನೆ ನೆಲೆಸುವಂತೆ ಮಾಡುವುದಂತೂ ಸತ್ಯ.

 * ಟೈಟಾನಿಕ್ ಹಾಗೂ ನ್ಯೂಯಾರ್ಕ್ ಟೈಮ್ಸ್

ಬೇರೆಲ್ಲ ಪತ್ರಿಕೆಗಳು ‘ಟೈಟಾನಿಕ್’ ಹಡಗು ಮಂಜುಗಡ್ಡೆ ಪರ್ವತಕ್ಕೆ ಡಿಕ್ಕಿ ಹೊಡೆದು, ಅಪಘಾತಕ್ಕೆ ಸಿಲುಕಿದೆ ಎಂದು ಬರೆದಿದ್ದರೆ, ‘ನ್ಯೂಯಾರ್ಕ್ ಟೈಮ್ಸ್ ’ಮಾತ್ರ ಅದು ಮುಳುಗಿ, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸತ್ತಿದ್ದಾರೆಂದು ವರದಿ ಮಾಡಿತ್ತು. 1912ರಲ್ಲಿ ಮುಳುಗಿದ ‘ಟೈಟಾನಿಕ್’ ಹಡಗಿನ ಬಗ್ಗೆ ಹೆಚ್ಚು ಆಸ್ಥೆ ವಹಿಸಿ, ಸುದೀರ್ಘ ಕಾಲದವರೆಗೆ ವರದಿ ಮಾಡಿದ ಶ್ರೇಯಸ್ಸು ಸಹ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗೇ ಸಲ್ಲಬೇಕು.

ಈ ದುರಂತ ಸಂಭವಿಸಿ ನೂರಾ ಆರು ವರ್ಷಗಳಾದರೂ, ಇಂದಿಗೂ ಆ ಪತ್ರಿಕೆಯಲ್ಲಿ ‘ಟೈಟಾನಿಕ್’ ಕುರಿತ ಲೇಖನ, ವರದಿ ಪ್ರಕಟವಾಗುತ್ತಿರುವುದು ವಿಶೇಷ. ‘ಟೈಟಾನಿಕ್’ ದುರಂತ ತಪ್ಪಿಸಬಹುದಿತ್ತಾ?’ ಎಂಬ ಕುರಿತು ಸಾವಿರಾರು ಲೇಖನ, ಸಂದರ್ಶನಗಳು ಪ್ರಕಟವಾಗಿವೆ. ಈಗಲೂ ಈ ವಿಷಯದ ಕುರಿತು ವಿಷಯತಜ್ಞರು ಆಗಾಗ ಬರೆಯುತ್ತಾರೆ. ‘ಟೈಮ್ಸ್’ ಅದನ್ನು ಪ್ರಧಾನವಾಗಿ ಪ್ರಕಟಿಸುತ್ತದೆ. ಶತಮಾನದ ಒಂದು ದುರಂತ ಹೇಗೆ ಜಗತ್ತನ್ನು ಕಾಡುತ್ತಿದೆ ಎಂಬುದಕ್ಕೆ ‘ಟೈಮ್ಸ್’ ವರದಿಗಳೇ ಸಾಕ್ಷಿ.

‘ನ್ಯೂಯಾರ್ಕ್ ಟೈಮ್ಸ್’ ದಾಖಲೆ ಸಂಗ್ರಹಾಲಯದಲ್ಲಿ ಟೈಟಾನಿಕ್ ಬಗ್ಗೆ ಪ್ರಕಟವಾದ ವರದಿ ಹಾಗೂ ಲೇಖನಗಳನ್ನು ಸಂಗ್ರಹಿಸಿದರೆ ಸಾವಿರಾರು ಪುಸ್ತಕಗಳಾದೀತು. ದುರಂತದಲ್ಲಿ ಮೃತರಾದವರ ಮೊಮ್ಮಕ್ಕಳು, ಮರಿಮಕ್ಕಳು ಈಗಲೂ ಆ ಘಟನೆಯನ್ನು ನೆನಪಿಸಿಕೊಂಡು ಮರುಗುತ್ತಾರೆ. ಪತ್ರಿಕೆ ಅವೆಲ್ಲವುಗಳಿಗೆ ಆದ್ಯತೆ ನೀಡುತ್ತದೆ.

ಟೈಟಾನಿಕ್ ಹಡಗು ಮುಳುಗಿದ ಮರುದಿನದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮುಖಪುಟ ಇಂದಿಗೂ ಒಂದು ನೆನಪಾಗಿ, ದಾಖಲೆಯಾಗಿ, ಕಲಾಕೃತಿಯಾಗಿ, ಸಂಗ್ರಾಹ್ಯ ಇತಿಹಾಸದ ಮರೆಯಲಾಗದ ಘಟನೆಯಾಗಿ ಮಹತ್ವ ಪಡೆದಿದೆ. ಈ ಘಟನೆ ನಡೆದು ಇಷ್ಟು ವರ್ಷಗಳ ನಂತರವೂ, ಅಂದಿನ ಸಂಚಿಕೆ ಸಿಗುವುದಾ ಎಂದು ವಿಚಾರಿಸುತ್ತಾ ಇಂದಿಗೂ ಪತ್ರಿಕಾ ಕಚೇರಿಗೆ ಓದುಗರು ಬರುತ್ತಾರೆ. ಆ ದಿನದ ಮುಖಪುಟ ಮಾರಾಟಕ್ಕೆ ಲಭ್ಯ. ಪ್ರತಿದಿನ ನೂರಾರು ಓದುಗರು ಆನ್‌ಲೈನ್ ಮೂಲಕ, ಖುದ್ದು ಪತ್ರಿಕಾ ಕಚೇರಿಗೆ ಬಂದು ಈ ಮುಖಪುಟ ಖರೀದಿಸಿ ಹೋಗುತ್ತಾರೆ. ಟೈಟಾನಿಕ್ ಹಡಗು ಮುಳುಗಿದರೂ, ಪತ್ರಿಕೆ ಮಾತ್ರ ಅದೊಂದರಿಂದಲೇ ಲಕ್ಷಾಂತರ ಡಾಲರ್ ಹಣ ಮಾಡಿದೆ ಸತ್ಯ. ಈ ಮುಖಪುಟ ಅವೆಷ್ಟೋ ಗೋಡೆಗಳ ಮೇಲೆ ಒಂದು ‘ಶ್ರೇಷ್ಠ ಕಲಾಕೃತಿ’ಯಾಗಿ ಗಮನ ಸೆಳೆಯುತ್ತಿದೆ.

ಒಂದು ಪತ್ರಿಕೆ ಒಂದು ಘಟನೆ ಜತೆ ಗುರುತಿಸಿಕೊಳ್ಳುವುದೆಂದರೆ ಹೀಗೆ. ಟೈಟಾನಿಕ್ ಹಡಗಿನ ಬಗ್ಗೆ ಸಿನಿಮಾ, ಪುಸ್ತಕ, ಸಾಕ್ಷ್ಯಚಿತ್ರಗಳೆಲ್ಲ ಸಾಕಷ್ಟು ಬಂದಿವೆ. ಆ ಹಡಗಿನ ಪ್ರಸ್ತಾಪವಾದಾಗಲೆಲ್ಲ ‘ನ್ಯೂಯಾರ್ಕ್ ಟೈಮ್ಸ್’ ಹೆಸರೂ ಪ್ರಸ್ತಾಪವಾಗಲೇಬೇಕು. ಟೈಟಾನಿಕ್ ಹಡಗು ಮುಳುಗಿದ ದಿನ ‘ನ್ಯೂಯಾರ್ಕ್ ಟೈಮ್ಸ್’ ಹೇಗೆ ಇಡೀ ದುರಂತವನ್ನು ಮರು ಸೃಷ್ಟಿಸಿತು ಎಂಬ ಬಗ್ಗೆಯೂ ಟೀಕೆಗಳಿವೆ. ಅವೇನೇ ಇರಲಿ, ಜತೆಗಿನ ಪತ್ರಿಕೆ ಸಂಬಂಧ ಹಾಗೂ ನಂಟನ್ನು ಮಾತ್ರ ಅಲ್ಲಗಳೆಯುವಂತಿಲ್ಲ.

* ಒಂದು ರೂಮು, ಹಲವು ಸಂದೇಶ

ಅಮೆರಿಕದ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವಿರುವ ‘ಕೋರ್ಟ್‌ಯಾರ್ಡ್ ಮೆರಿಯಟ್ ಹೋಟೆಲ್’ನ ಬಾತ್‌ರೂಮ್‌ನಲ್ಲಿ ಒಂದು ಪುಟ್ಟ ಬರಹವಿತ್ತು-‘ಅಮೆರಿಕದಲ್ಲಿರುವ ಎಲ್ಲಾ ಹೋಟೆಲ್‌ಗಳಲ್ಲಿ ಇಟ್ಟಿರುವ ಟವೆಲ್‌ಗಳನ್ನು ತೊಳೆಯಲು ಬಳಸುವ ನೀರಿನಿಂದ, ಯುರೋಪಿನ ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಬಹುದು. ಒಬ್ಬ ವ್ಯಕ್ತಿ ಒಂದು ದಿನ ಕುಡಿಯುವುದಕ್ಕಿಂತ ಐದು ಪಟ್ಟು ಜಾಸ್ತಿ ನೀರು ಒಂದು ಟವೆಲ್ ಬೇಕು. ಆದ್ದರಿಂದ ಟವೆಲ್‌ನ್ನು ಬೇಕಾಬಿಟ್ಟಿ ಬಳಸಬೇಡಿ. ಬಳಸಿದ್ದನ್ನೇ ಪುನಃ ಪುನಃ ಬಳಸಿ. ನೀವು ಬಳಸುವ ಟವೆಲ್ ಎಷ್ಟೋ ಜನರ ಬಾಯಾರಿಕೆಯನ್ನು ನೀಗಿಸುತ್ತದೆ ಎಂಬುದು ಗೊತ್ತಿರಲಿ’.

ಹಾಗಂತ ಆ ಹೋಟೆಲ್‌ನಲ್ಲಿ ಆರು ಟವೆಲ್‌ಗಳನ್ನು ಇಟ್ಟಿದ್ದರು. ಅದನ್ನು ಓದಿದ ನಂತರ, ಟವೆಲ್ ಬಳಸಲು ಮನಸ್ಸೇ ಬರಲಿಲ್ಲ. ಒಂದೇ ಟವೆಲ್‌ನ್ನೂ ಮೂರು ದಿನ (ನಾನು ಅಲ್ಲಿ ಇದ್ದಷ್ಟು ದಿನ) ಬಳಸಿದೆ. ನಮ್ಮೂರಿನ ಹೋಟೆಲ್‌ನಲ್ಲಿ ಇರುವಂತೆ ಅಮೆರಿಕ ಹಾಗೂ ಯುರೋಪಿನ ಹೋಟೆಲ್‌ಗಳಲ್ಲಿ ಸಿಬ್ಬಂದಿ ತೀರಾ ನಮ್ಮೂರಲ್ಲಾದರೆ ಕಾರಿನಿಂದ ಬ್ಯಾಗ್‌ಗಳನ್ನು ಇಳಿಸಲು ಒಬ್ಬ, ಅದನ್ನ್ನು ಹೋಟೆಲ್ ಲಾಬಿಗೆ ತರಲು ಮತ್ತೊಬ್ಬ, ಅವನ್ನು ರೂಮಿಗೆ ತಂದಿಡಲು ಇನ್ನೊಬ್ಬ. ಹೀಗೆ ಹತ್ತಾರು ಸಿಬ್ಬಂದಿ. ಅಮೆರಿಕದ ಬಹುತೇಕ ಹೋಟೆಲ್‌ಗಳಲ್ಲಿ ಈ ಎಲ್ಲಾ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು.

ಕೋರ್ಟ್‌ಯಾರ್ಡ್ ಮೆರಿಯಟ್‌ನಲ್ಲಿ ಪ್ರತಿದಿನ ಹೌಸ್‌ಕೀಪಿಂಗ್‌ನವರು ಬಂದು ರೂಮು ಕ್ಲೀನ್ ಮಾಡಿ ಹೋಗುವುದಕ್ಕೂ ಕಡಿವಾಣ ಹಾಕಲಾಗಿದೆ. Skip House Keeping, Earn 250 Marriott Rewards ಎಂಬ ಬೋರ್ಡ್ ನೇತುಹಾಕಿದ್ದಾರೆ. ಹೀಗಾಗಿ ಪ್ರತಿದಿನ ಅವರನ್ನು ನಿಮಗೆ ಲಾಭ. ಇದರಿಂದ ಹೋಟೆಲ್‌ನವರಿಗೂ ಆ ಸಿಬ್ಬಂದಿಗೆ ಕೊಡಬೇಕಾದ ಸಂಬಳದ ಉಳಿತಾಯ ಮಾಡಿದಂತಾಯಿತು.

ಸಾಮಾನ್ಯವಾಗಿ ಎಲ್ಲಾ ಹೋಟೆಲ್‌ಗಳ ಬಾಗಿಲಿಗೆ Please do not disturb ಎಂಬ ಪುಟಾಣಿ ಫಲಕ ನೇತುಹಾಕಿಕೊಳ್ಳಲು ಟ್ಯಾಗ್‌ಗಳನ್ನು ಇಟ್ಟಿರುತ್ತಾರೆ. ಡೆನ್ವರ್‌ನ ಆ ಹೋಟೆಲ್‌ನಲ್ಲಿ ಆ ಫಲಕದಲ್ಲೂ ನಾವೀನ್ಯವಿತ್ತು. “Dreaming of Fun, Privacy Please’ ಎಂಬ ಟ್ಯಾಗ್ ಇತ್ತು. ಎಷ್ಟೆಲ್ಲ ವಿಧಗಳಿಂದ ಗ್ರಾಹಕರನ್ನು ಆಕರ್ಷಿಸಬಹುದಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close